Homeಅಂಕಣಗಳುತೇಜಸ್ವಿಯವರ ಒಂದು ಸೀಟಿನ ಸ್ಕೂಟರ್‍ರೂ... ಡ್ರಾಪಾಯಣದ ಸಮೃದ್ಧ ಅನುಭವವೂ....

ತೇಜಸ್ವಿಯವರ ಒಂದು ಸೀಟಿನ ಸ್ಕೂಟರ್‍ರೂ… ಡ್ರಾಪಾಯಣದ ಸಮೃದ್ಧ ಅನುಭವವೂ….

- Advertisement -
- Advertisement -

ಡ್ರಾಪಾಯಣದ ಕತೆಗಳು ಹೇಳಿದಷ್ಟೂ ಮುಗಿಯದು. ಈ ಲಾಕ್‍ಡೌನ್‍ನಿಂದಾಗಿ ಡ್ರಾಪ್ ಕೇಳುವ ಕೆಲವರ ಅಧಿಕ ಪ್ರಸಂಗತನದಿಂದ ಬೇಸತ್ತು ತೇಜಸ್ವಿಯವರು ತನ್ನ ಸ್ಕೂಟರಿನ ಹಿಂಬದಿ ಸೀಟು ಕಳಚಿದ್ದು ಯಾಕೆಂದು ಪ್ರಾಯೋಗಿಕವಾಗಿ ಅನುಭವಕ್ಕೆ ಬರುತ್ತಿದೆ..

ಕನ್ನಡದ ಪ್ರಸಿದ್ಧ ಸಾಹಿತಿ ದಿವಂಗತ ಪೂರ್ಣಚಂದ್ರ ತೇಜಸ್ವಿಯವರ ಒಂಟಿ ಸೀಟಿನ ಸ್ಕೂಟರ್ ಅವರು ಬದುಕಿದ್ದ ಕಾಲಕ್ಕೆ ಮೂಡಿಗೆರೆಯಾದ್ಯಂತ ಫೇಮಸ್ ಆಗಿತ್ತು. ಅವರು ಉದ್ದೇಶಪೂರ್ವಕವಾಗಿಯೇ ತನ್ನ ಸ್ಕೂಟರಿನ ಹಿಂಬದಿ ಸೀಟನ್ನು ಕಳಚಿ ಹಾಕಿದ್ದರು. ನಾನು ಸುಮಾರು ಐದು ವರ್ಷಗಳ ಹಿಂದಿನವರೆಗೂ ಈ ತೇಜಸ್ವಿ ಎಷ್ಟು ದೊಡ್ಡ ಸಾಹಿತಿಯಾದರೇನಂತೆ ಜನಸಾಮಾನ್ಯರಿಂದ ಈ ಪಾಟಿ ಅಂತರ ಕಾಯ್ದುಕೊಳ್ಳಬಾರದಿತ್ತು ಎನ್ನುತ್ತಿದ್ದೆ. ನಾನು ಮದುವೆಯಾದ ಬಳಿಕ ತೇಜಸ್ವಿಯವರು ಮಾಡಿದ್ದು ಸರಿ ಎಂದು ನನಗೂ ಅನ್ನಿಸತೊಡಗಿತ್ತು.

ರಾಷ್ಟ್ರಕವಿ ಕುವೆಂಪುರವರ ಮಗನಾದ ತೇಜಸ್ವಿಯವರು ಯಾವತ್ತೂ ತನ್ನಪ್ಪನ ಪ್ರಭಾವಲಯದಲ್ಲಿರಲು ಬಯಸಿರಲಿಲ್ಲ. ಸಾಹಿತ್ಯಿಕವಾಗಿಯೂ ತನ್ನದೇ ತಾತ್ವಿಕತೆ ಮತ್ತು ಕಥನಶೈಲಿಯನ್ನು ಕಂಡುಕೊಂಡಿದ್ದರು. ಜ್ಞಾನಪೀಠ ಪ್ರಶಸ್ತಿ ಆಯ್ಕೆಗಳಲ್ಲಿ ಬ್ರಾಹ್ಮಣ್ಯದ ಲಾಬಿಯೇನಾದರೂ ಇಲ್ಲದಿರುತ್ತಿದ್ದರೆ ಕನ್ನಡದ ಇನ್ನಿಬ್ಬರು ಅಬ್ರಾಹ್ಮಣ ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಖಂಡಿತಾ ಸಿಗುತ್ತಿತ್ತೆನ್ನುವುದು ನನ್ನ ಓದಿನ ಮಟ್ಟದಲ್ಲಿ ನನಗೆ ಬಲವಾಗಿ ಅನಿಸುತ್ತಿರುತ್ತದೆ. ಆ ಇಬ್ಬರಲ್ಲಿ ಮೊದಲಿಗರು ಪಿ.ಲಂಕೇಶ್, ಇನ್ನೊಬ್ಬರು ತೇಜಸ್ವಿ…

ತೇಜಸ್ವಿ ಮನಸ್ಸು ಮಾಡಿದ್ದರೆ ಯಾವುದಾದರೂ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿ ಆರಾಮ ಬದುಕು ಸವೆಸಬಹುದಿತ್ತು. ಆದರೆ ಅವರ ಆಸಕ್ತಿ ಮತ್ತು ಆಯ್ಕೆಯೇ ಬೇರೆಯಾಗಿತ್ತು. ಯಾವತ್ತೂ ಯಾರ ಹಂಗಿನಲ್ಲೂ ಇರುವುದನ್ನು ಅವರು ತೀರಾ ಇಷ್ಟಪಡುತ್ತಿರಲಿಲ್ಲ. ಆದುದರಿಂದಲೇ ಮೂಡಿಗೆರೆಯಲ್ಲಿ ಒಂದಷ್ಟು ತೋಟ ಖರೀದಿಸಿ ತನ್ನ ಪಾಡಿಗೆ ಕೃಷಿ ಮಾಡುತ್ತಾ, ಸಾಹಿತ್ಯ ರಚಿಸುತ್ತಾ, ಪಕ್ಷಿಗಳ ಫೋಟೋ ಕ್ಲಿಕ್ಕಿಸಿ ಆನಂದಪಡುತ್ತಾ ತನ್ನಿಷ್ಟದಂತೆ ಸ್ವತಂತ್ರವಾಗಿ ಬರೆಯುತ್ತಾ ಬದುಕಿದವರು ತೇಜಸ್ವಿ.

ಅವರು ಮೂಡಿಗೆರೆ ಪೇಟೆಗೆ ಏನಾದರೂ ದಿನಸಿ ಮತ್ತಿತರ ಖರೀದಿಗೆ ತನ್ನ ಸ್ಕೂಟರ್‍ನಲ್ಲೇ ಹೋಗಿ ಬರುತ್ತಿದ್ದರು. ಹಳ್ಳಿ ಜನರಲ್ಲಿ ಅನೇಕರಿಗೆ ತೇಜಸ್ವಿ ಕನ್ನಡದ ಪ್ರಸಿದ್ಧ ಸಾಹಿತಿಯೆನ್ನುವುದೂ ಗೊತ್ತಿರಲಿಲ್ಲ.. ಇನ್ನು ಕೆಲವರಿಗೆ ಗೊತ್ತಿತ್ತು ಮತ್ತು ಅವರ ಮೇಲೆ ವಿಶೇಷ ಅಭಿಮಾನವೂ ಇತ್ತು. ಆದರೆ ಈ ತೇಜಸ್ವಿ ಎಂತಹಾ ಮನುಷ್ಯರಾಗಿದ್ದರೆಂದರೆ ಅಭಿಮಾನ, ಮಣ್ಣು, ಮಸಿ ಇಂತವುಗಳಿಗೆಲ್ಲಾ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ತನ್ನ ಪಾಡಿಗೆ ತಾನು ತನ್ನಿಷ್ಟದಂತೆ ಬದುಕುತ್ತಿದ್ದರು. ತಲೆಹರಟೆ ಗಿರಾಕಿಗಳೆಂದರೆ ತೇಜಸ್ವಿಗೆ ಎಲ್ಲಿಲ್ಲದ ಸಿಟ್ಟು ಬೇರೆ.

ಅವರು ಮೂಡಿಗೆರೆ ಪೇಟೆಗೆ ಸ್ಕೂಟರಲ್ಲಿ ಹೋಗಿ-ಬರುವಾಗೆಲ್ಲಾ ಹಳ್ಳಿ ಜನ ಕೈ ತೋರಿಸಿ ಡ್ರಾಪ್ ಕೇಳುತ್ತಿದ್ದರು. ಹಳ್ಳಿಜನ ಅವರ ಅಭ್ಯಾಸ ಬಲದಂತೆ ಸ್ಕೂಟರಿನ ಹಿಂಬದಿ ಸೀಟಲ್ಲಿ ಕೂತು ತೇಜಸ್ವಿಯವರ ಪೂರ್ವಾಪರ, ವಹಿವಾಟು, ಏನೇನ್ ಬೆಳೀತೀರಿ, ಕ್ರಯ ಸಿಗುತ್ತಾ, ಇಳುವರಿ ಹೇಗಿದೆ, ಈ ಬಾರಿ ಕರಿಮೆಣಸು, ಏಲಕ್ಕಿ ಇತ್ಯಾದಿ ಎಷ್ಟೆಷ್ಟು ಬೆಳೆದಿದ್ದೀರಿ, ಹಿಂದಿನ ಸ್ಟಾಕ್ ಇತ್ತಾ ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದರಂತೆ..
ಇನ್ನು ಸಾಹಿತ್ಯಾಸಕ್ತರಾದರೆ ವೈಯಕ್ತಿಕ ಬದುಕಿನ ವಿವರಗಳನ್ನೆಲ್ಲಾ ಕೆದಕಿ ತಲೆ ಹರಟೆ ಮಾಡ್ತಿದ್ದರಂತೆ. ಇದರಿಂದ ರೋಸಿ ಹೋಗಿ ಈ ಜನರ ಸಹವಾಸವೇ ಬೇಡ ಎಂದು ಹಿಂಬದಿ ಸೀಟನ್ನೇ ಕಳಚಿ ಬಿಟ್ಟರಂತೆ.

ಇನ್ನೂ ಒಂದು ಸ್ವಾರಸ್ಯಕರ ವಿವರವೊಂದನ್ನು ತೇಜಸ್ವಿಯವರು ಯಾವುದೋ ಒಂದು ಪ್ರಬಂಧದಲ್ಲಿ ಬರೆದಿದ್ದನ್ನು ಓದಿದ ನೆನಪು. ಒಮ್ಮೆ ಹಗಲು ಹೊತ್ತು ಅವರ ಸ್ಕೂಟರಿನ ಬಲ್ಬ್ ಉರಿಯುತ್ತಿತ್ತಂತೆ. ಜನ ಕೈಯಲ್ಲಿ ಆಕ್ಷನ್ ಮಾಡಿದ್ರೂ ತೇಜಸ್ವಿಯವರಿಗೆ ಗೊತ್ತಾಗಿಲ್ವಂತೆ. ಕೆಲವರು ಬೊಬ್ಬೆ ಹೊಡೆದು ಏನೋ ಹೇಳುತ್ತಿದ್ದರೂ ತೇಜಸ್ವಿಯವರಿಗೆ ಸ್ಕೂಟರಿನ ಡುರ್ರ್ ಡುರ್ರ್ ಸದ್ದಿಗೆ ಅದೂ ಕೇಳಿಸಿಲ್ವಂತೆ. ಕೊನೆಗೆ ಒಬ್ಬನಂತೂ ಅವರನ್ನು ಕರೆಯುತ್ತಾ ಏದುಸಿರು ಬಿಡುತ್ತಾ ಓಡಿ ಬರುತ್ತಿರುವುದನ್ನು ನೋಡಿ ಸ್ಕೂಟರ್ ವೇಗ ತಗ್ಗಿಸಿದಾಗ ಆತ ಹೇಗೂ ಇವರ ಬಳಿ ತಲುಪಿ ಸಾರ್, ಸ್ಕೂಟರ್ ಬಲ್ಬ್ ಉರಿಯುತ್ತಿದೆ ಎಂದನಂತೆ.. ಇಷ್ಟೆಲ್ಲಾ ಕಷ್ಟಪಟ್ಟು ನನ್ನ ಸ್ಕೂಟರ್‍ನ ಬಲ್ಬ್ ಉರಿಯುವುದನ್ನು ಹೇಳಬೇಕಾ ಎಂಬುವುದು ತೇಜಸ್ವಿಯವರ ಪ್ರಶ್ನೆ..

ಹಗಲು ಹೊತ್ತು ಬೈಕಿನ ಬಲ್ಬ್ ಉರಿದಾಗ ನನಗೂ ಇಂತಹ ಅನುಭವವಾಗಿದೆ. ಆದರೆ ತೇಜಸ್ವಿಯವರಿಗಾದಂತಹ ತೀಕ್ಷ್ಣ ಅನುಭವವವಲ್ಲ. ಎದುರುಗಡೆಯಿಂದ ಬರುವವರು ಕೈಯಲ್ಲಿ ಸಂಜ್ಞೆ ಮಾಡುವ ಅನುಭವ. ಸುಮಾರು ಎರಡು ವರ್ಷಗಳ ಹಿಂದೆ ನಾನು ಹೊಸ ಬೈಕ್ ಖರೀದಿಸಿದ್ದೆ. ಹಳೆ ಬೈಕ್‍ಗಳಲ್ಲಿ ಹೆಡ್‍ಲೈಟಿನ ಗುಂಡಿ ಅದುಮಿದರೆ ಮಾತ್ರ ಲೈಟ್ ಉರಿಯುತ್ತಿತ್ತು. ಕಳೆದೆರಡೂವರೆ -ಮೂರು ವರ್ಷಗಳಿಂದ ಬೈಕ್ ಸ್ಟಾರ್ಟ್ ಮಾಡಿ ಚಲಿಸುತ್ತಿದ್ದರೆ ಹಗಲು ರಾತ್ರಿಯೆನ್ನದೇ ಹೆಡ್‍ಲೈಟ್ ಉರಿಯುವಂತಹ ಆಟೋಮ್ಯಾಟಿಕ್ ಸಿಸ್ಟಮ್ ದ್ವಿಚಕ್ರ ವಾಹನಗಳಲ್ಲಿ ಬಂತು. ಅದರಲ್ಲಿ ಲೈಟ್ ಆಫ್ ಮಾಡುವ ಗುಂಡಿಯೇ ಇಲ್ಲ. ಇದನ್ನು ನೋಡಿ ಹಳೇ ವಾಹನ ಸವಾರರೆಲ್ಲಾ ಕೈ ಸಂಜ್ಞೆ ಮಾಡಿ ಹೆಡ್‍ಲೈಟ್ ಉರಿಯುತ್ತಿದೆ ಎನ್ನುತ್ತಿದ್ದರು. ನಾನು ಪಜೀರಿನ ನನ್ನ ಮನೆಯಿಂದ ನಾನು ವೃತ್ತಿ ನಿರ್ವಹಿಸುವ ದೇರಳಕಟ್ಟೆಗೆ ಬರುವ ಆರು ಕಿಲೋ ಮೀಟರ್ ದಾರಿಯಲ್ಲಿ ಎದುರುಗಡೆಯಿಂದ ಬರುವ ಕನಿಷ್ಠ ಐದಾರು ಮಂದಿ ಬೈಕ್ ಸವಾರರಾದರೂ ಇಂತಹ ಸಂಜ್ಞೆ ಮಾಡುತ್ತಿದ್ದರು. ನನಗಿದರಿಂದ ವಿಪರೀತ ಕಿರಿಕಿರಿಯಾಗಿ ಫಿಟ್ಟರ್ ಬಳಿ ಹೋಗಿ ಹೆಡ್‍ಲೈಟ್‍ಗೆ ಆನ್ ಆಫ್ ಗುಂಡಿ ಅಳವಡಿಸಲು ಸಾಧ್ಯವೇ ಎಂದು ವಿಚಾರಿಸಿದ್ದೆ. ಅದು ಹೊಸ ತಂತ್ರಜ್ಞಾನ ಸಾರ್, ಅದನ್ನು ನಾವು ಬದಲಿಸಲಾಗದು ಎಂದಿದ್ದ.

ಒಬ್ಬ ಪುಣ್ಯಾತ್ಮ ಸ್ಕೂಟರ್ ಸವಾರ ಪ್ರತೀ ದಿನ ನನಗೆ ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಬಳಿ ಸಿಗುತ್ತಿದ್ದ. ಆತನಂತೂ ಪ್ರತೀದಿನವೂ ಹೆಡ್‍ಲೈಟ್ ಉರಿಯುತ್ತಿದೆ ಎಂದು ಸಂಜ್ಞೆ ಮಾಡುತ್ತಿದ್ದ. ತಿಂಗಳುಗಳಿಂದ ಅದನ್ನು ನೋಡಿ ನೋಡಿ ರೋಸಿ ಹೋಗಿತ್ತು. ಒಂದು ದಿನ ಮನೆಯಿಂದ ತುಸು ಬೇಗ ಹೊರಟು ಮಂಗಳೂರು ವಿಶ್ವವಿದ್ಯಾನಿಲಯದ ಬಳಿ ಆತನಿಗಾಗಿ ಕಾದು ನಿಂತೆ. ಆತ ಬಂದೇ ಬಿಟ್ಟ, ಆತನಿಗೆ ಕೈ ತೋರಿಸಿ ಆತನ ಸ್ಕೂಟರ್ ನಿಲ್ಲಿಸಿದೆ. ಸಾರ್, ನೀವು ಪ್ರತೀದಿನ ನನ್ನ ಬೈಕಿನ ಹೆಡ್‍ಲೈಟ್ ಉರಿಯುವುದನ್ನು ಸಂಜ್ಞೆ ಮೂಲಕ ತೋರಿಸುತ್ತಿದ್ದಿರಲ್ವಾ…? ಹೌದು ಸಾರ್, ಏನಾಯಿತು ಎಂದು ಪ್ರಶ್ನಿಸಿದ. ಸಾರ್, ನನ್ನದು ಹೊಸ ಬೈಕ್, ಈಗಿನ ಯಾವ ಬೈಕಲ್ಲೂ ಹೆಡ್‍ಲೈಟ್ ಆಫ್ ಮಾಡುವ ಗುಂಡಿ ಇರುವುದಿಲ್ಲ. ಮೊನ್ನೆ ಮೊನ್ನೆಯವರೆಗೂ ನನ್ನಲ್ಲಿ ಹಳೇ ಬೈಕಿತ್ತು. ಈ ಬೈಕ್ ಖರೀದಿಸಿದ ಬಳಿಕ ನಿಮ್ಮಂತಹ ಸಜ್ಜನರ ಪರೋಪಕಾರ ಬುದ್ಧಿಯಿಂದ ರೋಸಿ ಹೋಗಿರುವೆ ಸಾರ್. ಕೈ ಮುಗಿಯುತ್ತೇನೆ ಸಾರ್, ಇನ್ಮುಂದೆ ದಯಮಾಡಿ ಸಂಜ್ಞೆ ಮಾಡದಿರಿ.. ಎಂದೆ. ಆತ ನನ್ನನ್ನು ಅಡಿಯಿಂದ ಮುಡಿಯವರೆಗೆ ಒಮ್ಮೆ ನೋಡಿ ಏನೊಂದೂ ಪ್ರತಿಕ್ರಿಯೆ ಕೊಡದೇ ಸ್ಕೂಟರ್ ಸ್ಟಾರ್ಟ್ ಮಾಡಿ ಹೊರಟೇ ಬಿಟ್ಟ.

ನನ್ನ ಕಣ್ಮುಂದೆಯೇ ಇನ್ನೊಂದು ಹೆಡ್‍ಲೈಟ್ ಪುರಾಣವೂ ನಡೆದಿದೆ. ಒಬ್ಬಾತ ಹಿಂಬದಿ ಸೀಟಲ್ಲಿ ಕೂತು ಸ್ವಲ್ಪ ಮಾಡರ್ನ್ ಆಗಿರುವ ತನ್ನ ಪತ್ನಿಗೆ ಸ್ಕೂಟರ್ ಚಲಾಯಿಸಲು ಕಲಿಸುತ್ತಿದ್ದ. ಆಕೆ ಸ್ಲೀವ್‍ಲೆಸ್ ಟೀಶರ್ಟ್ ಧರಿಸಿದ್ದಳು. ಅವರ ಸ್ಕೂಟರ್ ಕೂಡಾ ಹೊಸದೇ ಆಗಿತ್ತು. ಅದರ ಹೆಡ್‍ಲೈಟ್ ಉರಿಯುತ್ತಿತ್ತು. ಎದುರು ಬದಿಯಿಂದ ಬೈಕಲ್ಲಿ ಬರುತ್ತಿದ್ದ ಯುವಕನೊಬ್ಬ ಆಕೆಗೆ ಕೈಯಲ್ಲಿ ಪೋಂಯ್ ಪೋಂಯ್ ಹಾರ್ನ್ ಹೊಡೆಯುವಂತೆ ಸಂಜ್ಞೆ ಮಾಡಿ ಹೆಡ್‍ಲೈಟ್ ಉರಿಯುತ್ತಿರುವುದನ್ನು ತಿಳಿಸಿದ. ಆಕೆಯ ಗಂಡ ಅದನ್ನು ತಪ್ಪಾಗಿ ಅರ್ಥೈಸಿ ಆಕೆಯನ್ನು ತಕ್ಷಣ ಹಿಂಬದಿ ಸೀಟಲ್ಲಿ ಕೂರಿಸಿ ಸ್ಕೂಟರ್ ತಿರುಗಿಸಿ ಸಂಜ್ಞೆ ಮಾಡಿದ ಯುವಕನನ್ನು ಹಿಂಬಾಲಿಸಿ ಓವರ್‍ಟೇಕ್ ಮಾಡಿ ನಡುರಸ್ತೆಯಲ್ಲೇ ಆತನನ್ನು ಅಡ್ಡಹಾಕಿ ‘ಏನೋ, ಬೇ…..ಸೂ…. ಮಗನೇ.. ಮನೆಯಲ್ಲಿ ಅಕ್ಕ ತಂಗಿಯರಿಲ್ವಾ’ ಎಂದು ದಬಾಯಿಸಿದ. ಆತ ‘ಏನಾಯ್ತು, ಏನ್ ಸಾರ್ ವಿಷಯ…? ನನಗ್ಯಾಕೆ ಹೀಗೆ ಬೈಯುತ್ತಿದ್ದೀರಿ..?’ ಎಂದು ಕಕ್ಕಾಬಿಕ್ಕಿಯಾಗಿ ಪ್ರಶ್ನಿಸಿದ. ‘ಮತ್ಯಾಕೋ ನನ್ನ ಹೆಂಡತಿಗೆ ಕೆಟ್ಟದಾಗಿ ಸಂಜ್ಞೆ ಮಾಡಿದೆ..?’

‘ಅಯ್ಯೋ ಸಾರ್.. ನಿಮ್ಮ ಸ್ಕೂಟರ್ ಹೆಡ್‍ಲೈಟ್ ಉರಿಯುತ್ತಿತ್ತು. ಅದಕ್ಕೆ ಸಂಜ್ಞೆ ಮಾಡಿದೆ’ ಎಂದ. ಅಷ್ಟೊತ್ತಿಗೆ ಜನ ಮುತ್ತತೊಡಗಿದರು. ಈ ಪುಣ್ಯಾತ್ಮ ಮುರು ಮುರು ಮಾಡುತ್ತಾ ಸ್ಕೂಟರ್ ತಿರುಗಿಸಿ ಹೊರಟ. ಸಂಜ್ಞೆ ಮಾಡಿದ ಯುವಕನ ಉದ್ದೇಶ ಏನಿತ್ತೋ ನಾನರಿಯೆ. ಹೆಡ್‍ಲೈಟ್ ದೆಸೆಯಿಂದ ಆತ ಪೆಟ್ಟು ತಪ್ಪಿಸಿಕೊಂಡ.

ಇದೀಗ ಲಾಕ್‍ಡೌನ್ ನೆಪದಲ್ಲಿ ಸಾರ್ವಜನಿಕ ಸಾರಿಗೆ ಅಮಾನತ್ತಿನಲ್ಲಿರುವ ಈ ಕಾಲದಲ್ಲಿ ಡ್ರಾಪ್ ಕೇಳುವವರು ಎಲ್ಲೆಡೆ ಕಾಣಸಿಗುತ್ತಾರೆ. ಬೈಕಲ್ಲಿ ಇಬ್ಬರು ಸವಾರಿ ಮಾಡಬಾರದೆಂಬ ನಿಯಮವಿದ್ದರೂ ರಸ್ತೆ ಬದಿಯಲ್ಲಿ ನಿಂತು ಕೈ ತೋರಿಸಿ ಡ್ರಾಪ್ ಕೇಳುವವರನ್ನು ಬಿಟ್ಟು ಹೋಗಲು ನನಗಂತೂ ಸಾಧ್ಯವಾಗುವುದಿಲ್ಲ. ಕೆಲವರು ಬೈಕೇರಿ ಕೂತು ಡೀಸೆಂಟಾಗಿ ಪ್ರಯಾಣಿಸಿ ಅವರ ನಿಲ್ದಾಣ ಬಂದಾಗ ಬೆನ್ನು ಮುಟ್ಟಿ ನಿಲ್ಲಿಸಲು ಕೋರಿ ಇಳಿದು ಹೋಗುತ್ತಾರೆ. ಒಳ್ಳೆಯ ಪರಿಚಿತರಾದರೆ ಮಾತುಕತೆ ಇದ್ದೇ ಇರುತ್ತದೆ. ಇನ್ನೊಂದು ಕೆಟಗರಿಯವರಿದ್ದಾರೆ.. ಅವರಿಗೆ ನಮ್ಮ ಬ್ಯಾರಿ ಭಾಷೆಯಲ್ಲಿ ‘ಪಾಲ್‍ಗ್ ಬನ್ನವುನು ಪೈರೆ ಬೆಲೆ ಕೇಕ್‍ರೆ’ (ಹಾಲಿಗೆ ಬಂದು ದನದ ಬೆಲೆ ಕೇಳುವವರು) ಎನ್ನುತ್ತಾರೆ. ಅಂತವರನ್ನು ಕಂಡರೆ ನನಗೆ ಎಲ್ಲಿಲ್ಲದ ಸಿಟ್ಟು ಬರುತ್ತದೆ.

ಸುಮಾರು ಐದು ವರ್ಷಗಳ ಹಿಂದೆ ಅಂದರೆ ನಾನು ಮದುವೆಯಾದ ಹೊಸದರಲ್ಲಿ ವಿಟ್ಲ ಸಮೀಪದ ಹಳ್ಳಿಯಲ್ಲಿರುವ ನನ್ನ ಪತ್ನಿಯ ಮನೆಯಿಂದ ಹಿಂದಿರುಗಿ ಬೈಕಲ್ಲಿ ಬರುತ್ತಿದ್ದೆ. ಆ ಹಳ್ಳಿಯಿಂದ ಬಸ್ಸು ಹಿಡಿಯಬೇಕಾದರೆ ಮೂರೂವರೆ ಕಿಲೋಮೀಟರ್ ಕ್ರಮಿಸಬೇಕು. ಅಲ್ಲೆಲ್ಲಾ ಡ್ರಾಪ್ ಕೇಳುವವರು ಸಿಗುತ್ತಿರುತ್ತಾರೆ. ಒಮ್ಮೆ ಭೂತದ ಕೋಲ ಕಟ್ಟುವ ಕೆಲಸ ಮಾಡುವ ಅಂಗಾರ ಎಂಬವನೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ. (ತುಳುನಾಡಿನ ತಳವರ್ಗದ ಸಂಸ್ಕøತಿಯ ಪರಿಚಯವಿದ್ದವರಿಗೆ ಅವರ ತಲೆಗೂದಲ ಶೈಲಿ, ಮೀಸೆಯಿಲ್ಲದಿರುವಿಕೆ ಇತ್ಯಾದಿಗಳಿಂದ ಅವರ ಕಸುಬೇನೆಂದು ತಿಳಿಯುತ್ತದೆ) ಆತ ಡ್ರಾಪ್ ಕೇಳಲಿಲ್ಲವಾದರೂ ನನ್ನ ಎಂದಿನ ಅಭ್ಯಾಸದಂತೆ ಬೈಕ್ ನಿಲ್ಲಿಸಿ ಕರೆದೆ. ಆತ ನಡುಬಗ್ಗಿಸಿ ಏನ್ ದಣೀ ಎಂದು ಕೇಳಿದ. ಎತ್ತ..? ಎಂದು ಪ್ರಶ್ನಿಸಿದೆ. ಸಾಲೆತ್ತೂರಿಗೆ ಎಂದ. ಅಲ್ಲಿಂದ ಸಾಲೆತ್ತೂರಿಗೆ ಹೋಗಬೇಕೆಂದರೆ ಎರಡು ಕಿಲೋ ಮೀಟರ್ ನಡೆದು ಕುಡ್ತಮುಗೇರು ಎಂಬ ಪುಟ್ಟ ಪೇಟೆಯಲ್ಲಿ ಮತ್ತೆ ಬಸ್ಸೇರಬೇಕು. ಬಾ ಕೂತ್ಕೊ. ಎಂದೆ. ಆತನಿಗೆ ಬಹುಶಃ ಅದು ಮೊದಲ ಅನುಭವವೋ ಏನೋ… ನಾಚುತ್ತಾ ಬೈಕೇರಿ ಕೂತ. ಆತ ಸಾಲೆತ್ತೂರಿನಲ್ಲಿ ಇಳಿದವನೇ ಮತ್ತೊಮ್ಮೆ ನಡುಬಗ್ಗಿಸಿ ನಮಸ್ಕಾರ ಮಾಡಿ ಬಿರಬಿರನೇ ನಡೆದ. ನಾನು ಅಲ್ಲೇ ಬೈಕ್ ನಿಲ್ಲಿಸಿ ಅಲ್ಲಿ ಪಕ್ಕದಲ್ಲಿ ಕುನಿಯ ಎಂಬ ಒಳ್ಳೆಯ ಕಿಕ್ ಕೊಡುವ ಸುಪೀರಿಯರ್ ಕ್ವಾಲಿಟಿ ಹೊಗೆ ಸೊಪ್ಪು ಸಿಗುವ ಅಂಗಡಿಯೊಂದಕ್ಕೆ ಹೋಗಿ ವೀಳ್ಯದೆಲೆಗೆ ಸುಣ್ಣ ಹಚ್ಚುತ್ತಿದ್ದೆ. ಸುಮ್ಮನೆ ತಿರುಗಿ ನೋಡಿದೆ. ಅಂಗಾರ ಕೆಂಪು ಬೋರ್ಡಿನ ಅಂಗಡಿಗೆ ನುಗ್ಗಿದ.

ಒಮ್ಮೆ ಒಬ್ಬ ಮಧ್ಯ ವಯಸ್ಕನನ್ನು ಬೈಕಿಗೇರಿಸಿದ್ದೆ. ಆತ ಬೈಕಲ್ಲಿ ಕೂತ ಕ್ಷಣದಿಂದ ಇಳಿಯುವವರೆಗೆ ಒಂದೇ ಸಮನೆ.. ಯಾವೂರು…? ಯಾರ ಮಗ… ಯಾರ ಮೊಮ್ಮಗ.. ಏನು ಕೆಲಸ… ಇಲ್ಲಿ ಎಲ್ಲಿಗೆ ಬಂದಿರಿ..?
ವ್ಯಾಪಾರ ಹೇಗಿದೆ..?
ಅಂಗಡಿ ಕಟ್ಟಡ ಸ್ವಂತದ್ದಾ.. ಬಾಡಿಗೆಯದ್ದಾ…?
ಎಷ್ಟು ಜನ ಕೆಲಸಕ್ಕಿದ್ದಾರೆ…?
ದಿನಕ್ಕೆಷ್ಟು ಆದಾಯವಿದೆ..?
ಇಲ್ಲಿ ಯಾರ ಮಗಳನ್ನು ವರಿಸಿದ್ದು…? ಕೊನೆಯವಳಾ…?
ನಿಮಗೆ ಜಮೀನಿದೆಯಾ…?
ಏನು ಬೆಳೆಯುತ್ತೀರಿ…?
ನೀವೆಷ್ಟು ಮಕ್ಕಳು…?
ನೀವು ಎಷ್ಟನೆಯವರು…?
ನಿಮ್ಮಪ್ಪ ಏನು ವ್ಯಾಪಾರ ಮಾಡ್ತಾರೆ..?
ಎಷ್ಟು ವರ್ಷವಾಯಿತು ತೀರಿ ಹೋಗಿ..?
ಏನು ಖಾಯಿಲೆಯಾಗಿತ್ತವರಿಗೆ..?
ಹೀಗೆ ಪ್ರಶ್ನೆಗಳ ಸರಮಾಲೆ..

ಆ ಮನುಷ್ಯನನ್ನು ಯಾವಾಗ ಇಳಿಸೋದೋ ಎಂದು ಹೈರಾಣಾಗಿ ಬಿಟ್ಟೆ..

ಯಾ ಅಲ್ಲಾಹ್.. ಇನ್ನು ಈ ಜನ್ಮಕ್ಕೆ ಈ ಮನುಷ್ಯನನ್ನು ಬೈಕಿಗೇರಿಸಲ್ಲ ಎಂದು ತೀರ್ಮಾನ ಮಾಡಿಯೇ ಆತನನ್ನು ಇಳಿಸಿದೆ.

ಕೊನೆಗೆ ಆ ಪುಣ್ಯಾತ್ಮ ಒಮ್ಮೆ ನಿಮ್ಮ ತಲೆಗೆ ಹಾಕಿದ ಟೊಪ್ಪಿ (ಹೆಲ್ಮೆಟ್) ತೆಗೆಯಿರಿ, ನಿಮ್ಮ ಮುಖ ನೋಡಬೇಕು ಎಂದ. ಒಂದಿನಿತೂ ತಡಮಾಡದೇ ಗೇರ್ ಹಾಕಿ ಎಕ್ಸಲೇಟರ್ ತಿರುವಿದೆ.

ಇಂತಹ ತಲೆಹರಟೆ ಆಸಾಮಿಗಳಿಗೆ ಡ್ರಾಪ್ ಕೊಡಹೋದರೆ ನಮ್ಮ ತಲೆ ಹೋಳಾಗಿ ಬಿಡುತ್ತೆ. ಇಂತಹ ಧಾರಾಳ ಅನುಭವಗಳು ಅನೇಕೆಡೆ ಆಗಿವೆ. ಮತ್ತೆ ಮತ್ತೆ ಇಂತಹ ಅನುಭವಗಳಾದುದರಿಂದ ಯಾರಾದರೂ ಬೈಕೇರಿ ಒಂದೆರಡು ಔಪಚಾರಿಕ ಪ್ರಶ್ನೆ ಕೇಳಿ ಮತ್ತೂ ಮುಂದುವರಿಸಿದರೆ ‘ಒಂದೋ ತೆಪ್ಪಗೆ ಕೂರಬೇಕು.. ಇಲ್ಲಾಂದ್ರೆ ಈಗ್ಲೇ ಇಳಿಯಬೇಕು’ ಎಂದು ಧಮಕಿ ಹಾಕುವ ಪ್ರಸಂಗವೂ ಬಂದಿತ್ತು.

ಇನ್ನೊಮ್ಮೆ ನನ್ನ ವೃತ್ತಿ ಮುಗಿಸಿ ಮನೆಗೆ ಮರಳುತ್ತಿದ್ದೆ. ಮಂಗಳೂರು ವಿಶ್ವವಿದ್ಯಾನಿಲಯಕ್ಕಿಂತ ಒಂದು ಕಿಲೋ ಮೀಟರ್ ದೂರದ ಅಸೈಗೋಳಿ ಎಂಬ ಪೇಟೆಯಲ್ಲಿ ಒಂದು ಬಾರ್ ಇದೆ. ಬಾರಿನ ಮುಂದಿನ ರಸ್ತೆಯಲ್ಲಿ ನಿಂತು ಕೆಲವರು ಕೈ ತೋರಿಸಿ ಡ್ರಾಪ್ ಕೇಳುವುದಿದೆ.

ಒಮ್ಮೆ ಒಬ್ಬ ಪರಿಚಯಸ್ಥ ಪುಣ್ಯಾತ್ಮ ಡ್ರಾಪ್ ಕೇಳಿದ. ಒಂದರ್ಧ ಕಿಲೋ ಮೀಟರ್ ಕ್ರಮಿಸಿರಬಹುದಷ್ಟೇ. ಆತ ಸಂಪೂರ್ಣವಾಗಿ ಎಡಬದಿಗೆ ವಾಲುತ್ತಿದ್ದ. ಇನ್ನು ಅರ್ಧ ನಿಮಿಷ ಮುಂದಕ್ಕೆ ಕೊಂಡು ಹೋದರೂ ಈತ ವಾಲುತ್ತಾ ಬೈಕಿಂದ ಕೆಳಗೆ ಬೀಳುತ್ತಾನೆಂದು ಖಚಿತವಾಯಿತು. ಇದು ದಾರಿಯಲ್ಲಿ ಹೋಗುವ ಮಾರಿಯನ್ನು ಮನೆಗೆ ಕರೆದಂತಹ ಕತೆಯಾಗಬಹುದು ಎಂದು ಕೂಡಲೇ ಗೇರ್ ತಗ್ಗಿಸಿ ಬೈಕ್ ನಿಲ್ಲಿಸಿದೆ. ಅದೇನೋ ಶಬ್ದ ಬರುತ್ತಿದೆ, ಒಮ್ಮೆ ಇಳಿ ನೋಡೋಣ ಎಂದೆ. ಆತ ಬೈಕಿಂದ ಇಳಿದದ್ದೊಂದುಂಟು, ಎಕ್ಸಲೇಟರ್ ತಿರುವಿಯೇ ಬಿಟ್ಟೆ..

ನಮ್ಮ ಕೊಣಾಜೆಯಲ್ಲಿ ಶಿವ ಎಂಬ ಸುಮಾರು ಅರುವತ್ತು ವರ್ಷ ವಯಸ್ಸಾಗಿರುವ ವ್ಯಕ್ತಿಯೊಬ್ಬನನ್ನು ಆತನ ಹೆಂಡತಿ-ಮಕ್ಕಳು ಬಿಟ್ಟು ಹೋಗಿದ್ದಾರೆ. ಆತ ಒಬ್ಬಂಟಿ ಬದುಕಿನಿಂದಾಗಿ ಮಾನಸಿಕ ಖಾಯಿಲೆಗೆ ತುತ್ತಾಗಿದ್ದ. ಸಾಮಾನ್ಯವಾಗಿ ಆತನಿಗೆ ಯಾರೂ ಬೈಕ್‍ನಲ್ಲಿ ಡ್ರಾಪ್ ಕೊಡುವುದಿಲ್ಲ. ನಾನು ಆತನೊಂದಿಗೆ ತಮಾಷೆಯ ಮಾತುಗಳನ್ನಾಡುತ್ತಿರುತ್ತೇನೆ. ಆದುದರಿಂದ ನನ್ನನ್ನು ಕಂಡರೆ ಆತನಿಗೆಲ್ಲಿಗಾದರೂ ತುರ್ತಾಗಿ ಹೋಗುವ ಕೆಲಸವಿರುತ್ತದೆ. ಬೈಕ್ ನಿಲ್ಲಿಸಿ ಏರಿಸುತ್ತೇನೆ. ಇಳಿಯುವಾಗ ಹತ್ತು ರೂಪಾಯಿಯೂ ಕೊಡಲೇಬೇಕು. ಸುಮಾರು ಹತ್ತು ವರ್ಷಗಳ ಹಿಂದೆ ಐದು ರೂಪಾಯಿಯಲ್ಲಿದ್ದ ಶಿವ ಚಹಾದ ಬೆಲೆಯೇರುತ್ತಲೇ ತನ್ನ ಡಿಮ್ಯಾಂಡನ್ನು ಹಂತ ಹಂತವಾಗಿ ಏರಿಸಿ ಸದ್ಯ ಹತ್ತು ರೂಪಾಯಿಯಲ್ಲಿದ್ದಾನೆ.

ಹೀಗೆ ಡ್ರಾಪಾಯಣದ ಕತೆಗಳು ಹೇಳಿದಷ್ಟೂ ಮುಗಿಯದು. ಈ ಲಾಕ್‍ಡೌನ್‍ನಿಂದಾಗಿ ಡ್ರಾಪ್ ಕೇಳುವ ಕೆಲವರ ಅಧಿಕ ಪ್ರಸಂಗತನದಿಂದ ಬೇಸತ್ತು ತೇಜಸ್ವಿಯವರು ತನ್ನ ಸ್ಕೂಟರಿನ ಹಿಂಬದಿ ಸೀಟು ಕಳಚಿದ್ದು ಯಾಕೆಂದು ಪ್ರಾಯೋಗಿಕವಾಗಿ ಅನುಭವಕ್ಕೆ ಬರುತ್ತಿದೆ..
(ವ್ಯಕ್ತಿಗಳ ಹೆಸರು ಬದಲಾಯಿಸಲಾಗಿದೆ)


ಇದನ್ನು ಓದಿ: ‘ಪ್ರತೀಕಾರ’: ರಾಜಶೇಖರ್‌ ಅಕ್ಕಿಯವರ ಕಥೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...