ಕೇಂದ್ರ ಸರ್ಕಾರವು CAA, NPR, NRC ಜಾರಿ ಮಾಡುತ್ತಿರುವುದು ಕೂಡಿ ಬಾಳುವ ಆಶಯದ ಮೇಲೆ ದಾಳಿಯಾಗಿದೆ ಎಂದು ಚಿಂತಕಿ ಮತ್ತು ಹೋರಾಟಗಾರ್ತಿ ಶಬ್ನಂ ಹಶ್ಮಿ ಆರೋಪಿಸಿದ್ದಾರೆ.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯು ಮಂಡ್ಯದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, CAA, NPR, NRC ಯಿಂದ ಈ ದೇಶದ ಪ್ರಜೆಗಳೇ ಪೌರತ್ವ ಸಾಬೀತು ಮಾಡಬೇಕು ಎನ್ನುವ ದುಸ್ಥಿತಿ ಬಂದಿದೆ. ಭಾರತದ ಬಹುತೇಕ ಮಹಿಳೆಯರ ಬಳಿ ಆಸ್ತಿಯು ಇಲ್ಲ, ದಾಖಲೆಗಳು ಇಲ್ಲ. ಹಾಗಾಗಿ ಮಹಿಳೆಯರು ಮೊದಲ ಬಲಿಪಶುಗಳಾಗುತ್ತಾರೆ ಎಂದರು.
ಇದರಿಂದ ಹಿಂದೂಗಳಿಗೆ ಏನೂ ಆಪಾಯವಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಅಸ್ಸಾಮಿನ ಉದಾಹರಣೆಯನ್ನು ನೋಡಿ ದಾಖಲೆ ನೀಡಲಾಗದ 19 ಲಕ್ಷ ಜನರಲ್ಲಿ ಸುಮಾರು 14 ಲಕ್ಷ ಜನರು ಹಿಂದೂಗಳಾಗಿದ್ದಾರೆ. ಪ್ರಜಾತಂತ್ರದ ಮೇಲೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಇದರ ವಿರುದ್ಧ ನಾವೆಲ್ಲರೂ ಹೋರಾಡಬೇಕಿದೆ. ನಾವು ಬಾಬಾಸಾಹೇಬ್ ಅಂಬೇಡ್ಕರ್ ಅವರ ವಾಸುದಾರರು, ಗಾಂಧೀಜಿಯವರ ವಾರಸುದಾರರು, ನೇಣಿಗೆ ಕೊರಳೊಡ್ಡಿದ ಶಹೀದ್ ಭಗತ್ ಸಿಂಗ್‌ರವರ ವಾರಸುದಾರರು. ನಾವು ಯಾರಿಗೂ ಹೆದರುವುದಿಲ್ಲ. ಯಾರಿಗೂ ಹೆದರಬೇಕಾಗಿಲ್ಲ ಎಂದು ಕರೆ ನೀಡಿದರು.
1950ರ ದಶಕದಲ್ಲಿ ಕೇರಳದ ಮಹಿಳೆಯರು ಎದೆಮೇಲೆ ಬಟ್ಟೆ ಹಾಕಿಕೊಳ್ಳುವಂತಿರಲಿಲ್ಲ. ಹಾಗೇನಾದರೂ ಬಟ್ಟೆ ಹಾಕಿಕೊಂಡರೆ ತೆರಿಗೆಯನ್ನು ಕಟ್ಟಬೇಕಿತ್ತು. ಬಟ್ಟೆ ಹಾಕಿಕೊಂಡಿದ್ದ ನಂಗೇಲಿ ಎಂಬ ಮಹಿಳೆಯನ್ನು ತೆರಿಗೆ ಕೇಳಲು ಬಂದಾಗ ಆಕೆ ತನ್ನ ಎದೆಯನ್ನೇ ಕೊಯ್ದು ಕೊಟ್ಟಳು. ಇದರಿಂದಾಗಿ ಆಕೆ ಪ್ರಾಣವನ್ನೇ ಕಳೆದುಕೊಂಡಳು. ಆ ನಂತರ ಇದರ ವಿರುದ್ದ ಹೋರಾಟದ ಕಿಚ್ಚು ಹತ್ತಿಕೊಂಡಿತು. ಹಾಗೆಯೇ ತಮಗೆ ಅಗಾಧವಾದ ಅವಮಾನಗಳು ಎದುರಾದರೂ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದ ಸಾವಿತ್ರಿ ಬಾಯಿ ಫುಲೆ ಅವರನ್ನು ನೆನಪು ಮಾಡಿಕೊಳ್ಳಬೇಕು ಎಂದರು.
1909 ರಲ್ಲಿ ನ್ಯೂಯಾರ್ಕ್‌ನ ದುಡಿಯುವ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ನಡೆಸಿದ ಹೋರಾಟದ ನೆನಪಿನಲ್ಲಿ ಮಹಿಳಾ ದಿನಾಚರಣೆ ಅಸ್ತಿತ್ವಕ್ಕೆ ಬಂದಿದೆ. 1910 ರ ನಂತರವೂ ಮಹಿಳಾ ಹಕ್ಕುಗಳಿಗಾಗಿ ಹಲವು ಹೋರಾಟಗಳು ಜರುಗಿವೆ. ಈ ಹೋರಾಟದಲ್ಲಿ ಅಸಂಖ್ಯ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇವರೆಲ್ಲರನ್ನೂ ನಾವು ಮರೆಯಬಾರದು ಎಂದರು.
ಅಂದು ನಮ್ಮ ಸಮಾನತೆಗಾಗಿ ಹೋರಾಡಿ ಅಂಬೇಡ್ಕರ್ ಸಂವಿಧಾನವನ್ನು ಬರೆದರು. ಸಮಾಜದಲ್ಲಿ ಇಂದು ನಾವು ಭ್ರೂಣ ಹತ್ಯೆಗಳನ್ನು ನೋಡುತ್ತಿದ್ದೇವೆ. ವರದಕ್ಷಿಣೆ ತಗೆದುಕೊಳ್ಳುವಂತ ಗಂಡಸರ ಮನಸ್ಥಿತಿ ಎಂಥದ್ದು ಇರಬಹುದು? ಇಂಕ್ವಿಲಾಬ್ ಜಿಂದಾಬಾದ್ ಎಂದು ಹೊರಗೆ ಹೇಳುವುದು ಸುಲಭ ಆದರೆ ಮನೆಯೋಳಗೆ ಬಂದರೆ ಹಲವಾರು ವಿಚಾರಗಳಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಮನೆಯೊಳಗಿನ ಹೋರಾಟ ಮತ್ತಷ್ಟು ಕಷ್ಟವಾಗಿದೆ ಎಂದರು.
ನಾನು ಮತ್ತು ನನ್ನ ಗಂಡ ವರದಕ್ಷಿಣೆ ತಗೆದುಕೊಳ್ಳುವ ಮದುವೆಗಳಿಗೆ ಹೋಗುವುದಿಲ್ಲ ಎಂದು ನಿರ್ಧರಿಸಿದ್ದೇವೆ. ಇದು ದೊಡ್ಡ ಬದಲಾವಣೆ ತರೋಲ್ಲ ಅಂತ ಗೊತ್ತು. ಆದರೂ ನಾವು ಇದನ್ನು ಮಾಡುತ್ತೇವೆ. ನೀವು ಕೂಡ ಈ ರೀತಿಯಾಗಿ ಮಾಡಬೇಕು. ಮನೆಯಲ್ಲಿ ನಡೆಯುವ ದೌರ್ಜನ್ಯದ ವಿರುದ್ಧ ದನಿ ಎತ್ತಬೇಕು ಎಂದರು.


