Homeಕರ್ನಾಟಕರಾಜ್ಯಪಾಲರಿಂದ ಸಂವಿಧಾನದ ವಿಧಿಗಳ ಉಲ್ಲಂಘನೆ; ಜನಪ್ರತಿನಿಧಿಗಳ ಸಭೆಯನ್ನು ಅವಮಾನಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರಾಜ್ಯಪಾಲರಿಂದ ಸಂವಿಧಾನದ ವಿಧಿಗಳ ಉಲ್ಲಂಘನೆ; ಜನಪ್ರತಿನಿಧಿಗಳ ಸಭೆಯನ್ನು ಅವಮಾನಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

- Advertisement -
- Advertisement -

“ವರ್ಷದ ಮೊದಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೇ, ಸಂವಿಧಾನದ ವಿಧಿಗಳನ್ನು ಉಲ್ಲಂಘಿಸಿದ್ದಾರೆ. ಅವರ ಈ ನಡೆ ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ. ಇದನ್ನು ನಾವು ಖಂಡಿಸುತ್ತೇವೆ. ಈ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡುವ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಗುರುವಾರ (ಜ.22) ಭಾರೀ ಹೈಡ್ರಾಮ ನಡೆದಿದ್ದು, ರಾಜ್ಯಪಾಲರು ಸರ್ಕಾರ ಬರೆದುಕೊಟ್ಟ ಭಾಷಣ ಓದದೆ, ತಮ್ಮದೇ ಆದ ಕೇವಲ ಎರಡೇ ಸಾಲಿನ ಭಾಷಣ ಓದಿ ಹೊರ ನಡೆದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸದನದಿಂದ ರಾಜ್ಯಪಾಲರು ಹೊರನಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಪ್ರತಿ ವರ್ಷದ ಆರಂಭದಲ್ಲಿ ನಡೆಯುವ ಹಾಗೂ ಹೊಸ ಸರ್ಕಾರ ಸ್ಥಾಪನೆಗೊಂಡ ಸಂದರ್ಭದಲ್ಲಿ ನಡೆಸಲಾಗುವ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡುವುದು ಸಂವಿಧಾನದ ರೀತ್ಯಾ ರಾಜ್ಯಪಾಲರ ಕರ್ತವ್ಯವಾಗಿರುತ್ತದೆ. ಸಂವಿಧಾನ ಕಲಂ 176 ಮತ್ತು 163 ರಂತೆ ಸರ್ಕಾರದ ಸಚಿವ ಸಂಪುಟ ಸಿದ್ಧಪಡಿಸಿರುವ ಭಾಷಣವನ್ನು ಓದಲೇಬೇಕೆಂಬ ನಿಯಮವಿದ್ದು, ರಾಜ್ಯಪಾಲರು ತಾವೇ ಸಿದ್ಧಪಡಿಸಿದ ಭಾಷಣವನ್ನು ಓದುವಂತಿಲ್ಲ. ಇಂದು ವರ್ಷದ ಮೊದಲ ಜಂಟಿ ಅಧಿವೇಶನ ಮತ್ತು ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ಮನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ) ರದ್ದುಪಡಿಸಿ, ವಿಬಿಜಿ ರಾಮ್ ಜಿ ( ವಿಕಸಿತ ಭಾರತ – ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಎಂಬ ಕಾಯ್ದೆಯನ್ನು ಕೇಂದ್ರ ಸರ್ಕಾರ ಹೊಸದಾಗಿ ರಚಿಸಿದೆ. ಇದಕ್ಕೆ ನಮ್ಮ ಸರ್ಕಾರದ ತೀವ್ರ ವಿರೋಧವಿದೆ” ಎಂದರು.

“ಮೊದಲನೆಯದಾಗಿ, ಉದ್ಯೋಗ ಖಾತ್ರಿ ಕಾಯ್ದೆಯಿಂದ ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆಯಲಾಗಿದೆ. 2005 ರಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ, ಸಂವಿಧಾನ ನಿರ್ದೇಶನಗಳಂತೆ ಆಹಾರ ಭದ್ರತೆ, ಮಾಹಿತಿ ಹಕ್ಕು, ಶಿಕ್ಷಣ ಹಕ್ಕು, ಉದ್ಯೋಗದ ಹಕ್ಕು ಕಾಯ್ದೆಗಳನ್ನು ಜಾರಿಗೆ ತಂದಿದ್ದರು. ಬಡ ಕಾರ್ಮಿಕರಿಗೆ ಕನಿಷ್ಠ 100 ದಿನಗಳ ಕಾಲ ಉದ್ಯೋಗ ಒದಗಿಸುವ ಉದ್ದೇಶದಿಂದ ಜಾರಿಗೆ ತರಲಾಗಿದ್ದ ಈ ಕಾಯ್ದೆಯಿಂದ ದಲಿತರು, ಕಾರ್ಮಿಕರು ಮತ್ತು ಮಹಿಳೆಯರು ಮತ್ತು ಸಣ್ಣ ರೈತರಿಗೆ ಅನುಕೂಲವಾಗಿತ್ತು” ಎಂದು ಹೇಳಿದರು.

“ಹೊಸ ಕಾಯ್ದೆಯಲ್ಲಿ ವಿಶೇಷವಾಗಿ ಶೇ.53 ಮಹಿಳೆಯರು, ಶೇ.28 ದಲಿತರಿದ್ದು, ಇವರಿಗೆ ಉದ್ಯೋಗದ ಖಾತ್ರಿಯೇ ಇಲ್ಲ. ಅವರು ಅಪೇಕ್ಷಿಸಿದ ಸ್ಥಳದಲ್ಲಿ, ಸಣ್ಣ ರೈತರು ಅವರ ಜಮೀನುಗಳಲ್ಲಿಯೇ ಕೆಲಸ ಮಾಡುವ ಅವಕಾಶವನ್ನು ಮುಂಚಿನ ಕಾಯ್ದೆ ಕಲ್ಪಿಸಿತ್ತು. ಆದರೆ ವಿಬಿ ಜಿ ರಾಮ್ ಜಿ ಕಾಯ್ದೆಯಲ್ಲಿ ಈ ನಿರ್ಣಯವನ್ನು ಕೇಂದ್ರ ಸರ್ಕಾರ ಕೈಗೊಳ್ಳುತ್ತದೆ. ಕೇಂದ್ರ ಸರ್ಕಾರ ನಿರ್ಧರಿಸುವ ಕಡೆಗಳಲ್ಲಿ ಬಡ ಕಾರ್ಮಿಕರು ಕೆಲಸ ಮಾಡಬೇಕಾಗಿದೆ. ಹಿಂದಿನ ಕಾಯ್ದೆಯಲ್ಲಿ ವರ್ಷದ 365 ದಿನಗಳಲ್ಲಿ ಯಾವಾಗಾಲಾದರೂ ಕೆಲಸ ಕೊಡಬಹುದಾಗಿದ್ದು, ಅದು ಸರ್ಕಾರದ ಕರ್ತವ್ಯವಾಗಿತ್ತು. ಅಲ್ಲದೇ, ಈ ಬಗ್ಗೆ ಕ್ರಿಯಾಯೋಜನೆ ರಚಿಸುವ ಹಕ್ಕು ಆಯಾ ಗ್ರಾಮಸಭೆ ಮತ್ತು ಪಂಚಾಯ್ತಿಗಳಿಗೆ ಅವಕಾಶವಿತ್ತು. ಆದರೆ ಈ ಹೊಸ ಕಾಯ್ದೆಯಲ್ಲಿ ಈ ಅವಕಾಶವನ್ನು ರದ್ದು ಪಡಿಸಲಾಗಿದೆ” ಎಂದು ವಿವರಿಸಿದರು.

“ರಾಜ್ಯಪಾಲರು ಹೊಸ ಕಾಯ್ದೆಯನ್ನು ಉದ್ದೇಶಪೂರ್ವಕವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸ್ವಾತಂತ್ರ್ಯವಿಲ್ಲ ಹಾಗೂ ಕೇಂದ್ರದ ಕಾಯ್ದೆಗಳನ್ನು ಸಹಕರಿಸಲೇಬೇಕೆಂಬ ನೀತಿಯಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ ಆಡಳಿತ ಪಕ್ಷವಾಗಿ ನಮಗೆ ಅದರ ಬಗ್ಗೆ ವಿರೋಧವಿದ್ದು, ಈ ವಿಚಾರಗಳನ್ನು ರಾಜ್ಯಪಾಲರ ಭಾಷಣದಲ್ಲಿ ಸೇರಿಸಲಾಗಿತ್ತು. ಮನರೇಗಾ ಕಾಯ್ದೆಯನ್ನು ಮರುಸ್ಥಾಪಿಸುವುದು ಮತ್ತು ಹೊಸ ಕಾಯ್ದೆಯನ್ನು ರದ್ದುಗೊಳಿಸಬೇಕೆಂಬುದು ನಮ್ಮ ಉದ್ದೇಶ. ನಮ್ಮ ಪಕ್ಷ ಮತ್ತು ಸರ್ಕಾರದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಮನರೇಗಾ ಮರುಸ್ಥಾಪನೆ ಮಾಡುವವರೆಗೆ ನಮ್ಮ ಹೋರಾಟ ನಿರಂತರವಾಗಿರಲಿದೆ. ಈ ಹಿಂದೆ ರೈತರ ವಿರೋಧಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ಸು ತೆಗೆದುಕೊಂಡಂತೆ, ಈ ಹೊಸ ಕಾಯ್ದೆಯನ್ನು ವಾಪಸ್ಸು ತೆಗೆದುಕೊಳ್ಳುವವರೆಗೆ ನಮ್ಮ ಹೋರಾಟ ನಡೆಯಲಿದೆ” ಎಂದರು.

“ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೆ, ತಾವೇ ಸಿದ್ಧಪಡಿಸಿದ ಭಾಷಣವನ್ನು ಓದುವ ಮೂಲಕ ಸಂವಿಧಾನದ ವಿಧಿಗಳನ್ನು ಉಲ್ಲಂಘನೆ ಮಾಡಿದ್ದಾರೆ. ಸಂವಿಧಾನದ ಕಲಂ 176 ಮತ್ತು 163 ರಂತೆ ಸಚಿವ ಸಂಪುಟ ಭಾಷಣವನ್ನು ಓದಲೇಬೇಕಾಗಿದ್ದು ವಾಸ್ತವ ಅಂಶ. ಇದು ಸಂವಿಧಾನ ಸ್ಥಾಪನೆಯಾದಾಗಿನಿಂದ ನಡೆದುಕೊಂಡು ಬಂದಿರುವ ಪದ್ಧತಿ, ರಾಜ್ಯಪಾಲರ ಈ ನಡೆ, ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ. ಸಂವಿಧಾನಬದ್ಧವಾದ ವಿಚಾರದ ಉಲ್ಲಂಘನೆಯಾಗಿದೆ” ಎಂದು ಹೇಳಿದರು.

“ಇದನ್ನು ನಮ್ಮ ಪಕ್ಷ ಮತ್ತು ಸರ್ಕಾರ, ಶಾಸಕರು, ಎಂಎಲ್‌ಸಿ ಗಳು ಪ್ರತಿಭಟನೆ ಮೂಲಕ ವಿರೋಧಿಸುತ್ತೇವೆ. ಇಡೀ ರಾಜ್ಯದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ. ಕೇಂದ್ರ ಸರ್ಕಾರ ತಾವು ಮಾಡಿದ ತಪ್ಪನ್ನು ಮರೆಮಾಚಲು ರಾಜ್ಯಪಾಲರ ಕೈಯಲ್ಲಿ ಬೇರೆ ಭಾಷಣವನ್ನು ಓದಿಸಿದ್ದಾರೆ. ಇದು ಸಂವಿಧಾನ ಬಾಹಿರ ಕೃತ್ಯ. ರಾಜ್ಯಪಾಲರು ತಮ್ಮ ಕರ್ತವ್ಯವನ್ನು ಪಾಲನೆ ಮಾಡಿಲ್ಲ. ಸರ್ಕಾರ ಸಿದ್ಧಪಡಿಸಿರುವ ಭಾಷಣದ ಪ್ರತಿಯನ್ನು ಎಲ್ಲ ಶಾಸಕರು ಎಂಎಲ್ ಸಿಗಳಿಗೆ ವಿತರಿಸಲಾಗಿದೆ. ಇದರ ಬಗ್ಗೆ ಚರ್ಚಿಸಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು” ಎಂದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ನಾಟಕದಲ್ಲಿ ಗುಟ್ಕಾ, ಪಾನ್ ಮಸಾಲಾ ಉತ್ಪಾದನೆ ಮತ್ತು ಮಾರಾಟ 1 ವರ್ಷ ನಿಷೇಧ: ರಾಜ್ಯ ಸರ್ಕಾರದ ಮಹತ್ವದ ಆದೇಶ

ಬೆಂಗಳೂರು: ಸಾರ್ವಜನಿಕ ಆರೋಗ್ಯ ಮತ್ತು ಸಮಾಜದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ತಂಬಾಕು ಹಾಗೂ ನಿಕೋಟಿನ್ ಅಂಶ ಹೊಂದಿರುವ ಗುಟ್ಕಾ, ಪಾನ್ ಮಸಾಲಾ ಸೇರಿದಂತೆ ಇತರ ಅಪಾಯಕಾರಿ ಉತ್ಪನ್ನಗಳ ಮೇಲೆ ಸಂಪೂರ್ಣ...

ಲೋಕಸಭೆ ಬಲ 543 ರಲ್ಲೇ ಶಾಶ್ವತವಾಗಿ ಮುಂದುವರಿಸಲು ಕೇಂದ್ರಕ್ಕೆ ಆಗ್ರಹ: ತಮಿಳುನಾಡು ವಿಧಾನಸಭೆಯಲ್ಲಿ ಸಿಎಂ ಸಿ. ಜೋಸೆಫ್ ವಿಜಯ್ ನಿರ್ಣಯ ಮಂಡನೆ

ಚೆನ್ನೈ: ಕೇಂದ್ರ ಸರ್ಕಾರವು ಲೋಕಸಭೆಯ ಒಟ್ಟು ಸ್ಥಾನಗಳ ಬಲವನ್ನು ಪ್ರಸ್ತುತ ಇರುವ 543 ರಲ್ಲೇ ಶಾಶ್ವತವಾಗಿ ಕಾಯ್ದುಕೊಳ್ಳಬೇಕು ಮತ್ತು ರಾಜ್ಯಗಳ ನಡುವಿನ ಪ್ರಾತಿನಿಧ್ಯದ ಅನುಪಾತವನ್ನು ಬದಲಾಯಿಸಬಾರದು ಎಂದು ಒತ್ತಾಯಿಸಿ ತಮಿಳುನಾಡು ಮುಖ್ಯಮಂತ್ರಿ ಸಿ....

ಯುಪಿಯಲ್ಲಿ ಅಮಾನವೀಯ ಘಟನೆ: ಮೊಬೈಲ್ ಕದ್ದ ಆರೋಪ ಹೊರಿಸಿ ಒಬಿಸಿ ಯುವಕನ ತಲೆ ಬೋಳಿಸಿ ಮೆರವಣಿಗೆ; ಮೇಲ್ಜಾತಿಯ ತಂದೆ-ಮಗನ ಬಂಧನ

ಉನ್ನಾವೋ: ಉತ್ತರ ಪ್ರದೇಶದಲ್ಲಿ ಇದುವರೆಗೆ ದಲಿತ ಸಮುದಾಯಗಳ ಮೇಲೆ ವ್ಯಾಪಕವಾಗಿ ನಡೆಯುತ್ತಿದ್ದ ಜಾತಿ ಆಧಾರಿತ ದೌರ್ಜನ್ಯ ಮತ್ತು ಸಾರ್ವಜನಿಕ ಅವಮಾನದಂತಹ ಅಮಾನವೀಯ ಕೃತ್ಯಗಳು, ಈಗ ಇತರ ಹಿಂದುಳಿದ ವರ್ಗಗಳ (ಒಬಿಸಿ) ಜನರ ಮೇಲೆಯೂ...

SIR 3ನೇ ಹಂತ: 12 ರಾಜ್ಯಗಳು-ಕೇಂದ್ರಾಡಳಿತ ಪ್ರದೇಶಗಳ 1.58 ಕೋಟಿ ಮತದಾರರ ಹೆಸರು ಕರಡು ಪಟ್ಟಿಯಿಂದ ಡಿಲೀಟ್

ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಮೂರನೇ ಹಂತದಲ್ಲಿ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಿಂದ ಸುಮಾರು 1.58 ಕೋಟಿ ಹೆಸರುಗಳನ್ನು ಅಳಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ 3ನೇ ಹಂತದ ವ್ಯಾಪ್ತಿಗೆ ಒಳಪಡುವ 16 ರಾಜ್ಯಗಳಲ್ಲಿ...

ಪ. ಬಂಗಾಳ ಎಸ್‌ಐಆರ್ | ಮೇಲ್ಮನವಿ ನ್ಯಾಯಮಂಡಳಿಗಳಿಗೆ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಮೇಲ್ಮನವಿಗಳ ವಿಚಾರಣೆ ನಡೆಸುತ್ತಿರುವ ಮೇಲ್ಮನವಿ ನ್ಯಾಯಾಧಿಕರಣಗಳ ನಿರ್ಧಾರಗಳಿಗೆ ಯಾವುದೇ ನಿರ್ದಿಷ್ಟ ಸಮಯದ ಮಿತಿಯನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್...

‘ಎಸ್‌ಐಆರ್‌’ನಿಂದ ಹೆಸರು ಡಿಲೀಟ್‌ ಆದವರಿಗೆ ‘ಹೊಸ ಮತದಾರರ ನೋಂದಣಿ’ ಯಾಕೆ?

ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಕಾಣೆಯಾಗಿದ್ದರೆ ನಮೂನೆ ಸಂಖ್ಯೆ 6 ಅನ್ನು (Form No. 6) ಸಲ್ಲಿಸಿ ಎಂದು ಜುಲೈ 22 ರಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ...

ನೀಟ್ ವಿರುದ್ಧ ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ : ಸಭಾತ್ಯಾಗ ಮಾಡಿದ ಬಿಜೆಪಿಯ ಏಕೈಕ ಶಾಸಕ

ತಮಿಳುನಾಡು ವಿಧಾನಸಭೆಯು ಮಂಗಳವಾರ (ಆ.11) ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಪರೀಕ್ಷೆಗಳನ್ನು ನಡೆಸುವಲ್ಲಿ ಪದೇ ಪದೇ...

‘ಬಹುಸಂಖ್ಯಾತ ಭಾವನೆಯು ಸಾಂವಿಧಾನಿಕ ಹಕ್ಕುಗಳನ್ನು ಮರೆಮಾಡಲು ಸಾಧ್ಯವಿಲ್ಲ’: ಇಸ್ಲಾಂ ಧರ್ಮ ಸ್ವೀಕರಿಸಿದ್ದ ಸಹೋದರಿಯರ ಅಕ್ರಮ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ತೀವ್ರ ತರಾಟೆ

ಹಿಂದೂ ಧರ್ಮದಿಂದ ಸ್ವಯಂಪ್ರೇರಿತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ನಂತರ, ಸ್ವಂತ ತಂದೆ ಹಾಗೂ ಉತ್ತರ ಪ್ರದೇಶ ರಾಜ್ಯ ಸರ್ಕಾರದ ಅಕ್ರಮ ಹಸ್ತಕ್ಷೇಪದಿಂದಾಗಿ ವರ್ಷಗಳ ಕಾಲ ತಮ್ಮ ಮೂಲಭೂತ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದ ಇಬ್ಬರು ವಯಸ್ಕ...

ಸಂವಿಧಾನಬದ್ಧ ದಾಖಲೆಗಳಿದ್ದರೂ ಪಶ್ಚಿಮ ಬಂಗಾಳದ ಮುಸ್ಲಿಂ ಮಹಿಳೆ ‘ಒಳನುಸುಳುಕೋರ’ರೆಂದು ಬಾಂಗ್ಲಾಕ್ಕೆ ಗಡೀಪಾರು: ಭಾರತದಲ್ಲೇ ಉಳಿದ ಪತಿ, ಇಬ್ಬರು ಮಕ್ಕಳು

ಭಾರತೀಯ ಪೌರತ್ವವನ್ನು ಸ್ಪಷ್ಟವಾಗಿ ಸಾಬೀತುಪಡಿಸುವ ಜನನ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಮತ್ತು ಸ್ವಂತ ಭೂಮಿಯ ದಾಖಲೆಗಳು ಕೈಯಲ್ಲಿದ್ದರೂ, ಪಶ್ಚಿಮ ಬಂಗಾಳದ 40 ವರ್ಷದ ಮುಸ್ಲಿಂ ಮಹಿಳೆಯೊಬ್ಬರನ್ನು 'ಒಳನುಸುಳುಕೋರ' ಎಂಬ...

SIR ನಂತರ ಮತದಾರರ ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ : ನಟ ಪ್ರಕಾಶ್ ರಾಜ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನಂತರ ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ ಎಂದು ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ...