ಬಹುಕೋಟಿ ಬ್ಯಾಂಕ್ ವಂಚನೆ ಆರೋಪದಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದ ಉದ್ಯಮಿ ವಿಜಯ್ ಮಲ್ಯ ರನ್ನು ಇಂದು ಭಾರತಕ್ಕೆ ಕರೆತರುವ ಸಾಧ್ಯತೆಯಿದ್ದು ಅವರನ್ನು ಮುಂಬೈನ ಆರ್ಥರ್ ಜೈಲಿನಲ್ಲಿಡಲಾಗುತ್ತದೆ ಎನ್ನಲಾಗಿದೆ.
ಹಣ ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪಕ್ಕೆ ಒಳಗಾಗಿ ಭಾರತದಿಂದ ಲಂಡನ್‌ಗೆ ಪಲಾಯನ ಮಾಡಿದ ತಲೆ ಮರೆಸಿಕೊಂಡಿರುವ ವಿಜಯ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಭಾರತ ಸರ್ಕಾರ ಅಲ್ಲಿನ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದೆ. ಆದರೆ ವಿಜಯ ಮಲ್ಯ ತನ್ನನ್ನು ಭಾರತಕ್ಕೆ ಹಸ್ತಾಂತರಿಸದಂತೆ ಲಂಡನ್ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅದು ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಈ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ.
ಭಾರತವನ್ನು ತೊರೆದು ಮಾರ್ಚ್ 2, 2016 ರಂದು ಬ್ರಿಟನ್‌ಗೆ ಪಲಾಯನ ಮಾಡಿದ ವಿಜಯ್ ಮಲ್ಯ ದೇಶದ 17 ಬ್ಯಾಂಕುಗಳಿಂದ ಒಂಬತ್ತು ಸಾವಿರ ಕೋಟಿ ರೂಪಾಯಿಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.
ಆರ್ಥಿಕ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ವಿಜಯ ಮಲ್ಯ ಅವರನ್ನು ಲಂಡನ್ ಸರ್ಕಾರ ಭಾರತಕ್ಕೆ ಇಂದು ರಾತ್ರಿ ಹಸ್ತಾಂತರಿಸಲಿದೆ ಎಂದು ಐಎಎನ್ಎಸ್ ವರದಿ ಮಾಡಿದೆ.
ಮುಂಬೈ ವಿಮಾನ ನಿಲ್ದಾಣಕ್ಕೆ ಬಂದು ಇಳಿಯುವ ವಿಜಯ ಮಲ್ಯ ಅವರನ್ನು ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ತನಿಖಾ ದಳದ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲೇ ವೈದ್ಯಕೀಯ ತಂಡವೊಂದು ಅವರ ಆರೋಗ್ಯ ತಪಾಸಣೆ ನಡೆಸಲಿದೆ ಎನ್ನಲಾಗಿದೆ.
ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಸಿಬಿಐ ಅಧಿಕಾರಿಗಳು ಅವರನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
2018 ರ ಆಗಸ್ಟ್‌ನಲ್ಲಿ ಮಲ್ಯ ಅವರ ಮನವಿಯನ್ನು ಆಲಿಸಿದ್ದ ಯುಕೆ ನ್ಯಾಯಾಲಯ ಜೈಲಿನ ವಿವರಗಳನ್ನು ಹಂಚಿಕೊಳ್ಳಲು ಭಾರತೀಯ ತನಿಖಾ ಸಂಸ್ಥೆಗಳಿಗೆ ಸೂಚಿಸಿತ್ತು. ಹೀಗಾಗಿ ಮಲ್ಯ ಅವರನ್ನು ಬಂಧಿಸುವ ಮುಂಬೈನ ಆರ್ಥರ್ ರೋಡ್ ಜೈಲಿನ ಕೋಣೆಯನ್ನು ಸಿಬಿಐ ಅಧಿಕಾರಿಗಳು ವಿಡಿಯೋ ಮಾಡಿ ಕಳುಹಿಸಿದ್ದರು. ಅಲ್ಲದೆ, ಮಲ್ಯ ಹಸ್ತಾಂತರದ ನಂತರ ಅವರನ್ನು ಇರಿಸಿಕೊಳ್ಳಲು ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದರು.
ಆರ್ಥರ್ ರೋಡ್‌ನ ಎರಡು ಎರಡು ಅಂತಸ್ತಿನ ಜೈಲು ಕಟ್ಟಡದಲ್ಲಿ ಮಲ್ಯ ಅವರನ್ನು ಉನ್ನತ ಭದ್ರತಾ ಬ್ಯಾರಕ್‌ಗಳಲ್ಲಿ ಇರಿಸಲಾಗುವುದು ಎಂದು ಯುಕೆ ನ್ಯಾಯಾಲಯಕ್ಕೆ ತಿಳಿಸಿದ್ದವು.
ಕೆಲದಿನಗಳ ಹಿಂದೆಯಷ್ಟೇ ವಿಜಯ್ ಮಲ್ಯ ಬ್ಯಾಂಕುಗಳ ಸಾಲ ತೀರಿಸಲು ಬದ್ಧನಿದ್ದೇನೆ. ದಯವಿಟ್ಟು ನನ್ನ ಸಾಲ ಮರುಪಾವತಿಯನ್ನು ಒಪ್ಪಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದರು.
ಭಾರತದಲ್ಲಿ ಹಣ ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪ ಎದುರಿಸುತ್ತಿರುವ ವಿಜಯ್ ಮಲ್ಯ ತಮ್ಮ ಸಾಲದ ಬಾಕಿ ಹಣವನ್ನು ಶೇ 100 ರಷ್ಟು ಮರುಪಾವತಿಸುತ್ತೇನೆ ಹಾಗೂ ತನ್ನ ವಿರುದ್ದದ ಪ್ರಕರಣವನ್ನು ಕೈಬಿಡಿ ಎಂದು ಸರ್ಕಾರವನ್ನು ಕೋರಿದ್ದಾರೆ.
20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ನೀಡಿದ್ದಕ್ಕಾಗಿ ಭಾರತ ಸರ್ಕಾರವನ್ನು ಅಭಿನಂದಿಸುತ್ತಾ, ತಾನು ಬಾಕಿ ಹಣವನ್ನು ಮರುಪಾವತಿ ಮಾಡುತ್ತೇನೆಂದು ಪದೇ ಪದೇ ಹೇಳಿದರೂ ನನ್ನ ಮಾತನ್ನು ನಿರ್ಲಕ್ಷಿಸಲಾಗಿದೆ ಎಂದು ವಿಷಾದಿಸಿದ್ದಾರೆ.
“ಕೊರೊನಾ ಪರಿಹಾರ ಪ್ಯಾಕೇಜ್‌ಗಾಗಿ ಸರ್ಕಾರಕ್ಕೆ ಅಭಿನಂದನೆಗಳು. ಅವರು ಬಯಸಿದಷ್ಟು ಕರೆನ್ಸಿಯನ್ನು ಮುದ್ರಿಸಬಹುದು ಆದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸಾಲಗಳ 100% ಮರುಪಾವತಿಯನ್ನು ನೀಡುವ ನನ್ನಂತಹ ಸಣ್ಣ ಕೊಡುಗೆದಾರರನ್ನು ನಿರಂತರವಾಗಿ ನಿರ್ಲಕ್ಷಿಸಬೇಕೇ?” ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಸಾಲ ತೀರಿಸುತ್ತೇನೆ, ನನ್ನ ವಿರುದ್ಧದ ಪ್ರಕರಣ ಕೈಬಿಡಿ: ವಿಜಯ್ ಮಲ್ಯ ಮನವಿ


