ಸಂಘ ಪರಿವಾರದವರಿಗೆ ಯಾರ ಮೇಲಾದರೂ ದಾಳಿ ಮಾಡಿ, ಅವರನ್ನು ಬಲಿಪಶು ಮಾಡಬೇಕು ಎಂದಾಗಲೆಲ್ಲಾ  ಕೆಲವು ಅಸ್ತ್ರಗಳನ್ನು ಬಳಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಅವರಿಗೆ ಹೆಗಲು ಕೊಡುವುದು ವಿ ಡಿ ಸಾವರ್ಕರ್. ‘ಸಾವರ್ಕರ್ ಬಗೆಗೆ ಅವರು ನೀಡಿರುವ ಹೇಳಿಕೆ ನೋಡಿ, ‘ಅಂತಹ ಅಪ್ರತಿಮ ವೀರ’ನನ್ನು ಹೇಡಿ ಅಂದಿದ್ದಾರೆ’ ಎನ್ನುವುದರಿಂದ ಪ್ರಾರಂಭವಾಗಿ, ಹೇಗೆ ಸಾವರ್ಕರ್ ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿ ಅಂಡಮಾನ್ ನಿಕೋಬಾರ್ ದ್ವೀಪದ ಜೈಲಿನಿಂದ ಸಮುದ್ರಕ್ಕೆ ಜಿಗಿದು ಒಬ್ಬನೇ ಈಜಾಡಿ ತಪ್ಪಿಸಿಕೊಂಡು ಬಂದು ಸ್ವಾತಂತ್ರ್ಯ ಹೋರಾಟ ಮಾಡಿದ” ಎಂಬ ಸುಳ್ಳು ಸುದ್ದಿಯವರೆಗೂ ಅದು ಹಬ್ಬುತ್ತದೆ.

ವೀರ ಎಂದು ಕರೆಯುವುದಕ್ಕೆ ಒಬ್ಬೊಬ್ಬರು ಒಂದೊಂದು ಮಾನದಂಡ ಬಳಸಬಹುದು ಹಾಗೆಯೇ ಹೇಡಿ ಎನ್ನುವುದಕ್ಕೂ ಹಲವು ಮಾನದಂಡಗಳಿವೆ. ಒಟ್ಟಿನಲ್ಲಿ ಸಾವರ್ಕರ್ ಬ್ರಿಟಿಷರಿಗೆ ಹಲವಾರು ಬಾರಿ ಕ್ಷಮಾಪಣ ಅರ್ಜಿ ಬರೆದುಕೊಟ್ಟು, ತನ್ನನ್ನು ಕ್ಷಮಿಸುವಂತೆ ಬೇಡಿಕೊಂಡು, ಬ್ರಿಟಿಷರ ಕೃಪೆಯಿಂದ ಜೈಲಿನಿಂದ ಬಿಡುಗಡೆ ಹೊಂದಿದ ಬಳಿಕ ಯಾವುದೇ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳದೆ ಇದ್ದದ್ದು ಮಾತ್ರ ಸಂಘ ಪರಿವಾರದವರಿಗೆ ನುಂಗಲಾರದ ತುತ್ತಾಗಿದೆ. ಹೇಡಿ ಎಂಬ ಮಾತು ನುಂಗಲಾಗದೆ, ವೀರ ಎಂಬ ಮಾತು ಗಂಟಲಲ್ಲಿ ಸಿಕ್ಕಿಹಾಕಿಕೊಂಡಂತೆ.

ಲಂಡನ್ ನಲ್ಲಿ ಜುಲೈ 1, 1909 ರಂದು ಬ್ರಿಟಿಷ್‌ ಅಧಿಕಾರಿ ಸರ್ ವಿಲಿಯಮ್ ಕರ್ಜನ್ ವೈಲಿಯನ್ನು ಮದನ್ ಲಾಲ್ ಧಿಂಗ್ರ ಗುಂಡಿಟ್ಟು ಕೊಂದಿದ್ದ. ಇದರಲ್ಲಿ ಸಾವರ್ಕರ್ ಕೈವಾಡ ಇದೆ ಎಂದು ಬ್ರಿಟಿಶ್ ಅಧಿಕಾರಿಗಳು ಶಂಕಿಸಿದ್ದರೂ, ಕೈವಾಡ ಸಾಬೀತುಪಡಿಸಲು ಹೆಚ್ಚಿನ ದಾಖಲೆಗಳು ಇಲ್ಲದೆ ಸಾವರ್ಕರ್ ತಪ್ಪಿಸಿಕೊಂಡಿದ್ದರು. ಸಾವರ್ಕರ್ ನಿಧನದ ನಂತರ, ತಾವು ಬರೆದಿದ್ದ ಸಾರ್ವರ್ಕರ್ ಜೀವನ ಚಿತ್ರಣವನ್ನು ಪರಿಷ್ಕರಿಸಿದ ಮಹಾರಾಷ್ಟ್ರದ ಲೇಖಕ ಧನಂಜಯ್ ಕೀರ್ ಅವರು, ಧಿಂಗ್ರ ಅವರಿಗೆ ರಿವಾಲ್ವರ್ ಕೊಟ್ಟದ್ದು, ಅವರನ್ನು ತರಬೇತುಮಾಡಿದ್ದು ಸಾವರ್ಕರ್ ಅವರೇ ಎಂಬ ಸಂಗತಿಗಳನ್ನು ದಾಖಲಿಸಿದ್ದಾರೆ.

ಬಾಂಬ್ ಶೇಖರಣೆ ಪ್ರಕರಣದಲ್ಲಿ ಸಾವರ್ಕರ್ ಅವರ ಅಣ್ಣ ಅಭಿನವ್ ಭಾರತ ಸಂಘಟನೆಯ ಸದಸ್ಯ ಗಣೇಶ್ ಸಾವರ್ಕರ್ ಸಿಕ್ಕಿಬಿದ್ದು, ಅವರನ್ನು ಅಂಡಮಾನ್ ನಿಕೋಬಾರ್ ಜೈಲಿಗೆ ಕಳುಹಿಸುವ ಜೂನ್ 8, 1909ರ ತೀರ್ಪನ್ನು ವಿರೋಧಿಸಿ, ಅವನ ಸಹಚರರು ಸೇಡಿಗೆ ಮುಂದಾಗುತ್ತಾರೆ. ನಾಸಿಕ್ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಎಎಂಟಿ ಜಾಕ್ಸನ್ ಅವರನ್ನು ಅನಂತ್ ಖನ್ಹೆರೆ ಗುಂಡಿಕ್ಕಿ ಕೊಲ್ಲುತ್ತಾನೆ. ಖನ್ಹೆರೆ ಸಹಚರರನ್ನು ವಿಚಾರಣೆಗೆ ಒಳಪಡಿಸಿ, ಸಾವರ್ಕರ್ ಪತ್ರಗಳನ್ನು ವಶಪಡಿಸಿಕೊಳ್ಳುವ ಪೊಲೀಸರಿಗೆ, ಜಾಕ್ಸನ್ ಅವರನ್ನು ಕೊಲ್ಲಲು ಬಳಸಿರುವ ಪಿಸ್ತೂಲು ಸೇರಿದಂತೆ 20 ಪಿಸ್ತೂಲುಗಳನ್ನು ಇಂಗ್ಲೆಂಡಿನಿಂದ ಭಾರತಕ್ಕೆ ಸಾವರ್ಕರ್ ಕಳುಹಿಸಿರುವ ವಿಷಯ ಸಾಬೀತಾಗಿ, ಲಂಡನ್‌ಗೆ ಬಂಧನದ ವಾರಂಟ್ ಅನ್ನು ಟೆಲಿಗ್ರಾಫ್ ಮೂಲಕ ಕಳುಹಿಸಲಾಗುತ್ತದೆ. ಆಗ ಮಾರ್ಚ್ 13, 1910 ರಂದು ಪೊಲೀಸರ ವಶಕ್ಕೆ ಒಪ್ಪಿಸಿಕೊಳ್ಳುವ ಸಾವರ್ಕರ್‌ನನ್ನು ಭಾರತಕ್ಕೆ ಕರೆತರಲಾಗುತ್ತದೆ.

ಜಾಕ್ಸನ್ ಕೊಲೆ ಮತ್ತು ರಾಜನ ವಿರುದ್ಧ ಯುದ್ಧದ ಕಾರಣಕ್ಕೆ ಸಾವರ್ಕರ್ ಗೆ 50 ವರ್ಷಗಳ ಎರಡು ಅವಧಿಗಳ ಕಠಿಣ ಸಜೆಯಾಗಿ, ಜುಲೈ, 4, 1911ಕ್ಕೆ ಪೋರ್ಟ್ ಬ್ಲೇರ್ ಜೈಲಿಗೆ ಕರೆತರಲಾಗುತ್ತದೆ.

ಪೋರ್ಟ್ ಬ್ಲೇರ್ ಜೈಲಿನಲ್ಲಿ ಕಠಿಣ ಸಜೆಗೆ ಗುರಿಯಾಗುವ ಸಾವರ್ಕರ್ ಅವರಿಗೆ ಕ್ರಾಂತಿಕಾರಿ ಮನೋಭಾವ ಕುಸಿದು ಹೋಗುತ್ತದೆ. 1911 ರಲ್ಲಿ ಕ್ಷಮಾಪಣೆ ನೀಡುವಂತೆ ಬ್ರಿಟಿಷ್‌ ಅಧಿಕಾರಿಗಳಿಗೆ ಸಾವರ್ಕರ್ ಅರ್ಜಿ ಸಲ್ಲಿಸುತ್ತಾರೆ. ಈ ಪತ್ರದ ಪಠ್ಯ ಸದ್ಯಕ್ಕೆ ಲಭ್ಯವಿಲ್ಲದೇ ಹೋದರೂ, ಮತ್ತೊಮ್ಮೆ ಕ್ಷಮಾಪಣೆ ಕೇಳಿ ನವೆಂಬರ್ 14, 1913 ರಂದು ಬ್ರಿಟಿಶರಿಗೆ ಸಲ್ಲಿಸುವ ಅರ್ಜಿಯಲ್ಲಿ,

“..ಕೊನೆಗೆ, ನಾನು 1911 ರಲ್ಲಿ ನನ್ನನ್ನು ಕ್ಷಮಿಸಿ ಜೈಲಿನಿಂದ ಬಿಡುಗಡೆ ಮಾಡಲು ಬರೆದ ಕ್ಷಮಾಪಣ ಪತ್ರ ಮತ್ತು ಅದನ್ನು ಭಾರತದ ಸರ್ಕರಕ್ಕೆ ರವಾನಿಸಲಾಗಿರುವ ಬಗ್ಗೆ ಇಲ್ಲಿ ಸ್ವಾಮಿಗಳಿಗೆ ನೆನಪಿಸಿ, ಅದನ್ನು ಪರಿಗಣಿಸುವಂತೆ……”

ಎಂದು ಬರೆಯುವಾಗ ಅವರು 1911ರಲ್ಲಿಯೇ ಕ್ಷಮಾಪಣೆ ಕೇಳಿದ ಉಲ್ಲೇಖವಿದೆ. ಬ್ರಿಟಿಶರ ವಿರುದ್ಧ ಹೋರಾಡಿ, ಧೈರ್ಯವಾಗಿ ನೇಣುಕುಣಿಕೆಗೆ ಅರ್ಪಿಸಿಕೊಂಡ ಭಗತ್ ಸಿಂಗ್‌ ಅಂತಹ ಕ್ರಾಂತಿಕಾರಿಗಳನ್ನು ಅಧ್ಯಯನ ಮಾಡಿರುವ ಹಲವು ಸಂಶೋಧಕರು ಹೇಳುವ ಮಾತೆಂದರೆ, ಕ್ರಾಂತಿಕಾರಿಗಳು ತಾವು ವಿರೋಧಿಸಿದ ಪ್ರಭುತ್ವದ ಜೊತೆಗೆ ಸಂಧಾನ ಮಾಡಿಕೊಂಡು ಕ್ಷಮಾಪಣೆ ಕೇಳುವ ಮನೋಭಾವ ಇಟ್ಟುಕೊಳ್ಳುವುದಿಲ್ಲ ಎನ್ನುವುದು ವಿಶೇಷ.

1911ರ ಕ್ಷಮಾಪಣ ಅರ್ಜಿಯನ್ನು ಬ್ರಿಟಿಷರು ಪುರಸ್ಕರಿಸದೆ ಹೋದರೂ, ಸಾವರ್ಕರ್ ಅವರಿಗೆ ಜೈಲಿನಲ್ಲಿ ಕಷ್ಟಕರವಾದ ಕೆಲಸಗಳನ್ನು ಕೊಡುವ ಬದಲು, ಅಲ್ಲಿನ ಕೆಲವು ಕೆಲಸಗಳಿಗೆ ಮೇಲ್ವಿಚಾರಕನನ್ನಾಗಿ ನೇಮಿಸಿಕೊಳ್ಳುತ್ತಾರೆ. ಇದರ ಬಗ್ಗೆ ತಮ್ಮ ಬರಹದಲ್ಲಿ ಪ್ರತಿಕ್ರಿಯಿಸಿರುವ ವಕೀಲ ಮತ್ತು ಇತಿಹಾಸಕಾರ ಎ ಜಿ ನೂರಾನಿ ಅವರು “ತಮ್ಮನ್ನು ಮತ್ತು ತಮ್ಮ ನಾಡನ್ನು ಬಂಧಿಸಿದವರು ಕೊಡುವ ಇಂತಹ ‘ಗೌರವ’ವನ್ನು ಕೆಲವೇ ಕೆಲವು ಕ್ರಾಂತಿಕಾರರಷ್ಟೇ ಒಪ್ಪಿಕೊಳ್ಳುತ್ತಿದ್ದರು” ಎನ್ನುತ್ತಾರೆ.

1911, 1913, 1914, 1918 ಮತ್ತು 1920 ನೆಯ ಇಸವಿಗಳಲ್ಲಿ ಸಾವರ್ಕರ್ ಕ್ಷಮಾಪಣೆ ಅರ್ಜಿಗಳನ್ನು ಬ್ರಿಟಿಷರಿಗೆ ಸಲ್ಲಿಸಿದ ದಾಖಲೆಗಳಿವೆ. ಅವುಗಳಲ್ಲಿ 1913 ಮತ್ತು 1920ರ ಅರ್ಜಿಗಳ ಸಂಪೂರ್ಣ ಪಠ್ಯಗಳು ಇಂದಿಗೂ ಲಭ್ಯವಿವೆ.

1920ರಲ್ಲಿ ಬರೆಯುವ ಪತ್ರದಲ್ಲಿ ಸಾವರ್ಕರ್ ಬ್ರಿಟಿಷ್‌ ಅಧಿಕಾರಿಗಳನ್ನು ಹೀಗೆ ಬೇಡಿಕೊಳ್ಳುತ್ತಾರೆ “.. ಸರ್ಕಾರ ನನ್ನ ಮತ್ತು ನನ್ನ ಸಹೋದರಿಂದ ಇನ್ನೂ ಹೆಚ್ಚಿನ ಭದ್ರತೆ ನಿರೀಕ್ಷಿಸುವುದಾದರೆ, ಸರ್ಕಾರ ತಿಳಿಸುವ ನಿಖರ ಸಮಯದವರೆಗೆ ನಾವು ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂಬ ಮುಚ್ಚಳಿಕೆಯನ್ನು ಬರೆದುಕೊಡುತ್ತೇವೆ” ಎಂದು ಹೇಳುತ್ತಾರೆ.

“…… ನಮ್ಮ ಬಿಡುಗಡೆಯ ನಂತರ ಪ್ರಭುತ್ವದ ಸುರಕ್ಷತೆಗಾಗಿ ನಿಖರ ಸಮಯದವರೆಗೆ ಯಾವುದೇ ಪ್ರಾಂತ್ಯದಲ್ಲಿ ಮಾತ್ರ ಉಳಿಯುವ ಅಥವಾ ನಮ್ಮ ಚಲನವಲನಗಳನ್ನು ಪೊಲಿಸರು ವರದಿ ಮಾಡುವ ಅಥವಾ ಇನ್ಯಾವುದೆ ತಾರ್ಕಿಕ ನಿರ್ಬಂಧಗಳನ್ನು ನಾನು ಮತ್ತು ನನ್ನ ಸಹೋದರ ಸಂತೋಷದಿಂದ ಒಪ್ಪಿಕೊಳ್ಳುತ್ತೇವೆ” ಎಂದು ಕೂಡ ತಮ್ಮ ಅರ್ಜಿಯಲ್ಲಿ ಬರೆಯುತ್ತಾರೆ.

ಹಲವು ನಿರ್ಬಂಧನೆಗಳ ಮೇರೆಗೆ ಮೇ 1921 ರಂದು ಅಂಡಮಾನ್ ನಿಂದ ಪುಣೆಯ ಯರವಾಡ ಜೈಲಿಗೆ ಸ್ಥಳಾಂತರಗೊಂಡು, ಮೂರು ವರ್ಷಗಳ ನಂತರ ಷರತ್ತುಬದ್ಧ ಬಿಡುಗಡೆ ಪಡೆಯುತ್ತಾರೆ. ಸರ್ಕಾರದ ಅನುಮತಿ ಇಲ್ಲದೆ ರತ್ನಗಿರಿ ಜಿಲ್ಲೆ ಬಿಟ್ಟು ಹೋಗುವಂತಿಲ್ಲ, ಸಾರ್ವಜನಿಕವಾಗಿ ಆಗಲಿ, ಖಾಸಗಿಯಾಗಿ ಆಗಲಿ ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಿಲ್ಲ ಎಂಬ ಪ್ರಮುಖ ಷರತ್ತುಗಳನ್ನು ಸಾವರ್ಕರ್ ಒಪ್ಪಿಕೊಳ್ಳುತ್ತಾರೆ. ಈ ಷರತ್ತುಗಳು ಐದು ವರ್ಷಗಳಿಗೆ ಮಾನ್ಯವಿದ್ದು, ನಂತರ ಅವುಗಳನ್ನು ನವೀಕರಿಸುವ ನಿರ್ಭಂಧವನ್ನು ಕೂಡ ಹೇರಲಾಗುತ್ತದೆ. ಇಂತಹ ಷರತ್ತುಗಳನ್ನು ಸಂಪೂರ್ಣವಾಗಿ ಒಪ್ಪಿಕೊಂಡು ಹೊರಬರುವ ಸಾವರ್ಕರ್ ಅವರಿಗೆ ಆರೋಪಿಸುವ ವೀರತ್ವದ ಗುಣಗಳನ್ನು ಹಲವು ನಿಜವಾದ ಸ್ವಾತಂತ್ರ್ಯ ಹೋರಾಟಗಾರರು ಪ್ರಶ್ನಿಸಿಕೊಂಡು ಬಂದಿದ್ದಾರೆ.

ಜನವರಿ 30 1948ರಲ್ಲಿ ಮಹಾತ್ಮ ಗಾಂಧಿ ಅವರ ಹತ್ಯೆಯಾದಾಗ, ಫೆಬ್ರವರಿ 5ರಂದು ಸಾವರ್ಕರ್ ಅವರನ್ನು ಪೊಲೀಸ್ ವಶಕ್ಕೆ ಪಡೆಯಲಾಗುತ್ತದೆ. ಆಗ ಬಾಂಬೆ ಪೊಲೀಸ್ ಕಮಿಶನರ್ ಅವರಿಗೆ ಸಾವರ್ಕರ್ ಬರೆಯುವ ಪತ್ರದ ಕೆಲವು ಸಾಲುಗಳು ಹೀಗಿವೆ “ಸರ್ಕಾರ ನನ್ನನ್ನು ಷರತ್ತಿನ ಮೇಲೆ ಬಿಡುಗಡೆ ಮಾಡುವುದಾದರೆ, ಸರ್ಕಾರ ತಿಳಿಸುವ ಅವಧಿಯವರೆಗೂ ನಾನು ಯಾವುದೇ ಕೋಮು ಅಥವಾ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ” ಎಂದು ಬರೆಯುತ್ತಾರೆ.

ಗಾಂಧಿ ಹತ್ಯೆಯ ಎಂಟು ಆರೋಪಿಗಳ ಪೈಕಿ ಸಾವರ್ಕರ್ ಅವರೂ ಒಬ್ಬರು. ಸಾಕ್ಷ್ಯಗಳ ಕೊರತೆಯಿಂದ ಈ ಕೃತ್ಯದಲ್ಲಿ ಅವರ ಭಾಗಿತ್ವವನ್ನು ಸಾಬೀತು ಮಾಡಲಾಗದೆ ಅವರು ಖುಲಾಸೆಯಾದರು. ಗಾಂಧಿ ಹತ್ಯೆಯ ರೂವಾರಿಗಳಾದ ನಾಥೂರಾಮ ಗೋಡ್ಸೆ ಮತ್ತು ನಾರಾಯಣ್ ಆಪ್ಟೆಗೆ ಆತ್ಮೀಯರಾಗಿದ್ದರು ಹಾಗೂ ಸಾವರ್ಕರ್ ಮತ್ತು ಇವರುಗಳ ನಡುವೆ ನಡೆದ ಹಲವು ಭೇಟಿಗಳ ವಿವರಗಳು ಇಂದಿಗೂ ಬೆಳಕಿಗೆ ಬರುತ್ತಲೇ ಇವೆ. ವೀರತ್ವವನ್ನು ಸಾಬೀತುಪಡಿಸಲು ಇಷ್ಟು ಬೇಗ ಸಾಧ್ಯವಿಲ್ಲವೇನೋ!

ಮೂಲ: ಸ್ಕ್ರೋಲ್‌ ಮತ್ತಿತರ ಆಂಗ್ಲ ವೈಬ್‌ ಸೈಟ್‌ಗಳಿಂದ.

1 COMMENT

  1. Five star hotelinalli kulitu lekhana
    baredantide. Adakke kelavarige five-star kaidi,britishraa chamchagalada nehrunantha swatantra horatagararu illi savarkarantha kalapani shikshe anubhavisiruvudu sannadagi kaanisuttade.

LEAVE A REPLY

Please enter your comment!
Please enter your name here