ಭಾರತದಲ್ಲಿ ಮತ್ತೆ ಎರಡು ಕರೋನ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಒಂದು ಪ್ರಕರಣ ದೆಹಲಿಯಲ್ಲಿ ಹಾಗೂ ಮತ್ತೊಂದು ಪ್ರಕರಣ ತೆಲಂಗಾಣದಲ್ಲಿ ಪತ್ತೆಯಾಗಿದೆ ಎಂದು ಸರ್ಕಾರ ತಿಳಿಸಿದೆ. ಇತ್ತೀಚಿಗೆ ಕೇರಳದಲ್ಲಿ ಮೊದಲ ಪ್ರಕರಣ ಪತ್ತೆಯಾದ ವಾರಗಳ ನಂತರ ಭಾರತದ ಒಟ್ಟು ಕರೋನವೈರಸ್ ಪ್ರಕರಣಗಳ ಸಂಖ್ಯೆ ಐದಕ್ಕೆ ಏರಿದೆ.
ಇಂದು ದೆಹಲಿ ಮತ್ತು ತೆಲಂಗಾಣದಲ್ಲಿ ಪತ್ತೆಯಾದ ಇಬ್ಬರೂ ರೋಗಿಗಳು ಸ್ಥಿರರಾಗಿದ್ದಾರೆ ಮತ್ತು ಅವರನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ದೆಹಲಿಯ ವ್ಯಕ್ತಿಯು ಇಟಲಿಯಿಂದ ಭಾರತಕ್ಕೆ ಬಂದಿದ್ದರೆ, ತೆಲಂಗಾಣದ ವ್ಯಕ್ತಿಯು ದುಬೈಯಿಂದ ಬಂದಿದ್ದರು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕರೋನ ವೈರೆಸ್‌ನಿಂದಾಗಿ ಚೀನಾದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ ನಂತರ ಜಾಗತಿಕ ಸಾವಿನ ಸಂಖ್ಯೆ 3,000 ದಾಟಿದೆ. ಕಳೆದ ಡಿಸೆಂಬರ್‌ನಲ್ಲಿ ಚೀನಾದಲ್ಲಿ ಮೊದಲ ಬಾರಿಗೆ ಪತ್ತೆಯಾದ ಈ ಮಾರಣಾಂತಿಕ ವೈರಸ್ 60 ಕ್ಕೂ ಹೆಚ್ಚು ದೇಶಗಳಿಗೆ ಹರಡಿದೆ. ಅಲ್ಲದೆ 88,000 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ.
ಈ ಹಿಂದೆ, ಕೇರಳದ ಮೂವರು ವಿದ್ಯಾರ್ಥಿಗಳಿಗೆ ವೈರಸ್ ಇರುವುದು ದೃಡಪಟ್ಟಿತ್ತು. ಅವರು ಚೇತರಿಸಿಕೊಂಡು ನಂತರ ಆಸ್ಪತ್ರೆಯಿಂದ ಬಿಡುಗಡೆ ಆರೋಗ್ಯವಾಗಿದ್ದಾರೆ.
ಈ ವೈರಸ್ ಹೆಚ್ಚಾಗಿ ಇತರ ಕಾಯಿಲೆಗಳಿಂದ ಈಗಾಗಲೇ ದುರ್ಬಲಗೊಂಡವರಿಗೆ ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟವರನ್ನು ಬಾಧಿಸುತ್ತೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.


