Homeಕರ್ನಾಟಕಕೊರೋನಾ ಕಾಲದ ಭ್ರಷ್ಟಾಚಾರದ ತನಿಖೆಗೆ ಸ್ಪೀಕರ್ ಅಡ್ಡಿ: ದಾಖಲೆಗಳೇನು ಹೇಳುತ್ತವೆ?

ಕೊರೋನಾ ಕಾಲದ ಭ್ರಷ್ಟಾಚಾರದ ತನಿಖೆಗೆ ಸ್ಪೀಕರ್ ಅಡ್ಡಿ: ದಾಖಲೆಗಳೇನು ಹೇಳುತ್ತವೆ?

- Advertisement -
- Advertisement -

10 ಪಸೆರ್ಂಟ್ ಸರ್ಕಾರ. ಇದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪ್ರಮುಖ ಘೋಷಣಾ ವಾಕ್ಯವಾಗಿತ್ತು. ಬಿಜೆಪಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಹೋದಲ್ಲಿ ಬಂದಲ್ಲೆಲ್ಲಾ 10 ಪರ್ಸೆಂಟ್ ಸರ್ಕಾರ ಎಂದು ಕಳೆದ ಕಾಂಗ್ರೆಸ್ ಸರ್ಕಾರವನ್ನು ಹೀನಾಮಾನವಾಗಿ ನಿಂದಿಸಿದ್ದರು. ಚುನಾವಣಾ ಫಲಿತಾಂಶದಲ್ಲಿ ಇದರ ಫಲವನ್ನೂ ಉಂಡಿದ್ದರು. ಆದರೆ, ಸಿದ್ದರಾಮಯ್ಯನವರ ಸರ್ಕಾರವನ್ನು ಹೀಗೆ ಮೂದಲಿಸಿದ್ದ ಬಿಜೆಪಿ ನಾಯಕರು ಇದೀಗ ಕೊರೋನಾದಂತಹ ಸಂಕಷ್ಟದ ಸಂದರ್ಭದಲ್ಲೂ ಕೊರೋನಾ ಹೆಸರಿನಲ್ಲೇ ಭ್ರಷ್ಟಾಚಾರಕ್ಕೆ ಮುಂದಾಗಿದ್ದಾರೆಂಬುದಕ್ಕೆ ದಾಖಲೆಗಳು ಹೊರಬರುತ್ತಿವೆ. ದುರಂತವೆಂದರೆ, ಅದರ ಕುರಿತ ತನಿಖೆಗೆ ಸ್ವತಃ ವಿಧಾನಸಭಾ ಸ್ಪೀಕರ್ ಕಾಗೇರಿಯವರು ಅಡ್ಡ ನಿಂತಿರುವುದು.

ಕೊರೋನಾ ವೈರಸ್ ರಾಜ್ಯದಲ್ಲಿ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಕರ್ನಾಟಕ ಸರ್ಕಾರ ಪಿಪಿಇ ಕಿಟ್, ವೆಂಟಿಲೇಟರ್, ಸ್ಯಾನಿಟೈಜರ್ ಹಾಗೂ ಮಾಸ್ಕ್‍ಗಳನ್ನು ಖರೀದಿ ಮಾಡಲು ಮುಂದಾಗಿತ್ತು. ವೈದ್ಯರ ಮತ್ತು ರೋಗಿಗಳ ಸುರಕ್ಷತೆಯ ನಿಟ್ಟಿನಲ್ಲಿ ಇದು ನಿಜಕ್ಕೂ ಅಗತ್ಯವಾದ ಕ್ರಮ ಹೌದು. ಆದರೆ. ಇದರಲ್ಲೂ ಭ್ರಷ್ಟಾಚಾರದ ಕಮಟು ವಾಸನೆ ಇದೀಗ ಮೂಗಿಗೆ ಬಡಿಯುತ್ತಿದೆ.

ಕರ್ನಾಟಕ ರಾಷ್ಟ್ರ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎನ್.ದೀಪಕ್ ಅವರು ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ದೂರು ನೀಡಿದ್ದರು. ಇದಲ್ಲದೇ ದಿ ಫೈಲ್ ಜಾಲತಾಣದಲ್ಲೂ ಈ ಅಕ್ರಮವು ವರದಿಯಾಗಿತ್ತು.

ಇದೇ ಕಾರಣಕ್ಕೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿರುವ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಅವ್ಯವಹಾರದ ತನಿಖೆಗೆ ಆದೇಶಿಸಿದ್ದರು. ಈ ಮೂಲಕ ಭ್ರಷ್ಟಾಚಾರವನ್ನು ಬಯಲಿಗೆ ಎಳೆಯಲು ಮುಂದಾಗಿದ್ದರು. ಆದರೆ, ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಈ ತನಿಖೆಗೆ ತಡೆ ನೀಡಿದ್ದಾರೆ. ಈ ಮೂಲಕ ವೈದ್ಯ ಸಲಕರಣೆಗಳ ಖರೀದಿಯಲ್ಲಿ ಅವ್ಯವಹಾರವಾಗಿರುವುದನ್ನು ಒಪ್ಪಿಕೊಂಡಂತಾಗಿದೆ.

ಹಾಗಾದರೆ ರಾಜ್ಯ ಸರ್ಕಾರ ಕೊರೋನಾ ಹೆಸರಿನಲ್ಲಿ ಎಲ್ಲೆಲ್ಲಿ ಹೇಗೆ ಭ್ರಷ್ಟಾಚಾರ ನಡೆಸಿದೆ? ಈ ಭ್ರಷ್ಟಾಚಾರ ತನಿಖೆಗೆ ಸ್ವತಃ ವಿಧಾನಸಭಾಧ್ಯಕ್ಷರಾಗಿರುವ ಕಾಗೇರಿ ಹಿಂದೇಟು ಹಾಕುತ್ತಿರುವುದು ಏಕೆ? ಇದರ ಒಳ ಮರ್ಮವೇನು? ಇದರ ಹಿಂದೆ ಯಾರಿದ್ದಾರೆ? ಸಿಎಂ ಯಡಿಯೂರಪ್ಪನವರು ಎಲ್ಲವೂ ಗೊತ್ತಿದ್ದೂ ಸುಮ್ಮನಿರುವುದೇಕೆ? ಇಲ್ಲಿದೆ ಸಂಪೂರ್ಣ ವರದಿ.

ತುರ್ತು ಸಂದರ್ಭವನ್ನು ಹೀಗೂ ದುರ್ಬಳಕೆ ಮಾಡಿಕೊಳ್ಳಬಹುದೇ?

ಕಾನೂನಿನ ಪ್ರಕಾರ ಸರ್ಕಾರ ಯಾವುದೇ ಇಲಾಖೆ ಒಂದು ವಸ್ತುವನ್ನು ಖರೀದಿ ಮಾಡುವ ಮುನ್ನ ಟೆಂಡರ್ ಕರೆದು ನೋಟಿಫಿಕೇಶ್ ಮಾಡಿ ನಂತರ ಅದನ್ನು ಖರೀದಿಸುವುದು ವಾಡಿಕೆ. ಆದರೆ, ಕೊರೋನಾ ತುರ್ತು ಸಂದರ್ಭದಲ್ಲಿ ಯಾವುದೇ ಟೆಂಡರ್ ಕರೆಯದೆ ಸಂಬಂಧ ಪಟ್ಟ ಇಲಾಖೆ ನೇರವಾಗಿ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಕರ್ನಾಟಕ ಡ್ರಗ್ಸ್ ಲಾಜಿಸ್ಟಿಕ್ಸ್ ಸಂಸ್ಥೆಗೆ (ಕೆಡಿಎಲ್‍ಡಬ್ಲ್ಯೂಎಸ್) ಸೆಕ್ಷನ್ 4ರ ಅನ್ವಯ ಸರ್ಕಾರ ವಿನಾಯಿತಿ ನೀಡಿತ್ತು.

ಇದನ್ನು ಆಧರಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯಕೀಯ ಸಾಮಗ್ರಿಗಳನ್ನು ಖರೀದಿಗೆ ಸಂಬಂಧಿಸಿದಂತೆ ಮಹತ್ವದ ಅಧಿಸೂಚನೆ ಹೊರಡಿಸಿತ್ತು. ಆದರೆ, ಈ ಅಧಿಸೂಚನೆ ಹಣಬಾಕರಿಗೆ ಜೇಬು ತುಂಬಿಸಲಿದೆ ಎಂದು ಆಗ ಯಾರೂ ಊಹಿಸಿರಲಿಲ್ಲ.
ಅಸಲಿಗೆ ಇಂತಹ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆ ನೇರವಾಗಿ ವೈದ್ಯಕೀಯ ಸಲಕರಣೆಗಳ ತಯಾರಿಕಾ ಕಂಪೆನಿಗಳಿಂದ ವಸ್ತುಗಳನ್ನು ಖರೀದಿ ಮಾಡಿದರೆ ಅಗ್ಗದ ಬೆಲೆಗೆ ವಸ್ತುಗಳ ಲಭ್ಯವಾಗುತ್ತದೆ. ಆದರೆ, ಇಂತಹ ಕೆಲಸಕ್ಕೆ ಮುಂದಾಗದ ಸರ್ಕಾರ ಮಹಾರಾಷ್ಟ್ರ ಮೂಲದ ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್ ಹಾಗೂ ಜಯರಾಮ್ ಟೆಕ್ ಎಂಬ ಎರಡು ಕಂಪೆನಿಗಳ ಮೂಲಕ ಪಿಪಿಇ ಕಿಟ್ ಸೇರಿದಂತೆ ಎಲ್ಲಾ ರೀತಿಯ ವೈದ್ಯಕೀಯ ವಸ್ತುಗಳನ್ನು ಖರೀದಿಸಲು ಮುಂದಾಗಿದೆ. ಈ ಮೂಲಕ ಉದ್ದೇಶಪೂರ್ವಕವಾಗಿಯೇ ಭ್ರಷ್ಟಾಚಾರ ಎಸಗಿದ್ದಾರೆಂಬ ಅನುಮಾನಕ್ಕೆ ಕಾರಣರಾಗಿದ್ದಾರೆ.

ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್ ಎಂಬ ಕಂಪೆನಿ ಮೂಲತಃ ವ್ಯವಸಾಯ ಉತ್ಪನ್ನಗಳ ಮಾರಾಟ ಕಂಪೆನಿಯಾಗಿದ್ದರೆ, ಬೆಂಗಳೂರು ಮೂಲದ ಜಯರಾಮ್ ಟೆಕ್ ಸಾಫ್ಟ್‍ವೇರ್ ಮತ್ತು ವೆಬ್‍ಸೈಟ್ ಡೆವಲಪರ್ ಕಂಪೆನಿ. ಹೀಗೆ ವೈದ್ಯಕೀಯ ಸಾಮಗ್ರಿಗಳ ಕುರಿತು ಗಂಧಗಾಳಿ ಗೊತ್ತಿಲ್ಲದ ಎರಡು ಕಂಪೆನಿಗಳ ಮೂಲಕ ಸುರಕ್ಷತಾ ಸಾಮಗ್ರಿಗಳನ್ನು ಖರೀದಿ ಮಾಡಿದರೆ ಅದರ ಗುಣಮಟ್ಟ ಹೇಗಿರಬಹುದು? ಒಮ್ಮೆ ನೀವೆ ಊಹಿಸಿಕೊಳ್ಳಿ.

ಕೊಳ್ಳೆ ಹೊಡೆಯುತ್ತಿದ್ದಾರೆ ಖಜಾನೆ ಹಣ

ಕೊರೋನಾ ಪರಿಸ್ಥಿತಿಯನ್ನು ನಿಭಾಯಿಸಲು ಈವರೆಗೆ ರಾಜ್ಯಕ್ಕೆ ಕೇಂದ್ರದಿಂದ ಗಣನೀಯ ಪ್ರಮಾಣದ ಹಣಕಾಸು ಸೌಲಭ್ಯ ಸಿಕ್ಕಿಲ್ಲ. ಆದರೆ, ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ನಿಧಿಗೆ ಈ ವರ್ಷ ಕೇಂದ್ರದಿಂದ 334 ಕೋಟಿ ರೂಪಾಯಿ ಅನುದಾನ ಬಂದಿದೆ. ಅಲ್ಲದೆ, ಈ ಅನುದಾನದ ಹಣದಲ್ಲಿ ಕೊರೋನಾ ಬಿಕ್ಕಟ್ಟಿಗೆ ಶೇ.25 ರಷ್ಟು ವೆಚ್ಚ ಮಾಡಬಹುದು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

ಅಂದರೆ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ನಿಧಿಯಿಂದ 84 ಕೋಟಿ ಹಣದಲ್ಲಿ ಸರ್ಕಾರ ವೈದ್ಯಕೀಯ ಉಪಕರಣಗಳ ಖರೀದಿಗೆ ನಿರ್ಧಾರ ಮಾಡಿತ್ತು. ಕರೋನಾ ವಾರಿಯರ್ಸ್‍ಗೆ ಪಿಪಿಇ ಕಿಟ್ (Personal protective equipment), N – 95 ಮಾಸ್ಕ್, ಸ್ಯಾನಿಟೈಸರ್, ವೆಂಟಿಲೇಟರ್, ರ್ಯಾಪಿಡ್ ಟೆಸ್ಟ್‍ಕಿಟ್‍ಅನ್ನು ತುರ್ತು ಆದ್ಯತೆಯಲ್ಲಿ ಖರೀದಿ ಮಾಡಿತ್ತು. ಆದರೆ, ಈ ಉಪಕರಣ ಖರೀದಿ ಸೇರಿದಂತೆ ಎಲ್ಲಾ ಖರ್ಚು ವೆಚ್ಚಗಳನ್ನು ಬೇಕಾಬಿಟ್ಟಿಯಾಗಿ ಮಾಡಲಾಗಿದೆ. ಲೆಕ್ಕ ತೋರಿಸುತ್ತಿರುವುದೇ ಒಂದು. ಆದರೆ ನಡೆಯುತ್ತಿರುವುದೇ ಒಂದು ಎಂಬ ಆರೋಪ ಬಲವಾಗಿ ಕೇಳಿ ಬರುತ್ತಿದೆ. ಇಷ್ಟಕ್ಕೂ ಹಣವನ್ನು ಹೇಗೆ ಕೊಳ್ಳೆ ಹೊಡೆಯಲಾಗಿದೆ ಗೊತ್ತಾ?

ಹೇಗೆ ನಡೆಯುತ್ತಿದೆ ಈ ಕೊಳ್ಳೆ?:

1) ರಾಜ್ಯ ಸರ್ಕಾರ ಪಿಪಿಇ ಕಿಟ್‍ಗಳನ್ನು ಮಹಾರಾಷ್ಟ್ರದ ಅಮರಾವತಿ ಮೂಲದ ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್ ಮೂಲಕ ಖರೀದಿ ಮಾಡಿದೆ. ಮೂಲತಃ ಕೃಷಿ ಉಪಕರಣವನ್ನು ಮಾರಾಟ ಮಾಡುವ ಈ ಕಂಪೆನಿಯಿಂದ ಮೊದಲು ಖರೀದಿ ಮಾಡಿದ್ದ ಪಿಪಿಇ ಕಿಟ್ ದರಕ್ಕೂ, ಎರಡನೇ ಬಾರಿ ಖರೀದಿಸಿದ ದರಕ್ಕೂ ಅಜಗಜಾಂತರ ವ್ಯತ್ಯಾಸ ಇದೆ.

2) ಚೀನಾದ ಕಂಪೆನಿಯಿಂದ ಕೊರೋನಾ ಪರೀಕ್ಷಾ ಕಿಟ್ ಖರೀದಿ ಮಾಡಲಾಗಿದೆ. ಈ ಕಿಟ್‍ಗಳು ಕಳಪೆ ಎಂಬ ಕಾರಣಕ್ಕೆ ರಾಜಸ್ಥಾನ ಸರ್ಕಾರ ಅವುಗಳ ಬಳಕೆಯನ್ನೇ ನಿಲ್ಲಿಸಿತ್ತು. ಆದರೆ, ಈ ವಿಚಾರ ಬಹಿರಂಗವಾದ ನಂತರವೂ ಸಹ ಕೆಡಿಎಲ್‍ಡಬ್ಲ್ಯೂಎಸ್ ಇದೇ ಕಂಪೆನಿಯಿಂದ ಕೊರೋನಾ ಪರೀಕ್ಷಾ ಕಿಟ್‍ಗಳನ್ನು ಖರೀದಿ ಮಾಡಿದೆ. ಪರಿಣಾಮ ಕೆಡಿಎಲ್‍ಡಬ್ಲ್ಯೂಎಸ್ ಮಾಡಿರುವ ಎಡವಟ್ಟಿನಿಂದಾಗಿ ರಾಜ್ಯದಲ್ಲಿ ಕೊರೋನಾ ಪರೀಕ್ಷೆಗಳು ವ್ಯಾಪಕವಾಗಿ ನಡೆಯಲಿಲ್ಲ. ಇದರಿಂದ ರಾಜ್ಯದ ಬೊಕ್ಕಸದ ಹಣವೂ ಲೂಟಿಕೋರರ ಪಾಲಾಗಲು ಅನುವು ಮಾಡಿಕೊಟ್ಟಿದೆ.

3) ಕೇರಳ, ಒಡಿಶಾ ಮತ್ತು ರಾಜಸ್ಥಾನ ಸರ್ಕಾರ ಕಪ್ಪು ಪಟ್ಟಿಗೆ ಸೇರಿಸಿರುವ ಗುಜರಾತ್ ಮೂಲದ ಕಂಪೆನಿಯಿಂದ 4 ಕೋಟಿ ಮೌಲ್ಯದ ಗ್ಲೂಕೋಸ್ ಖರೀದಿ ಮಾಡಲಾಗಿದೆ. ಈ ಹಿಂದೆ ಸಮಯಕ್ಕೆ ಸರಿಯಾಗಿ ಗ್ಲೂಕೋಸ್ ಪೂರೈಕೆ ಮಾಡಿಲ್ಲ ಎಂಬ ಕಾರಣಕ್ಕೆ ಕೆಡಿಎಲ್‍ಡಬ್ಲ್ಯೂಎಸ್ ಸಂಸ್ಥೆಯೇ ಆ ಕಂಪನಿಗೆ ನೋಟಿಸ್ ನೀಡಿ ಕಪ್ಪುಪಟ್ಟಿಗೆ ಸೇರಿಸುವ ಎಚ್ಚರಿಕೆ ನೀಡಿತ್ತು. ಈಗ ಅದೇ ಕಂಪನಿಯಿಂದ ಗ್ಲೂಕೋಸ್ ಖರೀದಿ ಮಾಡಿರುವುದು ಮತ್ತು ಕಡಿಮೆ ದರ ನಮೂದಿಸಿದ್ದ ಎರಡು ಕಂಪನಿಗಳನ್ನು ಕೈಬಿಟ್ಟು ಹೆಚ್ಚು ದರ ನಮೂದಿಸಿದ್ದ ಕಂಪನಿಯಿಂದ ಖರೀದಿಸಲಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

4) ಕೊರೊನಾ ಚಿಕಿತ್ಸೆಗೆ ಅಗತ್ಯವಾದ ವೆಂಟಿಲೇಟರ್‍ಗಳನ್ನು ದೆಹಲಿ ಸಂಸ್ಥೆಯೊಂದರಿಂದ 3.88 ಕೋಟಿ ಮೊತ್ತಕ್ಕೆ ಖರೀದಿ ಮಾಡಲಾಗಿದೆ. ವಿಪರ್ಯಾಸ ಎಂದರೆ, 2007ರಲ್ಲೇ ಆ ಸಂಸ್ಥೆಯೂ ಇವುಗಳನ್ನು ಖರೀದಿಸಿದ್ದು ಆ ವೆಂಟಿಲೇಟರ್‍ಗಳನ್ನು ಈಗಾಗಲೇ 45 ಸಾವಿರ ಗಂಟೆಗಳ ಕಾಲ ಬಳಸಲಾಗಿದೆ. ಸಾಮಾನ್ಯವಾಗಿ ವೆಂಟಿಲೇಟರ್‍ಗಳು 7ರಿಂದ 8 ವರ್ಷ ಮಾತ್ರ ಬಾಳಿಕೆ ಬರುತ್ತವೆ. ಹೀಗಿದ್ದ ಮೇಲೆ 13 ವರ್ಷ ಹಳೆಯದಾದ ಕಳಪೆ ಗುಣಮಟ್ಟದ ಅಥವಾ ಐಎಸ್‍ಓ ಇನ್ಯಾವುದೇ ದೃಢೀಕರಣವನ್ನು ಪಡೆಯದ ರೀಸೇಲ್ ವೆಂಟಿಲೇಟರ್‍ಗಳನ್ನು ಖರೀದಿ ಮಾಡುವ ಅಗತ್ಯವಿತ್ತೆ ಎಂಬುದು ಪ್ರಶ್ನೆ.

5) ಎರಡೂವರೆ ಪಟ್ಟು ಹಣಕ್ಕೆ ಸ್ಯಾನಿಟೈಜರ್ ಖರೀದಿ: 2019ರಲ್ಲಿ ಟೆಂಡರ್ ಮೂಲಕ ಎಂಎಸ್ ಫಾರ್ಮಸಿಟಿಕಲ್ ಕಂಪೆನಿಗೆ 500 ಎಂಎಲ್‍ಗಳ 47,000 ಯೂನಿಟ್‍ಗಳನ್ನು ಪ್ರತಿ ಬಾಟಲ್‍ಗೆ 97.44 ರೂ.ಗಳಂತೆ ಕರ್ನಾಟಕ ಡ್ರಗ್ಸ್ ಲಾಜೆಸ್ಟಿಕ್ಸ್ ಸಂಸ್ಥೆಯು ಖರೀದಿಗೆ ಆದೇಶ ನೀಡಿತ್ತು. ಬೇಡಿಕೆಯಲ್ಲಿ ಶೇ.50ರಷ್ಟು ಸ್ಯಾನಿಟೈಸರ್ ಪೂರೈಸಿದ್ದ ಚೆನ್ನೈನ ಆ ಕಂಪನಿಯು, ಬಾಕಿ ಉತ್ಪನ್ನ ಪೂರೈಕೆ ಮಾಡುವುದಿಲ್ಲ ಎಂದು ತಿಳಿಸಿತ್ತು.

ಟೆಂಡರ್ ನಿಯಮ ಉಲ್ಲಂಘಿಸಿದ ಕಂಪನಿ ವಿರುದ್ಧ ಕ್ರಮ ಕೈಗೊಂಡು ಭದ್ರತಾ ಠೇವಣಿ ಮುಟ್ಟುಗೋಲು ಹಾಕಿಕೊಳ್ಳುವ ಬದಲು, ಅದೇ ಕಂಪನಿಯಿಂದ ಇತ್ತೀಚೆಗೆ ರೂ.250 ದರದಲ್ಲಿ ಸ್ಯಾನಿಟೈಸರ್ ಖರೀದಿಸಲಾಗಿದೆ. ಇದರಲ್ಲೂ ಅಕ್ರಮ ನಡೆದಿದೆ ಎಂಬುದು ಸಮಿತಿಯ ದೂರು.

6) ಇದಲ್ಲದೆ, ಕರ್ನಾಟಕ ಡ್ರಗ್ಸ್ ಲಾಜೆಸ್ಟಿಕ್ಸ್ ಸಂಸ್ಥೆಯು ಸಿರೆಂಜ್, ಸಿರೆಂಜ್ ಪಂಪ್ ಮತ್ತು ಇತರೆ ವೈದ್ಯಕೀಯ ಉಪಕರಣಗಳನ್ನು ಮದ್ರಾಸ್ ಸರ್ಜಿಕಲ್ಸ್ ಹಾಗೂ ಇತರ ಕಂಪೆನಿಗಳ ಮೂಲಕ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರಕ್ಕೆ ಖರೀದಿ ಮಾಡಿದೆ.

7) 2015-16ರಲ್ಲಿ ಸುಮಾರು 2 ಕೋಟಿಗೂ ಹೆಚ್ಚು ದರಕ್ಕೆ ಖರೀದಿಸಿದ್ದ ಡಯಾಲಿಸಿಸ್ ಉಪಕರಣಗಳನ್ನು ಇದೀಗ ಕೇವಲ ರೂ.24 ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಈ ಪ್ರಕ್ರಿಯೆಯಲ್ಲೂ ಸಹ ಅವ್ಯವಹಾರ ನಡೆದಿದೆ ಎನ್ನಲಾಗುತ್ತಿದೆ.

ಲೂಟಿಕೋರರ ಬೆನ್ನಿಗೆ ನಿಂತರಾ ಸಭಾಪತಿ ಕಾಗೇರಿ?:

ಸರ್ಕಾರ ಯಾವುದೇ ಇದ್ದರೂ ಸಹ ಕೆಲವು ಸದನ-ಸಮಿತಿಗಳಿಗೆ ವಿರೋಧ ಪಕ್ಷದ ಹಿರಿಯ ನಾಯಕರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿರುತ್ತದೆ. ಅದರಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹೆಚ್.ಕೆ.ಪಾಟೀಲ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಕೊರೋನಾ ನಿಯಂತ್ರಿಸುವ ಸಲುವಾಗಿ ಕಳೆದ ಮಾರ್ಚ್‍ನಿಂದ ಖರೀದಿಸಲಾಗಿರುವ ಪಿಪಿಇ ಕಿಟ್, ಸ್ಯಾನಿಟೈಜರ್, ವೆಂಟಿಲೇಟರ್ ಸೇರಿದಂತೆ ಅನೇಕ ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಕುರಿತು ದೂರು ಬಂದ ನಂತರ ಆ ಕುರಿತು ಸಮಗ್ರ ತನಿಖೆ ನಡೆಸಲು ಹೆಚ್.ಕೆ.ಪಾಟೀಲ್ ಆದೇಶಿಸಿದ್ದರು.

ಸದನ ಸಮಿತಿ ಕಾರ್ಯಭಾರಕ್ಕೆ ಇಲ್ಲಿವರೆಗೆ ಯಾವ ಸಭಾಪತಿಗಳು ಅಡ್ಡಿ ಮಾಡಿರುವ ಇತಿಹಾಸ ಕರ್ನಾಟಕ ರಾಜಕಾರಣ ಇತಿಹಾಸದಲ್ಲೇ ಇಲ್ಲ. ಆದರೆ, ಇದೇ ಮೊದಲ ಬಾರಿಗೆ ವಿಧಾನಸಭಾ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಪಿಪಿಇ ಉಪಕರಣಗಳ ಖರೀದಿಯಲ್ಲಿನ ಅವ್ಯವಹಾರ ತನಿಖೆಗೆ ತಡೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಈ ಮೂಲಕ ಸಭಾಪತಿ ನೇರವಾಗಿಯೇ ಭ್ರಷ್ಟಾಚಾರವನ್ನು ಒಪ್ಪಿಕೊಂಡಿದ್ದು, ತಮ್ಮ ಪಕ್ಷದ ಸದಸ್ಯರ ತಲೆ ಕಾಯಲು ಮುಂದಾಗಿದ್ದಾರಾ ಎಂಬ ಪ್ರಶ್ನೆಗಳು ಏಳುತ್ತದೆ. ಅಲ್ಲದೆ, ವಿಶ್ವಶ್ವರ ಹೆಗಡೆ ಕಾಗೇರಿ ವಿರುದ್ಧವೇ ಹಕ್ಕುಚ್ಯುತಿ ಮಂಡನೆಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ನಿರ್ಧರಿಸಿರುವುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

ಆರೋಗ್ಯ ಇಲಾಖೆ ಸಚಿವರಾಗಿರುವ ಶ್ರೀರಾಮುಲು ಅವರಿಗೆ ಕೊರೋನಾ ಕುರಿತು ಕನಿಷ್ಠ ಜ್ಞಾನವೂ ಇಲ್ಲ, ಅವರಿಗೆ ಆ ಖಾತೆಯನ್ನು ನಿಭಾಯಿಸುವ ಸಾಮಥ್ರ್ಯವೂ ಇಲ್ಲ. ಸಿಎಂ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಪರೋಕ್ಷವಾಗಿ ಆ ಖಾತೆಯನ್ನು ನಿಭಾಯಿಸುತ್ತಿದ್ದಾರೆ. ಹೀಗಾಗಿ ಈ ವೈದ್ಯಕೀಯ ಸಲಕರಣೆಗಳ ಖರೀದಿ ಮತ್ತು ಭ್ರಷ್ಟಾಚಾರದಲ್ಲಿ ಅವರ ನೇರ ಕೈವಾಡ ಇರುವ ಶಂಕೆಯೂ ಇದೆ.
ಸಿ.ಎನ್.ದೀಪಕ್ (ಕರ್ನಾಟಕ ರಾಷ್ಟ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ)

ಲಾಕ್‍ಡೌನ್ ಸಂದರ್ಭದಲ್ಲಿ ಅವ್ಯವಹಾರದ ಕುರಿತು ತನಿಖೆಗೆ ಅವಕಾಶ ನೀಡಲಾಗುವುದಿಲ್ಲ ಎಂಬ ಸ್ಪೀಕರ್ ನಿರ್ಧಾರ ಗೊಂದಲಮಯವಾಗಿದೆ. ಏಕೆಂದರೆ ಇಂತಹ ಸಂದರ್ಭದಲ್ಲಿ ತನಿಖೆಗೆ ಆದೇಶಿಸುವುದು ತಪ್ಪಲ್ಲ, ಬದಲಾಗಿ ಅವ್ಯವಹಾರ ನಡೆಸುವುದು ತಪ್ಪು. ತನಿಖೆ ನಡೆಸಿದರೆ ಏನಾಗುತ್ತದೆ? ಅವರ ಈ ನಿರ್ಧಾರದ ಹಿಂದೆ ಯಾವ ಹಿತಾಸಕ್ತಿ ಇದೆ? ಎಂಬುದನ್ನು ಅವರೇ ಹೇಳಬೇಕು.
ಕೃಷ್ಣ ಕೆ.ಆರ್ ಪೇಟೆ ಮಾಜಿ ಸ್ಪೀಕರ್


ಇದನ್ನು ಓದಿ: 20 ಲಕ್ಷ ಕೋಟಿ ಪ್ಯಾಕೇಜ್‌‌ ಘೋಷಿಸಿದರೂ 35% ಸಣ್ಣ ಉದ್ಯಮ ಸ್ಥಗಿತದತ್ತ: ಸಮೀಕ್ಷೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...