ಕೊರೊನಾ ವೈರಸ್ ನಿರ್ಬಂಧಿತ ಕ್ರಮಗಳನ್ನು ಪ್ರಶ್ನಿಸಿದ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ಎರಡು ಟ್ವೀಟ್‌ಗಳನ್ನು ಅವರು ಸಾಮಾಜಿಕ ಜಾಲತಾಣದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಟ್ವಿಟ್ಟರ್ ತೆಗೆದುಹಾಕಿದೆ
ತೀವ್ರ ಬಲಪಂಥೀಯ ನಾಯಕನಾದ ಬೋಲ್ಸನಾರೊ ಹಲವಾರು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದರು. ಅವರು ತಮ್ಮ ಸರ್ಕಾರದ ಸಾಮಾಜಿಕ ಅಂತರದ ಮಾರ್ಗಸೂಚಿಗಳನ್ನು ಮುರಿದು ಬ್ರೆಸಿಲಿಯಾದ ಬೀದಿಗಳಲ್ಲಿ ಬೆಂಬಲಿಗರೊಂದಿಗೆ ಬೆರೆತು ಆರ್ಥಿಕತೆಯನ್ನು ಮುಂದುವರೆಸುವಂತೆ ಒತ್ತಾಯಿಸಿದ್ದರು.
ಎರಡು ಪೋಸ್ಟ್‌ಗಳನ್ನು ತೆಗೆದುಹಾಕಿದೆಯಲ್ಲದೆ ಅವುಗಳನ್ನು ಏಕೆ ತೆಗೆದುಹಾಕಲಾಗಿದೆ ಎಂಬುದನ್ನು ವಿವರಿಸುವ ನೋಟೀಸ್ ಅನ್ನು ಟ್ವಿಟ್ಟರ್ ನೀಡಿದೆ.
ಅಧಿಕೃತ ಮೂಲಗಳ ಪ್ರಕಾರ ಟ್ವಿಟ್ಟರ್ ಸಾರ್ವಜನಿಕ ಆರೋಗ್ಯ ಮಾಹಿತಿಗೆ ವಿರುದ್ಧವಾದ ವಿಷಯವನ್ನು ನಿರ್ವಹಿಸುವ ಕುರಿತು ತನ್ನ ಜಾಗತಿಕ ನಿಯಮಗಳನ್ನು ಇತ್ತೀಚೆಗೆ ವಿಸ್ತರಿಸಿದೆ. ಜನರು ಒಂದೆಡೆ ಸೇರುವುದರಿಂದ ಕೊರೊನಾ ಹರಡುವ ಹೆಚ್ಚಿನ ಅಪಾಯವಿದೆ ಎಂದು ಟ್ವಿಟರ್ ಹೇಳಿಕೆಯಲ್ಲಿ ವಿವರಿಸಿದೆ.
ಅಳಿಸಿದ ವೀಡಿಯೊವೊಂದರಲ್ಲಿ, ಬೋಲ್ಸನಾರೊ ಒಬ್ಬ ಬೀದಿ ಮಾರಾಟಗಾರನಿಗೆ, “ನಾನು ಜನರಿಂದ ಕೇಳುತ್ತಿರುವುದು ಅವರು ಕೆಲಸ ಮಾಡಲು ಬಯಸುತ್ತಾರೆ”. “ನಾನು ಮೊದಲಿನಿಂದಲೂ ಹೇಳಿದ್ದು, ‘ನಾವು ಜಾಗರೂಕರಾಗಿರುತ್ತೇವೆ, 65 ವರ್ಷಕ್ಕಿಂತ ಮೇಲ್ಪಟ್ಟವರು ಮನೆಯಲ್ಲಿಯೇ ಇರುತ್ತಾರೆ’ ಎಂದು ಅವರು ಹೇಳಿದ್ದರು.
“ನಾವು ಇನ್ನೂ ಮನೆಯಲ್ಲಿ ನಿಲ್ಲಲು ಸಾಧ್ಯವಿಲ್ಲ, ಭಯವಿದೆ, ಯಾಕೆಂದರೆ ನೀವು ರೋಗದಿಂದ ಸಾಯದಿದ್ದರೆ, ನೀವು ಹಸಿವಿನಿಂದ ಬಳಲುತ್ತಿದ್ದೀರಿ” ಎಂದು ಮಾರಾಟಗಾರ ಬೋಲ್ಸೊನಾರೊಗೆ ಹೇಳುತ್ತಾರೆ. ಆಗ ಅವರು ಪ್ರತಿಕ್ರಿಯಿಸುತ್ತಾ “ನೀವು ಸಾಯುವುದಿಲ್ಲ!” ಎನ್ನುತ್ತಾರೆ.
ಮತ್ತೊಂದು ವೀಡಿಯೊದಲ್ಲಿ, ಅಧ್ಯಕ್ಷರು “ಸಾಮಾನ್ಯ ಸ್ಥಿತಿಗೆ ಮರಳಬೇಕು” ಎಂದು ಹೇಳುತ್ತಾರೆ. ದಕ್ಷಿಣ ಅಮೆರಿಕಾದಾದ್ಯಂತ ಗವರ್ನರ್‌ಗಳು ಮತ್ತು ಕೆಲವು ಮೇಯರ್‌ಗಳು ವಿಧಿಸಿರುವ ಸಂಪರ್ಕತಡೆಯನ್ನು ಪ್ರಶ್ನಿಸಿದ್ದಾರೆ.
“ಇದೇ ರೀತಿ ಮುಂದುವರಿದರೆ, ನಿರುದ್ಯೋಗದ ಪ್ರಮಾಣವು ಹೆಚ್ಚಿ ಬಹಳ ಗಂಭೀರ ಸಮಸ್ಯೆಯಾಗಲಿದ್ದು, ಅದನ್ನು ಪರಿಹರಿಸಲು ವರ್ಷಗಳು ಬೇಕಾಗುತ್ತವೆ” ಎಂದು ಅವರು ಪ್ರತ್ಯೇಕತೆಯ ಕ್ರಮಗಳ ಬಗ್ಗೆ ಹೇಳಿದ್ದಾರೆ.
“ಬ್ರೆಜಿಲ್ ಅನ್ನು ನಿಲ್ಲಿಸಲು ಸಾಧ್ಯವಿಲ್ಲ. ನಾವು ವೆನೆಜುವೆಲಾ ಆಗಿ ಬದಲಾಗುತ್ತೇವೆ” ಎಂದು ಬೋಲ್ಸನಾರೊ ನಂತರ ತಮ್ಮ ಅಧಿಕೃತ ನಿವಾಸದ ಹೊರಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬ್ರೆಜಿಲ್ ಆರೋಗ್ಯ ಸಚಿವ ಲೂಯಿಜ್ ಹೆನ್ರಿಕ್ ಮಾಂಡೆಟ್ಟಾ “ಬ್ರೆಜಿಲ್‌ನಲ್ಲಿ ಈಗಾಗಲೇ 3,904 ಜನರಿಗೆ ಸೋಂಕು ತಗುಲಿದ್ದು, 114 ಮಂದಿ ಸಾವನ್ನಪ್ಪಿದ್ದಾರೆ” ಎಂದು ತಿಳಿಸಿದ್ದಾರೆ.
“ವೈರಸ್ ಅನ್ನು ವಾಸ್ತವದೊಂದಿಗೆ ಎದುರಿಸೋಣ. ಇದು ಜೀವನ, ನಾವೆಲ್ಲರೂ ಒಂದು ದಿನ ಸಾಯಬೇಕು” ಎಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ನಾಲ್ಕು ವೀಡಿಯೊಗಳಲ್ಲಿ, ಬೋಲ್ಸನಾರೊ ಅವರು ಸಣ್ಣ ಜನಸಂದಣಿಯಿಂದ ಸುತ್ತುವರೆದಿದ್ದರು. ಈ ಕಾರಣಕ್ಕಾಗಿ ಟ್ವಿಟ್ಟರ್ ಅವರ ಟ್ವೀಟ್‌ಗಳನ್ನು ಅಳಿಸಿಹಾಕಿದೆ.
ಬೋಲ್ಸೊನಾರೊ ಕೊರೊನ ವೈರಸ್ ಅನ್ನು “ಜ್ವರ” ಎಂದು ಬಣ್ಣಿಸಿದ್ದಾರೆ ಮತ್ತು ಶಾಲೆಗಳು ಮತ್ತು ಅಂಗಡಿಗಳನ್ನು ಪುನಃ ತೆರೆಯಬೇಕೆಂದು ಪ್ರತಿಪಾದಿಸಿದ್ದಾರೆ. ಸ್ವಯಂ-ಪ್ರತ್ಯೇಕತೆಯು 60 ಕ್ಕಿಂತಲೂ ಹೆಚ್ಚು ವಯಸ್ಸಿನವರಿಗೆ ಮಾತ್ರ ಅಗತ್ಯವಾಗಿದೆ ಎಂದಿದ್ದಾರೆ.


