ಪ್ರಧಾನಿಯವರು ಎಲ್ರಿಗೂ ಶಾಕ್ ಆಗುವ ಹಾಗೆ ಕೊರೋನಾ ಆರ್ಥಿಕ ಪ್ಯಾಕೇಜ್ ಎಂದು 20 ಲಕ್ಷ ಕೋಟಿ ಅನೌನ್ಸ್ ಮಾಡಿದ್ರು.
ಶಾಕ್ ಯಾಕಂದ್ರೆ ಇಪ್ಪತ್ತಲ್ಲ, ಅದ್ರಲ್ಲಿ ಅರ್ಧ ಅಂದರೆ ಹತ್ತು ಲಕ್ಷ ಕೋಟಿಗಳನ್ನು ಅವರು ಕನಿಷ್ಟ ಒಂದೂವರೆ ತಿಂಗಳ ಮುಂಚೆನೇ ಅನೌನ್ಸ್ ಮಾಡಬೇಕಿತ್ತು.
ಹಾಗೆ ಮಾಡಿದ್ದಿದ್ರೆ, ನಾವು ಈಗ ನೋಡ್ತಿರೋ ವಲಸೆ ಕಾರ್ಮಿಕರ ದಾರುಣ ಸ್ಥಿತಿಯನ್ನು ತಡೆಯಬಹುದಿತ್ತು ಮತ್ತು ಇತರೆ ಕೋಟ್ಯಂತರ ಜನರ ಕಣ್ಣಿಗೆ ಕಾಣದಿರುವ ಬವಣೆಗಳನ್ನೂ ಸಹ. ಜನ ಅಷ್ಟು ಬವಣೆ ಪಡ್ತಿದ್ರೂ ಅದರ ಬಗ್ಗೆ ಸರ್ಕಾರ ಮಾತೇ ಆಡದಿದ್ದಕ್ಕೆ ಜನರಿಗೆ ಸರ್ಕಾರದಿಂದ ಜನರಿಗಾಗಿ ಹಣ ಬಿಡುಗಡೆಯ ಎಲ್ಲಾ ನಂಬಿಕೆಯೂ ಹೋಗಿದ್ದರಿಂದ ಪ್ರಧಾನಿಯ ಈ ಪ್ರಕಟಣೆ ಶಾಕ್ ಅನ್ಸಿದ್ದು ನಿಜ.
ಆದ್ರೂ ಹೋಗ್ಲಿ, ಲೇಟಾಗಾದ್ರೂ ಪ್ರಧಾನಿ ಅನೌನ್ಸ್ ಮಾಡಿದ್ರಲ್ಲ. ಅದ್ರಲ್ಲೂ ಹತ್ತು ಸಾಕಾಗುತ್ತೆ ಅಂತಿದ್ರೂ ಕೂಡ ಅದರ ಡಬಲ್ ಅಮೌಂಟ್ ಅನೌನ್ಸ್ ಮಾಡಿದ್ರಲ್ಲ ಅಂತ ಬಹುತೇಕರಿಗೆ ಸಮಾಧಾನ ಆಗಿದ್ದು ನಿಜ.
ಆದರೆ, ಈ ಪ್ರಕಟಣೆಯ ಮಾರನೆಯ ದಿನವೇ ಮತ್ತೆ ನಿರಾಸೆ ಕಾದಿತ್ತು.
ಮೊದಲನೆಯದಾಗಿ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಈ ಇಪ್ಪತ್ತು ಲಕ್ಷ ಪ್ಯಾಕೇಜನ್ನ ಕಂತುಗಳಲ್ಲಿ ಹೇಳ್ತೀವಿ ಅಂದಿದ್ದು (ಇದು ಸರ್ಕಾರದ ಸಿದ್ಧತೆಯ ಕೊರತೆಯನ್ನ ಮತ್ತೆ ತೋರಿಸ್ತಿದೆ).

ಎರಡನೆಯದಾಗಿ, ಈ ಮೊದಲ ಕಂತಿನಲ್ಲಿ ಜನರಿಗೆ ಮತ್ತು ಹೆಚ್ಚು ಉದ್ಯೋಗ ಕೊಡುವ MSME ಗಳಿಗೆ ಯಾವ ಹಣಕಾಸಿನ ನೆರವೂ ಸಿಗದಿದ್ದುದು.
ಮೂರನೆಯದಾಗಿ, ಈ ಮೊದಲ ಕಂತಿನಲ್ಲಿ ಮತ್ತೆ ರಾಜ್ಯಗಳಿಗೆ ಹಣ ಕೊಡದಿರುವುದು.
ವಿತ್ತ ಮಂತ್ರಿಗಳ ಇಡೀ ಪ್ರಕಟಣೆಯಲ್ಲಿ ಸರ್ಕಾರದಿಂದ ಮಾಡಲಾಗುತ್ತಿರುವ ಅಥವಾ ಭರಿಸಲಾಗುತ್ತಿರುವ ಹಣಕಾಸಿನ ವೆಚ್ಚ ಕೇವಲ 2500 ಕೋಟಿ ರೂಪಾಯಿಗಳು ಎಂದರೆ ನಾವು ನಿಜಕ್ಕೂ ಶಾಕ್ ಆಗಬೇಕಿರುವುದು ಇಲ್ಲಿ.
ಹೌದು, 100 ಸಿಬ್ಬಂದಿಗಳಿಗಿಂತ ಕಡಿಮೆಯಿರುವ ಮತ್ತು ಅದರಲ್ಲಿ ಶೇ.90ರಷ್ಟು ಜನ 15000ಕ್ಕಿಂತ ಕಡಿಮೆ ಸಂಬಳ ಪಡೆಯುವ ಉದ್ದಿಮೆಗಳ ಮತ್ತು ಅಲ್ಲಿಯ ಉದ್ಯೋಗಿಗಳ EPF (employer and employee ಇಬ್ಬರದೂ) ಅನ್ನು ಇನ್ನೂ ಮೂರು ತಿಂಗಳ ಕಾಲ ಸರ್ಕಾರವೇ ಭರಿಸಲಿದೆ.
ಇದರ ವೆಚ್ಚ ಒಟ್ಟು 2500 ಕೋಟಿ ಆಗಲಿದ್ದು ಇಷ್ಟನ್ನು ಮಾತ್ರವೇ ಕೇಂದ್ರ ಸರ್ಕಾರ ಈಗ ನಿಜವಾಗಿ ತನ್ನ 20 ಲಕ್ಷ ಕೋಟಿ ಪ್ಯಾಕೇಜಲ್ಲಿ ಕೊಡುತ್ತಿರುವುದು ಅಂದರೆ ನೀವು ನಂಬಲೇಬೇಕು.
ಯಾಕೆಂದರೆ ಉಳಿದುದೆಲ್ಲವೂ ಉದ್ದಿಮೆಗಳಿಗೆ ಕೊಡುತ್ತಿರುವ ಸಾಲದ ರೂಪದಲ್ಲಿದೆ ಮತ್ತು ಜನರಿಗೆ ಸರ್ಕಾರ ಕೊಡಬೇಕಿದ್ದ ಜನರ ದುಡ್ಡೇ ಆಗಿದೆ. ಈಗ ನೋಡಿ, MSMEಗಳು ಸುಮಾರು ಹತ್ತು ಕೋಟಿಗಿಂತ ಹೆಚ್ಚು ಜನರಿಗೆ ಕೆಲಸ ಕೊಟ್ಟಿವೆ. ಅವುಗಳಲ್ಲಿ ಬಹುತೇಕ ದೊಡ್ಡ ಕಂಪನಿಗಳಿಗೆ ಬಿಡಿಭಾಗಗಳನ್ನು ತಯಾರಿಸಿ ಕೊಡುತ್ತವೆ. ಹಾಗಾಗಿ, ಜನರ ಕೈಯಲ್ಲಿ ದುಡ್ಡಿದ್ದರೆ ಅವರು ವಾಹನ ಇತ್ಯಾದಿ ವಸ್ತುಗಳನ್ನು ಖರೀದಿಸುವುದರಿಂದ ಪರೋಕ್ಷವಾಗಿ MSMEಗಳೂ ಆರೋಗ್ಯದಿಂದಿರುತ್ತವೆ. ಅದರಿಂದಾಗಿಯೇ ಆರ್ಥಿಕ ತಜ್ಞರು ಜನರ ಕೈಯಲ್ಲಿ ಹಣ ಇರುವಂತೆ ನೋಡಿಕೊಳ್ಳಿ ಎನ್ನುತ್ತಿರುವುದು.
ಈಗ ವ್ಯವಹಾರವೇ ಸ್ತಬ್ದವಾಗುತ್ತಿರುವುದರಿಂದ MSMEಗಳು ಭಾರೀ ಸಂಕಷ್ಟದಲ್ಲಿದ್ದು ತಮ್ಮ ಸಿಬ್ಬಂದಿಗಳಿಗೆ ಸಂಬಳ ಕೊಡಲಾರದ ಸ್ಥಿತಿಯಲ್ಲಿವೆ. ಹಾಗಾಗಿ ಅವುಗಳಿಗೆ ಬೇಕಿರುವುದು ತಮ್ಮ ಸಿಬ್ಬಂದಿಗೆ ಕನಿಷ್ಟ ಮೂರು ತಿಂಗಳು ಸಂಬಳ ಕೊಡುವಷ್ಟು ಹಣ ಕೊಟ್ಟರೆ ಚೇತರಿಸಿಕೊಂಡು ಸಿಬ್ಬಂದಿಗಳನ್ನೂ ಉಳಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದವು. ಆದರೆ ವಿತ್ತ ಮಂತ್ರಿ MSMEಗಳಿಗೆ 3 ಲಕ್ಷ ಕೋಟಿಯಷ್ಟು ಅಡಮಾನ ರಹಿತ ಸಾಲ ಕೊಡುವ ಪ್ರಕಟಣೆ ಮಾಡಿದ್ದಾರೆ. ಕನಿಷ್ಟ ಈ ಸಾಲ ಬಡ್ಡಿ ರಹಿತ ಸಾಲವೂ ಅಲ್ಲ.
ಅದೇ ರೀತಿ NBFC ಮತ್ತು MFI (Non banking finance corporations and micro financing institutions)ಗಳಿಗೆ ಒಟ್ಟಾರೆ 80000 ಕೋಟಿಯಷ್ಟು ಹಣವನ್ನು ಅವುಗಳು ಸಣ್ಣ ಉದ್ದಿಮೆಗಳಿಗೆ ಸಾಲ ಕೊಡಲು ಅನುವಾಗುವಂತೆ ವಿವಿಧ ಹೆಡಿಂಗುಗಳ ಅಡಿಯಲ್ಲಿ ಹಣ ಹರಿಸುವ ಪ್ರಕಟಣೆ ಮಾಡಲಾಗಿದೆ. ಒಟ್ಟಾರೆಯಾಗಿ ಇವುಗಳು MSMEಗಳಿಗೆ ಮತ್ತು ಇತರೆ ಸಣ್ಣ ಉದ್ದಿಮೆಗಳಿಗೆ ಸುಲಭವಾಗಿ ಸಾಲದ ರೂಪದಲ್ಲಿ ಹಣ ಹರಿಯುವಂತೆ ಮಾಡುವ ಯೋಜನೆಗಳಾಗಿವೆ.
ಇನ್ನು ಇತರೆಲ್ಲ ಉದ್ದಿಮೆಗಳು ತಮ್ಮ ಸಿಬ್ಬಂದಿಗಳಿಗೆ ಕೊಡಬೇಕಿರುವ 12.5% EPF ಕಡ್ಡಾಯ ಕೊಡುಗೆಯನ್ನು ಮತ್ತು ಸಿಬ್ಬಂದಿಗಳ ಸಂಬಳದಲ್ಲಿ ಕಡಿತವಾಗುವ 12.5%ಅನ್ನು 10%ಗೆ ಇಳಿಸಲಾಗಿದೆ. ಇದರಿಂದಾಗಿ ಒಟ್ಟು 6750 ಕೋಟಿಗಳನ್ನು ಸಿಬ್ಬಂದಿಗಳ ಮತ್ತು ಉದ್ದಿಮೆಗಳ ಕೈಯಲ್ಲಿ ಉಳಿಸಿ ಅವರು ಖರ್ಚು ಮಾಡಲು ಅನುಕೂಲ ಮಾಡಿಕೊಡಲಾಗಿದೆ ಎಂದು ತಿಳಿಸಲಾಗಿದೆ. ವಾಸ್ತವದಲ್ಲಿ ಇದು ನಮ್ಮದೇ ದುಡ್ಡನ್ನು ನಮ್ಮ ಹತ್ತಿರ ಉಳಿಸಿದಂತಾಗಿದೆಯಷ್ಟೆ. ಅದಕ್ಕಿಂತ ಹೆಚ್ಚಾಗಿ ನಾಳೆಗೆಂದು ಉಳಿತಾಯ ಮಾಡುತ್ತಿದ್ದುದನ್ನು ಇಂದೇ ಖರ್ಚು ಮಾಡುವಂತೆ ಮಾಡುವ ಕ್ರಮವಾಗಿದ್ದು ಇದು ವೈಯಕ್ತಿಕ ಆರ್ಥಿಕತೆಗೆ ತೊಂದರೆ ಕೊಡುವಂತದ್ದಾಗಿದೆ.
ಆಮೇಲೆ ಹಲವು ವೃತ್ತಿಪರರ ಸಂಪಾದನೆಯಲ್ಲಿ ಮಾಡಲಾಗುತ್ತಿದ್ದ TDSನಲ್ಲಿ (tax deduction at source) 25% ನಷ್ಟು ಕಡಿಮೆ ಮಾಡಲಾಗಿದೆ. ಇದರಿಂದಾಗಿ ಅವರುಗಳಿಗೆ ಒಟ್ಟಾರೆ 50000 ಕೋಟಿಗಳಷ್ಟು ಕೈಯಲ್ಲಿ ಉಳಿಯುವಂತೆ ಮಾಡಲಾಗಿದೆ ಎಂದೂ ಹೇಳಲಾಗಿದೆ. ಆದರೆ ಈ 25%ನ್ನು ಅವರು ವರ್ಷದ ಕಡೆಯ ತೆರಿಗೆಯಲ್ಲಿ ಕಟ್ಟಲೇಬೇಕಾಗಿದೆ. ಅಂದರೆ, ಇದು ನಮ್ಮ ಹಣವನ್ನು 6 ತಿಂಗಳ ನಂತರ ಅವರಿಗೆ ಕೊಡಬೇಕಿದ್ದದ್ದನ್ನು ಈಗ ನಮ್ಮಲ್ಲೇ ಉಳಿಸಿ ಈಗಲೇ ಖರ್ಚು ಮಾಡಿ ಎಂದಂತೆ ಅಷ್ಟೆ.
ಕಡೆಯದಾಗಿ, ಹಲವು ಸಂಸ್ಥೆಗಳಿಗೆ ಕೊಡಬೇಕಿರುವ ತೆರಿಗೆ ಬಾಕಿಯನ್ನು ನಲವತ್ತೈದು ದಿನಗಳ ಒಳಗೆ ಕೊಡಲಾಗುವುದೆಂದು ಹೇಳಲಾಗಿದೆ. ಇದೂ ಕೂಡ ಅವರಿಗೆ ಬರಬೇಕಾದ ಹಣವನ್ನು ಕೊಟ್ಟಂತೆ ಅಷ್ಟೆ. ಜತೆಗೆ ಕಂಟ್ರಾಕ್ಟರುಗಳಿಗೆ ಎಷ್ಟು ಕೆಲಸ ಆಗಿದೆಯೋ ಅಷ್ಟಕ್ಕೆ ಹಣ ಬಿಡುಗಡೆ ಮಾಡಲು ಬ್ಯಾಂಕ್ ಗ್ಯಾರಂಟಿಗೆ ಸೂಚಿಸಲಾಗಿದೆ.
ಒಟ್ಟಾರೆಯಾಗಿ ಮೊದಲ ಕಂತಿನಲ್ಲಿ ಜನರ ಕೈಗೆ ನಿಜಕ್ಕೂ ಹಣ ಸಿಗುತ್ತಿರುವುದು ಕೇವಲ 2500 ಕೋಟಿ ರೂಪಾಯಿಗಳಷ್ಟು ಮಾತ್ರ. ಉಳಿದುದು ಕೆಲವು ಸುಲಭ ಸಾಲದ ರೂಪದಲ್ಲಿದೆ.
ಇನ್ನು ಕೆಲವು ಜನರ ದುಡ್ಡನ್ನೇ ಜನರಿಗೆ ಸಿಗುವಂತೆ (ಸ್ವಲ್ಪ ಬೇಗ ಸಿಗುವಂತೆ) ಮಾಡಿ ಅದನ್ನೇ ಆರ್ಥಿಕ ಪ್ಯಾಕೇಜ್‌ನ ಭಾಗ ಎಂದು ಹೇಳುತ್ತಿರುವುದು ಆಶ್ಚರ್ಯಕರವಾಗೂ ಮತ್ತು ಅನುತ್ತೇಜಕವಾಗಿಯೂ ಇದೆ. ಜನರ ಕೈಗೆ ಹಣ ಸಿಕ್ಕಿ ಅದರಿಂದ ಅವರೂ ಬದುಕಿ ಆರ್ಥಿಕತೆಯನ್ನೂ ಚೇತರಿಸುವಂತೆ ಮಾಡುವ ಅಂಶ ಈ ಇಪ್ಪತ್ತು ಲಕ್ಷ ಕೋಟಿಯ ಮೊದಲ ಪ್ಯಾಕೇಜಲ್ಲಿ ಬಹುತೇಕ ಮಿಸ್ ಆಗಿದೆ.
ಆದರೂ, ಶೀಘ್ರದಲ್ಲಿಯೇ ಬರಲಿರುವ (ಶೀಘ್ರದಲ್ಲಿಯೇ ಬರಲಿ ಎಂದು ಆಶಿಸುತ್ತಾ) ಎರಡನೇ ಕಂತಿನಲ್ಲಿಯಾದರೂ ಜನರ ಕೈಗೆ ಹಣ ಸಿಗುವಂತ ಪ್ರಕಟಣೆಗಳು ಆಗಲಿ ಎಂದು ಆಗ್ರಹಿಸುತ್ತಾ ಮತ್ತು ಹಾಗೆ ಆಗುವುದೆಂದು ಆಶಿಸುತ್ತಾ ಶೀಘ್ರ ಬರಲಿರುವ ಆ ಎರಡನೆ ಕಂತಿಗಾಗಿ ಕಾಯೋಣ.
ಇದನ್ನೂ ಓದಿ: ಇಂದು ಸಂಜೆ ಮತ್ತೆ ಪತ್ರಿಕಾಗೋಷ್ಟಿ ನಡೆಸಲಿರುವ ನಿರ್ಮಲಾ ಸೀತಾರಾಮನ್!


