Homeಮುಖಪುಟಭೀಮನೆಂಬ ಸಂತನನ್ನು ಹೊತ್ತು ಹೊರಟ ಕಳ್ಳರ ಸಂತೆ!

ಭೀಮನೆಂಬ ಸಂತನನ್ನು ಹೊತ್ತು ಹೊರಟ ಕಳ್ಳರ ಸಂತೆ!

ಬಹುಶಃ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶದಲ್ಲಿ ಹುಟ್ಟದೆ ಇದ್ದಿದ್ದರೂ ನಾವು ಬದುಕಿರುತ್ತಿದ್ದೆವು... ಅದು ಗುಲಾಮರಾಗಿ, ಹೆಣಗಳಾಗಿಯೇ..

- Advertisement -
- Advertisement -

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ‌ ನಡ್ಡಾ ಅವರ ಹೆಸರಿನಲ್ಲಿ ಅಂಬೇಡ್ಕರ್ ಅವರ ದೊಡ್ಡ ಚಿತ್ರವಿರುವ ಪೋಸ್ಟರ್ ವೊಂದು‌ ಹರಿದಾಡುತ್ತಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ‌ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಸಂದೇಶದ ಕರೆಯನ್ನು ನಡ್ಡಾ ನೀಡಿದ್ದಾರೆ. ಕಾರ್ಯಕರ್ತರು ಪ್ರತಿ ಮನೆಯಲ್ಲಿ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜಿಸುವಂತೆ, ಬಡವರ ಪರ ಕೇಂದ್ರ ಸರ್ಕಾರ ಜಾರಿಗೆ ತಂದ ಕಾರ್ಯಕ್ರಮಗಳನ್ನು‌ಜನರಿಗೆ ಪ್ರಚುರ ಪಡಿಸುವಂತೆ ………. ಕೊರೊನಾದ ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳಲು ಜನರಿಗೆ ಅರಿವು ಮೂಡಿಸುವುದು……….., ಬಹುಮುಖ್ಯವಾಗಿ ಸಂವಿಧಾನ, ಅಂಬೇಡ್ಕರ್ ಅವರು ಪ್ರತಿ ಪಾದಿಸಿದ ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ಆಶಯಗಳ ಬಗ್ಗೆ ಲೇಖನಗಳನ್ನು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವಂತೆ‌ ಸಂದೇಶದಲ್ಲಿ ಕರೆ ನೀಡಿದ್ದಾರೆ. ಇದನ್ನು ನೋಡಿದಾಗ ನನಗೆ ಗೋಮುಖ ವ್ಯಾಘ್ರಗಳು ಪುಣ್ಯಕೋಟಿಯ ಮುಖಗವುಸು ತೊಟ್ಟು ಕೊಟ್ಟಿಗೆಯಲ್ಲಿ ಕೂಟ ನಡೆಸಿರುವಂತೆ ಕಾಣುತ್ತಿದೆ.

ಅಂಬೇಡ್ಕರ್ ಅವರು ಕೊಟ್ಟ ಶ್ರೇಷ್ಠ ಸಂವಿಧಾನವನ್ನೆ ಬದಲಾಯಿಸುತ್ತೇವೆ, ಬದಲಾಯಿಸಬೇಕು ಎಂದು ಗಂಟಲು ಹರದುಕೊಳ್ಳವವರ ತಲೆ ಕಾಯುತ್ತಲೆ ಮುನ್ನೆಡೆದಿರುವ ಮಂದಿ ಅದೇ ಸಂವಿಧಾನದ ನಿರ್ಮಾತೃ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸೇಲಬಲ್ ಮಟಿರಿಯಲ್ ನಂತೆ ಹೊತ್ತು ಹೊರಟಿರುವುದು ನೌಟಂಕಿತನವೇ ಆಗಿದೆ.

ಸಂಘಪರಿವಾರದ ಮುಖವಾಣಿ ಪತ್ರಿಕೆಯ ಸಂಪಾದಕೀಯದಲ್ಲಿ ಅಂಬೇಡ್ಕರ್ ಅವರನ್ನು ಸರ್ವಶ್ರೇಷ್ಠರು‌ ಎಂದು ಕರೆದವರು ಆ ಅಂಬೇಡ್ಕರ್ ಬರೆದ ಬರೆದ ಸಂವಿಧಾನವನ್ನು ಬದಲಾಯಿಸಲು ಹೊರಟಿದ್ದಾರೆ. ಹೀಗೆ ಎರಡೂ ಬಗೆಯ ಪಾತ್ರಗಳನ್ನು ಇಂದು ಮಾಡಲಾಗುತ್ತಿದೆ. ದಲಿತರ ಮತಗಳನ್ನು ಸೆಳೆಯಲು ಪಕ್ಷಗಳು ಅಂಬೇಡ್ಕರ್ ಅವರನ್ನು ದೋಚುತ್ತಿದ್ದು, ನಿಜವಾದ ಅಂಬೇಡ್ಕರ್ ಅವರನ್ನು ಕೊಲ್ಲುವ ಕೆಲಸ ಮಾಡಲಾಗುತ್ತಿದೆ. ಅಂಬೇಡ್ಕರ್ ಅವರ ಪ್ರಭಾವಳಿಯನ್ನು ಅಳಿಸಿ ಹಾಕುವ ಪ್ರಯತ್ನಗಳು ಎಲ್ಲಾ ಕಾಲಕ್ಕೂ ಮುಂದುವರೆದಿದೆ. ಅವರ ಪ್ರತಿಮೆಗಳನ್ನು‌ ಕುಟ್ಟಿ ಕೆಡವಲಾಯಿತು, ಸಗಣಿ ನೀರು ಎರಚಲಾಯಿತು. ಸಂವಿಧಾನವನ್ನು ಸುಟ್ಟು ವಿಷಕಾರಿಕೊಳ್ಳಲಾಯಿತು, ಅಂಬೇಡ್ಕರ್ ರೂಪಿಸಿದ ಮೀಸಲಾತಿ, ಸಮಾನತೆ, ಸಹೋದರತೆಯ ಉದಾತ್ತ ಭಾವನೆಗಳಿಗೆ ಪ್ರತಿಕ್ಷಣವೂ ಬೆಂಕಿ ಇಡಲಾಗುತ್ತಿದೆ. ಕುದುರೆ ಏರಿದ್ದಕ್ಕೆ, ಸತ್ತ ದನ ತಿಂದಿದ್ದಕ್ಕೆ, ಊರ ನಡು ಬೀದಿಯಲ್ಲಿ ನಡೆದಾಡಿದ್ದಕ್ಕೆ ದಲಿತರನ್ನು ಬಡಿದು ಕೊಲ್ಲಲ್ಲಾಗಿದೆ. ಇದೆಲ್ಲಾ ನಡೆಯುತ್ತಿರುವಾಗ ನಡ್ಡಾ ಇಂತಹದ್ದೊಂದು ಸಂದೇಶ ಹೊರಡಿಸಿರುವುದು ಆತ್ಮವಂಚನೆಯ ಪರಮಾವಧಿ. ಭೀಮನೆಂಬ ಸಂತನನ್ನು ಕಳ್ಳರ ಸಂತೆಯೊಂದು ಊರೂರಿಗೆ ಹೊತ್ತು ಮಾರುತ್ತಿದೆ.

ಈ ದೇಶದ ಸಂವಿಧಾನ ಪದೆ ಪದೇ ತನ್ನ ಅಸ್ತಿತ್ವದ ಆತಂಕವನ್ನು ಎದುರಿಸುತ್ತಿದೆ. ಸಂವಿಧಾನ ಪರ ಮಾತಾಡುವವರು ದೇಶದ್ರೋಹಿ ಪಟ್ಟ ಹೊತ್ತು ಜೈಲು ಸೇರಬೇಕಾಗಿದೆ. ನಕ್ಸಲ್ ಸಿಂಪಥೈಸರ್‌ಗಳಾಗಿಸಿ ಜೈಲಿನಲ್ಲಿ ಕೊಳೆಸಲಾಗುತ್ತಿದೆ. ಕೊರೆಗಾಂ ವಿಜಯೋತ್ಸವ ಸಂದರ್ಭವೂ ಅಪಥ್ಯವಾಗಿ ದಾಳಿ ತುತ್ತಾಗಬೇಕಾಗುತ್ತದೆ. ಸಂವಿಧಾನದ ಮೂಲ ತಳಹದಿಯಾದ ಚರ್ಚೆ, ಸಂವಾದಗಳಿಗೂ ತೆರೆದುಕೊಳ್ಳದ ಮನುವಾದಿಗಳು ಇಂದು ಪ್ರಶ್ನಿಸುವ ಕೊರಳುಗಳನ್ನು ಸರಪಳಿಯಿಂದು ಬಿಗಿದು ಬಿಸಾಡುವ ಫ್ಯಾಸಿಸಂನಲ್ಲಿ ಮುಳುಗಿವೆ. ಈ ದೇಶದ ಪ್ರಧಾನಿಯನ್ನು ಪ್ರಶ್ನಿಸುವುದೂ ಪರಮ ಅಪರಾಧ ಮತ್ತು ದೇಶದ್ರೋಹದ ಕೃತ್ಯವಾಗುತ್ತದೆ. ಇದನ್ನೆಲ್ಲಾ‌ ಮರೆಮಾಚಲು ಮತ್ತೆ ಮತ್ತೆ ಅಂಬೇಡ್ಕರ್ ಅವರ ಚಿತ್ರ ತೋರಿಸುತ್ತಾ ಮಾರ್ಜಾಲ ನಡಿಗೆ (cat walk) ನಡೆದಿದೆ.

ಅಂಬೇಡ್ಕರ್ ಅವರನ್ನು ಇಂತವರ ಬಂಧನದಿಂದ ಬಿಡಿಸಿಕೊಳ್ಳುವ ಕೆಲಸ ಇಂದಿನ ಜರೂರು ಆಗಿದೆ. ಈ ಹಿಂದಿನಿಂದಲೂ ಒಂದು ತಂತ್ರವನ್ನು ಮನುವಾದಿಗಳು ಅನುಸರಿಸುತ್ತಲೆ ಬಂದಿದ್ದಾರೆ ಅದೆಂದರೆ : ತಮ್ಮ ವಿರೋಧಿ ಆದ ಸೈದ್ಧಾಂತಿಕ ಬದ್ದತೆಯುಳ್ಳ ಜನನಾಯಕನೊಬ್ಬನನ್ನು ತುಳಿದು ಹೊಸಕಿ ಹಾಕುವುದು. ಅದು ಸಾಧ್ಯವಾಗದಿದ್ದರೆ ಆತನ ಚಾರಿತ್ರ್ಯವಧೆ ಮಾಡುವುದು. ಅದೂ ಫಲ ನೀಡದಿದ್ದರೆ ಆತನನ್ನು ತಮ್ಮವನನ್ನಾಗಿಸಿಕೊಂಡು ದೈವೀಕರಿಸುವುದು.

ಅಂಬೇಡ್ಕರ್, ಗಾಂಧಿಯವರನ್ನು ಚರಿತ್ರೆಯಿಂದ ಅಳಿಸಲಾಗದ, ಅವರ ಪ್ರಭೆಯನ್ನು ಮುಚ್ಚಿಡಲಾಗದ ಕಾರಣ ಅವರನ್ನು ಈಗ ದೈವೀಕರಿಸುವ ಷಡ್ಯಂತ್ರಗಳು ನಡೆದಿವೆ. ಸಿದ್ದ ಮಾದರಿಗಳನ್ನು ಈ ದೇಶದ ಬಹುಜನರಲ್ಲಿ ಬಿತ್ತಲಾಗುತ್ತಿದೆ. ಇದು ಅಪಾಯಕಾರಿಯಾದುದ್ದು. ಜನನಾಯಕರುಗಳನ್ನು ದೈವೀಕರಿಸುವ ಮೂಲಕ ಅಥವಾ ದೇವರು, ಒಂದು ಸಮುದಾಯದ ನಾಯಕ ಎಂದು ಸಿದ್ದಮಾದರಿಗಳಿಗೆ ಬಿಗಿದು ಅವರೊಳಗಿನ ಸಮಷ್ಟಿಯ ವಿಚಾರ, ಸಿದ್ದಾಂತಗಳನ್ನು ಪ್ರಜ್ಞಾಹೀನಗೊಳಿಸುವ ಕುತಂತ್ರ ಜಾರಿಯಲ್ಲಿದೆ. ಒಂದೆಡೆ ಅಂಬೇಡ್ಕರ್ ವಿಚಾರಧಾರೆಗಳನ್ನು ಪ್ರಚುರ ಪಡಿಸಿ ಎಂದು ತಮ್ಮ ಕಾರ್ಯಕರ್ತರಿಗೆ ಕರೆ ನೀಡುತ್ತಲೆ ಅದೇ ವಿಚಾರಧಾರೆ ಎತ್ತುವವರನ್ನು ದೇಶದ್ರೋಹಿಗಳನ್ನಾಗಿಸಲಾಗುತ್ತಿದೆ.

ಇಂತಹ ಸಂದರ್ಭದಲ್ಲಿ ಈ ದೇಶದ ಬಹುಜನರು ಎಚ್ಚರಗೊಳ್ಳಬೇಕಿದೆ. ಅಂಬೇಡ್ಕರ್ ಅವರ ದೋಚುಕೋರರಿಂದ ಉಳಿಸಿಕೊಳ್ಳುವುದು ಎಂದರೆ ಅವರ ಪೋಟೊಗೆ , ಪ್ರತಿಮೆಗಳಿಗೆ ಹಾರ ಹಾಕಿ ಪೂಜಿಸುವುದಲ್ಲ. ಅಂಬೇಡ್ಕರ್ ಅವರು ಹೇಳಿದಂತೆ ಓಟ್ ಬ್ಯಾಂಕ್‌ನ ಸರಕನ್ನಾಗಿಸಿಕೊಂಡು ದಲಿತರ ಮತ ದೋಚುವ ಸಂಚನ್ನು ಬಯಲು ಮಾಡವುದು. ಅಂಬೇಡ್ಕರ್ ಎಂಬ ಮಹಾನ್ ದಾರ್ಶನಿಕನ ವಿಚಾರಧಾರೆ ಗಳನ್ನು ಎದೆಗಿಳಿಸಿಕೊಂಡು ಸ್ವಾಭಿಮಾನದಿಂದ ನಡೆಯುವುದೇ ಆಗಿದೆ.

ಇಪ್ಪತ್ತು ವರ್ಷಗಳ ನಂತರ ಆ ಶಾಲೆಗೆ ಹೋಗಿದ್ದೆ. ಮೂರು ವರ್ಷ ಹೈಸ್ಕೂಲ್, ಎರಡು ವರ್ಷ ಪಿಯು ಓದಿದ ಶಾಲೆ. ಬಹಳಷ್ಟು ಬದಲಾಗಿತ್ತು. ಪ್ರಿನ್ಸಿಪಾಲ್ ರೂಂನ ಕುರ್ಚಿಯಲ್ಲಿ ರಾಜಾರೋಷವಾಗಿ ಕುಳಿತು ಹುಡುಕಾಡುತ್ತಿದ್ದ ನನ್ನ‌ ಕಣ್ಣುಗಳಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪೋಟೊವೊಂದು ಗೋಡೆಯಲ್ಲಿ ತೂಗುತ್ತಿರುವುದು ಕೊನೆಗೂ ಕಾಣ ಸಿಕ್ಕಿತು.

ಪೋಟೊದ ಪ್ರೇಮ್‌ನ ಕೆಳ ತುದಿಯಲ್ಲಿ ಬಿಳಿ ಅಕ್ಷರದಲ್ಲಿ ” ಕೊಡುಗೆ: ಡಾ.ಬಿ.ಆರ್ ಅಂಬೇಡ್ಕರ್ ಯುವಕರ ಸಂಘ” ಎಂಬ ಮಾಸಲು ಅಕ್ಷರಗಳಿದ್ದವು. ಇಪ್ಪತ್ತು ವರ್ಷಗಳ ಹಿಂದಕ್ಕೆ ಜಾರಿದೆ…

ಅವ್ವ ಸವೆದ ಸೆರಗ ಜುಂಗಿನ ಗಂಟು ಬಿಚ್ಚಿ ಅರವತ್ತೈದು ರೂಪಾಯಿಗಳ ಚಿಲ್ಲರೆ ಕಾಸುಗಳನ್ನು ಆ ಮನುಷ್ಯನ (?) ನ ಮುಂದೆ ಸುರಿದು ಪ್ರಿನ್ಸಿಪಾಲ್ ರೂಂ ನ ತಲೆಬಾಗಿಲಿಗೆ ಒರಗಿ ಕೈ ಮುಗಿದು ನಿಂತಳು..

“ಏನಮ್ಮ ಸ್ವಲ್ಪ‌ಇನ್ನೂ ದೂರ ನಿಂತ್ಕೋ…. ಇಷ್ಟು ದುಡ್ಡಲ್ಲಿ ನಿನ್ಮಗನಿಗೆ ಸೀಟು ಕೊಡೋಕಾಗೋಲ್ಲ… ಮುನ್ನೂರು ರೂಪಾಯಿ ತಂದ್ರೆ ಸೀಟು. ದುಡ್ಡಿಲ್ಲದ ಮೇಲೆ‌ ಗೌರ್ಮೆಂಟ್ ಸ್ಕೂಲ್ಗೆ ಸೇರ್ಸು… ನಡಿ…, ನಡಿ‌‌‌ …. ಮುಖ ತೋರಿಸಬೇಡಿ ದುಡ್ಡು ತಂದ್ರೆ ಸೀಟು.” ಎಂದವನೆ ಆತ ಗೊಣಗಾಡಿಕೊಂಡು ತನ್ನ ಟೇಬಲ್ ಮೇಲಿದ್ದ ಚಿಲ್ರೆ ಕಾಸುಗಳನ್ನು ಲೆಡ್ಜರ್‌ನಿಂದ ಅವ್ವನ ಕಡೆಗೆ ನೂಕಿದ.

ಸಿಟ್ಟಿಗೆದ್ದವಳಂತೆ ಬರಬರನೆ ಕಾಸುಗಳನ್ನು ಬಾಚಿ ಸೆರಗಿಗೆ ಗಂಟಿಕ್ಕಿಕೊಂಡು ದರದರನೆ ಎಡಗೈಲಿ‌ ನನ್ನ ಎಳೆದಾಡಿಕೊಂಡು ತಾನು ಕೆಲಸ ಮಾಡುತ್ತಿದ್ದ ರೈಸ್ ಮಿಲ್‌ನ ಹುಬ್ಲು ಹಾರುವ ಗೋಡೌನ್‌ಗೆ ಸೇರಿಕೊಂಡು ಹಠಕ್ಕೆ ಬಿದ್ದವಳಂತೆ ತೌಡು ಸಾಣಿಸಿ ಬುಟ್ಟಿಯಲ್ಲಿ ತುಂಬಿಕೊಂಡು ಕೊಟ್ಟಿಗೆ ಕಟ್ಟಿದ್ದ ಬಸವಣ್ಯಮ್ಮರ ಮನೆಗೆ ಅಳೆದು ಕಾಸು ಎಣಿಸಿಕೊಂಡಳು. ಅಪ್ಪ ಕೈ ಜೋಡಿಸಿದ ಮುನ್ನೂರು ರೂಪಾಯಿ ಅವಳ ಕೈ ತುಂಬಿಕೊಂಡಿತು. ಮರು ದಿನ ಅದೇ ಪ್ರಿನ್ಸಿಪಾಲ್ ರೂಂ ತಲೆ ಬಾಗಿಲಿಗೆ ಒರಗಿ ನಡಿ ನಡಿ… ಎಂದವನ ಮುಖಬಣ್ಣ ಬಿಳಿಚಿಕೊಳ್ಳುವಂತೆ ನನ್ನನ್ನು ಸ್ಕೂಲ್ ಗೆ ದಾಖಲಿಸಿಯೇ ಬಿಟ್ಟಳು.

ಗೌರ್ಮೆಂಟ್ ಸ್ಕೂಲ್‌ನಲ್ಲಿ ಪ್ರೈಮರಿ ಓದು ಮುಗಿಸಿದ ನಾನು ಖಾಸಗಿ ಸ್ಕೂಲ್‌ನಲ್ಲಿ ಹೈಸ್ಕೂಲ್ ಓದಬೇಕೆಂಬ ಆಸೆ ಈಡೇರಿತ್ತು. ಈ‌ ಖಾಸಗಿ ಸ್ಕೂಲ್ ಜಾತಿವಂತರ ಮುಷ್ಟಿಯಲ್ಲಿದ್ದಿದ್ದರಿಂದ ಸೇರುವಾಗಲೇ ಜಾತಿ ಆಧಾರಿತ ತೀರ್ಮಾನ, ನಿಗಾ ವಹಿಸಲಾಗುತ್ತಿತ್ತು. ಇದೊಂದು ಯಾತನೆ. ಮಾತು ಮಾತಿಗೂ ಜಾತಿಯ ಹೀಗಳಿಕೆ ಮಾಮೂಲು ಆಗಿ ಹೋಗಿತ್ತು. ಸ್ಕಾಲರ್ ಶಿಫ್‌ಗೆ ಸಾಲು ನಿಂತಾಗ ಕ್ಲರ್ಕ್ ನಾಮದಯ್ಯ ಹಂಗಿಸದ ಮಾತೇ ಇರಲಿಲ್ಲ. “ಬಂದ್ರೇನೇನ್ರೋ…. ನಿಮ್ಮಪ್ಪನ ಮನೆ ಆಸ್ತಿ ತಗೊಂಡೋಕೆ ಬಂದಿದ್ದೀರ …” ಎಂದು ಉಗಿದು ಹೀಯಾಳಿಸಿ ನೋಟುಗಳ ಮುಖಕ್ಕೆಸೆದು ಕಳುಸುತ್ತಿದ್ದ. ಹೀಗಿರಲು ಅದೊಂದು ದಿನ ಸ್ಕೂಲ್‌ನಲ್ಲಿ ಅಂಬೇಡ್ಕರ್ ಯುವಕ ಸಂಘ ವನ್ನು ಹುಟ್ಟು‌ಹಾಕಿಬಿಟ್ಟೆವು. ದಲಿತರ ಹುಡುಗರ ಜೊತೆ ಕೆಲ ಶೂದ್ರ , ಸಾಬ್ರು ಗೆಳೆಯರು ಜೊತೆಗೂಡಿದರು. ಮೇಲ್ಜಾತಿಯ ಮೇಸ್ಟ್ರಿಗೆ ಸಹಿಸಲಾಗದ ಸಿಟ್ಟು ಸ್ಪೋಟಗೊಂಡಿತು. ಯೂನಿಫಾರಂ ಇಲ್ಲ. ಹೋಂ ವರ್ಕ್ ಸರಿಯಾಗಿ ಮಾಡಿಲ್ಲ, ಡ್ರಿಲ್ ಮಾಡೋಕೆ ಬರೋಲ್ಲ.. ಹೀಗೆ ಕುಂಟು ನೆಪಗಳ ಒಡ್ಡಿ ಬಡಿಯಲಾಗುತ್ತಿತ್ತು. ಇಂತಹವರ ನಡುವೆ ಅಂತಃಕರಣ, ಮಾನವೀಯತೆ ಜಾತಿಯನ್ನು ಮೀರಿದ್ದು ಎಂಬುದಕ್ಕೆ ಮೇಲ್ಜಾತಿಯವರೇ ಆಗಿದ್ದ ಮೇಷ್ಟ್ರೊಬ್ಬರು ನಮ್ಮ ವಿರುದ್ಧದ ಜಾತಿ‌ ಮಸಲತ್ತನ್ನು ಖಂಡಿಸುತ್ತಾ ನಮ್ಮನ್ನು ತಾಯಿ ಪ್ರೀತಿಯಿಂದ ಕಾಣುತ್ತಿದ್ದದ್ದು ನಮಗೆ ವಿಸ್ಮಯವೂ… ಬಲವೂ ಆಗಿತ್ತು.

ದೌರ್ಜನ್ಯ ವಿರುದ್ಧ ಹೋರಾಟಕ್ಕಿಳಿದೆವು. ಸ್ಕೂಲ್ ವಾರ್ಷಿಕೋತ್ಸವದ‌ ದಿನ ದೌರ್ಜನ್ಯಕ್ಕೆ ಪ್ರತಿಕಾರವೆಂಬಂತೆ ಅಂಬೇಡ್ಕರ್ ಪೋಟೊವೊಂದನ್ನು ಪ್ರೇಮ್ ಹಾಕಿಸಿ ಅದರ ಕೆಳ ತುದಿಯಲ್ಲಿ ಕೊಡುಗೆಯನ್ನು ಬರೆದು ವೇದಿಕೆಯಲ್ಲೆ ಪ್ರಿನ್ಸಿಪಾಲರ ಕೈಗಿಟ್ಟೆವೆ. ಪರಿಸ್ಥಿತಿ ಕೈ ಮೀರಿದ್ದನ್ನು ಅರಿತ ಪ್ರಿನ್ಸಿಪಾಲರು ಮತ್ತವರ ಗುಂಪು ಅಂಬೇಡ್ಕರ್ ಪೋಟೋವನ್ನು ಲ್ಯಾಬ್ ರೂಂ ನಲ್ಲಿ ತೂಗು ಹಾಕಿದ್ದರು. ಕೆಲವು ವರ್ಷಗಳ ನಂತರ ಆ ಶಾಲೆಗೆ ದಲಿತರೊಬ್ಬರು ಪ್ರಿನ್ಸಿಪಾಲ್ ಆಗಿ ಬಂದಾಗ ಲ್ಯಾಬ್ ರೂಂನಲ್ಲಿ ಧೂಳು ಹಿಡಿದಿದ್ದ ಅಂಬೇಡ್ಕರ್ ಪ್ರಿನ್ಸಿಪಾಲ್ ಛೇಂಬರ್‌ನ ಒಳಬಾಗಿಲ ತಲೆಯಲ್ಲಿ ಕುಳಿತಿದ್ದರು. ನಾನು ಕಾಲು ಮೇಲೆ ಕಾಲು ಏರಿಸಿಕೊಂಡು ಎದೆ ಎತ್ತಿ ಕುಳಿತು ಅವರತ್ತ ನೋಡುವಾಗ ಬಹುಶಃ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶದಲ್ಲಿ ಹುಟ್ಟದೆ ಇದ್ದಿದ್ದರೂ ನಾವು ಬದುಕಿರುತ್ತಿದ್ದೆವು… ಅದು ಗುಲಾಮರಾಗಿ, ಹೆಣಗಳಾಗಿಯೇ..

ಬಾಬಾ ಸಾಹೇಬ್ ಅಂಬೇಡ್ಕರ್ ‌ನಿಮಗೆ ಸಾವಿರದ ಶರಣು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಬರಹ ಅದ್ಭುತವಾಗಿದೆ ಮತ್ತಿ ವಾಸ್ತವ ಸತ್ಯದಿಂದ ಕೂಡಿದೆ.. ಧನ್ಯವಾದಗಳು

  2. ಇದೇ ಮೀಸಲಾತಿ ಪಡೆದು ಮುಂದುವರೆದವರಲ್ಲಿ ಹೊಲೆಯ(ಬಲಗಯ್) ಗುಂಪು ಸಿಂಹಪಾಲು ಪಡೆದಿದ್ದಾರೆ.ಅದೇ ಮಾದಿಗ(ಎಡಗಯ್)ರಿಗೆ ಅವರ ಮಂದಿಎಣಿಕೆಗೆ ತಕ್ಕಂತೆ ಪಾಲು ಸಿಗದೆ ತುಳಿತಕ್ಕೊಳಗಾಗಿದ್ದಾರೆ. ಇದನ್ನು ಸರಿಮಾಡಲು ಬಂದ ಜ.ಸದಾಶಿವ ವರದಿಯನ್ನು ಕಡೆಗಣಿಸಲಾಗಿದೆ.ಅಂಬೇಡ್ಕರ್ ಹುಟ್ಟುಹಬ್ಬದ ಈ ಹೊತ್ತಿನಲ್ಲಿ ಈ ಬಗೆಗೆ ತಕ್ಕ ಚರ್ಚೆಯಾಗಬೇಕು.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...