ರೈತ ಹೋರಾಟಗಾರ್ತಿಯೊಂದಿಗೆ ಅನುಚಿತವಾಗಿ ವರ್ತಿಸಿ ತೀವ್ರ ಟೀಕೆಗೆ ಗುರಿಯಾಗಿದ್ದ ಸಣ್ಣ ನೀರಾವರಿ ಮತ್ತು ಕಾನೂನು ಸಚಿವ ಮಾಧುಸ್ವಾಮಿಯವರು ಇಂದು ಕ್ಷಮೆ ಕೇಳುತ್ತಲೇ ಆ ಹೋರಾಟಗಾರ್ತಿಯ ಮೇಲೆ ಮತ್ತಷ್ಟು ಆರೋಪಗಳ ಸುರಿಮಳೆಗೈಯ್ಯುವ ಮೂಲಕ ಮತ್ತೆ ವಿವಾದಕ್ಕೊಳಗಾಗಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯನವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, “ನಾನು ರಾಜೀನಾಮೆ ಕೊಡುವ ಪ್ರಶ್ನೆ ಉದ್ಬವಿಸಲ್ಲ, ನನ್ನನ್ನು ಮಂತ್ರಿ ಮಾಡಿರುವುದು ಸಿದ್ದರಾಮಯ್ಯನಲ್ಲ, ನಮ್ಮ ನಾಯಕರು ಹೇಳಿದರೆ ಮಾತ್ರ ರಾಜೀನಾಮೆ ನೀಡತ್ತೇನೆ, ಆದರೆ ರಾಜೀನಾಮೆ ಕೊಡುವ ತಪ್ಪು ನಾನು ಮಾಡಿಲ್ಲ” ಎಂದು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.
ನಾನು ಅಂದಿದ್ದು ನಿಜ. ಆಯಮ್ಮ ನನ್ನನ್ನ ಟೆಂಪ್ಟ್ ಮಾಡಿದ್ದಾರೆ, ಒಬ್ಬ ಮಂತ್ರಿ ಅವರ ಊರಿಗೆ ಹೋಗಿ ಸುಮ್ಮನೆ ಬೈಸಿಕೊಂಡು ಬರುವುದಕ್ಕಾಗುತ್ತದೆಯೇ? ನಾನು ಒಬ್ಬ ಮನುಷ್ಯ, ಸ್ವಾಭಿಮಾನಿ ಇದೆ. ಎಲ್ಲರಿಗೂ ಶರಣಾಗಲು ಸಾಧ್ಯವಿಲ್ಲ.
ನನಗೆ ಮುಖ ಪರಚುವಂತೆ ಮಾತನಾಡಿದರೆ ನಾನು ಸುಮ್ಮನಿರಲು ಸಾಧ್ಯವಿಲ್ಲ. ರಿಕ್ವೆಸ್ಟ್ ಮಾಡಿಕೊಳ್ಳಬೇಕು ಹೊರತು ನನಗೆ ಆದೇಶ ಕೊಡಬಾರದು. ನನಗೆ ಮುಖಪರಚಲು ಬಂದಾಗ ಅವರನ್ನು ಹಿಡಿದುಕೊಳ್ಳದೇ ಏನು ಮಾಡಬೇಕು ಮಾಧುಸ್ವಾಮಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಘಟನೆಯಿಂದ ಬಹಳ ಬೇಸರವಾಗಿದೆ. ನಾನು ಮಾತನಾಡಿದ್ದು ತಪ್ಪು.. ಆಯಮ್ಮನಿಗೆ ಅದೇನಾಗಿತ್ತೊ ಗೊತ್ತಿಲ್ಲ. ಆಯಮ್ಮ ಬಹುಶಃ ಅದೇ ರೀತಿ ಬೆಳೆದುಕೊಂಡಬಂದಿರಬಹುದು. ಆದರೆ ನಾನು ಅದನ್ನು ಸಹಿಸಿಕೊಳ್ಳುವುದಿಲ್ಲ.
ಇದರಿಂದಾಗಿ ಯಾರಾದರೂ ಹೆಣ್ಣು ಮಕ್ಕಳ ಭಾವನೆಗೆ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಆ ಪದ ಕೆಟ್ಟದಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ನಂದು ತಪ್ಪು ಎಂದು ಒಪ್ಪಿಕೊಳ್ಳುತ್ತೇನೆ. ಹಾಗಾಂತ ಇನ್ನು ಮುಂದೆ ಎಲ್ಲಾ ಮಂತ್ರಿಗಳಿಗೆ, ಅಧಿಕಾರಿಗಳಿಗೆ ಏನು ಬೇಕಾದರೂ ಮಾತಾಡಬಹುದು ಎಂದು ಭಾವಿಸಿಕೊಂಡರೆ ಆಡಳಿತ ಮಾಡುವುದು ಕಷ್ಟ ಎಂದಿದ್ದಾರೆ.
ಈಯಮ್ಮನ ನೇಚರ್ ಅಂತದ್ದು ಎಂದು ಸ್ಥಳೀಯವಾಗಿ ಹೇಳಿದ್ದಾರೆ. ಯಾರು ಹೋದರು ಈಯಮ್ಮ ಹೀಗೆ ಮಾಡುತ್ತೆ ಅಂತ ಹೇಳಿದ್ದಾರೆ. ಆಕೆಯ ನಡೆವಳಿಕೆ ತೀರಾ ಕೆಟ್ಟದಾಗಿತ್ತು. ಸಿಟ್ಟು ಬಂದಾಗ ಒಬ್ಬ ಮನುಷ್ಯ ಏನು ಮಾತಾಡುತ್ತಾನೆ ಅದನ್ನೆ ನಾನು ಮಾತನಾಡಿದ್ದೇನೆ. ಮುಚ್ಚು ಬಾಯಿ ರಾಸ್ಕಲ್ ಎನ್ನುವುದರಲ್ಲಿ ತಪ್ಪೇನಿದೆ ಎಂದು ಸಚಿವರು ಪ್ರಶ್ನಿಸಿದ್ದಾರೆ.
ನಾನು ಹೇಳಿರುವುದು ತಪ್ಪು ಎಂದರೆ ನೀನು ಹೇಳಿದ್ದು ಸರಿನಾ ನೋಡಿಕೊಳ್ಳಮ್ಮ. ನಿನ್ನ ತಂದೆಗಾದ ವಯಸ್ಸು ನನಗಾಗಿದೆ. ಹೆಣ್ಣು ಮಕ್ಕಳು ನೋಡಿಕೊಂಡು ಮಾತಾಡಬೇಕು. ನಾನು ಒಂದು ಹೆಣ್ಣು ಮಗಳಿಗೆ ಹೇಳಿದ್ದನ್ನು ಇಡಿ ಮಹಿಳೆಯರಿಗೆ ಅನ್ವಯಿಸುವುದು, ಯಾರಿಗಾದರೂ ಬೈದರೆ ಇಡೀ ಜಾತಿಗೆ ಅನ್ವಯಿಸುವುದು, ಯಾರೋ ಅಧಿಕಾರಿಗೆ ಬೈದರೆ ಇಡೀ ಸಮುದಾಯಕ್ಕೆ ಅನ್ವಯಿಸಿದರೆ ಆಡಳಿತ ನಡೆಸುವುದು ಕಷ್ಟ ಎಂದು ಸಚಿವರು ಹೇಳಿದ್ದಾರೆ.
ಒಟ್ಟಿನಲ್ಲಿ ಶಾಸಕರ ಮಾತಿನಲ್ಲಿ ಆ ಹುಡುಗಿಯ ಮೇಲೆ ಆರೋಪಗಳ ಸುರಿಮಳೆ ಇತ್ತೆ ಹೊರತು ಕ್ಷಮೆ ಕೇಳುವ ಉದ್ದೇಶವಿದ್ದಂತೆ ಕಾಣುತ್ತಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಆ ಮಹಿಳೆಯು ನಿನ್ನೆ ಸಾವಧಾನವಾಗಿಯೇ ನಡೆದುಕೊಂಡಿರುವುದು, ಅವರದೇ ಊರಿನ ಸಮಸ್ಯೆಯ ಬಗ್ಗೆ ಮಾತನಾಡಿರುವುದು ವಿಡಿಯೋದಲ್ಲಿ ಕಂಡುಬಂದಿದ್ದರೂ ಸಚಿವರು ಮಾತ್ರ ನನ್ನ ಮುಖ ಪರಚಲು ಬಂದರು, ಎತ್ತರಿಸಿದ ದನಿಯಲ್ಲಿ ಮಾತನಾಡಿದರು ಎಂದು ಆರೋಪಿಸಿದ್ದಾರೆ.
ಈ ನಡುಗೆ ಕಾಂಗ್ರೆಸ್ ಪಕ್ಷವು ಮಾಧುಸ್ವಾಮಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ಬಳಿ ದೂರು ಸಲ್ಲಿಸಿದ್ದಾರೆ.
ಅಲ್ಲಿಗೆ ಒಂದು ಕ್ಷಮೆಯಿಂದ ಮುಗಿದುಹೋಗಬಹುದಾಗಿದ್ದ ಪ್ರಕರಣವನ್ನು ಮಾಧುಸ್ವಾಮಿಯವರು ಮತ್ತೆ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಎಲ್ಲಿಗೆ ಹೋಗಿ ನಿಲ್ಲುತ್ತದೆ ಕಾದು ನೋಡಬೇಕಿದೆ.
ಇದನ್ನೂ ಓದಿ: ಗಣಿ ಲೂಟಿಯಾದಾಗ ಮೌನವಿದ್ದ ಮಾಧುಸ್ವಾಮಿ, ಸಾಮಾನ್ಯರ ವಿರುದ್ಧ ತಿರುಗಿಬೀಳುವುದೇಕೆ?


