Homeಮುಖಪುಟಕೊರೊನ ವಿರುದ್ಧದ ಹೋರಾಟದ ಭಾಷೆ ಮನುಷ್ಯ ಭಾಷೆಯಾಗಿರಬೇಕಿದೆ

ಕೊರೊನ ವಿರುದ್ಧದ ಹೋರಾಟದ ಭಾಷೆ ಮನುಷ್ಯ ಭಾಷೆಯಾಗಿರಬೇಕಿದೆ

- Advertisement -
- Advertisement -

ಕೊರೊನ ಪಿಡುಗಿನ ಹಿನ್ನಲೆಯಲ್ಲಿ ಅತಿ ಹೆಚ್ಚು ಚರ್ಚೆಯಾದ ಸಾಹಿತ್ಯ ಕೃತಿ ಫ್ರೆಂಚ್ ಬರಹಗಾರ ಅಲ್ಬೆ ಕಮುವಿನ ‘ದ ಪ್ಲೇಗ್’. ಪ್ಲೇಗ್ ಸಾಂಕ್ರಾಮಿಕ ಪಿಡುಗು ಬಂದೆರಗಿದಾಗ ಹೋರಾಡುವ ವೈದ್ಯ ರಿಯೋ ದೃಷ್ಟಿಕೋನದಲ್ಲಿ ನಿರೂಪಣೆಗೊಳ್ಳುವ ಕಾದಂಬರಿಯ ಅಂತ್ಯದ ಸಾಲುಗಳು ಇವತ್ತಿಗೂ ಎಚ್ಚರಿಕೆಯ ಘಂಟೆಯಾಗಿ ಕಾಡುತ್ತವೆ: “ಪಟ್ಟಣದಿಂದ ಹೊರಹೊಮ್ಮುತ್ತಿದ್ದ ಸಂತೋಷದ ಕೇಕೆಯನ್ನು ರಿಯೋ ಕೇಳುತ್ತಿದ್ದಂತೆ ಈ ಸಂತೋಷ ಎಂದಿಗೂ ಅಪಾಯಕಾರಿ ಎಂದು ಅವನಿಗೆ ನೆನಪಾಯಿತು. ಸಂತೋಷಭರಿತ ಜನಸಮೂಹಕ್ಕೆ ತಿಳಿಯದ ಆದರೆ ಪುಸ್ತಕಗಳಿಂದ ತಿಳಿಯಬಹುದಾಗಿದ್ದ ಸಂಗತಿ ಅವನಿಗೆ ಗೊತ್ತಿತ್ತು: ಅದೇನೆಂದರೆ ಪ್ಲೇಗ್ ಬೆಸಿಲಸ್ ಎಂದಿಗೂ ಸಾಯುವುದಿಲ್ಲ ಅಥವಾ ಒಳ್ಳೆಯ ಸನ್ನಿವೇಶದ ಸೃಷ್ಟಿಗಾಗಿ ಅದು ಮರೆಯಾಗುವುದಿಲ್ಲ; ಅದು ಪೀಠೋಪಕರಣಗಳಲ್ಲಿ ಮತ್ತು ಕಬೋರ್ಡ್‍ಗಳಲ್ಲಿ ಸುಪ್ತವಾಗಿ ವರ್ಷ ವರ್ಷಗಳ ಕಾಲ ಇರುತ್ತದೆ; ಮಲಗುವ ಕೋಣೆಗಳಲ್ಲಿ, ನೆಲಮಾಳಿಗೆಗಳಲ್ಲಿ, ಟ್ರಂಕ್‍ಗಳಲ್ಲಿ ಮತ್ತು ಪುಸ್ತಕಗಳ ಕಪಾಟುಗಳಲ್ಲಿ ತನ್ನ ಸಮಯಕ್ಕಾಗಿ ಕಾಯುತ್ತಿರುತ್ತದೆ; ಮತ್ತೆ ಎಂದೋ ಒಂದು ದಿನ ಜನರಿಗೆ ಜ್ಞಾನೋದಯ ಮೂಡಿಸಲು ಮತ್ತು ಅಷ್ಟೇ ನೋವು-ಬೇನೆಗಳನ್ನು ನೀಡಲು, ಅದು ತನ್ನ ಇಲಿಗಳನ್ನು ಮತ್ತೆ ಬಡಿದೆಬ್ಬಿಸಿ ಸಂತಸ ತುಂಬಿದ ನಗರದಲ್ಲಿ ಅವುಗಳು ವಿಲವಿಲ ಒದ್ದಾಡಿ ಬೀಳುವಂತೆ ಮಾಡುತ್ತದೆ”.

ಕಾದಂಬರಿ ಕೊನೆಯ ಈ ಸಾಲುಗಳು ನಾವು ಇಂದಿನ ಪಿಡುಗಿನ ವಿರುದ್ಧ ಹೋರಾಡುತ್ತಿರುವ ನಮ್ಮ ಮಾರ್ಗ ಮತ್ತು ಅದಕ್ಕಾಗಿ ನಾವು ಕಟ್ಟಿಕೊಂಡಿರುವ ಭಾಷೆ ಮತ್ತು ಪ್ರೋಟೋಕಾಲ್‍ಗಳನ್ನು ವಿಮರ್ಶೆ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತವೆ.

ಕೊರೊನ ಸೋಂಕು ತೀವ್ರಪ್ರಮಾಣದಲ್ಲಿ ಭಾರತಕ್ಕೆ ಕಾಲಿಟ್ಟ ದಿನದಿಂದಲೂ, ಈ ಪಿಡುಗಿನ ವಿರುದ್ಧ ಹೋರಾಡಲು ಸೃಷ್ಟಿಯಾದ ಅಧಿಕಾರದ ಭಾಷೆ, ಅದು ಬಹಳೆಡೆಗಳಲ್ಲಿ ಸೃಷ್ಟಿಸಿದ ಅವಾಂತರಗಳು, ಮುಂದೆ ತಂದೊಡ್ಡಬಹುದಾದ ಸಮಸ್ಯೆಗಳನ್ನು ನಾವು ವಿಶ್ಲೇಷಿಸಬೇಕಿದೆ. ಈ ಪಿಡುಗನ್ನು ಸದ್ಯದಲ್ಲೇ ಸಂಪೂರ್ಣ ನಿರ್ಮೂಲನೆ ಮಾಡಬಹುದು ಎಂಬ ಕಲ್ಪನೆಯ ಮೇಲೆ ಈ ಹೋರಾಟ ನಿಂತಿದೆ. ಆದರೆ, ಕೋವಿಡ್-19 ವೈರಸ್ ನಿರ್ಮೂಲನೆ ಅನ್ನುವುದು ಸಾಧ್ಯವಿಲ್ಲ ಮತ್ತು ಇದು ಸಾಮಾನ್ಯ ಜ್ವರದಂತೆ ಮತ್ತೆ ಮತ್ತೆ ಬಂದೆರಗುತ್ತದೆ ಎಂಬುದು ವಿಶ್ವದಾದ್ಯಂತ ಸಾರ್ವಜನಿಕ ಆರೋಗ್ಯ ತಜ್ಞರ ಅಭಿಪ್ರಾಯ. ಒಂದು ಪಕ್ಷ ಮುಂದಿನ ಒಂದೆರಡು ವರ್ಷಗಳಲ್ಲಿ ಲಸಿಕೆ ವ್ಯಾಪಕವಾಗಿ ಲಭ್ಯವಾಗಿ ಕೊರೊನ ವಿರಳವಾದರೂ ಸದ್ಯದ ಪರಿಸ್ಥಿತಿಯ ಜಗತ್ತಿನಲ್ಲಿ ಇನ್ನೂ ಹೊಸ ಹೊಸ ವೈರಾಣುಗಳಿಂದ ಹುಟ್ಟುವ ಪಿಡುಗುಗಳ ಕುರಿತು ವಿಜ್ಞಾನಿಗಳು ಎಚ್ಚರಿಸುತ್ತಲೇ ಇದ್ದಾರೆ. ಆದುದರಿಂದ ಈ ಸಾಂಕ್ರಾಮಿಕ ರೋಗ ಜಗತ್ತಿನ ಯಾವುದೇ ದೇಶದ ಯಾವುದೇ ನಾಗರಿಕನಿಗೆ ತಗುಲಬಲ್ಲದು ಎಂಬ ವಿವೇಕದಿಂದ, ಈಗಾಗಲೇ ಸೋಂಕು ತಗಲಿದವರನ್ನು ಕಳಂಕಿತರನ್ನಾಗಿ ನೋಡದೆ ಅವರನ್ನು ಕರುಣೆಯಿಂದ ಕಂಡು, ಎಚ್ಚರಿಕೆಯಿಂದ, ಒಗ್ಗಟ್ಟಿನಿಂದ ಮತ್ತು ಪರಿಣಾಮಕಾರಿಯಾಗಿ ಈ ಪಿಡುಗಿನ ವಿರುದ್ಧ ಹೋರಾಡುವ ಯೋಜನೆಗಳನ್ನು ನಾವು ಮರುರೂಪಿಸಬೇಕಿದೆ.

ನಂಜನಗೂಡಿನ ಉದಾಹರಣೆಯನ್ನೇ ನೋಡೋಣ. ಅಲ್ಲಿ ಒಂದು ಔಷಧ ಮಾರಾಟ ಸಂಸ್ಥೆಯ ಸಿಬ್ಬಂದಿಗೆ ಕೊರೊನ ಸೋಂಕು ಇರುವುದು ಪತ್ತೆಯಾಯಿತು. ಅವರ ಸೋಂಕಿನ ಮೂಲವನ್ನು ತಿಳಿದುಕೊಳ್ಳಲು ಅವರಿಗಾಗಲೀ ಅಥವಾ ಆರೋಗ್ಯ ಅಧಿಕಾರಿಗಳಿಗೆ ಆಗಲೀ ಸಾಧ್ಯವಾಗಲಿಲ್ಲ. ಅಂತಹ ಸಮಯದಲ್ಲಿ ಮಾಧ್ಯಮಗಳು ಬಳಸಿದ ಭಾಷೆ, ಸಾಂಕ್ರಾಮಿಕ ಪಿಡುಗಿನ ವಿರುದ್ಧ ತಿಳುವಳಿಕೆಯ ಹೋರಾಟವಾಗಿರಲಿಲ್ಲ. ಕೆಲವು ಪತ್ರಿಕೆಗಳು “ನಂಜನಗೂಡು ಕೊರೊನಾ ಟೈಂ ಬಾಂಬ್”, “ಕೊರೊನಾ ಕಗ್ಗಂಟು ಬೆನ್ನತ್ತಿದ ಖಾಕಿ ಪಡೆ, 10 ತಂಡಗಳಿಂದ ಸೋಂಕಿನ ಜಾಲ ಶೋಧ”, “ನಂಜನಗೂಡಿನ ನಂಜು” ಇಂತಹ ತಲೆಬರಹಗಳನ್ನು ಕೊಟ್ಟವು. ಒಂದು ಊರನ್ನು, ಒಂದು ಸಂಸ್ಥೆಯನ್ನು, ಒಂದು ವ್ಯಕ್ತಿಯನ್ನು ಕಳಂಕಿತರನ್ನಾಗಿ ಮಾಡಲು ಇವು ಶ್ರಮಿಸಿದವೇ ಹೊರತು, ವ್ಯವಸ್ಥಿತವಾಗಿ ಜತೆಗೂಡಿ ಈ ಪಿಡುಗನ್ನು ನಿಯಂತ್ರಿಸುವ ತಿಳುವಳಿಕೆಯನ್ನು ಮೂಡಿಸಲು ಅವು ಸೋತವು. ಇನ್ನು ಕೆಲವು ಖಾಸಗಿ ಟಿವಿ ವಾಹಿನಿಗಳು ಮತ್ತು ಅದರ ಆಂಕರ್‍ಗಳು, ಆ ರೋಗಿ ತನಗೆ ಹೇಗೆ ಸೋಂಕು ತಗುಲಿತು ಎಂಬುದನ್ನು ನೆನಪಿಸಿಕೊಳ್ಳಲೇಬೇಕು ಹಾಗೂ ಅದನ್ನು ಅಧಿಕಾರಿಗಳಿಗೆ ಹೇಳಲೇಬೇಕು ಎಂದು ಗಂಟಲಿನ ತುತ್ತತುದಿಯಲ್ಲಿ ಕಿರುಚಿ ಹೇಳಿದರು. ಅದು ವೈರಾಣು ಸೃಷ್ಟಿಸುತ್ತಿದ್ದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಯಾವುದೇ ಕೊಡುಗೆ ನೀಡಲಿಲ್ಲ ಎಂಬುದನ್ನು ಅರಿಯುವ ಅಗತ್ಯವೇ ಅವರಿಗೆ ಕಂಡುಬರಲಲಿಲ್ಲ. ಕೊರೊನ ಪಿಡುಗಿನ ವಿರುದ್ಧದ ಹೋರಾಟದ ಕುರಿತು ಬಳಸಿದ ಭಾಷೆಯು ಯುದ್ಧವನ್ನು, ಯುದ್ಧದ ಕಾರ್ಯಾಚರಣೆಗಳನ್ನು ನೆನೆಪಿಸುವ ಉದ್ದೇಶ ಹೊಂದಿತ್ತು. ಆ ಭರದಲ್ಲಿ ನಾವು ಹೋರಾಟ ಮಾಡಬೇಕಾಗಿರುವುದು ವೈರಾಣು ವಿರುದ್ಧ ಎಂಬುವುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಅದನ್ನು ಬಳಸಿದವರಿಗೆ ಅನಿಸಲಿಲ್ಲ. ಬದಲಿಗೆ ಸೋಂಕು ತಗುಲಿ ಸಂತ್ರಸ್ತ್ರರಾದವರ, ಕೋವಿಡ್-19 ಸೋಂಕಿಗೆ ಒಳಗಾಗುವ ಸಂಭವ ಇರುವ ನತದೃಷ್ಟ ಜನರ ಮತ್ತು ಈ ಇಡೀ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರನ್ನೇ ಕಳಂಕಿತರಾಗಿ ನೋಡುವಂತೆ ಮಾಡಿತು. ಈಗಲಾದರೂ ಇದನ್ನು ಸಮಗ್ರವಾಗಿ ಬದಲಾಯಿಸಿಕೊಳ್ಳುವ ಅಗತ್ಯವಿದೆ.

“ಪೇಶೆಂಟ್ ಜೀರೋ” ಎಂಬ ನುಡಿಗಟ್ಟು ಕೂಡ ಯುದ್ಧದ ಸಂದರ್ಭದಲ್ಲಿ ಬಳಸುವ “ಗ್ರೌಂಡ್ ಜೀರೊ” ಇಂದ ಹುಟ್ಟಿರಬಹುದಾದ ಸಂಭವವೇ ಹೆಚ್ಚು. ಬಾಂಬ್ ಸ್ಫೋಟಿಸಿದ ಜಾಗವನ್ನು ಗ್ರೌಂಡ್ ಜೀರೊ ಎನ್ನುತ್ತಾರೆ. ಇದು ಕೊನೆಗೆ ಯಾವ ತಿರುವು ಪಡೆಯಿತು ಎಂದರೆ ಒಂದು ಇಡೀ ದೇಶವನ್ನು, ಆ ದೇಶದ ನಾಗರಿಕರನ್ನು ಒಂದು ಸಮುದಾಯವಾಗಿ, ಜನಾಂಗೀಯವಾಗಿ ಕಳಂಕಿತರನ್ನಾಗಿಸುವ ಮಟ್ಟಕ್ಕೆ ಹೋಯಿತು. ಪಶ್ಚಿಮ ದೇಶಗಳಲ್ಲಿ ಚೈನಾ ಮೂಲದ ಜನರ ಮೇಲೆ ಹಲ್ಲೆಯಾಗುವವರೆಗೆ ಇದು ಮುಂದುವರೆಯಿತು. ದೇಶದೇಶಗಳ ನಡುವೆ ವೈಮನಸ್ಯಕ್ಕೆ, ಅದು ಕೊನೆಗೆ ಮಾಧ್ಯಮಗಳಿಗೆ ಆಹಾರವಾಗಿ, ಇದು ಚೈನಾ ವಿಶ್ವದ ವಿರುದ್ಧ ಹೂಡಿರುವ ಯುದ್ಧ ಎಂಬ ಫೇಕ್ ಸುದ್ದಿಗಳನ್ನು ಹರಡುವುದಕ್ಕೆ ಕಾರಣವಾಯಿತು. ಸೋಂಕಿತ ವ್ಯಕ್ತಿ ಬೇರೆ ಯಾರು ಯಾರಿಗೆ ಈ ಸೋಂಕು ಹರಡಿರಬಹುದು ಎಂಬುದನ್ನು ತಿಳಿದು ಚಿಕಿತ್ಸೆ ನೀಡಲು ಉಪಯೋಗಕ್ಕೆ ಬರಬೇಕಿದ್ದ ಈ ಪರಿಭಾಷೆ ಕೊನೆಗೆ ಒಬ್ಬ ವ್ಯಕ್ತಿಯನ್ನು, ಒಂದು ಜನಾಂಗವನ್ನು, ಒಂದು ಧರ್ಮವನ್ನು, ಒಂದು ದೇಶವನ್ನು ಹಳಿಯಲು ಮಾಧ್ಯಮಗಳಿಗೆ ಆಹಾರವಾಗಿರುವುದು ಇವತ್ತಿನ ಮುಖ್ಯವಾಹಿನಿ ಮಾಧ್ಯಮಗಳ ದುಸ್ಥಿತಿಯನ್ನು ಎತ್ತಿ ತೋರಿಸುತ್ತದೆ.

ಕೊರೊನ ಸನ್ನಿವೇಶದಲ್ಲಂತೂ ಎಷ್ಟೋ ಲಕ್ಷಾಂತರ ಸೋಂಕಿತ ವ್ಯಕ್ತಿಗಳಿಗೆ ಲಕ್ಷಣಗಳೇ ಕಂಡು ಬರದೆ ಗುಣಮುಖವಾಗುತ್ತಿರುವ ಸಂದರ್ಭದಲ್ಲಿ ಪೇಶೆಂಟ್ ಜೀರೋ ಎಂಬ ಮಾತೇ ಅಸಂಗತ. ನಂಜನಗೂಡಿನಲ್ಲಿ ಮೊದಲು ಗುರುತಿಸಿದ ರೋಗಿಗೆ ಯಾವ ಮೂಲದಿಂದ ಕೊರೊನ ಬಂದಿತು ಎಂದು ಕಂಡುಹಿಡಿಯಲೇಬೇಕು ಎಂದು ಯಾರು ಎಷ್ಟೇ ಪಟ್ಟುಹಿಡಿದರೂ ಯಶಸ್ಸು ಸಿಗುವುದು ಅನುಮಾನ.

ಇದೇ ರೀತಿ ಈ “ಸೂಪರ್ ಸ್ಪ್ರೆಡರ್” ಎಂಬ ನುಡಿಗಟ್ಟನ್ನೂ ಕೂಡ ಭಾರತದಲ್ಲಿ ಮಾಧ್ಯಮಗಳು ಹೇಗೆ ತಿರುಚಿದವು ಎಂಬುದನ್ನು ನಾವು ಗಮನಿಸಬೇಕು. ಸಾಮಾನ್ಯವಾಗಿ ವೈಜ್ಞಾನಿಕ ಪರಿಭಾಷೆಯಲ್ಲಿ ಸೂಪರ್ ಸ್ಪ್ರೆಡರ್ ಅಂದರೆ ಯಾವ ರೋಗಿಗೆ ವೈರಲ್ ಲೋಡ್ ಹೆಚ್ಚಾಗಿರುತ್ತದೆಯೋ ಆ ರೋಗಿ, ಈ ಸೋಂಕನ್ನು ವೇಗವಾಗಿ ಹರಡಬಲ್ಲನು ಎಂಬುದಾಗಿ ಬಳಸಲಾಗುತ್ತದೆ. ಆದರೆ ಭಾರತದ ಮಟ್ಟಿಗೆ ಒಂದು ಕೋಮಿನ ಜನರನ್ನು ಸೂಪರ್ ಸ್ಪ್ರೆಡರ್ಸ್ ಎಂದು ಮಾಧ್ಯಮಗಳು ವ್ಯಾಪಕವಾಗಿ ಬಿಂಬಿಸಿದವು. ತಬ್ಲೀಗಿ ಜಮಾತ್ ಸಮಾವೇಶದಲ್ಲಿ ಸೋಂಕಿಗೆ ಗುರಿಯಾದವರು ಕೂಡ ಸಂತ್ರಸ್ತರು ಎಂಬುದನ್ನು ಮರೆತು, ಸೂಪರ್ ಸ್ಪ್ರೆಡರ್ ಎಂಬ ಮಾತನ್ನು ವಿಷಕಾರಿಯಾಗಿ ಬಳಸಿ ಜನರ ಮನಸ್ಸನ್ನು ಕೆಡಿಸಲು ಮಾಧ್ಯಮಗಳು ಪ್ರಯತ್ನ ಮಾಡಿದವು. ಸಂತ್ರಸ್ತರ ಒಳಿತಿಗಾಗಿ ಜನರು ಕಡೇಪಕ್ಷ ಕರುಣೆಯನ್ನು ಇಟ್ಟುಕೊಂಡು ಪ್ರಾರ್ಥಿಸುವುದಕ್ಕೂ ಸಾಧ್ಯವಾಗದಂತೆ ಮಾಡಿ ಕೃತಕ ಕಳಂಕವನ್ನು ಸೋಂಕಿತರಿಗೆ ಈ ಮಾಧ್ಯಮಗಳು ಆರೋಪಿಸಿದವು.

ಹೀಗೆ ಕಳಂಕಿತರನ್ನಾಗಿಸುವ, ಬಹಿಷ್ಕೃತರನ್ನಾಗಿಸುವ ಅಟ್ಟಹಾಸ ಯಾವ ಮಟ್ಟಕ್ಕೆ ಬೆಳೆಯಿತೆಂದರೆ, ಕೋವಿಡ್-19ರ ವಿರುದ್ಧ ಹೋರಾಟ ಮಾಡುತ್ತಿದ್ದ ವೈದ್ಯರು, ನರ್ಸ್‍ಗಳು, ಆರೋಗ್ಯ ಕಾರ್ಯಕರ್ತರನ್ನು ಅವಮಾನಿಸುವ ಘಟನೆಗಳು ದೇಶದಾದ್ಯಂತ ನಡೆದವು. ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರನ್ನು ಮನೆ ಖಾಲಿ ಮಾಡುವಂತೆ ಮನೆ ಮಾಲೀಕರು ನೋಟಿಸ್ ಕೊಟ್ಟ ಘಟನೆಗಳು ವರದಿಯಾದವು. ತಪ್ಪು ಮಾಹಿತಿಯಿಂದ ಭಯಭೀತರಾಗಿ ಚೆನ್ನೈನ ವೈದ್ಯರೊಬ್ಬರ ಅಂತ್ಯಸಂಸ್ಕಾರಕ್ಕೆ ಜನರು ಅಡ್ಡಿಪಡಿಸಿದರು. ಸ್ವತಃ ವೈದ್ಯರೂ ಆಗಿರುವ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಭರತ್ ಶೆಟ್ಟಿ ಮತ್ತೊಂದು ಉದಾಹರಣೆ ಒದಗಿಸಿದರು. ಮೃತಪಟ್ಟ ಕೊರೋನ ರೋಗಿಯ ಅಂತ್ಯ ಸಂಸ್ಕಾರ ಮಾಡಿದರೆ ಸೋಂಕು ಹರಡುವ ಯಾವುದೇ ಸಂಭವ ಇಲ್ಲ ಎಂದು ಗೊತ್ತಿದೆ ಎಂದು ಹೇಳಿಯೂ, ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡದೆ ಹಿಂದಕ್ಕೆ ಕಳುಹಿಸಿದರು. ಇಂತಹ ಯಾವ ಸನ್ನಿವೇಶಗಳಲ್ಲಿಯೂ ಮುಖ್ಯವಾಹಿನಿ ಮಾಧ್ಯಮಗಳು ಜನರನ್ನು ಎಜುಕೇಟ್ ಮಾಡುವ ತ್ರಾಸವನ್ನು ತೆಗೆದುಕೊಳ್ಳಲೇ ಇಲ್ಲ.

ಈಗ ಲಭ್ಯವಾಗುತ್ತಿರುವ ಅಧ್ಯಯನಗಳ ಪ್ರಕಾರ ವಿವಿಧ ದೇಶಗಳಲ್ಲಿ ಸರ್ಕಾರಗಳು ನೀಡುತ್ತಿರುವ ಅಂಕಿಅಂಶಗಳಿಗಿಂತಲೂ ಅತಿ ಹೆಚ್ಚು ಜನಕ್ಕೆ ಈ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಲಕ್ಷಣಗಳೇ ಗೋಚರಿಸದೆ ಬಂದು ಹೋಗುವ ಈ ಸೋಂಕು ಮುಂದಿನ ಕೆಲವು ತಿಂಗಳುಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನಕ್ಕೆ ಹರಡುವ ಸಾಧ್ಯತೆ ಇದೆ ಎಂದು ಅವು ತಿಳಿಸುತ್ತಿವೆ. ಆದುದರಿಂದ ಸ್ವೀಡನ್‍ನಂತಹ ದೇಶಗಳಲ್ಲಿ ಲಾಕ್‍ಡೌನ್‍ನಂತಹ ತೀವ್ರ ಕ್ರಮಗಳಿಗೆ ಮುಂದಾಗದೆ, ಪಿಡುಗನ್ನು ನಿಭಾಯಿಸುವ ಕ್ರಮಗಳಿಗೆ ಮುಂದಾಗಿದ್ದಾರೆ. ಹಾಗೆಯೇ ಭಾರತದಲ್ಲಿಯೂ ವಿವಿಧ ಸಮುದಾಯಗಳಿಗೆ ಈ ಸೋಂಕನ್ನು ನಿಭಾಯಿಸುವ ಬಗ್ಗೆ ತಿಳುವಳಿಕೆ ಮೂಡಿಸಬೇಕಿದೆ. ಮೊಬೈಲ್ ಆಪ್‍ನಿಂದ ಮಾತ್ರ ಸೋಂಕು ತಡೆಗಟ್ಟುವುದರ ಬಗ್ಗೆ ಅನುಮಾನಗಳನ್ನು ಹಲವು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ಸೋಂಕು ಹರಡುವ ವೇಗವನ್ನು ಕಡಿಮೆ ಮಾಡಿ ಈ ಸೋಂಕು ತಗುಲುವುದು ಅನಿವಾರ್ಯ ಎಂಬಂತೆ ಜನಗಳಿಗೆ ಎಚ್ಚರ ಮೂಡಿಸಿ ಅದನ್ನು ನಿಭಾಯಿಸುವುದನ್ನು ಕಲಿಸುವ ಕೆಲಸಕ್ಕೆ ಮತ್ತು ಸರ್ಕಾರಗಳು ಆಸ್ಪತೆಗಳ ಸೌಲಭ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಮುಂದಾಗುವುದು ಅತ್ಯುತ್ತಮ ಮಾರ್ಗ ಎಂಬುದು ವಿಶ್ವದ ಹಲವು ಸಾಂಕ್ರಾಮಿಕರೋಗ ತಜ್ಞರ ಅಭಿಪ್ರಾಯವೂ ಆಗಿದೆ.

ಈ ನಿಟ್ಟಿನಲ್ಲಿ ಮಾಧ್ಯಮಗಳು ಬಳಸುವ ಭಾಷೆಯ ಬಗ್ಗೆ ಇಂದು ಮರುಚಿಂತನೆ ಮಾಡುವ ಅಗತ್ಯ ಇದೆ. ಹಸಿರು ವಲಯ ವರ್ಸಸ್ ಕೆಂಪು ವಲಯ ಎಂಬ ಬೇಲಿಗಳನ್ನು ಹಾಕಿ ಕಳಂಕಿತರನ್ನಾಗಿಸುವ ಭಾಷೆಯ ಬದಲಿಗೆ ಪರ್ಯಾಯಗಳನ್ನು ಹುಡುಕಿಕೊಳ್ಳಬೇಕಿದೆ. ಕ್ಯಾನ್ಸರ್, ಏಡ್ಸ್‍ನಂತಹ ರೋಗಗಳ ವಿರುದ್ಧ ಎಲ್ಲರೂ ಹೇಗಿ ಒಗ್ಗೂಡಿ ಹೋರಾಡಬೇಕು ಎಂಬ ಮನೋಭಾವ ಮೂಡಿಸಲು ಸರ್ಕಾರಗಳು ಪ್ರಚಾರ ಮಾಡುತ್ತವೆಯೋ ಅಂತಹ ಎಚ್ಚರಿಕೆಯನ್ನು ಈಗಲೂ ವಹಿಸಬೇಕಿದೆ. ಕೋವಿಡ್ ‘ಶಂಕಿತ’ ಎನ್ನುವಾಗ ಶಂಕಿತನನ್ನು ‘ಬಂಧಿಸಬೇಕು’ ಎಂಬ ಅಭಿಪ್ರಾಯ ಹೆಚ್ಚು ಮೂಡುತ್ತದೆಯೇ ಹೊರತು ಆತನಿಗೆ ಅಕಸ್ಮಾತ್ ಸೋಂಕು ತಗುಲಿದರೆ ಅದು ಬೇಗ ವಾಸಿಯಾಗುವುದರಲ್ಲಿ ಇಡೀ ಸಮುದಾಯದ ಒಳಿತು ಅಡಗಿದೆ ಎಂಬ ಭಾವ ಮೂಡುವುದಿಲ್ಲ. ನಮ್ಮ ಭಾಷೆಗೆ ಸಂತ್ರಸ್ತನ ನೋವಿಗೆ ಮಿಡಿಯುವ ಸೂಕ್ಷ್ಮತೆಯನ್ನು ಕಂಡುಕೊಳ್ಳಬೇಕಿದೆ.

ಕೊನೆ ಮಾತು: ಕ್ರಿಸ್ತಶಕ 1347ರಿಂದ 1350ರ ನಡುವೆ ಬ್ಲಾಕ್ ಡೆತ್ (ನಂತರ ಇದನ್ನು ಪ್ಲೇಗ್ ಎಂದು ಕರೆಯಲಾಯಿತು) ರೋಗಕ್ಕೆ ಇಡೀ ಯೂರೋಪಿನ ಸುಮಾರು 80%ರಿಂದ 90% ಜನಸಂಖ್ಯೆ ಅಳಿಸಿಹೋಗಿದ್ದನ್ನು ಅಂದಿನ ಹಲವರು ದಾಖಲಿಸಿದ್ದಾರೆ. ಟಿವಿ, ವಾಟ್ಸ್‍ಆಪ್, ಫೇಸ್ಬುಕ್ ಇಲ್ಲದ ಅಂದಿನ ದಿನಗಳಲ್ಲಿ ಈ ರೋಗಕ್ಕೆ ಯಾರಾದರೂ ಬಲಿಪಶುಗಳು ಬೇಕಾಗಿತ್ತು. ಇದಕ್ಕಾಗಿ ಅಂದಿನ ಜ್ಯೂ ಜನಾಂಗದವರ ಮೇಲೆ ಆರೋಪ ಹೊರಿಸಿ ಗುಂಪು ಗುಂಪಾಗಿ ಸುಟ್ಟು ಹಾಕಿ, ಸಾಮೂಹಿಕ ಕೊಲೆ ಮಾಡಿದ ನೂರಾರು ದಾಖಲೆಗಳು ನಮಗೆ ಸಿಗುತ್ತವೆ. ಸಾವಿರಾರು ವರ್ಷದ ಬಳಿಕ ಸಾಂಕ್ರಾಮಿಕಗಳ ಬಗ್ಗೆ ಒಂದಷ್ಟು ತಿಳುವಳಿಕೆ ಮೂಡಿದ ಮೇಲೆಯೂ ಸಾಂಕ್ರಾಮಿಕವನ್ನು ಒಂದು ದೇಶಕ್ಕೆ, ಒಂದು ಜನಾಂಗಕ್ಕೆ ಆರೋಪಿಸಿ ಬಲಿಪಶುಗಳನ್ನು ಹುಡುಕುವ ಕೆಲಸ ಇವತ್ತಿಗೂ ಜಗತ್ತಿನಾದ್ಯಂತ ನಡೆಯುತ್ತಿದೆ. ಬಹುಶಃ ಮನುಷ್ಯನಲ್ಲಿ ಕ್ರಮೇಣ ಹುಟ್ಟಿಸಲಾದ ತೀವ್ರ ಧಾರ್ಮಿಕ ರಾಷ್ಟೀಯತೆಯ ಭಾವನೆ, ಫ್ಯಾಸಿಸಂ ಬಗ್ಗೆ ಮೋಹಗಳು ಇಂಥ ವಿದ್ಯಮಾನಗಳಿಗೆ ಕಾರಣವಾಗಿ, ಸೋಂಕಿನ ಪರಿಸ್ಥಿತಿ ವಿಷಮಸ್ಥಿತಿಗೆ ತಿರುಗಲು ಕಾರಣವಾಗಿವೆ. ಮಾಧ್ಯಮಗಳು ಅದನ್ನು ತಿದ್ದದೆ, ಪೋಷಿಸುತ್ತಿರುವುದು ದುರಂತದ ಸಂಗತಿ. ಅಲ್ಬೆ ಕಮು ‘ದ ಪ್ಲೇಗ್’ ಬರೆದದ್ದು ಎರಡನೇ ವಿಶ್ವಯುದ್ಧಕ್ಕೆ ಮುಂಚಿತವಾಗಿ ನಾಜಿ ದುರಾಕ್ರಮಣಕ್ಕೆ ರೂಪಕವಾಗಿ. ಒಂದು ಪ್ರದೇಶದಿಂದ, ಒಂದು ಕಾಲಘಟ್ಟದಿಂದ ಆ ಫ್ಯಾಸಿಸಂ ಅಳಿದುಹೋಗಿರಬಹುದು. ಆದರೆ ಅದು ಇನ್ನೆಲ್ಲೋ ಜಗತ್ತಿನ ಮೂಲೆಯಲ್ಲಿ ಅವಿತು ಉಸಿರಾಡುತ್ತಿದೆ, ಒಂದು ದಿನ ಅದು ಎದ್ದು ಬಂದು ಅಪ್ಪಳಿಸುತ್ತದೆ ಎಂದು ಹೇಳಿದ್ದ ಎಚ್ಚರಿಕೆಯ ಭವಿಷ್ಯವಾಣಿ ಇವತ್ತಿನ ಕೊರೊನ ಸೋಂಕಿಗೂ ಅದರ ಸುತ್ತ ತಾಂಡವವಾಡುತ್ತಿರುವ ತೀವ್ರ ಹುಚ್ಚಾಟದ ಮನುಷ್ಯ ದ್ವೇಷದ, ಸಮುದಾಯ ದ್ವೇಷದ ಭಾವನೆಗೂ ಅನ್ವಯವಾಗುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ...

0
"ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ"...