ರಣಜಿ ಕ್ರಿಕೆಟ್‌ನಲ್ಲಿ ಕರ್ನಾಟಕ ತಂಡವು ಬಲಿಷ್ಠ ಮುಂಬೈಯನ್ನು ಸೋಲಿಸುವ ಮೂಲಕ ಕರ್ನಾಟಕ ದಾಖಲೆ ಸೃಷ್ಟಿಸಿದೆ. ಕಳೆದ ಆರು ಪಂದ್ಯಗಳಲ್ಲಿ ನಾಲ್ಕನ್ನು ಕರ್ನಾಟಕ ಗೆದ್ದುಕೊಂಡಿದೆ. ಅಲ್ಲದೆ ಇದು ಮುಂಬೈನಲ್ಲಿ ಕರ್ನಾಟಕ ಗಳಿಸಿದ ಮೊದಲ ಗೆಲುವಾಗಿದೆ.
ಮುಂಬೈನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಬಿ ಗುಂಪಿನ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 24 ರನ್‌ಗಳ ಅಲ್ಪಮುನ್ನಡೆ ಗಳಿಸಿದ್ದ ಕರ್ನಾಟಕ ಮೂರನೇ ದಿನದಲ್ಲಿ ಮುಂಬೈಯನ್ನು 5 ವಿಕೆಟ್ ಅಂತರದಿಂದ ಮಣಿಸುವ ಮೂಲಕ ದಾಖಲೆಯ 200ನೇ ಜಯ ಸಾಧಿಸಿತು.
ಕರ್ನಾಟಕವು 2 ಗೆಲುವುಗಳೊಂದಿಗೆ 16 ಪಾಯಿಂಟ್‌ಗಳನ್ನು ಹೊಂದಿದ್ದು, ಆ ಮೂಲಕ ಬಿ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಮುಂದಿನ ಪಂದ್ಯ ಜನವರಿ 11 ರಂದು ರಾಜ್‌ಕೋಟ್‌ನಲ್ಲಿ ಸೌರಾಷ್ಟ್ರ ವಿರುದ್ಧ ನಡೆಯಲಿದೆ.
ವಿನಯ್‌ಕುಮಾರ್ ನಾಯಕತ್ವದ ಕರ್ನಾಟಕ ತಂಡ ಕಳೆದ ಪಂದ್ಯವನ್ನು ಹಿಮಾಚಲ ಪ್ರದೇಶದ ವಿರುದ್ಧ ಮೊದಲ ಇನ್ನಿಂಗ್ಸ್ ಹಿನ್ನಡೆಯೊಂದಿಗೆ ಡ್ರಾ ಮಾಡಿಕೊಂಡಿತು. ಈ ಗೆಲುವು ಆ ನೋವನ್ನು ಮರೆಸಿದೆ.


