ಅತ್ಯಂತ ಕೆಟ್ಟ ಅನಕ್ಷರಸ್ಥ ರಾಜಕೀಯ ಅನಕ್ಷರಸ್ಥ.
-ಬರ್ಟೋಲ್ಟ್ ಬ್ರೆಕ್ಟ್
ಜರ್ಮನ್ ಸಾಹಿತಿ ಮತ್ತು ನಾಟಕಕಾರ
ಮಲಯಾಳಿಗಳಷ್ಟು ರಾಜಕೀಯ ಪ್ರಜ್ಞೆ ಇರುವ ಇನ್ನೊಂದು ಭಾಷಿಕ ಸಮುದಾಯ ದೇಶದಲ್ಲೇ ಇಲ್ಲ. ಕೇರಳದ ಯಾವುದೇ ಅಸೆಂಬ್ಲಿ ಚುನಾವಣೆಯಲ್ಲಿ ಅಧಿಕಾರಸ್ಥ ಪಕ್ಷ ಮರಳಿ ಅಧಿಕಾರಕ್ಕೇರದಿರಲು ಬಹುಶಃ ಇದೊಂದು ಬಲವಾದ ಕಾರಣವಿರಬೇಕು. ಅವರ ಅದೇ ಪ್ರಜ್ಞಾವಂತಿಕೆ ಅಲ್ಲಿ ಈವರೆಗೆ ಬಿಜೆಪಿಯನ್ನು ಬೆಳೆಯಲು ಬಿಟ್ಟಿಲ್ಲ. ಅಲ್ಲಿ ಯಾವಾಗಲೂ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವೆ ಹಣಾಹಣಿ. ಅವೆರಡೂ ಮೈತ್ರಿ ಕೂಟದವರು ಹಾವು ಮುಂಗುಸಿಯಂತೆ ಸದಾ ಕಚ್ಚಾಡುತ್ತಲೇ ಇರುತ್ತಾರೆ. ಆದರೆ ಅವರು ಅವರ ನಾಡಲ್ಲಿ ಬಿಜೆಪಿಯೆಂಬ ಕೋಮುವಾದಿ ಪಕ್ಷವನ್ನು ಗೆಲ್ಲಲು ಬಿಲ್‌ಕುಲ್ ಬಿಟ್ಟಿಲ್ಲಬಿಡುವುದಿಲ್ಲ. ಚುನಾವಣಾ ಪೂರ್ವ ಚಟುವಟಿಕೆಗಳ ಆಧಾರದಲ್ಲಿ ಬಿಜೆಪಿ ಮೇಲುಗೈ ಸಾಧಿಸಬಹುದೆಂಬ ಸಾಧ್ಯತೆ ಗೋಚರವಾದರೆ ಅಲ್ಲಿನ ಮತದಾರ ಬಿಜೆಪಿಗೆ ಕಠಿಣ ಸ್ಪರ್ಧೆ ಕೊಡುವ ಮೈತ್ರಿಕೂಟದ ಅಭ್ಯರ್ಥಿ ಅವರಿಗಿಷ್ಟವಿಲ್ಲದಿದ್ದರೂ ಆತನಿಗೆ ಮತ ನೀಡುತ್ತಾರೆ.ಅದರ ಹಿಂದಿನ ಉದ್ದೇಶ ಬಿಜೆಪಿ ಎಂಬ ಕೋಮುವಾದಿ ಪಕ್ಷ ಗೆಲ್ಲಬಾರದೆಂದಷ್ಟೇ.
ಕೇರಳಿಗರನ್ನು ಯಾರೂ ಮೆಚ್ಚಲು ಸಾಧ್ಯವಿಲ್ಲದ ಒಂದು ಕೆಟ್ಟ ಗುಣವೆಂದರೆ ಅಲ್ಲಿನ ಹತ್ಯಾ ರಾಜಕೀಯ. ರಕ್ತ ರಂಜಿತ ರಾಜಕೀಯಕ್ಕೆ ಕೇರಳ ಅತ್ಯಂತ ಕುಖ್ಯಾತವೂ ಹೌದು. ಅಲ್ಲಿ ಧರ್ಮದ ಹೆಸರಿನಲ್ಲಿ ಕೊಲೆಪಾತಕಗಳು ನಡೆಯುವುದು ತೀರಾ ಕಡಿಮೆ. ರಾಜಕೀಯ ಕಾರಣಗಳಿಗಾಗಿ ಅತ್ಯಂತ ಕೆಟ್ಟದಾಗಿ ಬಡಿದಾಡುವವರೂ ರಾಜ್ಯದ ಹಿತದ ವಿಚಾರಕ್ಕೆ ಬಂದಾಗ ಪಕ್ಷ ಬೇಧ ಮರೆತು ಒಂದಾಗುತ್ತಾರೆ (ಬಿಜೆಪಿ-ಸಂಘಪರಿವಾರಿಗರ ಹೊರತಾಗಿ). ಮೊನ್ನೆ ಮೊನ್ನೆಯವರೆಗೆ ಮುಖ್ಯಮಂತ್ರಿ ಕಾಮ್ರೇಡ್ ಪಿಣರಾಯಿ ವಿಜಯನ್ ಮೇಲೆ ಹರಿಹಾಯುತ್ತಿದ್ದವರೆಲ್ಲಾ ಕೊರೋನಾ ಮಾರಿ ಬಂದೆರಗಿದಾಗ ವಿರೋಧ ಪಕ್ಷದವರೂ ಕೂಡಾ ಎಲ್ಲವನ್ನೂ ಮರೆತು ರಾಜ್ಯದ ಹಿತಕ್ಕಾಗಿ ಮುಖ್ಯಮಂತ್ರಿ ಜೊತೆ ಗಟ್ಟಿಯಾಗಿ ನಿಂತು ಕೆಲಸ ಮಾಡುತ್ತಿದ್ದಾರೆ. ಕೊರೊನಾ ಮಹಾಮಾರಿ ಎರಗಿದ ಮೇಲೆ ಕೇರಳದ ವಿರೋಧ ಪಕ್ಷವಾದ ಕಾಂಗ್ರೆಸ್- ಮುಸ್ಲಿಂಲೀಗ್ ಈವರೆಗೆ ಮುಖ್ಯಮಂತ್ರಿಯ ವಿರುದ್ಧವಾಗಲೀ ಆಡಳಿತಾರೂಢರ ವಿರುದ್ಧವಾಗಲಿ ಒಂದೇ ಒಂದು ಹೇಳಿಕೊಳ್ಳಬಹುದಾದ ಆರೋಪ ಹೊರಿಸಿದ್ದಾಗಲಿ, ಟೀಕೆ ಮಾಡಿದ್ದಾಗಲಿ ಕಾಣ ಸಿಗುವುದಿಲ್ಲ. ಗಡಿನಾಡಿನವನಾದುದರಿಂದ ನನಗೆ ಧಾರಾಳವಾಗಿ ಮಲಯಾಳಿ ಗೆಳೆಯರಿದ್ದಾರೆ. ನನ್ನ ಮಲಯಾಳಿ ಗೆಳೆಯರಲ್ಲಿ ಕಮ್ಯೂನಿಸ್ಟರೂ ಇದ್ದಾರೆ, ಮುಸ್ಲಿಂ ಲೀಗಿಗರೂ-ಕಾಂಗ್ರೆಸಿಗರೂ ಇದ್ದಾರೆ. ಅವರು ಹಿಂದೆಲ್ಲಾ ವಾಟ್ಸಾಪ್ ಗ್ರೂಪುಗಳಲ್ಲಿ ಪರಸ್ಪರ ರಾಜಕೀಯ ಕೆಸರೆರೆಚಾಟ ನಡೆಸದ ದಿನಗಳೆ ವಿರಳವಾಗಿತ್ತು. ಯಾವಾಗ ಕೊರೊನಾ ವಕ್ಕರಿಸಿತೋ ಅಂದಿನಿಂದ ಅವರು ರಾಜ್ಯದ ರಕ್ಷಣೆಯ ಬಗ್ಗೆ ಚರ್ಚೆ ನಡೆಸುತ್ತಾರೆಯೆ ಹೊರತು ರಾಜಕೀಯ ಕೆಸರೆರೆಚಾಟ ನಡೆಸುವುದಿಲ್ಲ.

(ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್)
ಇದನ್ನೂ ಓದಿ: ಕೊರೊನ ವಿರುದ್ಧ ಕೇರಳದ ಆಡಳಿತ ಮತ್ತು ವಿಪಕ್ಷ ನಾಯಕರ ಜಂಟಿ ಸುದ್ದಿಗೋಷ್ಠಿ
ಅವರ ರಾಜಕೀಯ ಚರ್ಚೆಯೇನಿದ್ದರೂ ಬಿಜೆಪಿ ಈ ಖಾಯಿಲೆಯ ಹೆಸರಲ್ಲಿ ಮಾಡುತ್ತಿರುವ ಕೊಳಕು ರಾಜಕೀಯಕ್ಕಷ್ಟೇ ಸೀಮಿತ.
ಅವರ ಇಂತಹ ಪ್ರಜ್ಞಾವಂತಿಕೆ ಇದು ಮೊದಲೂ ಅಲ್ಲ. ನಿಫಾ ವೈರಸ್ ಕೇರಳಕ್ಕೆ ಅಪ್ಪಳಿಸಿದಾಗಲೂ ಅವರು ರಾಜಕೀಯ ಭಿನ್ನಾಭಿಪ್ರಾಯ ಮರೆತು ರಾಜ್ಯದ ಹಿತದ ಬಗ್ಗೆ ಮಾತ್ರ ಚರ್ಚೆ ನಡೆಸುತ್ತಿದ್ದರು. ಎರಡು ವರ್ಷಗಳ ಹಿಂದೆ ಬಂದ ಪ್ರವಾಹದಿಂದಾಗಿ ಅತೀ ಹೆಚ್ಚು ಹಾನಿಗೊಳಗಾದ ರಾಜ್ಯ ಕೇರಳ. ಆಗಲೂ ಅವರು ಪಕ್ಷ ಬೇಧ ಮರೆತು ರಾಜ್ಯದ ಮತ್ತು ನಾಡಿನ ಒಳಿತಿಗಾಗಿ ದುಡಿದಿದ್ದರು. ನಮ್ಮ ಕೆಲವು ಕನ್ನಡಿಗ ಜನಪ್ರತಿನಿಧಿಗಳೆಲ್ಲಾ ಆಗ ಮಾಡುತ್ತಿದ್ದ ನಾಟಕ ನೋಡಿ ನಾವೆಲ್ಲಾ ಅತೀವ ಸಿಟ್ಟಿಗೊಳಗಾಗಿದ್ದೆವು. ರೇಣುಕಾಚಾರ್ಯ ಮೊಣಕಾಲುಮಟ್ಟಕ್ಕೆ ನೀರಿಲ್ಲದ ಜಾಗದಲ್ಲಿ ತೆಪ್ಪಕ್ಕೆ ಹುಟ್ಟು ಹಾಕಿದ್ದು, ನೆರೆ ಹಾವಳಿಯಾದ ಪ್ರದೇಶದಲ್ಲಿ ಪರಿಹಾರ ಕಾರ್ಯವೆಂದು ಹೋದ ಪ್ರತಾಪ ಸಿಂಹ ಪಿಕ್‌ನಿಕ್‌ಗೆ ಹೋದಂತೆ ಡ್ರೆಸ್ ಮಾಡಿ ಮರದ ಗೆಲ್ಲು ಹಿಡಿದು ಫೋಟೋ ಫೋಸ್ ಕೊಟ್ಟದ್ದು ಇಂತಹ ನಾಟಕಗಳನ್ನು ನಾವು ಮರೆಯಲು ಸಾಧ್ಯವಿಲ್ಲ. ಆ ದಿನಗಳಲ್ಲಿ ಕೇರಳದ ಯಾವೊಬ್ಬ ಜನಪ್ರತಿನಿಧಿಯೂ ಫೋಟೋ ಫೋಸ್‌ಗಾಗಿ ನಾಟಕವಾಡಿಲ್ಲ. ಕೇರಳದ ಅನೇಕ ಶಾಸಕರು, ಮಂತ್ರಿಗಳು ಲುಂಗಿ ಎತ್ತಿಕಟ್ಟಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅಂದು ಯಾರೂ ಪಕ್ಷ ಬೇಧ ಮಾಡದೆ ತಮ್ಮ ಜನತೆಯ ಜೊತೆಗೆ ಗಟ್ಟಿಯಾಗಿ ನಿಂತಿದ್ದರು. ಒಂದು ವೇಳೆ ಯಾರಾದರೂ ಜನರ ಸಂಕಷ್ಟವನ್ನು ರಾಜಕೀಯ ಲಾಭಕ್ಕೆ ಬಳಸಿದ್ದರೆ ಅಲ್ಲಿನ ಜನ ಬಿಲ್‌ಕುಲ್ ಅದನ್ನು ಸಹಿಸುತ್ತಿರಲಿಲ್ಲ. ಅಲ್ಲಿನ ರಾಜಕಾರಣಿಗಳಿಗೆ ಮತದಾರರ ಭಯವೂ ಇದೆ.
ನಮ್ಮ ಕನ್ನಡದ ಟಿವಿ ಮತ್ತು ಮುದ್ರಣ ಮಾಧ್ಯಮಗಳು ಕೊರೊನಾ ಎಂಬ ಖಾಯಿಲೆಗೆ ಧರ್ಮದ ಹಣೆಪಟ್ಟಿ ಹಚ್ಚಿದೆ. ಇಲ್ಲಿನ ಅತ್ಯಂತ ಕೊಳಕು ಟಿವಿ ಚಾನೆಲ್‌ಗಳಲ್ಲಿ ಒಂದಾದ ಸುವರ್ಣ ಟಿವಿ ಇಲ್ಲಿ ಹೇಗೆ ಸಂಘಪರಿವಾರದ ಪರ ನಿಂತು ಅಸಹ್ಯ ರಾಜಕೀಯ ಮಾಡುತ್ತಿದೆ ಎನ್ನುವುದನ್ನು ನಾವೆಲ್ಲಾ ನೋಡುತ್ತಿದ್ದೇವೆ. ಅದೇ ಸಮೂಹದ ಬಿಜೆಪಿಯ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್‌ರ ಏಶ್ಯಾನೆಟ್ ಎಂಬ ಮಲಯಾಳಂ ಚಾನೆಲ್ ಅದೆಷ್ಟು ಸೆಕ್ಯುಲರ್ ಆಗಿದೆಯೆಂದರೆ ಅದು ಬಿಜೆಪಿ ನಾಯಕನೊಬ್ಬನ ಮಾಲೀಕತ್ವದ ಚಾನೆಲ್ ಎಂದು ನಂಬಲೂ ಸಾಧ್ಯವಾಗುತ್ತಿಲ್ಲ. ಅಲ್ಲಿಯೇನಾದರೂ ಟಿವಿ ಚಾನೆಲ್‌ಗಳು ಕೋಮುವಾದದ ಬಾಲ ಬಿಚ್ಚಿದ್ದರೆ ಅಲ್ಲಿನ ಜನತೆ ಪಕ್ಷ, ಜಾತಿ, ಧರ್ಮ ಬೇಧ ಮರೆತು ಅಂತಹ ಚಾನೆಲ್‌ಗಳ ಹೆಡೆಮುರಿ ಕಟ್ಟಿ ಹಾಕುತ್ತಿದ್ದರು.
ಹಾಗೆ ನೋಡಹೋದರೆ ಆರೆಸ್ಸೆಸ್ ಸೈದ್ದಾಂತಿಕವಾಗಿ ಅತೀ ಹೆಚ್ಚು ಬಲಿಷ್ಠವಾಗಿರುವ ರಾಜ್ಯಗಳಲ್ಲಿ ಕೇರಳ ಪ್ರಮುಖವಾದುದು. ಆದರೆ ಸಂಖ್ಯಾಬಲದಲ್ಲಿ ಅದು ಅಲ್ಲಿ ಬೆಳೆಯಲು ಸಾಧ್ಯವಾಗಿಲ್ಲ ಮತ್ತು ಅವರ ಸೈದ್ದಾಂತಿಕ ಬಲವನ್ನು ಅಲ್ಲಿ ಅವರಿಗೆ ಮತಗಳಾಗಿ ಪರಿವರ್ತಿಸಲೂ ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಅಲ್ಲಿನ ಜನರ ರಾಜಕೀಯ ಪ್ರಜ್ಞಾವಂತಿಕೆ.
ಇದನ್ನೂ ಓದಿ: ಲಾಕ್‌ಡೌನ್; ಕರ್ನಾಟಕಕ್ಕೆ ಕೇರಳ-ತಮಿಳುನಾಡು ಮಾದರಿಯಾಗಬಾರದೇಕೆ?
ಕೇರಳ ಸ್ವಾಮಿ ನಾರಾಯಣ ಗುರುಗಳ ಕರ್ಮಭೂಮಿ. ಅವರು ಒಂದೇ ಜಾತಿ,ಒಂದೇ ಧರ್ಮ, ಒಂದೇ ದೇವರು ಎಂದು ಬೋಧಿಸಿ ಸಮಾಜದ ತುಳಿತಕ್ಕೊಳಗಾದ ಜನರಲ್ಲಿ ಸ್ವಾಭಿಮಾನದ ಪ್ರಜ್ಞೆ ಮೂಡಿಸಿದರು. ಅವರು ಹುಟ್ಟು ಹಾಕಿದ ಸ್ವಾಭಿಮಾನಿ ಚಳವಳಿ ಅಲ್ಲಿ ಹೊಸ ಶಖೆಯೊಂದಕ್ಕೆ ನಾಂದಿ ಹಾಡಿತು. ಅಲ್ಲಿ ಕಮ್ಯೂನಿಸ್ಟ್ ಪಕ್ಷಕ್ಕೆ ಗಟ್ಟಿ ನೆಲೆ ಸಿಗಲು ಇರುವ ಕೆಲವು ಕಾರಣಗಳಲ್ಲಿ ಸ್ವಾಮಿ ನಾರಾಯಣ ಗುರುಗಳ ಸ್ವಾಭಿಮಾನಿ ಚಳುವಳಿಯ ಪ್ರಭಾವವೂ ದಟ್ಟವಾಗಿದೆ. ಸ್ವಾಮಿ ನಾರಾಯಣ ಗುರುಗಳು ಧಾರ್ಮಿಕ ಮನುಷ್ಯನಾದರೂ ಅವರ ಶಿಷ್ಯಂದಿರಲ್ಲಿ ನಾಸ್ತಿಕರೂ ಇದ್ದರು, ಕೇರಳಕ್ಕೆ ಕೇರಳವೇ ಮಹಾಕವಿ ಎಂದು ಗೌರವಿಸುವ ಕ್ರಾಂತಿ ಕವಿ ಕುಮಾರನಾಶಾನ್ ಕೂಡಾ ಸ್ವಾಮಿಗಳ ಶಿಷ್ಯರಾಗಿದ್ದರು. ಅವರ ಹೆಸರಲ್ಲಿ ಹುಟ್ಟು ಹಾಕಲಾದ ಸಂಸ್ಥೆಯಾದ SNDP ಸ್ವಾಮಿ ನಾರಾಯಣ ಗುರು ಧರ್ಮ ಪರಿಪಾಲನಾ ಸಂಸ್ಥೆ ಕೇರಳದಾದ್ಯಂತ ಚಾಚಿರುವ ಬಲಿಷ್ಠ ಸಂಸ್ಥೆ. ಒಂದು ಕಾಲದಲ್ಲಿ ಸ್ವಾಮಿ ನಾರಾಯಣ ಗುರುಗಳ ಮಿಶನನ್ನು ಸಮರ್ಥವಾಗಿ ಮುನ್ನಡೆಸಿದ ಆ ಸಂಸ್ಥೆಯನ್ನು ಇತ್ತೀಚಿನ ವರ್ಷಗಳಲ್ಲಿ ಅದರ ಕೆಲ ನಾಯಕರು ಬಿಜೆಪಿಗೆ ಒತ್ತೆ ಇಟ್ಟು ಕೊಳಕು ರಾಜಕೀಯ ಪ್ರಾರಂಭಿಸಿದ್ದರು. ಕಳೆದ ಅಸೆಂಬ್ಲಿ ಮತ್ತು ಪಾರ್ಲಿಮೆಂಟ್ ಚುನಾವಣೆಯಲ್ಲಿ ಅದು ಕೆಲವೆಡೆ ಬಿಜೆಪಿಯ ಪರ ಕೆಲಸ ಮಾಡಿದರೂ ಅದರ ಸದಸ್ಯರುಗಳೇ ಆದ ಅಲ್ಲಿನ ಈಳವರಲ್ಲಿ ದೊಡ್ಡ ಸಂಖ್ಯೆಯ ಜನ ಅದರ ಕೊಳಕು ರಾಜಕೀಯವನ್ನು ತಿರಸ್ಕರಿಸಿದರು.
ಅಪ್ಪುಗೆ ಅಮ್ಮ ಮಾತಾ ಅಮೃತಾನಂದಮಯಿ ಒಂದು ಕಾಲದಲ್ಲಿ ಕೇರಳದ ಜನರನ್ನು ವಶೀಕರಣ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಕೆಲವೇ ವರ್ಷಗಳಲ್ಲಿ ಅಲ್ಲಿನ ಪ್ರಜ್ಞಾವಂತ ಜನತೆ ಅವರ ಅಸಲಿಯತ್ತು ಅರಿತು ಅವರ ಅಪ್ಪುಗೆಯಿಂದ ಕಳಚಿಕೊಂಡರು. ಮೊನ್ನೆ ಕೇರಳದ ಸ್ವಾಮೀಜಿಯೊಬ್ಬರ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆ ಸ್ವಾಮೀಜಿ ಮಾತಾ ಅಮೃತಾನಂದಮಯಿಯನ್ನು ಉದ್ದೇಶಿಸಿ “ಸಮಸ್ತ ಮಲಯಾಳಿಗಳು ದುಃಖಿತರಾಗಿರುವಾಗ, ಆಪತ್ತಿನಲ್ಲಿರುವಾಗ ನಿಮ್ಮ ಅಪ್ಪುಗೆ ಎಲ್ಲಿ ಹೋಯಿತು…? ಈಗ ಅದ್ಯಾವ ಹುತ್ತ ಸೇರಿರುವಿರಿ..? ಈಗ ನಮಗೆ, ಸಮಸ್ತ ಮಲಯಾಳಿಗಳಿಗೆ ಒಬ್ಬರೇ ಅಮ್ಮ.. ಅವರು ನಮ್ಮ ಶೈಲಜಾ ಅಮ್ಮ” (ಆರೋಗ್ಯ ಸಚಿವೆ) ಎಂದು ಮಾತಾ ಅಮೃತಾನಂದಮಯಿಯವರನ್ನು ಜಾಡಿಸಿದ್ದರು.

(ಕೇರಳ ಆರೋಗ್ಯ ಮಂತ್ರಿ ಕೆ. ಕೆ. ಶೈಲಜ ಟೀಚರ್)
ಕೇರಳೀಯರಲ್ಲಿ ಅದರಲ್ಲೂ ಕಾಸರಗೋಡಿಗರಲ್ಲಿ ದೊಡ್ಡ ಸಂಖ್ಯೆಯಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯುವವರಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೆಲ್ಲರಿಗೂ ಸಾಂತ್ವನ ಹೇಳಿದರು. ವಿದೇಶಗಳಲ್ಲಿ ದುಡಿಯುವ ನಮ್ಮ ಮಲಯಾಳಿ ಸಹೋದರರು ನಮ್ಮ ಆಸ್ತಿ. ಅವರು ನಮ್ಮ ಆರ್ಥಿಕತೆಯ ದೊಡ್ಡ ಶಕ್ತಿಯೂ ಹೌದು. ಅವರು ಎಲ್ಲೇ ಇದ್ದರೂ ಅವರ ಕುಟುಂಬಿಕರ ಬಗ್ಗೆ ಭಯಪಡಬೇಕಾಗಿಲ್ಲ, ಅವರ ಸುರಕ್ಷತೆಯ ಜವಾಬ್ದಾರಿಯನ್ನು ನಾವು ಹೊತ್ತಿದ್ದೇವೆ” ಎಂಬ ಧೈರ್ಯ ತುಂಬುವ ಮಾತುಗಳನ್ನಾಡಿದರು.
ಇದನ್ನೂ ಓದಿ: ಕೊರೊನಾ ವಿರುದ್ಧ ಹೋರಾಡಲು ರಾಜ್ಯವು ಕೇರಳ ಮಾದರಿ ಅನುಸರಿಸಲಿ: ಎಚ್.ಡಿ ಕುಮಾರಸ್ವಾಮಿ
ಕೋವಿಡ್ ವಿರುದ್ಧದ ಸಮರದಲ್ಲಿ ಅವರು ಅಭೂತಪೂರ್ವ ಯಶಸ್ಸು ಕಂಡರು. ಯಾವನೇ ಒಬ್ಬ ಮಲಯಾಳಿಯೂ ಹಸಿವಿನಿಂದ ನರಳಬಾರದೆಂದು ಅವರ ಮನೆಬಾಗಿಲಿಗೆ ಆಹಾರ ಸಾಮಾಗ್ರಿಗಳನ್ನು ಒದಗಿಸುವ ಕೆಲಸವನ್ನು ಶಕ್ತಿ ಮೀರಿ ಮಾಡಿದರು. ಒಂದೊಮ್ಮೆ ಇದೇ ಪಿಣರಾಯಿಯ ಕೇರಳವನ್ನು ಪ್ರಧಾನಿ ಮೋದಿ “ಹಸಿವು ಮತ್ತು ಕ್ಷಾಮಪೀಡಿತ ಆಫ್ರಿಕಾದ ದಟ್ಟ ದರಿದ್ರ ರಾಷ್ಟ್ರ ಸೊಮಾಲಿಯಾಕ್ಕೆ ಹೋಲಿಸಿದರು. ಇಂದು ಕೇರಳ ಕೊರೊನಾ ವಿರುದ್ಧದ ಸಮರದಲ್ಲಿ ಜಗತ್ತಿಗೇ ಒಂದು ಅನುಕರಣಾರ್ಹ ಮಾದರಿಯನ್ನು ತೋರಿಸಿದೆ. ಕೊರೊನಾ ಪ್ರಕರಣದಲ್ಲಿ ಭಾರತದಲ್ಲೇ ಅತೀ ಹೆಚ್ಚು ಅಂದರೆ 8.6% ಸಾವು ಸಂಭವಿಸಿರುವುದು ಸ್ವಯಂಘೋಷಿತ “ಗುಜರಾತ್ ಮಾಡೆಲ್” ಪೊಳ್ಳು ಘೋಷಣೆ ಹಾಕಿದವರ ನಾಡಿನಲ್ಲಿ. ಕೊರೊನಾ ವಿರುದ್ಧದ ಸಮರದಲ್ಲಿ ಅತ್ಯಂತ ಕಳಪೆ ಪ್ರದರ್ಶನ ಪ್ರಧಾನಿ ಮತ್ತು ಗೃಹ ಮಂತ್ರಿಯ ತವರು ರಾಜ್ಯದ್ದು ಎಂದು ವಿಷಾದದಿಂದ ಹೇಳಬೇಕಾಗುತ್ತದೆ.
ಕೇರಳದ ಹೋರಾಟ ಅದ್ಯಾವ ಪರಿಯ ಯಶಸ್ಸು ಸಾಧಿಸಿದೆಯೆಂದರೆ ಒಂದೊಮ್ಮೆ ಕೊರೊನಾ ಅತೀ ವೇಗದಲ್ಲಿ ಹಬ್ಬುತ್ತಿರುವ ರೆಡ್ ಝೋನ್ ರಾಜ್ಯಗಳಲ್ಲಿ ಕೇರಳ ಅಗ್ರ ಸ್ಥಾನದಲ್ಲೊಂದಾಗಿತ್ತು. ಆದರೆ ಇಂದು ಅದನ್ನೆದುರಿಸುವಲ್ಲಿ ಅತ್ಯಂತ ಯಶಸ್ಸು ಗಳಿಸಿದ ರಾಜ್ಯ ಕೇರಳ. ಅಲ್ಲಿ ಈ ಬರಹ ಸಿದ್ಧಪಡಿಸುವಷ್ಟು ಹೊತ್ತಿಗೆ ಸಂಭವಿಸಿದ್ದು ಕೇವಲ ಎರಡು ಸಾವುಗಳು ಮಾತ್ರ. ಅದಕ್ಕಿಂತ ಹೆಚ್ಚು ಸಾವು ಅಂದರೆ ಒಟ್ಟು ನಾಲ್ಕು ಸಾವುಗಳು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಹಠಮಾರಿತನದಿಂದ ಕೇರಳ-ಕರ್ನಾಟಕ ಗಡಿಯಲ್ಲಿ ತುರ್ತು ಚಿಕಿತ್ಸೆಗೆ ಆಂಬುಲೆನ್ಸ್‌ಗಳಿಗೆ ಪ್ರವೇಶ ನಿರಾಕರಿಸಿದ್ದರಿಂದ ಸಂಭವಿಸಿತು.( ಇದು ಯಾವುದೂ ಕೊರೋನಾ ಸೋಂಕಿತ ಸಾವುಗಳಲ್ಲ)
ಕೇರಳದ ಚಿಕಿತ್ಸಾ ಗುಣಮಟ್ಟದ ಕುರಿತಂತೆ ಕೊರೋನಾ ಸೋಂಕಿತನಾಗಿದ್ದ ಬ್ರಿಟನ್ ಪ್ರವಾಸಿ ಹೇಳಿದ್ದ ಮಾತನ್ನು ಇಲ್ಲಿ ಉಲ್ಲೇಖಿಸಲೇಬೇಕು. “ನನಗೆ ಕೇರಳದಲ್ಲಿ ಸಿಕ್ಕಿದಷ್ಟು ಗುಣಮಟ್ಟದ ಚಿಕಿತ್ಸೆ ಬ್ರಿಟನ್‌ನಲ್ಲಿ ಸಿಗುತ್ತಿತ್ತೆಂಬ ಬಗ್ಗೆ ಖಾತರಿಯಿಲ್ಲ” ಎಂದಾಗಿತ್ತು ಆತ ಹೇಳಿದ್ದು. ಅಮೆರಿಕಾದ ಪ್ರತಿಷ್ಟಿತ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ಎಪ್ರಿಲ್ ಹನ್ನೊಂದರ ತನ್ನ ಮುಖಪುಟದಲ್ಲಿ ಕೇರಳದ ಕೊರೊನಾ ವಿರುದ್ಧದ ಸಮರ, ಅಲ್ಲಿನ ಮುಖಮಂತ್ರಿ ಪಿಣರಾಯಿ ವಿಜಯನ್ ಮತ್ತು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್‌ರನ್ನು ಹೊಗಳಿ ವರದಿ ಪ್ರಕಟಿಸಿತು.
ಇದಕ್ಕೆ ಅಲ್ಲಿನ ಅಧಿಕಾರರೂಢ ಕಮ್ಯೂನಿಸ್ಟ್ ಸರಕಾರವೊಂದೇ ಕಾರಣವಲ್ಲ, ಅಲ್ಲಿನ ಜನತೆ ಕೂಡಾ ಅದಕ್ಕೆ ಕಾರಣಕರ್ತರು. ಅವರು ತೋರಿದ ಇಚ್ಚಾ ಶಕ್ತಿ, ರಾಜಕೀಯ ರಹಿತವಾಗಿ ಪಕ್ಷಾತೀತವಾಗಿ ಅಲ್ಲಿನ ಜನತೆ ಪಿಣರಾಯಿಯವರ ನೇತೃತ್ವದ ತಂಡದೊಂದಿಗೆ ಕೈಜೋಡಿಸಿದ್ದು ಕೇರಳದ ಈ ಯಶಸ್ಸಿಗೆ ಕಾರಣ.
ಓದನ್ನೂ ಓದಿ: ಕೊರೊನ ವಿರುದ್ಧ ಹೋರಾಡಲು 20 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿದ ಕೇರಳ ಸಿಎಂ ವಿಜಯನ್



ಕೇರಳದ ಮಾದರಿಯನ್ನು ಇಡೀ ದೇಶದಲ್ಲಿ ಜಾರಿಗೆ ತರಬೇಕು.