Homeಮುಖಪುಟಕೊರೋನ ವೈರಸ್‌ನ ಧರ್ಮ, ಜಾತಿ ಯಾವುದು?

ಕೊರೋನ ವೈರಸ್‌ನ ಧರ್ಮ, ಜಾತಿ ಯಾವುದು?

ಕೊರೋನಕ್ಕೆ ಧಾರ್ಮಿಕ ಬಣ್ಣ ಬಳಿಯುವುದು, ಜನರನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುವ ಸಾಮರ್ಥ್ಯವನ್ನು ಪರೀಕ್ಷಿಸುವುದು ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಕೊರೋನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಸರಕಾರದ ವೈಫಲ್ಯದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದು ಮೋದಿಯವರ ಉದ್ದೇಶವಾಗಿದೆ.

- Advertisement -
- Advertisement -

ಕೊರೋನದ ಜಾತಿ, ಧರ್ಮ ಮತ್ತು ವರ್ಗ ಯಾವುದು ಎಂದು ಕೇಳಿದರೆ, ಪ್ರಪಂಚದಲ್ಲಿ ಬುದ್ಧಿ ನೆಟ್ಟಗಿರುವ ಎಲ್ಲರೂ ಹುಬ್ಬೇರಿಸಿ ದಿಟ್ಟಿಸಿ ನೋಡಬಹುದು. ಆದರೆ, ನಂಬಲಾಗದ ಚಿತ್ರವಿಚಿತ್ರಗಳಿಂದ ತುಂಬಿರುವ ದೇಶಗಳಲ್ಲಿ ಅಗ್ರಗಣ್ಯವಾಗಿರುವ ಭಾರತದಲ್ಲಿ ಅನೇಕರಿಗೆ ಇದು ಒಂದು ಅಸಂಬದ್ಧ, ಮೂರ್ಖ ಪ್ರಶ್ನೆಯಾಗಿ ಕಾಣುವುದಿಲ್ಲ. ಮಾರಿ ಪೂಜೆಯ ಮೂಲಕ ರೋಗಗಳನ್ನು ದೂರ ಇಡುವ ನಂಬಿಕೆ ಇರುವ ಅವರಿಗೆ ಮಾರಕ ರೋಗಳಲ್ಲೂ ಜಾತಿ ಧರ್ಮಗಳು ಕಾಣುತ್ತವೆ. ಯಾವುದೇ ರೋಗಾಣು ಜಾತಿ, ಧರ್ಮ, ಬಡವ, ಶ್ರೀಮಂತ ಇತ್ಯಾದಿ ಭೇದ ನೋಡಿಕೊಂಡು ಬರುವುದಿಲ್ಲ ಮತ್ತು ಎಲ್ಲರೂ ಯಾವುದೇ ಭಿನ್ನಾಭಿಪ್ರಾಯ ಮರೆತು ಒಂದು ಪಿಡುಗಿನ ವಿರುದ್ಧ ಹೋರಾಡಬೇಕಾಗುತ್ತದೆ. ಯಾರೇ ಹಿಂಜರಿದರೂ ಎಲ್ಲರಿಗೂ ಅಪಾಯ ಕಟ್ಟಿಟ್ಟ ಬುತ್ತಿ.

ಕೊರೋನ ಒಂದು ಜಾಗತಿಕ ಪಿಡುಗಾಗಿ ಹೊರಹೊಮ್ಮಿದ್ದು, ಹಲವಾರು ಯುದ್ಧಗಳಲ್ಲಿ ಆಸ್ಪತ್ರೆಗಳ ಸಹಿತ ಆರೋಗ್ಯ ಸೇವೆಗಳೇ ಕುಸಿದು ಬಿದ್ದಿರುವ ಹಿನ್ನೆಲೆಯಲ್ಲಿ ಜಾಗತಿಕ ಕದನ ವಿರಾಮ ಘೋಷಿಸುವಂತೆ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಅಂತೋನಿಯೋ ಗುತೆರೆಜ಼್ ಅವರ ಮೇಲೆ ಅಪಾರ ಒತ್ತಡ ಬೀಳುತ್ತಿದೆ. ಪೋಪ್ ಸಹಿತ ಹಲವು ಜಾಗತಿಕ ಧಾರ್ಮಿಕ ನಾಯಕರು ತಮ್ಮೆಲ್ಲಾ ಕರ್ಮಠತೆಗಳನ್ನು ಬದಿಗಿಟ್ಟು, ಕೊರೋನ ವಿರುದ್ಧದ ಹೋರಾಟದಲ್ಲಿ ಸಹಕರಿಸುವಂತೆ ಕೋರಿದ್ದಾರೆ. ಪ್ರಾರ್ಥನೆಗಳನ್ನೆಲ್ಲಾ ಮನೆಯಲ್ಲೇ ಇದ್ದುಕೊಂಡು ಮಾಡುವುದು, ಪೂಜಾಸ್ಥಳಗಳಲ್ಲಿ ಗುಂಪು ಸೇರದಿರುವುದು, ಧರ್ಮ ಭೇದ ಮಾಡದೇ ಪೀಡಿತರಿಗೆ ನೆರವಾಗುವುದು ಅವರು ನೀಡಿರುವ ಸೂಚನೆಗಳಲ್ಲಿ ಅತೀ ಮುಖ್ಯವಾಗಿದೆ. ಇದು ಮಾನವೀಯ ಧರ್ಮವಾಗಿದೆ.

ಆದರೆ, ಭಾರತದಲ್ಲಿ ಇದು ವ್ಯತಿರಿಕ್ತವಾಗಿ ನಡೆಯುತ್ತಿದೆ. ಏಕೆಂದರೆ, ಭಾರತದಲ್ಲಿ ಕೊರೋನಕ್ಕಿಂತಲೂ ಅಪಾಯಕಾರಿಯಾದ ವೈರಸೊಂದು ಬಹಳ ಕಾಲದಿಂದ ದೇಶಕ್ಕೆ ಹಾನಿಮಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಅದರ ಉಪಟಳ ಅತಿಯಾಗಿದೆ. ಅದುವೇ ಕೋಮುವೈರಸ್. ಇದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುವಲ್ಲಿ ಭಾರತದ ಜಾತ್ಯತೀತ ಸಂವಿಧಾನವನ್ನು ರಕ್ಷಿಸುವ ಹೊಣೆಹೊತ್ತಿರುವ ಸರಕಾರ ಮತ್ತು ಅದರ ಮಹಾನ್ ನಾಯಕರು ಕೆಲವೊಮ್ಮೆ ಪರೋಕ್ಷವಾಗಿ, ಕೆಲವೊಮ್ಮೆ ಬಹಿರಂಗವಾಗಿ ಮತ್ತು ಕೆಲವೊಮ್ಮೆ ಸಾಂಕೇತಿಕವಾಗಿ ಪ್ರಯತ್ನಿಸುತ್ತಿದ್ದಾರೆ. ಸಾಂಕೇತಿಕತೆಯ ಸೋಗಿನಲ್ಲಿ ಈ ರೋಗದ ವಿರುದ್ದ ಹೋರಾಟಕ್ಕೆ ಸೂಕ್ಷ್ಮವಾಗಿ ಧಾರ್ಮಿಕ ಬಣ್ಣ ಬಳಿದು ರಾಜಕೀಯ ಲಾಭಕ್ಕಾಗಿ ಹವಣಿಸುತ್ತಿದ್ದಾರೆ. ಅವರ ಕೆಲವು ಕೃತ್ಯಗಳು ಸಾಮಾನ್ಯ ವಿವೇಕವನ್ನು (comonsense) ಮೀರಿವೆ.

ಮೊದಲಾಗಿ ಭಾರತದಲ್ಲಿ ಈಗಿನ ಕೊರೋನ ಪರಿಸ್ಥಿತಿ ಮತ್ತು ಅದನ್ನು ಮೊದಲಿಗೆ ತಡೆಗಟ್ಟುವಲ್ಲಿ, ಮತ್ತು ನಂತರದಲ್ಲಿ ಅದನ್ನು ನಿಭಾಯಿಸುವುದರಲ್ಲಿ ಸರಕಾರದ ವೈಫಲ್ಯವನ್ನು ಚುಟುಕಾಗಿ ನೋಡಬೇಕು. ಈ ಕುರಿತು ನೂರಾರು ವಿವರವಾದ ವರದಿ ವಿಶ್ಲೇಷಣೆಗಳು ಬಂದಿರುವುದರಿಂದ ಅವುಗಳ ಸಾರಾಂಶವನ್ನು ನೋಡೋಣ.

ಮೊದಲನೆಯದಾಗಿ, ನೆರೆಯ ಚೀನಾದಲ್ಲಿ ಕೊರೋನಾ ಹಾವಳಿ ಎಬ್ಬಿಸಿದಾಗಲೇ ಸರಕಾರ ಎಚ್ಚೆತ್ತುಕೊಳ್ಳಬೇಕಿತ್ತು. ನೆರೆಮನೆಗೆ ಬೆಂಕಿ ಹೊತ್ತಿಕೊಂಡಾಗ, ಅವರಿಗೆ ನೆರವಾಗುವುದರ ಜೊತೆಗೆ ನಮ್ಮ ಸೂರನ್ನು ಉಳಿಸಿಕೊಳ್ಳುವುದು ವಿವೇಕ. ಆದರೆ, ಸರಕಾರ ಎಚ್ಚೆತ್ತುಕೊಳ್ಳಲಿಲ್ಲ. ನಂತರ ಅದು ಇಟಲಿ, ಜರ್ಮನಿಯಂತಹ ದೇಶಗಳಲ್ಲಿ ಹಬ್ಬಿ ದಾಂಧಲೆ ಮಾಡಲು ಆರಂಭಿಸಿದಾಗಲೂ ಅದು ಎಚ್ಚೆತ್ತುಕೊಳ್ಳಲಿಲ್ಲ. ನಾವು ‘ನಮಸ್ತೇ ಟ್ರಂಪ್’ ಇತ್ಯಾದಿ ಪ್ರವಾಸೋದ್ಯಮ ಮತ್ತು ಭಟ್ಟಂಗಿ ಕಾರ್ಯಕ್ರಮಗಳಲ್ಲಿ, ಮಧ್ಯಪ್ರದೇಶದ ಕುದುರೆ ವ್ಯಾಪಾರದಲ್ಲಿ ತೊಡಗಿದ್ದೆವು. ನಿಜಾಮುದ್ದೀನ್ ಸೇರಿದಂತೆ ಸಾವಿರಾರು ಜನರು ಸೇರುವ ಕನಿಷ್ಟ ಮೂವತ್ತರಷ್ಟು ಧಾರ್ಮಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಬಿಟ್ಟೆವು. ರಾಜಕಾರಣಿಗಳಂತೂ ಯಾವುದೇ ಸುರಕ್ಷಾ ಕ್ರಮಗಳಿಲ್ಲದೇ ಲೆಕ್ಕವಿಲ್ಲದಷ್ಟು ಸಭೆಗಳನ್ನು ನಡೆಸಿದರು.

ಆಗಲೇ ಅಂತರಾಷ್ಟ್ರೀಯ ವಿಮಾನಯಾನ ನಿಲ್ಲಿಸಿ, ಸಿದ್ಧತೆಗಳನ್ನು ಮಾಡಿಕೊಂಡಿದ್ದರೆ, ದೇಶದೊಳಗೆ ಬರುವ ಭಾರತೀಯ ಪ್ರಜೆಗಳನ್ನು ಪರೀಕ್ಷಿಸಿ ಪ್ರತ್ಯೇಕಿಸಿದ್ದರೆ, ನಾವು ಇಂತಹಾ ಗಂಭೀರ ಪರಿಸ್ಥಿತಿಯನ್ನು ಎದುರಿಸಬೇಕಾಗಿರಲ್ಲ. ನಮ್ಮ ವೈದ್ಯರು, ದಾದಿಯರು, ಆರೋಗ್ಯ ಮತ್ತು ಸ್ವಚ್ಛತಾ ಕಾರ್ಯಕರ್ತರು ಯಾವುದೇ ಸೂಕ್ತ ಸುರಕ್ಷಾ ಸಾಧನಗಳಿಲ್ಲದೇ ಜೀವದ ಹಂಗು ತೊರೆದು ದುಡಿಯಬೇಕಾಗಿರಲಿಲ್ಲ. ಅವರಿಗೆ ನಂತರವೂ ಸಿಕ್ಕಿದ್ದು ಮತಿಹೀನ ಚಪ್ಪಾಳೆ, ಕಿವಿ ತಮ್ಮಟೆ ಒಡೆಯುವ ಬಟ್ಟಲು-ಜಾಗಟೆ ಸದ್ದುಗಳೇ ಹೊರತು ಸುರಕ್ಷಾ ಸಾಧನಗಳಲ್ಲ. ಸರಕಾರದ ವಿಳಂಬದಿಂದ ಒಂದು ತಿಂಗಳು ವ್ಯರ್ಥವಾಯಿತು ಎಂದು ಸುರಕ್ಷಾ ಸಾಧನಗಳ ಉತ್ಪಾದಕರು ಹೇಳುತ್ತಿರುವ ವರದಿಗಳು ಕೆಲವು ಮಾಧ್ಯಮಗಳಲ್ಲಿ ಬರುತ್ತಿವೆ. ನಂತರದಲ್ಲೂ ಸರಕಾರ ಸಂಘಟಿತ ರೀತಿಯಲ್ಲಿ ಈ ಪಿಡುಗನ್ನು ಎದುರಿಸುವ ಕಾರ್ಯತಂತ್ರ ಅಥವಾ ಯೋಜನೆಯನ್ನು ರೂಪಿಸಲಿಲ್ಲ.

ಪ್ರಧಾನಿ ನರೇಂದ್ರ ಮೋದಿಯ ಪ್ರತಿಕ್ರಿಯೆ ವಿಚಿತ್ರವಾಗಿದ್ದರೂ, ಉದ್ದೇಶಪೂರ್ವಕವಾಗಿತ್ತು. ಅದೆಂದರೆ, ಕೊರೋನಕ್ಕೆ ಧಾರ್ಮಿಕ ಬಣ್ಣ ಬಳಿಯುವುದು, ಜನರನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುವ ಸಾಮರ್ಥ್ಯವನ್ನು ಪರೀಕ್ಷಿಸುವುದು ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಕೊರೋನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಸರಕಾರದ ವೈಫಲ್ಯದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದು.. ಅದರಲ್ಲಿ ಅವರು ಯಶಸ್ವಿಯೂ ಆದರು. ಒಂದು ಭಾನುವಾರ ಅವರು ಸಂಜೆಯ ಹೊತ್ತಿಗೆ ಮನೆಬಾಗಿಲಲ್ಲಿ ನಿಂತು ಚಪ್ಪಾಳೆ ಹೊಡೆಯಲು, ಬಟ್ಟಲು-ಜಾಗಟೆ ಬಡಿಯಲು ಹೇಳಿದರು. ಜನರು ಹುಚ್ಚೆದ್ದು ಗುಂಪುಗಳಲ್ಲಿ ಬೀದಿಗಿಳಿದು ‘ಸಾಮಾಜಿಕ ಅಂತರ’ ಎಂಬ ಪರಿಕಲ್ಪನೆಯನ್ನೇ ಅವಗಣಿಸಿ, ಕೊರೋನ ಹರಡುವುದಕ್ಕೆ ನೆರವಾದರು! ಕರ್ನಾಟಕ ರಾಜ್ಯಪಾಲ ವಜುಬಾಯಿ ವಾಲರವರು ನಡೆದುಕೊಂಡ ರೀತಿ ಇಲ್ಲಿದೆ ನೋಡಿ.

ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕರ್ನಾಟಕದ ರಾಜ್ಯಪಾಲರಾದ ವಾಜುಬಾಯಿ ವಾಲರವರೇ ಬೀದಿಯಲ್ಲಿ ಒಟ್ಟುಗೂಡಿದ್ದಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ.

Posted by Naanu Gauri on Sunday, March 22, 2020

 

ಇದೊಂದು ಧನ್ಯವಾದ ಅರ್ಪಿಸುವ ಸಾಂಕೇತಿಕ ಕ್ರಮವೆಂದು ಮೋದಿ ಹೇಳಿದ್ದರೂ, ಉದ್ದೇಶ ಮೊದಲೇ ಹೇಳಿದಂತೆ ಸಂಸ್ಕೃತಿಯ ಹೆಸರಲ್ಲಿ ಧಾರ್ಮಿಕ ಬಣ್ಣ ಹಚ್ಚುವುದಾಗಿತ್ತು. ಶಂಖ ಜಾಗಟೆ ಹಿಂದೂ ಧಾರ್ಮಿಕ ಕಾರ್ಯಗಳಲ್ಲಿ ಉಪಯೋಗಿಸಲಾಗುವ ಸಾಧನಗಳು. ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕೆಂದು ಸಂವಿಧಾನವೇ ಹೇಳುತ್ತದೆ. ಆದರೆ, ಈ ಪ್ರಧಾನಿ ಮೂಢನಂಬಿಕೆ ಬಿತ್ತಿದರು. ಅವರ ಭಕ್ತರು ಸದ್ದಿನ ಕಂಪನದಿಂದ ಕೊರೋನಾ ನಾಶವಾಗುತ್ತದೆ ಎಂದು ನಂಬಿದರು; ನಂಬಿಸಿದರು. ಪರಿಣಾಮ ಮಾತ್ರ ವ್ಯತಿರಿಕ್ತ ಮತ್ತು ನಿರೀಕ್ಷಿತವಾಗಿತ್ತು. ಸೋಂಕಿತರ ಸಂಖ್ಯೆ ಹೆಚ್ಚಿತು.

ಜನರು ಗುಂಪುಸೇರಿ ಶಂಖ ಊದಿ, ಜಾಗಟೆ ಬಾರಿಸುತ್ತಿರುವುದು.

ಆದರೆ, ತನ್ನ ಈ ಮೂರ್ಖತನದ ಕುರಿತು, ಜಗತ್ತಿನ ಮುಂದೆ ಭಾರತವನ್ನು ನಗೆಪಾಟಲಾಗಿಸಿದ ಕುರಿತು ಮೋದಿಗೆ ನಾಚಿಕೆಯಾಗಲೀ ವಿಷಾದವಾಗಲೀ ಇಲ್ಲ. ಅವರೀಗ ಎಪ್ರಿಲ್ 9ರಂದು ರಾತ್ರಿ 9.00 ಗಂಟೆಗೆ 9 ನಿಮಿಷಗಳ ಕಾಲ ವಿದ್ಯುತ್ ಆರಿಸಿ ಕ್ಯಾಂಡಲ್ ಹಚ್ಚಿ, ಮೊಬೈಲ್ ಲೈಟ್ ಹಚ್ಚಿ ಎಂದು ಹೇಳುತ್ತಾ, ಮತ್ತೆ ದೀಪದ ಧಾರ್ಮಿಕ ಸಾಂಕೇತಿಕತೆಗೆ ಮರಳಿದ್ದಾರೆ. ಆದರೆ, ಅವರ ಭಕ್ತರು ಮಾತ್ರ ‘9’ರ ಗುಣಾಕಾರ, ಭಾಗಾಕಾರ ಮಾಡುತ್ತಾ, ನಕ್ಷತ್ರ, ಕುಂಡಲಿ ಹುಡುಕುತ್ತಾ, ಕೊರೋನವನ್ನು ರಾಹು ಮಾಡಿ, ಅದನ್ನು ಮಂಗಳನ ಮೂಲಕ ನಿರ್ನಾಮ ಮಾಡಿಸುತ್ತಿದ್ದಾರೆ. ರಾಜ್ಯದ ಒಬ್ಬ ಬಿಜೆಪಿ ನಾಯಕ ದೀಪ ಹಚ್ಚುವುದರಿಂದ ವೈರಸ್‌ಗಳು ಅದಕ್ಕೆ ಮುತ್ತಿ ಸಾಯುತ್ತವೆ ಎಂದಿದ್ದಾರೆ. ಹಾಗೆ ಸಾಯಲು ವೈರಸ್ ಎಂದರೆ ಹಾತೆಯೆ? ಇಂತಹಾ ಮೂರ್ಖತನದ ಹಿಂದೆ ಇರುವ ರಾಜಕೀಯ ಮತ್ತು ಧಾರ್ಮಿಕ ಉದ್ದೇಶ ಸ್ಪಷ್ಟ.

ಸರಕಾರ ಈ ರೋಗವನ್ನು ತನ್ನ ವೈಫಲ್ಯಗಳನ್ನು ಮುಚ್ಚಿಹಾಕಿ, ಧಾರ್ಮಿಕ ಧ್ರುವೀಕರಣಕ್ಕೆ ಬಳಸಿಕೊಳ್ಳುತ್ತಿರುವುದಕ್ಕೆ ನಿಜಾಮುದ್ದೀನ್ ಪ್ರಕರಣ ಸಾಕ್ಷಿಯಾಗಿದೆ. ದಿಲ್ಲಿಯ ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲೀಗಿ ಜಮಾತ್ ಸಮ್ಮೇಳನದ ಪ್ರಕರಣ ಎಲ್ಲರಿಗೂ ಗೊತ್ತು. ಅಲ್ಲಿಗೆ ಹೋದ ಹಲವರಿಗೆ ಸೋಂಕುತಟ್ಟಿದೆ, ಕೆಲವರು ಸತ್ತಿದ್ದಾರೆ. ಸಂಘಟಕರ ಬೇಜವಾಬ್ದಾರಿಯಿಂದಾಗಿ ಕೆಲವರು ಮನೆಗೆ ಮರಳಿ ತಮ್ಮ ಅರಿವಿಗೇ ಬಾರದಂತೆ ರೋಗ ಹರಡಿದ್ದಾರೆ. (ರೋಗಲಕ್ಷಣಗಳು ಮೂರು ದಿನಗಳ ನಂತರವೇ ಕಂಡುಬರುತ್ತವೆ).

ನಿಜಾಮುದ್ದೀನ್‌ನಲ್ಲಿ ನೆರೆದ ತಬ್ಲೀಗಿ ಜಮಾತ್‌ ಪ್ರತಿನಿಧಿಗಳು.

ಅದೇ ಹೊತ್ತಿಗೆ, ಇತರ ಕಡೆಗಳಲ್ಲಿಯೂ ಇಂತದ್ದೇ ಹಿಂದೂ ಸಭೆಗಳೂ ನಡೆದಿವೆ. ನಮ್ಮದೇ ಉಡುಪಿಯಲ್ಲಿ ಯಾವುದೇ ಸುರಕ್ಷಾ ಸಾಧನ, ಮಾಸ್ಕ್ ಇಲ್ಲದೆ ಮಠಾಧೀಶರೊಬ್ಬರ ನೇತೃತ್ವದಲ್ಲಿ ರಾಮನವಮಿ ನಡೆಯಿತು. ಯಾವುದೇ ಲಾಕ್‌ಡೌನ್, ಜಿಲ್ಲಾಡಳಿತ ಅಡ್ಡಿಯಾಗಲಿಲ್ಲ. ಈ ಕುರಿತು ಯಾವುದೇ ಮಾಧ್ಯಮ ಗಂಟಲು ಹರಿಯುವಂತೆ ಕಿರುಚಲಿಲ್ಲ. ದುರದೃಷ್ಟವಶಾತ್ ಇಂತಹಾ ಸಭೆಗಳಲ್ಲಿ ಎಷ್ಟು ಮಂದಿಗೆ ಸೋಂಕು ತಟ್ಟಿದೆ ಎಂಬುದು ಬಹಿರಂಗವಾಗಿಲ್ಲ. ಆದರೆ, ಸರಕಾರ ಪರೋಕ್ಷವಾಗಿ ನಿಜಾಮುದ್ದೀನ್ ಘಟನೆಗೆ ಧಾರ್ಮಿಕ ಬಣ್ಣ ಹಚ್ಚಿ ತನ್ನ ರಾಜಕೀಯ ಅಜೆಂಡಾಕ್ಕೆ ಬಳಸಿಕೊಳ್ಳುತ್ತಿದೆ.

ಇದೀಗ ದೇಶದಲ್ಲಿ ಕೊರೋನ ಹರಡಲು ಮುಸ್ಲಿಮರು ಕಾರಣ ಎಂದು ಬಿಜೆಪಿ ನೇರವಾಗಿ ಮತ್ತು ಸರಕಾರ ಪರೋಕ್ಷವಾಗಿ ಪ್ರಚಾರ ಮಾಡುತ್ತಿವೆ. ಮಾಧ್ಯಮಗಳು ದಿನಬೆಳಗಾದರೆ ನಿಜಾಮುದ್ದೀನ್, ನಿಜಾಮುದ್ದೀನ್ ಎಂದು ಸನ್ನಿ ಹಿಡಿದವರಂತೆ ಬಡಬಡಿಸುತ್ತಿವೆ. ನಿಜಾಮುದ್ದೀನ್ ಕೊರೋನದ ರಾಜಧಾನಿ ಮತ್ತು ಮುಸ್ಲಿಮರು ಕೊರೋನ ವೈರಸನ್ನು ತಯಾರಿಸಿ, ದೇಶದಲ್ಲಿ ಉದ್ದೇಶಪೂರ್ವಕವಾಗಿ ಹರಡುತ್ತಿದ್ದಾರೆ; ಜೆಹಾದ್ ನಡೆಸುತ್ತಿದ್ದಾರೆ ಎಂಬಷ್ಟರ ಮಟ್ಟಿಗೆ ದುರುದ್ದೇಶದ, ಮೂರ್ಖತನದ  ಅಪಪ್ರಚಾರದಲ್ಲಿ ತೊಡಗಿದ್ದಾರೆ. ಕೊರೋನ ಹರಡಿದರೆ ಅದು ತಮ್ಮ ಸಹಿತ ಎಲ್ಲರನ್ನೂ ಕೊಲ್ಲುತ್ತದೆ ಎಂದು ಅರಿಯದಷ್ಟು ಮುಸ್ಲಿಮರು ಮೂರ್ಖರು ಎಂದು ಇವರೆಲ್ಲರೂ ಭಾವಿಸಿದಂತಿದೆ.

ಈ ಸಭೆಗೆ ಅನುಮತಿ ನೀಡಿದವರು ಯಾರು, ಸೋಂಕು ಪೀಡಿತ ಪ್ರತಿನಿಧಿಗಳು ವಿದೇಶಗಳಿಂದ ವಿಮಾನ ಮೂಲಕ ಬರಲು ಅವಕಾಶ ನೀಡಿದ ಬೇಜವಾಬ್ದಾರಿಗಳು ಯಾರು ಎಂಬ ಬಗ್ಗೆ ಚಕಾರ ಶಬ್ದವನ್ನೂ ಎತ್ತುತ್ತಿಲ್ಲ. ಸ್ವಯಂಘೋಷಿತ ಸದ್ಗುರು ಜಗ್ಗಿ ಮತ್ತು ಅಮೃತಾನಂದಮಯಿ ಆಶ್ರಮಗಳಲ್ಲಿ ನಡೆದ ಸಮ್ಮೇಳನಗಳಲ್ಲಿ ಭಾಗವಹಿಸಿದ ವಿದೇಶೀಯರು, ಈಗ ಕ್ವಾರಂಟೈನ್‌ನಲ್ಲಿರುವ ನೂರಾರು ಜನರ ಬಗ್ಗೆ ಅವರು ಮಾತನಾಡುವುದೇ ಇಲ್ಲ. ಪಂಜಾಬಿನ ನವಾಶಹರ್‌ನಲ್ಲಿ ಇಟಲಿ ಮತ್ತು ಜರ್ಮನಿ ಪ್ರವಾಸ ಮುಗಿಸಿ ಬಂದ 70 ವರ್ಷಗಳ ಸಿಕ್ಖ್ ಧರ್ಮಗುರು ಬಲ್‌ದೇವ್ ಸಿಂಗ್, ತಾನು ಕೊರೋನಾದಿಂದ ಸತ್ತುದಲ್ಲದೇ, ತನ್ನ ಕುಟುಂಬದ ಸದಸ್ಯರ ಸಹಿತ 28 ಜನರಿಗೆ ಕೊರೋನ ಪ್ರಸಾದ ನೀಡಿ ಸಾವಿರಕ್ಕೂ ಹೆಚ್ಚು ಮಂದಿ ಕ್ವಾರಂಟೈನ್‌ಗೆ ಒಳಗಾಗುವಂತೆ ಮಾಡಿದ ಪ್ರಕರಣದ ಬಗ್ಗೆ ಈ ಮಾಧ್ಯಮಗಳು ಒಂದು ಶಬ್ದವನ್ನೂ ಆಡಿಲ್ಲ. ಸಿಕ್ಖರು ಕೊರೋನ ವೈರಸ್ ಉತ್ಪಾದಿಸಿ ಹಂಚುತ್ತಾರೆ ಎಂದು ಹೇಳಿಲ್ಲ. ಜಗ್ಗಿಯಂತವರ ತಪ್ಪಿಗೆ ಎಲ್ಲಾ ಹಿಂದೂಗಳು ಹೊಣೆಯೆಂದು ಹೇಳಿಲ್ಲ. ಹೇಳಿಕೇಳಿ ತಬ್ಲೀಗಿ ಜಮಾತ್ 1920ರ ದಶಕದಲ್ಲಿ ಹುಟ್ಟಿದ ಚಿಕ್ಕ ಪಂಥ ಮಾತ್ರ. ಅದರ ತಪ್ಪನ್ನು ಇಡೀ ಭಾರತೀಯ ಮುಸ್ಲಿಂ ಸಮುದಾಯದ ಮೇಲೆ ಹೊರಿಸಲಾಗುತ್ತಿದೆ.

ಕೊರೊನಾ ಜೊತೆಗೆ ಇನ್ನೆರಡು ವೈರಸ್‌ಗಳ ದಾಳಿ.

ಕೊರೊನಾ ಜೊತೆಗೆ ಇನ್ನೆರಡು ವೈರಸ್‌ಗಳ ದಾಳಿ. ಅವು ಯಾವುವು? ನಾವೇನು ಮಾಡಬೇಕು?ಕೊರೊನಾ ವೈರಸ್ ಜೊತೆಗೆ ಇನ್ನೆರಡು ವೈರಸ್‌ಗಳು ದೇಶದ ಮೇಲೆ ದಾಳಿ ನಡೆಸಿವೆ. ಅದರ ಕುರಿತು ಈ ವಿಡಿಯೋ ಸರಣಿಯಲ್ಲಿ ಡಾ.ವಾಸು ಅವರು ಮಾತನಾಡಿದ್ದಾರೆ.

Posted by Naanu Gauri on Friday, April 3, 2020

 

ಇಲ್ಲಿ ತಬ್ಲೀಗಿ ಜಮಾತ್‌ನ ಬೇಜವಾಬ್ದಾರಿಯನ್ನು ಸಮರ್ಥಿಸುವ ಉದ್ದೇಶವಿಲ್ಲ. ವೈರಸಿನ ಮುಂದೆ ಎಲ್ಲರೂ ಸಮಾನರು. ವಾಸ್ತವಿಕವಾಗಿ ಈ ತಬ್ಲೀಗಿಯವರಿಗೂ, ಆ ಸಿಕ್ಖ್ ಧರ್ಮಗರುವಿಗೂ ಪರಿಣಾಮದ ಗಂಭೀರತೆಯ ಅರಿವಿರಲಾರದು. ಯಾರೂ ಬೇಕೆಂದೇ ಇದನ್ನು ಮಾಡಲು ಸಾಧ್ಯವಿಲ್ಲ. ಆದರೆ, ಆರೋಗ್ಯ ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ಯಾವ ಕಾರಣಕ್ಕೂ ಸಮರ್ಥಿಸಲಾಗದು. ಇಂತಹಾ ಮನೋಭಾವ ಇಡೀ ದೇಶಕ್ಕೆ ಕೇಡನ್ನು ಉಂಟುಮಾಡುತ್ತದೆ. ಕೊರೋನದಿಂದ ರಾಮ ರಕ್ಷಿಸುತ್ತಾನೆ, ಅಲ್ಲಾ ರಕ್ಷಿಸುತ್ತಾನೆ, ಏಸು ರಕ್ಷಿಸುತ್ತಾನೆ ಎಂದು ಸುರಕ್ಷಾ ಕ್ರಮಗಳನ್ನು ಉಲ್ಲಂಘಿಸುವರು, ಗುದದ್ವಾರಕ್ಕೆ ಲ್ಯಾವೆಂಡರ್ ಹೂವಿನ ಎಣ್ಣೆ ಹಚ್ಚಿ ಪ್ರಾರ್ಥಿಸಿದರೆ ಕೊರೋನ ಬರುವುದಿಲ್ಲ ಎಂದು ಹೇಳಿ ಹಲವರಿಗೆ ಸೋಂಕು ತಗಲಲು ಕಾರಣನಾಗಿ ಜೈಲು ಸೇರಿರುವ ಇರಾನ್‌ನ ಮೂರ್ಖ ಮುಲ್ಲಾನಷ್ಟೇ ಮೂರ್ಖರಾಗುತ್ತಾರೆ. ಮಾನವೀಯತೆಗೆ ಅಪಾಯ ಒಡ್ಡುವ ಇಂತಹಾ ಕ್ರಿಮಿನಲ್‌‌ಗಳನ್ನು ಜಾತಿ, ಧರ್ಮ ನೋಡದೆ ಜೈಲಿಗೆ ಅಟ್ಟಬೇಕು.

ಆದರೆ, ಜಾತಿ, ಧರ್ಮಗಳ ಹೆಸರಿನಲ್ಲಿ ಒಂದು ಮಾರಕ ರೋಗವನ್ನೂ ಜನರ, ಸಮುದಾಯಗಳ ನಡುವೆ ಒಡಕುಂಟುಮಾಡಿ ರಾಜಕೀಯ ಲಾಭ ಮಾಡಿಕೊಳ್ಳುವ ಕ್ರಿಮಿನಲ್ ಕಲೆ ಭಾರತದ ಒಂದು ವರ್ಗಕ್ಕೆ ಕರಗತವಾಗಿದೆ ಮತ್ತು ಕೊರೋನಾಕ್ಕಿಂತ ಅಪಾಯಕಾರಿಯಾದ ಕೋಮುವೈರಸ್ ವೇಗವಾಗಿ ಹರಡುತ್ತಿದೆ ಎಂದು ಹೇಳುವುದೇ ಈ ಬರಹದ ಉದ್ದೇಶ.

(ನಿರೀಕ್ಷಿಸಿ: ಕರೋನ ವೈರಸಿನ ಜಾತಿ, ವರ್ಗ ಯಾವುದು?)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...