ಪ್ರಿಯ ಓದುಗರೇ,
ನಮ್ಮ ಕೃಷಿಯಲ್ಲಿ ಅಷ್ಟೊಂದು ಕಡಿಮೆ ಆದಾಯವಿದ್ದರೂ ಗ್ರಾಮೀಣ ಭಾಗ ಹೇಗೆ ಬದುಕುತ್ತಿದೆ ಎಂಬುದಕ್ಕೆ ಇದ್ದ ಮೂರ್ನಾಲ್ಕು ಉತ್ತರಗಳಲ್ಲಿ ಒಂದು ʼನಗರಗಳಲ್ಲಿ ದುಡಿಯುವ ಹಳ್ಳಿ ಮಕ್ಕಳು ಹಳ್ಳಿಗಳಿಗೆ ಹಣ ಕಳಿಸಿ ಕ್ರಾಸ್ ಸಬ್ಸಿಡೈಸ್ ಮಾಡುವುದರ ಮುಖಾಂತರʼ ಎಂಬುದೂ ಒಂದು. ಈಗ ಆ ಹಳ್ಳಿ ಮಕ್ಕಳು ಊರಿನ ಕಡೆಗೆ ಮುಖ ಮಾಡಿದ್ದಾರೆ. ಇದರ ಪರಿಣಾಮವೇನಾಗಬಹುದು ಎಂದಷ್ಟೇ ಚರ್ಚೆ ಮಾಡದೇ, ಪರಿಹಾರವೇನಿರಬಹುದು ಎಂಬುದನ್ನೂ ಹುಡುಕಬೇಕಿದೆ. ಇಂಥದ್ದರ ಬಗ್ಗೆಯೇ ತಲೆ ಕೆಡಿಸಿಕೊಂಡು ತಳಮಟ್ಟದಲ್ಲಿ ಪ್ರಾಯೋಗಿಕವಾದ ಸಲಹೆಗಳನ್ನು ಮುಂದಿಡುವುದರಲ್ಲಿ ಕೆ.ಪಿ.ಸುರೇಶ ಅವರು ಸದಾ ಮುಂದು.
ಅವರ ಈ ಬರಹದೊಂದಿಗೆ ಆರಂಭಿಸಿ ಇದನ್ನೊಂದು ರಚನಾತ್ಮಕ ಆಂದೋಲನವನ್ನಾಗಿ ಮಾಡುವ ಕುರಿತು ನಾನುಗೌರಿ.ಕಾಂ ಗಂಭೀರವಾಗಿ ಆಲೋಚಿಸಿದೆ. ನೀವೆಲ್ಲರೂ ಕೈ ಜೋಡಿಸಬೇಕೆಂದು ತಮ್ಮಲ್ಲಿ ಮನವಿ. ಹೇಗೆ ಮುಂದುವರೆಯಬಹುದು ಎಂಬುದರ ಕುರಿತು ಕೆಲವು ಸಂಗತಿಗಳು ನಿಮಗೆ ಇದನ್ನು ಓದಿದರೆ ಸ್ಪಷ್ಟವಾಗುತ್ತವೆ. ಮುಖ್ಯವಾಗಿ ಈ ಚರ್ಚೆಯನ್ನು ಬೆಳೆಸುವುದು ಮತ್ತು ಅದು ಕ್ರಿಯಾಶೀಲತೆಗೆ ದಾರಿ ಮಾಡಿಕೊಡುವುದು ಆಗಬೇಕು. ನಿಮ್ಮ ಪ್ರತಿಕ್ರಿಯೆಗಳನ್ನು 9353666821 ಅಥವಾ [email protected]ಗೆ ಕಳಿಸಬಹುದು.
-
-
-
-
-
-
-
-
-
-
-
-
-
-
-
-
-
-
-
-
-
-
-
-
-
- ಸಂಪಾದಕ
-
-
-
-
-
-
-
-
-
-
-
-
-
-
-
-
-
-
-
-
-
-
-
-
ಕೊರೊನಾ ಸಂದರ್ಭದಲ್ಲಿ ವಲಸೆಯೆಂಬ ವಿದ್ಯಮಾನ
ನಮ್ಮ ಗ್ರಾಮಾಂತರದಲ್ಲಿ ಭೀಕರ ಅಕಾಲಿಕ ರಿವರ್ಸ್ ವಲಸೆ ನಿಜವಾಗಿದೆ. ಲಕ್ಷಾಂತರ ಯುವಕರು ಮರಳಿ ಹುಟ್ಟೂರಿಗೆ ಬಂದಿದ್ದಾರೆ. ಇದು ಸೃಷ್ಟಿಸಿರುವ ಬಿಕ್ಕಟ್ಟು ದೀರ್ಘಕಾಲಿಕವಾದರೆ ಅದನ್ನು ನಿಭಾಯಿಸುವುದು ಹೇಗೆ?

ಮೂಲತಃ ಅಸಂಘಟಿತ ನಗರ ಕಾರ್ಮಿಕರಾಗಿದ್ದ ಇವರು ನಿಗದಿತವಾಗಿ ಊರಿಗೆ ಹಣ ಕಳಿಸುತ್ತಿದ್ದರು. ಈಗ ಬರಬೇಕಾದ ಹಣವೂ ಇಲ್ಲದೇ ಹಠಾತ್ ಉದ್ಯೋಗ ಅಂತ್ಯವಾಗಿ ಮರಳುವ ಅವರ ಮಾನಸಿಕ ಸ್ಥಿತಿ ಬಗ್ಗೆ ಯೋಚಿಸಬೇಕಿದೆ. ಒಂದು ಹಳ್ಳಿಯ ಸಶಕ್ತ ಯುವ ಪಡೆ ಇದು. ತಕ್ಕ ಮಟ್ಟಿಗೆ ಬುದ್ಧಿಶಾಲಿಗಳು ಕೂಡಾ. (ಹೀಗಿದ್ದವರಷ್ಟೇ ನಗರದಲ್ಲಿ ಏಗಬಹುದಷ್ಟೇ!).
ಹಳ್ಳಿಯ ತಮ್ಮ ತಮ್ಮ ಕುಟುಂಬಗಳಿಗೆ ಅನ್ನದಾತರಾಗಿದ್ದವರು ಈಗ ತಾವೇ ಅವಲಂಬಿತರಾಗುವ ಸನ್ನಿವೇಶ ಇದೆ.
ರಜಾಕ್ಕೆ ಬಂದಾಗ ಬಹುತೇಕ ಓಡಾಡಿಕೊಂಡೇ ರಿಲಾಕ್ಸ್ ಆಗುತ್ತಿದ್ದ ಇಂಥಾ ಯುವಕರನ್ನು ನಾನು ನೋಡಿದ್ದೇನೆ. ತೇಜಸ್ವಿಯವರ ಕತೆಯಲ್ಲಿ ಬರುವಷ್ಟು ಕ್ಯಾರಿಕೇಚರ್ ಅಲ್ಲದಿದ್ದರೂ ಕೃಷಿ ಕೆಲಸಕ್ಕೆ ಒಲಿಯುವ ಹಂತ ದಾಟಿದ್ದಾರೆ.
ಕನಿಷ್ಠ ಮುಂದಿನ ಆರು ತಿಂಗಳ ಕಾಲ (ಪವಾಡದ ಹೊರತಾಗಿ) ಈ ಯುವಕರಿಗೆ ನಗರದ ಉದ್ಯೋಗ ಲಭ್ಯವಾಗುವುದು ಕಷ್ಟವೇ. ಈ ಕಟು ವಾಸ್ತವದ ಹಿನ್ನೆಲೆಯಲ್ಲಿ ದಿನಗಳೆದಂತೆ ಅವರ ಮನೆಯಲ್ಲಿ ಅವರ ಪಾತ್ರ ಏನಾಗುತ್ತದೆ? ಕುಟುಂಬದ ಆದಾಯದ ಮೂಲ ಬತ್ತುತ್ತಾ ಕೃಷಿ ಹಂಗಾಮಿನ ಕೆಲಸಗಳಿಗೆ ಬಂಡವಾಳ ಹೂಡಲೇಬೇಕಾದ ಒತ್ತಡದಲ್ಲಿ ಇವರ ಉಪಯುಕ್ತತೆಯನ್ನು ಹೆಚ್ಚಿಸದಿದ್ದರೆ ಇವರೆಲ್ಲಾ ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುವ ಸಾಧ್ಯತೆ ಇದೆ.
ಹಾಗಾದರೆ ಏನು ಮಾಡಬಹುದು?
ಆದರೆ ಈ ಸದ್ಯೋಸ್ಥಿತಿಯಲ್ಲಿ ಒಂದು ಆಶಾಕಿರಣವೂ ಇದೆ. ಈ ಯುವಕರು ನಗರ ನೋಡಿದವರು. ಸುಮಾರಾಗಿ ಹೊಸ ತಂತ್ರೋಪಕರಣ, ಜ್ಞಾನವನ್ನು ಬಳಸುವ ಕೌಶಲ್ಯ ಅಷ್ಟಿಷ್ಟಾದರೂ ಬೆಳೆಸಿಕೊಂಡವರು.
ಇವರಿಗಿರುವ ಕೌಶಲ್ಯವನ್ನು ಬಳಸಿಕೊಂಡು ಗ್ರಾಮಗಳ ಸ್ವಾವಲಂಬೀ ಕೊಡು-ಕೊಳು ವಸ್ತು ಉತ್ಪಾದನೆಗೆ ಸಹಾಯವಾಗಬಹುದು. ಮಿಶ್ರ ಬೆಳೆಯ ಆಹಾರೋತ್ಪಾದನೆಯ ಬೇಸಾಯದಿಂದ ಹಿಡಿದು ಸಣ್ಣ ಮಟ್ಟಿನ ಮೌಲ್ಯವರ್ಧನೆ, ಯಂತ್ರೋಪಕರಣ ರಿಪೇರಿ ಇವನ್ನೆಲ್ಲಾ ಸಾಧ್ಯಗೊಳಿಸಬಹುದು. ಈ ಲಾಕ್‌ಡೌನ್ ಇನ್ನೊಂದು ತಿಂಗಳು ಮುಂದುವರೆದರೂ ಹಳ್ಳಿಗಳಲ್ಲಿ ಕೃಷಿ ಸಂಬಂಧೀ ಜೀವನೋಪಾಯಗಳ ಬಗ್ಗೆ ವಿಚಾರ ವಿನಿಮಯದ ಸಭೆಗಳನ್ನು ಮಾಡುವುದೂ ತ್ರಾಸದಾಯಕ. ಆದರೆ ಒಂದಷ್ಟು ಗ್ರಾಮಾಭಿವೃದ್ಧೀ- ಕೃಷಿಯಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳು ವ್ಯಕ್ತಿಗಳು ಏನು ಮಾಡಬಹುದು ಎಂಬುದನ್ನು ವಿಡಿಯೋ ಮುಖಾಂತರ ವಾಟ್ಸಪ್ ನಂಬರ್‌ಗೆ (9353666821) ಮೂಲಕ ಹಂಚಿಕೊಳ್ಳಬಹುದು.

ಇನ್ನೂ ಸಾರಾಂಶ ರೂಪದಲ್ಲಿ ಹೇಳಬೇಕೆಂದರೆ.
- ಸಣ್ಣ ರೈತರಿಗೆ ಈ ಬಾರಿ ಆಹಾರದ ಸ್ವಾವಲಂಬಿತನ ಮುಖ್ಯ ಎಂಬುದನ್ನು ಒತ್ತಿ ಹೇಳಬೇಕಿದೆ. ಇದಕ್ಕೆ ದೊಡ್ಡ ಮಟ್ಟಿನ ಒಳಸುರಿಗಳ ಅಗತ್ಯವೂ ಇಲ್ಲ. ತನಗಿರುವ ಜಮೀನಿನ ಅರ್ಧಾಂಶದಲ್ಲಾದರೂ ಶೇ.60 ಆಹಾರ ಬೆಳೆ, ಶೇ.20 ದ್ವಿದಳ ಧಾನ್ಯ ಉಳಿದ ಶೇ.20ರಲ್ಲಿ ತರಕಾರಿ ಇತ್ಯಾದಿ ಬೆಳೆಸುವ ಬೆಳೆ ವಿನ್ಯಾಸವನ್ನು ರೈತರಿಗೆ ಹೇಳಬೇಕಿದೆ.
- ಇದಕ್ಕೆ ಬೇಕಾದ ಬೀಜ ಲಭ್ಯತೆಯನ್ನು ಒದಗಿಸುವುದು ಸವಾಲೇ ಸರಿ. ಆದರೆ ಒಂದಷ್ಟು ಕೆಲಸ ಮಾಡಿದರೆ ಈ ಬೀಜದ ಕೊಡು-ಕೊಳು ಕಷ್ಟವಲ್ಲ.
- ಕೆಲವು ಸರಳ ದ್ರವ ಗೊಬ್ಬರಗಳನ್ನು ತಯಾರಿಸಿಕೊಳ್ಳುವ ಬಗ್ಗೆ ಮಾರ್ಗದರ್ಶನ ಮಾಡುವುದು ಕಷ್ಟವಲ್ಲ( ಉದಾ: ಪಂಚಗವ್ಯ ಇತ್ಯಾದಿ)
- ಸ್ವಸಹಾಯ ಸಂಘದ ಮಹಿಳೆಯರು ಈ ಬಾರಿಯ ಬೇಸಾಯದ ಬೆಳೆಗಳ ಆದ್ಯತೆ ಏನು ಎಂಬುದನ್ನು ನಿರ್ಧರಿಸುವಂತಾಗಬೇಕು. ಬಂಡವಾಳವೂ ಅವರಿಂದಲೇ ಬರಬೇಕಷ್ಟೇ!!
- ಇದರೊಂದಿಗೇ ಈ ಬೇಸಿಗೆಯಲ್ಲಿ ಲಭ್ಯವಿರುವ ಉತ್ಪನ್ನಗಳ ಸಣ್ಣ ಪ್ರಮಾಣದ ಪ್ರಾಥಮಿಕ ಮೌಲ್ಯ ವರ್ಧನೆಗೆ ಎಲ್ಲೆಲ್ಲಿ ಅವಕಾಶ ಇದೆ ಅಲ್ಲೆಲ್ಲಾ ಮಾಡುವಂತೆ ಪ್ರೇರೇಪಿಸಬೇಕಿದೆ (ಉದಾ: ತೊಕ್ಕು, ಉಪ್ಪಿನಕಾಯಿ ಇತ್ಯಾದಿ) ಈ ಉತ್ಪನ್ನಗಳಿಗೆ ನೆರೆ-ಕರೆ; ಅಕ್ಕಪಕ್ಕದ ಸಣ್ಣ ಹೋಬಳಿಗಳಲ್ಲೂ ಬೇಡಿಕೆ ಕುದುರುವುದು ಖಂಡಿತ . (ಈ ಲಾಕ್‌ಡೌನ್ ಕಾರಣದಿಂದ ಇಂಥಾ ವಸ್ತುಗಳ ಸಪ್ಲೈ ಚೈನ್ ಪೂರಾ ಕುಸಿದಿದೆ)
- ಯಂತ್ರೋಪಕರಣ ರಿಪೇರಿ ಇತ್ಯಾದಿಗೆ ಈ ವಾಪಾಸು ಬಂದ ಯುವಕರ ಕೌಶಲ್ಯವನ್ನೇ ಇಟ್ಟುಕೊಂಡು ಸಮುದಾಯ ಮಟ್ಟದ ಸಹಕಾರೀ ರಿಪೇರಿ ಮೈಂಟೈನೆನ್ಸ್ ಸಾಧ್ಯವಾದರೆ ಪಟ್ಟಣಗಳಿಗೆ ಹೋಗುವ ಪರದಾಟ ನಿಂತೀತು.
ಇಂಥಾ ಹತ್ತಾರು ವಿಚಾರಗಳನ್ನು ಇತರರೂ ತಮ್ಮ ತಮ್ಮ ಗ್ರಾಮದ ಸ್ಥಿತಿಗನುಗುಣವಾಗಿ ರೂಪಿಸಬಹುದು.
ಈ ಯುವಕರು ವಾಪಾಸು ಬಂದಿದ್ದು ನಮ್ಮ ಗ್ರಾಮಕ್ಕೆ ವರ ಎಂಬ ಭಾವವನ್ನು ನಮ್ಮ ಗ್ರಾಮಸ್ಥರು ಬೆಳೆಸದಿದ್ದರೆ ಕೌಟುಂಬಿಕ ಮಟ್ಟದಲ್ಲೂ ಖಿನ್ನತೆ ವಿಷಮಗೊಂಡೀತು.
ರೈತರ ಜೊತೆ ಕೆಲಸ ಮಾಡುತ್ತಿರುವ ಒಂದಷ್ಟು ಸಂಸ್ಥೆಗಳ ಗೆಳೆಯರ ಜೊತೆ ಚರ್ಚಿಸಿದ ಅಂಶಗಳನ್ನು ಇಲ್ಲಿ ಬರೆಹ ರೂಪಕ್ಕಿಳಿಸಿದ್ದೇನೆ. ಈಗ ಇದನ್ನೊಂದು ಅಭಿಯಾನವನ್ನಾಗಿ ಮಾಡುವುದು ನಿಮ್ಮೆಲ್ಲರಿಗೆ ಬಿಟ್ಟಿದ್ದು. ನಾನುಗೌರಿ.ಕಾಂ ಅವರು ಇದಕ್ಕೊಂದು ವೇದಿಕೆ ಕಲ್ಪಿಸಿದ್ದು ಒಳ್ಳೆಯದು. ಆದರೆ ಇದನ್ನು ಎಲ್ಲರೂ ಮಾಡಬೇಕು ಮತ್ತು ಸರ್ಕಾರದ ನೀತಿ ನಿರ್ಧಾರಕ ಸ್ಥಾನಗಳಲ್ಲಿರುವವರಿಗೂ ಇದನ್ನು ಟ್ಯಾಗ್ ಮಾಡಬೇಕಿದೆ.


