ಜೂನ್ 25 ರಿಂದ ಆರಂಭವಾಗಲಿರುವ ಎಸ್ಎಸ್ಎಲ್‌ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳೇ ಕುಡಿಯುವ ನೀರು ತಂದರೆ ಒಳ್ಳೆಯದು. ಅದರಲ್ಲೂ ಬಿಸಿನೀರು ತಂದರೆ ಉತ್ತಮ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸಲಹೆ ನೀಡಿದ್ದಾರೆ.
ತುಮಕೂರಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಪರೀಕ್ಷಾ ಕೇಂದ್ರಗಳಲ್ಲೂ ಬಿಸಿನೀರು ಇರುತ್ತದೆ. ಆದರೆ ಕೊರೊನಾ ಸೋಂಕು ಭಯದ ಕಾರಣಕ್ಕೆ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ ನೀರು ಕುಡಿದ ನಂತರ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಇದು ಸ್ವಲ್ಪ ಕಷ್ಟವಾಗಬಹುದು. ಹಾಗಾಗಿ ವಿದ್ಯಾರ್ಥಿಗಳೇ ಮನೆಯಿಂದ ನೀರು ತಂದರೆ ಉತ್ತಮ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಬಿಡಲು ಖಾಸಗಿ ಶಾಲೆಗಳ ಬಸ್‌ಗಳನ್ನು ಬಳಸಿಕೊಳ್ಳಲು ಯೋಜಿಸಲಾಗುತ್ತಿದೆ. ಹೇಗಿದ್ದರೂ 1 ರಿಂದ 9ನೇ ತರಗತಿವರೆಗೆ ಪರೀಕ್ಷೆಗಳು ಇಲ್ಲದಿರುವುದರಿಂದ ಬಸ್‌ಗಳು ಲಭ್ಯವಿರುತ್ತವೆ. ಆ ಬಸ್‌ಗಳಿಗೆ ಡೀಸೆಲ್ ಮತ್ತು ಪೆಟ್ರೊಲ್ ವೆಚ್ಚವನ್ನು ಶಿಕ್ಷಣ ಇಲಾಖೆಯಿಂದ ಭರಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ವಾಹನಗಳನ್ನು ಬಳಸಿಕೊಳ್ಳುವ ಸಂಬಂಧ ಜೂನ್ 1ರಂದು ಸಾರಿಗೆ ಇಲಾಖೆಯ ಅಧಿಕಾರಿಗಳ ಸಭೆ ಕರೆದಿದೆ. ಪ್ರತಿ ವರ್ಷ ವಾಹನಗಳನ್ನು ಆರ್.ಟಿ.ಒ ಇಲಾಖೆ ಒದಗಿಸುತ್ತಿತ್ತು. ಇದರ ಜೊತೆ ಪೊಲೀಸ್ ಇಲಾಖೆಯ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡುವಂತೆ ಸೂಚಿಸಲಾಗುವುದು ಎಂದರು.
ಭಾರತ್ ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು 75 ಲಕ್ಷ ಮಾಸ್ಕ್‌ಗಳನ್ನು ಕೈಯಾರ ತಯಾರು ಮಾಡಿದ್ದು ಅವುಗಳನ್ನು ನಮಗೆ ನೀಡಲಾಗಿದೆ. ಅದರಲ್ಲಿ ವಿದ್ಯಾರ್ಥಿಗಳ ಶ್ರಮವಿದೆ. ಉತ್ತಮ ಗುಣಮಟ್ಟದ ಮಾಸ್ಕ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ 8.48 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಈಗಿನ ಸನ್ನಿವೇಶದಲ್ಲಿ ಇದು ಸಾಹಸದ ಕೆಲಸ. ಮಕ್ಕಳ ಸುರಕ್ಷತೆ ಮತ್ತು ಆತ್ಮವಿಶ್ವಾಸ ಹೆಚ್ಚಿಸಲು ಪೋಷಕರು ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ವಾಟ್ಸಪ್ ಸಂದೇಶಗಳನ್ನು ನಂಬಬಾರದು. ಶಿಕ್ಷಣ ಇಲಾಖೆ ನೀಡುವ ಮಾಹಿತಿಗೆ ಹೆಚ್ಚು ಒತ್ತು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಈ ನಡುವೆ ದಿನೇ ದಿನೇ ಕೊರೊನಾ ಸೋಂಕಿತರ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವುದರಿಂದ ಪರೀಕ್ಷೆ ನಡೆಸುವುದು ಬೇಡ ಎಂದು ಚಿಂತಕರು, ಶಿಕ್ಷಣ ತಜ್ಞರು ಮತ್ತು ವಿದ್ಯಾರ್ಥಿ ಮುಖಂಡರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇನ್ನು ಹಲವು ಚಿಂತಕರು ಸದ್ಯಕ್ಕೆ ಶಿಕ್ಷಣಕ್ಕಿಂತ ಆರೋಗ್ಯ ರಕ್ಷಿಸುವುದಕ್ಕಾಗಿ ಸರ್ಕಾರ ಗಮನ ಕೊಡಬೇಕಿದೆ. ಈ ಕುರಿತು ಸುರೇಶ್ ಕುಮಾರ್ ರವರು ಚಿಂತಸಬೇಕು ಎಂದು ಆಗ್ರಹಿಸಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ: ಇಂದಿನ ಪರಿಸ್ಥಿತಿಯಲ್ಲಿ SSLC ಪರೀಕ್ಷೆ ನಡೆಸುವುದು ಸೂಕ್ತವಲ್ಲ : ಶಿಕ್ಷಣ ತಜ್ಞರು, ಹೋರಾಟಗಾರರ ಅಭಿಮತ


