Homeಮುಖಪುಟಅಮರ್ತ್ಯಸೇನ್, ಅಭಿಜಿತ್ ಬ್ಯಾನರ್ಜಿ, ರಘುರಾಂ ರಾಜನ್ ಅವರ ಜಂಟಿ ಲೇಖನ: ಲಕ್ಷಾಂತರ ಜನ ನಿರ್ಗತಿಕರಾಗಿ ಬಿಡಬಹುದು,...

ಅಮರ್ತ್ಯಸೇನ್, ಅಭಿಜಿತ್ ಬ್ಯಾನರ್ಜಿ, ರಘುರಾಂ ರಾಜನ್ ಅವರ ಜಂಟಿ ಲೇಖನ: ಲಕ್ಷಾಂತರ ಜನ ನಿರ್ಗತಿಕರಾಗಿ ಬಿಡಬಹುದು, ಅವರನ್ನು ರಕ್ಷಿಸೋಣ

- Advertisement -
- Advertisement -

ಮೂಲ ಲೇಖನ : ಅಮರ್ಥ್ಯ ಸೇನ್, ರಘುರಾಂ ರಾಜನ್, ಅಭಿಜಿತ್ ಬ್ಯಾನರ್ಜಿ , ಏಪ್ರಿಲ್ 17, 2020, ಇಂಡಿಯನ್‌ ಎಕ್ಸ್ ಪ್ರೆಸ್
ಅನುವಾದ: ಟಿ ಎಸ್ ವೇಣುಗೋಪಾಲ್, ಶೈಲಜ

ಲಾಕ್‌ಡೌನ್ನಿಂದಾಗಿ ದೇಶದಲ್ಲಿ ಬಹುಸಂಖ್ಯೆಯ ಜನರು ವಿಪರೀತ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಅವರ ನೆರವಿಗೆ ಸರ್ಕಾರ ನಿಲ್ಲಬೇಕೆಂದು ನೋಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞರು ಮತ್ತು ಆರ್ ಬಿ ಐನ ಮಾಜಿ ಗವರ್ನರ್ ಸೇರಿ ಬರೆದ ಲೇಖನವನ್ನು ಇಂಡಿಯನ್ ಎಕ್ಸ್ ಪ್ರೆಸ್ ಪ್ರಕಟಿಸಿದೆ. ಅದರ ಅನುವಾದ ಇಲ್ಲಿದೆ.

ಕಷ್ಟದಲ್ಲಿರುವವರಿಗೆ ದೊಡ್ಡ ಪ್ರಮಾಣದಲ್ಲಿ ಹಣ ಅಥವಾ ಆಹಾರವನ್ನು ವರ್ಗಾಯಿಸುವಾಗ ನಾವು ಅನುಸರಿಸುವ ಕ್ರಮದಲ್ಲಿ ಏನಾದರೂ ತಪ್ಪುಗಳಾಗಿ ಬಿಟ್ಟರೆ ಹಣ, ಆಹಾರ ಶ್ರೀಮಂತರ ಕೈಗೆ ಹೋಗಿಬಿಡಬಹುದು ಎಂದು ತುಂಬಾ ತಲೆ ಕೆಡಿಕೊಳ್ಳುತ್ತಿದ್ದೇವೆ. ತೆರಿಗೆದಾರರ ಹಣದಲ್ಲಿ ಮಧ್ಯವರ್ತಿಗಳು ಶ್ರೀಮಂತರಾಗಿ ಬಿಡಬಹುದೆಂದು ಚಿಂತಿತರಾಗಿಬಿಟ್ಟಿದ್ದೇವೆ. ಸರ್ಕಾರಗಳು ಶ್ರೀಮಂತರಿಗಾಗಿ ಹೋಟೆಲ್ಲುಗಳನ್ನು ಮತ್ತು ಐಷರಾಮಿ ಜಲಯಾನಗಳನ್ನು ನಡೆಸುವುದರಲ್ಲಿ ತಪ್ಪೇನೂ ಇಲ್ಲ ಎಂದು ಭಾವಿಸುತ್ತಿದ್ದವರು ಅಂತಹ ಆಶಾವಾದದಿಂದ ಸ್ವಲ್ಪ ಬೇರೆ ಕಡೆಗೆ ಗಮನಹರಿಸಿರುವುದು ಒಳ್ಳೆಯ ಬದಲಾವಣೆಯೇ. ನಾವಿಂದು ಕೊರೋನಾ ಮಹಾಮಾರಿ ಹಾಗೂ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಡುವೆ ಇದ್ದೇವೆ. ದೇಶ ಲಾಕ್‌ಡೌನಿನಲ್ಲಿದೆ, ಜನರ ಜೀವ ಹಾಗೂ ಜೀವನ ಎರಡೂ ಆತಂಕದಲ್ಲಿವೆ. ಇಂತಹ ಸಮಯದಲ್ಲಿ ಸಂಪನ್ಮೂಲಗಳು ಅವಶ್ಯಕತೆ ಇಲ್ಲದವರಿಗೆ ತಲುಪಿಬಿಟ್ಟರೆ ಅನ್ನುವುದು ಮುಖ್ಯವಿಷಯ ಆಗಬಾರದು.

ಅಮರ್ಥ್ಯ ಸೇನ್ (ಅರ್ಥಶಾಸ್ತ್ರದ ನೋಬೆಲ್ ಪುರಸ್ಕೃತರು)

ಲಾಕ್‌ಡೌನ್ ‌ಇನ್ನೂ ಹಲವು ದಿನ ಮುಂದುವರಿಯುತ್ತದೆ ಅನ್ನುವುದು ಸ್ಪಷ್ಟ. ಅದು ಸಂಪೂರ್ಣ  ಲಾಕ್‌ಡೌನ್‌ ಇರಬಹುದು ಅಥವಾ ಸ್ಥಳೀಯ ಪರಿಸ್ಥಿತಿಗೆ ತಕ್ಕಂತೆ ಮಾರ್ಪಾಡು ಮಾಡಿಕೊಂಡ ಲಾಕ್‌ಡೌನ್‌ ಇರಬಹುದು. ಸಧ್ಯದ ನಮ್ಮ ದೊಡ್ಡ ಚಿಂತೆಯಂದರೆ, ಜೀವನೋಪಾಯವನ್ನೇ ಕಳೆಂದುಕೊಂಡು ಲಕ್ಷಾಂತರ ಜನರು ಕಡುದಾರಿದ್ರ್ಯದ ಸ್ಥಿತಿಗೆ ತಲುಪಿದ್ದಾರೆ. ಜೊತೆಗೆ ಮಾಮೂಲಿ ಪೂರೈಕೆ ವ್ಯವಸ್ಥೆಯೂ ಅಸ್ಯವ್ಯಸ್ತಗೊಂಡು ಹೊಟ್ಟೆಗಿಲ್ಲದ ಸ್ಥಿತಿ ತಲುಪುತ್ತಾರೆ. ಇದು ನಮ್ಮ ಮುಂದಿರುವ ದೊಡ್ಡ ದುರಂತ. ಇದರಿಂದ ಜನ ಲಾಕ್‌ಡೌನ್ ‌ಕಾನೂನನ್ನು ಉಲ್ಲಂಘಿಸುವ ಪ್ರಯತ್ನ ಮಾಡಬಹುದು, ಅದನ್ನು ಈಗಾಗಲೇ ನೋಡುತ್ತಿದ್ದೇವೆ. ಮೊದಲೇ ಹೊಟ್ಟಿಗಿಲ್ಲ, ಹಸಿದಿದ್ದಾರೆ. ಅವರಿಗೆ ಕಳೆದುಕೊಳ್ಳುವುದಕ್ಕೆ ಇನ್ನೇನಿದೆ? ಸಮಾಜಕ್ಕೆ ಅವರ ಬಗ್ಗೆ ಕಳಕಳಿ ಇದೆ ಮತ್ತು ಕನಿಷ್ಟ ಅವರ ಹಿತವನ್ನು ಕಾಪಾಡುವ ಕಾಳಜಿ ಸಮಾಜಕ್ಕಿದೆ ಅನ್ನುವುದನ್ನು ಮನದಟ್ಟು ಮಾಡಿಕೊಡುವುಕ್ಕೆ ಸಾಧ್ಯವಾದದ್ದನ್ನೆಲ್ಲಾ ಮಾಡಬೇಕು. ಅದನ್ನುತಕ್ಷಣ ಮಾಡಬೇಕು. ಅದಕ್ಕೆ ಬೇಕಾದಸಂಪನ್ಮೂಲ ನಮ್ಮಲ್ಲಿದೆ.

ಮಾರ್ಚ್ 2020ರಲ್ಲಿ ಭಾರತೀಯ ಆಹಾರ ನಿಗಮದಲ್ಲಿ 77 ಮಿಲಿಯನ್ ಟನ್ನುಗಳಷ್ಟು ಆಹಾರದ ದಾಸ್ತಾನು ಇತ್ತು. ಅದು ನಿಯಮದ ಪ್ರಕಾರ ಇಟ್ಟುಕೊಳ್ಳಬೇಕಾದ ಮಿತಿಗಿಂತ ಮೂರು ಪಟ್ಟುಹೆಚ್ಚು. ಮುಂದಿನ ಕೆಲವು ವಾರಗಳಲ್ಲಿ ಇದು ಇನ್ನೂ ಹೆಚ್ಚುತ್ತದೆ. ವಸಂತದ ಬೆಳೆಗಳೂ ಬಂದು ಸೇರಿಕೊಳ್ಳುತ್ತದೆ. ಲಾಕ್‌ಡೌನ್ ‌ಇಂದ ಕೃಷಿಮಾರುಕಟ್ಟೆಗೆ ಹೊಡೆತ ಬೀಳುತ್ತದೆ ಎನ್ನುವ ಕಾರಣದಿಂದ ರೈತರಿಂದ ದಾಸ್ತಾನನ್ನು ಕೊಳ್ಳುವುದರಲ್ಲಿ ಸರ್ಕಾರವು ಮೊದಲಿಗಿಂತ ಸಕ್ರಿಯವಾಗಿದೆ.

ಇಂತಹ ರಾಷ್ಟ್ರೀಯ ಬಿಕ್ಕಟ್ಟಿನ ಕಾಲದಲ್ಲಿ ಈಗಿರುವ ದಾಸ್ತಾನಿನಿಂದ ಒಂದಷ್ಟನ್ನು ಹಂಚುವುದು ನಿಜವಗಿಯೂ ಅರ್ಥಪೂರ್ಣ. ವಿವೇಕವುಳ್ಳ ಯಾವುದೇ ಸಾರ್ವಜನಿಕ ಲೆಕ್ಕಾಚಾರ ವ್ಯವಸ್ಥೆಯು ಇದನ್ನು ತುಂಬಾ ದುಬಾರಿ ಎಂದು ಹೇಳಬಾರದು.


ಓದನ್ನೂ ಓದಿ:  ದೇಶದಲ್ಲಿ ಆಹಾರಗಳ ದಾಸ್ತಾನು ಸಾಕಷ್ಟಿದೆ, ಆದರೂ ಬಡವರು ಹಸಿವಿನಿಂದ ಬಳಲುತ್ತಿದ್ದಾರೆ !


ಸರ್ಕಾರವು ಈಗಾಗಲೇ ದಾಸ್ತಾನಿನಲ್ಲಿರುವ ಧಾನ್ಯಗಳನ್ನು ಬಳಸುವ ಇಚ್ಛೆಯನ್ನು ವ್ಯಕ್ತಪಡಿಸಿದೆ. ಈಗಾಗಲೇ ಪ್ರತಿ ವ್ಯಕ್ತಿಗೆ ನೀಡುತ್ತಿರುವ ಪಡಿತರದ ಜೊತೆಗೆ ಮುಂದಿನ ಮೂರು ತಿಂಗಳು ಹೆಚ್ಚುವರಿಯಾಗಿ ಐದು ಕೆಜಿ ಪಡಿತರವನ್ನು ನೀಡಲು ಮುಂದಾಗಿದೆ. ಆದರೆ ಮೂರು ತಿಂಗಳು ಸಾಲದೇ ಇರಬಹುದು. ಇನ್ನೂ ಹೆಚ್ಚು ಕಾಲ ನೀಡಬೇಕಾಗಬಹುದು. ಲಾಕ್‌ಡೌನ್‌ ಬೇಗ ಮುಗಿದರೂ ಆರ್ಥಿಕ ವ್ಯವಸ್ಥೆ ಮತ್ತೆ ಪ್ರಾರಂಭವಾಗುವುದಕ್ಕೆ ಸಮಯ ಬೇಕಾಗುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ಒಂದಲ್ಲ ಒಂದು ಕಾರಣಕ್ಕೆ ಪಡಿತರ ವ್ಯವಸ್ಥೆಯ ಅಧಿಕೃತ ಪಟ್ಟಿಯಲ್ಲಿ ಲಕ್ಷಾಂತರ ಜನ ಬಡವರ ಹೆಸರು ಸೇರ್ಪಡೆಯಾಗಿಲ್ಲ (ಹಾಗೆ ಸೇರ್ಪಡೆಯಾಗುವುದಕ್ಕೆ ಬೇಕಾದಗುರುತು ಚೀಟಿಗಳನ್ನು ಕೊಡುವುದು ಕಷ್ಟದ ಕೆಲಸ. ಅದು ಸಧ್ಯಕ್ಕೆ ಪರಿಹಾರ ಆಗುವ ವಿಷಯವಲ್ಲ). ಈ ಹೆಚ್ಚುವರಿ ಪಡಿತರ ಈಗಾಗಲೇ ಪಡಿತರ ವ್ಯವಸ್ಥೆಯ ಅಧಿಕೃತ ಪಟ್ಟಿಯಲ್ಲಿ ದಾಖಲಾಗಿರುವವರಿಗೆ ಮಾತ್ರ ಸಿಗುತ್ತದೆ.

ರಘುರಾಂ ರಾಜನ್ (ಆರ್ಬಿಐ ಮಾಜಿ ಗವರ್ನರ್)

ಜಾರ್ಖಂಡ್‌ನಂತಹ ಸಣ್ಣ ರಾಜ್ಯದಲ್ಲೇ ಪಡಿತರ ಚೀಟಿಗಾಗಿ ಸಲ್ಲಿಸಿರುವ 7 ಲಕ್ಷ ಅರ್ಜಿಗಳು ಇನ್ನೂ ಹಾಗೇ ಉಳಿದಿವೆಯಂತೆ. ಅದರಲ್ಲಿ ಬಹುಪಾಲು ಅರ್ಜಿಗಳು ನ್ಯಾಯಯುತವಾದವೆ (ಉದಾಹರಣೆಗೆ ವೃದ್ಧಾಪ್ಯ ವೇತನಕ್ಕಾಗಿ ಸಲ್ಲಿಸಿರುವ ಅರ್ಜಿಗಳು)ಎನ್ನುವುದಕ್ಕೆ ಪುರಾವೆಗಳಿವೆ. ಹಾಗಿದ್ದಾಗ್ಯೂ ಅವು ಇನ್ನೂ ದೃಢೀಕರಣದ ಹಂತದಲ್ಲಿಯೇ ಉಳಿದುಹೋಗಿವೆ. ಏಕೆಂದರೆ ಅಪ್ಪಿತಪ್ಪಿಯೂ ಯಾರೂ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಒಳಗೆ ನುಸುಳಿಕೊಂಡು ಬಿಡಬಾರದೆಂದು ಜವಾಬ್ದಾರಿಯುತ ಸ್ಥಳೀಯ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಹೀಗೆ ಕಟ್ಟುನಿಟ್ಟಾಗಿ ಇರುವುದು ಮುಖ್ಯವಿರಬಹುದು ಆದರೆ ಖಂಡಿತವಾಗಿಯೂ ಇಂತಹ ಬಿಕ್ಕಟ್ಟಿನ ಹೊತ್ತಿನಲ್ಲಿ ಅಲ್ಲ. ತಾತ್ಕಾಲಿಕ ಪಡಿತರ ಚೀಟಿಗಳ ಅವಶ್ಯಕತೆ ಇರುವವರಿಗೆ ಮತ್ತು ಯಾರು ಸರತಿಯಲ್ಲಿ ನಿಂತು ತಮ್ಮ ಪಡಿತರ ಚೀಟಿಯನ್ನೂ ಮತ್ತು ತಿಂಗಳ ಪಡಿತರವನ್ನು ತೆಗೆದುಕೊಳ್ಳಲು ಬಯಸುತ್ತಾರೋ ಅವರಿಗೆ ಹೆಚ್ಚಿನ ತಪಾಸಣೆಯಿಲ್ಲದೆ ಆರು ತಿಂಗಳ ಅವಧಿಗೆ ಪಡಿತರ ಚೀಟಿಯನ್ನುಕೊಡುವುದು ಒಳ್ಳೆಯದು ಎನಿಸುತ್ತದೆ. ಇಲ್ಲದೇ ಹೋದರೆ ಯಾರೋ ಕೆಲವು ಅನುಕೂಲಸ್ತರನ್ನು ತಪ್ಪಿಸುವುದಕ್ಕಾಗಿ ತೀರಾ ತುರ್ತಾಗಿ ಆಹಾರ ಬೇಕಾದವರನ್ನು ಹೊರಗಿಟ್ಟು ಬಿಡುತ್ತಿರುತ್ತೇವೆ.

ಇದನ್ನು ಒಪ್ಪಿಕೊಂಡರೆ, ಹಲವು ಮಹತ್ವದ ನಿರ್ಧಾರಗಳು ಸಾಧ್ಯ. ಮೊದಲನೆಯದಾಗಿ ಯಾರೂ ಹಸಿವಿನಿಂದ ಬಳಲುತ್ತಿಲ್ಲ ಎನ್ನುವುದನ್ನು ಸರ್ಕಾರವು ಎಲ್ಲಾ ರೀತಿಯಿಂದಲೂ ಖಚಿತಪಡಿಸಿಕೊಳ್ಳಬೇಕು. ಅಂದರೆ ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ವಿಸ್ತರಿಸಬೇಕು. ವಲಸಿಗರಿಗಾಗಿ ಮತ್ತು ಮನೆಯಿಂದ ದೂರವಿರುವವರಿಗಾಗಿ ಸಾರ್ವಜನಿಕ ಕ್ಯಾಂಟೀನುಗಳನ್ನು ಪ್ರಾರಂಭಿಸಬೇಕು. ಈಗ ಮನೆಯಲ್ಲಿ ಬಂದಿಯಾಗಿರುವ ಮಕ್ಕಳಿಗೆ ಶಾಲೆಯಲ್ಲಿ ಸಿಗುತ್ತಿದ್ದ ಊಟವನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಬೇಕು ಮತ್ತು ಇದಕ್ಕೆ ಸ್ಥಳೀಯ ಪ್ರತಿಷ್ಠಿತ ಸರ್ಕಾರೇತರ ಸಂಸ್ಥೆಗಳ (NGO) ಸಹಾಯ ಪಡೆಯಬೇಕು. ಏಕೆಂದರೆ ಕಡುಬಡವರ ಸಂಪರ್ಕ ಸರ್ಕಾರಕ್ಕಿಂತಲೂ ಇಂತಹ ಸಂಸ್ಥೆಗಳಿಗೆ ಹೆಚ್ಚಿಗೆ ಇರುತ್ತದೆ.


ವಿಡಿಯೊ ನೋಡಿ: ಲಾಕ್‌ಡೌನ್‌ ಸಮಯದಲ್ಲಿಯೂ ಗುತ್ತಿಗೆ ನೌಕರರ ಶೋಷಣೆ.


 

ಎರಡನೆಯದಾಗಿ ಹಸಿವು ಅನ್ನುವುದು ಹತ್ತು ಚಿಂತೆಗಳಲ್ಲಿ ಒಂದು. ಸಧ್ಯಕ್ಕೆ ಆಹಾರ ಸಿಗುವುದು ಖಾತ್ರಿಯಾದರೂ ಆದಾಯವೇ ಇಲ್ಲದಿರುವುದು ಮತ್ತು ಕೂಡಿಟ್ಟ ಅಲ್ಪಸ್ವಲ್ಪವನ್ನು ಕಳೆದುಕೊಳ್ಳುವುದು ಅವರ ಮೇಲೆ ಭೀಕರ ಪರಿಣಾಮ ಬೀರುತ್ತದೆ. ಮುಂದಿನ ಬಿತ್ತನೆ ಕಾಲಕ್ಕೆ ಬೀಜ ಮತ್ತು ರಸಗೊಬ್ಬರವನ್ನು ಕೊಳ್ಳಲು ರೈತರು ಹಣ ಹೊಂಚಿಕೊಳ್ಳಬೇಕು. ವ್ಯಾಪಾರಿಗಳಿಗೆ ತಮ್ಮಅಂಗಡಿಯ ಸರಕುಗಳನ್ನು ಮರು ಭರ್ತಿ ಮಾಡಿಕೊಳ್ಳುವ ಚಿಂತೆ ಕಾಡುತ್ತಿರತ್ತದೆ. ಹಲವರಿಗೆ ತಮ್ಮ ಸಾಲಗಳನ್ನು ಹೇಗೆ ತೀರಿಸುವುದು ಅನ್ನುವ ಚಿಂತೆ. ಒಂದು ಸಮಾಜವಾಗಿ ಈ ಚಿಂತೆಗಳನ್ನು ನಾವೇಕೆ ಗಂಭೀರವಾಗಿ ಪರಿಗಣಿಸಬಾರದು? ನಾವೇಕೆ ಅವುಗಳನ್ನು ಕಡೆಗಣಿಸಬೇಕು? ಸರ್ಕಾರ ಈ ಸಂಕಟವನ್ನು ಸ್ವಲ್ಪಮಟ್ಟಿಗೆ ಗುರುತಿಸಿದೆ. ಅದರಿಂದಾಗಿಯೇ ಅದು ಕೆಲವು ವರ್ಗದ ಜನರಿಗೆ ನಗದು ವರ್ಗಾವಣೆ ಮಾಡುವ ಭರವಸೆಯನ್ನು ನೀಡಿದೆ. ಆದರೆ ಸರ್ಕಾರ ನಿಗಧಿ ಪಡಿಸಿರುವ ಹಣ ಮತ್ತು ಅದು ಗುರುತಿಸಿರುವ ಫಲಾನುಭವಿಗಳ ಸಂಖ್ಯೆ ಎರಡೂ ತುಂಬಾ ಕಡಿಮೆ. ಕೇವಲ ರೈತರಿಗೆ ಮಾತ್ರ ಅಂತ ಯಾಕೆ ಭಾವಿಸಬೇಕು? ಲಾಕ್‌ಡೌನ್‌ನಿಂದ ನರೇಗಾ ಯೋಜನೆ ನೆಲಕಚ್ಚಿದೆ. ಅದರಿಂದ ಸಂಕಷ್ಟಕ್ಕೆ ಒಳಗಾಗಿರುವ ಭೂರಹಿತ ಕಾರ್ಮಿಕರಿಗೂ ಈ ಅನುಕೂಲ ಸಿಗಬೇಕಲ್ಲವೇ? ಬೇಕಾದ್ದಕ್ಕಿಂತ ಒಂದಿಷ್ಟು ಹೆಚ್ಚು ಜನರಿಗೆ ಅನುಕೂಲ ಸಿಕ್ಕರೆ ಯಾವ ತೊಂದರೆಯೂ ಇಲ್ಲ. ಅದೇನೂ ದೊಡ್ಡತಪ್ಪಲ್ಲ. 2019ರಿಂದ ನರೇಗಾ ಪಟ್ಟಿಯಲ್ಲಿರುವವರು, ಜನಆರೋಗ್ಯ ಹಾಗೂ ಉಜ್ವಲ ಯೋಜನೆಗಳಡಿ ಬರುವ ಬಡಕುಟುಂಬಗಳ ಜನಧನಖಾತೆಗೆ ಪಿ.ಚಿದಂಬರಂ ಹೇಳುವಂತೆ 5000ರೂ.ಗಳನ್ನು ಪಾವತಿಸಬೇಕು. ಅದು ಒಂದು ಒಳ್ಳೆಯ ಕ್ರಮವೆನಿಸುತ್ತದೆ.

ಅಭಿಜಿತ್ ಬ್ಯಾನರ್ಜಿ (ಅರ್ಥಶಾಸ್ತ್ರದ ನೋಬೆಲ್ ಪುರಸ್ಕೃತರು)

ಆದರೆ ಈ ಯಾವ ಪಟ್ಟಿಗಳೂ ಪರಿಪೂರ್ಣವಾಗಿಲ್ಲ ಎನ್ನುವ ಸತ್ಯ ನಮಗೆ ತಿಳಿದಿರಬೇಕು. ರೋಹಿಣಿ ಪಾಂಡೆ, ಕಾರ್ತಿಕ್ ಮುರಳೀಧರನ್ ಮತ್ತಿತರರು ಮಾಡಿರುವ ಅಧ್ಯಯನ ತಿಳಿಸುವಂತೆ ಕಡುಬಡವರಿಗಾಗಿ ರೂಪಿಸಿರುವ ಜಾಮ್‌ ಮೂಲವ್ಯವಸ್ಥೆಯಲ್ಲಿ ಹಲವು ನ್ಯೂನತೆಗಳಿವೆ. ನಿರ್ಗತಿಕರಿಗೆ ಸಹಾಯ ಮಾಡುವ ವಿಷಯದಲ್ಲಿ ನಮಗೆ ಬದ್ಧತೆ ಬೇಕು. ಆ ಬದ್ಧತೆಯಿಂದಲೇ ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳು ಲಭ್ಯವಿರುವ ಅನುದಾನವನ್ನು ಕಡುಬಡವರಿಗೆ ತಲುಪಿಸುವುದಕ್ಕೆ ಪರಿಣಾಮಕಾರಿಯಾದ ದಾರಿಗಳನ್ನು ಕಂಡುಕೊಳ್ಳಬೇಕು.

ತೀರಾ ಧೈರ್ಯದ ಹಾಗೂ ಕ್ರಿಯಾಶೀಲವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಯಾವುದಾದರೂ ಸವಾಲಿದ್ದರೆ ಅದು ಇದೆ. ನಿಜ ಮುಂದಿನ ತಿಂಗಳುಗಳಲ್ಲಿ ತುಂಬಾ ಹಣದ ಅವಶ್ಯಕತೆ ಬರುತ್ತದೆ. ಈಗ ಖರ್ಚು ಮಾಡುವಾಗ ಅದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಅನ್ನುವುದೂ ನಿಜ. ಆದರೆ ನಿಜವಾಗಿ ಅವಶ್ಯಕತೆ ಇರುವವರಿಗೆ ನೆರವಾಗುವುದಕ್ಕ ಹಿಂದೇಟು ಹಾಕಿದರೆ ನಾವು ಇಡೀ ಉದ್ದೇಶವನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿದ್ದೀವೆ ಎಂದರ್ಥ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ನರೇಗಾ:
    ಮಣ್ಣುಕಲಸದಲ್ಲಿ ಮೆಶಿನ್(JCB,Hitachi)ಗಳನ್ನು ಬಳಸಿ ಮಾಡುವ ಕೆಲಸವನ್ನು ಆಳುಗಳನ್ನು ಬಳಸಿ ಮಾಡಿದರೆ ತಗಲುವ ವೆಚ್ಚ ಸುಮಾರು ಎರಡು ಪಟ್ಟು ಹೆಚ್ಚಾಗಲಿದೆ, ಹಾಗೂ ಆಳುಗಳನ್ನು ಉರಿ ಬಿಸಿಲಿನಲ್ಲಿ ಕೆಲಸಮಾಡಿಸುವುದರಲ್ಲಿ ಯಾವುದೇ ಹುರುಳಿಲ್ಲ.
    ಹಾಗಾಗಿ guarantee work ಹೆಸರಲ್ಲಿ ಇಂತ ಕಡೆ ಆಳುಗಳನ್ನು ಬಳಸುವುದನ್ನು ನಿಲ್ಲಿಸಬೇಕು. ಇವರಿಗೆ ಹಣ ತಲುಪಿಸಲು ಇರುವ ಇತರೆ ದಾರಿಗಳನ್ನು ಹುಡುಕಬೇಕು.

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...