ಕರೋನಾ ವೈರಸ್ (ಕೋವಿಡ್-19) ಸಾಂಕ್ರಾಮಿಕ ಜಗತ್ತಿನಾದ್ಯಂತ ಹರಡುತ್ತಿರುವ ಕಾರಣ, ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಎಂದು ಘೋಷಿಸಿತು. ಎಲ್ಲ ದೇಶಗಳು ಲಾಕ್‍ಡೌನ್, ಸೀಲ್‍ಡೌನ್ ಎಂದು ಜನಜೀವನದ ನಿತ್ಯದ ಕೆಲಸ, ಓಡಾಟಗಳಿಗೆ ಕಡಿವಾಣ ಹಾಕಿದವು. ಭಾರತದಲ್ಲಿ ಮಾರ್ಚ್ ಕೊನೆಯ ವಾರದಿಂದ ಇಂದಿನವರೆಗೆ ಲಾಕ್‍ಡೌನ್ ಜಾರಿಯಲ್ಲಿದೆ.
ಅಗತ್ಯ ವಸ್ತುಗಳು ಹಾಗೂ ಸೇವೆಗಳನ್ನು ಹೊರತುಪಡಿಸಿ ಬೇರೆಲ್ಲಾ ಚಟುವಟಿಕೆಗಳು ಬಂದ್ ಆದ ಕಾರಣ ಎಲ್ಲ ಕ್ಷೇತ್ರಗಳಿಗೆ ಬಹುದೊಡ್ಡ ಆರ್ಥಿಕ ನಷ್ಟ ಉಂಟಾಗಿದೆ. ಲಾಕ್‍ಡೌನ್ ಅವಧಿಯಲ್ಲಿ ಕೃಷಿ ಚಟುವಟಿಕೆಗಳು ಹಾಗೂ ಕೃಷಿ ಉತ್ಪನ್ನಗಳ ಸಾಗಣೆ ಹಾಗೂ ಮಾರಾಟಕ್ಕೆ ಸರ್ಕಾರಗಳು ಅನುವು ಮಾಡಿಕೊಟ್ಟರೂ ರೈತರು ಉತ್ಪಾದಿಸಿದ ಹಣ್ಣು, ಹಾಲು, ತರಕಾರಿಗಳಿಗೆ ಪೂರ್ಣ ಪ್ರಮಾಣದ ಮಾರುಕಟ್ಟೆ ಲಭ್ಯವಾಗಲಿಲ್ಲ. ಬಹಳಷ್ಟು ಪಾಲು ನಷ್ಟವಾಯಿತು. ಮೊದಲೇ ಸಂಕಷ್ಟದಲ್ಲಿದ್ದ ಗ್ರಾಮೀಣ ಆರ್ಥಿಕ ಪರಿಸ್ಥಿತಿ ಕರೋನಾ ಕಾರಣಕ್ಕೆ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯಿತು.
ದೇಶದಲ್ಲಿ ಲಾಕ್‍ಡೌನ್ ಹಿನ್ನೆಲೆ:
ಮಾರ್ಚ್ 22 2020 ರ ಭಾನುವಾರ ಒಂದು ದಿನದ ಮಟ್ಟಿಗೆ ‘ಜನತಾ ಕರ್ಫ್ಯೂ’ ಮಾಡಬೇಕಾಗಿ ದೇಶದ ಪ್ರಜೆಗಳಿಗೆ ಕರೆ ಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ ಕರೋನಾ ವೈರಸ್ ಸಾಂಕ್ರಾಮಿಕದ ತೀವ್ರತೆಯನ್ನು ಮನಗಂಡು ಮುಂದಿನ ಎರಡು ದಿನಗಳಲ್ಲಿ 21 ದಿನಗಳ ಲಾಕ್‍ಡೌನ್ ಪ್ರಕಟಿಸಿದರು. ಅಂಥದೊಂದು ದಿಢೀರ್ ತೀರ್ಮಾನ ಅನೇಕರಿಗೆ ಸಮಸ್ಯೆ ಆದದ್ದು ನಿಜವಾದರೂ ಪ್ರಭುತ್ವಕ್ಕೆ ಅದು ಅನಿವಾರ್ಯಅಗತ್ಯ ತೀರ್ಮಾನವಾಗಿತ್ತು.
ಇಂತಿಪ್ಪ ಅನಿವಾರ್ಯ ಸಂದಿಗ್ಧ ಸ್ಥಿತಿಯಲ್ಲಿ ರೈತರಿಗಾಗಿ ಸರ್ಕಾರಗಳು ಏನೆಲ್ಲಾ ಮಾಡಬೇಕೆಂಬ ಸಲಹೆ ಸೂಚನೆಗಳು ತಜ್ಞರಿಂದ ವ್ಯಕ್ತವಾದವು. ಇತ್ತೀಚೆಗೆ ನಾನು ಸಂದರ್ಶಿಸಿದ ರೈತ ಮುಖಂಡರು, ಚಿಂತಕರು, ಆರ್ಥಿಕ ತಜ್ಞರು ಹಲವು ಮಹತ್ವದ ಶಿಫಾರಸ್ಸುಗಳನ್ನು ಮಾಡಿದರು. ಅವುಗಳಲ್ಲಿ ತತ್‍ಕ್ಷಣದ ಪರಿಹಾರಗಳಿಂದ ಹಿಡಿದು ದೀರ್ಘಕಾಲಿಕವಾದ ಕೃಷಿ ಬಿಕ್ಕಟ್ಟು ಶಮನ ಮಾರ್ಗೋಪಾಯಗಳೂ ಅಡಕವಾಗಿವೆ. ಹಾಗಾಗಿ ಸಮಂಜಸವೆನಿಸಿದ ಕೆಲವು ಪ್ರಮುಖರ ಸಲಹೆ ಸೂಚನೆಗಳನ್ನು ‘ಜನಪದ’ ಓದುಗರಿಗೆ ಇಲ್ಲಿ ನೀಡಲಾಗಿದೆ.
ಕೆ.ಟಿ.ಗಂಗಾಧರ್, ರೈತ ಮುಖಂಡರು, ಶಿವಮೊಗ್ಗ
“ಪ್ರತಿ ರೈತನಿಗೆ ಈ ಕೂಡಲೇ ಯಾವುದಾದರೂ ಮೂಲದಿಂದ ಬೆಳೆ ಸಾಲ ಸಿಗುವಂತೆ ಸರ್ಕಾರ ನೋಡಿಕೊಳ್ಳಬೇಕು. ಹಳೆಯ ಬಾಕಿ ಎಷ್ಟೇ ಇರಲಿ, ಯಾವುದೇ ಬಾಬ್ತು ಅದಾಗಿರಲಿ. ಈ ಸಂದರ್ಭದಲ್ಲಿ ಅದ್ಯಾವುದನ್ನೂ ಲೆಕ್ಕಹಾಕದೆ, ಮರುಪಾವತಿಸಲು ಕೇಳದೆ ಹೊಸ ಬೆಳೆ ಸಾಲ ನೀಡಬೇಕು. ಇಲ್ಲಾವದಲ್ಲಿ ದೇಶದ ಆಹಾರ ಭದ್ರತೆಗೆ ದಕ್ಕೆ ಬರುತ್ತದೆ”
ಚುಕ್ಕಿ ನಂಜುಂಡಸ್ವಾಮಿ, ‘ಅಮೃತ ಭೂಮಿ’ ಚಾಮರಾಜನಗರ
ಕರೋನಾ ಸಂಕಷ್ಟ ಕಾಲದಲ್ಲಿ ಕೃಷಿ ಉತ್ಪನ್ನಗಳ ಮಾರುಕಟ್ಟೆ ಚೈನ್ ಲಿಂಕ್ ಬಗ್ಗೆ ಮರುಪರಿಶೀಲಿಸಬಹುದಾದ ಅವಕಾಶ ನಮ್ಮ ಮುಂದೆ ತೆರೆದುಕೊಂಡಿದೆ. “ಹಿಂದೆ ನಮ್ಮ ತಂದೆ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು “ನಮ್ದು” ಅನ್ನೋ ಕಾರ್ಯಕ್ರಮ/ಯೋಜನೆಯನ್ನು ರೂಪಿಸಿದ್ರು. ಆ ಯೋಜನೆಯ ಉದ್ದೇಶ ಮತ್ತು ವ್ಯಾಪ್ತಿ ಬಹಳ ದೊಡ್ಡದಿದೆ. ಒಂದೇ ವಾಕ್ಯದಲ್ಲಿ ಅರ್ಥ ಮಾಡಿಸೋದಾದ್ರೆ. ರೈತ ಬೆಳೆದ ಬೆಳೆ ಮೊದಲು ಅಲ್ಲಿನ ಗ್ರಾಮದ ಗ್ರಾಹಕರಿಗೆ ತಲುಪಬೇಕು ನಂತರ ಮುಂದಿನ ಊರು, ಹೋಬಳಿ ಹೀಗೆ ಮುಂದುವರಿಯಬೇಕು.
ಆದರೆ ವಾಸ್ತವದಲ್ಲಿ ಇಲ್ಲಿ ಬೆಳೆದ ಬೆಳೆ ನೂರಾರು ಮೈಲಿ ದೂರದ ಮಾರುಕಟ್ಟೆಗೆ ಸಾಗಿಸಿ ಮತ್ತದೇ ಉತ್ಪನ್ನವನ್ನು ಹಿಮ್ಮುಖವಾಗಿ ಚಲಿಸುವಂತೆ ಮಾಡುವುದು ಚಾಲ್ತಿಯಲ್ಲಿರುವ ಅಭ್ಯಾಸ. ಈ ರೀತಿ ಆಹಾರ ಸಂಚರಿಸುವುದನ್ನು food mile ಎಂದು ಹೇಳುತ್ತೇವೆ. food mile ಹೆಚ್ಚಾದಷ್ಟೂ ಸಮಸ್ಯೆಗಳು ಹೆಚ್ಚು. ಕಡಿಮೆ ಇದ್ದಲ್ಲಿ ಸಮಸ್ಯೆಗಳೂ ಕಡಿಮೆ.” ಹಾಗಾಗಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು.
ಜೆ.ಎಂ. ವೀರಸಂಗಯ್ಯ, ರೈತ ಮುಖಂಡರು, ಬಳ್ಳಾರಿ
ಈಗಿನ ಪರಿಸ್ಥಿತಿಯಲ್ಲಿ ಸರ್ಕಾರ ಯಾವುದೋ ಒಂದು ಮೂಲದಿಂದ ರೈತರು ಪಡೆದ ಸಾಲವನ್ನಷ್ಟೇ ಲೆಕ್ಕ ಮಾಡಿ ಕುಳಿತರೆ ಆಗುವುದಿಲ್ಲ. ಉದಾಹರಣೆಗೆ ಸಹಕಾರಿ ಬ್ಯಾಂಕ್‍ಗಳಿಂದ ಅತ್ಯಂತ ಕಡಿಮೆ ಮಂದಿ ಸಾಲ ಪಡೆದಿದ್ದಾರೆ. ಇನ್ನುಳಿದವರು ಸ್ವಂತ ಬಂಡವಾಳ ಹೂಡಿದ್ದಾರೆ. ಖಾಸಗಿ ಬಡ್ಡಿ ಸಾಲಗಳನ್ನು ತಂದಿದ್ದಾರೆ. ಚಿನ್ನ ಬೆಳ್ಳಿ ಅಡವಿಟ್ಟು ಕೃಷಿಯಲ್ಲಿ ಹೂಡಿದ್ದಾರೆ. ಅವರೆಲ್ಲರ ನೆರವಿಗೆ ಈಗ ಸರ್ಕಾರ ನಿಲ್ಲಬೇಕಿದೆ. ಇಡೀ ವರ್ಷ ರೈತರ ಯಾವ ಸಾಲಗಳನ್ನೂ ಮರುಪಾವತಿಸುವಂತೆ ಕೇಳುವಂತಿರಬಾರದು. ಖಾಸಗಿ ಸಾಲಗಳಿಗೆ ರೈತರ ಪರವಾಗಿ ಸರ್ಕಾರವೇ ಶ್ಯೂರಿಟಿ ಕೊಡಬೇಕು.
ಸ್ವಾಭಿಮಾನದ, ಆತ್ಮಾಭಿಮಾನದ ರೈತ ಸಾಲ ವಸೂಲಿ ಎಂಬ ‘ದಾಳಿ’ಗೆ ತತ್ತರಿಸಿಬಿಡುತ್ತಾನೆ. ಮನೋಸ್ಥೈರ್ಯ ಕಳೆದುಕೊಳ್ಳುತ್ತಾನೆ. ಹಾಗಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ನಾನು ಮಾತನಾಡುತ್ತಿರುವುದು ಕೇವಲ ರೈತರ ವಿಷಯವಷ್ಟೇ ಎಂದು ತಿಳಿಯಬೇಡಿ. ಇದು ಈ ನಾಡಿನ ಮೂರು ಕೋಟಿ ಜನರ ಉದ್ಯೋಗದ ಪ್ರಶ್ನೆ. ಅವರು ಕಂಗಾಲಾದರೆ ನಾಡಿನ ಗತಿ ಏನು ?
ನಂದಿನಿ ಜಯರಾಮ್, ರೈತ ಮುಖಂಡರು, ಮಂಡ್ಯ
“ಸರ್ಕಾರದ ಜವಾಬ್ಧಾರಿ ಬಹಳ ದೊಡ್ಡದಿದೆ. ಮೊದಲು ರೈತ ಮತ್ತು ಗ್ರಾಹಕರ ನಡುವೆ ಮದ್ಯವರ್ಥಿಗಳನ್ನು ಇಲ್ಲವಾಗಿಸಬೇಕು. ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಭದ್ರತೆ ಒದಗಿಸಬೇಕು. ಹಾಲಿಗೆ ಹೇಗೆ ಸ್ಥಳೀಯವಾಗಿ procure ಮಾಡೋ ವ್ಯವಸ್ಥೆ ಇದೆಯೋ ಅದೇ ರೀತಿ ಎಲ್ಲಾ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಸ್ಥಳೀಯವಾಗಿಯೇ ಕೊಳ್ಳುವ ವ್ಯವಸ್ಥೆ ಮಾಡಬೇಕು. ಸರ್ಕಾರ ಇದಕ್ಕೇನು ಹೊಸದಾಗಿ
ಬಂಡವಾಳ ಹೂಡಬೇಕಿಲ್ಲ.ತಾವು ಬೆಳೆದ ಬೆಳೆಯನ್ನು ಸರ್ಕಾರಿ ವ್ಯವಸ್ಥೆಯಲ್ಲಿಯೇ ಮಾರಾಟ ಮಾಡುತ್ತೇವೆಂಬ ಪ್ರಾಮಾಣಿಕತೆ ರೈತರಲ್ಲೂ ಬೇಕು. ಸರ್ಕಾರಗಳಿಗೂ ಬದ್ಧತೆ ಇರಬೇಕು. ಇದೆಲ್ಲಾ ಸಹಕಾರ ಸಂಘಗಳ ಮುಖೇನವೇ ಆಗಬೇಕು. ಈ ರೀತಿಯ ವ್ಯವಸ್ಥೆ ಬಂದಾಗ ರೈತರು ಕೂಡಾ ಮೊದಲೇ ಸಹಕಾರ ಸಂಸ್ಥೆಗಳಿಗೆ ತಾವು ಏನೆಲ್ಲಾ ಬೆಳೆಯುತ್ತಿದ್ದೇವೆ? ಯಾವ ಸಮಯಕ್ಕೆ ಎಷ್ಟು ಪ್ರಮಾಣ ಉತ್ಪಾದಿಸುತ್ತೇವೆ ಎಂಬ ಮುನ್ನಂದಾಜನ್ನು ಕೂಡಾ ಮೊದಲೇ ಹೇಳಿ ಉತ್ಪನ್ನ ತಂದು ಮಾರುವಂತಃ ಸನ್ನಿವೇಶ ಬರಬೇಕು.
ಸುಭಾಷ್ ಪಾಳೇಕರ್, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಹರಿಕಾರ, ಮಹಾರಾಷ್ಟ್ರ
“ಸರ್ಕಾರಗಳು, ಬೆಳೆಗಾರ ಮತ್ತು ಗ್ರಾಹಕರ ನಡುವೆ ಕೊಂಡಿಯಾಗಿ ಕೆಲಸ ಮಾಡಬೇಕು. ಅದು ಸಾಧ್ಯ. ಬಹಳ ದೊಡ್ಡ infrastructure ಸರ್ಕಾರಗಳು ಹೊಂದಿವೆ. ಹಳ್ಳಿಗಳಲ್ಲಿ ಬೆಳೆದ ಬೆಳೆಗಳನ್ನು ದಾಸ್ತಾನು ಕೇಂದ್ರಗಳಲ್ಲಿ ಶೇಖರಣೆ ಮಾಡಿ, ಅಲ್ಲಿಂದ ನಗರಗಳಿಗೆ ತಲುಪಿಸುವ ಮತ್ತು ಹಳ್ಳಿಯಿಂದ ದಿಲ್ಲಿಯವರೆಗೆ ಮನೆ ಮನೆಗೆ ಆಹಾರ ಉತ್ಪನ್ನಗಳನ್ನು ತಲುಪಿಸುವ ಕೆಲಸ ಆಗಬೇಕು. ಅದು ಆಗದೆ ಇರುವ ಕೆಲಸವೇನಲ್ಲ. ಈವರೆಗೆ ಸರ್ಕಾರಗಳು ಅಂಥ ಯೋಚನೆಯನ್ನು ಮಾಡಿಯೇ ಇಲ್ಲ. ಮುಂದಿನ ದಿನಗಳಲ್ಲಿ ಮಾಡಬಹುದಾ ನೋಡಬೇಕಿದೆ.”
ನಾಗೇಶ ಹೆಗಡೆ, ಹಿರಿಯ ಪತ್ರಕರ್ತರು, ಪರಿಸರ ತಜ್ಞರು
ನನ್ನ ಕನಸು ಏನೆಂದರೆ, ಗ್ರಾಮೀಣ ಆರ್ಥಿಕತೆ ಎಂಬುದು ಸ್ವಾವಲಂಬನೆಯ ಸುತ್ತವೇ ವಿಕಾಸವಾಗಬೇಕು. ತಮಿಳುನಾಡಿನ ಗ್ರಾಮ ಒಡಂತ್ತುರೈ ಜನರು ಸೌರವಿದ್ಯುತ್ ಉತ್ಪಾದನೆ ಮಾಡಿ, ತಮಗೆ ಬೇಕಿದ್ದಷ್ಟನ್ನು ಬಳಸಿಕೊಂಡು ಉಳಿದವನ್ನು ಮಾರಾಟ ಮಾಡುತ್ತಿದ್ದಾರೆ. ವರ್ಷಕ್ಕೆ 20 ಲಕ್ಷ ರೂಪಾಯಿಗಳ ಆದಾಯ ಅದರಿಂದಲೇ ಬರುತ್ತಿದೆ. ಅಲ್ಲಿ ನನಗೆ ಕಂಡ ವಿಶೇಷ ಏನೆಂದರೆ ಅದು ಜಾಗತಿಕ ಕಲ್ಯಾಣದ ಮಾರ್ಗವನ್ನು ತೋರುತ್ತಿದೆ. ಬರುತ್ತಿರುವ ಬಿಸಿ ಪ್ರಳಯದ ದಿನಗಳಲ್ಲಿ ಪೆಟ್ರೋಲ್ ಡೀಸೆಲ್ ಮೇಲಿನ ಅವಲಂಬನೆಯನ್ನು ಕಮ್ಮಿ ಮಾಡುತ್ತ ಹೋಗಬೇಕು ಎಂಬ ಆದರ್ಶದ ಬುನಾದಿ ಈ ಗ್ರಾಮ ಪಂಚಾಯ್ತಿಯಲ್ಲಿ ಕಾಣುತ್ತಿದೆ. ದೇಶಕ್ಕೆ ಬೇಕಿರುವ ಒಟ್ಟೂ ಪೆಟ್ರೋಲಿಯಂ ಉತ್ಪನ್ನಗಳ ಶೇಕಡಾ 82 ಪಾಲನ್ನು ನಾವು ವಿದೇಶಗಳಿಂದಲೇ ತರಿಸಿಕೊಳ್ಳುತ್ತಿದ್ದೇವೆ. ನಮಗೆ ಬೇಕಾದ ಈ ಮಹತ್ವದ ಶಕ್ತಿಮೂಲಗಳಿಗೆ ನಾವು ಡಾಲರ್ ಸುರಿದು ಅರಬ್ಬರನ್ನು ಶ್ರೀಮಂತ ಮಾಡುವ ಬದಲು ನಮ್ಮದೇ ಗ್ರಾಮಗಳಿಂದ ಜೈವಿಕ ಪೆಟ್ರೋಲ್, ಡೀಸೆಲ್ ಪಡೆಯುವಂತಾದರೆ ಮೇಲಲ್ಲವೆ? ಸೌರಶಕ್ತಿ, ಗಾಳಿಶಕ್ತಿಯಿಂದಷ್ಟೇ ಅಲ್ಲ, ಹಳ್ಳಿಗಳ ಬಂಜರು ಭೂಮಿಗಳಲ್ಲಿ, ಬಸವಳಿದ ಗುಡ್ಡಬೆಟ್ಟಗಳಲ್ಲಿ ಇಂಧನವನಗಳನ್ನು ಸೃಷ್ಟಿ ಮಾಡಿಕೊಂಡರೆ ಅದರಿಂದ ನಿರಂತರವಾಗಿ ಬಯೊಡೀಸೆಲ್, ಜೈವಿಕ ಪೆಟ್ರೋಲನ್ನೂ ಉತ್ಪಾದನೆ ಮಾಡಬಹುದು. ಅದು ಬತ್ತಿ ಹೋಗುವ ಪ್ರಶ್ನೆಯೇ ಇಲ್ಲ. ಕೃಷಿ ತ್ಯಾಜ್ಯಗಳಿಂದ, ಸೆಗಣಿ ಅನಿಲದಿಂದ ಶಕ್ತಿಯನ್ನು ಉತ್ಪಾದಿಸಬಹುದು.
ಈ ತಂತ್ರಜ್ಞಾನಗಳೆಲ್ಲ ಸಾಕಷ್ಟು ಸುಧಾರಿಸಿವೆಯಾದರೂ ಹಳ್ಳಿಗಳಲ್ಲಿ ಅವು ಜಾರಿಗೆ ಬಂದಿಲ್ಲ -ಏಕೆಂದರೆ ಅವೆಲ್ಲವನ್ನು ನಡೆಸಲು ಬೇಕಾದ ಯುವಕ ಯುವತಿಯರು ನಗರಗಳನ್ನು ಸೇರಿಕೊಂಡಿದ್ದರು. ಈಗ ಅವರೆಲ್ಲ ಹಿಂದಿರುಗಲು ಬಯಸಿದರೆ, ಶಕ್ತಿ ಉತ್ಪಾದನೆಗೆ ಒಂದು ಮೀಸಲು ಪಡೆಯೇ ಪಂಚಾಯ್ತಿ ಮಟ್ಟಕ್ಕೆ ಬಂದಿಳಿದಂತಾಗುತ್ತದೆ. ಅಮೀರ್ ಖಾನ್ ಆಯೋಜಿಸಿದ ವಾಟರ್ ಕಪ್ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಕಾಕಡ್‍ಧಾರಾ ಗ್ರಾಮದ ಮಾದರಿಯಲ್ಲಿ ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ಪಶುಸಂಗೋಪನೆ, ಡೇರಿ, ಮೀನುಗಾರಿಕೆ, ಕೋಳಿ ಸಾಕಣೆ, ಜೇನು ಸಾಕಣೆ- ಹೀಗೆ ನಾನಾ ಬಗೆಯ ವಿಕಾಸ ಮಾರ್ಗಗಳನ್ನು ಒಂದೊಂದಾಗಿ ಇಲ್ಲವೆ ಒಟ್ಟೊಟ್ಟಾಗಿ ರೂಪಿಸಬಹುದಲ್ಲ?
ಡಾ. ದೇವಿಂದರ್ ಶರ್ಮಾ. ಅಂತಾರಾಷ್ಟ್ರೀಯ ಖ್ಯಾತಿಯ ಕೃಷಿ ಮತ್ತು ಆಹಾರ ನೀತಿಗಳ ತಜ್ಞರು.
ಇದೊಂದು ಅನಿವಾರ್ಯ ವಿಶೇಷ ಸಂದರ್ಭ. ಇಡೀ ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿವೆ. ಕೃಷಿ ಕ್ಷೇತ್ರ ಮಾತ್ರ ಜಗತ್ತಿಗೆ ಜೀವಸೆಲೆಯಾಗಿ ನಿಂತಿದೆ. ಭಾರತದ ಆರ್ಥಿಕತೆಗೆ ಕೃಷಿ ಕ್ಷೇತ್ರ ಬಹಳ ಮುಖ್ಯ ಎಂದು ಮತ್ತೊಮ್ಮೆ ಸಾಭೀತಾಗಿದೆ. ನಗರ ಪ್ರದೇಶಗಳ ಹೋಟೆಲು, ರೆಸ್ಟೋರೆಂಟ್, ಢಾಬಾ ಗಳು ಕಳೆದ 60 ದಿನಗಳಿಂದ ಮುಚ್ಚಿದ್ದರೂ ಕೃಷಿ ಉತ್ಪನ್ನಗಳ ಸರಬರಾಜು ನಡೆಯುತ್ತಲೇ ಸಾಗಿದೆ. ಇಂಥದೊಂದು ಸಂಕಟದ ಪರಿಸ್ಥಿತಿಯಲ್ಲಿ ರೈತರಿಗೆ ತತ್‍ಕ್ಷಣದ ಪರಿಹಾರ ಅಗತ್ಯ. ಅವರಿಗೆ ನೇರ ಆದಾಯದ ನೆರವು ಬೇಕು. ಅವರ ಕೈಯಲ್ಲಿ ಹೆಚ್ಚಿನ ದುಡ್ಡಿರಬೇಕು. ಹಾಗಾಗಿ ಪ್ರತಿ ರೈತನಿಗೆ, ಗುತ್ತಿಗೆ ರೈತನೂ ಒಳಗೊಂಡಂತೆ ತಲಾ 10,000 ರೂಪಾಯಿ ಹಣ ನೀಡಬೇಕು. ಇದಕ್ಕಾಗಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಹಣ ವಿನಿಯೋಗಿಸಬಾರದು. ಈಗಿನಿಂದ ಒಂದು ವರ್ಷದ ಅವಧಿಯಲ್ಲಿ ಯಾವುದೇ ಸಾಲದ ಕಂತುಗಳಿಗೆ ರೈತರನ್ನು ಎಳೆದಾಡಬಾರದು. ಇದೇ ಅವಧಿಯಲ್ಲಿ ಬಡ್ಡಿಯನ್ನು ಮನ್ನಾ ಮಾಡಬೇಕು. ಅನೇಕ ವಲಸೆ ಕಾರ್ಮಿಕರು ಹಳ್ಳಿಗಳು ಸೇರಿರುವ ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರವನ್ನು ಭಲಪಡಿಸಬೇಕಿದೆ. ಇದೀಗ ಹೆಚ್ಚುವರಿ 40,000 ಕೋಟಿ ರೂಪಾಯಿ ಕೊಡುತ್ತಿರುವುದನ್ನು ಸ್ವಾಗತ ಮಾಡುತ್ತಲೇ ಕನಿಷ್ಟ 200 ದಿನಗಳ ಉದ್ಯೋಗ ಖಾತ್ರಿ ಎಲ್ಲರಿಗೂ ಒದಗಿಸಬೇಕು.
ರೈತರಿಗೆ ದೇವಿಂದರ್ ಶರ್ಮಾ ಕಿವಿಮಾತು
ನನ್ನ ರೈತ ಬಂಧುಗಳಿಗೆ ಹೇಳುವ ಮೊದಲ ಮಾತೆಂದರೆ ನಿಮಗೆ ದುರಾಸೆ ಬೇಡ. ಹೆಚ್ಚಿನ ಉದ್ಪಾದನೆಯೆಂಬ ಓಟದಲ್ಲಿ ನೀವು ಮುನ್ನುಗ್ಗಬೇಡಿ. ನಿಮ್ಮ ಬೆಳೆಯ ಉತ್ಪಾದಕತೆ ಹೆಚ್ಚಾದಲ್ಲಿ ಹೆಚ್ಚಿನ ಆದಾಯ ಬರುವುದೆಂದು ಹೇಳಿ ನಿಮ್ಮನ್ನು ದಿಕ್ಕು ತಪ್ಪಿಸಲಾಗುತ್ತಿದೆ.
ನೀವು ಬಳಸುತ್ತಿರುವ ರಸಾಯನಿಕ ಗೊಬ್ಬರ ಹಾಗೂ ರಸಾಯನಿಕ ಕೀಟನಾಶಕಗಳು ಪರಿಸರಕ್ಕೆ ಮಾರಕ ಎಂಬುದು ನಿಮಗೇ ಗೊತ್ತಿದೆ. ಬೆಳೆ ಉತ್ಪಾದನಾ ವೆಚ್ಚ ಹೆಚ್ಚಾಗಿರುವ ಕಾರಣ ನಿಮ್ಮ ಆದಾಯ ಕಡಿಮೆ ಆಗಿದೆ ಎಂಬ ಸತ್ಯವೂ ನಿಮಗೆ ಗೊತ್ತಿದೆ. ಬಹುಸಂಖ್ಯಾತ ರೈತರು ಸಾಲಗಳಲ್ಲಿ ಬದುಕುತ್ತಿದ್ದೀರಿ, ಹೀಗೆ ಬದುಕುವುದು ನರಕದಲ್ಲಿ ಬದುಕಿದಂತೆ ಎಂಬ ಸತ್ಯ ನೀವು ಅರಿತಿದ್ದೀರಿ. ಪ್ರತಿ ವರ್ಷ ನಿಮ್ಮ ಸಾಲಗಳು ಏರುತ್ತಲೇ ಸಾಗಿ ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದೀರಿ. ರೈತರ ಆತ್ಮಹತ್ಯೆಗಳು ಸಾಲು ಸಾಲಾಗಿ ನಡೆಯುತ್ತಲೇ ಇವೆ. ನಿಮ್ಮ ನೆರೆಹೊರೆಯ ರೈತ ಸಾಲದ ಬಾದೆಯಿಂದ ಆತ್ಮಹತ್ಯೆಗೆ ಶರಣಾಗಿದ್ದನ್ನು ನೀವು ನೋಡುತ್ತಲೇ ಇದ್ದೀರಿ.
ಪಂಜಾಬ್ ರಾಜ್ಯದ ಉದಾಹರಣೆ ತೆಗೆದುಕೊಳ್ಳಿ. ಇಲ್ಲಿ ಶೇಕಡಾ 98 ರಷ್ಟು ಕೃಷಿ ಭೂಮಿಗೆ ಖಾತ್ರಿಯಾದ ನೀರಾವರಿ ಸೌಲಭ್ಯವಿದೆ. ಅಂದರೆ ಬೆಳೆವ ಪ್ರತಿ ಕಾಳಿಗೂ ನೀರಾವರಿ ಸೌಲಭ್ಯವಿದೆ. ಉತ್ಪಾದಕತೆಯಲ್ಲಿ (ಭತ್ತ, ಗೋಧಿ, ಜೋಳ) ವಿಶ್ವದಲ್ಲಿಯೇ ಅತಿ ಹೆಚ್ಚು ಪ್ರಮಾಣವನ್ನು ಪಂಜಾಬ್ ದಾಖಲಿಸಿದೆ. ಎಲ್ಲಾ ರಾಜ್ಯಗಳು ಪಂಜಾಬ್‍ನತ್ತ ಮುಖ ಮಾಡುತ್ತವೆ. ಆದರೆ ಪಂಜಾಬ್ ರೈತರ ಬಗ್ಗೆ ಅತಿ ಕಡಿಮೆ ಹೇಳಲಾದ ಸತ್ಯವೊಂದಿದೆ. ಇಲ್ಲಿ ರೈತರ ಆತ್ಮಹತ್ಯೆಗಳು ದುಪ್ಪಟ್ಟಾಗಿವೆ. 2000 ದಿಂದ 2015 ರ ಅವಧಿಯಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರ ಆತ್ಮಹತ್ಯೆ ಪ್ರಕರಣಗಳು 16,600.
ನೀವು ಇದರಿಂದ ಪಾಠ ಕಲಿಯುವ ಸಮಯ. ನಿಮ್ಮ ಅಕ್ಕಪಕ್ಕದ ರೈತ ಹೆಚ್ಚಿನ ಪ್ರಮಾಣದ ಗೊಬ್ಬರ ಹಾಗೂ ಕೀಟನಾಶಕ ಸಿಂಪಡಿಸುತ್ತಿದ್ದಾನೆ ಎಂದು ಅವನೊಂದಿಗೆ ಸ್ಪರ್ಧೆಗೆ ಇಳಿಯಬೇಡಿ. ಸುರಕ್ಷಿತ ರೀತಿಯಲ್ಲಿ ಆಹಾರ ಉತ್ಪಾದಿಸಿ. ನ್ಯಾಯಯುತ ಬೆಲೆ ಪಡೆಯುವುದು ನಿಮ್ಮ ಗುರಿಯಾಗಬೇಕು.
ತಾರತಮ್ಯ:
1970-2015 ರ 45 ವರ್ಷದ ಅವಧಿಯಲ್ಲಿ ಸರ್ಕಾರಿ ನೌಕರರ ಸಂಬಳ 120 ರಿಂದ 150 ಪಟ್ಟು ಹೆಚ್ಚಾಗಿದೆ. ಶಾಲಾ ಶಿಕ್ಷಕರು ಮತ್ತು ಪ್ರೊಫೆಸರ್‍ಗಳ ಬೇಸಿಕ್ ಸಂಬಳ 150-170 ಪಟ್ಟು ಹೆಚ್ಚಾಗಿದೆ. ಆದರೆ ಇದೇ 45 ವರ್ಷ ಅವಧಿಯಲ್ಲಿ ಗೋಧಿ ಬೆಲೆ ಕೇವಲ 19 ಪಟ್ಟು ಹೆಚ್ಚಿದೆ. ಇದೇ ಪ್ರಮಾಣದಲ್ಲಿ ಸರ್ಕಾರಿ ನೌಕರರ, ಶಿಕ್ಷಕರ, ವಿಶ್ವವಿದ್ಯಾಲಯಗಳ ಪ್ರೊಫೆಸರ್‍ಗಳ ಸಂಬಳ ಹೆಚ್ಚಾಗಿದ್ದಲ್ಲಿ ಅವರಲ್ಲಿ ಅನೇಕರು ಇಷ್ಟೊತ್ತಿಗೆ ಕೆಲಸ ಬಿಡುತ್ತಿದ್ದರು. ಕೆಲವರು ಆತ್ಮಹತ್ಯೆ ಮಾಡಿಕೊಂಡಿರುತ್ತಿದ್ದರು.
ಇವಿಷ್ಟು ನನ್ನ ಸಂದರ್ಶನದಲ್ಲಿ ಪ್ರಭುತ್ವಕ್ಕೆ ಹಾಗೂ ರೈತರಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ರೈತ ಮುಖಂಡರು ಹಾಗೂ ಚಿಂತಕರಿಂದ ಬಂದಿರುವ ಸಲಹೆಗಳಲ್ಲಿ ಅತ್ಯಂತ ಪ್ರಮುಖವಾದವು.
ಇದೀಗ ಕರ್ನಾಟಕ ರಾಜ್ಯ ಕರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ರೈತರಿಗೆ ಏನೆಲ್ಲಾ ಕೊಡುಗೆ ನೀಡಿದೆ ಎಂಬುದನ್ನು ಪರಿಶೀಲಿಸೋಣ.
* 10,00000 ಮೆಕ್ಕೆ ಜೋಳ ಬೆಳೆಗಾರರಿಗೆ ತಲಾ 5000 ರೂಪಾಯಿಗಳನ್ನು ನೀಡುವ ಮಹತ್ವದ ತೀರ್ಮಾನ ಕೈಗೊಂಡಿದೆ. ಇದಕ್ಕೆ ಸುಮಾರು 500 ಕೋಟಿ ರೂ ವೆಚ್ಚ. ಕೆ.ಎಂ.ಎಫ್. ನಿಂದ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.
* ಹಣ್ಣು ಹಾಗೂ ತರಕಾರಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 15,000 ರೂಪಾಯಿಗಳಂತೆ ಒಟ್ಟು 137 ಕೋಟಿ ರೂ.ಗಳ ಪರಿಹಾರ.
* ಲಾಟ್‍ಡೌನ್‍ನಿಂದ ಹೂವು ಮಾರಟವಾಗದೆ ನಷ್ಟ ಅನುಭವಿಸಿದ ರೈತರಿಗೆ ಗರಿಷ್ಟ ಒಂದು ಹೆಕ್ಟೇರ್‍ಗೆ ಮಿತಿಗೊಳಪಟ್ಟು 25,000 ರೂ.ಗಳ ಪರಿಹಾರ.
ಇವಿಷ್ಟೂ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೊಳಗಾದ ರೈತರಿಗೆ ಕರ್ನಾಟಕ ಸರ್ಕಾರ ನೀಡಿದ ಪ್ರಮುಖ ಸವಲತ್ತುಗಳು.


