Homeಎಕಾನಮಿಕೊರೋನಾ ಲಾಕ್‌ಡೌನ್‌ ನಂತರ ಭಾರತ ಆರ್ಥಿಕ ಪ್ರಗತಿ ಸಾಧಿಸುವುದು ಸಾಧ್ಯ. ಹೇಗೆ ಗೊತ್ತೆ?

ಕೊರೋನಾ ಲಾಕ್‌ಡೌನ್‌ ನಂತರ ಭಾರತ ಆರ್ಥಿಕ ಪ್ರಗತಿ ಸಾಧಿಸುವುದು ಸಾಧ್ಯ. ಹೇಗೆ ಗೊತ್ತೆ?

ಇಂತಹ ದಿಟ್ಟ ಹೆಜ್ಜೆ ಇಡಲು ರಾಜಕೀಯ ಧೈರ್ಯ ಬೇಕು. ಅದಕ್ಕೆ ಬೇಕಾದರೆ ಸರ್ವ ಪಕ್ಷಗಳ ಸಭೆ ಕರೆದು ಪ್ರಧಾನಿಗಳು ದೇಶದ ಆರ್ಥಿಕ ಪರಿಸ್ಥಿತಿಯನ್ನು ಎಲ್ಲರಿಗೂ ತಿಳಿಸಿ ಅವರ/ಸದನದ ಸಮ್ಮತಿ ಪಡೆಯಬಹುದು. ಹಾಗಾಗಿ ಹಣದ ಕೊರತೆ ಇಲ್ಲ, ಕೇವಲ ಇಚ್ಛಾಶಕ್ತಿಯ ಕೊರತೆ ಕಾಣುತ್ತಿದೆ.

- Advertisement -
- Advertisement -

ದೇಶದ ಆರ್ಥಿಕ ಪರಿಸ್ಥಿತಿ ಅತ್ಯಂತ ನಾಜೂಕಾಗಿರುವಾಗಲೇ ಕೊರೋನಾ ಎಂಬ ಮಹಾಮಾರಿ ನಮ್ಮ ಮೇಲೆ ಸಿಡಿಲಿನಂತೆ ಬಿದ್ದಿದೆ. ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಎನ್ನುವಂತೆ ಎಲ್ಲಾ ಕೆಲಸವನ್ನೂ ಬಿಟ್ಟು ಮಹಾಮಾರಿಯನ್ನು ನಿಯಂತ್ರಿಸಲು ಕಳೆದ ಒಂದೂವರೆ ತಿಂಗಳಿಂದ ಇಡೀ ದೇಶವನ್ನೇ ಲಾಕ್-ಡೌನ್ ಮಾಡಲಾಗಿದೆ. ಮಹಾಮಾರಿಗೆ ಇದುವರೆಗೆ ಖಚಿತವಾದ ಔಷಧಿಯಾಗಲೀ ಅಥವಾ ಅದರ ತಡೆಗೆ ಲಸಿಕೆಯಾಗಲೀ ಇಡೀ ವಿಶ್ವದಲ್ಲಿ ಯಾರ ಬಳಿಯೂ ಇಲ್ಲ ಹಾಗಾಗಿ ಈ ಲಾಕ್-ಡೌನ್.

ಇದರಿಂದ ಮಹಾಮಾರಿಯ ವೇಗವಾದ ಹರಡುವಿಕೆಯನ್ನು ಸ್ವಲ್ಪ ಮಟ್ಟಿಗೆ ಕುಂಠಿತಗೊಳಿಸಬಹುದೇ ವಿನಃ ತಡೆಯಲು ಯಾವ ದೇಶದಿಂದಲೂ ಸಾಧ್ಯವಾಗಿಲ್ಲ. ಇದರೊಂದಿಗೆ ನಮ್ಮ ಜನರ ಅಸಹಕಾರ, ಅಜ್ಞಾನ, ಅವಿವೇಕದಿಂದಾಗಿ ರೋಗದ ಹರಡುವಿಕೆ ಇನ್ನೂ ಹತೋಟಿಗೆ ಬಂದಿಲ್ಲ. ಕಳೆದ ತಿಂಗಳು ಕೇವಲ 4,000 ಜನರಿಗೆ ಸೋಂಕು ತಗುಲಿದ್ದುದು ಬೆಳಕಿಗೆ ಬಂದಿದ್ದರೆ ಇಂದು ಆ ಸಂಖ್ಯೆ ಆಗಲೇ 40,000 ತಲುಪಿದೆ. ಅದಲ್ಲದೆ ಸಾವಿರಾರು ಜನರನ್ನು ಹೋಂ-ಕ್ವಾರಂಟೀನಿನಲ್ಲಿಡಲಾಗಿದೆ. ಎಲ್ಲವನ್ನೂ ಬಂದ್ ಮಾಡಿ ಎಷ್ಟು ದಿನ ಜೀವಿಸಲು ಸಾಧ್ಯ? ಅನುಕೂಲಸ್ಥರು ಸ್ವಲ್ಪ ದಿನದ ಮಟ್ಟಿಗೆ ಅವರಿಗೆ ಆಗಿರುವ ಅನಾನುಕೂಲವನ್ನು ತಡೆದುಕೊಳ್ಳಬಲ್ಲರು ಆದರೆ ದಿನಾ ದುಡಿದು ತಿನ್ನುವ ಕೋಟ್ಯಾಂತರ ಬಡವರ ಗತಿ ಏನು? ಸರಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳು ಸ್ವಲ್ಪ ಮಟ್ಟಿನ ಸಹಾಯ ಒದಗಿಸಿದ್ದರೂ ಸಹ, ಇದು ಬಹುತೇಕ ಬಡವರಿಗೆ ತಲುಪಿಲ್ಲ ಅಥವಾ ಸಾಕಾಗಿಲ್ಲ.

ನಮ್ಮ ದೇಶದ ನಗರಗಳಲ್ಲಿ ಅಸಂಖ್ಯಾತ ಕೂಲಿ ಕಾರ್ಮಿಕರು ಬೇರೆ ಬೇರೆ ಗ್ರಾಮದಿಂದ ಮತ್ತು ರಾಜ್ಯಗಳಿಂದ ವಲಸೆ ಬಂದವರು. ಅವರಿಗೆ ನಗರದಲ್ಲಿ ಸರಿಯಾಗಿ ವಾಸಿಸಲು ಮನೆಯಿಲ್ಲ, ಮೂಲಭೂತ ಸೌಕರ್ಯವಿಲ್ಲದ ದೊಡ್ಡಿಗಳಲ್ಲಿ 8-10 ಜನ ಒಟ್ಟೊಟ್ಟಿಗೆ ವಾಸಿಸುತ್ತಾರೆ, ಸಿಕ್ಕಿದ್ದನ್ನು ಬೇಯಿಸಿಕೊಂಡು ತಿನ್ನುತ್ತಾರೆ. ಅಂತಹ ಜನರಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಜೀವಿಸಿ ಎಂದು ಹೇಳುವುದಾಗಲೀ, ಕೆಲಸಕ್ಕೆ ಹೋಗದೇ, ಕೈಯಲ್ಲಿ ಕಾಸೂ ಇಲ್ಲದೆ, ತಿನ್ನಲು ಅನ್ನವೂ ಇಲ್ಲದವರಿಗೆ ರಸ್ತೆಗೆ ಬರಬೇಡಿ ಎನ್ನುವುದು ಯಾವ ನ್ಯಾಯ? ಹಾಗಾಗಿ ದೇಶ ತನ್ನ ಆರ್ಥಿಕ ಚಟುವಟಿಕೆ ಪುನಃ ಮತ್ತು ತುರ್ತಾಗಿ ಪ್ರಾರಂಭಿಸಬೇಕಾದ ಅನಿವಾರ್ಯತೆ ಇದೆ. ಆದರೆ ಜನರು ಮನೆಯಿಂದ ಹೊರಗೆ ಬಂದ ಕೂಡಲೇ ಅವರನ್ನು ಹಿಡಿದುಕೊಳ್ಳಲು ಕೊರೋನಾ ಮಹಾಮಾರಿ ಕಾತುರತೆಯಿಂದ ಕಾಯುತ್ತಿದೆ. ಇತ್ತ ದರಿ ಅತ್ತ ಪುಲಿ ಎಂಬಂತೆ ನಮ್ಮ ಪಾಡಾಗಿದೆ.

ಈ ರೀತಿಯ ಕಠೋರವಾದ ಲಾಕ್-ಡೌನ್ ಮಾಡಲು ಇನ್ನೊಂದು ಕಾರಣವೂ ಇದೆ. ಇದುವರೆಗೆ ದೇಶ ಆಳಿದ ಸರಕಾರಗಳು ಸಾರ್ವಜನಿಕ ಆರೋಗ್ಯ, ಶಿಕ್ಷಣ, ಸಾರಿಗೆ ಮುಂತಾದ ಕ್ಷೇತ್ರಕ್ಕೆ ಬೇಕಾದ ಹೂಡಿಕೆ ಮಾಡದೇ, ಅವನ್ನು ನಿರ್ಲಕ್ಷಿಸಿ, ನೈಸರ್ಗಿಕ ಸಂಕಟ ಸಮಯದಲ್ಲಿ ಅವುಗಳು ಯಾವುದೇ ಭಾರವನ್ನು ಹೊರಲಾರದಂತಹ ದುಸ್ಥಿತಿಗೆ ತಂದು ಇಟ್ಟಿದ್ದಾರೆ. ಹಾಗಾಗಿ ಅವು ಸಂಪೂರ್ಣವಾಗಿ ಕುಸಿದು ಹೋಗದಂತೆ ಕಾಪಾಡಲು ಕಠಿಣ ನಿಯಮಾವಳಿಯ ಲಾಕ್-ಡೌನ್ ಅವಶ್ಯಕತೆ ಬಿದ್ದಿದೆ. ಕೊರೋನಾ ಹೊಡೆತದಿಂಡ ಬೇರೆ ದೇಶಗಳೂ ಸಹ ನಮ್ಮಂತೆ ಅಥವಾ ನಮಗಿಂತ ಹೀನಾಯ ಸ್ಥಿತಿಯಲ್ಲಿ ಇರುವುದರಿಂದ ಈ ವಿಷಯ ಈಗ ಸ್ವಲ್ಪ ಮಟ್ಟಿಗೆ ಅಪ್ರಸ್ತುತ ಅನ್ನಿಸಬಹುದು.

ಲಾಕ್-ಡೌನ್ ನಿಯಮ ಸ್ವಲ್ಪ ಸಡಿಲಗೊಂಡ ಕೂಡಲೇ ತಮ್ಮ ತಮ್ಮ ಊರಿಗೆ ಹೋಗಿ ಸೇರಿಕೊಂಡರೆ ಸಾಕು, ಉಪವಾಸವೋ, ವನವಾಸವೋ ನಮ್ಮ ಪಾಡಿಗೆ ನಮ್ಮ ಕುಟುಂಬದವರೊಂದಿಗೆ ಬದುಕೋಣ ಅಥವಾ ಸಾಯೋಣ ಎಂಬ ನಿರ್ಧಾರಕ್ಕೆ ಬಡವರು ಈಗಾಗಲೇ ಬಂದಾಗಿದೆ. ಈಗಾಗಲೇ ಸಾವಿರಾರು ಜನರು ಲಾಕ್-ಡೌನ್ ಲೆಕ್ಕಿಸದೇ ಕಾಲ್ನಡಿಗೆಯಲ್ಲೇ ಸಾವಿರಾರು ಮೈಲಿ ಪಾದ ತೇಯಿಸಿ, ತಮ್ಮ ದೂರದ ಊರುಗಳಿಗೆ ತಲುಪಿಯೂ ಆಗಿದೆ. ಎಷ್ಟೋ ನತದೃಷ್ಟರು ತಮ್ಮ ಜೀವ ಕಳೆದುಕೊಂಡಿದ್ದೂ ಆಗಿದೆ. ಈ ಲಾಕ್-ಡೌನ್ ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಅತ್ಯಂತ ಗಂಭೀರ ಪರಿಣಾಮ ಬೀರಿದೆ. ಇದರಿಂದ ಚೇತರಿಸಿಕೊಂಡು ಮತ್ತೆ ತಲೆ ಎತ್ತಿ ನಿಲ್ಲುವುದು ಅತ್ಯಂತ ಕಷ್ಟದ ಕೆಲಸ, ಆದರೆ ಅಸಾಧ್ಯವಲ್ಲ. ಇದಕ್ಕೆ ಸರಿಯಾದ ಎಲ್ಲರನ್ನೂ ಒಳಗೊಂಡಂತಹ ಯೋಜನೆ ಬೇಕು. ಮುಂದಾಲೋಚನೆ ಇಲ್ಲದ ಲಾಕ್-ಡೌನ್‌ನಂತಹ ಯಾವುದೇ ದಿಢೀರ್ ನಿರ್ಧಾರ ದೇಶದ ಪ್ರಗತಿಗೆ ಮತ್ತೆ ಮುಳುವಾಗುತ್ತದೆ.

ಹಾಗಾದರೆ ಈ ಸ್ಥಬ್ಧವಾಗಿರುವ ಆರ್ಥಿಕ ಬಂಡಿಗೆ ಚಾಲನೆ ನೀಡಿ ದೇಶವನ್ನು ಮುಂದುವರೆಸುವುದು ಹೇಗೆ? ಇದಕ್ಕೆ ಎಷ್ಟು ಹಣ ಬೇಕು, ಹಣ ಎಲ್ಲಿದೆ, ಯಾವ ಕ್ಷೇತ್ರಕ್ಕೆ ಅಥವಾ ಯಾವ ಜನರಿಗೆ ಹಣ ಸಹಾಯ ನೀಡಬೇಕು

ಕೇಂದ್ರ ಸರಕಾರ ತನ್ನ ಮೊದಲನೆಯ ಹೇಳಿಕೆಯ ಪ್ರಕಾರ ರೂ. 20,000 ಕೋಟಿ ಮತ್ತು ನಂತರದ ರೂ.1,70,000 ಕೋಟಿ ಮತ್ತು ಜನರಿಂದ ಎತ್ತಿರುವ ಚಂದಾ ಹಣ (ಪಿಎಂ ಕೇರ್ಸ್ ಫಂಡ್) ಸುಮಾರು 10,000 ಕೋಟಿ ಎಲ್ಲಾ ಸೇರಿದರೆ ರೂ. 2 ಲಕ್ಷ ಕೋಟಿ ಕೊರೋನಾ ಯುದ್ಧಕ್ಕೆ ಮಂಜೂರು ಮಾಡಿದೆ. ಇದು ನಮ್ಮ ಜಿಡಿಪಿಯ ಕೇವಲ 1% ಮಾತ್ರ ಹಾಗೂ ಏನೂ ಸಾಲದು. ಅಮೇರಿಕ ತನ್ನ ಅಗಾಧವಾದ ಜಿಡಿಪಿಯ 10% (ಸುಮಾರು ರೂ. 150 ಲಕ್ಷ ಕೋಟಿಯಷ್ಟನ್ನು) ಮೊದಲ ಹಂತದಲ್ಲೇ ಬಿಡುಗಡೆ ಮಾಡಿ, ಜನರಿಗೆ ಹಂಚಿಯೂ ಆಗಿದೆ. ನವಿಲಾಡಿತು ಎಂದು ಕೆಂಬೂತ ಪುಕ್ಕ ತರೆದುಕೊಳ್ಳಲು ಸಾಧ್ಯವೇ ಅಥವಾ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಸಾಕೇ? ಅದೇನೇ ಇರಲಿ, ನಾವು ಕನಿಷ್ಟ ನಮ್ಮ ಜಿಡಿಪಿಯ 5% ಹಣವನ್ನಾದರೂ ಬಳಸಿಕೊಂಡು ಈ ಸಂದಿಗ್ಧದಿಂದ ಪಾರಾಗಬೇಕಾಗಿದೆ. ಅಂದರೆ ನಮಗೆ ಬೇಕಾಗಿರುವುದು ರೂ. ಹತ್ತು ಲಕ್ಷ ಕೋಟಿ.

ನಮ್ಮ ದೇಶದ ಜಿಡಿಪಿ 2019-20ರಲ್ಲಿ ಸುಮಾರು ರೂ.200 ಲಕ್ಷ ಕೋಟಿ (ಟ್ರಿಲಿಯನ್) ಅಥವಾ ಎರಡೂಮುಕ್ಕಾಲು ಟ್ರಿಲಿಯನ್ ಡಾಲರ್ ಇದೆ ಅಂದು ಕೊಳ್ಳೋಣ. ವರ್ಷ 2020-21ರಲ್ಲಿ  ಕೇಂದ್ರ ಸರಕಾರ ತನ್ನ ಮುಂಗಡ ಪತ್ರದಲ್ಲಿ ಇದು 10% ವೃದ್ಧಿಯಾಗುತ್ತದೆ ಎಂಬ ಆಶಯ ವ್ಯಕ್ತ ಪಡಿಸಿತ್ತು ಆದರೆ ಮುಂದಿನ ವರ್ಷವೂ ಇಷ್ಟೇ ಇದ್ದಲ್ಲಿ ಅದು ನಮ್ಮ ಅದೃಷ್ಟ ಎನ್ನಬೇಕು. ಅಂದರೆ ನಮಗೆ ಕೊರೋನಾ ಮತ್ತು ಆರ್ಥಿಕ ದುರಾಡಳಿತದಿಂದ ರೂ. 20 ಲಕ್ಷ ಕೋಟಿ ಹಿನ್ನಡೆ ಆಗಿದೆ. ವಿತ್ತ ಮಂತ್ರಿ ಮಂಡಿಸಿದ ಮುಂಗಡ ಪತ್ರದಲ್ಲಿ ವಾರ್ಷಿಕ ಆದಾಯ 22 ಲಕ್ಷ ಕೋಟಿ ಮತ್ತು ಖರ್ಚು 30 ಲಕ್ಷ ಕೋಟಿ ಎಂದಿತ್ತು. ವಾರ್ಷಿಕ ಬಜೆಟ್ ಖೋತಾ ಜಿಡಿಪಿಯ 4‍%ನಷ್ಟಿದೆ ಆದರೆ ಬಾಯಿ ಬಿಟ್ಟು ಒಪ್ಪಿಕೊಳ್ಳುತ್ತಿಲ್ಲ, ಸುಮಾರು 3 ರಿಂದ 3.5 % ಎನ್ನುತ್ತಿದ್ದಾರೆ. ಅವರೇ ಹೇಳಿದಂತೆ ಈಗಾಗಲೇ ನಮ್ಮ ಹತ್ತಿರ ನಿವೇಶನಕ್ಕೆ ಹಣ ಇಲ್ಲ ಮತ್ತು ಹೂಡಿಕೆ ಇಲ್ಲದೆ ಆರ್ಥಿಕ ಬಂಡಿ ಸಾಗುವುದಿಲ್ಲ. ಆದರೂ ಸರಕಾರ ದೆಹಲಿಯಲ್ಲಿ ಹೊಸ ಕೇಂದ್ರಾಡಳಿತ ಭವನ ಮತ್ತು ಪ್ರಧಾನಿಗಳ ನಿವಾಸಕ್ಕೆಂದು ಹಾಕಿರುವ ಸೆಂಟ್ರಲ್ ವಿಸ್ಟಾ ಯೋಜನೆಗೆ ರೂ. 25,000 ಕೋಟಿ ಮತ್ತು ಪ್ರಧಾನಿ/ರಾಷ್ಟ್ರಪತಿ ಇವರ ಹಾರಾಟಕ್ಕಾಗಿ ವಿಶೇಷ ವಿಮಾನಕ್ಕೆ 8500 ಕೋಟಿ ಖರ್ಚು ಮಾಡಲು ಹೊರಟಿದೆ. ಇದು ಪ್ರಜೆಗಳಿಂದ, ಪ್ರಜೆಗಳಿಗಾಗಿ ಇರುವ ಸರಕಾರವಂತೂ ಖಂಡಿತ ಅಲ್ಲ. ಅದರ ಮಾತು ಹಾಗಿರಲಿ, ಈಗ ಬೇಕಾಗಿರುವ ದಶಲಕ್ಷ ಕೋಟಿ ಎಲ್ಲಿಂದ ತರಬಹುದು ಅದನ್ನು ನೋಡೋಣ.

ಅಮೇರಿಕದಲ್ಲಿ ಕೊರೋನಾ ಹೊಡೆತದಿಂದ ಜನರು ತತ್ತರಿಸಿದ್ದಾರೆ. ಮೂರು ಕೋಟಿಗೂ ಹೆಚ್ಚು ಜನರು ಈಗಾಗಲೇ ನಿರುದ್ಯೋಗ ಭತ್ಯೆಗೆ ಅರ್ಜಿ ಸಲ್ಲಿಸಿದ್ದಾರೆ. ಟೆಕ್ಸಾಸ್ ರಾಜ್ಯದಲ್ಲಿ ಸರಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳು ಆಯೋಜಿಸಿರುವ ಉಚಿತ ಊಟದ ಕೇಂದ್ರಗಳಿಗೆ ಜನರು ತಮ್ಮ ದೊಡ್ಡ ದೊಡ್ಡ ಕಾರುಗಳಲ್ಲಿ ಬಂದು, ಮೈಲಿಗಟ್ಟಲೆ ಉದ್ದದ ಸರದಿಯಲ್ಲಿ ಕಾಯ್ದು, ಊಟ ಮಾಡುತ್ತಿದ್ದಾರೆ. ಏಕೆ ಹೀಗೆ? ಬಂಡವಾಳಶಾಹಿ ದೇಶದ ಜನರ ಗತಿಯೇ ಹೀಗಾದಲ್ಲಿ ನಮ್ಮಂತಹ ಬಡವರ ಗತಿ ಏನು? ಬಂಡವಾಳಶಾಹಿ ಪದ್ಧತಿಯ ಮೂಲಮಂತ್ರದಂತೆ ಅಲ್ಲಿಯ ಜನರಿಗೆ ಸರಕಾರವು ಹಣ ಉಳಿಸುವುದನ್ನು ಕಲಿಸುವುದಿಲ್ಲ, ಕೇವಲ ಗಳಿಸಿ ಮತ್ತು ಖರ್ಚು ಮಾಡಿ ಎಂದು ಮಾತ್ರ ಹೇಳುತ್ತದೆ. ಹಣ ಇಲ್ಲದಿದ್ದರೆ ಸಾಲ ಮಾಡಿ, ಬಡ್ಡಿ ಕಟ್ಟಿ. ನಾಳೆ ಬರಬಹುದಾದ ಹಣ ಇಂದೇ  ಉಪಯೋಗಿಸಿಕೊಳ್ಳಿ ಎಂದು ಕಲಿಸುತ್ತದೆ. ಹೀಗಾಗಿ ಅಲ್ಲಿಯ ಜನರಿಗೆ ಆದಾಯ ನಿಂತ ಕೂಡಲೇ ಖರ್ಚಿಗೆ ಹಣ ಇರುವುದಿಲ್ಲ. ಮನೆ ಇರಬಹುದು, ಮನೆಯಲ್ಲಿ ಎಲ್ಲಾ ಉಪಕರಣಗಳೂ ಇರಬಹುದು, ವಾಹನವಿರಬಹುದು ಆದರೆ ದೈನಂದಿನ ದಿನಸಿ ತರಲು ಹಣ ಇರುವುದಿಲ್ಲ. ಹಾಗಾಗಿ ಉಚಿತ ಗಂಜಿ ಕೇಂದ್ರಕ್ಕೆ ಹೋಗದೆ ಅವರಿಗೆ ದಾರಿ ಇಲ್ಲ. ಇವರಿಗೆ ಬ್ಯಾಂಕುಗಳು ಯಾವ ಅಧಾರದ ಮೇಲೆ ಸಾಲ ನೀಡುತ್ತವೆ ಅಥವಾ ಪಡೆದ ಸಾಲ ಇವರು ತೀರಿಸದಿದ್ದರೆ ಇವರ ಗತಿ ಏನಾಗುತ್ತದೆ ಎಂದು ನೀವು ಯೋಚಿಸಬೇಕಿಲ್ಲ ಏಕೆಂದರೆ ಯಾವುದೇ ಅಮೇರಿಕ ನಗರದಲ್ಲಿ ಈ ರೀತಿಯ ಆರ್ಥಿಕ ಹೊಡೆತಕ್ಕೆ ಸಿಕ್ಕು ನಿರ್ಗತಿಕರಾಗಿರುವ ಸಾವಿರಾರು ಮಂದಿಯನ್ನು ರಸ್ತೆಯಲ್ಲಿ ಕಾಣಬಹುದು. ಅಲ್ಲಿಯ ಜನರೇ ಹಣ ಉಳಿಸದಿದ್ದ ಮೇಲೆ ಅಮೇರಿಕದ ಬ್ಯಾಂಕುಗಳಿಗೆ ಇಂತಹ ಜನರಿಗೆ ಸಾಲ ನೀಡಲು ಹಣ ಎಲ್ಲಿಂದ ಬರುತ್ತದೆ? ಅಲ್ಲೇ ಇರುವುದು ಭಾರತದಂತಹ ಬಡ ರಾಷ್ಟ್ರಗಳ ಪಾತ್ರ.

ಭಾರತದ ವಿದೇಶಿ ವಿನಿಮಯ ರಿಜರ್ವ್ ಸುಮಾರು 450 ಬಿಲಿಯನ್ ಡಾಲರ್ಸ್ (ರೂ.35 ಲಕ್ಷ ಕೋಟಿ) ಅಮೇರಿಕದ ಬ್ಯಾಂಕುಗಳಲ್ಲಿ ಒಂದು ಪರ್ಸೆಂಟಿಗೂ ಕಡಿಮೆ ಬಡ್ಡಿಗೆ ಇಡಲಾಗಿದೆ. ಈ ಹಣದಲ್ಲಿ ಹತ್ತು ಲಕ್ಷ ಕೋಟಿ ಹಣ ಈ ಸಂದಿಗ್ಧ ಪರಿಸ್ಥಿಯಲ್ಲಿ ನಾವು ಖಂಡಿತಾ ಬಳಸಿಕೊಳ್ಳಬಹುದು. ಕಚ್ಚಾ ತೈಲದ ಬೆಲೆ ಅತ್ಯಂತ ಕಡಿಮೆಯಾಗಿದೆ. ಈ ಸಮಯದಲ್ಲಿ ನಮ್ಮ ಇಂಪೋರ್ಟ್ ಬಿಲ್ ಸರಿದೂಗಿಸಲು ಯಾವ ಕಷ್ಟವೂ ಇಲ್ಲ. ಇಂತಹ ದಿಟ್ಟ ಹೆಜ್ಜೆ ಇಡಲು ರಾಜಕೀಯ ಧೈರ್ಯ ಬೇಕು. ಅದಕ್ಕೆ ಬೇಕಾದರೆ ಸರ್ವ ಪಕ್ಷಗಳ ಸಭೆ ಕರೆದು ಪ್ರಧಾನಿಗಳು ದೇಶದ ಆರ್ಥಿಕ ಪರಿಸ್ಥಿತಿಯನ್ನು ಎಲ್ಲರಿಗೂ ತಿಳಿಸಿ ಅವರ/ಸದನದ ಸಮ್ಮತಿ ಪಡೆಯಬಹುದು. ಹಾಗಾಗಿ ಹಣದ ಕೊರತೆ ಇಲ್ಲ, ಕೇವಲ ಇಚ್ಛಾಶಕ್ತಿಯ ಕೊರತೆ ಕಾಣುತ್ತಿದೆ.

ಹಣ ಇದ್ದರೆ ಎಲ್ಲಿ ಖರ್ಚು ಮಾಡುವುದು, ಯಾರಿಗೆ ನೀಡುವುದು.  ದೇಶದಲ್ಲಿ ಕೊರೋನಾ ಪ್ರಥಮವಾಗಿ ಕೇರಳದಲ್ಲಿ ಕಾಣಿಸಿಕೊಂಡು ಅಲ್ಲಿನ ರಾಜ್ಯ ಸರಕಾರ ಕೊರೋನಾ ಯುದ್ಧವನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸುತ್ತಿದೆ. ಅಲ್ಲಿ ಐದುನೂರು ಮಂದಿಗೆ ಸೋಂಕು ತಗುಲಿದ್ದು ಕೇವಲ ನಾಲ್ಕು ಸಾವುಗಳಾಗಿದ್ದು ಮಿಕ್ಕವರು ಗುಣಹೊಂದಿದ್ದಾರೆ. ಆದರೆ ಪಿಎಂ ಕೇರ್ಸ್ ಫಂಡಿನಿಂದ ಕೇರಳಕ್ಕೆ ನೀಡಿರುವ ಹಣ ಯಾವುದಕ್ಕೂ ಸಾಲದು ಎಂಬ ಮಾತು ಕೇಳಿ ಬರುತ್ತಿದೆ. ಅದೇ ರೀತಿಯಲ್ಲಿ ದೆಹಲಿ ರಾಜ್ಯ ಸರಕಾರಕ್ಕೂ ಯಾವುದೇ ಹಣ ನೀಡಿಲ್ಲವೆಂಬ ಸುದ್ದಿಯೂ ಇದೆ. ಈ ರೀತಿಯ ರಾಜಕೀಯ ತಾರತಮ್ಯ ಮಾಡದೇ, ಎಲ್ಲರನ್ನೂ ಒಳಗೊಂಡಂತಹ ಪ್ರಾಮಾಣಿಕ, ಪಾರದರ್ಶಕ ಹಣ ಹಂಚಿಕೆ ನೀತಿ ಕೇಂದ್ರ ಸರಕಾರ ಪ್ರಕಟಿಸಬೇಕಾಗಿದೆ.

ಮೊಟ್ಟ ಮೊದಲಿಗೆ ಹಣ ಬೇಕಾಗಿರುವುದು ಮಹಾಮಾರಿಯೊಂದಿಗೆ ಜೂಜುತ್ತಿರುವ ವೈದ್ಯಕೀಯ ತಂಡಕ್ಕೆ. ಅವರಿಗೆ ಬೇಕಾದ ರಕ್ಷಣಾ ಕವಚ, ಪರೀಕ್ಷಣಾ ಕಿಟ್, ಇತರ ಸಾಮಗ್ರಿಗಳ ಖರೀದಿಗೆ. ರೋಗಿಗಳನ್ನು ಗುರುತಿಸಿ ಅವರನ್ನು ಪ್ರತ್ಯೇಕಿಸಿ, ಮಿಕ್ಕ ಜನರಿಗೆ ಹರಡದಂತೆ ಮಾಡಲು ಬೇಕಾದ ಅಗತ್ಯ ಕ್ರಮಕ್ಕೆ ಹಣ ಸಿಗಬೇಕು. ತಟ್ಟೆ ಕುಟ್ಟುವುದು, ಶಂಖ ಊದುವುದು, ಹೂವು ಉದುರಿಸುವುದು ಬೇಕಾಗಿಲ್ಲ.

ಎರಡನೆಯದು ಇದರ ಆರ್ಥಿಕ ದುಷ್ಪರಿಣಾಮ ಎದುರಿಸುತ್ತಿರುವ ಬಡವರಿಗೆ. ಅವರ ಖಾತೆಗೆ ನೇರವಾಗಿ ಹಣ ನೀಡಬೇಕು. ಇಂತಹ ಕೆಲಸಕ್ಕೆ ಕನಿಷ್ಠ ರೂ. 65,000 ಕೋಟಿ ಹಣ ಬೇಕು ಎಂದು ಭಾರತೀಯ ರಿಜರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. 50 ದೊಡ್ಡ ಮೊತ್ತದ ಸುಸ್ತಿ ಸಾಲಗಾರ ಸಂಸ್ಥೆಗಳ 68,607 ಕೋಟಿ ಹೊಡೆದು ಹಾಕುವುದಕ್ಕಿಂತ ಮುಂಚೆ ಸರಕಾರ ಈ ಬಡವರ ಸಹಾಯಕ್ಕೆ ಬರಬೇಕಿತ್ತು. ಜನರ ಜನಧನ್ ಖಾತೆ, ಆಧಾರ ಕಾರ್ಡ್, ಅಂತ್ಯೋದಯ/ಬಿಪಿಎಲ್ ಕಾರ್ಡ್ ಮುಂತಾದವುಗಳ ದತ್ತಾಂಶದ ಮೇಲೆ ಈ ಕಡು ಬಡವರಿಗೆ ನೇರವಾಗಿ ತಿಂಗಳಿಗೆ ಇಂತಿಷ್ಟು ಎಂದು, ಕನಿಷ್ಠ ಒಂದು ವರ್ಷಕಾಲ, ಹಣ ನೇರವಾಗಿ ಸಂದಾಯವಾಗಬೇಕು. ಇವರಿಗೆ ನೀಡಿದ ಹಣ ಕೂಡಲೇ ಮರುಚಾಲನೆಗೆ ಬರುತ್ತದೆ ಮತ್ತು ಅವರು ಖರೀದಿಸಿದ ವಸ್ತುಗಳ ಮೇಲಿನ ತೆರಿಗೆಯಿಂದ ಸರಕಾರಕ್ಕೂ ಆದಾಯವಾಗುತ್ತದೆ.

ಮೂರನೆಯದು ಮನ್ರೇಗಾ ವ್ಯವಸ್ಥೆಗೆ. ಮನ್ರೇಗಾ ಬಹಳ ಒಳ್ಳೆಯ ಬೇಡಿಕೆ ಚಾಲಿತ ಸಾಮಾಜಿಕ ಜೀವರಕ್ಷಾ ಬಲೆ (ಸೋಷಿಯಲ್ ಸೇಫ್ಟಿ ನೆಟ್) ಆಗಿದ್ದು, ಇದರಲ್ಲಿ ಜನರಿಂದ ಮಾಡಿಸುವ ಕೆಲಸ ಗ್ರಾಮಾಂತರ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಯದ್ದಾಗಿರಬೇಕು. ಕಳೆದ ಹಲವಾರು ವರ್ಷಗಳಿಂದ ಬೇಸಿಗೆ ಸಮಯದಲ್ಲಿ ಮಹಾರಾಷ್ಟ್ರದ ಬರಪೀಡಿತ ಗ್ರಾಮಗಳಲ್ಲಿ ಜಲ ಸಂರಕ್ಷಣೆಯ ಕೆಲಸ “ಸತ್ಯಮೇವ ಜಯತೆ ಮತ್ತು ಪಾನಿ ಫೌಂಡೇಷನ್” ಸಂಸ್ಥೆ ಮಾಡುತ್ತಿವೆ. ಇದರಲ್ಲಿ ಹಳ್ಳಿಯ ಜನರು ತಮ್ಮ ಸ್ವ-ಇಚ್ಛೆಯಿಂದ ಶ್ರಮದಾನ ಮಾಡುತ್ತಾರೆ ಮತ್ತು ತಮ್ಮ ಗ್ರಾಮದ ಜಲ ಸಂಪನ್ಮೂಲಗಳನ್ನು ರಕ್ಷಿಸಿ, ವೃದ್ಧಿಸಿ ಗ್ರಾಮ ನಿವಾಸಿಗಳು ತಮ್ಮ ಜಲಕ್ಷಾಮದ ಪರಿಸ್ಥಿತಿ ನಿವಾರಿಸಿಕೊಂಡಿದ್ದಾರೆ. ಇಂತಹದೇ ಕೆಲಸ ಮಾಡಿ ಮಹಾರಾಷ್ಟ್ರದ ಹಿವರೇ ಬಾಜಾರ್ ಎಂಬ ಗ್ರಾಮ ಸಂಪೂರ್ಣ ಸ್ವಾವಲಂಬಿಯಾಗಿರುವುದರ ಜೊತೆಗೆ ದೇಶದಲ್ಲೇ ಅತಿ ಹೆಚ್ಚು ಲಕ್ಷಾಧಿಪತಿಗಳನ್ನು ಹೊಂದಿರುವ ಗ್ರಾಮವಾಗಿದೆ. ಇಂತಹ ಕೆಲಸಕ್ಕೆ ಮನ್ರೇಗಾ ಹಣ ಬಳಸಬೇಕು.

ಕೃಷಿಯನ್ನು ಕಡ್ಡಾಯವಾಗಿ ಸಹಕಾರಿ ವಲಯವನ್ನಾಗಿ ಮಾಡಿ ರೈತರ ಬೆಳೆಗೆ ಸರಿಯಾದ ಬೆಲೆ ಬರುವಂತಹ ವ್ಯವಸ್ಥೆ ಮಾಡಬೇಕು. ಹಾಪ್ಕಾಮ್ಸ್, ಎಪಿಎಂಸಿ, ಕೆಎಂಎಫ್ ಮುಂತಾದ ಸಹಕಾರಿ ಸಂಸ್ಥೆಗಳಿದ್ದರೂ ಸಹ ರೈತನಿಗೆ ಬದುಕಲು ಸಾಧ್ಯವಾಗುತ್ತಿಲ್ಲ. ಇದರ ಸರಿಪಡಿಸುವಿಕೆಯ ಬಗ್ಗೆ ಶೀಘ್ರದಲ್ಲಿ ಗಮನ ಹರಿಸಬೇಕು. ಇಸ್ರೇಲ್ ದೇಶದ ಕಿಬ್ಬುಟ್ಜ್ ಮಾದರಿಯ ಮೇಲೆ ಕೃಷಿಯನ್ನು ಸಹಕಾರಿ ಪದ್ಧತಿಯಲ್ಲಿ ನಡೆಸಬಹುದು. ಇದರ ಬಗ್ಗೆ ನಾನು ಲೇಖನವನ್ನು ಹಿಂದೊಮ್ಮೆ ಇದೇ ಜಾಲತಾಣದಲ್ಲಿ ಪ್ರಕಟಿಸಿದ್ದೇನೆ. ಕೃಷಿ ಉತ್ಪಾದನೆಯ ಸಪ್ಲೈ-ಚೈನ್ ನಿರ್ವಹಣೆಯ ಬಗ್ಗೆ ಗಂಭೀರವಾಗಿ ಯೋಚಿಸಿ, ಯೋಜಿಸಿ ರೈತನಿಂದ ಗ್ರಾಹಕನಿಗೆ ಇಬ್ಬರಿಗೂ ದಕ್ಕುವ ಬೆಲೆಗೆ ದೇಶದ ಎಲ್ಲೆಡೆ ಆಹಾರ ಸಾಮಗ್ರಿ ಸಿಗುವಂತೆ ಮಾಡಬೇಕು.


ಇದನ್ನೂ ಓದಿ: ನಮ್ಮ ದೇಶದಲ್ಲಿ ಸಹಕಾರಿ ಕೃಷಿ ಸಾಧ್ಯವೇ? ಇದರಿಂದ ಖಂಡಿತ ಕೃಷಿ ನಷ್ಟ ತಪ್ಪಿಸಬಹುದು


ಅದೇ ರೀತಿಯಲ್ಲಿ ದೇಶದ ಎಲ್ಲೆಡೆ ಜನರಿಗೆ ಬೇಕಾದ ಮೂಲಭೂತ ಸೌಕರ್ಯಗಳು ಅಂದರೆ ಸಾರ್ವಜನಿಕ ಆರೋಗ್ಯ, ಶಿಕ್ಷಣ, ಸಾರಿಗೆ, ನೀರು, ಆಹಾರ ವ್ಯವಸ್ಥೆ ಆಗಬೇಕು.

ಇದರಿಂದ ಮುಕ್ತ ಮಾರುಕಟ್ಟೆ, ಜಾಗತೀಕರಣ ಇಂತಹ ಪದ್ಧತಿಗೆ ಧಕ್ಕೆಯಾಗುತ್ತದೆ ಎಂಬುದು ಹಲವರ ವಾದ ಇರಬಹುದು. ಆದರೆ ಕರೋನಾ ಹೊಡೆತದಿಂದ ವಿಶ್ವದಲ್ಲಿ ಹಲವಾರು ಹಳೆಯ ಪದಗಳ/ವ್ಯವಸ್ಥೆಗಳ ಅರ್ಥ ಸಂಪೂರ್ಣವಾಗಿ ಬದಲಾಗಲಿದೆ. ಎಲ್ಲರೂ ತಮ್ಮ ತಮ್ಮ ಹಿತ ಕಾಪಾಡಿಕೊಳ್ಳುವ ಅನಿವಾರ್ಯತೆ ಇದೆ. ಸ್ವತಃ ಪ್ರಧಾನಿಯವರೇ ರಾಷ್ಟ್ರದ ಪಂಚಾಯಿತಿ ಅಧ್ಯಕ್ಷರಿಗೆ ಪ್ರತಿಯೊಂದು ಗ್ರಾಮವೂ ಮೂಲಭೂತ ವ್ಯವಸ್ಥೆಯಲ್ಲಿ ಆತ್ಮನಿರ್ಭರವಾಗಬೇಕಿದೆ ಎಂದಿದ್ದಾರೆ. ಹಾಗಾಗಿ ನಾವು ಜಾಗತೀಕರಣಕ್ಕೆ ಹೆಚ್ಚು ತಲೆ ಕೆಡಸಿಕೊಳ್ಳದೆ, ಬಂಡವಾಳಶಾಹಿಗಳ ಮಾತು ಕೇಳದೆ ಮತ್ತೆ ಸ್ವೀಡನ್/ಫಿನ್ಲ್ಯಾಂಡ್ ಮಾದರಿಯ ಸಮಾಜವಾದದ ಕಡೆ ಹೋಗಬೇಕಾಗಿದೆ.

ಕೊರೋನಾ ಯುದ್ಧಕ್ಕೆ ನಾವು ಅಧಿಕ ಹಣ ಬಳಸಿ ನಮ್ಮ ಅರ್ಥಿಕ ಖೋತಾ ಹೆಚ್ಚಿಸಿಕೊಂಡಲ್ಲಿ ನಮ್ಮ ಸಾರ್ವಭೌಮ ರೇಟಿಂಗ್ ಕಡಿಮೆಯಾಗುತ್ತದೆ ಎನ್ನುವುದೂ ಸಹ ಸರಕಾರೀ ವಲಯದಲ್ಲಿ ಕೇಳಿ ಬರುತ್ತಿದೆ, ಇದಕ್ಕೂ ನಾವು ಹೆಚ್ಚಿನ ಮಹತ್ವ ನೀಡಬೇಕಿಲ್ಲ. ಆರ್ಥಿಕ ಬಂದಿಗೆ ಚಾಲನೆ ನೀಡುವುದು ಈಗ ಬಹಳ ಅವಶ್ಯಕ, ಖೋತಾ 4% ರಿಂದ 5% ಗೆ ಏರಿದರೂ ಚಿಂತೆ ಇಲ್ಲ. ಈ ಕೊರೋನಾ ಮಹಾಮಾರಿಯನ್ನು ವಿಶ್ವದ ಎಲ್ಲೆಡೆಗೆ ಕಳುಹಿಸಿದಕ್ಕಾಗಿ ಸುಮಾರು 57 ದೊಡ್ಡ ಕಂಪನಿಗಳು ಚೀನಾ ಬಿಟ್ಟು ಬೇರೆ ಬೇರೆ ದೇಶಕ್ಕೆ ಹೋಗಿವೆಯಂತೆ, ಅದರಲ್ಲಿ ಭಾರತಕ್ಕೆ ಬಂದಿರುವುದು ಕೇವಲ ಮೂರು. ಮಿಕ್ಕವು ವಿಯತ್ನಾಮ್, ಇಂಡೋನೇಷಿಯಾಕ್ಕೆ ಹೋಗಿವೆ. ಹಾಗಾಗಿ ನಮ್ಮಲ್ಲಿ ನಿವೇಶನಕ್ಕೆ ಸಾಲಾಗಿ ಯಾವ ದೊಡ್ಡ ಹೂಡಿಕೆದಾರರೂ ನಿಂತಿಲ್ಲ, ನಮಗೆ ಬರುತ್ತಿರುವುದೆಲ್ಲಾ ನಮ್ಮ ದೇಶದಿಂದಲೇ ಓಡಿ ಹೋಗಿ ಮಾರಿಷಿಯಸ್, ಸಿಂಗಾಪೂರ್ ಮಾರ್ಗವಾಗಿ ಬರುತ್ತಿರುವ ಕಪ್ಪು ಹಣ, ಅದಕ್ಕೆ ಫಿಚ್ ಅಥವಾ ನೋಮುರಾ ಸಂಸ್ಥೆಯ ಕ್ರೆಡಿಟ್ ರೇಟಿಂಗ್ ಅಡ್ಡ ಬರುವುದಿಲ್ಲ.

ಸರಕಾರದ ನೀತಿಯಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಕಂಡುಬಂದಲ್ಲಿ ಜನರು ಸರಕಾರದ ಜೊತೆಗೆ ಸಹಕರಿಸಲು ಮುಂದಾಗುತ್ತಾರೆ. ಕೋಮುವಾದ, ಭ್ರಷ್ಟಾಚಾರ ನಿರಂತರವಾಗಿ ನಡೆಯುತ್ತಿದ್ದಲ್ಲಿ ಜನರಿಗೂ ಸರಕಾರದ ಮೇಲೆ ನಂಬಿಕೆ ಉಳಿಯುವುದಿಲ್ಲ. ಇದನ್ನು ಸರಕಾರ ಶೀಘ್ರದಲ್ಲಿ ಗಮನಿಸಬೇಕಾಗಿದೆ.

ಜಿ. ಆರ್. ವಿದ್ಯಾರಣ್ಯ

(ಡಿಸ್ಕ್ಲೇಮರ್: ಲೇಖಕರು ಆರ್ಥಿಕ ತಜ್ಞರಲ್ಲ. ಬಲ್ಲವರೊಂದಿಗೆ ಚರ್ಚಿಸಿ ಲೇಖನ ತಯಾರಿಸಿದ್ದಾರೆ. ನಿಮ್ಮ ಮುಕ್ತ ಅನಿಸಿಕೆಗೆ ಸ್ವಾಗತ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...