Homeಮುಖಪುಟಲಾಕ್‌ಡೌನ್; ಕರ್ನಾಟಕಕ್ಕೆ ಕೇರಳ-ತಮಿಳುನಾಡು ಮಾದರಿಯಾಗಬಾರದೇಕೆ?

ಲಾಕ್‌ಡೌನ್; ಕರ್ನಾಟಕಕ್ಕೆ ಕೇರಳ-ತಮಿಳುನಾಡು ಮಾದರಿಯಾಗಬಾರದೇಕೆ?

- Advertisement -
- Advertisement -

ಮಾರಣಾಂತಿಕ ಕೊರೋನಾ ವೈರಸ್‌ ಇಂದು ಇಡೀ ವಿಶ್ವಕ್ಕೆ ಮಾರಕವಾಗಿರುವಂತೆ ಭಾರತಕ್ಕೂ ಕರ್ನಾಟಕ ಕ್ಕೂ ಬೆದರಿಕೆ ಒಡ್ಡಿದೆ. ಪರಿಣಾಮ ಕೊರೋನಾ ವೈರಸ್‌ ಹರಡುವುದನ್ನು ತಡೆಯುವ ಸಲುವಾಗಿ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಲಾಕ್‌ಡೌನ್ ನಿರ್ಧಾರ ಅನಿವಾರ್ಯ ಎಂಬುದರಲ್ಲಿ ಎರಡು ಮಾತಿಲ್ಲ.

ಆದರೆ, ಕೆಲಸ, ಕೂಲಿ ಅಥವಾ ಸಂಬಳ ಇಲ್ಲದ ದೇಶದ ಮತ್ತು ರಾಜ್ಯದ ಶೇ.70ರಷ್ಟು ಜನ ಸಮುದಾಯ ತಮ್ಮ ಊಟಕ್ಕೆ ಏನು ಮಾಡಬೇಕು? ಇವರ ಯೋಗಕ್ಷೇಮದ ಕುರಿತು ಸರ್ಕಾರ ನಿರೂಪಿಸಿರುವ ಕಾರ್ಯಯೋಜನೆ ಏನು? ಯಾವುದೇ ನಿರ್ದಿಷ್ಟ ಯೋಜನೆಗಳಿಲ್ಲದೆ ಲಾಕ್‌ಡೌನ್ ಘೋಷಣೆ ಮಾಡಿದರೆ ಇಂತಹ ಜನ ಒಂದೊತ್ತಿನ ಊಟಕ್ಕೆ ಏನು ಮಾಡಬೇಕು? ಎಂಬುದು ಪ್ರಸ್ತುತ ಪ್ರಶ್ನೆ.

ಆದರೆ, ರಾಜ್ಯದ ಮಟ್ಟಿಗೆ ಕಟ್ಟಡ ಕಾರ್ಮಿಕರ ನಿಧಿಗೆ ಕೈ ಇಟ್ಟಿರುವ ರಾಜ್ಯ ಸರ್ಕಾರದ ಬಳಿ ಇಂತಹ ಎಲ್ಲಾ ಮಧ್ಯಮ, ಕೆಳ ಮಧ್ಯಮ ಮತ್ತು  ಕಡು ಬಡ ಕುಟುಂಬಗಳ ಹೊಟ್ಟೆ ತುಂಬಿಸುವ ಯಾವುದೇ ಯೋಜನೆಗಳೂ ಇಲ್ಲ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಹಾಗಾದರೆ, ಲಾಕ್‌ಡೌನ್ ಅನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಷರಾ ಬರೆಯುವ ಆಡಳಿತ ವರ್ಗ ಈ ಜನರ ಊಟಕ್ಕೆ ಒಂದು ಉತ್ತರ ನೀಡಬೇಕು ಅಲ್ಲವೇ? ಇದಕ್ಕೆ ಸಿದ್ಧತೆ ನಡೆಸಿ ಆನಂತರ ಲಾಕ್‌ಡೌನ್ ಮುಂದುವರೆಸಬೇಕು ಅಲ್ಲವೇ?

ಕೇರಳ ಮತ್ತು ತಮಿಳುನಾಡು ನಮಗೆ ಮಾದರಿಯಾಗಬಾರದು ಏಕೆ?

ದೇಶದಾದ್ಯಂತ ಲಾಕ್‌ಡೌನ್ ಮಾಡಿರುವಂತೆ ಕೇರಳ ಮತ್ತು ತಮಿಳುನಾಡಿನಲ್ಲೂ ಸಹ ಲಾಕ್‌ಡೌನ್ ಮಾಡಲಾಗಿದೆ. ಪರಿಣಾಮ ಇಲ್ಲಿಯೂ ಸಹ ಮಧ್ಯಮ, ಕೆಳ ಮಧ್ಯಮ ಮತ್ತು ಬಡ ಜನರು ಕೆಲಸ ಕೂಲಿ ಅಥವಾ ಸಂಬಳ ಇಲ್ಲದೆ ಪರಿತಪಿಸುತ್ತಿದ್ದಾರೆ. ಆದರೆ, ಅಲ್ಲಿನ ಸರ್ಕಾರ ಈ ಪರಿಸ್ಥಿತಿಯನ್ನು ನೋಡಿಕೊಂಡು ಸುಮ್ಮನೆ ಕೂತಿಲ್ಲ.

ಬದಲಾಗಿ ಪರಿಣಾಮಕಾರಿ ಯೋಜನೆಗಳ ಜಾರಿಗೆ ಮುಂದಾದ ಕೇರಳ ಮತ್ತು ತಮಿಳುನಾಡು ಸರ್ಕಾರ ಬಿಪಿಎಲ್‌ ಕಾರ್ಡ್‌ ಇರುವ ಪ್ರತಿ ಮನೆ ಮನೆಗೆ ಒಂದು ತಿಂಗಳಿಗೆ ಸಾಕಾಗುವಷ್ಟು ಆಹಾರ ಧಾನ್ಯಗಳ ಕಿಟ್‌ ಅನ್ನು ಸಿದ್ದಪಡಿಸಿ ನೀಡುತ್ತಿದೆ. ಈ ಕಿಟ್‌ನಲ್ಲಿ ಅಕ್ಕಿ, ತೊಗರಿ ಬೇಳೆ, ಉದ್ದಿನ ಬೇಳೆ, ಗೋದಿ, ಅಡಿಗೆ ಎಣ್ಣೆ, ಮೆಣಸಿನಕಾಯಿ ಪುಡಿ, ಅರಿಶಿನ ಪುಡಿ, ಸಕ್ಕರೆ, ಉಪ್ಪು ಮತ್ತು 5 ಮೊಟ್ಟೆಯನ್ನು ಒಳಗೊಂಡಿದೆ. ಮುಂದಿನ ತಿಂಗಳು ಲಾಕ್‌ಡೌನ್ ಮುಂದುವರೆದರೆ ಮತ್ತೆ ಆಹಾರ ಕಿಟ್‌ ನೀಡುವುದಾಗಿ ಅಲ್ಲಿನ ಸರ್ಕಾರ ಆಶ್ವಾಸನೆ ನೀಡಿದೆ.


ಇದನ್ನೂ ಓದಿ: ಲಕ್ಷಾಂತರ ಜನ ನಿರ್ಗತಿಕರಾಗಿ ಬಿಡಬಹುದು, ಅವರನ್ನು ರಕ್ಷಿಸೋಣ: ಅರ್ಥಶಾಸ್ತ್ರಜ್ಞರ ಮನವಿ


ಆದರೆ, ಕರ್ನಾಟಕದಲ್ಲಿ ಬಡವರ ಮನೆಗೆ ಹೀಗೆ ಮನೆ ಮನೆಗೆ ಆಹಾರ ಸಾಮಗ್ರಿಗಳನ್ನು ತಲುಪಿಸುವ ಕೆಲಸ ಮಾತ್ರ ನಡೆದಿಲ್ಲ. ವಿಪರ್ಯಾಸ ಎಂದರೆ ರಾಜ್ಯ ಆಡಳಿತ ಮಟ್ಟದಲ್ಲಿ ಇಂತಹ ಉಪಯುಕ್ತವಾದ ಚರ್ಚೆಯ ಹೊರತು ಬೇರೆ ಎಲ್ಲಾ ಚರ್ಚೆಗಳು ಎಗ್ಗಿಲ್ಲದೆ ನಡೆಯುತ್ತಿವೆ.

(ತಮಿಳುನಾಡು ಸರ್ಕಾರ ನೀಡಿರುವ ಆಹಾರದ ಕಿಟ್)

ಇನ್ನೂ ಲಾಕ್‌ಡೌನ್‌ ನಡುವೆಯೂ ಜನ ಏಕೆ ಮನೆಯಿಂದ ಹೊರ ಬರುತ್ತಿದ್ದಾರೆ? ಹೀಗೆ ಮಾಡುವ ಬದಲು ಅವರು ಆತ್ಮಹತ್ಯೆ ಮಾಡಿಕೊಳ್ಳುವುದು ಉತ್ತಮ ಎಂದು ಬಿಟ್ಟಿ ಸಲಹೆ ಕೊಡುವ ಮಾಧ್ಯಮಗಳು ಸಹ ಇಂತಹ ಅಗತ್ಯ ಜನಪರ ಯೋಜನೆಗಳ ಬಗ್ಗೆ ತುಟಿ ಬಿಚ್ಚದಿರುವುದು ವಿಷಾದಕರ.

ಸರ್ಕಾರ ಏನು ಮಾಡಬಹುದು? ತಜ್ಞರ ಅಭಿಪ್ರಾಯವೇನು?

ಕೊರೋನಾ ಲಾಕ್‌ಡೌನ್ ನಂತಹ ಸಂದರ್ಭದಲ್ಲಿ ದೇಶದಲ್ಲಿರುವ ಶೇ.70ರಷ್ಟು ಜನ ಸಂಕಷ್ಟಕ್ಕೆ ಒಳಗಾಗುವುದು ನಿಶ್ಚಿತ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಜವಾಬ್ದಾರಿಯುತ ರಾಜ್ಯ ಸರ್ಕಾರಗಳು ಲಾಕ್‌ಡೌನ್ ನಿರ್ಧಾರದ ಜೊತೆ ಜೊತೆಗೆ ಏನು ಮಾಡಬಹುದು? ಎಂಬ ಕುರಿತು ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಉಪನ್ಯಾಸಕ ಡಾ.ಕಿರಣ್ ಗಾಜನೂರು ಹೀಗೆ ಸಲಹೆಯೊಂದನ್ನು ನೀಡುತ್ತಾರೆ:-

ಸಲಹೆ: ನಾವು ರಾಜ್ಯದ ಒಟ್ಟು ಜನರನ್ನು ಉಳ್ಳವರು, ಮಧ್ಯಮವರ್ಗ, ಬಡವರು, ಕಡುಬಡವರು ಎಂದು ವಿಂಗಡಿಸಿಕೊಳ್ಳಬೇಕು. ಉಳ್ಳವರು ಮತ್ತು ಮಧ್ಯಮವರ್ಗದ ಜನ ಸರ್ಕಾರಿ ನಿಗದಿಮಾಡಿದ ಸಮಯದಲ್ಲಿ ತಮ್ಮಲ್ಲಿರುವ ಸಂಪನ್ಮೂಲ ಬಳಸಿ ಕೊಳ್ಳುತ್ತಾರೆ. ಆದರೆ, ನಮ್ಮ ಮುಖ್ಯ ಕಾಳಜಿ ಬಡವರು, ಕಡುಬಡವರು ಆಗಿದ್ದಾರೆ. ಮುಖ್ಯವಾಗಿ ಗ್ರಾಮೀಣ ಭಾಗದ ದಿನಗೂಲಿ ಜನರಿಗೆ ಮೂಲಭೂತ ಸರಕು ವಿತರಣೆ ಮಾಡುವುದಕ್ಕೆ ಈ ಕ್ರಮ ಅನುಸರಿಸಬಹುದು.

ಗ್ರಾಮಪಂಚಾಯಿತಿಗಳಲ್ಲಿ 750 ಜನಸಂಖ್ಯೆ ಉಳ್ಳ, 100ರಿಂದ 150 ಕುಟುಂಬಗಳನ್ನು ಹೊಂದಿರುವ ವಾರ್ಡ್ ವ್ಯವಸ್ಥೆ ಒಂದಿರುತ್ತದೆ, ಅಲ್ಲಿ ಕನಿಷ್ಟ ಎರಡರಿಂದ ಮೂರು ದಿನಸಿ ಅಂಗಡಿ ಇರುತ್ತವೆ. ಸರ್ಕಾರ ಅವುಗಳನ್ನು ತಮ್ಮ ಸುಪರ್ದಿಗೆ ಈ ಇಪ್ಪತ್ತೊಂದು ದಿನದ ಮಟ್ಟಿಗೆ ಪಡೆದುಕೊಳ್ಳಬೇಕು. ಅವುಗಳ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡು ವಿತರಣಾ ವ್ಯವಸ್ಥೆ ರೂಪಿಸಬೇಕು.

21 ದಿನಗಳಲ್ಲಿ ನಾಲ್ಕರಿಂದ ಆರು ಸಾರಿ ಕನಿಷ್ಟ ಕುಟುಂಬಕ್ಕೆ ಅಗತ್ಯವಾದ ಆಹಾರ ಧಾನ್ಯ ಒದಗಿಸುವ ವ್ಯವಸ್ಥೆ ಮಾಡಬಹುದು. ಕುಟುಂಬದ ಒಬ್ಬ ಸದಸ್ಯ ಬಂದು ಸಾಮಾಜಿಕ ಅಂತರ ಪಟ್ಟಿಯ ಒಳಗೆ ನಿಂತು ದಿನಸಿ ಪಡೆಯಬಹುದು. ಈ ಕೆಲಸಕ್ಕೆ ಗ್ರಾಮಪಂಚಾಯಿತಿ ವಾರ್ಡ್‌ನಲ್ಲಿ ಇರುವ 3-4 ಪಂಚಾಯಿತಿ ಸದಸ್ಯರು ಮತ್ತು ಒಬ್ಬ ಪಂಚಾಯಿತಿ ನೌಕರನನ್ನು ಬಳಸಿಕೊಳ್ಳಬಹುದು.

ನಗರಗಳಲ್ಲಿಯೂ ವಾರ್ಡ್ ವ್ಯವಸ್ಥೆ ಇರುವುದರಿಂದ ಅಲ್ಲಿಯೂ ಹೀಗೆ ಅಲೋಚಿಸಬಹುದು. ರಾಜ್ಯದ ಮುಂದಿರುವ ದೊಡ್ಡ ಸವಾಲು ಸುಮಾರು 70% ದುಡಿಮೆ ವಂಚಿತ ಹಸಿದ ಕುಟುಂಬಗಳ ಹೊಟ್ಟೆಗೆ ಆಹಾರ ತಲುಪಿಸುವುದು ಎಂದು ಉಪಾಯ ನೀಡುತ್ತಾರೆ ಉಪನ್ಯಾಸಕ ಡಾ.ಕಿರಣ್ ಗಜನೂರ್.

ಇದರ ಹೊರತಾಗಿಯೂ ರಾಜ್ಯ ಸಕಾರ ಇನ್ನೂ ಹತ್ತಾರು ಯೋಜನೆಗಳನ್ನು ರೂಪಿಸಬಹುದು ಅವುಗಳೆಂದರೆ.

1)    ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ನೊಂದಾಯಿತರಾದ ಜನರಿಗೆ ಒಂದು ತಿಂಗಳ (30 ದಿನಗಳ) ವೇತನವನ್ನು ಮುಂಚಿತವಾಗಿ ಖಾತೆಗೆ ಜಮಾ ಮಾಡುವುದು.

2)   ವೃಧ್ದಾಪ್ಯವೇತನ, ದಿವ್ಯಾಂಗ ವೇತನ ಸೇರಿದಂತೆ ಸಾಮಾಜಿಕ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಒಂದು ತಿಂಗಳ ವೇತನ ಮನೆಗೆ ತಲುಪಿಸುವುದು.

3)   ಬಿಪಿಎಲ್ ಕಾರ್ಡುದಾರರಾದ ಕೃಷಿ ಕೂಲಿ ಕಾರ್ಮಿಕರಿಗೆ ಅಗತ್ಯವಿರುವ ಎಲ್ಲಾ ಸಾಮಗ್ರಿಗಳನ್ನು ಉಚಿತವಾಗಿ ಒದಗಿಸುವುದು.

4)   ನಗರಗಳಲ್ಲಿ ಈಗಾಗಲೇ ಇರುವ ಇಂದಿರಾ ಕ್ಯಾಂಟಿನ್‌ಗಳಲ್ಲಿ ಹೆಚ್ಚುವರಿ ಊಟ ಉಪಹಾರ ಉಚಿತವಾಗಿ ಒದಗಿಸುವುದು.

5)   ನಗರಗಳ ಗಾರ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿರುವ ಹೆಣ್ಣುಮಕ್ಕಳಿಗೆ 15 ದಿನಗಳ ವೇತನಕ್ಕೆ ಬೇಕಾದ ವ್ಯವಸ್ಥೆ.

6)   ನಗರಗಳ ದಿನಗೂಲಿ ಮತ್ತು ಅಸಂಘಟಿತ ಕಾರ್ಮಿಕ ವರ್ಗದ ಆಹಾರ ಮತ್ತು ಮೂಲಭೂತ ಸೌಕರ್ಯಗಳಿಗೆ ಪೂರಕ ಯೋಜನೆ ಮತ್ತು ಪ್ಯಾಕೇಜ್ ಘೋಷಣೆ.

ಲಾಕ್‌ಡೌನ್ ನಂತಹ ತುರ್ತು ಪರಿಸ್ಥಿತಿಯಲ್ಲಿ ಪ್ರತಿಯೊಂದು ರಾಜ್ಯ ಸರ್ಕಾರಗಳು ಕೈಗೊಳ್ಳಬೇಕಾದ ಮುಖ್ಯ ನಿರ್ಣಯಗಳು ಇವು. ಹೀಗೆ ಮಾಡುವ ಮೂಲಕ ಒಂದು ಸರ್ಕಾರ ತನ್ನ ಎಲ್ಲಾ ಹಸಿದ ಪ್ರಜೆಗಳಿಗೆ ಆಹಾರವನ್ನು ತಲುಪಿಸಬಹುದು. ಆದರೆ, ಈ ಕುರಿತು ಯೋಚಿಸದೆ ಯಾವ ಲಾಕ್‌ಡೌನ್ ತಂದರೂ ಪ್ರಯೋಜನ ಏನಿಲ್ಲ. ಜನ ಕೊರೋನಾ ಬಂದು ಸಾಯುವುದಕ್ಕಿಂತ ಮುಂಚೆತವಾಗಿಯೇ ಹಸಿವಿಗೆ ಬಲಿಯಾಗುತ್ತಾರೆ ಅಷ್ಟೆ.


ವಿಡಿಯೊ ನೋಡಿ: ನಿಮಗೇ ಕೊರೊನಾ ಸೋಂಕು ಬಂದರೆ ಏನು ಮಾಡಬೇಕು?


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಕೇರಳದಲ್ಲಿ ತೀವ್ರಗೊಳ್ಳಲಿರುವ ಮಳೆ; ಆರೇಂಜ್-ಯೆಲ್ಲೋ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

0
ಮುಂದಿನ ಕೆಲವು ದಿನಗಳಲ್ಲಿ ಮಳೆ ತೀವ್ರಗೊಳ್ಳುವ ಸಾಧ್ಯತೆಯಿರುವುದರಿಂದ ಭಾರತೀಯ ಹವಾಮಾನ ಇಲಾಖೆ ಗುರುವಾರ ಕೇರಳದ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಮೇ 18 ರಂದು ಪಾಲಕ್ಕಾಡ್ ಮತ್ತು ಮಲಪ್ಪುರಂ, ಮೇ 19 ರಂದು...