ಬೆಂಕಿ ಉಗುಳುವ ಮತ್ತು ವಿಭಜಿಸುವ ಹೇಳಿಕೆಗಳಿಗೆ ಹೆಸರುವಾಸಿಯಾದ ಕೇಂದ್ರ ಸಚಿವ ಸಂಜೀವ್ ಬಲ್ಯಾನ್, ಜೆಎನ್‌ಯು ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳಿಗೆ “ಇದೇ ಸರಿಯಾದ ಚಿಕಿತ್ಸೆ” ಎಂದು ಘೋಷಿಸಿ ಬೆದರಿಕೆ ಹಾಕಿದ್ದಾರೆ.
ಸಿಎಎ ಪ್ರತಿಭಟನೆ ಮತ್ತು ಜೆಎನ್‌ಯು ಹಿಂಸಾಚಾರದ ನಂತರ ದೇಶಾದ್ಯಂತ ಪ್ರಸಂಶೆಗೆ ಒಳಗಾಗಿರುವ ಜೆಎನ್‌ಯು ಮತ್ತು ಜಾಮಿಯ ವಿದ್ಯಾರ್ಥಿಗಳಿಗೆ ಬುದ್ದಿ ಕಲಿಸಬೇಕೆಂದರೆ “ಪಶ್ಚಿಮ ಉತ್ತರ ಪ್ರದೇಶದ ಜನರಿಗೆ ವಿಶ್ವವಿದ್ಯಾಲಯಗಳಲ್ಲಿ ಶೇ 10 ರಷ್ಟು ಸ್ಥಾನಗಳನ್ನು ಮೀಸಲಿಡಬೇಕು” ಆಗ ಸರಿ ಹೋಗುತ್ತದೆ ಎಂದು ಸಂಜೀವ್ ಬಲ್ಯಾನ್ ಮೀರತ್‌ನಲ್ಲಿ ನಡೆದ ಸಾರ್ವಜನಿಕ ರ್‍ಯಾಲಿಯಲ್ಲಿ ಘೋಷಿಸಿದ್ದಾರೆ.
“ನಾನು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ರವರಲ್ಲಿ ವಿನಂತಿಸುತ್ತೇನೆ . ರಾಷ್ಟ್ರ ವಿರೋಧಿ ಘೋಷಣೆಗಳನ್ನು ಕೂಗುವ ಜೆಎನ್‌ಯು ಮತ್ತು ಜಾಮಿಯಾದ ವಿದ್ಯಾರ್ಥಿಗಳಿಗೆ ಒಂದೇ ಒಂದು ಚಿಕಿತ್ಸೆ ಇದೆ. ಪಶ್ಚಿಮ ಉತ್ತರ ಪ್ರದೇಶದ ಜನರಿಗೆ ವಿಶ್ವವಿದ್ಯಾಲಯಗಳಲ್ಲಿ ಶೇ 10 ರಷ್ಟು ಕೋಟಾ ಮೀಸಲಿಡಿ. ಆಗ ಎಲ್ಲರೂ ಗುಣಮುಖರಾಗುತ್ತಾರೆ ಮತ್ತೇನೂ ಇಲ್ಲ” ಎಂದು ಅವರು ಬೆದರಿಕೆ ಹಾಕಿದ್ದಾರೆ.
ಪಶ್ಚಿಮ ಉತ್ತರ ಪ್ರದೇಶವು ಭಾರತದಲ್ಲಿಯೇ ಅತಿ ಹೆಚ್ಚು ಅಪರಾಧಗಳು ದಾಖಲಾಗುವ, ಅತಿ ಹೆಚ್ಚು ಗೂಂಡಾಗಳಿರುವ ಪ್ರದೇಶ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಅಲ್ಲಿ ಅಪರಾಧಗಳ ಪ್ರಮಾಣ ಹೆಚ್ಚಾಗಿರುವುದರಿಂದ ಅಲ್ಲಿನ ಜನ ಈ ವಿಶ್ವವಿದ್ಯಾಲಯಗಳಿಗೆ ಬಂದರೆ ಹೊಡೆದು ಬಡಿದು ನಿಯಂತ್ರಣಕ್ಕೆ ತರುತ್ತಾರೆ ಎಂದು ಹೇಳುವ ಮೂಲಕ ಸಚಿವರು ಸ್ವತಃ ಹಿಂಸೆಗೆ ಬಹಿರಂಗವಾಗಿ ಕರೆ ನೀಡಿದ್ದಾರೆ.
ಬಾಲ್ಯನ್ ಅವರು ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ ಪಶುಸಂಗೋಪನೆ, ಮೀನುಗಾರಿಕೆ ಮತ್ತು ಹೈನುಗಾರಿಕೆ ರಾಜ್ಯ ಸಚಿವರಾಗಿದ್ದಾರೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿಯವರ ಮೊದಲ ಅವಧಿಯಲ್ಲಿ ಸಹ ಕಿರಿಯ ಸಚಿವರಾಗಿದ್ದರು.
ಈ ಬಿಜೆಪಿ ಸಚಿವರು ತಮ್ಮ ಅತಿರೇಕದ ಹೇಳಿಕೆಗಳಿಂದ ಆಗಾಗ್ಗೆ ಜನರಿಂದ ಭಾರೀ ಟೀಕೆಗೊಳಗಾಗಿದ್ದಾರೆ. ಕಳೆದ ತಿಂಗಳು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ “ಮದರಾಸಾದ ಮಕ್ಕಳು” ಹಿಂಸಾಚಾರದಲ್ಲಿ ಪಾತ್ರವಹಿಸಿದ್ದಾರೆ ಎಂದು ಹೇಳುವ ಮೂಲಕ ದೊಡ್ಡ ವಿವಾದಕ್ಕೆ ನಾಂದಿ ಹಾಡಿದ್ದರು.
ಅವರು 2013 ರಲ್ಲಿ ನಡೆದ ಮುಜಫರ್‌ನಗರ ಗಲಭೆಯಲ್ಲಿ ಪ್ರಮುಖ ಆರೋಪಿಯಾಗಿದ್ದರು. ಈ ಗಲಭೆಯಲ್ಲಿ 60 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು ಸಾವಿರಾರು ಜನರು ಸ್ಥಳಾಂತರಗೊಂಡಿದ್ದರು.
ಗಲಭೆಗೆ ಮುನ್ನ ನಡೆದ ದೊಡ್ಡ ಸಭೆ ಅಥವಾ ಮಹಾಪಂಚಾಯತ್‌ನಲ್ಲಿ ಕೋಮು ಪ್ರಚೋದನೆ ಭಾಷಣಗಳನ್ನು ಮಾಡಿದ ಆರೋಪ ಹೊತ್ತಿರುವ ಹಲವು ನಾಯಕರಲ್ಲಿ ಬಾಲ್ಯನ್ ಕೂಡ ಇದ್ದರು. ನಂತರ ಕೋಮು ಸಂಘರ್ಷಗಳು ಭುಗಿಲೆದ್ದವು. ಗಲಭೆಯಲ್ಲಿ ಅವರ ಪಾತ್ರದ ಕುರಿತ ಆರೋಪವನ್ನು ಅವರು ನಿರಾಕರಿಸಿದ್ದಾರೆ.
ಈ ಗಲಭೆಯ ವಿವಾದಾತ್ಮಕ ದಾಖಲೆಯ ಹೊರತಾಗಿಯೂ ಬಿಜೆಪಿ ಬಾಲ್ಯನ್‌ರನ್ನು ಕಣಕ್ಕಿಳಿಸಲಾಯಿತು ಮತ್ತು ಮುಜಫರ್‌ನಗರ ಕ್ಷೇತ್ರದಿಂದ 2014 ರಲ್ಲಿ ಲೋಕಸಭೆಗೆ ಆಯ್ಕೆಯಾದರು. ಕಳೆದ ವರ್ಷದ ಚುನಾವಣೆಯಲ್ಲಿ ಅವರು ಮತ್ತೆ ಗೆದ್ದರು ಮತ್ತು ಅವರನ್ನು ಮಂತ್ರಿಯನ್ನಾಗಿ ಮಾಡಲಾಗಿದೆ. ಅವರು ನೋಡಿದರೆ ವಿದ್ಯಾರ್ಥಿಗಳ ಮೇಲೆ ಗೂಂಡಾಗಳು ಹಲ್ಲೆ ಮಾಡಿದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತದೆ ಎಂಬ ಬೇಜವಬ್ದಾರಿ ಮಾತುಗಳನ್ನಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಲಾಗಿದೆ.


