ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಇತರ ಇಬ್ಬರು ಮಂತ್ರಿಗಳೊಂದಿಗಿನ ಸಭೆಯಲ್ಲಿ ಭಾಗವಹಿಸಿದ ನಂತರ ಗುಜರಾತ್ ಶಾಸಕರೊಬ್ಬರು ಕೊರೋನಾ ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಕಾಂಗ್ರೆಸ್ ಶಾಸಕ ಇಮ್ರಾನ್ ಖೇದವಾಲಾ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು, ಅಲ್ಲಿ ಇತರ ಶಾಸಕರು ಮತ್ತು ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು. ಜಮಾಲ್‌ಪುರ-ಖಾದಿಯಾದ ಶಾಸಕರಾದ ಇವರು ಹಲವಾರು ದಿನಗಳಿಂದ ಅಧಿಕ ತಾಪಮಾನವನ್ನು ಹೊಂದಿದ್ದ ಕಾರಣ ತಮ್ಮ ಮಾದರಿಗಳನ್ನು ಪರೀಕ್ಷೆಗೆ ನೀಡಿದ್ದರು.
ಆದರೆ ಪರೀಕ್ಷೆಯ ಫಲಿತಾಂಶಗಳು ಬರುವ ಮೊದಲೇ ಅವರು ಇಬ್ಬರು ಕಾಂಗ್ರೆಸ್ ಶಾಸಕರೊಂದಿಗೆ ಸಿಎಂ ಜೊತೆ ಸಭೆ ಮತ್ತು ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎನ್ನಲಾಗಿದೆ. ತದನಂತರ ಅವರು ಕೊರೊನಾ ಪಾಸಿಟಿವ್ ಆಗಿದ್ದಾರೆ ಎಂದು ತಿಳಿದುಬಂದಿದ್ದು, ಪ್ರಸ್ತುತ ಅವರನ್ನು COVID-19 ರೋಗಿಗಳ ಚಿಕಿತ್ಸೆಗೆ ಮೀಸಲಾಗಿರುವ ಗಾಂಧಿನಗರದ ಎಸ್‌ವಿಪಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಶಾಸಕರು ಈ ಮೊದಲು ಎಷ್ಟು ಜನರೊಂದಿಗೆ ಸಂಪರ್ಕ ಹೊಂದಿದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆಡಳಿತವು ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಅವರೊಂದಿಗೆ ಹತ್ತಿರದ ಸಂಪರ್ಕ ಬಂದವರನ್ನೆಲ್ಲಾ ಹೋಮ್ ಕ್ವಾರಂಟೈನ್ ಮಾಡುವುದು, ಪರೀಕ್ಷೆಗೆ ಒಳಪಡಿಸುವುದು ಅಗತ್ಯವಾಗಿದೆ.
ಇಂದು ಬೆಳಿಗ್ಗೆ ನಡೆದ ಮುಖ್ಯಮಂತ್ರಿಯವರ ಭೇಟಿಯ ವೀಡಿಯೊಗಳನ್ನು ನೋಡಿದಾಗ ಅವರು ಸಾಮಾಜಿಕ ಅಂತರದ ನಿಯಮಗಳನ್ನು ಪಾಲಿಸಿದ್ದಾರೆ ಎಂಬುದು ಕಾಣುತ್ತದೆ. ಸಿಎಂ ಕನಿಷ್ಠ ಒಂದು ಮೀಟರ್ ಅಂತರದಲ್ಲಿ ಕುಳಿತುಕೊಂಡಿದ್ದಾರೆ. ಮುಖ್ಯಮಂತ್ರಿಯಲ್ಲದೆ, ಸಭೆಯಲ್ಲಿ ಆರೋಗ್ಯ ಮತ್ತು ಗೃಹ ರಾಜ್ಯ ಸಚಿವರು ಭಾಗವಹಿಸಿದ್ದರು.
ಗುಜರಾತ್‌ನಲ್ಲಿ ಇದುವರೆಗೆ 617 ಕೊರೋನಾವೈರಸ್ ಪ್ರಕರಣಗಳಿದ್ದು, ಅವರಲ್ಲಿ 55 ರೋಗಿಗಳು ಚೇತರಿಸಿಕೊಂಡಿದ್ದಾರೆ ಮತ್ತು 26 ಮಂದಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಜನರು ರೊಚ್ಚಿಗೇಳುವ ಸಾಧ್ಯತೆ: ಪೊಲೀಸ್ ಮಹಾನಿರ್ದೇಶಕರ ಮುನ್ನೆಚ್ಚರಿಕೆಯ ನೋಟಿಸ್
ಎನ್‌ಡಿಟಿವಿಯ ಪ್ರಣಯ್ ರಾಯ್ ವಿಶ್ಲೇಷಿಸಿದ ರಾಜ್ಯ ದತ್ತಾಂಶದ ಪ್ರಕಾರ ರಾಜ್ಯದಲ್ಲಿ ಲಾಕ್‌ಡೌನ್ ವೈರಸ್ ಅನ್ನು ನಿಧಾನಗೊಳಿಸಿಲ್ಲ ಎಂದು ತೋರಿಸಿದೆ. ಆದರೂ ಇತರ ರಾಜ್ಯಗಳು ಇದನ್ನು ಹತೋಟಿಯಲ್ಲಿಡಲು ಮತ್ತು ಸೋಂಕಿನ ಹರಡುವಿಕೆಯನ್ನು ತಡೆಯುವಲ್ಲಿ ಯಶಸ್ವಿಯಾಗಿದೆ.
ಗುಜರಾತ್, ನೆರೆಯ ಮಹಾರಾಷ್ಟ್ರದ ಜೊತೆಗೆ, ಅತಿ ಹೆಚ್ಚು ಸೋಂಕಿನ ಪ್ರಮಾಣವನ್ನು ಹೊಂದಿದೆ. ಅಲ್ಲಿ ಸರಿಸುಮಾರು ಎರಡು ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ.


