Homeಚಳವಳಿ`ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿಸುವುದು ಪಕ್ಷ, ಪಂಥಗಳ ಪರ-ವಿರೋಧವಲ್ಲ; ಮಾನವೀಯತೆಯ ವಿಚಾರ’

`ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿಸುವುದು ಪಕ್ಷ, ಪಂಥಗಳ ಪರ-ವಿರೋಧವಲ್ಲ; ಮಾನವೀಯತೆಯ ವಿಚಾರ’

- Advertisement -
- Advertisement -

ನಟಿಯೊಬ್ಬರನ್ನು ಒಬ್ಬ ಸ್ವತಂತ್ರ ವ್ಯಕ್ತಿತ್ವವುಳ್ಳ ವ್ಯಕ್ತಿಯನ್ನಾಗಿಯೇ ಒಪ್ಪಿಕೊಳ್ಳದ ಸಮಾಜ ನಮ್ಮದು. ಅಂಥದ್ದರಲ್ಲಿ ಆಕೆ ತನ್ನ ಅನಿಸಿಕೆಗಳನ್ನು ಸ್ಪಷ್ಟವಾಗಿ ಅಭಿವ್ಯಕ್ತಿಸಬಲ್ಲ ಬೌದ್ಧಿಕತೆಯನ್ನೂ ಹೊಂದಿದ್ದರೆ? ಶೃತಿ ಹರಿಹರನ್ ಅಂತಹ ಒಬ್ಬ ಅಪರೂಪದ ನಟಿ. ತಾನೊಂದು ಆಂದೋಲನದ ಭಾಗವಾಗಿದ್ದೇನೆ ಮತ್ತು ಎಲ್ಲಾ ಮಹಿಳೆಯರಿಗೆ personal space is also a fighting space ಅಂತಲೂ, ಈ ಫೈಟ್‍ಅನ್ನು ತಾನು ಮಾಡುವುದು ಆ larger fightನ ಭಾಗವೆಂತಲೂ ಸ್ಪಷ್ಟ ಅರಿವಿರುವ ಕಲಾವಿದೆ ಆಕೆ. ಶೃತಿ ಹರಿಹರನ್‍ರನ್ನು ಪತ್ರಿಕೆಯ ಅಚ್ಚಿಗೆ ಹೋಗುವ ಕಡೆಯ ಘಳಿಗೆಯಲ್ಲಿ ಫೋನಿನಲ್ಲಿ ಮಾತಾಡಿಸಿದಾಗ, ಅತ್ಯಂತ ಗಟ್ಟಿದನಿಯಲ್ಲಿ ಮಾತಾಡಿದ್ದನ್ನು ಇಲ್ಲಿ ಪ್ರಕಟಿಸಿದ್ದೇವೆ. ಸಂದರ್ಶನದ ಹೆಚ್ಚು ಕಡಿಮೆ ಅರ್ಧದಷ್ಟು ಭಾಗ ಇಂಗ್ಲಿಷಿನಲ್ಲಿದ್ದು, ಅದರ ಭಾಗಗಳನ್ನು ಮೂವರು ಭಾಷಾಂತರ ಮತ್ತು ಬರಹಕ್ಕಿಳಿಸುವುದನ್ನು ಮಾಡಿರುವುದರಿಂದ, ಸ್ವಲ್ಪ ಅಡ್ಡಾದಿಡ್ಡಿಯೂ ಇರಬಹುದು. ಆದರೆ, ತನ್ನ ನಿಲುವಿನ ಬಗೆಗಿನ ಆಕೆಯ ಸ್ಪಷ್ಟತೆಯನ್ನು ಸಂದರ್ಶನದುದ್ದಕ್ಕೂ ನೀವು ನೋಡಬಹುದು.

ಪತ್ರಿಕೆ: ಈ ಸಮಸ್ಯೆಯನ್ನು ನೀವು ಬಹಿರಂಗಪಡಿಸಬೇಕೆಂದು ನಿರ್ದಿಷ್ಟವಾಗಿ ಯಾವಾಗ ಅನ್ನಿಸಿತು ಮತ್ತು ಏಕೆ?
ಶೃತಿ: ಹಾಲಿವುಡ್‍ನಲ್ಲಿ ಮೀಟೂ ಆಂದೋಲನ ಆದಾಗ, ಭಾರತದಲ್ಲೂ ಸ್ವಲ್ಪ ಸುದ್ದಿ ಬಂತು. ಆ ಸಮಯದಲ್ಲಿ ಮೀಟೂ ಆಗಿ ‘ನೇಮ್ ಅಂಡ್ ಶೇಮ್’ ಅಂತಾನೂ ಬಂತು. ಆದರೆ ಆ ಸಂದರ್ಭದಲ್ಲಿ ನಾವು ಯಾರೂ ಚಿತ್ರೋದ್ಯಮದ ದೊಡ್ಡ ಹೆಸರುಗಳನ್ನು ನೇಮ್‍ಅಪ್ ಮಾಡುವ ಪರಿಸ್ಥಿತಿ ಇಲ್ಲಿನ್ನೂ ಬಂದಿರಲಿಲ್ಲ. ಆದರೆ ತನುಶ್ರೀ ದತ್ತಾ ಪ್ರಕರಣ ಯಾವಾಗ ಹೊರಬಂದಿತೋ ಆಗ ಮೀಟೂ ಹ್ಯಾಷ್‍ಟ್ಯಾಗ್‍ನೊಂದಿಗೆ ಈ ಆಂದೋಲನವನ್ನು ಮತ್ತೆ ಮೇಲೆ ತಂದಿತು. ಆಗ ನನಗೆ ಇದೊಂದು ಕ್ರಾಂತಿಕಾರಿಯಾದದ್ದು, ಹೀಗೆ ತಮಗಾದ ಅನ್ಯಾಯದ ವಿರುದ್ಧ ದನಿ ಎತ್ತಲು ಬಹಳ ಧೈರ್ಯ ಮತ್ತು ಶಕ್ತಿ ಬೇಕಾಗುತ್ತೆ ಅಂತ ನನಗೆ ಅನ್ನಿಸಿತು. ನನಗೆ ಆಗ ಧೈರ್ಯ ಬಂತು ಮತ್ತು ಇದೇ ರೀತಿ ಮಾಡಬಹುದು ಅನ್ನಿಸಿತು. ಈ ಮೀಟೂ ಬಗ್ಗೆ ಆಶ್ಚರ್ಯದ ಜೊತೆಗೆ ಮೆಚ್ಚುಗೆಯಾಯಿತು.
ಅದರ ನಂತರ ಚಿನ್ಮಯ್ ಕೂಡ ಆಚೆ ಬಂದಾಗ – ನಾನು ವೈರಮುತ್ತುರವರ ಕವನಗಳಾಗಿರ್ಲಿ, ಸಾಹಿತ್ಯ ಆಗಿರ್ಲಿ ತುಂಬಾನೇ ಕೇಳಿದ್ದೀನಿ. ಅವರು ತಮಿಳುನಾಡಿನಲ್ಲಿ ಬಹಳ ಗೌರವಾನ್ವಿತ ಮತ್ತು ರಾಜಕೀಯ ಸಂಪರ್ಕ ಹೊಂದಿರುವ ಪ್ರಭಾವಿ ವ್ಯಕ್ತಿಯಾಗಿದ್ದರು ಎಂದು ನನಗೆ ಗೊತ್ತಿತ್ತು. ಅವರ ಬಗ್ಗೆಯೇ ಚಿನ್ಮಯಿ ಅವರು ಬರೆದಾಗ ನನಗೆ ನಿಧಾನವಾಗಿ ಅರ್ಥವಾಗುತ್ತಾ ಬಂತು. ಇದು ಒಂದು ಹೆಣ್ಣಿನ ಧೈರ್ಯದ ಪ್ರಶ್ನೆ ಅಷ್ಟೇ ಅಲ್ಲ. ಇದು ಒಂದು ಹೆಣ್ಣು ಧೈರ್ಯದ ಆಚೆಗೆ ಸಮಾಜವನ್ನು ವಿಶಾಲ ದೃಷ್ಟಿಯಿಂದ ನೋಡುವ ಪ್ರಕ್ರಿಯೆ, ಇದು ಸಮಾಜದಲ್ಲಿ ಆಗುತ್ತಿರುವ ಮಹಿಳಾ ಶೋಷಣೆಗಳನ್ನು ನೋಡಿ ಸಾಕಾಗಿ ಇನ್ನು ಸುಮ್ಮನಿರಲಾಗದು ಎಂದು ಸ್ಫೋಟಗೊಳ್ಳೋದು ಮತ್ತು ಇದು ಸಮಾಜವನ್ನು ನಿಜಕ್ಕೂ ಮನಸ್ಸಿನಾಳದಿಂದ ಬದಲಾಯಿಸುವ ಒಳನೋಟದೊಂದಿಗೆ ನೋಡುವುದು ಎಂದು ನನಗೆ ತಿಳಿಯಿತು.
ಈ ಸಂದರ್ಭದಲ್ಲಿ ನನ್ನೊಳಗೇ ಒಂದು ವೈರುಧ್ಯ ಶುರುವಾಯ್ತು. ನಾನು ಎಲ್ಲರ ಮಾತುಗಳನ್ನ ಭಾವನೆಗಳನ್ನ ಶೇರ್ ಮಾಡ್ತಿದ್ದೆ. ಆ ಹೆಣ್ಣುಮಕ್ಕಳನ್ನು ಅಭಿನಂದಿಸ್ತಿದ್ದೆ, ನಾನು ಅವರ ಜೊತೆ ನಿಲ್ಲುತ್ತೇನೆ ಎಂದೂ ಹೇಳುತ್ತಿದ್ದೆ. ಆದರೆ ನಾನ್ ಯಾಕೆ ಮಾತಾಡ್ತಿಲ್ಲ, ಯಾವುದಕ್ಕೆ ನಾನು ಹೆದರುತ್ತಿದ್ದೀನಿ ಎಂದು ಪ್ರಶ್ನೆ ಮಾಡಿಕೊಳ್ಳಲು ಶುರು ಮಾಡಿದೆ. ಆಗ ನನಗೆ ಮುಂದಾಗಬಹುದಾದ ಪರಿಣಾಮಗಳ ಭಯ ಹುಟ್ಟಿತು.
ಮೊದಲನೆಯದಾಗಿ ನನ್ ಜೊತೆ ನಡೆದ ಘಟನೆಗಳು ಲೈಂಗಿಕ ದೌರ್ಜನ್ಯದ ಅಡಿಯಲ್ಲಿ ಬರುತ್ತೋ ಇಲ್ವೋ ಎಂದು ಯೋಚಿಸಲಾರಂಭಿಸ್ದೆ. ಬಹಳಷ್ಟು ವಿದ್ಯಾವಂತರಿಗೇ ಲೈಂಗಿಕ ದೌರ್ಜನ್ಯ ಎಂದರೇನು ಎನ್ನುವುದೇ ಸರಿಯಾಗಿ ತಿಳಿದಿರುವುದಿಲ್ಲ. ಆಗ ನಾನು ಅದರ ಬಗ್ಗೆ ಓದಿ ತಿಳಿದುಕೊಳ್ಳಲು ಪ್ರಯತ್ನಿಸಿದೆ. ಆಗ ನನಗೆ ತಿಳಿದಿದ್ದು ಹಲವಾರು ರೀತಿಯ ಲೈಂಗಿಕ ದೌರ್ಜನ್ಯಗಳಿದ್ದಾವೆ. ಅವುಗಳು ಮೌಖಿಕ, ಅಮೌಖಿಕ ಮತ್ತು ದೈಹಿಕವಾಗಿರುತ್ತದೆ ಎಂದು. ಆ ಸಂದರ್ಭದಲ್ಲಿ ನಾನು ವಕೀಲರನ್ನು ಭೇಟಿ ಮಾಡಿ ಅಭಿಪ್ರಾಯ ಪಡೆದುಕೊಂಡೆ. ಆಗ ತಿಳಿದಿದ್ದು ಹೌದು ನನ್ನೊಟ್ಟಿಗಾದದ್ದು ಲೈಂಗಿಕ ದೌರ್ಜನ್ಯವೇ ಅಂತ. ಲೈಂಗಿಕ ದೌರ್ಜನ್ಯದಲ್ಲಿ ಬೇರೆ ಬೇರೆ ಪ್ರಮಾಣದಲ್ಲಿ ವ್ಯತ್ಯಾಸವಿ ರಬಹುದು. ಆದರೆ ಅದು ಲೈಂಗಿಕ ದೌರ್ಜನ್ಯವೇ ಎಂದು ಮನವರಿಕೆ ಆಯಿತು. ಆದ್ರೂ ಸಾರ್ ನನಗೆ ಮುಂದಿನ ಪರಿಣಾಮಗಳ ಬಗ್ಗೆ ಬಹಳವೇ ಭಯವಿತ್ತು. ಮೇನ್ ಸ್ಟ್ರೀಮ್ ಮಿಡಿಯಾಗಳು ಇದನ್ನು ಅಷ್ಟು ಸುಲಭಕ್ಕೆ ಬಿಡುವುದಿಲ್ಲ ಅಂತ ನನಗೆ ತಿಳಿದಿತ್ತು.
ಎರಡನೆಯದಾಗಿ ನಾನು ಯಾವ ಹೆಸರನ್ನು ಹೇಳಬೇಕಾಗುತ್ತೋ ಅದರ ಬಗ್ಗೆಯೂ ಭಯವಿತ್ತು. ಏಕೆಂದರೆ ನನಗೆ ಗೊತ್ತಿತ್ತು, ಅವರು ದಕ್ಷಿಣ ಭಾರತದ ಪ್ರಖ್ಯಾತ ನಟರಲ್ಲೊಬ್ಬರು ಅಂತ. ಇದು ನನಗೆ ಅಪಾಯವನ್ನು ತರಲಿದೆಯೆಂದೂ ತಿಳಿದಿತ್ತು.
ಮೂರನೆಯದಾಗಿ ನನಗೆ ನನ್ನ ಕುಟುಂಬದ ಬಗ್ಗೆ ಯೋಚನೆಯಿತ್ತು. ಅವರು ಏನು ಹೇಳುತ್ತಾರೆ? ಅವರ ಮೇಲೆ ಇದು ಯಾವ ರೀತಿಯ ಪ್ರಭಾವ ಬೀರುತ್ತೇ ಅನ್ನೋದು ನನಗೆ ತುಂಬಾನೇ ಹೆದರಿಕೆಯಾಯಿತು.
ನನಗೆ ಪರಿಣಾಮಗಳ ಬಗ್ಗೆ ಗೊತ್ತಿತ್ತು, ಇದು ಬಹಳ ಸುಲಭದ ಕೆಲಸ ಅಲ್ಲ ಎಂಬುದು ಕೂಡಾ ಅರಿವಿತ್ತು……. ಈ ವಿಚಾರದ ಬಗ್ಗೆ ಮಾತನಾಡುತ್ತಾ ಒಬ್ಬರು ನನಗೆ ಹೇಳಿದ್ರು. ಜಗತ್‍ನಲ್ಲಿ ಬದಲಾವಣೆಗಳನ್ನು ಸಾಧಿಸಿದ ಮಹನೀಯರ್ಯಾರೂ ಸುಲಭದ ಮಾರ್ಗಗಳಲ್ಲಿ ಅದನ್ನು ಮಾಡಿಲ್ಲ, ಅದು ಯಾವಾಗಲೂ ಕಷ್ಟದ ಹಾದಿಯೇ ಆಗಿತ್ತು ಅಂತ! ಈಗಲೂ ನನಗೆ ಭಯವಾದಾಗ ನಾನು ಅದನ್ನೇ ಹೇಳಿಕೊಳ್ಳುತ್ತೇನೆ; ಇದನ್ನು ನಾನು ನನ್ನೊಬ್ಬಳಿಗಾಗಿ ಮಾಡುತ್ತಿರುವುದಲ್ಲ, ಪರಿಸ್ಥಿತಿ ಹೇಗಿದೆ ಎಂಬುದು ಅರಿವಾದ ನಂತರ ನಿಧಾನವಾಗಿ ನಾನು ತಿಳಿದುಕೊಂಡೆ, ಇದನ್ನೆಲ್ಲ ಎದುರಿಸುವುದೆಂದರೆ ನನ್ನನ್ನು ನಾನು ಅನ್ ಕಂಫರ್ಟಬಲ್ ಸಿಚ್ಯುಯೇಷನ್‍ಗೆ ಒಡ್ಡಿಕೊಳ್ಳುವುದು ಎಂದೇ ಅರ್ಥ ಎಂದು. ಆದ್ದರಿಂದ ಇದು ಬಹಳ ಆತುರದ, ತಕ್ಷಣದ ನಿರ್ಧಾರ ಆಗಿರಲಿಲ್ಲ; ನಾನು ಸಾಕಷ್ಟು ಆಲೋಚಿಸಿಯೇ ಈ ನಿರ್ಧಾರ ತೆಗೆದುಕೊಂಡೆ. ನಾನು ಏನು ಬರೆಯಬೇಕು, ಹೇಗೆ ಬರೆಯಬೇಕು ಎಲ್ಲವನ್ನೂ ಆಲೋಚಿಸಿಯೇ ನಿರ್ಧರಿಸಿ ನನ್ನ ಹೇಳಿಕೆಯನ್ನು ಸಾಕಷ್ಟು ಸಮಯ ತೆಗೆದುಕೊಂಡು ಬರೆದೆ. ಅದು ನಿಮ್ಮ ಮುಂದಿದೆ.

ಪತ್ರಿಕೆ: ಈ ಧೈರ್ಯವನ್ನ ಬಹಳ ಮಂದಿ ತೋರಿಸಲು ಆಗಿಲ್ಲ. ಇಂತಹ ನಿರ್ಧಾರವನ್ನು ನೀವು ಹೇಗೆ ತೆಗೆದುಕೊಳ್ಳಲು ಸಾಧ್ಯವಾಯಿತು ಅನಿಸುತ್ತದೆ? ಯಾಕೆಂದರೆ ಹೆಚ್ಚಿನವರು ಅದನ್ನು ವಿರೋಧಿಸಿ ಹೊರಬರಲು ಆಗಿಲ್ಲ. ನಿಮಗೆ ಹೇಗೆ ಆ ಹೆಜ್ಜೆ ಇಡುವುದು ಸಾಧ್ಯವಾಗಿರಬಹುದು ಅನಿಸುತ್ತದೆ, ನೀವು ಬೆಳೆದ ವಾತಾವರಣವೇ, ಕುಟುಂಬವೇ….ಏನು?
ಶೃತಿ: ನನಗೆ ಅನ್ನಿಸುತ್ತೆ, ನಾನು ಬಹಳ ಗಟ್ಟಿಯಾದ ಚಿಂತನೆಗಳ ಜೊತೆ ಬೆಳೆಸಲ್ಪಟ್ಟಿದೀನಿ ಅಂತ. ನಮ್ಮಮ್ಮ ಯಾವಾಗಲೂ ಹೇಳುತ್ತಿದ್ದ ಮಾತೇನೆಂದರೆ, ಯಾವುದಕ್ಕೂ ಕುಗ್ಗಬೇಡ; ಯಾವಾಗಲೂ ನೀನು ನಿನ್ನದೇ ರೀತಿಯಲ್ಲಿ ಆಲೋಚಿಸುವುದನ್ನು ನಿರ್ಧಾರ ತೆಗೆದುಕೊಳ್ಳುವುದನ್ನು ಕಲಿ ಅನ್ನೋದು. ಆಕೆ ಬಹಳ ಗಟ್ಟಿತನ ಮತ್ತು ಸ್ವತಂತ್ರ ಆಲೋಚನೆಗಳಿರುವ ಮಹಿಳೆ. ದುಡಿಯುವ ಮಹಿಳೆಯೂ ಆಗಿ ಯಾವಾಗಲೂ ತನ್ನ ವೃತ್ತಿ ಬದುಕಿನಲ್ಲಿ ಮೇಲ್ಮಟ್ಟಕ್ಕೆ ಹೋಗಲು ಸಂಘರ್ಷ ನಡೆಸುತ್ತಾ ಬಂದವರು. ನಮ್ಮನ್ನು ಬಹಳ ಸ್ವತಂತ್ರವಾಗಿ ಆಲೋಚಿಸಲು ಪ್ರೇರೇಪಿಸಿದರು. ಹಾಗೆಯೇ ನಾನು ಓದಿದ ಶಿಕ್ಷಣ ಸಂಸ್ಥೆಗಳೂ ಕೂಡಾ ಇಂದು ನಾನು ಏನಾಗಿದ್ದೇನೋ ಅದನ್ನು ರೂಪಿಸಿದವು. ಕ್ರೈಸ್ಟ್ ಕಾಲೇಜ್ ಯಾವುದೇ ವಿಚಾರವನ್ನು ಬಹಳ ವಿಸ್ತಾರವಾದ ನೆಲೆಯಲ್ಲಿ ಅರ್ಥಮಾಡಿಕೊಳ್ಳುವುದನ್ನು ಕಲಿಸಿತು. ಮತ್ತೆ ಕ್ರೈಸ್ಟ್ ಕಾಲೇಜಿನಲ್ಲಿ ಓದಿದ್ದರೆ, ನಿಮಗೆ ಗೊತ್ತಲ್ಲ…… ಬಂಡಾಯವೇಳುವುದು ಕಾಲೇಜಿನ ಒಳಗಿದ್ದಾಗಿನಿಂದಲೇ ಅಭ್ಯಾಸವಾಗಿರುತ್ತದೆ.
ನಾನು ಚಿತ್ರರಂಗಕ್ಕೆ ಬಂದಾಗ ತುಂಬ ಕನಸುಗಳನ್ನು ಹೊತ್ತುಕೊಂಡು ಬಂದೆ. ನಟನೆಯೇ ನನ್ನ ಭವಿಷ್ಯತ್ತಾಗಿತ್ತು ಎಂದು ಹೇಳಲಾರೆ, ಆದರೆ ನಾನು ಬಹಳ ಅದೃಷ್ಟವಂತಳೆಂದೇ ಹೇಳಬೇಕು. ನನಗೆ ವೃತ್ತಿ ಬದುಕಿನ ಆರಂಭದಲ್ಲೇ ‘ಲೂಸಿಯಾ’ದಂತಹ ದೊಡ್ಡ ಬ್ರೇಕ್ ಸಿಕ್ಕಿದ್ದು ನನ್ನ ಹಾದಿಯನ್ನು ಸುಗಮಗೊಳಿಸಿತು. ಆದರೆ, ಹಲವು ಘಟನೆಗಳು ನಿಜಕ್ಕೂ ನಿರಾಶೆ ಮೂಡಿಸುತ್ತಿದ್ದವು. ವಿಶೇಷವಾಗಿ ಕಾಸ್ಟಿಂಗ್ ಕೌಚ್! ನನಗೆ ಅರ್ಥವೇ ಆಗದ ಸಂಗತಿಯೆಂದರೆ ಕೆಲಸ ಗಳಿಸುವುದಕ್ಕಾಗಿ ನಾನು ನನ್ನ ಇಂಟೆಗ್ರಿಟಿಯನ್ನು ಏಕೆ ಕಳೆದುಕೊಳ್ಳಬೇಕು? ನನಗಂತೂ ಈ ತರ್ಕವೇ ಅರ್ಥವಾಗಲಿಲ್ಲ. ಆದರೆ ಅದು ಇರುವುದೇ ಹಾಗೆ ಅಂತ ಜನರು ನನಗೆ ಹೇಳುತ್ತಿದ್ದರು. ಆಗ ಇನ್ನಷ್ಟು ಬೇಸರ…ಹೇಗೆ ಇಂಡಸ್ಟ್ರಿಯಲ್ಲಿರುವ ಹೆಣ್ಣುಮಕ್ಕಳನ್ನು ಭೋಗದ ವಸ್ತುವಿನಂತೆ ನೋಡಲು ಸಾಧ್ಯ? ಅವರನ್ನು ತೆರೆಯ ಮೇಲೆ ಹಾಗೆ ಬಿಂಬಿಸುವುದಷ್ಟೇ ಅಲ್ಲ, ನಿಜಕ್ಕೂ ವಾಸ್ತವದಲ್ಲಿ ಅವರನ್ನು ಬಾಗಿಲ ಬಳಿಯ ಕಾಲೊರಸಿನಂತೆ ಹೇಗೆ ಬಳಸಲು ಸಾಧ್ಯ? ಇದು ನನಗೆ ಆಘಾತ ಉಂಟುಮಾಡಿತು. ನಿಧಾನವಾಗಿ ನಾನು ನನ್ನ ಅನುಭವದ ಮೂಲಕ ಕೆಲವು ತಂಡಗಳಿಂದ ದೂರ ಇರುವುದನ್ನು ಕಲಿತೆ, ತೀಕ್ಷ್ಣವಾದ ಪ್ರತಿಕ್ರಿಯೆ ಕೊಡುವುದು ಕಲಿತೆ ಹಾಗೂ ಒಳ್ಳೆಯ ತಂಡಗಳ ಜೊತೆ ಮಾತ್ರ ಕೆಲಸ ಮಾಡಲು ಒಪ್ಪಿಕೊಳ್ಳಲಾರಂಭಿಸಿದೆ. ಅಂತಹ ಕಮರ್ಷಿಯಲ್ ಸಿನೆಮಾ ಮಾಡಿದ್ದಕ್ಕಾಗಿ ನನಗೆ ಈಗಲೂ ಪಶ್ಚಾತ್ತಾಪವೆನಿಸುತ್ತದೆ. ಆದರೆ, ಆ ಎಲ್ಲ ಅನುಭವಗಳೂ ಸೇರಿ ಇಂದು ನಾನು ಏನಾಗಿದ್ದೇನೆಯೋ ಅದಾಗಲು ಸಾಧ್ಯವಾಯಿತು ಅಂದುಕೊಳ್ಳುತ್ತೇನೆ.
ಈ ಘಟನೆಯ ವಿಚಾರಕ್ಕೆ ಬರುವುದಾದರೆ, ಇದೆಲ್ಲ ಅರಿವಿನ ಹೊರತಾಗಿಯೂ ಆ ಘಟನೆ ನಡೆದ ಸಂದರ್ಭದಲ್ಲಿ ನಾನು ಏನೂ ಮಾಡಲಿಲ್ಲ; ನಾನು ಅದ್ಯಾಕೋ ಗೊತ್ತಿಲ್ಲ ಸುಮ್ಮನಿದ್ದುಬಿಟ್ಟೆ. ನಾನು ಇನ್ನಷ್ಟು ಗಟ್ಟಿಯಾಗಿರಬೇಕಿತ್ತು ಅಂತ ಈಗ ಅನಿಸುತ್ತದೆ, ನಾನು ಆಗಲೇ ಸರಿಯಾಗಿ ತಿರುಗಿ ಬೀಳಬೇಕಿತ್ತು….. ನನ್ನೊಳಗೆ ಪಾಪಪ್ರಜ್ಞೆ ಕಾಡುತ್ತದೆ-ಕೊನೆಗೆ ನಾನೂ ಬಲಾಢ್ಯರಿಗೆ ಶರಣಾದೆನಾ? ಎಲ್ಲೋ ನಾನೂ ಕೂಡಾ ನನ್ನ ಅಂತರಾತ್ಮಕ್ಕೆ ಸತ್ಯದಿಂದ ನಡೆದುಕೊಂಡಿಲ್ಲವಲ್ಲ….ಈ ಭಾವ ನನ್ನನ್ನು ಒಳಗಿನಿಂದ ಕಾಡುತ್ತಿತ್ತು….ಆ ಪಾಪಪ್ರಜ್ಞೆ ಹೊತ್ತುಕೊಂಡು ಬದುಕುವುದು ನನಗೆ ಸಾಧ್ಯವಿರಲಿಲ್ಲ. ಈಗ, ಆ ಘಟನೆಯನ್ನು ಹೊರಗೆಡಹಿದ ನಂತರ ಒಂದು ಬಗೆಯ ನಿರುಮ್ಮಳತೆಯಿದೆ. ನನ್ನ ಆತ್ಮಸಾಕ್ಷಿಯನ್ನು ಸ್ವಚ್ಛಗೊಳಿಸಿಕೊಂಡಂತೆನಿಸಿದೆ. ನಾನು ಇನ್ನು ಮುಂದೆ ಗಿಲ್ಟ್ ಫೀಲ್ ಮಾಡಬೇಕಿಲ್ಲ. ನನಗನಿಸುತ್ತಿದೆ, ನಾನು ಸತ್ಯದೊಂದಿಗೆ ಹೊರಬಂದಿರುವುದು ಇನ್ನೂ ಎಷ್ಟೋ ಹೆಣ್ಣುಮಕ್ಕಳಲ್ಲಿ ಧೈರ್ಯ ತುಂಬಬಹುದು; ಈಗಲೇ ಅಲ್ಲದಿದ್ದರೂ ಮುಂದೆಂದಾದರೊಂದು ದಿನ ಅವರುಗಳೂ ನಿಜ ಹೇಳಲು ಧೈರ್ಯ ಮಾಡುತ್ತಾರೆಂದು ನನಗೆ ಗೊತ್ತು!
ಇದನ್ನು ವಿಶಾಲವಾದ ಅರ್ಥದಲ್ಲಿ ನೋಡುವುದಾದರೆ, ಇದೆಲ್ಲದರ ಪರಿಣಾಮವಾಗಿ ಯಾವುದೇ ಹೆಣ್ಣುಮಗು 100 ಜನ ಗಂಡಸರು ತುಂಬಿರುವ ಒಂದು ಸೆಟ್‍ನಲ್ಲಿ ಸಲೀಸಾಗಿ ಇದ್ದು, ಅಲ್ಲಿ ಸಂಪೂರ್ಣವಾಗಿ ಸುರಕ್ಷತೆಯ ಭಾವವನ್ನು ಅನುಭವಿಸಬಹುದಾದರೆ ಈ ಪ್ರಯತ್ನ ಸಾರ್ಥಕವಾದಂತೆ. ಇದರಿಂದ ಎಷ್ಟೇ ದ್ವೇಷವನ್ನು ಕಟ್ಟಿಕೊಳ್ಳಬೇಕಾಗಿ ಬಂದಿದ್ದರೂ ಪರವಾಗಿಲ್ಲ, ಏನೇ ಬ್ಯಾಕ್‍ಲಾಶ್ ಬಂದರೂ ಪರವಾಗಿಲ್ಲ, ಅಂತಹ ಬದಲಾವಣೆ ಸಾಧ್ಯವಾದರೆ, ಅದು ನಮ್ಮ ಹೋರಾಟದ ಯಶಸ್ಸು.

ಪತ್ರಿಕೆ: ನೀವು ತೆರೆಯ ಮೇಲಿನ ಮಹಿಳಾ ಸರಕೀಕರಣದ ಬಗ್ಗೆ ಹೇಳಿದಿರಿ, ಅದು ಸಿನೆಮಾದಲ್ಲಿ ಮಾತ್ರವಲ್ಲ, ಟಿವಿ, ಜಾಹೀರಾತುಗಳು ಹೀಗೆ ಎಲ್ಲ ಕಡೆ ಮಹಿಳೆಯರನ್ನು ಭೋಗದ ವಸ್ತುಗಳೆಂದು ಬಿಂಬಿಸುವುದು ಇದೆ. ಆ ರೀತಿಯ ತೆರೆಯ ಮೇಲಿನ ಬಿಂಬಿಸುವಿಕೆಗೂ, ತೆರೆಯ ಹಿಂದಿನ ಈ ಬಗೆಯ ಕಿರುಕುಳಕ್ಕೂ ಸಂಬಂಧ ಇದೆ ಅಲ್ಲವೇ?
ಶೃತಿ: ಹೌದು ಖಂಡಿತ ಇದೆ. ನನ್ನ ಪ್ರಕಾರ ಸಿನಿಮಾ ಎಂಬುದು ಸಮಾಜದ ಪ್ರತಿಬಿಂಬದಂತೆ. ಮತ್ತು ಬೇಕೋ ಬೇಡವೋ ಸಿನಿಮಾಗಳ ಬಹುದೊಡ್ಡ ಪ್ರೇಕ್ಷಕವರ್ಗ ಪುರುಷರೇ. ಅದೊಂದು ಪುರುಷಾಧಿಪತ್ಯವೇ ತುಂಬಿರುವ ಜಗತ್ತು. ಅಲ್ಲಿ ನಿಮ್ಮ ಗುರಿಯೇ ಪುರುಷ ಈಗೋವನ್ನು ಸಂತೃಪ್ತಗೊಳಿಸುವುದು. ಅಂದರೆ ಹೆಣ್ಣನ್ನು ಕೇವಲ ಸುಂದರವಾಗಿ ಕಾಣುವ ಒಂದು ವಸ್ತುವಾಗಿ ತೋರಿಸುವುದು……. ಆಕೆಗೆ ನೀವು ಮೆದುಳು ಕೊಟ್ಟ ತಕ್ಷಣ ಅದು ಪುರುಷ ಈಗೋಗೆ ಒಪ್ಪಿಗೆಯಾಗುವುದಿಲ್ಲ, ಆದ್ದರಿಂದ ಸಿನಿಮಾಗಳು ಅದನ್ನು ಮಾಡಲು ಬಯಸುವುದಿಲ್ಲ!

ಪತ್ರಿಕೆ: ಹಾಗಾದರೆ, ತೆರೆಯ ಹಿಂದೆ ಹೆಣ್ಣನ್ನು ಭೋಗವಸ್ತುವಿನಂತೆ ಕಾಣುವುದರಿಂದ ಆರಂಭವಾಗಿರುವ ಈ ಪ್ರಯತ್ನ, ತೆರೆಯ ಮೇಲೆ ಹೆಣ್ಣನ್ನು ಸರಕಾಗಿಸುವುದರ ವಿರುದ್ಧವೂ ಮಾತನಾಡಬೇಕಾಗುತ್ತದೆ…. ಅಲ್ಲವೇ? ಅಂದರೆ, ನೀವು ಇಂದು ಮಾತಾಡಿರುವುದರಿಂದ ನೀವೇ ಅದನ್ನೂ ಮಾಡಬೇಕೆಂದು ಇದರ ಅರ್ಥವಲ್ಲ, ನಾವೆಲ್ಲರೂ ಒಟ್ಟಿಗೆ ಆ ದಿಕ್ಕಿಗೆ ವಿಕಾಸವಾಗುತ್ತಾ ಹೋಗಬೇಕಲ್ಲವೇ ಎಂದು?
ಶೃತಿ: ಹೌದು, ಹಾಗೆ ಆಗುವ ದಿಕ್ಕಿನಲ್ಲಿ ಪ್ರಯತ್ನಗಳಾಗಬೇಕು. ಸಿನಿಮಾ ರಂಗದಲ್ಲಿ ಹೆಚ್ಚು ಹಕ್ಕುಗಳು ದೊರೆಯಬೇಕು, ಹೆಚ್ಚು ಮಹಿಳಾ ದೃಷ್ಟಿ ಬರಬೇಕು. ಹೀಗೆ ಹೇಳುವುದರಲ್ಲಿ ನನ್ನ ಅಭಿಪ್ರಾಯ ಹೆಚ್ಚು ಹೆಚ್ಚು ಮಹಿಳಾ ಪರ ಆಲೋಚನೆಗಳಿರುವ ಮಹಿಳಾ ಸಿನಿಮಾ ಮೇಕರ್ಸ್ ಬರಬೇಕು- ನಿರ್ಮಾಪಕಿಯರು, ನಿರ್ದೇಶಕಿಯರು ಬರಬೇಕು. ಹೆಚ್ಚೆಚ್ಚು ಪುರುಷರು ಮಹಿಳೆಯರನ್ನು ಕೀಳಾಗಿ ಕಾಣುವುದರ ವಿರುದ್ಧ ಆಲೋಚಿಸುವಂತಾಗಬೇಕು. ಮಹಿಳೆಯರನ್ನು ತುಚ್ಛಗೊಳಿಸುವ ಡೈಲಾಗ್‍ಗಳನ್ನು ವಿರೋಧಿಸುವಂತಹ ಪುರುಷರು ಸಿದ್ಧರಾಗಬೇಕು.
ನನಗನಿಸುತ್ತದೆ, ಬಹುಶಃ ಸಿನಿಮಾವನ್ನು ನಾವು ಜವಾಬ್ದಾರಿಯಿಂದ ಬಳಸುವ ಕಾಲ ಬಂದಿದೆ ಎಂದು. ಇದೊಂದು ಅತ್ಯಂತ ಪರಿಣಾಮಕಾರಿ ಮಾಧ್ಯಮ. ಸಮಾಜದಲ್ಲಿ ಬದಲಾವಣೆ ತರುವುದರಲ್ಲಿ ಸಿನಿಮಾ ಕೂಡಾ ಒಂದು ಮಹತ್ವಪೂರ್ಣವಾದ ಪಾತ್ರ ವಹಿಸುತ್ತದೆ. ಸಿನಿಮಾ ಮಾತ್ರವಲ್ಲದೆ, ಯಾವುದೇ ಬಗೆಯ ಕಲಾಪ್ರಕಾರವೂ ಕೂಡಾ ಮಹತ್ವದ್ದು. ಇದರ ಅರ್ಥ ಸೂಪರ್ ಸ್ಟಾರ್‍ಗಳ ಮೇಲೂ ಸರಿಯಾದ ಸಿನೆಮಾಗಳನ್ನು ಆರಿಸುವ ಬಹುದೊಡ್ಡ ಜವಾಬ್ದಾರಿ ಇರುತ್ತದೆ. ಅವುಗಳನ್ನು ಸೂಕ್ತ ರೀತಿಯಲ್ಲಿ ಬಳಸಿದರೆ ಮಹಿಳೆಯರ ಕುರಿತು ಸಂವೇದನಾಶೀಲರಾಗಿರುವ ಪುರುಷರನ್ನು ಸೃಷ್ಟಿಸಬಹುದು. ಮಹಿಳೆಯರನ್ನು ಪರಿಭಾವಿಸುವ ರೀತಿ ಬದಲಾಗುತ್ತದೆ ಮತ್ತು ದೊಡ್ಡ ಮಟ್ಟದಲ್ಲಿ ಸಮಾಜವೂ ಬದಲಾಗುತ್ತದೆ.

ಪತ್ರಿಕೆ: ಮಹಿಳೆಯರ ಮೇಲಿನ ಲೈಂಗಿಕ ಹಿಂಸೆಯ ಸಮಸ್ಯೆ ಕೇವಲ ಚಿತ್ರರಂಗಕ್ಕೆ ಸೀಮಿತವಾದುದಲ್ಲ. ಬಡ, ಶೋಷಿತ, ಗ್ರಾಮೀಣ ಮಹಿಳೆಯರಿಗೆ ಈ ಸಮಸ್ಯೆ ಇನ್ನೂ ಹೆಚ್ಚು ಕಾಡುತ್ತದೆ. ಇಂತಹ ಆಂದೋಲನಗಳ ಬಗ್ಗೆ ಇರುವ ಮತ್ತೊಂದು ಅಭಿಪ್ರಾಯವೆಂದರೆ, ಇದು ನಗರಗಳ ಮಹಿಳೆಯರಿಗೆ ಸೀಮಿತವಾಗಿದೆ, ದುರ್ಬಲ ವರ್ಗಗಳ ಶೋಷಿತ ಮಹಿಳೆಯರ ತನಕ ಇವು ತಲುಪುವುದೇ ಇಲ್ಲ ಎಂಬುದು.
ಶೃತಿ: ಅದು ನಿಜ, ಆದರೆ ಆಂದೋಲನವೊಂದು ಎಲ್ಲಾದರೊಂದು ಕಡೆ ಆರಂಭವಾಗಬೇಕಲ್ಲ. ಆಂದೋಲನದ ಸಮಸ್ಯೆಗಳನ್ನು ಹೇಳುವುದು ಬಹಳ ಸುಲಭ, ಅದು ಒಂದೇ ಸಲ ಎಲ್ಲರನ್ನೂ ತಲುಪುತ್ತಿಲ್ಲ ಎಂಬುದನ್ನು ಒಪ್ಪಿಕೊಳ್ಳುವಾಗಲೇ ಹೇಳಬೇಕಿರುವುದು, ಅದೇನೆ ಇದ್ದರೂ ಇದು ಒಂದು ಆಂದೋಲನದ ಆರಂಭ. ಇದು ಸದ್ಯಕ್ಕೆ ಅಂತರ್ಜಾಲದ ಬಳಕೆದಾರರನ್ನು ಮಾತ್ರ ತಲುಪುತ್ತಿದೆ ಅಂದುಕೊಳ್ಳೋಣ. ಇಂದು ಅಂತರ್ಜಾಲವನ್ನು ಹಳ್ಳಿಗಳಲ್ಲೂ ಬಳಸಲಾಗುತ್ತಿದೆ, ಆದರೆ, ಇಂತಹ ಆಂದೋಲನಗಳು ಅಲ್ಲಿರುವ ನೊಂದ ಮಹಿಳೆಯರನ್ನೂ ತಲುಪಬೇಕಾದರೆ ಸಮಯ ಬೇಕಾಗುತ್ತದೆ. ಬಹಳ ಹೆಚ್ಚು ಸಮಯ ಬೇಕಾಗುತ್ತದೆ. ಕೆಲವರ ವಿಶೇಷವಾದ ಪ್ರಯತ್ನವೂ ಬೇಕಾಗುತ್ತದೆ. ಏಕೆಂದರೆ, ಅಂತಹ ಹೆಣ್ಣುಮಕ್ಕಳು ತಮ್ಮ ಮೇಲಿನ ದೌರ್ಜನ್ಯವನ್ನು ಎದುರಿಸಿ ಹೊರಬರುವುದಕ್ಕೆ ಅವರಿಗೆ ನೆರವು ಬೇಕು. ಎಷ್ಟೋ ಬಾರಿ ಮಹಿಳೆಯರು ದಬ್ಬಾಳಿಕೆಯೆಂಬುದು ಮಹಿಳೆಯಾಗಿರುವುದರ ಭಾಗವೇ ಆಗಿದೆ ಎಂದು ನಂಬಿರುತ್ತಾರೆ, ತಂದೆ, ಅಥವಾ ಗಂಡ ಅಥವಾ ಮಗ ಹೇಳಿದಂತೆಯೇ ಕೇಳಬೇಕೆಂದು, ಹೆಣ್ಣುಮಕ್ಕಳನ್ನು ಕಂಡಿಶನ್ ಮಾಡಲಾಗಿದೆ, ಗ್ರಾಮೀಣ ಭಾಗಗಳಲ್ಲಿ ಇನ್ನೂ ಹೆಚ್ಚಾಗಿ! ಆದ್ದರಿಂದ ಮಹಿಳೆಯರು ದನಿಯೆತ್ತಲು ಹೊರಟರೆ ಮಹಿಳೆಯರೇ ಬೆಂಬಲ ನೀಡದಿರಬಹುದು.
ಶೋಷಣೆ ಎಂಬುದು ಕೇವಲ ಮಹಿಳೆಯರಿಗಷ್ಟೇ ಸೀಮಿತವಾದುದಲ್ಲ; ಆದರೆ ಈಗ ಮೀಟೂ ಯುಗದಲ್ಲಿ ಹೆಚ್ಚು ಚಾಲ್ತಿಗೆ ಬಂದಿರುವುದು ಮಾತ್ರ ಮಹಿಳಾ ದೃಷ್ಟಿಕೋನ ಹೊಂದಿರುವ ನಮ್ಮಗಳ ಕಥೆ.

ಪತ್ರಿಕೆ: ಚಿತ್ರರಂಗದಲ್ಲಿ ನಿಮ್ಮನ್ನು ಬೆಂಬಲಿಸಿದವರೆಲ್ಲರೂ ಎಡಪಂಥೀಯರು ಎಂದು ಹೇಳಲಾಗುತ್ತಿದೆ. ಎಡಪಂಥವು ಯಾವಾಗಲೂ ಶೋಷಿತರ ಪರ ನಿಂತಿದೆ. ಆದರೆ, ಇದನ್ನೊಂದು ಆರೋಪದ ಥರಾ ಹೇಳಲಾಗುತ್ತಿದೆ. ಈ ಆರೋಪದ ಬಗ್ಗೆ ನಿಮಗೇನನ್ನಿಸುತ್ತದೆ?
ಶೃತಿ: ಮೊದಲನೆಯದಾಗಿ ನನಗನ್ನಿಸೋದು, ಈ ಥರದ ಪತ್ರಿಕೋದ್ಯಮವು ಬಹಳ ಕೆಳಮಟ್ಟಕ್ಕಿಳಿದ ಪತ್ರಿಕೋದ್ಯಮ ಅಂತ. ಪತ್ರಿಕೋದ್ಯಮಕ್ಕಿರುವ ಶಕ್ತಿಯು ದೊಡ್ಡ ಪ್ರಮಾಣಕ್ಕೆ ದುರ್ಬಳಕೆಯಾಗುತ್ತಿದೆ. ಎರಡನೆಯದ್ದು, ಲೈಂಗಿಕ ದೌರ್ಜನ್ಯದ ಥರದ ಒಂದು ಇಶ್ಯೂವನ್ನೂ ಸಹಾ ಪೊಲಿಟಿಸೈಸ್ ಮಾಡಬೇಕೆಂದರೆ ಬಹಳ ಕ್ರಿಯೇಟಿವಿಟಿ ಬೇಕಾಗುತ್ತದೆ. ಸುದ್ದಿ ಮತ್ತು ಸೆನ್ಸೇಷನಲಿಸಂಗಾಗಿ ಹಾಗೂ ಸುದ್ದಿಯನ್ನು ಸೆನ್ಸೇಷನಲೈಸ್ ಮಾಡಲು ಇಂತಹ ಕ್ರಿಯೇಟಿವಿಟಿಯನ್ನು ಅವರು ಬಳಸುತ್ತಿರುವುದು ಬಹಳ ನೋವಿನ ಸಂಗತಿ. ಬಟ್ ಒಂದು ಮಾತು ಹೇಳಬೇಕು; ಹಲವು ಒಳ್ಳೆಯ ಜರ್ನಲಿಸ್ಟರಿದ್ದಾರೆ. ಅಂಥವರು ಈಗಲೂ ಡೆಮಾಕ್ರಟಿಕ್ ವ್ಯಾಲ್ಯೂಸ್ ಪರ ನಿಂತಿದ್ದಾರೆ.
ನಮ್ಮದು ಒಂದು ಅತೀ ದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲೊಂದು. ಆದರೆ, ನಾವು ಎಲ್ಲವನ್ನೂ ಜಾತಿ, ಧರ್ಮ, ಜೆಂಡರ್ ಅಥವಾ ಪ್ರದೇಶದ ಮೂಲಕ ನೋಡಲು ಶುರು ಮಾಡಿಬಿಟ್ಟಿದ್ದೇವೆ. ಈ ಥರಾ ಆಗ್ತಿರೋದು ಬಹಳ ಬೇಸರದ ವಿಚಾರ. ನನಗಂತೂ ಇದು ಎಡ, ಬಲ, ಕಮ್ಯುನಿಸ್ಟರು, ಬಿಜೆಪಿ ಪರ, ಬಿಜೆಪಿ ವಿರೋಧ, ಕಾಂಗ್ರೆಸ್ ಪರ ಇದ್ಯಾವುದೂ ಅಲ್ಲ. ಇದು ಮಾನವೀಯತೆಗೆ ಸಂಬಂಧಿಸಿದ ವಿಚಾರ.

ಪತ್ರಿಕೆ: ಇನ್ನೊಂದು ಪ್ರಶ್ನೆ ಇದೆ. ನೀವು ಈ ಥರದ ಒಂದು ಆರೋಪ ಮಾಡ್ತೀರಿ. ಅದರ ಬಗ್ಗೆ ಇನ್ನೂ ತನಿಖೆ ಆಗಿಲ್ಲ. ಆದ್ರೆ ಅವರು ಅಪರಾಧಿ ಅಂತ ಡಿಕ್ಲೇರ್ ಮಾಡ್ಬಿಟ್ಟು, ಅವರು ಕ್ಷಮೆ ಕೇಳ್ಬೇಕು ಅಂತ ಶುರು ಆಗುತ್ತೆ. ಇದು ಸರೀನಾ?
ಶೃತಿ: ಹ್ಞಾಂ, ಹೌದು. This is my story or my word against his word. ಜನರೂ ಸೈಡ್ಸ್ ತಗೋತಾರೆ. ಈ ಮೂವ್‍ಮೆಂಟ್‍ನ ಡೌನ್‍ಸೈಡ್‍ಗಳಲ್ಲಿ ಇದೂ ಒಂದು. ಯಾಕಂದ್ರೆ ಸತ್ಯ ಏನೂ ಅಂತ ಹೊರಗಡೆ ಗೊತ್ತಿಲ್ಲ. ಸತ್ಯ ಹೇಳ್ತಿರೋರು ಯಾರು ಅನ್ನೋ ಪ್ರಶ್ನೆ ರಿಸಾಲ್ವ್ ಆಗ್ಬೇಕಲ್ವಾ? ನಾವೆಲ್ಲಾ ತೀರ್ಮಾನಕ್ಕೆ ಬರ್ಬೇಕಿರೋದು ಏನಂದ್ರೆ, ನಾವು ಆಬ್ಜೆಕ್ಟಿವ್ ಆಗಿರೋಣ; ಅಂತಿಮವಾಗಿ ಒಂದು ನ್ಯಾಯಾಂಗ ವ್ಯವಸ್ಥೆ ಇದೆ ಮತ್ತು ಅದು ತನ್ನ ತೀರ್ಪನ್ನು ಹೇಳುತ್ತೆ.
ಆದ್ರೆ ಇದನ್ನು ನಾನು ಹೇಗೆ ನೋಡ್ತೇನೆ ಅಂತ ಹೇಳ್ತೀನಿ. ಇದ್ರಲ್ಲಿ ಏನ್ ನಡೆದಿದೆ ಅಂತ ಆಕೆಗೆ ಗೊತ್ತು; ಆತನಿಗೆ ಗೊತ್ತು. ಈ ವಿಚಾರದಲ್ಲಿ ನನಗ್ ಗೊತ್ತು. ಈಗ ಗೌರವಯುತವಾದದ್ದು ಏನಂದ್ರೆ, ಆತನಿಗೆ ಅದರ ಅರಿವಾಗಬೇಕು. ಅಂದ್ರೆ ಆಗ ಅವರಿಗೆ ಗೊತ್ತಾಯ್ತೋ ಇಲ್ವೋ, ನಾನೀಗ ಹೇಳಿದ್ಮೇಲಾದ್ರೂ ‘ಅದು ನನಗೆ ಅನ್‍ಕಂಫರ್ಟಬಲ್ ಆಗಿತ್ತು ಮತ್ತು ಅದು ನನಗೆ ಒಪ್ಪಿಗೆಯಿರಲಿಲ್ಲ’ ಅಂತ ಅರಿವಾಗಬೇಕು.
ಇದರಲ್ಲಿ ನಾನು ಪ್ರಾಮಾಣಿಕಳಾಗಿರ್ತೀನಿ. ಅದೇನಂದ್ರೆ ನನ್ನ ಜೊತೆ ನಡೆದಿದ್ದು ಈಗ ಹೊರಗೆ ಬರುತ್ತಿರುವ ಬೇರೆಯವರಿಗೆ ಹೋಲಿಸಿದರೆ, ಬಹಳ ಸಣ್ಣದು. ಈರೇಗೌಡರ ವಿರುದ್ಧ ಏಕ್ತಾ ಹೇಳ್ತಿರೋದಕ್ಕೆ ಹೋಲಿಸಿದ್ರಂತೂ… ಅದು ನಿಜಕ್ಕೂ ಆಘಾತಕಾರಿಯಾಗಿದೆ. ನನ್ನದು ಅದಕ್ಕೆ ಹತ್ತಿರವೂ ಬರಲ್ಲ. ಆದರೆ, ಅದು ಮಿಸ್‍ಬಿಹೇವಿಯರ್ ಆಗಿತ್ತು ಮತ್ತು ಅವರು ಅದನ್ನು ಮತ್ತೆ ರಿಪೀಟ್ ಮಾಡಬಾರ್ದು ಅಂತ ಆಶಿಸ್ತೇನೆ.
ಇದೆಲ್ಲಾ ಹೇಳಿದ್ಮೇಲೂ.. ಇದು ಅವರ ವಿರುದ್ಧ ನಾನು ಹೇಳುತ್ತಿರುವ ನನ್ನ ವರ್ಷನ್ ಮಾತ್ರ. ಇದನ್ನು ಕ್ರಿಮಿನಲೈಸ್ ಮಾಡಬೇಕು ಅಂತ ಅವ್ರು ಬಯಸಿದ್ರೆ, ನಾನು ಖಂಡಿತಾ ಅದನ್ನು ಕೋರ್ಟಿನಲ್ಲಿ ಎದುರಿಸ್ತೇನೆ ಮತ್ತು ಕೋರ್ಟ್ ಅದನ್ನು ತೀರ್ಮಾನ ಮಾಡಲಿ. ತೀರ್ಪು ಏನೇ ಬಂದರೂ ಸರಿ. ಕೋರ್ಟಿಗೆ ಕೊಡಬೇಕಾದ ಪುರಾವೆ ನನ್ನ ಹತ್ತಿರ ಇದೆ. ಲೈಂಗಿಕ ದೌರ್ಜನ್ಯದ ಮೊಕದ್ದಮೆಯಲ್ಲಿ ಪುರುಷ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳಬೇಕಾದ ಜವಾಬ್ದಾರಿ ಹೊಂದಿರುತ್ತಾನೆ. ನಾನು ಹೀಗಂದುಕೊಂಡಿದ್ದೇನೆ. ಈ ಕೇಸಿನಲ್ಲಿ ಅವರು ಮೊದಲು ಮಾನನಷ್ಟದ ಕೇಸು ಹಾಕಲು ಹೊರಟರೆ ಖಂಡಿತಾ ನಾನು ಈ ಕೇಸನ್ನು ಹಾಕುತ್ತೇನೆ.
ಜೊತೆಗೆ ಇನ್ನೊಂದು ವಿಚಾರ ಇದೆ. ಇನ್ನೂ ನಾಲ್ಕು ಜನ ಅರ್ಜುನ್‍ಸರ್ಜಾರಿಂದ ದೌರ್ಜನ್ಯಕ್ಕೊಳಗಾದವರು ಮುಂದೆ ಬಂದು ಮಾತಾಡಿದ್ದಾರೆ. ಅವರ ವಿಚಾರಾನಾ ಯಾಕೆ ಮೀಡಿಯಾ ಹೈಲೈಟ್ ಮಾಡ್ತಿಲ್ವೋ ಗೊತ್ತಿಲ್ಲ. ಅದನ್ನು ಹೈಲೈಟ್ ಮಾಡ್ದೇ ಇರೋಕೆ ಅವ್ರನ್ನ ತಡೀತಿರೋದು ಏನು ಅಂತ ಅವ್ರೇ ಹೇಳ್ಬೇಕು. ಇಬ್ರು ಪಬ್ಲಿಕ್ ಟೀವಿಯಲ್ಲಿ, ಒಬ್ರು ಸುವರ್ಣ ಟೀವಿಯಲ್ಲಿ ಅನಾನಿಮಸ್ ಆಗಿ ಮಾತಾಡಿದ್ದಾರೆ. ಇನ್ನೊಬ್ರ ಮಾತುಗಳನ್ನ ನ್ಯೂಸ್‍ಮಿನಿಟ್ ಕವರ್ ಮಾಡ್ತು. ಅರ್ಜುನ್‍ಸರ್ಜಾರ ಕೆಟ್ಟ ನಡವಳಿಕೆಯ ಕುರಿತು ಅವರೆಲ್ಲರೂ ಹೇಳಿದ್ದಾರೆ. ಇವೆಲ್ಲದರಿಂದ ಆತ ಯಾವ ರೀತಿಯ ವ್ಯಕ್ತಿ ಅನ್ನೋದರ ಅರಿವು ಆಗ್ತದೆ.

ಪತ್ರಿಕೆ: ಈ ಎಲ್ಲಾ ಬೆಳವಣಿಗೆಗಳಿಂದ ನಿಮಗೆ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆ ಆಗುತ್ತೆ ಅನ್ಸುತ್ತಾ? ಕಡಿಮೆ ಆದರೆ ಪರವಾಗಿಲ್ಲ ಎಂದುಕೊಂಡಿದ್ದೀರಾ?
ಶೃತಿ: ನಾನು ಮುಂದಕ್ಕೂ ಸಿನಿಮಾ ಮಾಡ್ತೀನಿ. ಅದ್ರಲ್ಲಿ ಸಂದೇಹವೇ ಇಲ್ಲ. ಒಂದು ವೇಳೆ ಕಡಿಮೆ ಆದ್ರೂ ಪರವಾಗಿಲ್ಲ. ಆದ್ರೆ ನಾನಿಲ್ಲಿ ಉಳಿತೀನಿ, ಫಿಲ್ಮ್ಸ್ ಮಾಡ್ತೀನಿ ಅಂತ ನನಗೆ ಕಾನ್ಫಿಡೆನ್ಸ್ ಇದೆ.
ಪತ್ರಿಕೆ: ಕೊನೆಯದಾಗಿ, ‘ಮಿಟೂ’ ಗೆ ಪ್ರತಿಕ್ರಿಯಿಸಿ ನೀವು ಬಹಿರಂಗವಾಗಿ ಪ್ರತಿರೋಧ ದಾಖಲಿಸುವುದಕ್ಕೆ ಮುನ್ನ ಮತ್ತು ನಂತರ ಒಬ್ಬ ಸಂವೇದನಾಶೀಲ ವ್ಯಕ್ತಿಯಾಗಿ ಈ ಅನುಭವ ನಿಮ್ಮನ್ನು ಬೆಳೆಸಿದೆ, ಗಟ್ಟಿಗೊಳಿಸಿದೆ ಎಂದು ಅನಿಸುತ್ತದೆಯೇ? ಅಥವಾ ಕುಸಿದು ಹೋಗುತ್ತಿರುವಂತೆ ಅನಿಸುತ್ತಿದೆಯೇ?
ಶೃತಿ: ಗಟ್ಟಿಯಾಗಿದೀನಿ ಅನ್ಸತ್ತೆ. ಇನ್ನೊಂಚೂರು ಮುಂದಕ್ಕೆ ಬಂದಿದೀನಿ. ತಪ್ಪು ಅನ್ನಿಸುವುದರ ವಿರುದ್ಧ ನಾನು ಮುಂದಕ್ಕೂ ಹೋರಾಡ್ತೀನಿ ಅಂತ ನನಗೆ ಅನ್ನಿಸ್ತಿದೆ. ಇನ್ನೂ ಉತ್ತಮ ಸಮಾಜಕ್ಕಾಗಿ ಕೆಲಸ ಮಾಡ್ತೀನಿ. ನಾನು ಇನ್ನೂ ಒಳ್ಳೇ ನಾಗರಿಕಳಾಗಲು ಪ್ರಯತ್ನ ಮಾಡ್ತೀನಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...