ವಿಧಾನಸಭಾ ಅಧಿವೇಶನದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಾ, ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟವರು ಅಮಾಯಕರೇ ಆಗಿದ್ದಾರೆ. ಅವರು ಅಮಾಯಕರಲ್ಲ ಎನ್ನುವ ಆಡಳಿತ ಪಕ್ಷಕ್ಕೆ ಈ ಮೊದಲು ಅವರು ಯಾವುದಾದರೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಬಾಗಿಯಾಗಿರುವ ಮಾಹಿತಿ ಇದೆಯೇ , ಇದ್ದರೆ ಗೃಹ ಸಚಿವರು ಅದನ್ನು ಬಹಿರಂಗ ಪಡಿಸಲಿ ಎಂದು ಸವಾಲೆಸೆದರು.
ಅಧಿವೇಶನದಲ್ಲಿ ಮಾತನಾಡುತ್ತಾ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ “ಮಂಗಳೂರಿನ ಗೋಲಿಬಾರ್ ಗೆ ಕಾರಣಗಳೇನು? ರಾಜ್ಯದಾದ್ಯಂತ ಪ್ರತಿಭಟನೆಗಳಾಗಿವೆ , ರಾಮಚಂದ್ರ ಗುಹಾ ಅವರನ್ನು ಬಲವಂತವಾಗಿ ತಳ್ಳಾಡಿಕೊಂಡು ಬಂಧಿಸಲಾಗಿತ್ತು , ಈ ರೀತಿ ಪ್ರತಿಭಟನೆಗಳನ್ನು ಹತ್ತಿಕ್ಕುವ ಅವಶ್ಯಕತೆ ಇತ್ತೇ?” ಎಂದು ಪ್ರಶ್ನಿಸಿದರು.
ಅಲ್ಲದೆ “ಮಂಗಳೂರಿನ ಪ್ರತಿಭಟನೆಯ ಬಗ್ಗೆ ನಾನು ಸಂಗ್ರಹಿಸಿದ ವೀಡಿಯೋ ಸಭಾಧ್ಯಕ್ಷರಿಗೆ ನೀಡುತ್ತೇನೆ. ಪ್ರತಿಭಟನೆಯ ದಿನ ಮಂಗಳೂರಿನ ಬಸ್ಟಾಂಡಲ್ಲಿ ದಿಕ್ಕಾರ ಕೂಗಿದವನನ್ನು ಬಿಟ್ಟು ಅಮಾಯಕರ ಮೇಲೆ ಪೋಲಿಸರು ದೌರ್ಜನ್ಯ ಎಸಗಿದ್ದಾರೆ” ಎಂದು ಕುಮಾರಸ್ವಾಮಿ ಹೇಳಿದರು.
ನಂತರ ಪತ್ರಿಕೆಯೊಂದರ ವರದಿಯನ್ನು ಓದಿದ ಕುಮಾರಸ್ವಾಮಿ ಘಟನೆಯಲ್ಲಿ ಪ್ರತಿಭಟನಾಕಾರರ ವಿರುದ್ಧ ಪೋಲಿಸರೇ ಮೊದಲಿಗೆ ಲಾಠಿ ಚಾರ್ಜ್ ಮಾಡಿದರು ಎಂಬುದನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದರು.
ಕಾಲೇಜಿನ ವಿದ್ಯಾರ್ಥಿಗಳ ಮೇಲೆ, ಅಮಾಯಕ ಜನರ ಮೇಲೆ ಪೋಲಿಸರು ದೌರ್ಜನ್ಯ ಎಸಗಿದ್ದಾರೆ. ಅದರಿಂದ ಇಬ್ಬರು ಅಮಾಯಕರು ಸಾವಿಗೀಡಾದರು. ಗೋಲಿಬಾರ್ ಗೆ ಈಡಾದ ಇಬ್ಬರೂ ಅಮಾಯಕರು ಎಂದು ಒತ್ತಿ ಹೇಳಿದ ಕುಮಾರಸ್ವಾಮಿ, ಅವರನ್ನು ಅಮಾಯಕರಲ್ಲ ಎನ್ನುವ ಆಡಳಿತ ಪಕ್ಷವು, ಈ ಮೊದಲು ಅವರ ವಿರುದ್ಧ ದಾಖಲಾದ ಯಾವುದಾದರೂ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಇದೆಯೆ? ಇದ್ದರೆ ಗೃಹ ಸಚಿವರು ಬಹಿರಂಗ ಪಡಿಸಲಿ ಎಂದರು.
ನಂತರ ಮಂಗಳೂರು ಗೋಲಿಬಾರ್ ಬಗ್ಗೆ ಘಟನೆಯ ದಿನ ಗೋಲಿಬಾರ್ ಮಾಡುವಂತೆ ಆಡಿದ ಪೋಲಿಸರ ಮಾತಿನ ವೀಡಿಯೋಗಳ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದರು.


