ರಾಜ್ಯ ಸರ್ಕಾರ ಆಟೋ-ಟ್ಯಾಕ್ಸಿ ಚಾಲಕರು, ಕ್ಷೌರಿಕರು, ಮಡಿವಾಳರು ಮತ್ತು ಕಟ್ಟಡ ಕಾರ್ಮಿಕರಿಗೆ ‘ಪರಿಹಾರ’ ಘೋಷಿಸಿದ್ದರೂ ಬಹುತೇಕರಿಗೆ ಹಣ ಬಂದಿಲ್ಲ. ಸೇವಾಸಿಂಧುವಿನಲ್ಲಿ ಕಾರ್ಮಿಕರ ನೋಂದಣಿ ನಿಧಾನಗತಿಯಲ್ಲಿ ಸಾಗುತ್ತಿರುವುದು ಹಾಗೂ ಸರ್ವರ್ ಡೌನ್ ಪ್ರಮುಖ ಕಾರಣ ಎನ್ನಲಾಗಿದೆ. ಕಾರ್ಮಿಕರ ಹೆಸರಲ್ಲಿ ಸಣ್ಣಪುಟ್ಟ ವ್ಯತ್ಯಾಸವಿದ್ದರೂ ಸೇವಾಸಿಂದು ಸ್ವೀಕರಿಸುವುದಿಲ್ಲ. ಎಲ್ಲಾ ದಾಖಲೆಗಳನ್ನು ಸಲ್ಲಿಸಿಯೂ ಅದು ಒಪ್ಪಿಕೊಳ್ಳುವುದು ಕಷ್ಟವಾಗಿದೆ. ಹಾಗಾಗಿ ಫಲನುಭವಿಗಳು 5000 ರೂ ಪರಿಹಾರದ ಹಣ ಪಡೆಯುವುದಕ್ಕೆ ಹರಸಾಹಸಪಡಬೇಕಾಗಿದೆ.
ರಾಜ್ಯದಲ್ಲಿ 7.5 ಲಕ್ಷ ಮಂದಿ ಆಟೋ ಚಾಲಕರು ಮತ್ತು ಟ್ಯಾಕ್ಸಿ ಚಾಲಕರು ಇದ್ದಾರೆ. 2ಲಕ್ಷದಷ್ಟು ಮಂದಿ ಲೈಸನ್ಸ್ ಹೊಂದಿಲ್ಲದ ಚಾಲಕರು ಇದ್ದಾರೆ. ಹಾಗಾಗಿ ಪರವಾನಿಗೆ ಹೊಂದಿಲ್ಲದ ಚಾಲಕರಿಗೆ ಹಣ ಬರುವುದಿಲ್ಲ. ಅಷ್ಟೇ ಅಲ್ಲದೆ ಎಲ್ಲಾ ದಾಖಲೆಗಳು ಇರುವ ಚಾಲಕರಿಗೂ ಹಣ ದೊರೆಯುತ್ತದೆ ಎಂಬ ನಂಬಿಕೆ ಇಲ್ಲ. ಆದರೂ ಚಾಲಕರು ನಿತ್ಯವು ಸೇವಾಸಿಂದುವಿನಲ್ಲಿ ನೋಂದಣಿ ಮಾಡಿಸುವುದರಲ್ಲಿ ನಿರತರಾಗಿದ್ದಾರೆ. ದಾಖಲೆಗಳನ್ನು ಅಪ್ ಲೋಡ್ ಮಾಡಿ ಅಗ್ರಿ ಕೊಟ್ಟರೆ ಅದು ತೆಗೆದುಕೊಳ್ಳುವುದಿಲ್ಲ. ಹಾಗಾಗಿ ನೋಂದಣಿ ಕಾರ್ಯ ವಿಳಂಬವಾಗುತ್ತಿದೆ. ಇದೇ ರೀತಿ ಮುಂದುವರಿದರೆ ವರ್ಷವಾದರೂ ನೋಂದಣಿ ಮಾಡಿಸಲು ಸಾಧ್ಯವಿಲ್ಲ ಎಂದು ಚಾಲಕರು ಆರೋಪಿಸುತ್ತಾರೆ.
ನಾನುಗೌರಿ.ಕಾಮ್ ಜೊತೆ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್, “ಡ್ರೈವಿಂಗ್ ಲೈಸನ್ಸ್, ಬ್ಯಾಡ್ಜ್ ಚಾಸಿ ನಂಬರ್ ಇರುವ ಚಾಲಕರು 7.5 ಲಕ್ಷ ಇದ್ದಾರೆ. ಇವರಿಗೆ ಕೇವಲ 40 ಕೋಟಿ ಮಾತ್ರ ಹಣ ಮೀಸಲಿಡಲಾಗಿದೆ. ಈ ಹಣದಲ್ಲಿ ಕೇವಲ 80 ಸಾವಿರ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಮಾತ್ರ 5000 ರೂ ಪರಿಹಾರ ನೀಡಬಹುದು. 7.5 ಲಕ್ಷ ಮಂದಿ ಚಾಲಕರಿಗೆ 5 ಸಾವಿರ ರೂನಂತ ಪರಿಹಾರ ನೀಡಬೇಕೆಂದರೆ 400 ಕೋಟಿ ಹಣ ಮೀಸಲಿಡಬೇಕು. ಮುಖ್ಯಮಂತ್ರಿ ಯಡಿಯೂರಪ್ಪ 1610 ಕೋಟಿಯಲ್ಲಿ ಕೇವಲ 40 ಕೋಟಿ ಚಾಲಕರಿಗೆ ನೀಡಲು ಉದ್ದೇಶಿಸಿರುವುದರಿಂದ ಈ ಹಣ ಸಾಕಾಗುವುದಿಲ್ಲ ಎಂದು ಹೇಳಿದರು.
ಚಾಲಕರಿಗೆ ಡ್ರೈವಿಂಗ್ ಲೈಸನ್ಸ್, ಬ್ಯಾಡ್ಜ್ ಎಲ್ಲ ಇದ್ದರೂ ಚಾಸಿಸ್ ನಂಬರ್ ಬೇರೆಯವರ ಹೆಸರಲ್ಲಿರುತ್ತದೆ. ಶೇಕಡ 40ರಷ್ಟು ಆಟೋ ಮತ್ತು ಟ್ಯಾಕ್ಸಿಗಳು ಚಾಲಕ ಕಮ್ ಮಾಲಿಕರವು ಆಗಿರುತ್ತವೆ. ಅವರಿಗೆ ಚಾಸಿಸ್ ನಂಬರ್ ಕೂಡ ಇರುತ್ತದೆ. ಉಳಿದ ಶೇಕಡ 60ರಷ್ಟು ಚಾಲಕರು ಚಾಸಿಸ್ ನಂಬರ್ ಹೊಂದಿಲ್ಲ. ಡ್ರೈವಿಂಗ್ ಲೈಸನ್ಸ್ ನಲ್ಲಿ ಮತ್ತು ಆಧಾರ್ ಕಾರ್ಡ್ ನಲ್ಲಿ ಹೆಸರು ವ್ಯತ್ಯಾಸವಿದ್ದರೆ (ಅದು ಇನ್ಶಿಯಲ್).ಆಗ ಸೇವಾಸಿಂದು ವೈಬ್ ಸೈಟ್ ನಲ್ಲಿ ನೋಂದಣಿಯಾಗದೆ ರಿಜೆಕ್ಟ್ ಆಗುತ್ತದೆ. ಇಂಥ ಪ್ರಕರಣಗಳು ಹಲವು ಇರುವುದು ಕಂಡು ಬಂದಿದೆ. ಆದ್ದರಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದರೂ ಪರಿಹಾರ ಪಡೆಯಲು ಬಾರದಂತಹ ಪರಿಸ್ಥಿತಿ ಬಂದಿದೆ.
ಓದಿ: ಕೊರೊನಾ ವಿರುದ್ದ ಹೋರಾಡಲು ಮಹಾರಾಷ್ಟ್ರಕ್ಕೆ ವೈದ್ಯರ ತಂಡ ಕಳುಹಿಸಲಿರುವ ಕೇರಳ
2018ರ ಅಂಕಿಸಂಖ್ಯೆಗಳ ಪ್ರಕಾರ ರಾಜ್ಯದಲ್ಲಿ 21 ಲಕ್ಷ ಕಟ್ಟಡ ಕಾರ್ಮಿಕರು ನೋಂದಣಿ ಮಾಡಿಸಿದ್ದಾರೆ. ಆದರೆ 2019ರಲ್ಲಿ ನವೀಕರಣ ಆಗಿರುವುದು ತುಂಬ ಕಡಿಮೆ. ಕೇವಲ 1.55 ಲಕ್ಷ ಮಂದಿ ಕಟ್ಟಡ ಕಾರ್ಮಿಕರ ಹೆಸರನ್ನು ನವೀಕರಿಸಲು ಮಾತ್ರ ಸಾಧ್ಯವಾಗಿದೆ. ಇದುವರೆಗೆ ಕಟ್ಟಡ ಕಾರ್ಮಿಕರಿಗೆ ಶೇ.50ರಷ್ಟು ಮಂದಿಗೆ ಪರಿಹಾರದ ಹಣ ಅವರ ಅಕೌಂಟಿಗೆ ನೇರ ವರ್ಗಾವಣೆಗೊಂಡಿದೆ. ಉಳಿದವರಿಗೆ ಇನ್ನೂ ಬಂದಿಲ್ಲ.
ಈ ಸಂಬಂಧ ಪ್ರತಿಕ್ರಿಯೆ ನೀಡಿದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಮಹಾಂತೇಶ್ “ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ 1 ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಹಾಗಾಗಿ ಕಟ್ಟಡ ಕಾರ್ಮಿಕರಿಗೆ ಹಣ ಬಂದಿದೆ. ಲಾಕ್ ಡೌನ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ನೋಂದಾಯಿತರಲ್ಲದ ಕಾರ್ಮಿಕರಿಗೂ ಪರಿಹಾರ ನೀಡಬೇಕೆಂಬ ಒತ್ತಾಯ ನಮ್ಮದು. ಈ ಹಿನ್ನೆಲೆಯಲ್ಲಿ 12 ಮಂದಿ ಕಾರ್ಮಿಕರಿಗೆ ಹಣ ವರ್ಗಾವಣೆಯಾಗಿದೆ. ನಮ್ಮ ತಕರಾರಿರುವುದು ಶಾಸಕರಿಗೆ ಆಹಾರ ಧಾನ್ಯದ ಕಿಟ್ ನೀಡಿರುವುದರಲ್ಲಿ. ಇದರಲ್ಲಿ ವಂಚನೆಯಾಗಿದೆ. ಹಾಗಾಗಿ ಕಷ್ಟದಲ್ಲಿರುವ ಎಲ್ಲಾ ಕಾರ್ಮಿಕರಿಗೂ ಪ್ರತಿ ತಿಂಗಳು 8 ಸಾವಿರದಂತೆ ಮೂರು ತಿಂಗಳಿಗೆ 24 ಸಾವಿರ ರೂಪಾಯಿ ನೀಡಬೇಕೆಂದು ಸರ್ಕಾರದ ಮೇಲೆ ಒತ್ತಡ ಹಾಕಿದ್ದೇವೆ ಎಂದರು.
ಮಡಿವಾಳರು, ಕ್ಷೌರಿಕರು ಸೇವಾಸಿಂದುವಿನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಪರದಾಡುತ್ತಿದ್ದಾರೆ. ದಾಖಲೆಗಳನ್ನು ಹಿಡಿದು ಇಂಟರ್ ನೆಟ್ ಸೆಂಟರ್ ಗಳಿಗೆ ಅಲೆಯುತ್ತಿರುವುದು ಸಾಮಾನ್ಯವಾಗಿದೆ. ಆಧಾರ್, ಬ್ಯಾಂಕ್ ಪಾಸ್ ಪುಸ್ತಕ, ಅಂಗಡಿ ಲೈಸನ್ಸ್ ನೀಡಿದರೂ ನಮಗೆ ಇನ್ನೂ ಹಣ ಬಂದಿಲ್ಲ ಎನ್ನುತ್ತಾರೆ ರಾಜು.
ವೈಜ್ಞಾನಿಕವಾಗಿ ಚಾಲಕರು, ಕ್ಷೌರಿಕರು, ಮಡಿವಾಳರ ಸಮಗ್ರ ಮಾಹಿತಿ ಪಡೆಯದೇ ಇರುವುದು ಇಂತಹ ವಿಳಂಬಕ್ಕೆ ಕಾರಣವಾಗಿದೆ. ಆಧಾರ್, ಪಾಸ್ ಪುಸ್ತಕ, ಡ್ರೈವಿಂಗ್ ಲೈಸನ್ಸ್‌ನಲ್ಲಿರುವ ಹೆಸರುಗಳ ಸಣ್ಣಪುಟ್ಟ ವ್ಯತ್ಯಾಸಗಳು ಕೂಡ ಪರಿಹಾರದ ಹಣ ಪಡೆಯಲು ಸಾಧ್ಯವಾಗಿಲ್ಲ.
ಓದಿ: ಅನುಮತಿಯಿಲ್ಲದೆ ರಾಜ್ಯಗಳು ಉತ್ತರ ಪ್ರದೇಶದ ಕಾರ್ಮಿಕರನ್ನು ನೇಮಿಸಿಕೊಳ್ಳುವಂತಿಲ್ಲ: ಯೋಗಿ ಆದಿತ್ಯನಾಥ್


