ಬಸ್ ಪ್ರಯಾಣದ ವೇಳೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆದ ಬಳಿಕ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಹಿಳೆಯನ್ನು ಕೇರಳದ ಕೋಝಿಕ್ಕೋಡ್ ಪೊಲೀಸರು ಬಂಧಿಸಿದ್ದಾರೆ.
42 ವರ್ಷದ ಸೇಲ್ಸ್ ಮ್ಯಾನೇಜರ್ ಯು ದೀಪಕ್ ಅವರ ಆತ್ಮಹತ್ಯೆಗೆ ಪ್ರಚೋದಿಸಿ ಆರೋಪದಲ್ಲಿ ಶಿಮ್ಜಿತಾ ಮುಸ್ತಫಾ ಅವರನ್ನು ವಡಗರದ ಸಂಬಂಧಿಕರ ಮನೆಯಿಂದ ಬುಧವಾರ (ಜ.21) ವಶಕ್ಕೆ ಪಡೆಯಲಾಗಿದೆ.
ವರದಿಗಳ ಪ್ರಕಾರ, ಶಿಮ್ಜಿತಾ ದೇಶ ಬಿಟ್ಟು ಪಲಾಯನ ಮಾಡುವುದನ್ನು ತಡೆಯಲು ಪೊಲೀಸರು ಲುಕ್‌ಔಟ್ ನೋಟಿಸ್ ಹೊರಡಿಸಿದ್ದರು. ಮತ್ತೊಂದೆಡೆ ಆಕೆಗಾಗಿ ಹುಡುಕಾಟ ನಡೆಸುತ್ತಿದ್ದರು.
ಜನವರಿ 16 ರಂದು ದೀಪಕ್ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ನಲ್ಲಿ ಕೆಲಸಕ್ಕಾಗಿ ಕೋಝಿಕ್ಕೋಡ್‌ನಿಂದ ಕಣ್ಣೂರಿಗೆ ತೆರಳುತ್ತಿದ್ದಾಗ, ಅದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಶಿಮ್ಜಿತಾ, ದೀಪಕ್ ಅವರ ಮೊಣಕೈ ತನ್ನ ದೇಹಕ್ಕೆ ತಾಗಿದೆ. ಅವರು ದುರುದ್ದೇಶದಿಂದ ಕೃತ್ಯವೆಸಗಿದ್ದಾರೆ ಎಂದು ವಿಡಿಯೋ ರೆಕಾರ್ಡ್ ಮಾಡಿ ಹಂಚಿಕೊಂಡಿದ್ದರು. ದೀಪಕ್ ತನ್ನ ದೇಹಕ್ಕೆ ಉದ್ಧೇಶಪೂರ್ವಕವಾಗಿ ಕೈ ತಾಗಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಮನನೊಂದು ಕೋಝಿಕ್ಕೋಡ್‌ನ ಗೋವಿಂದಪುರಂನ ಮನೆಯಲ್ಲಿ ಜನವರಿ 18ರಂದು ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಕೇರಳ ಮಾತ್ರವಲ್ಲದೆ ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ದೀಪಕ್ ಸಾವಿಗೆ ಸಂಬಂಧಿಸಿದಂತೆ ಅವರ ತಾಯಿ ಕನ್ಯಕ ಪೊಲೀಸರಿಗೆ ದೂರು ನೀಡಿದ್ದರು. ನನ್ನ ಮಗ ನಿರಪರಾಧಿ, ಶಿಮ್ಜಿತಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಸುಳ್ಳಾರೋಪ ಮಾಡಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಮೂಲಕ ನನ್ನ ಮಗನ ಮಾನಹಾನಿ ಮಾಡಿ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದರು.
ದೂರು ಸ್ವೀಕರಿಸಿದ ಪೊಲೀಸರು ಶಿಮ್ಜಿತಾ ವಿರುದ್ದ ಬಿಎಎನ್‌ಎಸ್ ಸೆಕ್ಷನ್ 108ರ ಅಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ಕೈಗೊಂಡ ಪೊಲೀಸರು ಮೊದಲು ಚೋರೋಡ್‌ನಲ್ಲಿರುವ ಶಿಮ್ಜಿತಾಳ ಮನೆಯಲ್ಲಿ ಪರಿಶೀಲನೆ ನಡೆಸಿದ್ದರು. ಆಕೆ ಅಲ್ಲಿ ಇಲ್ಲ ಎಂದು ತಿಳಿದು ಹುಡುಕಾಟ ಆರಂಭಿಸಿದ್ದರು. ಬುಧವಾರ ವಡಗರದಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಬುಧವಾರ ಬೆಳಿಗ್ಗೆ 10:30ರ ಸುಮಾರಿಗೆ ವಿಶೇಷ ಪೊಲೀಸ್ ತಂಡ ಶಿಮ್ಜಿತಾ ಅವರನ್ನು ವಶಕ್ಕೆ ಪಡೆದಿದೆ. ನಂತರ ಸಾರ್ವಜನಿಕರು ಮತ್ತು ಮಾಧ್ಯಮದವರ ಕಣ್ಣು ತಪ್ಪಿಸಿ ರಹಸ್ಯವಾಗಿ ಆಕೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಕೊಯಿಲಾಂಡಿ ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಮುಂದಿನ ಕ್ರಮವಾಗಿ ಪೊಲೀಸರು ಶಿಮ್ಜಿತಾಳ ಮೊಬೈಲ್ ಫೋನ್ ವಶಕ್ಕೆ ಪಡೆದು ಅದರಲ್ಲಿ ವೈರಲ್ ವಿಡಿಯೋ ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸಲಿದ್ದಾರೆ.
ಶಿಮ್ಜಿತಾಳ ಬಂಧನ ವಿಷಯ ತಿಳಿದು ಪೊಲೀಸ್ ಠಾಣೆ ಮುಂದೆ ಜಮಾಯಿಸಿದ ಜನರು, ಆಕೆಯ ಮೇಲೆ ಕೊಲೆ ಸೇರಿದಂತೆ ಕಠಿಣ ಅಪರಾಧ ಪ್ರಕರಣಗಳನ್ನು ದಾಖಲಿಸಿ ಗರಿಷ್ಠ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ.
ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗ ಕೂಡ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದೆ. ಒಂದು ವಾರದೊಳಗೆ ತನಿಖೆಯ ಸಮಗ್ರ ವರದಿಯನ್ನು ಸಲ್ಲಿಸುವಂತೆ ಉತ್ತರ ವಲಯದ ಉಪ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದೆ.
ಕಾನೂನು ಕ್ರಮ ಜರುಗಿಸಲು ಅಗತ್ಯವಾದ ಡಿಜಿಟಲ್ ಸಾಕ್ಷ್ಯಗಳನ್ನು ಪಡೆದುಕೊಳ್ಳಲು ಅಧಿಕಾರಿಗಳು ಶಿಮ್ಜಿತಾಳನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಕಾನೂನು-ಸುವ್ಯವಸ್ಥೆ ಹದೆಗಡೆದಂತೆ ನೋಡಿಕೊಳ್ಳಲು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಪೊಲೀಸರು ಶಿಮ್ಜಿತಾಳನ್ನು ನೇರವಾಗಿ ಕುನ್ನಮಂಗಲಂ ನ್ಯಾಯಾಲಯಕ್ಕೆ ಕರೆದೊಯ್ದು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.


