- Advertisement -
- Advertisement -
“ರಾಷ್ಟ್ರವು ಹೊಸ ಮನಸ್ಥಿತಿಯೊಂದಿಗೆ ಕೆಲಸ ಮಾಡಲು ಬಯಸಿದೆ ಆದ್ದರಿಂದಲೇ ನಾವು ಇಲ್ಲಿದ್ದೇವೆ. ಆದರೆ ನೀವು ಮಾಡಿದ ರೀತಿಯಲ್ಲಿ ನಾವು ಸಾಗಿದ್ದರೆ 70 ವರ್ಷಗಳ ನಂತರವೂ 370 ನೇ ವಿಧಿಯನ್ನು ರದ್ದುಗೊಳಿಸಲು ಆಗುತ್ತಿರಲಿಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು.
ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿ ಕೋವಿಂದ್ ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರಿಸಿದ್ದಾರೆ. ತಮ್ಮ ಸರ್ಕಾರವು ಕಳೆದ 70 ವರ್ಷಗಳಂತೆಯೇ ಅದೇ ಹಾದಿಯನ್ನು ಅನುಸರಿಸಿದ್ದರೆ, ಆರ್ಟಿಕಲ್ 370 ಮತ್ತು ಟ್ರಿಪಲ್ ತಲಾಕ್ ಕೊನೆಗೊಳ್ಳುತ್ತಿರಲಿಲ್ಲ, ರಾಮ ಮಂದಿರ-ಬಾಬರಿ ಮಸೀದಿ ವಿವಾದ ಕೊನೆಗೊಳ್ಳುತ್ತಿರಲಿಲ್ಲ ಎಂದಿದ್ದಾರೆ.
ನಾನು ಸೂರ್ಯ ನಮಸ್ಕಾರ ಮಾಡುವುದನ್ನು ಹೆಚ್ಚಿಸಿಕೊಳ್ಳುತ್ತೇನೆ. ಪ್ರತಿಪಕ್ಷಗಳು ನನ್ನ ಬೆನ್ನಿಗೆ ಕಡ್ಡಿಗಳಿಂದ ಹೊಡೆದರೂ ತಡೆಯುವ ಶಕ್ತಿ ಇದೆ. ನನ್ನ ಬೆನ್ನು ಮೂಳೆಯನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ಸೂರ್ಯನಮಸ್ಕಾರ ಮಾಡುತ್ತೇನೆ ಎಂದು ಪ್ರತಿಪಕ್ಷ ನಾಯಕರಿಗೆ ತಿರುಗೇಟು ನೀಡಿದರು.
ನಾನು ನಿಮ್ಮ ಹೆಜ್ಜೆಯ ಮೇಲೆಯೇ ಹೆಜ್ಜೆ ಹಾಕಿ ನಡೆಯುತ್ತಿದ್ದೇವೆ. 370 ವಿಧಿ ರದ್ದು, ತ್ರಿವಳಿ ತಲಾಕ್, ಅಯೋಧ್ಯ ವಿವಾದ, ಕರ್ತಾರ್ ಪುರ ಕಾರಿಡಾರ್, ಇಂಡಿಯಾ-ಬಾಂಗ್ಲಾ ಗಡಿವಿವಾದ ಮೊದಲಾದವುಗಳನ್ನು ಬಗೆಹರಿಸಿದ್ದೇವೆ. ಸಮಸ್ಯೆ ನಿವಾರಣೆಗೆ ಹೆಚ್ಚಿನ ಆದ್ಯತೆ ನೀಡಿದ್ದು ಇದಕ್ಕಾಗಿ ಯಾರೂ ಕಾದುಕೂರಬೇಕಾಗಿಲ್ಲ ಎಂದು ಹೇಳಿದರು.
ರಾಷ್ಟ್ರಪತಿಗಳು ಕೃಷಿ ಮತ್ತು ರೈತರ ಕಲ್ಯಾಣದ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡುವ ಬೇಡಿಕೆ ಬಹು ಹಳೆಯದು. ಅದು ಇನ್ನೂ ಬಾಕಿ ಇದೆ. ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುತ್ತೇವೆ. ಇದೇ ನೀತಿ ಬೆಳೆ ವಿಮೆ ಮತ್ತು ನೀರಾವರಿಗೆ ಸಂಬಂಧಿಸಿದ ನಿವಾರಣೆಗೂ ಅನ್ವಯಿಸುತ್ತೇವೆ ಎಂದು ತಿಳಿಸಿದರು.
ಕೃಷಿ ಬಜೆಟ್ ಗೆ ಮೊದಲು 27 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದೆವು. ಈಗ 1.5 ಲಕ್ಷ ಕೋಟಿ ಮೀಸಲಿಟ್ಟಿದ್ದು ಐದು ಪಟ್ಟು ಹೆಚ್ಚಿಸಲಾಗಿದೆ. ಪ್ರಧಾನಮಂತ್ರಿ ಕೃಷಿ ಸನ್ಮಾನ್ ನಿಧಿ ಯೋಜನೆಯಡಿ ರೈತರಿಗೆ ನೆರವು ನೀಡುತ್ತಿದ್ದೇವೆ. ಆದರೆ ಕೆಲವು ರಾಜ್ಯಗಳು ಕೃಷಿ ಸನ್ಮಾನ್ ನಿಧಿ ಯೋಜನೆಯನ್ನು ಅನುಷ್ಠಾನ ಮಾಡದೆ ರಾಜಕೀಯ ಮಾಡುತ್ತಿವೆ. ಅಂಥವರಿಗೆ ನಾನು ಮನವಿ ಮಾಡುತ್ತೇನೆ. ರೈತರ ಕಲ್ಯಾಣದ ವಿಷಯದಲ್ಲಿ ರಾಜಕೀಯ ಬಿಡಿ. ಭಾರತದ ರೈತರ ಹಿತಕ್ಕಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಮನವಿ ಮಾಡಿದರು.
ದೇಶದಲ್ಲಿ ವಿತ್ತೀಯ ಕೊರತೆ ಮತ್ತು ಬೆಲೆ ಏರಿಕೆ ನಿಯಂತ್ರಣದಲ್ಲಿದೆ. ಮೈಕ್ರೋ ಫೈನಾನ್ಸ್ ಸ್ಥಿರವಾಗಿದೆ. ಹೂಡಿಕೆದಾರರು ಮತ್ತು ದೇಶದ ಆರ್ಥಿಕತೆಯ ವಿಶ್ವಾಸ ಗಳಿಸಲು ನಾವು ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು.
“ಸರ್ಕಾರವು ಕೆಲಸಗಳನ್ನು ಮಾಡಲು ಯಾಕೆ ಆತುರಪಡುತ್ತಿದೆ” ಎಂಬ ವಿರೋಧ ಪಕ್ಷಗಳ ಟೀಕೆಗೆ “ನಾವು ನಿಮ್ಮ ದಾರಿಯನ್ನು ಅನುಸರಿಸಿದ್ದರೆ, ಬಾಲಾಪರಾಧಿ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ಕಾನೂನನ್ನು ರೂಪಿಸಲಾಗುತ್ತಿರಲಿಲ್ಲ ಎಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ