ಬೆಂಗಳೂರು: ಫೇಸ್‌ಬುಕ್‌ನಲ್ಲಿ 15ಕ್ಕೂ ಹೆಚ್ಚು ನಕಲಿ ಖಾತೆಗಳನ್ನು ಸೃಷ್ಟಿಸಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಬರಹಗಳನ್ನು ಪೋಸ್ಟ್ ಮಾಡುತ್ತಾ, ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಸಮಾಜದಲ್ಲಿ ದ್ವೇಷ ಮತ್ತು ಗಲಭೆ ಹುಟ್ಟುಹಾಕುವ ಪ್ರಯತ್ನ ನಡೆಸುತ್ತಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಲಿತ ಸೇನೆ ಮಹಿಳಾ ಘಟಕದ ವತಿಯಿಂದ ಜನವರಿ 22ರಂದು ಪೊಲೀಸ್ ಮಹಾ ನಿರ್ದೇಶಕರು ಹಾಗೂ ಆರಕ್ಷಕ ಮಹಾ ನಿರೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ, ‘ತಪ್ಪು ಮಾಡುವವರ ಅಪ್ಪ ನಾನೆ’, ‘ಗುಲಾಮರ ದೊಡ್ಡಪ್ಪ’, ‘ದಾಸ್ ಮಂಜುನಾಥ್ (ಕ್ರಿಸ್ಟೋಫರ್ ಚಕ್ರವರ್ತಿ)’ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ನಕಲಿ ಖಾತೆಗಳ ಮೂಲಕ ಕೆಟ್ಟ ಪದಗಳ ಬಳಕೆ, ಅವಹೇಳನಕಾರಿ ಬರಹಗಳು ಹಾಗೂ ಪ್ರಚೋದನಕಾರಿ ವಿಡಿಯೋಗಳನ್ನು ಅಪ್‌ಲೋಡ್ ಮಾಡುವ ಮೂಲಕ ಸಮಾಜದಲ್ಲಿ ಅಶಾಂತಿ ಉಂಟುಮಾಡಲು ಪ್ರಯತ್ನಿಸಲಾಗುತ್ತಿದೆ. ಇಂತಹ ಕೃತ್ಯಗಳು ಸಂವಿಧಾನ ವಿರೋಧಿ ಹಾಗೂ ಸಮಾಜದ ಶಾಂತಿಗೆ ಭಾರೀ ಧಕ್ಕೆ ಉಂಟುಮಾಡುವಂತಹವುಗಳಾಗಿದ್ದು, ಸದರಿ ವ್ಯಕ್ತಿಯನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸೇನೆ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪವಿತ್ರ ಜಿ, ‘ಡಾ.ಅಂಬೇಡ್ಕರ್ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು ಸಮುದಾಯಗಳ ನಡುವೆ ವೈಷಮ್ಯ ಮೂಡಿಸುವುದು ಗಂಭೀರ ಅಪರಾಧ. ಇಂತಹ ಸಮಾಜ ವಿರೋಧಿ ಶಕ್ತಿಗಳಿಗೆ ಕಾನೂನಿನ ಮೂಲಕ ಕಠಿಣ ಪಾಠ ಕಲಿಸಬೇಕು. ಸಾಮಾಜಿಕ ಜಾಲತಾಣಗಳ ದುರುಪಯೋಗಕ್ಕೆ ಕಡಿವಾಣ ಹಾಕುವುದು ಪೊಲೀಸ್ ಇಲಾಖೆಯ ಕರ್ತವ್ಯವಾಗಿದ್ದು, ಈ ಪ್ರಕರಣದಲ್ಲಿ ತಕ್ಷಣ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.
ಮನವಿ ಸಲ್ಲಿಕೆಯ ಸಂದರ್ಭದಲ್ಲಿ ದಲಿತ ಸೇನೆ ವಿಜಯಪುರ ಜಿಲ್ಲೆಯ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಪ್ರಕಾಶ್ ಹೊಸಮನಿ, ಉತ್ತರ ಕರ್ನಾಟಕದ ಅಧ್ಯಕ್ಷ ಮಹೇಶ್ ಜಾಬನೂರು ಉಪಸ್ಥಿತರಿದ್ದರು.


