ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಮುಂದಿನ ನಡೆಯ ಬಗ್ಗೆ ಚರ್ಚಿಸಲು ಬಿಹಾರದ ವಿವಿಧ ವಿರೋಧ ಪಕ್ಷಗಳ ರಾಜಕೀಯ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ನಿತೀಶ್ ಕುಮಾರ್ ಅವರ ಜನತಾದಳ (ಯುನೈಟೆಡ್) ನಿಂದ ಇತ್ತೀಚೆಗೆ ವಜಾಗೊಳಿಸಲ್ಪಟ್ಟ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಬಿಹಾರದ ಯುವಜನರನ್ನು ಸಂಪರ್ಕಿಸಲು ಗುರುವಾರ ತಮ್ಮ ‘ಬಾತ್ ಬಿಹಾರ ಕಿ’ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಬಿಹಾರವನ್ನು ಅಭಿವೃದ್ಧಿಪಡಿಸಲು ಕಿಶೋರ್ ಅವರೊಂದಿಗೆ ಕೈಜೋಡಿಸಲು ಬಯಸುವ ಸಮಾನ ಮನಸ್ಕ ಯುವಜನರ ನೋಂದಣಿಯನ್ನು ಈ ಅಭಿಯಾನ ಪ್ರಾರಂಭಿಸಿದೆ. ಕಿಶೋರ್ ಅವರ ‘ಬಾತ್ ಬಿಹಾರ ಕಿ’ ಕಾರ್ಯಕ್ರಮವು ಮುಂದಿನ 10 ವರ್ಷಗಳಲ್ಲಿ ಬಿಹಾರವನ್ನು ದೇಶದ 10 ಅತ್ಯುತ್ತಮ ರಾಜ್ಯಗಳಲ್ಲಿ ಒಂದನ್ನಾಗಿ ಮಾಡುವ ಗುರಿಯನ್ನು ಹೊಂದಿದೆ.
ಕಿಶೋರ್ ಗುರುವಾರ ಹಿಂದೂಸ್ತಾನಿ ಅವಮ್ ಮೋರ್ಚಾ ಮುಖ್ಯಸ್ಥ ಜಿತಾನ್ ರಾಮ್ ಮಾಂಝಿಯನ್ನು ಭೇಟಿಯಾಗಿದ್ದಾರೆ. ಅದಕ್ಕೂ ಮುಂಚೆ ಆರ್‌ಎಲ್‌ಎಸ್‌ಪಿ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಅವರನ್ನು ಭೇಟಿ ಮಾಡಿದ್ದರು. ಮಾಂಝಿ ಮತ್ತು ಕುಶ್ವಾಹ ಇಬ್ಬರೂ ಮಹಾ ಮೈತ್ರಿಕೂಟದ ನಾಯಕರಾಗಿದ್ದು, ಇದರಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ಕೂಡ ಸೇರಿವೆ.
ಕಿಶೋರ್ ಅವರನ್ನು ಭೇಟಿಯಾಗಿದ್ದನ್ನು ದೃಢಪಡಿಸಿದ ಆರ್‌ಎಲ್‌ಎಸ್‌ಪಿ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಅವರು ಸಭೆಯಲ್ಲಿ ಚರ್ಚಿಸಿದ ವಿಷಯಗಳ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ. ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ರೈತರ ದುಃಸ್ಥಿತಿಯ ಬಗ್ಗೆ ಸರ್ಕಾರ ಪೂರ್ಣ ವೈಫಲ್ಯ ಕಂಡಿದ್ದರಿಂದ ಆರ್‌ಎಲ್‌ಎಸ್‌ಪಿ ಜೆಡಿಯು ನೇತೃತ್ವದ ಸರ್ಕಾರವನ್ನು ಗುರಿಯಾಗಿಸಿಕೊಂಡು ಹೋರಾಟ ನಡೆಸಿತ್ತು. ಅವರ ಪಕ್ಷವು ಕಿಶೋರ್‌ರೊಂದಿಗೆ ಒಂದು ಸಾಮಾನ್ಯ ನೆಲೆಯನ್ನು ಹೊಂದಿದೆ ಎಂದು ಹೇಳಿದ್ದಾರೆ.
“ಸೈದ್ಧಾಂತಿಕ ವಿಷಯದಲ್ಲಿ ನಾವು ಒಂದೇ ಪುಟದಲ್ಲಿದ್ದೇವೆ. ಇದು ಅನೌಪಚಾರಿಕ ಸಭೆಯಾಗಿದ್ದು ಬಿಹಾರದ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದೆ” ಎಂದು ಪಕ್ಷದ ಮಾಜಿ ರಾಷ್ಟ್ರೀಯ ಪದಾಧಿಕಾರಿ ಫಜಲ್ ಇಮಾಮ್ ಮುಲ್ಲಿಕ್ ಹೇಳಿದ್ದಾರೆ.
ಜನ್ ಅಧಿಕಾರ್ ಪಕ್ಷದ ಮುಖ್ಯಸ್ಥ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರು ಕಿಶೋರ್ ಅವರು ಬಿಹಾರದ ಭವಿಷ್ಯದಲ್ಲಿ ಬದಲಾವಣೆಗಾಗಿ ಕೆಲಸ ಮಾಡುವ ಉದ್ದೇಶವನ್ನು ಶ್ಲಾಘಿಸಿದರು, “ಜನರು ಆಡಳಿತ ಮತ್ತು ವಿರೋಧ ಪಕ್ಷಗಳಿಂದ ಬೇಸರಗೊಂಡಿದ್ದಾರೆ. ರಾಜ್ಯದ ಅಭಿವೃದ್ಧಿಗೆ ವಿಶ್ವಾಸಾರ್ಹ ಪರ್ಯಾಯವನ್ನು ಒದಗಿಸುವುದಕ್ಕಾಗಿ ಕಿಶೋರ್, ಮಾಂಝಿ, ಕನ್ಹಯ್ಯ ಕುಮಾರ್ ಮತ್ತು ಎಡ ಪಕ್ಷಗಳೊಂದಿಗೆ ಸೇರಲು ನಾನು ಸಿದ್ಧನಿದ್ದೇನೆ” ಎಂದು ಅವರು ಹೇಳಿದ್ದಾರೆ.
ಬಿಹಾರದ ಅಭಿವೃದ್ದಿಗಾಗಿ ರಾಜಕೀಯ ಬಿಟ್ಟು ಕೆಲಸ ಮಾಡುತ್ತೇನೆಂದು ಘೋಷಿಸಿದ ಪ್ರಶಾಂತ್ ಕಿಶೋರ್ ಈಗ ಯಾಕೆ ರಾಜಕೀಯ ಮುಖಂಡರನ್ನು ಭೇಟಿಯಾಗುತ್ತಿದ್ದಾರೆ ಎಂದು ಹಲವರು ಪ್ರಶ್ನಿಸಿದ್ದಾರೆ. ಜೆಡಿಯು ಇವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲು ಮುಂದಾಗಿದ್ದು ಶಾಸಕನೊಬ್ಬ ಪ್ರಶಾಂತ್ ಕಿಶೋರ್ ಯಾರು ಎಂದು ಕರೆಯುವ ಮೂಲಕ ವ್ಯಂಗ್ಯವಾಡಿದ್ದಾರೆ.


