ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಹಿರಿಯ ಅಧಿಕಾರಿಯ ಆಪ್ತ ಸಿಬ್ಬಂದಿಯೊಬ್ಬರಲ್ಲಿ ಕೊರೊನ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ಸಿ.ಆರ್.ಪಿ.ಎಫ್ ಕೇಂದ್ರ ಕಚೇರಿಯನ್ನು ಸೀಲ್ ಮಾಡಲಾಗಿದೆ.
ಕೇಂದ್ರ ಕಚೇರಿಯೊಂದಿಗೆ ಸಂಪರ್ಕವಿಟ್ಟುಕೊಂಡಿದ್ದ ಚಾಲಕನಿಗೆ ಕೊರೊನ ಸೋಂಕು ಇರುವುದು ಪತ್ತೆಯಾಗಿರುವುದರಿಂದ ನೌಕರರು ಕೆಲಸ ಮಾಡಲು ಅವಕಾಶವನ್ನು ನೀಡಿಲ್ಲ. ನೌಕರರು ಕೇಂದ್ರ ಕಚೇರಿ ಕಟ್ಟಡಕ್ಕೆ ಪ್ರವೇಶಿಸಲು ಅನುಮತಿ ನೀಡುತ್ತಿಲ್ಲ ಎಂದು ಸಿ.ಆರ್.ಪಿ.ಎಫ್ ಮೂಲಗಳು ತಿಳಿಸಿವೆ.
ದೆಹಲಿಯ ಲೋದಿ ರಸ್ತೆಯಲ್ಲಿರುವ ಸಿಜಿಒ ಕಾಂಪ್ಲೆಕ್ಸ್ ಸುತ್ತ ವೈದ್ಯಕೀಯ ಮಾರ್ಗಸೂಚಿಗಳ ಅನ್ವಯ ಅಗತ್ಯವಿರುವ ಪ್ರೋಟೋಕಾಲ್ ಗಳನ್ನು ಪ್ರಾರಂಭಿಸಬೇಕೆಂದು ಸಿ.ಆರ್.ಪಿ.ಎಫ್ ಅಧಿಕಾರಿಗಳು ಜಿಲ್ಲಾ ಕಣ್ಗಾವಲು ಅಧಿಕಾರಿಗೆ ಮಾಹಿತಿ ನೀಡಿದ್ದಾರೆ.
ಕೇಂದ್ರ ಕಚೇರಿಯಲ್ಲೇ ಸೋಂಕು ಕಾಣಿಸಿಕೊಂಡಿರುವುದರಿಂದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಬೇಕು. ಸೋಂಕಿತ ಡ್ರೈವರ್ ಜೊತೆ ಸಂಪರ್ಕ ಹೊಂದಿದ್ದ ಎಲ್ಲರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. 40 ಮಂದಿ ಅಧಿಕಾರಿಗಳು, ವಿಶೇಷ ಪ್ರಧಾನ ನಿರ್ದೇಶಕ ಮಟ್ಟದ ಅಧಿಕಾರಿ, ಹೆಚ್ಚುವರಿ ಇನ್ಸ್ ಪೆಕ್ಟರ್ ಜನರಲ್ ಅಧಿಕಾರಿಯನ್ನು ಹೋಂ ಕ್ವಾರಂಟೈನಲ್ಲಿಡಲಾಗಿದೆ.
ಇದನ್ನೂ ಓದಿ: ಕೊರೊನಾದಿಂದ ಸತ್ತವರ ಸಮಾಧಿ ಮಾಡಬಾರದೆಂಬ ಅರ್ಜಿಗೆ ಸುಪ್ರೀಂನಲ್ಲಿ ತಕರಾರು


