ಎಲೆ ಮರೆ – 15
`ಹೋರಾಟ ಚಳವಳಿ ಅಂದ್ರೆ ಒಬ್ರದೆ ಆಗಿರಲ್ಲ. ಎಲ್ರೂ ಒಟ್ಟು ಸೇರಿ ಮಾಡಿರ್ತೀವಿ, ಸಮುದಾಯದ ಸಮಸ್ಯೆ ಬಂದಾಗ ಎಲ್ರೂ ಸೇರಿ ಕೆಲಸ ಮಾಡ್ತೀವಿ. ಅದ್ರಲ್ಲಿ ಒಬ್ರು ಇಬ್ರನ್ನ ಬೇರೆ ಮಾಡಿ ನೋಡೋಕಾಗಲ್ಲ. ಹಂಗಾಗಿ ನನ್ನ ಬಗ್ಗೆ ಇಂತಿಂತಾದೆಲ್ಲ ನಾನು ಮಾಡಿದೆ ಅಂತೇಳಿದ್ರೆ ತಪ್ಪಾಗ್ತದೆ. ನಾವು ಮಾಡೋ ಎಲ್ಲಾ ಕೆಲಸದಲ್ಲೂ ಎಲ್ಲರ ಪಾಲು ಇರ್ತದೆ. ಎಲ್ಲವನ್ನೂ ಕೂಡಿಸಿ ಒಗ್ಗಟ್ಟು ಮಾಡೋದ್ರಲ್ಲಿ, ಒತ್ತಡ ಹಾಕೋದ್ರಲ್ಲಿ ಚೂರು ನಮ್ಮ ಪಾಲಿರ್ತದೆ. ಅಂತ ಸಮಯದಲ್ಲಿ ಗುಂಪಲ್ಲಿ ಮುಂದಿರ್ತೀವಿ ಅನ್ನೋದಷ್ಟೇ ನಮ್ಮದು’ ಹೀಗೆ ತನ್ನ ಸಮುದಾಯ ಪರವಾದ ಚಳವಳಿ ಹೋರಾಟ ನನ್ನ ಒಬ್ಬಳದಲ್ಲ ಎಂದು ಸಮುದಾಯದ ಪಾಲುದಾರಿಕೆ ಜತೆ ತನ್ನನ್ನು ಗುರುತಿಸಿಕೊಳ್ಳುವ ಉಡುಪಿ ಜಿಲ್ಲೆ ಬೈಂದೂರು ತಾಲೂಕು ನಾಡ ಗ್ರಾಮದ ಸುಶೀಲ ಅವರು 2007 ರಿಂದ ಕೊರಗ ಸಮುದಾಯ ಹಕ್ಕೊತ್ತಾಯಗಳಿಗಾಗಿ ಧ್ವನಿ ಎತ್ತುತ್ತಿದ್ದಾರೆ.
ದಕ್ಷಿಣ ಕನ್ನಡ ಮತ್ತು ಕರ್ನಾಟಕ ಕೇರಳದ ಗಡಿಭಾಗದಲ್ಲಿ ಹೆಚ್ಚಿರುವ ಈ ಭಾಗದ ಮೂಲನಿವಾಸಿಗಳಾದ ಕೊರಗರು ನಿರಂತರವಾಗಿ ತನ್ನ ಹಕ್ಕುಗಳಿಗಾಗಿ ಹೋರಾಟವನ್ನು ಜೀವಂತವಾಗಿಟ್ಟುಕೊಂಡ ಸಮುದಾಯ. ಈ ಕಾರಣಕ್ಕೆ ಕರ್ನಾಟಕದ ಬುಡಕಟ್ಟುಗಳಲ್ಲಿಯೇ ಕೊರಗ ಸಮುದಾಯಕ್ಕೆ ವಿಶಿಷ್ಟವಾದ ಚಳವಳಿಯ ಚರಿತ್ರೆಯಿದೆ.
ಆಗಸ್ಟ್ 18, 1993 ಕೊರಗ ಸಮುದಾಯದ ಐತಿಹಾಸಿಕ ಮೈಲುಗಲ್ಲಿನ ದಿನ. ಕಾಲ್ನಡಿಗೆಯಲ್ಲಿ ಮಂಗಳೂರಿನ ಬಾವುಟಗುಡ್ಡೆಯಿಂದ ಜಿಲ್ಲಾಧಿಕಾರಿಗಳ ಕಚೇರಿತನಕ ಹೋಗಿ ಕೊರಗ ಸಮುದಾಯ ತಮ್ಮ ಹಕ್ಕೊತ್ತಾಯಗಳಿಗಾಗಿ ಗಟ್ಟಿಯಾಗಿ ಧ್ವನಿ ಎತ್ತಿದ ದಿನ. ಪರಿಣಾಮ ಆಗ ಮಂಗಳೂರು ವಿವಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ಮಹಮದ್ ಪೀರ್ ಅವರ ಅಧ್ಯಕ್ಷತೆಯಲ್ಲಿ ಅಧ್ಯಯನ ನಡೆಸಿ 1994 ರಲ್ಲಿ ವರದಿ ಸಲ್ಲಿಸಿತು. ಈ ವರದಿ ಕೊರಗ ಸಮುದಾಯದ ಪ್ರತಿ ಕುಟುಂಬಕ್ಕೆ 2 ಎಕರೆ ಜಮೀನು ನೀಡಬೇಕೆಂದು ಶಿಫಾರಸ್ಸು ಮಾಡಿತು. ಇದನ್ನು ಆಧರಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಜಾಗೃತವಾಯಿತು. ಆಗ ಈ ಸಂಘಟನೆಯ ಅಧ್ಯಕ್ಷರಾಗಿದ್ದ ಪಿ.ಗೋಕುಲದಾಸ ಅವರ ನೇತೃತ್ವದ ಕಾಳತ್ತೂರ್ ಚಲೋ ತೀವ್ರವಾದಾಗ 300 ಎಕರೆ ಜಾಗವನ್ನು 270 ಕುಟುಂಬಗಳಿಗೆ ಹಂಚಿ `ಕೊರಗರ ಭೂಮಿಹಕ್ಕು ಅಭಿಯಾನಕ್ಕೆ’ ಯಶಸ್ಸು ಸಿಕ್ಕಿತ್ತು. ಹೀಗೆ 1993 ರಲ್ಲಿ ಆರಂಭಗೊಂಡ ಭೂಮಿಹಕ್ಕು ಪ್ರತಿಪಾದನಾ ಅಭಿಯಾನ 450 ಕ್ಕೂ ಹೆಚ್ಚು ಕುಟುಂಬಗಳು 490 ಎಕರೆ ಜಮೀನಿನ ಹಕ್ಕುಪತ್ರ ಪಡೆಯಲು ಸಾಧ್ಯವಾಗಿದೆ.
ಮತ್ತೊಂದೆಡೆ ಅಜಲು ಎಂಬ ಅಮಾನವೀಯ ಕ್ರೌರ್ಯವನ್ನು ತಡೆಯಲು ಕೊರಗ ಸಮುದಾಯ ಸತತ ಎಂಟು ವರ್ಷ ಹೋರಾಡಿದ ಫಲವಾಗಿ 2000 ರ ಆಗಸ್ಟ್ 17 ರಂದು ಆಗಿನ ರಾಜ್ಯಪಾಲರಾಗಿದ್ದ ವಿ.ಎಸ್.ರಮಾದೇವಿಯವರು `ಅಜಲು ನಿಷೇಧ ಕಾಯ್ದೆ’ ತಂದರು. ಅಸ್ಪøಶ್ಯ ಸಮುದಾಯವೊಂದು ತನ್ನ ಇರುವಿಕೆಗಾಗಿ ಧ್ವನಿ ಎತ್ತಿದ ದಿನ, ಅಜಲು ಎಂಬ ಹೀನ ಪದ್ಧತಿಯಿಂದ ಮುಕ್ತಿ ಪಡೆದು ಕೊರಗ ಸಮುದಾಯಕ್ಕೆ ಹೊಸ ದಿನವಾಗಿ, ಕೊರಗ ಸಮುದಾಯದ ಸ್ವಾತಂತ್ರ್ಯ ಮತ್ತು ಭೂಮಿಹಕ್ಕಿನ ಯಶಸ್ಸಿನ ಹಿನ್ನೆಲೆಯಲ್ಲಿ ಕೊರಗರು ಆಗಸ್ಟ್ 18 ರಂದು ಪ್ರತಿವರ್ಷ `ಭೂಮಿಹಬ್ಬ’ ಆಚರಿಸುತ್ತಾರೆ. ಈ ಹೋರಾಟ ಪರಂಪರೆ ಕೊರಗ ಸಮುದಾಯ ಹೊಸ ತಲೆಮಾರನ್ನು ಚಳವಳಿಗೆ ಅಣಿಗೊಳಿಸಿದೆ. ಇಂತಹ ಚಳವಳಿಯ ಕಾವು ಪಡೆದು ಸಮುದಾಯಕ್ಕಾಗಿ ದಿಟ್ಟವಾಗಿ ಧ್ವನಿ ಎತ್ತುವ ಕೊರಗ ಸಮುದಾಯದ ಶಿಕ್ಷಿತ ಹೊಸ ತಲೆಮಾರು ಜಾಗೃತಗೊಂಡಿದೆ. ಹೀಗೆ ಗಮನ ಸೆಳೆದವರಲ್ಲಿ ಸುಶೀಲ ನಾಡ ಕೂಡ ಒಬ್ಬರು.
ಕೊರಗ ಸಮುದಾಯದ ಆರಂಭದ ದಿನಗಳ 1993ರ ಹೋರಾಟ ನಡೆಯುತ್ತಿದ್ದಾಗ ಸುಶೀಲ ಆಗಿನ್ನು ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ಹುಡುಗಿ. ಹತ್ತನೆ ತರಗತಿತನಕ ಓದಿದ ಸುಶೀಲಾಗೆ ಮುಂದೆ ಓದಲು ಆಗಲಿಲ್ಲ. ಹಾಗಾಗಿ ತನ್ನೂರು ನಾಡದಲ್ಲಿಯೇ ಪ್ರಿಂಟಿಂಗ್ ಪ್ರೆಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ನಿಧಾನಕ್ಕೆ ನಮ್ಮ ಸಮುದಾಯವನ್ನು ಯಾಕೆ ಅಸ್ಪೃಶ್ಯರನ್ನಾಗಿ ನೋಡುತ್ತಾರೆ, ನಮ್ಮಲ್ಲೇಕೆ ಇನ್ನೂ ಬಡತನ ಅನಕ್ಷರತೆ ಇದೆ? ಇಂತಹ ಪ್ರಶ್ನೆಗಳೆಲ್ಲಾ ಕಾಡತೊಡಗಿ ಸಮುದಾಯದ ಪರವಾದ ಹಕ್ಕೊತ್ತಾಯಗಳಲ್ಲಿ ಭಾಗಿಯಾಗತೊಡಗಿದರು. 1998 ರಲ್ಲಿ ಸುಶೀಲಾ ಅವರಿಗೆ ಅಂಗನವಾಡಿ ಕಾರ್ಯಕರ್ತೆಯ ಕೆಲಸ ಸಿಗುತ್ತದೆ. ಅಲ್ಲಿಂದ ಸಮುದಾಯದ ಬಗ್ಗೆ ಮತ್ತಷ್ಟು ಅರಿವು ತಿಳಿವಳಿಕೆ ಹೆಚ್ಚುತ್ತಾ ಹೋಗುತ್ತದೆ. ಇದೇ ಸಂದರ್ಭಕ್ಕೆ `ಸಮಗ್ರ ಗ್ರಾಮೀಣ ಆಶ್ರಮ’ ಕೊರಗರ ಅಭಿವೃದ್ಧಿಗಾಗಿ ಕೆಲಸ ಮಾಡಲು ಸುಶೀಲಾರಂತಹ ಕೊರಗ ಸಮುದಾಯದ ಯುವ ಶಿಕ್ಷಿತರನ್ನು ಒಳಗೊಳ್ಳುತ್ತಾರೆ. ಆಗ ಸುಶೀಲ ನಾಡ ಅವರು `ಸಮಗ್ರ ಗ್ರಾಮೀಣ ಆಶ್ರಮ’ ದ ಸಂಘಟಿತ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಸುಶೀಲ ಅವರು ಸಮಾರು 27 ವರ್ಷವಿದ್ದಾಗ 2007 ರಿಂದ ಕೊರಗ ಸಮುದಾಯದ ಚಳವಳಿಯ ಭಾಗವಾಗಿ ಸಕ್ರಿಯರಾಗುತ್ತಾರೆ.
ಸುಶೀಲ ಅವರ ಕೊರಗ ಸಮುದಾಯದ ದೈನಂದಿನ ಸಮಸ್ಯೆಗಳ ಬಗೆಗೆ ಇತರರ ಜೊತೆ ಸೇರಿ ರಾಜಿಯಿಲ್ಲದ ಸಣ್ಣ ಸಣ್ಣ ಹೋರಾಟ ಚಳವಳಿಗಳನ್ನು ರೂಪಿಸತೊಡಗಿದರು. ಕೊರಗ ಸಮುದಾಯದ ಸಂಘಟನೆಯಲ್ಲಿ ಮಹಿಳೆ ಪುರುಷರು ಅಂತ ಭೇದವಿಲ್ಲ. ಒಮ್ಮೆ ಒಕ್ಕೂಟದ ಅಧ್ಯಕ್ಷರು ಗಂಡಸರಾದರೆ, ಮತ್ತೊಮ್ಮೆ ಮಹಿಳೆಯರಾಗುತ್ತಾರೆ. ಇದರ ಫಲವಾಗಿ ಸುಶೀಲ ಅವರು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆಯಾಗಿ 2011 ರಿಂದ 2013 ರ ತನಕ ಸಮರ್ಥವಾಗಿ ಸಮುದಾಯಕ್ಕಾಗಿ ದುಡಿದರು. ಇದೀಗ ಅಂಗನವಾಡಿ ಸಿ.ಐ.ಟಿ.ಯು ಸಂಘಟನೆಯ ಜಿಲ್ಲಾ ಕಾರ್ಯದರ್ಶಿಯಾಗಿಯೂ ಅಂಗನವಾಡಿ ನೌಕರರ ಪರವಾದ ಹೋರಾಟದಲ್ಲೂ ಸುಶೀಲ ತೊಡಗಿಕೊಂಡಿದ್ದಾರೆ.
ಸುಶೀಲ ಅವರು `ಅಂಗನವಾಡಿ ಕಾರ್ಯಕರ್ತೆಯಾಗಿದ್ದೂ ರಜಾದಿನಗಳಲ್ಲಿಯೂ, ಇರುವ ರಜಾ ಸೌಲಭ್ಯಗಳನ್ನು ಬಳಸಿಯೂ ಸಮುದಾಯಕ್ಕಾಗಿ ಹೋರಾಟ ಮಾಡುತ್ತಿರುವೆ. ನಾವು ನಮ್ಮ ಹಕ್ಕುಗಳನ್ನು ಕೇಳುವುದು ಸರಕಾರದ ವಿರುದ್ಧವಾಗುವುದಿಲ್ಲ, ಮೇಲಾಗಿ ಅಂಗನವಾಡಿ ನೌಕರರು ಸರಕಾರಿ ನೌಕರರೆಂದು ಸರಕಾರವೇ ಪರಿಗಣಿಸಿಲ್ಲ. ಹಾಗಾಗಿ ಹೋರಾಟಗಳಲ್ಲಿ ಭಾಗವಹಿಸುವುದು ನಮ್ಮ ಕರ್ತವ್ಯ’ ಎನ್ನುತ್ತಾರೆ.
ಮುಂದುವರಿದು, `ಕೊರಗರಲ್ಲಿ ಶಿಕ್ಷಣದ ಜಾಗೃತಿ ಮೂಡಿದರೂ ಡ್ರಾಪೌಟ್ ಆಗೋದು ಬಾಳ, ಏಳು, ಎಂಟನೆ ತರಗತಿಗೆ ಶಾಲೆ ಬಿಟ್ಟು ಮಕ್ಕಳು ಬೇರೆ ಬೇರೆ ಕೆಲಸಗಳಲ್ಲಿ ತೊಡಗುತ್ತಾರೆ. ಇಷ್ಟು ವರ್ಷಕ್ಕೆ ಈಗ ಕೊರಗ ಸಮುದಾಯದಲ್ಲಿ ಮೊದಲ ವಿದ್ಯಾರ್ಥಿನಿ ಮೆಡಿಕಲ್ ಓದಿಗೆ ಸೇರಿಕೊಂಡಿದ್ದಾಳೆ. ಕಾನೂನುಪ್ರಕಾರ ಅಜಲು ಪದ್ಧತಿ ನಿಷೇಧವಾದರೂ, ದೊಡ್ಡದೊಡ್ಡ ಶ್ರೀಮಂತ ವ್ಯಕ್ತಿಗಳು ಈಗಲೂ ಅಜಲು ಮಾಡಿಸುತ್ತಾರೆ. ನನ್ನದು ಹೋರಾಟ ಚಳವಳಿ ಅಂತೇನು ಅಲ್ಲ, ನಮ್ಮ ಅಂಗನವಾಡಿ ಕೆಲಸ ಮಾಡಿಕೊಂಡು, ಬಿಡುವಿನ ವೇಳೆಯಲ್ಲಿ ಸಮುದಾಯಕ್ಕೆ ಒಂದಷ್ಟು ಸಮಯ ಇಡೋದಷ್ಟೇ.
ನಮ್ಮ ಸಮುದಾಯಕ್ಕೆ ಸಮಸ್ಯೆ ಬಂದಾಗ ಅದನ್ನ ಪರಿಶೀಲಿಸೋದು, ಆ ಸಮಸ್ಯೆ ಈಡೇರೋತನಕ ಪಟ್ಟು ಬಿಡದೆ ಅದಕ್ಕಾಗಿ ಕೆಲಸ ಮಾಡೋದು. ಇದು ನಮ್ಮ ಹೋರಾಟದ ರೀತಿ. ನನಗೆ ಓದಿಗಿಂತ ಹೋರಾಟದ ಅನುಭವ ಕಲಿಸಿದ್ದೇ ಜಾಸ್ತಿ. ಹೋರಾಟಕ್ಕಾಗಿನೆ ಓದಬೇಕು ಅಂತೆಲ್ಲಾ ಕೂರೋದಿಲ್ಲ. ಯಾರಾದ್ರೂ ಬುಕ್ಸ್ ಕೊಟ್ರೆ ಓದ್ತೇನೆ. ನಿರಂಜನರ ಚಿರಸ್ಮರಣೆ..ಹೀಗೆ ಕೆಲವು ಪುಸ್ತಕಗಳನ್ನು ಹೆಸರಿಸಬಹುದು. ಕೊರಗ ಸಮುದಾಯದ ಬಗ್ಗೆ ಬಂದ ಪುಸ್ತಕಗಳನ್ನೆಲ್ಲಾ ಓದಿದ್ದೇನೆ. ಈಗ ವಾಟ್ಸಪ್ಪು, ಪೇಸ್‍ಬುಕ್ಕೂ ಬಳಸೋದ್ರಿಂದ. ವಾಟ್ಸಪ್ಪಿಗೆ ಬರುವ ನ್ಯಾಯಪಥದ ಎಲ್ಲಾ ಲೇಖನಗಳನ್ನು ಓದ್ತೀನಿ, ಟ್ರೂಥ್ ಇಂಡಿಯಾ ಅಂತ ಒಂದರಿಂದ ಲೇಖನಗಳು ಬರ್ತಾವೆ ಅದನ್ನೆಲ್ಲಾ ಓದ್ತೀನಿ. ಚಳವಳಿಯೇ ನನಗೆ ಓದುಬರಹ ಎಲ್ಲಾ ಆಗಿದೆ. ಭೂಮಿ ಹೋರಾಟ ಆಗಿದ್ದಾಗಲೂ, ಆ ನಂತರದ ಕೆಲಸಗಳು ತುಂಬಾ ಇರ್ತಾವೆ. ಭೂಮಿ ಹಕ್ಕುಪತ್ರಗಳ ಸಮಸ್ಯೆ, ಪುನರ್ವಸತಿ ಸಮಸ್ಯೆ, ನೀರಿನ ಸಮಸ್ಯೆ, ಆಧಾರ್‍ಕಾರ್ಡ್ ಮಾಡ್ಸೋದು, ರೇಷನ್ ಕಾರ್ಡ್ ಮಾಡ್ಸೋದು ಹೀಗೆ ಸಮುದಾಯದ ದಿನನಿತ್ಯದ ಸಮಸ್ಯೆಗಳನ್ನೂ ಚಳವಳಿ ಮಾಡಿ ಪಡಕೊಳ್ಳೋ ಸ್ಥಿತಿ ಇದೆ’ ಇಂದು ವಿವರಿಸುತ್ತಾರೆ.
ಮಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಸಬಿತ ಕೊರಗ ಅವರು `ಸುಶೀಲ ನಾಡ ಕೊರಗ ಸಮುದಾಯವನ್ನು ಜಾಗೃತಗೊಳಿಸುವಲ್ಲಿ ತುಂಬಾ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಾರೆ. ಸಮುದಾಯದ ಅಭಿವೃದ್ಧಿಗೆ ಆಯಾ ಸಮುದಾಯದ ಒಳಗಿಂದಲೇ ಪ್ರಜ್ಞಾವಂತರು ರೂಪುಗೊಳ್ಳಬೇಕಿದೆ’ ಎನ್ನುತ್ತಾರೆ.


