ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು.
ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ಎನ್‌ಸಿಪಿ ನಾಯಕರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಅಜಿತ್ ಪವಾರ್ ಅವರ ಅಕಾಲಿಕ ನಿಧನದ ಹಿನ್ನೆಲೆ ಶನಿವಾರ ಸಭೆ ಸೇರಿದ ಎನ್‌ಸಿಪಿ ಶಾಸಕರು, ತಮ್ಮ ಶಾಸಕಾಂಗ ಪಕ್ಷದ ಹೊಸ ನಾಯಕಿಯಾಗಿ ಸುನೇತ್ರಾ ಪವಾರ್ ಅವರನ್ನು ಅವಿರೋಧ ಆಯ್ಕೆ ಮಾಡಿದರು.
ದಕ್ಷಿಣ ಮುಂಬೈನ ವಿಧಾನ ಭವನ ಸಂಕೀರ್ಣದ ನೆಲ ಮಹಡಿಯಲ್ಲಿರುವ ದಿವಂಗತ ಅಜಿತ್ ಪವಾರ್ ಅವರ ಕಚೇರಿಯಲ್ಲಿ ನಡೆದ ಪಕ್ಷದ ಶಾಸಕಾಂಗ ವಿಭಾಗದ ಸಭೆಯಲ್ಲಿ ಎನ್‌ಸಿಪಿ ಹಿರಿಯ ನಾಯಕ ದಿಲೀಪ್ ವಾಲ್ಸೆ ಪಾಟೀಲ್ ಅವರು ಸುನೇತ್ರಾ ಅವರ ಹೆಸರನ್ನು ಸೂಚಿಸಿದರು. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಛಗನ್ ಭುಜಬಲ್ ಅವರು ಅನುಮೋದಿಸಿದರು ಎಂದು ವರದಿಯಾಗಿದೆ.
ಸಭೆಯಲ್ಲಿ ಸುನೇತ್ರಾ ಪವಾರ್ ತಮ್ಮ ಪತಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಅವರ ಕಿರಿಯ ಮಗ ಜೈ ಕೂಡ ಹಾಜರಿದ್ದರು. ವಿಧಾನ ಭವನದ ಸಂಕೀರ್ಣಕ್ಕೆ ಆಗಮಿಸಿದಾಗ ಸಚಿವರು ಮತ್ತು ಶಾಸಕರು ತಮ್ಮ ಅಗಲಿದ ನಾಯಕ ಅಜಿತ್ ಪವಾರ್ ಅವರನ್ನು ನೆನೆದು ಭಾವುಕರಾದರು.
2024ರ ಲೋಕಸಭಾ ಚುನಾವಣೆಯವರೆಗೂ ಸುನೇತ್ರಾ ಪವಾರ್ ರಾಜಕೀಯದಿಂದ ದೂರ ಇದ್ದರು. ಮೊದಲ ಬಾರಿಗೆ ಲೋಕಸಭೆಯ ಚುನಾವಣೆಗೆ ಅವರು ಬಾರಾಮತಿಯಿಂದ ಎನ್‌ಸಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಅವರ ಅತ್ತಿಗೆ ಎನ್‌ಸಿಪಿ (ಎಸ್‌ಪಿ) ಯ ಸುಪ್ರಿಯಾ ಸುಳೆ ವಿರುದ್ದ ಸೋಲನುಭವಿಸಿದ್ದರು. ಬಳಿಕ ಸುನೇತ್ರಾ ಅವರು ರಾಜ್ಯಸಭೆಗೆ ಆಯ್ಕೆಯಾದರು.
ಸುನೇತ್ರಾ ಪವಾರ್ ಅವರನ್ನು ಪಕ್ಷದ ಶಾಸಕಾಂಗ ನಾಯಕಿಯಾಗಿ ಆಯ್ಕೆ ಮಾಡಿರುವ ಪತ್ರವನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಸಲ್ಲಿಸಲಾಗಿದ್ದು, ಅವರು ಅದನ್ನು ರಾಜ್ಯಪಾಲ ಆಚಾರ್ಯ ದೇವವ್ರತ್ ಅವರಿಗೆ ರವಾನಿಸಿದ್ದಾರೆ ಎಂದು ಎನ್‌ಸಿಪಿ ಕಾರ್ಯಕಾರಿ ಅಧ್ಯಕ್ಷ ಪ್ರಫುಲ್ ಪಟೇಲ್ ತಿಳಿಸಿದ್ದಾರೆ.
ಶಾಸಕಾಂಗ ಪಕ್ಷದ ಸಭೆಯ ನಂತರ, ಎರಡು ಎನ್‌ಸಿಪಿ ಬಣಗಳ ಸಂಭಾವ್ಯ ವಿಲೀನದ ಬಗ್ಗೆ ಪ್ರತಿಕ್ರಿಯಿಸಲು ಪಟೇಲ್ ನಿರಾಕರಿಸಿದರು. ಪಕ್ಷದ ತಕ್ಷಣದ ಆದ್ಯತೆಯೆಂದರೆ ಶಾಸಕಾಂಗ ಪಕ್ಷದ ನಾಯಕಿಯ ಆಯ್ಕೆ ಮತ್ತು ಹೊಸ ಉಪಮುಖ್ಯಮಂತ್ರಿಯ ನೇಮಕ ಎಂದು ಪುನರುಚ್ಚರಿಸಿದರು.
ದೇವೇಂದ್ರ ಫಡ್ನವಿಸ್ ಸರ್ಕಾರದಲ್ಲಿ ಅಜಿತ್ ಪವಾರ್ ಉಪಮುಖ್ಯಮಂತ್ರಿ ಮಾತ್ರವಲ್ಲದೆ ಹಣಕಾಸು, ಯೋಜನೆ ಮತ್ತು ಅಬಕಾರಿ ಸೇರಿದಂತೆ ಪ್ರಮುಖ ಖಾತೆಗಳನ್ನು ಹೊಂದಿದ್ದರು. ಬೀಡ್ ಮತ್ತು ಪುಣೆ ಜಿಲ್ಲೆಗಳ ಉಸ್ತುವಾರಿ ಸಚಿವರಾಗಿದ್ದರು. ಕ್ರೀಡೆ ಮತ್ತು ಯುವಜನ ಕಲ್ಯಾಣ, ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಔಕಾಫ್ (ವಕ್ಫ್) ಇಲಾಖೆಗಳ ಹೆಚ್ಚುವರಿ ಉಸ್ತುವಾರಿಯನ್ನು ಹೊಂದಿದ್ದರು. ಸುನೇತ್ರಾ ಪವಾರ್ ಅವರಿಗೆ ಹಂಚಿಕೆಯಾಗಬೇಕಾದ ಖಾತೆಗಳ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.
ಎನ್‌ಸಿಪಿ (ಎಸ್‌ಪಿ) ಜೊತೆಗಿನ ವಿಲೀನದ ಬಗ್ಗೆ ಯಾವುದೇ ನಿರ್ಧಾರವನ್ನು ಸುನೇತ್ರಾ ಪವಾರ್ ತೆಗೆದುಕೊಳ್ಳುತ್ತಾರೆ ಎಂದು ಹಿರಿಯ ಎನ್‌ಸಿಪಿ ನಾಯಕ ಛಗನ್ ಭುಜಬಲ್ ಹೇಳಿದ್ದಾರೆ. “ಇಂದು ನಮ್ಮ ಕೆಲಸ ಹೊಸ ನಾಯಕಿಯನ್ನು ಆಯ್ಕೆ ಮಾಡುವುದಾಗಿತ್ತು. ಹಾಗಾಗಿ, ಆ ವಿಷಯದ ಬಗ್ಗೆ ಮಾತ್ರ ಶಾಸಕರು ಗಮನಹರಿಸಿದ್ದಾರೆ. ವಿಲೀನದ ಬಗ್ಗೆ ಪಕ್ಷದ ನಾಯಕತ್ವವೇ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಎನ್‌ಸಿಪಿ ಶಾಸಕ ಸಂಗ್ರಾಮ್ ಜಗತಾಪ್ ಹೇಳಿದ್ದಾರೆ.
ಈ ನಡುವೆ ಶಿವಸೇನೆ (ಯುಬಿಟಿ) ವಕ್ತಾರ ಆನಂದ್ ದುಬೆ ಅವರು ಉಪಮುಖ್ಯಮಂತ್ರಿ ಹುದ್ದೆಯನ್ನು ಭರ್ತಿ ಮಾಡುವ ತುರ್ತು ಅಗತ್ಯವನ್ನು ಪ್ರಶ್ನಿಸಿದ್ದು, ಈ ಆತುರವು ರಾಜ್ಯದಲ್ಲಿ ನೈತಿಕ ಮತ್ತು ರಾಜಕೀಯ ಕಳವಳಗಳನ್ನು ಹುಟ್ಟುಹಾಕಿದೆ ಎಂದು ಹೇಳಿದ್ದಾರೆ.
ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ದುಬೆ, ಹಿರಿಯ ನಾಯಕ ಶರದ್ ಪವಾರ್ ಅವರಿಗೂ ಈ ನಿರ್ಧಾರದ ಬಗ್ಗೆ ತಿಳಿದಿಲ್ಲ. ಹಾಗಾದರೆ ಇಲ್ಲಿ ಏನು ನಡೆಯುತ್ತಿದೆ? ಈ ಆತುರಕ್ಕೆ ಕಾರಣವೇನು? ಮಹಾರಾಷ್ಟ್ರಕ್ಕೆ ಈ ವಿಷಯದಲ್ಲಿ ಖುಷಿಯಿಲ್ಲ ಎಂದಿದ್ದಾರೆ.


