ಎಲ್ಗರ್ ಪರಿಷತ್ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಾಲ್ಕು ವರ್ಷಗಳ ನಂತರ, ಸಾಮಾಜಿಕ ಕಾರ್ಯಕರ್ತರಾದ ಸಾಗರ್ ಗೋರ್ಖೆ ಮತ್ತು ರಮೇಶ್ ಗೈಚೋರ್ ಅವರಿಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ. ಈಗಾಗಲೇ ಬಿಡುಗಡೆಯಾದ ಇತರ ಆರೋಪಿಗಳಂತೆಯೇ ಅವರು ಜಾಮೀನು ಪಡೆಯಲು ಅರ್ಹರು ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಲವಾರು ಸಹ-ಆರೋಪಿಗಳಿಗೆ ದೀರ್ಘಾವಧಿಯ ಜೈಲು ಶಿಕ್ಷೆಯಿಂದಾಗಿ, ವಿಚಾರಣೆ ವಿಳಂಭದ ಕಾರಣ ಜಾಮೀನು ನೀಡಲಾಗಿದೆ ಎಂದು ನ್ಯಾಯಮೂರ್ತಿ ಎ ಎಸ್ ಗಡ್ಕರಿ ನೇತೃತ್ವದ ಪೀಠ ಗಮನಿಸಿದೆ. ಈ ಆಧಾರದ ಮೇಲೆ, ಗೋರ್ಖೆ ಮತ್ತು ಗೈಚೋರ್ ಕೂಡ ಇದೇ ರೀತಿಯ ಪರಿಹಾರವನ್ನು ಪಡೆಯಬೇಕು ಎಂದು ನ್ಯಾಯಾಲಯ ಹೇಳಿದೆ.
ಇಬ್ಬರು ಕಾರ್ಯಕರ್ತರನ್ನು ಸೆಪ್ಟೆಂಬರ್ 2020 ರಲ್ಲಿ ಬಂಧಿಸಲಾಯಿತು. ಅಂದಿನಿಂದ ಅವರನ್ನು ತಲೋಜಾ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಜಾಮೀನು ಷರತ್ತುಗಳ ಭಾಗವಾಗಿ, ನ್ಯಾಯಾಲಯವು ತಲಾ ಒಂದು ಲಕ್ಷ ರೂ.ಗಳ ವೈಯಕ್ತಿಕ ಬಾಂಡ್‌ಗಳನ್ನು ಸಲ್ಲಿಸಲು ಅವರಿಗೆ ಸೂಚಿಸಿದೆ. ಪ್ರತಿ ತಿಂಗಳಿಗೊಮ್ಮೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಕಚೇರಿಗೆ ತರಳಿ ವರದಿ ಮಾಡಿಕೊಳ್ಳಬೇಕು ಎಂದು ಸಹ ಅವರಿಗೆ ಸೂಚಿಸಲಾಗಿದೆ.
ಎಲ್ಗರ್ ಪರಿಷತ್ ಪ್ರಕರಣವು ಡಿಸೆಂಬರ್ 31, 2017 ರಂದು ಪುಣೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಸಂಬಂಧಿಸಿದೆ. ಅಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಮರುದಿನ ಪುಣೆ ಬಳಿಯ ಕೋರೆಗಾಂವ್ ಭೀಮಾದಲ್ಲಿ ಹಿಂಸಾಚಾರ ಭುಗಿಲೆದ್ದಿತು. ಇದು ಆ ಪ್ರದೇಶದಲ್ಲಿ ವ್ಯಾಪಕ ಅಶಾಂತಿಗೆ ಕಾರಣವಾಯಿತು.
ಆರಂಭದಲ್ಲಿ, ಪ್ರಕರಣವನ್ನು ಪುಣೆ ಪೊಲೀಸರು ತನಿಖೆ ನಡೆಸುತ್ತಿದ್ದರು, ಅವರು ಮಾವೋವಾದಿ ಗುಂಪುಗಳು ಸಮಾವೇಶವನ್ನು ಬೆಂಬಲಿಸಿದ್ದಾರೆ ಎಂದು ಹೇಳಿಕೊಂಡರು. ನಂತರ, ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಲಾಯಿತು. ಈ ಆದೇಶದೊಂದಿಗೆ, ವಕೀಲ ಸುರೇಂದ್ರ ಗ್ಯಾಡ್ಲಿಂಗ್ ಹೊರತುಪಡಿಸಿ ಪ್ರಕರಣದ ಎಲ್ಲಾ ಆರೋಪಿಗಳಿಗೆ ಈಗ ಜಾಮೀನು ನೀಡಲಾಗಿದೆ. ಜೆಸ್ಯೂಟ್ ಪಾದ್ರಿ ಮತ್ತು ಬುಡಕಟ್ಟು ಹಕ್ಕುಗಳ ಕಾರ್ಯಕರ್ತ ಫಾದರ್ ಸ್ಟಾನ್ ಸ್ವಾಮಿ ಕೂಡ ಆರೋಪಿಯಾಗಿದ್ದರು. ಜುಲೈ 2021 ರಲ್ಲಿ ವಿಚಾರಣೆಗೆ ಕಾಯುತ್ತಿರುವಾಗ ಕಸ್ಟಡಿಯಲ್ಲಿ ನಿಧನರಾದರು.
ಪ್ರಕರಣದ ಇತರ ಆರೋಪಿಗಳಲ್ಲಿ ಕವಿ ವರವರ ರಾವ್, ಸಾಮಾಜಿಕ ಕಾರ್ಯಕರ್ತರಾದ ಸುಧಾ ಭಾರದ್ವಾಜ್, ಆನಂದ್ ತೇಲ್ತುಂಬ್ಡೆ, ವೆರ್ನಾನ್ ಗೊನ್ಸಾಲ್ವೆಸ್, ಅರುಣ್ ಫೆರೇರಾ, ಶೋಮಾ ಸೇನ್, ಗೌತಮ್ ನವಲಖಾ, ಸುಧೀರ್ ಧವಲೆ, ರೋನಾ ವಿಲ್ಸನ್, ಜ್ಯೋತಿ ಜಗ್ತಾವೊ ಮತ್ತು ಮಹೇಶ್ ರಾವತ್ ಸೇರಿದ್ದಾರೆ.


