2022 ರಲ್ಲಿ ಅಜಾಗರೂಕತೆಯಿಂದ ಅಂತರರಾಷ್ಟ್ರೀಯ ಗಡಿ ರೇಖೆಯನ್ನು ದಾಟಿದ ನಂತರ ಪಾಕಿಸ್ತಾನ ಏಜೆನ್ಸಿಗಳಿಂದ ಬಂಧಿಸಲ್ಪಟ್ಟ ಗುಜರಾತ್‌ನ ಮೀನುಗಾರನೊಬ್ಬ ಜನವರಿ 16 ರಂದು ಕರಾಚಿ ಜೈಲಿನಲ್ಲಿ ಸಾವನ್ನಪ್ಪಿದ್ದಾನೆ.
ಮೂರು ವರ್ಷಗಳ ಹಿಂದೆ ಆತನ ಶಿಕ್ಷೆಯನ್ನು ಪೂರ್ಣಗೊಳಿಸಿದ್ದರೂ ಅವರು ಪಾಕ್ ಜೈಲಿನಲ್ಲೇ ಇದ್ದರು ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರ ಹೇಳಿದ್ದಾರೆ. ಮೀನುಗಾರ ಸಮುದಾಯವನ್ನು ಪ್ರತಿನಿಧಿಸುವ ನಿಯೋಗವು ಪಾಕಿಸ್ತಾನದ ಜೈಲುಗಳಲ್ಲಿ ಕೊಳೆಯುತ್ತಿರುವ ಅಂತಹ ವ್ಯಕ್ತಿಗಳ ಬಿಡುಗಡೆಯನ್ನು ತ್ವರಿತಗೊಳಿಸುವಂತೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದ ಒಂದು ತಿಂಗಳೊಳಗೆ ಹೆಸರು ಬಹಿರಂಗಪಡಿಸದ ಮೀನುಗಾರನ ಸಾವು ಸಂಭವಿಸಿದೆ.
ಜನವರಿ 16 ರಂದು ಕರಾಚಿಯ ಮಾಲಿರ್ ಜೈಲಿನಲ್ಲಿ ಮೀನುಗಾರ ನಿಧನರಾದರು ಎಂದು ಸಾಮಾಜಿಕ ಕಾರ್ಯಕರ್ತ ಜತಿನ್ ದೇಸಾಯಿ ಸೋಮವಾರ ತಿಳಿಸಿದ್ದಾರೆ. ಮೀನುಗಾರಿಕೆಗೆ ತೆರಳುವ ಸಮಯದಲ್ಲಿ ಅಜಾಗರೂಕತೆಯಿಂದ ಅಂತರರಾಷ್ಟ್ರೀಯ ಸಮುದ್ರ ಗಡಿ ರೇಖೆಯನ್ನು (ಐಎಂಬಿಎಲ್) ದಾಟಿದ ನಂತರ ಪಾಕಿಸ್ತಾನದಲ್ಲಿ ಸೆರೆಹಿಡಿದು ಜೈಲಿನಲ್ಲಿರುವ ಭಾರತೀಯ ಮೀನುಗಾರರ ಸಮಸ್ಯೆಯನ್ನು ಹೋರಾಟಗಾರರು ಕೈಗೆತ್ತಿಕೊಳ್ಳುತ್ತಿದ್ದಾರೆ.
ಪೋರಬಂದರ್ ದೋಣಿ ಸಂಘದ ಮಾಜಿ ಅಧ್ಯಕ್ಷ ಜೀವನ್ ಜಂಗಿ ಅವರು ಈ ಬೆಳವಣಿಗೆಯನ್ನು ದೃಢಪಡಿಸಿದರು. ಮೃತರು ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯ ಉನಾದವರಾಗಿರಬಹುದು, ಕಳೆದ ಹಲವಾರು ತಿಂಗಳುಗಳಿಂದ ಅವರು ಅಸ್ವಸ್ಥರಾಗಿದ್ದರು ಎಂದು ಹೇಳಿದರು.
“ಮರಣ ಹೊಂದಿದ ಮೀನುಗಾರನನ್ನು 2022 ರಲ್ಲಿ ಸೆರೆಹಿಡಿಯಲಾಯಿತು. ಅವರ ರಾಷ್ಟ್ರೀಯತೆಯನ್ನು ಪರಿಶೀಲಿಸಿದ ನಂತರ ಅದೇ ವರ್ಷ ಅವರ ಶಿಕ್ಷೆ ಕೊನೆಗೊಂಡಿತು. ಎರಡೂ ದೇಶಗಳ ನಡುವಿನ 2008 ರ ಕಾನ್ಸುಲರ್ ಪ್ರವೇಶ ಒಪ್ಪಂದದ ಹೊರತಾಗಿಯೂ, ಮೀನುಗಾರರು ಶಿಕ್ಷೆ ಮುಗಿದ ನಂತರ ಮತ್ತು ಅವರ ರಾಷ್ಟ್ರೀಯತೆಯನ್ನು ಪರಿಶೀಲಿಸಿದ ನಂತರವೂ ಪಾಕಿಸ್ತಾನ ಜೈಲುಗಳಲ್ಲಿ ಕೊಳೆಯುತ್ತಲೇ ಇದ್ದಾರೆ” ಎಂದು ದೇಸಾಯಿ ಗಮನಸೆಳೆದರು.
ಒಪ್ಪಂದದ ಸೆಕ್ಷನ್ 5 ರ ಪ್ರಕಾರ, ಎರಡೂ ಸರ್ಕಾರಗಳು ಅವರ ರಾಷ್ಟ್ರೀಯ ಸ್ಥಾನಮಾನವನ್ನು ದೃಢೀಕರಿಸಿದ, ಶಿಕ್ಷೆಯ ಅವಧಿ ಮುಗಿದ ಒಂದು ತಿಂಗಳೊಳಗೆ ವ್ಯಕ್ತಿಗಳನ್ನು ಬಿಡುಗಡೆ ಮಾಡಿ ಸ್ವದೇಶಕ್ಕೆ ಕಳುಹಿಸುತ್ತವೆ.
ಮೃತರು ಮತ್ತು ಜೈಲಿನಲ್ಲಿರುವ ಇತರ ಮೀನುಗಾರರಲ್ಲಿ ಹೆಚ್ಚಿನವರು ಬಹಳ ಹಿಂದೆಯೇ ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿರುವುದರಿಂದ, ಅವರ ರಾಷ್ಟ್ರೀಯತೆಯನ್ನು ದೃಢೀಕರಿಸಲಾಗಿರುವುದರಿಂದ ಈ ಒಪ್ಪಂದವು ಕಾಗದದ ಮೇಲೆಯೇ ಉಳಿದಿದೆ ಎಂದು ದೇಸಾಯಿ ಹೇಳಿದರು.
ಕಳೆದ ವರ್ಷ ಡಿಸೆಂಬರ್ 22 ರಂದು, ಡಿಯುನಲ್ಲಿರುವ ಮೀನುಗಾರ ಸಮುದಾಯದ ಸದಸ್ಯರು ಮತ್ತು ಅವರ ಸ್ನೇಹಿತರು ಈ ವಿಷಯದ ಬಗ್ಗೆ ಗಮನ ಸೆಳೆಯುವ ಪತ್ರವನ್ನು ಇಎಎಂ ಜೈಶಂಕರ್ ಅವರಿಗೆ ಸಲ್ಲಿಸಿದ್ದರು.
ಈ ಮೀನುಗಾರರಲ್ಲಿ ಹೆಚ್ಚಿನವರು ಗುಜರಾತ್, ಡಿಯು ಮತ್ತು ಮಹಾರಾಷ್ಟ್ರಕ್ಕೆ ಸೇರಿದವರು. 160 ಜನರು ರಾಷ್ಟ್ರೀಯತೆಯ ಪರಿಶೀಲನೆಯ ನಂತರ ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಅವರು ಹೇಳಿದರು.
“2008 ರಲ್ಲಿ ಉಭಯ ದೇಶಗಳ ನಡುವಿನ ಒಪ್ಪಂದದ ಹೊರತಾಗಿಯೂ, ಮೀನುಗಾರರು ಪಾಕಿಸ್ತಾನದ ಜೈಲುಗಳಲ್ಲಿಯೇ ಇದ್ದಾರೆ. ಶಿಕ್ಷೆಯ ಅವಧಿಯನ್ನು ಮೀರಿದ ಅವರ ಬಂಧನವು ಕುಟುಂಬಗಳಿಗೆ ವರ್ಷಗಳ ಕಾಲ ಸಂವಹನವಿಲ್ಲದೆ ಉಳಿದು ತೀವ್ರ ದುಃಖವನ್ನುಂಟುಮಾಡಿದೆ. ಇದು ಅವರ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಗಂಭೀರ ಕಳವಳವನ್ನುಂಟುಮಾಡಿದೆ. ಈ ವಿಷಯವನ್ನು ದಯವಿಟ್ಟು ಪರಿಶೀಲಿಸಿ ಅವರ ಬಿಡುಗಡೆ ಮತ್ತು ವಾಪಸಾತಿಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ವಿನಂತಿಸುತ್ತೇವೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಮೀನುಗಾರರ ಬಿಡುಗಡೆ ಮತ್ತು ವಾಪಸಾತಿ, ಅವರ ತುರ್ತು ವೈದ್ಯಕೀಯ ಆರೈಕೆ ಮತ್ತು ಮಾನವೀಯ ವಾಪಸಾತಿ, ಸಂವಹನ ಮತ್ತು ಕುಟುಂಬ ಸಂಪರ್ಕ, ಕೈದಿಗಳ ಮೇಲಿನ ಜಂಟಿ ನ್ಯಾಯಾಂಗ ಸಮಿತಿಯ ಪುನರುಜ್ಜೀವನ, ಮುಟ್ಟುಗೋಲು ಹಾಕಿಕೊಂಡ ಮೀನುಗಾರಿಕಾ ದೋಣಿಗಳನ್ನು ಹಿಂದಿರುಗಿಸುವುದು ಸೇರಿದಂತೆ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಬೆಂಬಲ ನೀಡುವುದು ಪ್ರಮುಖ ಬೇಡಿಕೆಗಳಲ್ಲಿ ಸೇರಿವೆ.
“ಇಲ್ಲಿಯವರೆಗೆ, ಮಹಾರಾಷ್ಟ್ರದ 19 ಮೀನುಗಾರರು ಸೇರಿದಂತೆ 198 ಭಾರತೀಯ ಮೀನುಗಾರರು ಕರಾಚಿ ಜೈಲಿನಲ್ಲಿದ್ದಾರೆ. ಅವರಲ್ಲಿ ಸುಮಾರು 160 ಜನರು ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿದ್ದಾರೆ. ಅವರ ರಾಷ್ಟ್ರೀಯತೆಯನ್ನು ಪರಿಶೀಲಿಸಲಾಗಿದೆ. ಬಂಧಿತ ಮೀನುಗಾರರ ಸಮಸ್ಯೆಯನ್ನು ಎರಡೂ ದೇಶಗಳು ಮಾನವೀಯ ದೃಷ್ಟಿಕೋನದಿಂದ ನೋಡಬೇಕು. ಏಕೆಂದರೆ, ಅವರು ಅಜಾಗರೂಕತೆಯಿಂದ ಗಡಿ ದಾಟುತ್ತಾರೆ, ಆದ್ದರಿಂದ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು” ಎಂದು ದೇಸಾಯಿ ಪ್ರತಿಪಾದಿಸಿದರು.


