ಶ್ರೀಮಂತರು, ಉದ್ಯಮಿಗಳು ಎಷ್ಟು ಬೇಕಾದರೂ ದೇಣಿಗೆ ಕೊಡಬಹುದು. ಆದರೆ ಬಡ ಬಾಲಕನೊಬ್ಬ ಕೂಡಿಟ್ಟಿದ್ದ 3500/- ಹುಂಡಿ ಹಣವನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡುವ ಮೂಲಕ ಎಲ್ಲರ ಮನೆಮಾತಾಗಿರುವ ಘಟನೆ ಜರುಗಿದೆ.
ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡುವುದಕ್ಕೆ ಅಗತ್ಯವಾದಷ್ಟು ಆರೋಗ್ಯ ಸಾಮಾಗ್ರಿಗಳು ಭಾರತದಲ್ಲಿ ಲಭ್ಯವಿಲ್ಲ. ಮತ್ತೊಂದೆಡೆ ದೇಶ ಆರ್ಥಿಕವಾಗಿಯೂ ಕುಗ್ಗುತ್ತಿದೆ. ಹೀಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪ ಕೊರೋನಾ ವಿರುದ್ಧದ ಹೋರಾಟಕ್ಕೆ ಜನ ಹೆಚ್ಚು ಹೆಚ್ಚು ದೇಣಿಗೆ ನೀಡುವಂತೆ ಮನವಿ ಮಾಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಕರೆಗೆ ಓಗೊಟ್ಟಿರುವ ದೇಶದ ಅನೇಕ ವರ್ಗದ ಜನ ಕೊರೋನಾ ತಡೆಗೆ ಕೋಟ್ಯಾಂತರ ರೂ. ದೇಣಿಗೆ ನೀಡುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ. ಆದರೆ, ಈ ನಡುವೆ ರಾಯಚೂರಿನ ಓರ್ವ ಪುಟ್ಟ ಶಾಲಾ ಬಾಲಕ ತಾನು ಕೂಡಿಟ್ಟಿರುವ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.
ಈತನ ಹೆಸರು ಸದೃಶ ಶಶಿಧರ ಹಿರೇಮಠ. ರಾಯಚೂರಿನ ಮಸ್ಕಿ ಪಟ್ಟಣದ ಮಹಾಂತಮ್ಮ ಲಿಂಗನಗೌಡ ಬಯ್ಯಾಪುರ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ಈತ ತಾನು ಪ್ರತಿನಿತ್ಯ ಹುಂಡಿಯಲ್ಲಿ ಕೂಡಿಟ್ಟಿದ್ದ ಒಂದೊಂದೇ ರೂಪಾಯಿಯನ್ನು ಜೋಡಿಸಿ ಸುಮಾರು 3565 ರೂಪಾಯಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾನೆ.
ಅಲ್ಲದೆ, ಈ ಹಣ ಕೊರೋನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ಸಹಾಯಕವಾಗಲಿ ಎಂದೂ ತಿಳಿಸಿದ್ದಾನೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ
ಪುಟ್ಟ ಬಾಲಕನ ಈ ಸಮಾಜಮುಖಿ ಕಾರ್ಯ ಇದೀಗ ರಾಜ್ಯವ್ಯಾಪಿ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಹಲವರು ಈ ಬಾಲಕನ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.


