ಬೀದರ್‌ನ ಶಾಹಿನ್ ಶಾಲೆಯ ದೇಶದ್ರೋಹ ಪ್ರಕರಣದ ಜಾಮೀನು ವಿಚಾರಣೆ ನಡೆಸಿದ ಬೀದರ್‌ನ ಸೆಷನ್ಸ್ ನ್ಯಾಯಾಲಯ ಮೇಲ್ನೋಟಕ್ಕೆ ಇದು ದೇಶದ್ರೋಹದ ಪ್ರಕರಣ ಅಲ್ಲ ಎಂದು ಅಭಿಪ್ರಾಯಪಟ್ಟಿದೆ.
ಸಿಎಎ- ಎನ್‌ಪಿಆರ್ ವಿರೋಧಿ ನಾಟಕ ಆಡಿದ್ದಕ್ಕೆ ದೇಶದ್ರೋಹದ ಕೇಸಿನ ಪ್ರಕರಣದಲ್ಲಿ, ಶಾಹೀನ್ ಹಿರಿಯ ಪ್ರಾಥಮಿಕ ಶಾಲೆಯ ವ್ಯವಸ್ಥಾಪಕ, ಅಲ್ಲಮ್ ಇಕ್ಬಾಲ್ ಶಿಕ್ಷಣ ಸೊಸೈಟಿಯ ಅಧ್ಯಕ್ಷ ಮತ್ತು ಶಾಹೀನ್ ಸಂಸ್ಥೆಗಳ ಸಂಸ್ಥಾಪಕ ಅಬ್ದುಲ್ ಖಾದೀರ್ ಅವರಿಗೆ ಕೋರ್ಟ್ ಮಂಗಳವಾರ ನಿರೀಕ್ಷಣಾ ಜಾಮೀನು ನೀಡಿದೆ.
ಖಾದೀರ್ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿ ಆದೇಶ ನೀಡಿದ ಸೆಷನ್ಸ್ ಕೋರ್ಟ್ ನ್ಯಾಯಮೂರ್ತಿ ಮನಗೋಲಿ ಪ್ರೇಮಾವತಿ ಅವರು, ಬಂಧನದ ಎದುರಿಸಬೇಕಾದ ಅವಶ್ಯಕತೆ ಬಂದರೆ, ಎರಡು ಲಕ್ಷ ವೈಯಕ್ತಿಕ ಬಾಂಡ್ ಮತ್ತು ಮೂರು ಜನರ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆದೇಶಿಸಿದ್ದಾರೆ.
ದೇಶದ್ರೋಹದ ಆರೋಪಕ್ಕೆ ಒದಗಿಸಿರುವ ಮಾಹಿತಿಯ ಬಗ್ಗೆ ಕೋರ್ಟ್ ಪ್ರತಿಕ್ರಿಯಿಸಿದ್ದು “ಈ ನಾಟಕ ನಡೆಯುವಾಗ ಆರೋಪಿ ಸ್ಥಳದಲ್ಲಿರುವುದಕ್ಕೆ ದಾಖಲೆಗಳಿಲ್ಲ. ಆ ನಾಟಕ ಸಮಾಜದಲ್ಲಿ ಸಾಮರಸ್ಯವನ್ನು ಹಾಳು ಮಾಡಿಲ್ಲ. ಈ ಮಾಹಿತಿಯನ್ನು ಪರಿಗಣಿಸಿ, ಸೆಕ್ಷನ್ 124 ಎಗೆ ಬೇಕಾದ ಅಂಶಗಳು ಮೇಲ್ನೋಟಕ್ಕೆ ಕಂಡುಬಂದಿಲ್ಲ” ಎಂದು ತಿಳಿಸಿದೆ.
ಪ್ರಧಾನಿ ವಿರುದ್ಧ ಅವಹೇಳನಕಾರಿ ಸಂಭಾಷಣೆ ಹೊಂದಿರುವ ನಾಟಕದಲ್ಲಿ ಶಾಲಾ ಬಾಲಕಿಯೊಬ್ಬಳು ಅಭಿನಯಿಸಿದ್ದಾಳೆ ಎಂಬ ದೂರಿನ ಮೇರೆಗೆ ಸೆಕ್ಷನ್ 124 ಎ ಅಡಿಯಲ್ಲಿ ದೇಶದ್ರೋಹದ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದರು.
“ಸಂಭಾಷಣೆಯನ್ನು ಇಡಿಯಾಗಿ ಓದಿದ ಮೇಲೆ ಅವು ಎಲ್ಲಿಯೂ ಸರ್ಕಾರದ ವಿರುದ್ಧ ದೇಶದ್ರೋಹದಂತೆ ಕಂಡುಬರುವುದಿಲ್ಲ. ಭಾರತೀಯ ದಂಡ ಸಂಹಿತೆ 124 ಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಮೇಲ್ನೋಟಕ್ಕೆ ಯಾವುದೇ ಆಧಾರಗಳು ಕಂಡುಬರುತ್ತಿಲ್ಲ. ದಾಖಲೆಗಳನ್ನು ತೋರಿಸದೆ ಇದ್ದರೆ ದೇಶ ಬಿಡುವ ಪರಿಸ್ಥಿತಿ ಬರಬಹುದು ಎಂದು ವಿದ್ಯಾರ್ಥಿಗಳು ಅಭಿನಯಿಸಿ ವ್ಯಕ್ತಪಡಿಸಿದ್ದಾರೆ, ಅದನ್ನು ಬಿಟ್ಟರೆ ದೇಶದ್ರೋಹ ಎಸಗಿರುವುದಕ್ಕೆ ಎಲ್ಲಿಯೂ ಆಧಾರ ಇಲ್ಲ. ನನ್ನ ಅಭಿಪ್ರಾಯದಲ್ಲಿ ಆ ಸಂಭಾಷಣೆ ಸರ್ಕಾರದ ವಿರುದ್ಧ ಯಾವುದೇ ದ್ವೇಷ ಹುಟ್ಟಿಸುವುದಿಲ್ಲ” ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
“ಇಡೀ ದೇಶದಲ್ಲಿ ಸಿಎಎ ಮತ್ತು ಎನ್ ಆರ್ ಸಿ ವಿರುದ್ಧ ಪ್ರತಿಭಟನೆಗಳು ಮತ್ತು ರ್‍ಯಾಲಿಗಳು ಜರುಗುತ್ತಿವೆ ಮತ್ತು ಸರ್ಕಾರದ ಕ್ರಮಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸುವ ಮತ್ತು ನ್ಯಾಯಯುತವಾಗಿ ಅವುಗಳನ್ನು ಸರಿಪಡಿಸಿಕೊಳ್ಳುವ ಹಕ್ಕು ನಾಗರಿಕರಿಗೆ ಇದೆ. ಶಾಲೆಯಲ್ಲಿ ನಾಟಕ ಆಡುವಾಗ ಹೇಳಿದ ಸಂಭಾಷಣೆಗಳು ಅವು. ಜನವರಿ 21ರಂದು ನಾಟಕವನ್ನು ಆಡಲಾಗಿದೆ, ಜನವರಿ 26ರಂದು ಇದರ ಮಾಹಿತಿ ಸಿಕ್ಕಿದೆ. ಪೇಸ್ಬುಕ್ ನಲ್ಲಿ ಅಪ್ಲೋಡ್ ಮಾಡದೆ ಹೋಗಿದ್ದರೆ ನಾಟಕದ ಬಗ್ಗೆ ಆಗಲಿ ಆ ಸಂಭಾಷಣೆಯ ಬಗ್ಗೆ ಆಗಲಿ ಸಾರ್ವಜನಿಕರಿಗೆ ತಿಳಿಯುತ್ತಲೇ ಇರಲಿಲ್ಲ” ಎಂದು ಕೋರ್ಟ್ ಹೇಳಿದೆ.
ಐಪಿಸಿ ಸೆಕ್ಷನ್ 153 ಎ ಅಡಿಯಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಬಗೆಗಿನ ಆರೋಪಕ್ಕೆ “ಯಾವುದೇ ಸಮುದಾಯದ ಬಗ್ಗೆ ನಾಟಕದಲ್ಲಿ ಸೂಚಿಸಿಲ್ಲ. ಆದರೆ ಸಿಎಎ, ಎನ್ ಆರ್ ಸಿ ಕಾಯ್ದೆಯಡಿ ಅಗತ್ಯ ದಾಖಲೆ ತೋರಿಸದೆ ಇದ್ದರೆ ಎಲ್ಲ ಮುಸ್ಲಿಮರು ದೇಶ ಬಿಡಬೇಕಾಗುತ್ತದೆ ಎಂದು ಎಲ್ಲ ಕಲಾವಿದರು ಹೇಳಿದ್ದಾರೆ. ಬೇರೆ ಯಾವುದೇ ಧರ್ಮದ ಬಗ್ಗೆ ಹೇಳಿಕೆ ನಾಟಕದಲ್ಲಿ ಇಲ್ಲದೆ ಹೋದಾಗ, ಶಿಕ್ಷೆಗೆ ಅಗತ್ಯ ಮಾನಡಂಡವಾದ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಪ್ರಶ್ನೆಯೇ ನಾಟಕದಲ್ಲಿ ಮೂಡುವುದಿಲ್ಲ” ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಶಾಹೀನ್ ಶಿಕ್ಷಣ ಸಂಥೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿದ್ದು, ಶಿಕ್ಷಣ ಕ್ಷೆತ್ರದಲ್ಲಿ ಅಲ್ಲಿನ ವಿದ್ಯಾರ್ಥಿಗಳು ಮತ್ತು ಸಂಸ್ಥೆ ಹಲವು ಸಾಧನೆಗಳನ್ನು ಮಾಡಿರುವುದನ್ನು ಹಲವು ಪ್ರಶಸ್ತಿಗಳನ್ನು ಸ್ವೀಕರಿಸಿರುವುದನ್ನು ಕೋರ್ಟ್ ಗಮನಿಸಿದೆ.
ಈ ಹಿಂದೆ ಇದೇ ಪ್ರಕರಣದಲ್ಲಿ, ನಾಟಕದಲ್ಲಿ ಪಾಲ್ಗೊಂಡಿದ್ದ ಬಾಲಕಿಯ ತಾಯಿ ಮತ್ತು ಶಾಲೆಯ ಮುಖ್ಯಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದರು. 16 ದಿನಗಳ ಬಂಧನದ ನಂತರ ಇಬ್ಬರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಬಾಲಾಪರಾಧ ನ್ಯಾಯ ಕಾಯ್ದೆಯನ್ನು ಉಲ್ಲಂಘಿಸಿ ಪೊಲೀಸರು ವಿದ್ಯಾರ್ಥಿಗಳನ್ನು ತನಿಖೆ ಮಾಡಿದ್ದಾರೆ ಎಂದು ಆರೊಪಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್‌ನಲ್ಲಿ ಇನ್ನಷ್ಟೆ ವಿಚಾರಣೆಗೆ ಬರಬೇಕಿದೆ.


