Homeಅಂತರಾಷ್ಟ್ರೀಯಕ್ಯೂಬಾದ ವೈದ್ಯರು ಜಗತ್ತಿನ ಅತ್ಯುತ್ತಮ ವೈದ್ಯರಾಗಿದ್ದು ಹೇಗೆ?

ಕ್ಯೂಬಾದ ವೈದ್ಯರು ಜಗತ್ತಿನ ಅತ್ಯುತ್ತಮ ವೈದ್ಯರಾಗಿದ್ದು ಹೇಗೆ?

ಕ್ಯೂಬಾದ ಪ್ರಕಾರ ವೈದ್ಯ ವೃತ್ತಿಯೆಂದರೆ ವ್ಯಾಪಾರವಲ್ಲ, ಮನುಕುಲದ ರಕ್ಷಣೆಗಾಗಿ ಇರುವ ಒಂದು ಮಾನವೀಯ ಸೇವೆ...

- Advertisement -
- Advertisement -

ಕ್ಯೂಬಾದ ಮಾಜಿ ಅಧ್ಯಕ್ಷ ಕಾಮ್ರೇಡ್ ಫಿಡೆಲ್ ಕ್ಯಾಸ್ಟ್ರೋ ಅವರ ಒಂದು ಭಾಷಣದ ಕೆಲ ತುಣುಕುಗಳು ನನ್ನ‌ ಮನಸಲ್ಲಿ ಅಚ್ಚಳಿಯದೇ ಉಳಿದಿದೆ.

“ಅವರು ನ್ಯೂಕ್ಲಿಯರ್ ಬಾಂಬ್‌ಗಳನ್ನು ತಯಾರಿಸಿಯೂ ಮನುಕುಲದ ರಕ್ಷಣೆಯ ಹೊಣೆ ಹೊತ್ತವರು ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಾರೆ. ನಮಗೆ ಯಾರ ಪ್ರಶಂಸೆಯೂ ಬೇಕಾಗಿಲ್ಲ. ನಾವು ಅವರ ಬಾಂಬಿಗೆ ಎದುರಾಗಿ ಮನುಕುಲದ ಉಳಿವಿಗಾಗಿ ಮನುಕುಲವನ್ನು ಕಾಡುವ ಭಯಾನಕ ಖಾಯಿಲೆಗಳಿಗೆ ಕಡಿಮೆ ಖರ್ಚಿನ ಔಷಧಿಗಳ ಸಂಶೋಧನೆಯಲ್ಲಿ ತೊಡಗಿದ್ದೇವೆ. ನಾವು ಮನುಕುಲದ ಸೇವೆಗಾಗಿ‌ ಶ್ರೇಷ್ಠ ಗುಣಮಟ್ಟದ ವೈದ್ಯರನ್ನು ಸೃಷ್ಟಿ ಮಾಡುತ್ತಿದ್ದೇವೆ.. ನಮ್ಮ ಈ ಕೆಲಸಗಳನ್ನು ಇನ್ನಷ್ಟು ಹೆಚ್ಚಾಗಿ ಮಾಡಬೇಕಿದೆ…”

ಎಂತಹಾ ಅದ್ಭುತ ಮಾತುಗಳು ಅಲ್ವಾ…?

ಇಂದು ಜಗತ್ತಿನಲ್ಲಿ ಹೆಲ್ತ್‌ಕೇರ್ ಸೂಚ್ಯಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಇಟಲಿ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸೋತಾಗ ಅವರ ರಕ್ಷಣೆಗೆ ಸ್ವಯಂ ಪ್ರೇರಿತವಾಗಿ ಬಂದಿದ್ದು ಇದೇ ಕ್ಯೂಬಾ..

ಕ್ಯೂಬಾದ ವೈದ್ಯಕೀಯ ನೆರವಿನ ಅಗತ್ಯವಿಲ್ಲವೆಂದು‌‌ ದಾರ್ಷ್ಟ್ಯ ಮೆರೆದಿದ್ದ ಬ್ರೆಝಿಲ್ ಇಂದು ಮತ್ತೆ ನಾಚಿಕೆಗೆಟ್ಟು ಇದೇ ಕ್ಯೂಬಾದ ನೆರವು ಯಾಚಿಸಬೇಕಾಗಿ ಬಂತು.‌ ತನ್ನನ್ನು ಅವಮಾನಿಸಿದ್ದರೂ‌ ಕ್ಯೂಬಾ ಬ್ರೆಝಿಲ್‌ಗೆ ವೈದ್ಯಕೀಯ ನೆರವು ನಿರಾಕರಿಸಲಿಲ್ಲ. ಯಾಕೆಂದರೆ ಕ್ಯೂಬಾದ ಪ್ರಕಾರ ವೈದ್ಯ ವೃತ್ತಿಯೆಂದರೆ ವ್ಯಾಪಾರವಲ್ಲ, ಮನುಕುಲದ ರಕ್ಷಣೆಗಾಗಿ ಇರುವ ಒಂದು ಮಾನವೀಯ ಸೇವೆ.

ಫಿಡೆಲ್‌ ಕ್ಯಾಸ್ಟ್ರೊ

ಗುಣಮಟ್ಟದ ವೈದ್ಯಕೀಯ ಸೇವೆಯ ಮೂಲಕ ತನ್ನ ರಾಷ್ಟ್ರದ ಆರ್ಥಿಕತೆಯನ್ನು ಅಭಿವೃದ್ಧಿಪಡಿಸುತ್ತಿರುವ ಕ್ಯೂಬಾದ ಸಾಧನೆ ಮನುಕುಲವನ್ನು ವಿನಾಶದಂಚಿಗೆ ತಳ್ಳುವ ಶಸ್ತ್ರಾಸ್ತ್ರಗಳ ಮಾರಾಟದ ಮೂಲಕ ತನ್ನ ಆರ್ಥಿಕತೆಯನ್ನು ಬೆಳೆಸುತ್ತಿರುವ ಅಮೆರಿಕಾದ ಕಣ್ಣು ಕೆಂಪಾಗಿಸಿದೆ. ಅದಕ್ಕಾಗಿ ಅಮೆರಿಕಾ ಅಲ್ಲೂ ತನ್ನ ಕುತಂತ್ರ ಬಿಡದೇ ಜಗತ್ತಿನ ದೇಶಗಳು ಕ್ಯೂಬಾದ ವೈದ್ಯಕೀಯ ನೆರವನ್ನು ತಿರಸ್ಕರಿಸಬೇಕೆಂದು ಹೇಳಿ ಜಗತ್ತಿನ ಮುಂದೆ ಕುಬ್ಜವಾಗಿದೆ.


ಇದನ್ನೂ ಓದಿ: ಕೊರೊನಾ : ಕ್ಯೂಬಾದ ವೈದ್ಯಕೀಯ ಸಹಾಯ ತಿರಸ್ಕರಿಸುವಂತೆ ಹಲವು ದೇಶಗಳಿಗೆ ಅಮೆರಿಕದ ಒತ್ತಡ


ಕ್ಯೂಬಾದ ಎಂಬ ಪುಟ್ಟ ರಾಷ್ಟ್ರದ ಮಾನವೀಯ ಮುಖಕ್ಕೆ ಒಂದು ಚಿಕ್ಕ ಉದಾಹರಣೆ ಕೊಡುತ್ತೇನೆ.
ಕ್ಯೂಬಾ ವಿಮೋಚನೆಯ ಮಹಾ ಕ್ರಾಂತಿಕಾರಿ ಅರ್ಜೆಂಟೀನಾ ಸಂಜಾತ ಕಾಮ್ರೇಡ್ ಅರ್ನೆಸ್ಟೋ ಚೆಗುವಾರ. ಕ್ಯೂಬಾಕ್ಕೆ ಕ್ಯೂಬಾವೇ ಸಂಗಾತಿ ಚೆ ಗುವಾರನನ್ನು ಹೃದಯದಲ್ಲಿಟ್ಟು ಆರಾಧಿಸುತ್ತದೆ. ಅಂತಹ ಚೆ ಗುವಾರನನ್ನು 1967 ರ ಅಕ್ಟೋಬರ್ ಒಂಬತ್ತರಂದು ಗುಂಡಿಕ್ಕಿ ಕೊಂದ ಬೊಲಿವಿಯನ್ ಆರ್ಮಿಯ ಸೈನಿಕ ಮಾರಿಯೋ ಟೆರಾನ್‌ಗೆ ಆತನ ವೃದ್ದಾಪ್ಯದಲ್ಲಿ ಕಣ್ಣಿನ ಶಸ್ತ್ರಕ್ರಿಯೆಯ ಅಗತ್ಯ ಬೀಳುತ್ತದೆ. ಮಾರಿಯೋ ‌ಟೆರಾನ್ ‌ತನ್ನ ದೇಶದ ಜನರ ಹೃದಯದಲ್ಲಿ ಸದಾ ಅಮರನಾಗಿರುವ ಕ್ರಾಂತಿಕಾರಿ, ತನ್ನ ಜೀವದ ಗೆಳೆಯ ಚೆಗುವಾರನನ್ನು ಕೊಂದ ಸೈನಿಕನೆಂದು ಗೊತ್ತಿದ್ದರೂ ಕಾಮ್ರೇಡ್ ಫಿಡೆಲ್ ಆತನಿಗೆ ತನ್ನ ನೆಲದಲ್ಲಿ ಚಿಕಿತ್ಸೆ ನಿರಾಕರಿಸುವುದಿಲ್ಲ. ಇನ್ನೂ‌ ಆಸಕ್ತಿದಾಯಕ ವಿಚಾರವೇನೆಂದರೆ ಮಾರಿಯೋ ಟೆರಾನ್‌‌ನ ಕಣ್ಣಿನ ಶಸ್ತ್ರಕ್ರಿಯೆ ನಡೆದದ್ದು ಕಾಮ್ರೇಡ್ ಚೆ ಗುವಾರನ ಹೆಸರಿನಲ್ಲಿರುವ ಆಸ್ಪತ್ರೆಯಲ್ಲಾಗಿತ್ತು.

ಚೆಗುವಾರ

ಈ ಬಗ್ಗೆ ಫಿಡೆಲ್ ಹೀಗೆನ್ನುತ್ತಾರೆ “ಆತ ಅಂದು ನಮ್ಮ ಶತ್ರು ಸೈನ್ಯದ ಸೈನಿಕನಾಗಿ ತನ್ನ ಕರ್ತವ್ಯ ನಿರ್ವಹಿಸಿದ್ದಾನಷ್ಟೆ. ಇಂದು ಆತ ಚಿಕಿತ್ಸೆ ಬಯಸಿ ನಮ್ಮ ದೇಶಕ್ಕೆ ಬಂದಿದ್ದಾನೆ. ನಾವು ನಮ್ಮ ಹುತಾತ್ಮ ಸಂಗಾತಿಯನ್ನು ಕೊಂದ ಸೈನಿಕನಿಗೆ ಅದೇ ಸಂಗಾತಿಯ ಹೆಸರಲ್ಲಿ ಸ್ಥಾಪಿಸಲಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದೇವೆ. ನಮ್ಮ ಪ್ರಕಾರ ಯುದ್ಧಗಳು ಯುದ್ಧಭೂಮಿಗಷ್ಟೇ ಸೀಮಿತ. ಆಸ್ಪತ್ರೆಗಳು ಯುದ್ಧಭೂಮಿಯಲ್ಲ, ಚಿಕಿತ್ಸಾ ಕೇಂದ್ರಗಳು.. ಇಲ್ಲಿ ಏನು ಮಾಡಬೇಕೋ ಅದನ್ನೇ ನಾವು ಮಾಡಿದ್ದೇವೆ…”

ಇಂತಹ ಕ್ಯೂಬಾ ಇಂದು ತನ್ನ ನುರಿತ ವೈದ್ಯರ ಪಡೆಯನ್ನು‌ ಆರೋಗ್ಯ ಸೂಚ್ಯಂಕದಲ್ಲಿ ಎರಡನೇ ಸ್ಥಾನದಲ್ಲಿರುವ ದೇಶಕ್ಕೆ ಕಳುಹಿಸಿಕೊಡಲು ಸಾಧ್ಯವಾಗಿದ್ದು ಯಾಕೆಂದರೆ ‌ಅವರು ಕ್ಯೂಬಾದ ವೈದ್ಯರು. ಕ್ಯೂಬಾದ ವೈದ್ಯರೆಂದರೆ ಜಗತ್ತಿನ ಅತ್ಯಂತ ಸಮರ್ಥ ವೈದ್ಯರು ಮತ್ತು ಅತ್ಯಂತ ಸಮರ್ಪಣಾ ಮನೋಭಾವದ ವೈದ್ಯರು.

ಕ್ಯೂಬಾದ ವೈದ್ಯರು ಅಂತಹ ಹೆಗ್ಗಳಿಕೆಗೆ ಪಾತ್ರವಾಗಲು ಯಾಕೆ ಸಾಧ್ಯವಾಗುತ್ತದೆಂದು ಹುಡುಕುತ್ತಾ ಹೋದರೆ‌ ಅದಕ್ಕೆ ಅಲ್ಲಿನ ಶಿಕ್ಷಣ ವ್ಯವಸ್ಥೆಯೇ ಉತ್ತರ ಕೊಡುತ್ತದೆ.

ಕ್ಯೂಬಾದಲ್ಲಿ ವೈದ್ಯಕೀಯ ಪದವಿ ಪಡೆಯಲು ನಮ್ಮ ದೇಶದಲ್ಲೋ, ಇತರ ದೇಶಗಳಲ್ಲೋ ಇರುವಂತೆ ನೋಟುಗಳ ಮೂಟೆಗಳು ಬೇಕಾಗಿಲ್ಲ. ಅಲ್ಲಿ ವೈದ್ಯಕೀಯ ಶಿಕ್ಷಣದ ಸೀಟು ಸಿಗಲು ವೈದ್ಯಕೀಯ ಶಿಕ್ಷಣ ಇಲಾಖೆಯ ಸೂಚಿತ ಅರ್ಹತೆಯೊಂದಿದ್ದರೆ ಸಾಕು. ನಮ್ಮಲ್ಲಿ ಜನರಲ್ ಡಿಗ್ರಿಗಳಾದ ಬಿ.ಎ, ಬಿ.ಕಾಂ, ಬಿ.ಎಸ್ಸಿ ಪಡೆದಷ್ಟೇ ಸುಲಭವಾಗಿ ಸೂಚಿತ ಅರ್ಹತೆ ಇದ್ದ ಯಾರು ಬೇಕಾದರೂ ವೈದ್ಯಕೀಯ ಶಿಕ್ಷಣ ಪಡೆಯಬಹುದು. ಕ್ಯಾಪಿಟೇಶನ್ ಎಂಬ ಪದವೇ ಕ್ಯೂಬಾದಲ್ಲಿ ಅಪರಿಚಿತ. ಅಲ್ಲಿ ಸರಕಾರವೇ ವಿದ್ಯಾರ್ಥಿಯ ಕಲಿಕೆಯ ಸಂಪೂರ್ಣ‌ ಖರ್ಚು ವೆಚ್ಚಗಳನ್ನು ಭರಿಸುತ್ತದೆ. ಆದುದರಿಂದ ಸರಕಾರದ ಆದೇಶವನ್ನು ಅಲ್ಲಿನ ಯಾವ ವೈದ್ಯನೂ ಮೀರಲು ಸಾಧ್ಯವಾಗುವುದಿಲ್ಲ.

ನಮ್ಮ ದೇಶದಲ್ಲಿ ಇಂದು ಹದಿನೇಳು ಸಾವಿರ ಜನಸಂಖ್ಯೆಗೆ ಒಬ್ಬ ವೈದ್ಯನಿದ್ದಾನೆ. (ಅವರಲ್ಲಿ ಎಷ್ಟು ಮಂದಿ ಅರ್ಹತೆಯುಳ್ಳವರು ಎಂಬುವುದು ಎರಡನೇ ವಿಚಾರ) ಅವರಲ್ಲಿ ಬಹುತೇಕರು ಊಟಕ್ಕಿಲ್ಲದ ಉಪ್ಪಿನಕಾಯಿ.
ಇಂತಹ ವೈದ್ಯರುಗಳಲ್ಲಿ ಹೆಚ್ಚಿನ ಯಾರ ಮೇಲೂ ಸರಕಾರ ತನ್ನ ನಿಯಮಾವಳಿಗಳನ್ನು ಹೇರಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಅವರೆಲ್ಲಾ ಕೋಟಿ ಕೋಟಿ ಸುರಿದೇ ವೈದ್ಯಕೀಯ ಪದವಿ ಪಡೆದಿರುತ್ತಾರೆ. ಅವರು ಅದಕ್ಕಾಗಿ ಕೋಟಿಗಳ ಲೆಕ್ಕದಲ್ಲಿ ಸಾಲ ಮಾಡಿರುತ್ತಾರೆ. ಅವರೆಲ್ಲಾ ನಗರದ ಐಷಾರಾಮಿ ಬದುಕನ್ನೇ ಬಯಸುತ್ತಾರೆ. ಅವರು ದೊಡ್ಡ ದೊಡ್ಡ ನಗರಗಳಲ್ಲಿ ನೋಟಿನ ಕಂತೆಗಳ ಹೊರತಾಗಿ ವೃತ್ತಿ ನಿರ್ವಹಿಸುವುದು‌ ಸಾಧ್ಯವಿಲ್ಲ. ಅವರು ಶಿಕ್ಷಣಕ್ಕಾಗಿ ಹಾಕಿದ ಬಂಡವಾಳ ವಾಪಾಸು ಪಡೆಯಬೇಕೆಂದರೆ ಗ್ರಾಮೀಣ ಪ್ರದೇಶಗಳಲ್ಲಿ, ತೀರಾ ಮೂಲಭೂತ ಸೌಕರ್ಯಗಳಿಲ್ಲದ ಆದಿವಾಸಿ ಬೆಲ್ಟ್‌ಗಳಲ್ಲಿ ಸೇವೆ ಮಾಡಲು ಸಾಧ್ಯವಾಗದು. ಸರಕಾರ ಅವರ ಮೇಲೆ ಅಂಕುಶ ಹೇರುವ ಯಾವ ಹಕ್ಕನ್ನೂ ಉಳಿಸಿಕೊಂಡಿರುವುದಿಲ್ಲ. ಇಂತಹ ವೈದ್ಯರು ದುಡ್ಡಿನ ಮುಖವನ್ನು ನೋಡಲೇಬೇಕಾಗುತ್ತದೆ.‌ಅದು ಅವರ ತಪ್ಪಲ್ಲ. ಅದು ಪ್ರಭುತ್ವದ ತಪ್ಪು. ಇಂತಹವರಿಂದ ನಾವು ಸಮರ್ಪಣಾ ಮನೋಭಾವದ ಸೇವೆ ಹೇಗೆ ನಿರೀಕ್ಷಿಸಲು ಸಾಧ್ಯ..?

ಸರಕಾರ ಒಬ್ಬ ಎಂ.ಬಿ.ಬಿ.ಎಸ್ ಪದವೀಧರನಿಗೆ ಒಂದು ಲಕ್ಷ ರೂಪಾಯಿ ಸಂಬಳ ಕೊಟ್ಟರೂ ಆತ ತನ್ನೆಲ್ಲಾ ಖರ್ಚು ವೆಚ್ಚಗಳನ್ನು ಕಳೆದು ತನ್ನ ಶಿಕ್ಷಣಕ್ಕಾಗಿ ಪಡೆದ ಸಾಲ ತೀರಿಸಬೇಕಾದರೆ ಇಪ್ಪತ್ತೈದು ವರ್ಷಗಳ ಕಾಲ ದುಡಿಯಬೇಕು. ಅಲ್ಲಿಗೆ ಅವನ ವೃತ್ತಿಯ ಮುಕ್ಕಾಲು ಭಾಗ ಮುಗಿದು ಬಿಡುತ್ತದೆ. ಹೀಗಿರುವುದರಿಂದ ಇಂತಹ ವೈದ್ಯರಿಂದ ಗುಣಮಟ್ಟದ ಚಿಕಿತ್ಸೆ ನಿರೀಕ್ಷಿಸಬೇಕಾದರೆ ರೋಗಿ ಅದೇ ಗುಣಮಟ್ಟದ ದುಡ್ಡಿನ ಕಂತೆ ಬಿಚ್ಚಬೇಕಾಗುತ್ತದೆ.

ನಮ್ಮ ಸರಕಾರಕ್ಕೆ ವೈದ್ಯರ‌ ಅಗತ್ಯ ಈ ಕೇಡುಗಾಲದಲ್ಲಿ ಅರ್ಥವಾಗುತ್ತದಷ್ಟೆ. ಕೋಟಿ ಸುರಿದು ವಿದ್ಯೆ ಪಡೆದವ ಯಾವ ಕಾರಣಕ್ಕೂ ತನ್ನ ಜೀವ ಪಣಕ್ಕಿಟ್ಟು ಕೆಲಸ ಮಾಡಲು ಬಿಲ್‌ಕುಲ್ ಬರಲಾರ.

ಕ್ಯೂಬಾ ಗುಣಮಟ್ಟದ ವೈದ್ಯರನ್ನು ಸೃಷ್ಟಿಸುವ ಮೂಲಕ ಕ್ಯೂಬನ್ ಕ್ರಾಂತಿಯ ಮಹಾನಾಯಕನೂ, ಸ್ವತಃ ಚರ್ಮರೋಗ ಶಾಸ್ತ್ರ ಪರಿಣತಿ ಪಡೆದಿದ್ದ ಸಂಗಾತಿ ಚೆ ಗುವಾರನ ಹೆಸರನ್ನು ನಿಜಾರ್ಥದಲ್ಲಿ‌ ಅಚ್ಚಳಿಯದಂತೆ ಉಳಿಸುತ್ತಿದೆ. ಆತ ಅಂದು ಯಾವ ಮನುಕುಲದ ನೋವಿಗೆ ಮಿಡಿದು ವೈದ್ಯ ವೃತ್ತಿ ತೊರೆದು ಕ್ರಾಂತಿಯ ಹಾದಿ ಹಿಡಿದನೋ, ಆತನ ಮೂಲ ವೃತ್ತಿಯ ಮೂಲಕ ಕ್ಯೂಬಾ ಇಂದು ಮನುಕುಲದ ಸೇವೆಯನ್ನು ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಮಾಡುತ್ತಿದೆ.

ಆದರೆ ವೈದ್ಯಕೀಯ ಶಿಕ್ಷಣವನ್ನು ಬೃಹತ್ ಉದ್ಯಮವಾಗಿ ಪರಿವರ್ತಿಸಿದ ಭಾರತೀಯರಾದ ನಮಗೆ ಕ್ಯೂಬಾದಿಂದ ಇಟಲಿಗೆ ಕೊರೋನಾ ವಿರುದ್ಧ ಹೋರಾಡಲು ಹೊರಟ ವೈದ್ಯಕೀಯ ಸೈನಿಕರ ಫೋಟೋಗಳನ್ನು ಫ್ಯಾಬ್ರಿಕೇಟ್ ಮಾಡಿ ಭಾರತದ… ಅದೂ ಆರೆಸ್ಸೆಸ್ಸಿನ ವೈದ್ಯರೆಂದು ಸುಳ್ಳು ಹೇಳಿ ನಮ್ಮ ಬೆನ್ನು ನಾವೇ ತಟ್ಟಲು ಮಾತ್ರ ಸಾಧ್ಯವಾಗುತ್ತಿದೆ.

*******

ಇದನ್ನೂ ಓದಿ: ಕೊರೊನಾ ವಿರುದ್ಧ ಹೋರಾಟ: ಇಟಲಿಗೆ ಬಲಿಷ್ಟ ವೈದ್ಯರ ತಂಡ ಕಳುಹಿಸಿಕೊಟ್ಟ ʼಕ್ಯೂಬಾʼ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಮಾನವತಾವಾದಿ’ ಸಂವಿಧಾನವನ್ನು ‘ಮನುವಾದಿ’ ಮಾಡಲು ಹೊರಟಿದ್ದಾರೆ: ಪ್ರೊ. ನರೇಂದ್ರ ನಾಯಕ್

0
'ನಮ್ಮ ಸಂವಿಧಾನವೇ ನಮಗೆ ಅಂತಿಮ; ಈಗ ಅವರು ಅದನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಮಾನವತಾವಾದಿ ಸಂವಿಧಾನವನ್ನು ಈಗ ಮನುವಾದಿ ಸಂವಿಧಾನ ಮಾಡಲು ಹೊರಟಿದ್ದಾರೆ' ಎಂದು ಭಾರತೀಯ ವಿಚಾರವಾದಿಗಳ ಸಂಘಗಳ ಒಕ್ಕೂಟದ ಪ್ರೊಫೆಸರ್ ನರೇಂದ್ರ ನಾಯಕ್...