ಕೊರೊನಾ ಲಾಕ್‌ಡೌನ್ ನಿಂದಾಗಿ ಪೀಡಿತವಾಗಿದ್ದ ಆರ್ಥಿಕತೆಯನ್ನು ಮೇಲೆತ್ತಲು ಘೋಷಿಸಿದ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಅನ್ನು ಮರುಪರಿಶೀಲಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅದನ್ನು ಕೊರೊನಾ ಹಾಗೂ ಲಾಕ್‌ಡೌನ್ ಕೆಟ್ಟ ಪರಿಣಾಮದಿಂದ ಬಳಲುತ್ತಿರುವ ಜನರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಹಾಕದಿದ್ದರೆ “ಘೋರವಾದ ಸಮಸ್ಯೆ” ಉಂಟಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಜೂಮ್ ವಿಡಿಯೋ ಕರೆಯ ಮೂಲಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಸಾಲಗಳ ಪ್ಯಾಕೇಜ್” ಎಂದು ಅವರು ಹೇಳಿದ್ದ ಘೋಷಣೆಯೂ ರೈತರು ಮತ್ತು ವಲಸಿಗರಿಗೆ ತಕ್ಷಣದ ನೆರವು ನೀಡುವುದಿಲ್ಲ ಎಂದು ಹೇಳಿದ್ದಾರೆ.
“ನಮ್ಮ ಜನರಿಗೆ ಹಣ ಬೇಕು. ಪ್ರಧಾನಿ ಈ ಪ್ಯಾಕೇಜ್ ಅನ್ನು ಮರುಪರಿಶೀಲಿಸಿ, ನೇರ ನಗದು ವರ್ಗಾವಣೆಯ ಬಗ್ಗೆ ಯೋಚಿಸಬೇಕು. ನರೇಗಾ ಅಡಿಯಲ್ಲಿ 200 ಕೆಲಸದ ದಿನಗಳು, ರೈತರಿಗೆ ಹಣ ನೀಡಬೇಕು. ಯಾಕೆಂದರೆ ಅವರು ಭಾರತದ ಭವಿಷ್ಯ” ಎಂದು ರಾಹುಲ್ ಗಾಂಧಿ ಹೇಳಿದರು.
ಕಳೆದ ವರ್ಷ ಸಾರ್ವತ್ರಿಕ ಚುನಾವಣೆಗಳಲ್ಲಿ ಪ್ರಚಾರ ಮಾಡುವಾಗ ತಮ್ಮ ಪಕ್ಷವು ಪ್ರಣಾಳಿಕೆಯಲ್ಲಿ ಸೇರಿಸಿದ್ದ ನ್ಯಾಯ್ ಯೋಜನೆಯನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ ಅದೇ ರೀತಿಯ ಯೋಜನೆಯನ್ನು ತರಲು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನ್ಯಾಯ್ ಯೋಜನೆಯೂ ಸಮಾಜದ ಬಡ ವರ್ಗಗಳಿಗೆ ವಾರ್ಷಿಕ 72,000 ರೂ. ಆದಾಯದ ಬೆಂಬಲವನ್ನು ನೀಡುವುದಾಗಿ ಹೇಳುತ್ತದೆ.
“ಬೀದಿಯಲ್ಲಿ ನಡೆಯುವ ವಲಸೆ ಕಾರ್ಮಿಕನಿಗೆ ಹಣ ಬೇಕು, ಸಾಲವಲ್ಲ. ಬಳಲುತ್ತಿರುವ ರೈತನಿಗೆ ಹಣ ಬೇಕು, ಸಾಲವಲ್ಲ. ಇದನ್ನು ಮಾಡದಿದ್ದರೆ ಘೋರವಾದ ಸಮಸ್ಯೆಯಾಗುತ್ತದೆ” ಎಂದು ರಾಹುಲ್ ಗಾಂಧಿ ಹೇಳಿದರು.
ಈ ತಿಂಗಳ ಆರಂಭದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ರಾಹುಲ್ ಗಾಂಧಿ ಅವರೊಂದಿಗಿನ ಚರ್ಚೆಯಲ್ಲಿ ಈ ವಿಷಯವನ್ನು ತಿಳಿಸಿದ್ದರು. “ಜನಸಂಖ್ಯೆಯ ಶೇಕಡಾ 60 ರಷ್ಟು ಜನರಿಗೆ ನಾವು ಸ್ವಲ್ಪ ಹಣವನ್ನು ನೀಡಿದರೆ, ಕೆಟ್ಟದ್ದೇನೂ ಆಗುವುದಿಲ್ಲ, ಇದೇ ರೀತಿಯ ಅಭ್ಯಾಸವನ್ನು ಅಮೆರಿಕಾ ಕೂಡಾ ಅನುಸರಿಸುತ್ತಿದೆ” ಎಂದು ಹೇಳಿದ್ದರು.
ಭಾರತದಲ್ಲಿ ಇದುವರೆಗೂ ಸುಮಾರು 86,000 ಕೊರೊನಾ ಪ್ರಕರಣಗಳನ್ನು ವರದಿಯಾಗಿವೆ. ಅದಲ್ಲದೆ ಸೋಂಕಿನಿಂದ 2,700 ಕ್ಕೂ ಹೆಚ್ಚು ಸಾವುಗಳು ಸಂಭವಿಸಿದೆ. ಇಷ್ಟೇ ಅಲ್ಲದೆ ಕೊರೊನಾ ಹರಡುವಿಕೆಯನ್ನು ತಡೆಯಲು ದೇಶಾದ್ಯಂತ ಘೋಷಿಸಿದ್ದ ಲಾಕ್‌ಡೌನ್ ನಿಂದಾಗಿ ಲಕ್ಷಾಂತರ ಜನರ ದುಡಿಮೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ, ಅದರಲ್ಲೂ ವಲಸೆ ಕಾರ್ಮಿಕರು ಮತ್ತು ದಿನಗೂಲಿ ಕಾರ್ಮಿಕರು ಹೆಚ್ಚು ಹಾನಿಗೊಳಗಾಗಿದ್ದಾರೆ.
ಓದಿ: ಗಾಯಗೊಂಡ ಬಾಲಕನನ್ನು ಸ್ಟ್ರೆಚರ್‌ನಲ್ಲಿ ಹೊತ್ತುಕೊಂಡು 1300 ಕಿ.ಮಿ. ಹೊರಟ ವಲಸೆ ಕಾರ್ಮಿಕರು
ಸದ್ದು…ಈ ಸುದ್ದಿಯೇನಾಗಿದೆ ? ವಿಶೇಷ ಕಾರ್ಯಕ್ರಮದ ಸರಣಿ ಸಂಚಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ


