‘ಲಾಲ್ ಸಲಾಂ’, ‘ಕಾಮ್ರೇಡ್’ ಎಂಬ ಪದಗಳನ್ನು ಬಳಸುವುದು ಅಥವಾ ಲೆನಿನ್ ಅವರ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದರೆ ನಿಮ್ಮನ್ನು ಅಸ್ಸಾಂನಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿಸಬಹುದಾಗಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ರೈತ ಮುಖಂಡ ಅಖಿಲ್ ಗೊಗೊಯ್ ಅವರ ಆಪ್ತ ಸಹಾಯಕ ಬಿಟ್ಟು ಸೋನೊವಾಲ್ ವಿರುದ್ಧದ ಚಾರ್ಜ್‌ಶೀಟ್‌ನಲ್ಲಿ, ಅವರು ತಮ್ಮ ಕೆಲವು ಸ್ನೇಹಿತರನ್ನು ‘ಕಾಮ್ರೇಡ್’ ಎಂದು ಉಲ್ಲೇಖಿಸಿದ್ದಾರೆ ಮತ್ತು ಇತರೆಡೆಗಳಲ್ಲಿ ‘ಲಾಲ್ ಸಲಾಮ್’ ನಂತಹ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಔಟ್‌ಲುಕ್ ವರದಿ ಮಾಡಿದೆ.
ಕಾಮ್ರೇಡ್ ಎಂದರೆ ಸಂಗಾತಿ, ಒಡನಾಡಿ ಎಂಬರ್ಥ ಬರುತ್ತದೆ. ಹಾಗೆಯೇ ಲಾಲ್ ಸಲಾಂ ಎಂದರೆ ಕೆಂಪುವಂದನೆ ಎಂಬುದಾಗಿದೆ. (ಕಮ್ಯುನಿಸ್ಟ್ ಚಳವಳಿಯು ಕೆಂಪು ಬಣ್ಣವನ್ನು ತನ್ನ ಸಂಘಟನೆಯ ಬಣ್ಣವನ್ನಾಗಿಸಿಕೊಂಡಿದೆ.) ಈ ಪದಗಳನ್ನ ನೂರಾರು ವರ್ಷಗಳಿಂದ ಹಲವು ಚಳವಳಿಗಳಲ್ಲಿ ಬಳಕೆಯಲ್ಲಿವೆ. ಹಾಗಾಗಿ ಕೇವಲ ಈ ಪದಗಳನ್ನು ಬಳಸಿದ ಮಾತ್ರವೇ ಅವರ ಮೇಲೆ ಆರೋಪ ಹೊರಿಸುತ್ತಿರುವುದು ಪೊಲೀಸರಿಗೆ ಮತ್ತೇನು ಸಾಕ್ಷ್ಯ ಸಿಗದಿದ್ದುಕ್ಕೆ ತೇಪೆ ಸಾರಿಸುವ ಪ್ರಯತ್ನವಷ್ಟೇ ಎಂದು ಹಲವು ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.
ಸೋನೊವಾಲ್ ಮತ್ತು ಗೊಗೊಯ್‌ನ ಇತರ ಇಬ್ಬರು ಸಹಾಯಕರನ್ನು ಈ ವರ್ಷದ ಆರಂಭದಲ್ಲಿ ಯುಎಪಿಎಯ ವಿವಿಧ ಆರೋಪದಡಿ ಎನ್‌ಐಎ ಬಂಧಿಸಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಸ್ಸಾಂ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಭಾರಿ ಪ್ರತಿಭಟನೆ ನಡೆಸಿದಾಗ ಗೊಗೊಯ್ ಅವರನ್ನು ಬಂಧಿಸಲಾಗಿತ್ತು.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 120 ಬಿ, 253 ಎ, 153 ಬಿ ಮತ್ತು ಯುಎಪಿಎ ಸೆಕ್ಷನ್ 18 ಮತ್ತು 39 ರ ಅಡಿಯಲ್ಲಿ ಎನ್ಐಎ ಪ್ರಕರಣಕ್ಕೆ (13/2019) ಸಂಬಂಧಿಸಿದಂತೆ ಗೊಗೊಯ್ ಅವರು ಡಿಸೆಂಬರ್ 16, 2019 ರಿಂದ ಬಂಧನದಲ್ಲಿದ್ದಾರೆ.
ಮೇ 29 ರಂದು ಸಲ್ಲಿಸಲಾದ ಚಾರ್ಜ್‌ಶೀಟ್‌ನಲ್ಲಿ, “ಬಂಡವಾಳಶಾಹಿಗಳು ನಮಗೆ ಹಗ್ಗವನ್ನು ಮಾರಾಟ ಮಾಡುತ್ತಾರೆ ಮತ್ತು ನಾವು ಅದರಲ್ಲಿ ಅವರನ್ನೆ ನೇತು ಹಾಕುತ್ತೇವೆ” ಎಂಬ ವಾಕ್ಯದೊಂದಿಗೆ ಸೋನೊವಾಲ್ ಲೆನಿನ್‌ರ ಒಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಎನ್‌ಐಎ ಸಲ್ಲಿಸಿದ 40 ಪುಟಗಳ ಚಾರ್ಜ್‌ಶೀಟ್‌ನಲ್ಲಿ ತಮ್ಮ ನಾಯಕರ ವಿರುದ್ಧದ ಯಾವುದೇ ಆರೋಪಗಳನ್ನು ಸಾಬೀತುಪಡಿಸಲು ಯಾವುದೇ ದೃಢವಾದ ಪುರಾವೆಗಳಿಲ್ಲ ಎಂದು ಗೊಗೊಯ್ ಸಲಹೆಗಾರರಾಗಿರುವ ರೈತರ ಸಂಘಟನೆಯಾದ ಕೃಷಿಕ್ ಮುಕ್ತಿ ಸಂಗ್ರಾಮ್ ಸಮಿತಿ (ಕೆಎಂಎಸ್ಎಸ್) ಆರೋಪಿಸಿದೆ.
ಚಾರ್ಜ್‌ಶೀಟ್ ಅನ್ನು ಉಲ್ಲೇಖಿಸಿದ ಕೆಎಂಎಸ್ಎಸ್ ಅಧ್ಯಕ್ಷ ಭಾಸ್ಕೊ ಸೈಕಿಯಾ, ತನಿಖಾ ಸಂಸ್ಥೆ ಕೆಎಂಎಸ್ಎಸ್ ನಾಯಕರನ್ನು ಮಾವೋವಾದಿಗಳೆಂದು ಬ್ರಾಂಡ್ ಮಾಡಲು ಪ್ರಯತ್ನಿಸುತ್ತಿದೆ. ಮಾರುಕಟ್ಟೆಯಲ್ಲಿ ಮುಕ್ತವಾಗಿ ಲಭ್ಯವಿರುವ ಪುಸ್ತಕಗಳನ್ನು ಓದುವುದು ಮಾವೋವಾದಿ ಎಂಬುದಕ್ಕೆ ಸಾಕ್ಷಿಯಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
“ಅಖಿಲ್ ಗೊಗೊಯ್ ಮಾವೋವಾದಿ ಎಂದು ನಂಬಿಸಲು ಎನ್ಐಎ ಬಯಸಿದೆ. ಆದರೆ ಅವರು ಯಾವುದೇ ದೃಢವಾದ ಸಾಕ್ಷ್ಯವನ್ನು ನೀಡಲು ಸಾಧ್ಯವಾಗಲಿಲ್ಲ. ಅವರು ಮಾವೋವಾದದ ಕುರಿತ ಪುಸ್ತಕಗಳ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಎನ್ಐಎ ‘ಸಮಾಜವಾದಕ್ಕೆ ಒಂದು ಪರಿಚಯ’ ಮತ್ತು ‘ಕಮ್ಯುನಿಸ್ಟ್ ಪ್ರಣಾಳಿಕೆ’ ಮುಂತಾದ ಪುಸ್ತಕಗಳನ್ನು ವಶಪಡಿಸಿಕೊಂಡಿದೆ. ಈ ಪುಸ್ತಕಗಳನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಸಲಾಗಿದೆ. ಇದು ಹಾಸ್ಯಾಸ್ಪದವಾಗಿದೆ” ಸೈಕಿಯಾ ಹೇಳಿದರು.
ಸಿಎಎ ವಿರೋಧಿ ಆಂದೋಲನದಲ್ಲಿ, ಸೈಕಿಯಾ ಈ ಚಳುವಳಿ ಜನರ ಚಳುವಳಿ ಎಂದು ಹೇಳಿದರು. “ಜನರು ತಮ್ಮ ಗುರುತು ಮತ್ತು ಸಂಸ್ಕೃತಿಯ ಬಗ್ಗೆ ಭಯಪಡುತ್ತಿರುವುದರಿಂದ ಪ್ರತಿಭಟಿಸುತ್ತಿದ್ದಾರೆ. ಸಿಎಎ ವಿರೋಧಿ ಪ್ರತಿಭಟನೆಯ ಸಮಯದಲ್ಲಿ ಹಿಂಸಾಚಾರದಲ್ಲಿ ಕೆಎಂಎಸ್ಎಸ್ ನಾಯಕರ ಪಾತ್ರವಿದೆ ಮತ್ತು ಅದು ಮಾವೋವಾದಿ ದಾಳಿಯನ್ನು ಹೋಲುತ್ತದೆ ಎಂದು ಎನ್ಐಎ ಹೇಳುತ್ತಿದೆ. ಆದರೆ ನಾವು ಹಿಂಸಾಚಾರವನ್ನು ನಂಬುವುದಿಲ್ಲ” ಎಂದು ಸೈಕಿಯಾ ಹೇಳಿದ್ದಾರೆ.

ಸಿಎಎ ವಿರೋಧಿ ಪ್ರತಿಭಟನೆಗಳು ಗುವಾಹಟಿಯಲ್ಲಿ ಹಿಂಸಾತ್ಮಕವಾಗಿತ್ತು. ಇದು ಸಾರ್ವಜನಿಕ ಆಸ್ತಿಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿತು. ಡಿಸೆಂಬರ್ 12 ರಂದು ಪೊಲೀಸರು ಜೋರ್ಹಾಟ್‌ನಿಂದ ಗೊಗೊಯ್ ಅವರನ್ನು ಬಂಧಿಸಿದರು. ಅಂದಿನಿಂದ, ನ್ಯಾಯಾಲಯದಿಂದ ಜಾಮೀನು ಪಡೆದಿದ್ದರೂ ಸಹ ಆತನನ್ನು ಬಿಡುಗಡೆ ಮಾಡಲಾಗಿಲ್ಲ, ಏಕೆಂದರೆ ಆತನ ವಿರುದ್ಧ ಹೊಸ ಪ್ರಕರಣಗಳನ್ನು ಪೊಲೀಸರು ದಾಖಲಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಈ ಹಿಂದೆ ಭೀಮಾ ಕೊರೇಂಗಾವ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ ವ್ಯಕ್ತಿಯ ಮನೆಯಲ್ಲಿ ವಾರ್ ಅಂಡ್ ಪೀಸ್ ಪುಸ್ತಕ ಇದ್ದುದನ್ನು ಗಮನಿಸಿದ ನ್ಯಾಯಾಧೀಶರು “ಇನ್ಯಾವುದೋ ದೇಶದ ಗಡಿಯಲ್ಲಿ ನಡೆದ ಯುದ್ದದ ಬಗೆಗಿನ ಪುಸ್ತಕವನ್ನು ನೀವು ಏಕೆ ಇಟ್ಟುಕೊಂಡಿದ್ದೀರಿ” ಎಂದು ಪ್ರಶ್ನಿಸಿದ್ದರು. ಈಗ ಕೇವಲ ಕಾಮ್ರೇಡ್ ಮತ್ತು ಲಾಲ್ ಸಲಾಂ ಪದ ಬಳಸಿದ್ದಕ್ಕೆ ಯುಎಪಿಎ ಕಾಯ್ದೆ ಬಳಸಿದ್ದಾರೆ. ಇದು ಎಲ್ಲಿಗೆ ಹೋಗಿ ಮುಟ್ಟುವುದೋ ಗೊತ್ತಿಲ್ಲ…
ಇದನ್ನೂ ಓದಿ: ವಾರ್ ಅಂಡ್ ಪೀಸ್ ಓದುವವರೆ ಗಮನಿಸಿ ಪ್ಲೀಸ್, ಗದಗಿಗೂ ಬಂತು ಎಚ್ಚರವಿರಲಿ…


