ಉತ್ತರಾಖಂಡದ ಹಿಮಾಲಯದ ಮಡಿಲಲ್ಲಿ ನೆಲೆಗೊಂಡಿರುವ ಶತಮಾನಗಳಷ್ಟು ಹಳೆಯದಾದ ಬದರಿನಾಥ್ ಮತ್ತು ಕೇದಾರನಾಥ ದೇವಾಲಯಗಳಿಗೆ ಶೀಘ್ರದಲ್ಲೇ ಹಿಂದೂಗಳಿಗೆ ಮಾತ್ರ ಪ್ರವೇಶ ಅನುಮತಿಸಬಹುದು. ಚಾರ್ ಧಾಮ್ ತೀರ್ಥಯಾತ್ರೆಯ ಭಾಗವಾಗಿರುವ ಎರಡು ದೇವಾಲಯಗಳಿಗೆ ಹಿಂದೂಯೇತರರನ್ನು ಪ್ರವೇಶಿಸುವುದನ್ನು ನಿಷೇಧಿಸಲಾಗುವುದು ಎಂದು ಈ ದೇವಾಲಯಗಳನ್ನು ನಿರ್ವಹಿಸುವ ದೇವಾಲಯ ಸಂಸ್ಥೆ ಘೋಷಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ನಿಯಂತ್ರಿಸುವ ಎಲ್ಲ ದೇವಾಲಯಗಳಿಗೆ ಹಿಂದೂಯೇತರರ ನಿಷೇಧವು ಅನ್ವಯಿಸುತ್ತದೆ, ಇದರಲ್ಲಿ ಬದರಿನಾಥ್-ಕೇದಾರನಾಥ ಧಾಮವೂ ಸೇರಿದೆ ಎಂದು ದೇವಾಲಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕುರಿತು ಪ್ರಸ್ತಾವನೆಯನ್ನು ಮುಂಬರುವ ದೇವಾಲಯ ಸಮಿತಿ ಮಂಡಳಿ ಸಭೆಯಲ್ಲಿ ಅಂಗೀಕರಿಸಲಾಗುವುದು.
ಈ ನಿರ್ಧಾರವನ್ನು ಸಮರ್ಥಿಸುತ್ತಾ, ಬಿಕೆಟಿಸಿ ಅಧ್ಯಕ್ಷ ಹೇಮಂತ್ ದ್ವಿವೇದಿ ಮಾತನಾಡಿ, ದೇವಾಲಯಗಳು ಪ್ರವಾಸಿ ಕೇಂದ್ರಗಳಲ್ಲ ಮತ್ತು ಪ್ರವೇಶವು ನಾಗರಿಕ ಹಕ್ಕುಗಳ ಸಮಸ್ಯೆಯಲ್ಲ ಎಂದು ವಾದಿಸಿದರು.
“ಕೇದಾರನಾಥ ಮತ್ತು ಬದರಿನಾಥ ಧಾಮಗಳು ಪ್ರವಾಸಿ ತಾಣಗಳಲ್ಲ. ಇವು ಆದಿ ಶಂಕರಾಚಾರ್ಯರು ಸ್ಥಾಪಿಸಿದ ವೈದಿಕ ಸಂಪ್ರದಾಯದ ಕೇಂದ್ರಗಳಾಗಿವೆ. ಭಾರತೀಯ ಸಂವಿಧಾನದ 26 ನೇ ವಿಧಿಯು ಪ್ರತಿಯೊಂದು ಧಾರ್ಮಿಕ ಪಂಗಡಕ್ಕೂ ತನ್ನದೇ ಆದ ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಹಕ್ಕನ್ನು ನೀಡುತ್ತದೆ. ಈ ನಿರ್ಧಾರವು ಯಾರ ವಿರುದ್ಧವೂ ಅಲ್ಲ, ಶತಮಾನಗಳಷ್ಟು ಹಳೆಯದಾದ ನಂಬಿಕೆ, ಶಿಸ್ತು ಮತ್ತು ಶುದ್ಧತೆಯನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ” ಎಂದು ಅವರು ತಿಳಿಸಿದರು.
ಜೈನ ಮತ್ತು ಸಿಖ್ ಭಕ್ತರಿಗೂ ದೇವಾಲಯದ ಬಾಗಿಲುಗಳು ಮುಚ್ಚಲ್ಪಡುತ್ತವೆಯೇ ಎಂದು ಕೇಳಿದಾಗ, ಈ ವಿಷಯವು ಯಾವುದೇ ನಿರ್ದಿಷ್ಟ ಧರ್ಮದ ಬಗ್ಗೆ ಅಲ್ಲ. ಆದರೆ ನಂಬಿಕೆ ಮತ್ತು ಧಾರ್ಮಿಕ ಶಿಸ್ತಿನ ಬಗ್ಗೆ ಎಂದು ಅವರು ಹೇಳಿದರು.
“ಸನಾತನ ಧರ್ಮದಲ್ಲಿ ನಂಬಿಕೆ ಹೊಂದಿರುವ ಯಾರಿಗಾದರೂ ಕೇದಾರನಾಥ ಮತ್ತು ಬದರಿನಾಥ ಧಾಮದಲ್ಲಿ ಸ್ವಾಗತವಿದೆ. ಸನಾತನ ಸಂಪ್ರದಾಯದಲ್ಲಿ ನಂಬಿಕೆ ಹೊಂದಿರುವ ಯಾರಿಗಾದರೂ ಯಾವುದೇ ನಿರ್ಬಂಧವಿಲ್ಲ” ಎಂದು ಅವರು ಹೇಳಿದರು.
ಚಳಿಗಾಲ ಕಾರಣಕ್ಕೆ ಆರು ತಿಂಗಳ ಕಾಲ ಮುಚ್ಚುವಿಕೆಯ ನಂತರ ಬದರಿನಾಥ ದೇವಾಲಯವು ಏಪ್ರಿಲ್ 23 ರಂದು ತನ್ನ ದ್ವಾರಗಳನ್ನು ಮತ್ತೆ ತೆರೆಯಲಿದೆ. ಕೇದಾರನಾಥ ದೇವಾಲಯದ ದ್ವಾರಗಳನ್ನು ತೆರೆಯುವ ದಿನಾಂಕವನ್ನು ಮಹಾ ಶಿವರಾತ್ರಿಯಂದು ಘೋಷಿಸಲಾಗುವುದು.
ಕೇದಾರನಾಥ ಮತ್ತು ಬದರಿನಾಥ ಜೊತೆಗೆ, ಛೋಟಾ ಚಾರ್ ಧಾಮದ ಭಾಗವಾಗಿರುವ ಇತರ ಎರಡು ದೇವಾಲಯಗಳಲ್ಲಿ ಗಂಗೋತ್ರಿ ಮತ್ತು ಯಮುನೋತ್ರಿ ಸೇರಿವೆ. ಅವುಗಳ ಬಾಗಿಲುಗಳನ್ನು ಏಪ್ರಿಲ್ 19 ರಂದು ಅಕ್ಷಯ ತೃತೀಯ ಸಂದರ್ಭದಲ್ಲಿ ಮತ್ತೆ ತೆರೆಯಲಾಗುವುದು.


