ಕೊರೋನ ವೈರಸ್ ಪಿಡುಗು ಹೇಗೆ ಹಿಂದಿನ ಭಯಾನಕ ಸಾಂಕ್ರಾಮಿಕ ರೋಗಗಳನ್ನು ಪ್ರತಿಫಲಿಸುತ್ತದೆ ಎಂದು ವೈದ್ಯಕೀಯ ಇತಿಹಾಸಜ್ಞ ಫ್ರಾಂಕ್ ಸ್ನೋಡೆನ್ ಅವರು ಈ ಅತ್ಯಂತ ಕುತೂಹಲಕಾರಿ ಸಂದರ್ಶನದಲ್ಲಿ ಚರ್ಚಿಸುತ್ತಾರೆ ಮತ್ತು ನಾವು ಇಂದು ಕಲಿತಿರುವ ಪಾಠಗಳನ್ನು ತ್ವರಿತವಾಗಿ ಮುಂದಿನ ರೋಗವನ್ನು ಎದುರಿಸುವ ಸಿದ್ಧತೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಾದಿಸುತ್ತಾರೆ.
ಸಂದರ್ಶನ: ವೆರೋನಿಕಾ ಹ್ಯಾಕೆನ್‌ಬ್ರೋಖ್
ಅನುವಾದ: ನಿಖಿಲ್ ಕೋಲ್ಪೆ
ಫ್ರಾಂಕ್ ಸ್ನೋಡೆನ್, 73, ಅವರು ಯೇಲ್ ವಿಶ್ವವಿದ್ಯಾಲಯದಲ್ಲಿ ಔಷಧೀಯ ಇತಿಹಾಸದ ಪ್ರಾಧ್ಯಾಪಕರಾಗಿದ್ದು, “ಎಪಿಡೆಮಿಕ್ಸ್ ಎಂಡ್ ಸೊಸೈಟಿ: ಫ್ರಮ್ ದಿ ಬ್ಲಾಕ್ ಡೆತ್ ಟು ದಿ ಪ್ರೆಸೆಂಟ್” ಎಂಬ ಪ್ರಸಿದ್ಧ ಪುಸ್ತಕದ ಲೇಖಕರು. ಸುಮಾರು 50 ವರ್ಷಗಳ ಹಿಂದೆ ಅವರು ರೋಮ್ ನಗರದಲ್ಲಿ ಸಂಶೋಧನೆ ಮಾಡುತ್ತಿದ್ದಾಗ, ಅಲ್ಲಿನ ಕೊಲೆರಾ ಸಾಂಕ್ರಾಮಿಕ ರೋಗದ ಅನುಭವದೊಂದಿಗೆ ಬದುಕಿದವರು ಮತ್ತು ಅವರೀಗ ಕೋವಿಡ್-19ರ ಕುರಿತ ಸಂಶೋಧನೆಗಾಗಿ ಬಂದು ಅದೇ ಇಟಲಿಯ ರಾಜಧಾನಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರಿಗೆ ಕೊರೋನ ಸೋಂಕು ತಗಲಿದ್ದು, ಜರ್ಮನಿಯ ಅತ್ಯಂತ ಪ್ರಖ್ಯಾತ ಪತ್ರಿಕೆ “ಡೆಷ್ ಸ್ಪೀಗಲ್” (Der Spiegel) ಭೇಟಿ ಮಾಡಿದಾಗ. ಸದ್ಯಕ್ಕೆ ಅವರು ಕ್ವಾರಂಟೈನ್‌ನಲ್ಲಿಯೇ ಇದ್ದು, ಗುಣಮುಖರಾಗುತ್ತಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ.
ಪ್ರಶ್ನೆ: ಸಾರ್ಸ್, ಹಕ್ಕಿಜ್ವರ, ಹಂದಿಜ್ವರ ಇತ್ಯಾದಿಗಳು ಕೇವಲ ಮುಂದೆ ಬರಲಿರುವ ಇನ್ನಷ್ಟು ದೊಡ್ಡ ಮತ್ತು ಭಯಾನಕವಾದ ಯಾವುದೋ ಸಾಂಕ್ರಾಮಿಕ ರೋಗಕ್ಕೆ ಪೂರ್ವಸಿದ್ಧತೆ ಎಂದು ಕೆಲವು ವರ್ಷಗಳ ಹಿಂದೆಯೇ ನೀವು ಎಚ್ಚರಿಸಿದ್ದಿರಿ. ಆಗ ನೀವು “ಸಾರ್ಸ್-ಕೋವಿಡ್-2″ನಂತಹ ರೋಗಾಣುವನ್ನು ಕಲ್ಪಿಸಿದ್ದಿರಾ?
ಸ್ನೋಡೆನ್: ಓಹ್! ಖಂಡಿತವಾಗಿಯೂ ಹೌದು. ಇಂತಹ ಒಂದು ಶ್ವಾಸಕೋಶದ ವೈರಸ್ ಸೋಂಕನ್ನು ನಿರೀಕ್ಷಿಸಿದವನು ನಾನೊಬ್ಬನೇ ಅಲ್ಲ. ಪ್ರಪಂಚದಾದ್ಯಂತ ವೈರಾಣುಶಾಸ್ತ್ರಜ್ಞರು ಮತ್ತು ಸೋಂಕುಶಾಸ್ತ್ರಜ್ಞರು ಮತ್ತೆಮತ್ತೆ ಈ ಕುರಿತು ಎಚ್ಚರಿಸುತ್ತಲೇ.ಬಂದಿದ್ದಾರೆ. ನಾನು ನನ್ನಲ್ಲೇ ಕೇಳಿಕೊಳ್ಳುತ್ತೇನೆ: ನೀನು ಎಷ್ಟು ಕುರುಡಾಗಿರಲು ಹೇಗೆ ಸಾಧ್ಯ?
ಈಗ “ಯಾರಿಗೆ ಗೊತ್ತಿರಲು ಸಾಧ್ಯವಿತ್ತು” ಎಂದು ಡೊನಾಲ್ಡ್ ಟ್ರಂಪ್ ಕೇಳುತ್ತಿರುವಾಗ, ನನ್ನ ಉತ್ತರವೆಂದರೆ: “ಎಲ್ಲರಿಗೂ!”
ಪ್ರಶ್ನೆ; ಈ ಸಂದೇಶವನ್ನು ಯಾರೂ ಕೇಳಲಿಲ್ಲ ಏಕೆ?
ಸ್ನೋಡೆನ್: ಇವೆಲ್ಲವೂ ಸಾಮಾನ್ಯವಾಗಿ ಕಸ್ಸಾಂದ್ರ (ಯಾರೂ ನಂಬದಿರುವ ಶಾಪಕ್ಕೆ ತುತ್ತಾಗಿರುವ ಗ್ರೀಕ್ ಪುರಾಣದ ಪೂಜಾರಿಣಿ. ಆಕೆಯ ಭವಿಷ್ಯವನ್ನು ಯಾರೂ ನಂಬುವುದಿಲ್ಲ) ಕತೆಯಂತೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಲರ್ಜಿ ಎಂಡ್ ಇನ್ಫೆಕ್ಷಿಯಸ್ ಡಿಸೀಸಸ್ ಇನ್ ಯುಎಸ್ (NIAID-US) ನಿರ್ದೇಶಕ ಅಂತೋನಿ ಫೌಸಿ ಅವರು 2006ರಲ್ಲಿಯೇ ಪರಿಸ್ಥಿತಿಯನ್ನು ಸುಸ್ಪಷ್ಟವಾಗಿ ವಿವರಿಸಿದ್ದರು. ನೀವು ಕೆರಿಬಿಯನ್ ಪ್ರದೇಶದಲ್ಲಿ ಬದುಕುತ್ತಿದ್ದರೆ, ಖಂಡಿತವಾಗಿಯೂ ಯಾವಾಗ ಚಂಡಮಾರುತ ಬರಲಿದೆ ಎಂಬುದನ್ನು ಹವಾಮಾನ ವಿಜ್ಞಾನಿಗಳು ಹೇಳುತ್ತಾರೆ. ಆದರೆ, ಅವರು ನಿರ್ದಿಷ್ಟ ದಿನವನ್ನು ಹೇಳಲಾರರು. ಅವರು ಈ ಚಂಡಮಾರುತ ಎಷ್ಟು ಪ್ರಬಲವಾಗಿರುವುದು ಎಂದು ಹೇಳಲಾರರು. ಆದರೆ, ಅದಕ್ಕೆ ಸಿದ್ಧರಾಗಿರುವುದು ಅತ್ಯಂತ ಮುಖ್ಯ. ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದಂತೆಯೂ ಇದು ಯಥಾವತ್ತಾಗಿ ಹೀಗೆಯೇ ನಡೆಯುವುದು. ಆದರೆ ನಾವು ಮಾಡಿದ್ದೇನು? ಸಾರ್ಸ್ (SARS) ಮತ್ತು ಹಕ್ಕಿಜ್ವರದ (Avian Influenza) ಅಲ್ಪಾವಧಿಯ ಆತಂಕದ ಬಳಿಕ ನಾವು ಸಾಂಕ್ರಾಮಿಕ ರೋಗಗಳ ಅಪಾಯದ ಬಗ್ಗೆಯೇ ಮರೆತುಬಿಟ್ಟೆವು. ಆದುದರಿಂದಲೇ ನಾವು ಐರೋಪ್ಯ ಒಕ್ಕೂಟದಲ್ಲಿ ಸಮಾನ ಸಾಂಕ್ರಾಮಿಕ ರೋಗದ ಕುರಿತ ಧೋರಣೆಯನ್ನು ಹೊಂದಿಲ್ಲ; ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಬೇಕಾದಷ್ಟು ನಿಧಿಯಿಲ್ಲ; ಆಸ್ಪತ್ರೆಯಲ್ಲಿ ದಟ್ಟಣೆ ಎದುರಿಸುವ ಸಾಮರ್ಥ್ಯ ನಮ್ಮಲ್ಲಿಲ್ಲ.
ಪ್ರಶ್ನೆ: ಕೆಲವರು ಕೊರೋನ ವೈರಸನ್ನು ಬಬೋನಿಕ್ ಪ್ಲೇಗಿಗೆ ಹೋಲಿಸಿದ್ದಾರೆ. ಆದರೆ, ಹಲವಾರು ಶತಮಾನಗಳ ಕಾಲ ಯುರೋಪಿನಲ್ಲಿ ಸಾವಿನ ನೆರಳು ಕವಿಸಿದ್ದ ಆ ಭಯಾನಕ ಸಾಂಕ್ರಾಮಿಕ ರೋಗದ ಕುರಿತು ಓದುವಾಗ, ನಮ್ಮ ಪಶ್ಚಿಮ ಯುರೋಪಿನ ಆರಾಮದಾಯಕ ಮನೆಗಳಲ್ಲಿ ಕುಳಿತು ಕೆಲಸಮಾಡುವಾಗ ಸ್ವಲ್ಪ ಪುಕ್ಕಲುತನ ಉಂಟಾಗುತ್ತದೆ. ನೀವೇನೆನ್ನುತ್ತೀರಿ?
ಸ್ನೋಡೆನ್ (ನಗು): ನೀವು ಈ ರೀತಿ ಸಮಾಧಾನಪಟ್ಟುಕೊಳ್ಳುತ್ತಿರುವುದು ಒಳ್ಳೆಯದೇ. ನಿಮ್ಮಂತೆಯೇ ನಾನೂ ಪುಕ್ಕಲು. ನಾನು ಕೋವಿಡ್-19ನ್ನು ತೀರಾ ಗಂಭೀರವಾಗಿ ತೆಗೆದುಕೊಳ್ಳುತ್ತೇನಾದರೂ, ನಾವದನ್ನು ಬಬೋನಿಕ್ ಪ್ಲೇಗ್ ಜೊತೆ ಹೋಲಿಸಬಾರದೆಂದು ನನ್ನ ಅನಿಸಿಕೆ. ಪ್ಲೇಗ್ 1347 ಮತ್ತು 1743ರ ನಡುವೆ ಸುಮಾರು 10 ಕೋಟಿ ಜನರನ್ನು ಯುರೋಪಿನಲ್ಲಿಯೇ ಕೊಂದಿತ್ತು. ಅದು ಇಡೀ ಪ್ರದೇಶ ಪ್ರದೇಶಗಳನ್ನೇ ನಿರ್ಜನಗೊಳಿಸಿತ್ತು. ಅದು ಹುಟ್ಟಿಸಿದ್ದ ಭಯಾನಕತೆಯನ್ನು ನಾನು ಕೊರೋನ ವೈರಸ್‌ನಲ್ಲಿ ಕಾಣುತ್ತಿಲ್ಲ.

ಪ್ರಶ್ನೆ: ನಾವು ನಮ್ಮ ಆರೋಗ್ಯ ಸೇವಾ ವ್ಯವಸ್ಥೆಗಳಿಂದಾಗಿ ಕೆಟ್ಟುಹೋಗಿದ್ದೇವೆಯೆ?
ಸ್ನೋಡೆನ್: ನಾವು ಒಂದು ವ್ಯಾಕ್ಸೀನಿಗಾಗಿ ಕಾಯುತ್ತಾ ಹತಾಶರಾಗಿರುವಾಗಲೇ, ಇನ್ನು ಮುಂದಿನ 18 ತಿಂಗಳುಗಳಲ್ಲಿ ಪ್ಲೇಗಿನ ವಿರುದ್ಧ ವ್ಯಾಕ್ಸೀನ್ ಬರಲಿದೆ ಎಂದು ಇಲ್ಲಿನ ಫ್ಲೋರೆನ್ಸ್ ನಗರದ ಜನರಿಗೆ (ತಮಾಷೆಗೆಂದು) ಹೇಳಿದ್ದರೂ, ಅವರು ಸಂತೋಷದಿಂದ ಕುಣಿದುಕುಪ್ಪಳಿಸುತ್ತಿದ್ದರು. ಆದರೆ, ನಾನು ಈ ಬಗ್ಗೆ ಯೋಚಿಸುತ್ತಲೇ ಇದ್ದೇನೆ. ಆದರೆ ಇದು ಅತ್ಯಂತ ದೊಡ್ಡ ಭಯವನ್ನು ಉಂಟುಮಾಡಿ, ಅತೀದೊಡ್ಡ ರಾಜಕೀಯ ಅಥವಾ ಸಾಮಾಜಿಕ ಪರಿಣಾಮ ಉಂಟುಮಾಡಬಲ್ಲ ರೋಗವೇನಲ್ಲ…
ಪ್ರಶ್ನೆ: ಆದರೆ?
ಸ್ನೋಡೆನ್: ಕೊರೋನ ವೈರಸಿನಂತಹ ಹೊಸ, ಅಪರಿಚಿತ, ವೈದ್ಯಕೀಯವಾಗಿ ಅಸ್ಪಷ್ಟವಾದ ವೈರಸ್ ಏಕಾಏಕಿಯಾಗಿ ಕಾಣಿಸಿಕೊಂಡಾಗ ಅವುಗಳ ಪರಿಣಾಮ ವಿಶೇಷವಾಗಿ ದೊಡ್ಡದಾಗಿರುತ್ತದೆ. ಉದಾಹರಣೆಗೆ, ಸೋಂಕು ತಗಲಿದವರಲ್ಲಿ ಅರ್ಧದಷ್ಟು ಜನರನ್ನು ಕೊಲ್ಲುವ, ಹೆಚ್ಚಾಗಿ ಮಕ್ಕಳನ್ನು ಕೊಲ್ಲುವ, ಬದುಕಿ ಉಳಿದವರನ್ನೂ ವಿರೂಪಗೊಳಿಸುವ ಸಿಡುಬು (Smallpox) ಒಂದು ಭಯಾನಕ ರೋಗವಾಗಿತ್ತು. ಸಹಜವಾಗಿಯೇ ಜನರು ಅದರ ಕುರಿತು ಭಯಭೀತರಾಗಿದ್ದರು. ಆದರೆ, 18ನೇ ಶತಮಾನದ ಆರಂಭದ ವೇಳೆಗೆ ಜನರು ಅದಕ್ಕೆ ಹೇಗೋ ಒಗ್ಗಿಕೊಳ್ಳಲಾರಂಭಿಸಿದರು. ಆದನ್ನು ಹಣೆಬರಹ ಎಂಬಂತೆ ಸ್ವೀಕರಿಸಲಾಯಿತು.
ಪ್ರಶ್ನೆ: ಅಂದರೆ, ಕ್ಷಯದಂತೆ? (Tuberculosis)
ಸ್ನೋಡೆನ್: ಬಹುಶಃ ಹೌದು. ಆದರೆ, ವ್ಯತ್ಯಾಸವಿದೆ. ಅಂದರೆ, ನೀವು ಕ್ಷಯದಿಂದ ತಕ್ಷಣವೇ ಸಾಯುವುದಿಲ್ಲ. ವರ್ಷಾನುಗಟ್ಟಲೆ ಕಾಲ ಬಹಳಷ್ಟು ಜನರು ಸಾಯುತ್ತಾರೆ. 19ನೇ ಶತಮಾನದಲ್ಲಿ ಕ್ಷಯರೋಗ ಹೊಂದಿರುವುದು ಒಂದು ರೀತಿಯಲ್ಲಿ ರೋಮ್ಯಾಂಟಿಕ್ ಕೂಡಾ ಆಗಿತ್ತು. ಏಕೆಂದರೆ, ಬಬೋನಿಕ್ ಪ್ಲೇಗ್ ಅಥವಾ ಕೊಲೆರಾದಲ್ಲಿ ರೋಗಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕುಸಿದುಬಿದ್ದು ಸಾಯುತ್ತಿದ್ದರು. ಪ್ಲೇಗಿನ ವೈದ್ಯರು ಅಸಹಾಯಕರಾಗಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಹೆಣಗುತ್ತಿದ್ದರು. ಇಂತದ್ದೇ ಹೆಣಗಾಟದ ಚಿತ್ರಣಗಳು ಇತ್ತೀಚೆಗೆ ಟಿವಿಯ ಮೂಲಕ ಚೀನಾದ ವುಹಾನ್‌ನಿಂದ ಬಂದವು. ಕೋವಿಡ್-19ರಂತೆ ಮಾರಣಾಂತಿಕತೆಯ ಪ್ರಮಾಣ ತುಲನಾತ್ಮಕವಾಗಿ ಕಡಿಮೆಯಾಗಿದ್ದರೂ, ಇಂತಹಾ ಅನಿರೀಕ್ಷಿತ ಪರಿಸ್ಥಿತಿಗಳು ಎಂತಹ ರಾಜಕೀಯ ಬದಲಾವಣೆ ಮತ್ತು ಆರ್ಥಿಕ ಬಿಕ್ಕಟ್ಟನ್ನು ಹುಟ್ಟುಹಾಕಬಹುದು ಎಂದು ನಾನು ಊಹಿಸಬಲ್ಲೆ.
ಪ್ರಶ್ನೆ: ಕೊರೋನ ವೈರಸ್ ಕಾರಣದಿಂದ ಚೀನಾ ಬೃಹತ್ ಶಕ್ತಿ (ಸೂಪರ್ ಪವರ್) ಸ್ಥಾನಕ್ಕೆ ಏರಬಹುದು ಎಂದು ಕೂಡಾ ಕೆಲವು ಜನರು ಭಾವಿಸುತ್ತಿದ್ದಾರೆ.
ಸ್ನೋಡೆನ್: ಹಳದಿ ಜ್ವರದ ಕಾರಣದಿಂದ ಯುಎಸ್‌ಎ (ಸೂಪರ್ ಪವರ್ ಸ್ಥಾನಕ್ಕೆ) ಏರಿದಂತೆ.
ಪ್ರಶ್ನೆ: ಕ್ಷಮಿಸಿ? (ಅರ್ಥವಾಗಲಿಲ್ಲ…)
ಸ್ನೋಡೆನ್: ಸರಿ. ನಾನಿಲ್ಲಿ ಕೆಲವು ಹಿನ್ನೆಲೆ ಮಾಹಿತಿ ನೀಡಬೇಕು. ಸುಮಾರು 1800ರ ಆಸುಪಾಸಿನಲ್ಲಿ ಹೈಟಿಯ ಫ್ರೆಂಚ್ ಕಾಲನಿಯು- ಗುಲಾಮರು ಬೆಳೆಸುತ್ತಿದ್ದ ಕಬ್ಬಿನ ತೋಟಗಳಿಂದಾಗಿ- ಪ್ರಪಂಚದಲ್ಲಿಯೇ ಅತ್ಯಂತ ಶ್ರೀಮಂತ ವಸಾಹತಾಗಿತ್ತು. ಆದರೆ, ಗುಲಾಮರು ಒಂದು ಕ್ರಾಂತಿಯನ್ನು ಆರಂಭಿಸಿದರು. ಫ್ರಾನ್ಸಿನ ಅಧಿಕಾರವನ್ನು ಹೊಸ ಪ್ರಪಂಚಕ್ಕೆ ವಿಸ್ತರಿಸುವ ಮಹತ್ವಾಕಾಂಕ್ಷೆ ಹೊಂದಿದ್ದ ನೆಪೋಲಿಯನ್, ಈ ಕ್ರಾಂತಿಯನ್ನು ಬಗ್ಗುಬಡಿಯಲು 60,000ಕ್ಕೂ ಹೆಚ್ಚು ಸೈನಿಕರನ್ನು ಕಳುಹಿಸಿದ. ಆದರೆ, ಅವರಲ್ಲಿ ಹೆಚ್ಚಿನವರು ಹಳದಿಜ್ವರದಿಂದ ಸತ್ತರು. ನೆಪೋಲಿಯನ್ ತನ್ನ ಸಾಗರೋತ್ತರ ಮಹತ್ವಾಕಾಂಕ್ಷೆಯನ್ನು ಹೂತುಹಾಕಬೇಕಾಯಿತು ಮತ್ತು ಆತ 1803ರಲ್ಲಿ ಲೂಯಿಸಿಯಾನ ಪ್ರದೇಶವನ್ನು ಯುಎಸ್‌ಎಗೆ ಮಾರಬೇಕಾಯಿತು. ಇದರ ಅರ್ಥ ಅದರ ಪ್ರದೇಶವನ್ನು ವಿಸ್ತಾರದಲ್ಲಿ ಇಮ್ಮಡಿಗೊಳಿಸುವುದಾಗಿತ್ತು. ಇದುವೇ ಮುಂದೆ ಅದು ಬೃಹತ್ ಶಕ್ತಿ (ಸೂಪರ್ ಪವರ್) ಎನಿಸಿಕೊಳ್ಳುವ ದಾರಿಯಲ್ಲಿ ಪ್ರಮುಖ ಹೆಜ್ಜೆಯಾಯಿತು.

ಪ್ರಶ್ನೆ: ಬೃಹತ್ ಶಕ್ತಿಗಳು ರೋಗಾಣುಗಳ ಕಾರಣದಿಂದ ನಾಶವಾಗಿವೆಯೆ?
ಸ್ನೋಡೆನ್: ಹಲವಾರು. ಇಡೀ ದೇಹದ ಜೀವಕೋಶಗಳನ್ನು ಆವರಿಸುವ ನಿಗೂಢವಾದ ಅಥೆನ್ಸಿನ ಮಾರಕ ಸಾಂಕ್ರಾಮಿಕ ರೋಗವು ಪ್ರಾಚೀನ ಗ್ರೀಸ್‌ನ ಅವನತಿಗೆ ಕಾರಣವಾಯಿತು. ಪ್ರಾಚೀನ ರೋಮನ್ ಸಾಮ್ರಾಜ್ಯದ ಅವನತಿಗೆ ಇತರ ಆಂಶಗಳೊಂದಿಗೆ ಮಲೇರಿಯಾವೂ ಪ್ರಮುಖ ಕಾರಣವಾಯಿತು. ಐದನೇ ಶತಮಾನದಲ್ಲಿ ಹವಾಮಾನದ ಬದಲಾವಣೆಯಿಂದಾಗಿ, ಮಲೇರಿಯಾವು ದಕ್ಷಿಣ ಯುರೋಪಿನಲ್ಲೆಲ್ಲಾ ಹರಡಲು ಆರಂಭವಾಯಿತು. ರೋಗದಿಂದ ಉಳಿದುಕೊಂಡವರು ತಮ್ಮ ಜೀವನಪರ್ಯಂತ ಆಗಾಗ ಜ್ವರದ ದಾಳಿಗೆ ತುತ್ತಾಗುತ್ತಿದ್ದರು ಮತ್ತು ಹಿಂದಿನಂತೆ ಕೆಲಸಮಾಡಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಇದು ಕೃಷಿಯಲ್ಲಿ ಉತ್ಪತ್ತಿ ಕಡಿಮೆಯಾಗುವುದಕ್ಕೆ ಕಾರಣವಾಯಿತು. ಗ್ರೇಟ್ ಬ್ರಿಟನ್‌ನಲ್ಲಿ ಸಿಡುಬು ಸ್ಟುವರ್ಟ್ ಮನೆತನದ ಆಳ್ವಿಕೆಯನ್ನೇ ಕೊನೆಗೊಳಿಸಿತು. ರಷ್ಯಾದಲ್ಲಿ ನೆಪೋಲಿಯನ್‌ನ ಸೇನೆಯು ಯುದ್ಧಭೂಮಿಯಲ್ಲಿ ನಾಶವಾಗಲಿಲ್ಲ. ಬದಲಾಗಿ ಟೈಫಸ್ ಮತ್ತು ಅತಿಸಾರ (Dysentery)ದಿಂದ ನಾಶವಾಯಿತು.
ಪ್ರಶ್ನೆ: ಪ್ರಸ್ತುತ ಪಿಡುಗು ನೈತಿಕ ಪ್ರಹಸನವನ್ನೂ ಒಳಗೊಂಡಿದೆ. ಉದಾಹರಣೆಗೆ ಸಾರ್ವಜನಿಕ ಜೀವನಕ್ಕೆ ಲಕ್ವ ಹೊಡೆಯುವಂತೆ ತೆಗೆದುಕೊಳ್ಳಲಾಗಿರುವ ಕ್ರಮಗಳ ಬಗ್ಗೆ ಇಂದು ಚರ್ಚೆ ನಡೆಯುತ್ತಿದೆ. ವಸ್ತುಶಃ ಇದು ಜೀವಗಳನ್ನು ಉಳಿಸುವುದು ಮತ್ತು ಆರ್ಥಿಕತೆಯನ್ನು ಉಳಿಸುವುದರ ನಡುವಿನ ಸಂಘರ್ಷವಾಗಿದೆ.
ಸ್ನೋಡೆನ್: ಇದು ಪರಿಚಿತ ಎಂಬಂತೆ ಭಾಸವಾಗುತ್ತಿದೆ. ಕೊಲೆರಾದ ಕಾರಣದಿಂದಾಗಿ 1851ರಿಂದ 1910ರ ತನಕ ಹೇಗೆ ಈ ರೋಗದ ಹರಡುವಿಕೆಯನ್ನು ತಡೆಯಬಹುದು ಎಂಬ ಬಗ್ಗೆ ಅಂತರರಾಷ್ಟ್ರೀಯ ಸಮಾವೇಶಗಳು ನಡೆದವು. ಉದಾಹರಣೆಗೆ, ಹಡಗುಗಳ ಕ್ವಾರಂಟೈನ್ ಅಥವಾ ಪ್ರಯಾಣ ನಿಷೇಧ. ಈ ಕ್ರಮಗಳಿಂದ ಆಗುವ ಆರ್ಥಿಕ ಸಮಸ್ಯೆಗಳನ್ನೂ ವಿವರವಾಗಿ ಚರ್ಚಿಸಲಾಯಿತು. ಉದಾಹರಣೆಗೆ ಸೂಯೆಜ್ ಕಾಲುವೆಯಲ್ಲಿ ಐದು ದಿನಗಳ ಹಡಗು ಸಂಚಾರ ನಿಷೇಧವು ಅದರ ಉಪಯೋಗದಿಂದ ಮುಂದೆಂದೂ ಲಾಭವಿಲ್ಲದಂತೆ ಮಾಡುವುದು… ಇತ್ಯಾದಿ.
ಪ್ರಶ್ನೆ: ಇದು ಈಗ ಚರ್ಚಿಸಲಾಗುತ್ತಿರುವ ಕೆಲವು ವಿಷಯಗಳಂತೆಯೇ ಕಾಣುತ್ತಿದೆ?
ಸ್ನೋಡೆನ್: ಓಹ್! ಹೌದು. ಇನ್ನೂ ಕೆಲವು ಉದಾಹರಣೆಗಳಿವೆ. 1720ರಲ್ಲಿ ಸೈರ್ನಾ ಮತ್ತು ಟ್ರಿಪೋಲಿಯಿಂದ (ಈಜಿಪ್ಟ್ ಮತ್ತು ಲಿಬಿಯಾ) ಬೆಲೆಬಾಳುವ ಬಟ್ಟೆಗಳ ಸರಕನ್ನು ಹೊತ್ತಿದ್ದ ಹಡಗೊಂದು ದಕ್ಷಿಣ ಫ್ರಾನ್ಸಿನ ಮಾರ್ಸೀಲಿ ಬಂದರಿಗೆ ಬಂತು. ಇನ್ನೂ ಹಡಗು ಸಮುದ್ರದಲ್ಲಿ ಇರುವಾಗಲೇ ಎಂಟು ನಾವಿಕರು, ಒಬ್ಬ ಪ್ರಯಾಣಿಕ ಮತ್ತು ಹಡಗಿನ ವೈದ್ಯ ಪ್ಲೇಗಿನಿಂದ ಸತ್ತಿದ್ದರು. ಸಾಮಾನ್ಯವಾಗಿ ಕ್ವಾರಂಟೈನ್ 40 ದಿನಗಳ ಕಾಲ ಇರುತ್ತಿತ್ತು. ಆದರೆ, ಅದನ್ನು 10 ದಿನಗಳಿಗೆ ಮೊಟಕುಗೊಳಿಸಲಾಯಿತು. ಅಮೂಲ್ಯ ಬಟ್ಟೆಗಳನ್ನು ಸುಟ್ಟುಹಾಕಲಿಲ್ಲ. ಪರಿಣಾಮವಾಗಿ, 1,00,000ರಷ್ಟಿದ್ದ ಮಾರ್ಸೀಲಿಯ ಜನಸಂಖ್ಯೆಯ ಅರ್ಧದಷ್ಟು ಜನರು ಪ್ಲೇಗಿನಿಂದ ಸತ್ತರು. ಮೊಟಕುಗೊಳಿಸಿದ ಕ್ವಾರಂಟೈನನ್ನು “ಕಿರು ಕ್ವಾರಂಟೈನ್” ಎಂದು ಕರೆಯಲಾಯಿತು. ಇದು ನನಗೆ ಆರಂಭದಲ್ಲಿ ಕೋವಿಡ್- 19ನ್ನು ಸಾಮಾನ್ಯ ನೆಗಡಿ, ಫ್ಲೂ ಎಂದೆಲ್ಲಾ ಕಡೆಗಣಿಸಿದ್ದ ಡೊನಾಲ್ಡ್ ಟ್ರಂಪ್‌ನನ್ನು ನೆನಪಿಸುತ್ತದೆ.
(ನಿರೀಕ್ಷಿಸಿ: ಸಂದರ್ಶನದ ಇನ್ನಷ್ಟು ಕುತೂಹಲಕಾರಿ ಅಂಶಗಳು ಮುಂದಿನ ಭಾಗದಲ್ಲಿ)
ಇದನ್ನೂ ಓದಿ: ಕೊರೊನ ವಿರುದ್ಧದ ಹೋರಾಟದ ಭಾಷೆ ಮನುಷ್ಯ ಭಾಷೆಯಾಗಿರಬೇಕಿದೆ.



I am very sad to know that you have declared solidarity to international pharmaceutical mafias through this timely article to generate fear in the general mass. I have no doubt that international pharmaceutical mafia Kingpin Mr. Bill Gates will be so happy even to fund you.
I have written this above statement because CORONA is an ordinary influenza flu virus. I can’t understand why you are standing with these mafia gang. To know the actual Truth of coronavirus, please read and understand the “Corona – The Scandle of the Millinium” from the link below by downloading 22 pages summary and the full book from below. Long live Truth. ?
Important: in the end of the 22 pages summary, there is a three days naturopathy diet plan to vanish the coronavirus by Dr. Biswaroop Roy Chowdhury.
https://biswaroop.com/coronabook/