ಕೊರೊನಾ ಕಾರಣದಿಂದಾಗಿ ಎರ್ನಾಕುಲಂ ಜಿಲ್ಲೆಯ ಚುಲ್ಲಿಕಲ್ ಮೂಲದ 69 ವರ್ಷದ ರೋಗಿಯೊಬ್ಬರು ಕಲಾಮಸ್ಸೆರಿ ವೈದ್ಯಕೀಯ ಕಾಲೇಜಿನಲ್ಲಿ ಬೆಳಿಗ್ಗೆ 8:00 ಗಂಟೆಗೆ ನಿಧನರಾದರು. ರೋಗಿಯು ಇತ್ತೀಚೆಗೆ ದುಬೈನಿಂದ ಬಂದಿದ್ದರು ಮತ್ತು ಸಂಪರ್ಕ ತಡೆಯಲ್ಲಿದ್ದರು ಎಂದು ತಿಳಿದುಬಂದಿದೆ.
ವ್ಯಕ್ತಿಯು ಮಾರ್ಚ್ 16 ರಂದು ಕೇರಳಕ್ಕೆ ಆಗಮಿಸಿದ್ದರು. ಮಾರ್ಚ್ 22 ರಂದು ಕೊರೊನಾ ವೈರಸ್ ಇರುವುದು ಪತ್ತೆಯಾಗಿತ್ತು ಎಂದು ವೈದ್ಯಕೀಯ ಕಾಲೇಜು ನೋಡಲ್ ಅಧಿಕಾರಿ ಎ ಫಥಾಹುದೀನ್ ಹೇಳಿದ್ದಾರೆ. ಅವರು ಹೃದಯ ಕಾಯಿಲೆ ಮತ್ತು ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಈ ಹಿಂದೆ ಅವರು ಬೈಪಾಸ್ ಶಸ್ತ್ರಚಿಕಿತ್ಸೆಗೂ ಸಹ ಒಳಗಾಗಿದ್ದರು.
ಅವರು ಬಂದ ವಿಮಾನದಲ್ಲಿ ನಲವತ್ತೊಂಬತ್ತು ಪ್ರಯಾಣಿಕರು ಸಂಪರ್ಕ ತಡೆಯಲ್ಲಿದ್ದರು. ಅವರ ಆಪ್ತ ಸಂಬಂಧಿ ಹಾಗೂ ಅವರನ್ನು ವಿಮಾನ ನಿಲ್ದಾಣದಿಂದ ಕರೆದುಕೊಂಡು ಹೋದ ಚಾಲಕ ಕೊರೊನ ವೈರಸ್ ಪಾಸಿಟಿವ್ ಆಗಿದ್ದಾರೆ.
ಮೃತರು ಬಂದ ನಂತರ ಇತರರೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿರದ ಕಾರಣ, ಅವರ ಮಾರ್ಗ ನಕ್ಷೆಯನ್ನು ಮಾಡಲಾಗಿಲ್ಲ.
ಕೇರಳವು ಶುಕ್ರವಾರ ಹೊಸದಾಗಿ 39 ಕೊರೊನ ವೈರಸ್ ಪ್ರಕರಣಗಳನ್ನು ವರದಿ ಮಾಡಿದೆ, ಚಿಕಿತ್ಸೆಯಲ್ಲಿರುವ ಒಟ್ಟು ಜನರ ಸಂಖ್ಯೆ 164 ಕ್ಕೆ ಏರಿದೆ. ರಾಜ್ಯದಿಂದ ದೃಢಪಡಿಸಿದ ಒಟ್ಟು ಪ್ರಕರಣಗಳ ಸಂಖ್ಯೆ 176, ಆದರೆ, ಇದರಲ್ಲಿ 12 ಪ್ರಕರಣಗಳಲ್ಲಿ ರೋಗಿಗಳು ಚೇತರಿಸಿಕೊಂಡಿದ್ದಾರೆ.
ಕಾಸರಗೋಡಿನಿಂದ ಅತೀ ಹೆಚ್ಚು ಅಂದರೆ 76 ಪ್ರಕರಣಗಳು ವರದಿಯಾಗಿದೆ. ಕೇರಳದ ಎಲ್ಲಾ 14 ಜಿಲ್ಲೆಗಳು ಸಾಂಕ್ರಾಮಿಕ ರೋಗದಿಂದ ಬಳಲುತ್ತಿವೆ. ಬಾಧಿತರಾದವರಲ್ಲಿ ಹೆಚ್ಚಿನವರು ಗಲ್ಫ್‌ನ ಅನಿವಾಸಿ ಭಾರತೀಯರು. ಕೇರಳದಲ್ಲಿ ಒಟ್ಟು 1,10,299 ಜನರು 616 ವಿವಿಧ ಆಸ್ಪತ್ರೆಗಳ ಪ್ರತ್ಯೇಕ ವಾರ್ಡ್‌ಗಳಲ್ಲಿದ್ದಾರೆ.
ಭಾರತದಲ್ಲಿ ಒಟ್ಟು 906 ಪಾಸಿಟಿವ್ ಪ್ರಕರಣಗಳು ಹಾಗೂ ಈಗಾಗಲೇ 20 ಸಾವು ದಾಖಲಾಗಿದೆ.


