ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ 17 ವರ್ಷದ ಬಾಲಕಿಯನ್ನು ಬಲವಂತದ ಮದುವೆಗೆ ಒತ್ತಡದ ನಡುವೆ ಅಪಹರಿಸಲಾಗಿದೆ ಎಂದು ಆರೋಪಿಸಲಾಗಿದೆ. ಪೊಲೀಸ್ ದೂರು ನೀಡಿ ಸಹಾಯಕ್ಕಾಗಿ ಪದೇ ಪದೇ ಮನವಿ ಮಾಡಿದರೂ ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿರುವುದಾಗಿ ಮಕ್ತೂಬ್ ಮೀಡಿಯಾ ವರದಿ ಮಾಡಿದೆ.
11ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಅಪ್ರಾಪ್ತ ಬಾಲಕಿಯನ್ನು ರಾಜಾ ಮತ್ತು ಡಕುವಾ ಎಂದು ಕುಟುಂಬದಿಂದ ಗುರುತಿಸಲ್ಪಟ್ಟ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆಕೆಯ ತಾಯಿ ಹೌರಾ ನಿವಾಸಿ ಗುಲ್ಶನ್ ಬೇಗಂ ತಿಳಿಸಿದ್ದಾರೆ.
ಬಲವಂತದ ಮದುವೆಗೆ ಹುಡುಗಿ ನಿರಂತರ ಒತ್ತಡಕ್ಕೊಳಗಾಗಿದ್ದಳು, ಆದರೆ ಅವಳು ಕಾನೂನುಬದ್ಧವಾಗಿ ಅಪ್ರಾಪ್ತ ವಯಸ್ಕಳಾಗಿದ್ದರಿಂದ ಮತ್ತು ಹುಡುಗ ಸೂಕ್ತನಲ್ಲದ ಕಾರಣ ಮದುವೆಯನ್ನು ನಿರಾಕರಿಸಿದ್ದಾಗಿ ಕುಟುಂಬ ತಿಳಿಸಿದೆ.
ಈ ಬಗ್ಗೆ ಮಕ್ತೂಬ್ ಮೀಡಿಯಾದ ಜೊತೆ ಮಾತನಾಡಿರುವ ಬಾಲಕಿಯ ತಾಯಿ ಗುಲ್ಶನ್ ಬೇಗಂ, ಬೆದರಿಕೆಗಳು ಸ್ಪಷ್ಟವಾಗಿದ್ದವು ಎಂದು ಹೇಳಿದ್ದಾರೆ. “ಸುಲ್ತಾನ್‌ಪುರದ ಹುಡುಗ ಮತ್ತು ಅವನ ಚಿಕ್ಕಪ್ಪ ನಮಗೆ ಸ್ಪಷ್ಟವಾಗಿ ಹೇಳಿದ್ದರು, ನೀವು ಮದುವೆಗೆ ಒಪ್ಪದಿದ್ದರೆ, ನಾವು ನಿಮ್ಮ ಮಗಳನ್ನು ಕರೆದುಕೊಂಡು ಹೋಗುತ್ತೇವೆ” ಎಂದು ಹೇಳಿದ್ದರು. “ಈ ಮದುವೆಗೆ ನಾವು ಬೇಡ ಅಂದೆವು ಏಕೆಂದರೆ ಅವಳಿಗೆ ಕೇವಲ 17 ವರ್ಷ ಮತ್ತು ಇನ್ನೂ ಓದುತ್ತಿದ್ದಳು. ಅವಳು ಓದಲು ಬಯಸಿದ್ದಳು ಮತ್ತು ಅವಳಿಗೆ ಆ ಹುಡುಗ ಇಷ್ಟವಿರಲಿಲ್ಲ” ಎಂದು ಹೇಳಿದ್ದಾರೆ.
ಕುಟುಂಬದ ಪ್ರಕಾರ, ಬೆದರಿಕೆಗಳ ನಂತರ ಬಾಲಕಿಯ ಅಪಹರಣ ನಡೆದಿದೆ. ಗುಲ್ಶನ್ ಬೇಗಂ ಅವರು ತಮ್ಮ ಮಗಳನ್ನು ಅಂದಿನಿಂದ ತನ್ನ ಇಚ್ಛೆಗೆ ವಿರುದ್ಧವಾಗಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
“ನನ್ನ ಮಗಳನ್ನು ಬಲವಂತವಾಗಿ ಕರೆದುಕೊಂಡು ಹೋಗಲಾಗಿದೆ. ಅವಳು ಇನ್ನೂ ಮಗು,”ಅವಳು ದುಃಖಿಸುತ್ತಾ ಹೇಳಿದಳು. “ಅಂದಿನಿಂದ ನಾವು ಅವಳನ್ನು ನೋಡಿಲ್ಲ.”
ಜನವರಿ 22 ರಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ, ಬೆದರಿಕೆಗಳು, ಬಲವಂತದ ಮದುವೆಗೆ ಯತ್ನಿಸಿದ್ದು ಮತ್ತು ಅಪಹರಣದ ಆರೋಪದ ಬಗ್ಗೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿರುವುದಾಗಿ ಕುಟುಂಬ ತಿಳಿಸಿದೆ. ಆದರೆ, ಯಾವುದೇ ನಿರ್ದಿಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
“ಎರಡು ದಿನಗಳು ಕಳೆದಿವೆ. ನಾವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಓಡುತ್ತಿದ್ದೇವೆ” ಎಂದು ಗುಲ್ಶನ್ ಬೇಗಂ ಹೇಳಿದರು.
“ನಾವು ಬಡವರು. ನಮ್ಮ ಮಗುವಿಗಾಗಿ ಹಗಲಿರುಳು ಅಳುತ್ತಿದ್ದೇವೆ, ಆದರೆ ಆಡಳಿತ ಮೌನವಾಗಿ ಕುಳಿತಿದೆ. ಎಫ್‌ಐಆರ್ ದಾಖಲಾದ ನಂತರವೂ ಆರೋಪಿಗಳು ಮತ್ತು ಅವರ ಸಹಚರರು ದೂರನ್ನು ಹಿಂಪಡೆಯುವಂತೆ ಕುಟುಂಬದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ತಾಯಿ ಆರೋಪಿಸಿದ್ದಾರೆ.
ಅಲ್ಲದೇ “ಅವರು ಮತ್ತೆ ನಮಗೆ ಬೆದರಿಕೆ ಹಾಕುತ್ತಿದ್ದಾರೆ, ಪ್ರಕರಣವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಕೇಳುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
“ನಮಗೆ ಭಯವಾಗಿದೆ, ಆದರೆ ಒಬ್ಬ ತಾಯಿ ತನ್ನ ಮಗಳು ಕಾಣೆಯಾದಾಗ ಹೇಗೆ ಮೌನವಾಗಿರಲು ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.
ಪ್ರಕರಣ ಸಂಬಂಢ ಅಪಹರಣಕ್ಕಾಗಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 137(20) ಮತ್ತು 140(3) ಅಡಿಯಲ್ಲಿ ಜಗಚಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
“ಹುಡುಗಿ ಮತ್ತು ಹುಡುಗ ಇಬ್ಬರೂ ಪತ್ತೆಯಾಗಿಲ್ಲ” ಎಂದು ಜಗಚಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ನಾವು ಹುಡುಗನ ಮೊಬೈಲ್ ಸಂಖ್ಯೆಯನ್ನು ಟ್ರ್ಯಾಕ್ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ, ಆದರೆ ಅದು ಇನ್ನೂ ಸ್ವಿಚ್ ಆಫ್ ಆಗಿದೆ. ಸುಳಿವು ಸಿಕ್ಕ ತಕ್ಷಣ, ನಾವು ಅವನನ್ನು ಬಂಧಿಸಿ ಮುಂದಿನ ತನಿಖೆಯನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.


