Homeಮುಖಪುಟವಿಶ್ವ ಪರಿಸರ ದಿನ: ಸಸ್ಯಯಾನದ ಅಮೃತ ಬಿಂದು ಹಿಂದೆ - ಡಾ. ಟಿ.ಎಸ್. ಚನ್ನೇಶ್

ವಿಶ್ವ ಪರಿಸರ ದಿನ: ಸಸ್ಯಯಾನದ ಅಮೃತ ಬಿಂದು ಹಿಂದೆ – ಡಾ. ಟಿ.ಎಸ್. ಚನ್ನೇಶ್

- Advertisement -
- Advertisement -

ವಿಶ್ವ ಪರಿಸರ ದಿನದ ಅಂಗವಾಗಿ ಡಾ. ಟಿ.ಎಸ್. ಚನ್ನೇಶ್ ರವರ ಸಸ್ಯಯಾನದ ಅಮೃತ ಬಿಂದು ಪುಸ್ತಕಕ್ಕೆ ಅವರೇ ಬರೆದು ಮುನ್ನುಡಿಯನ್ನು ನಾನುಗೌರಿ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ.

ಹೀಗೆ ಒಂದು ದಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆವರಣದಲ್ಲಿ ಆಪ್ತ ಗೆಳೆಯ ಆಕಾಶ್ ಸಿಗುವವರಿದ್ದರು. ನಾವು ಸಾಮಾನ್ಯವಾಗಿ ಅಲ್ಲಿನ ಕ್ಯಾಂಟೀನಿನ ಕಾಫಿ ಹೀರುತ್ತಾ, ನಮ್ಮ ಬಹುತೇಕ ಬೌದ್ಧಿಕ ಚರ್ಚೆಗಳನ್ನು ಒರೆಹಚ್ಚಿ, ಸಾಣೆಹಿಡಿದು ಒಪ್ಪ ಮಾಡಿದ್ದಿದೆ. ಆ ದಿನ ಮೇಯಿನ್ ಗೇಟಿನಿಂದ ಹಾಯ್ದು ಹೋಗುವಾಗ ಕಣ್ಣಿಗೆ ಬಿದ್ದ ಬಿಲ್ವಾರ ಮರವೊಂದು ಹಳೆಯ ನೆನಪನ್ನು ಕೆದಕಿತು. ಬಾಗೆ (Albizia lebbeck), ಬಿಲ್ವಾರ (Albizia odoratissima) ಹಾಗೂ ಚಿಗರೆ ಅಥವಾ ಚುಜ್ಜುಲು (Albizia amara) ಮರಗಳು ಅಕ್ಕ ತಂಗಿಯರಿದ್ದಂತೆ! ಎಲೆಗಳ ವಿನ್ಯಾಸ, ಮರದ ನೋಟ, ಇತ್ಯಾದಿಗಳಲ್ಲಿ ಒಂದಕ್ಕೊಂದು ಸಾಮ್ಯತೆ ಇರುತ್ತದೆ. ಎಲೆಗಳ ಸೈಜಿನಲ್ಲಿ ಬಾಗೆ ದೊಡ್ಡದು, ಚುಜ್ಜುಲು ಚಿಕ್ಕದು. ಕಾಯಿಗಳೂ ಅಷ್ಟೆ. ಇವನ್ನೆಲ್ಲಾ ಹೇಳಿ ನನ್ನ ಮನಸ್ಸಿನಲ್ಲಿ ಪರ್ಮನೆಂಟಾಗಿಸಿದ್ದ ಕೃಷಿ ಕಾಲೇಜಿನಲ್ಲಿ ಫಾರೆಸ್ಟ್ರಿ ಕಲಿಸಿದ್ದ ಖಾನ್ ಸಾಹೇಬರು, ಪ್ರೊ.ಬಿ.ಜಿ.ಎಲ್. ಸ್ವಾಮಿಯವರ ಶಿಷ್ಯರು. ಇವನ್ನೆಲ್ಲಾ ಜೋಡಿಸಿ ಹಂಚಿಕೊಳ್ಳಲು ಹಾಗೂ ಈ ಮೂರೂ ಮರಗಳ ಸಂಬಂಧಗಳ ಕಥನವನ್ನು ಹೇಳುವಂತೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆವರಣದ ಬಿಲ್ವಾರ ಮರವೊಂದು ಒತ್ತಾಯ ಮಾಡಿತು ಎನ್ನಬೇಕು. ಅದಕ್ಕೆಲ್ಲಾ ಮತ್ತೊಂದು ಮುಖ್ಯ ಕಾರಣ ನನ್ನೂರಿನಲ್ಲಿ ಕಳೆದ ಸರಿ ಸುಮಾರು 35-40 ವರ್ಷಗಳಿಂದಲೂ ನಿಂತ ಬಿಲ್ವಾರದ ಸಂಬಂಧಿಯಾದ ಬಾಗೆ (Albizia lebbeck) ಮರದ ಕಾಯಿಗಳ ಗಿಲ-ಗಿಲ ಸದ್ದು ಬಾಲ್ಯದಿಂದಲೂ ನನ್ನೊಳಗೆ ಉಳಿದೇ ಇತ್ತು. ಹಾಗಾಗಿ ಬಾಗೆ-ಬಿಲ್ವಾರಗಳ ನೆಪದಿಂದಾಗಿ ನಮ್ಮ ಸಾಂಸ್ಕೃತಿಕ ಮುಖಾಮುಖಿಯಾದ ಗಿಡ-ಮರಗಳ ಕಥನಗಳ ಬರೆಯುವ ಉತ್ಸಾಹ ಮೂಡಿತ್ತು. ಇದನ್ನೆಲ್ಲಾ ಮಾಮೂಲಿಯಂತೆ ಗೆಳೆಯ ಆಕಾಶ್ ಜೊತೆ ಮೊದಲ ಬಾರಿಗೆ ಚರ್ಚೆ ನಡೆಸಿದಾಗ ಅವರಿಂದ ನಿರೀಕ್ಷಿಸಿದ್ದ ಬೆಂಬಲವೇನೂ ಸಿಗಲಿಲ್ಲ.

ಅದರ ಜೊತೆಯಲ್ಲೇ ಹತ್ತಾರು ವರ್ಷಗಳ ಹಿಂದೆ ಖ್ಯಾತ ವಿಮರ್ಶಕರಾದ ಕೀರ್ತಿನಾಥ ಕುರ್ತಕೋಟಿಯವರ “ನೂರು ಮರ, ನೂರ ಸ್ವರ” ಪುಸ್ತಕದ ಕೆಲವು ಪುಟಗಳನ್ನು ತಿರುವಿ ಹಾಕಿದಾಗ ಹೆಚ್ಚು ಆಕರ್ಷಕವಾಗಿದ್ದು, ಅದರ ಶೀರ್ಷಿಕೆ. ಅದರ ನೆನಪಲ್ಲಿ ಗಟ್ಟಿಯಾಗಿ ಉಳಿದದ್ದು “ನೂರು ಮರ”! ಈಗ ಕೀರ್ತಿನಾಥರೂ ಇಲ್ಲ, ಖಾನ್ ಸಾಹೇಬರೂ, ಇಲ್ಲ, ನನಗೆ ಸಸ್ಯವಿಜ್ಞಾನದ ಪ್ರೀತಿಗೆ ಕಾರಣವಾಗಿರುವ ಮೂಲ ಪಾಠಗಳನ್ನು ಮಾಡಿದ್ದ ಕೃಷಿಕಾಲೇಜಿನ ಸತ್ಯವತಿಯವರೂ ಇಲ್ಲ. ಸುತ್ತಲೂ ಸದಾ ಕಾಣುವ ಗಿಡ-ಮರಗಳ ಕಾರಣದಿಂದ ನನ್ನ ಮನಸ್ಸಿನಿಂದ ದೂರವಾಗಿರದ “ನೂರು ಮರ” ಶೀರ್ಷಿಕೆಯ ನೆಪದಲ್ಲಿ ನೂರು ಮರಗಳ ಕಥನಗಳನ್ನು ಅವುಗಳ ವೈಜ್ಞಾನಿಕ, ಸಾಮಾಜಿಕ, ಸಾಂಸ್ಕೃತಿಕ ಹಿನ್ನೆಲೆಯಿಂದ ದಾಖಲಿಸಿ ಆ ಮೂಲಕ ಪ್ರೊ. ಬಿ.ಜಿ.ಎಲ್. ಸ್ವಾಮಿಯವರ ಜನ್ಮ ಶತಮಾನದ ಗೌರವವನ್ನು ಸಲ್ಲಿಸುವ ಮನಸ್ಸಾಯಿತು. ಹಾಗಾಗಿ ಸಸ್ಯ ಸಂಕುಲಗಳು ಮಾನವ ಕುಲದ ಜೊತೆಗಿನ ಸಾಹಚರ್ಯದ ಸಂಗತಿಗಳನ್ನು ಸಂಕಥನಗಳನ್ನಾಗಿಸುವ ಬಗೆಗಿನ ಮಾತುಗಳು ಗೆಳೆಯ ಆಕಾಶ್ ಅವರ ಅನುಮಾನದ ಜೊತೆಗಿನ ಚರ್ಚೆಯನ್ನೂ ಮೀರಿ, ನನ್ನ ಫೇಸ್ ಬುಕ್ಕಿನ ಗೋಡೆಯಲ್ಲಿ “ಸ್ವರ್ಗದ ಮರ”ದ ಮೂಲಕ ಕಾಣಿಸಿಕೊಂಡು ಆರಂಭವಾದವು. ಆರಂಭದಿಂದಲೇ “ಸ್ವರ್ಗ”ದ ಮರವೇರಿದ ಮೇಲೆ ಕಥನಗಳ ಕಟ್ಟುವ ಹಾಗೂ ಹಂಚಿಕೊಳ್ಳುವ ಸಂಕಷ್ಟಗಳ ಪರಿಹಾರ ಸುಲಭವೇ ಆಯಿತು.
“ಸ್ವರ್ಗ”ದ ಮರದಿಂದ ಆರಂಭಸಿದ ಮೇಲೆ ಅಲ್ಲಿನ “ಅಮೃತ” ಸಿಗುವ ತನಕವಾದರೂ ಪ್ರಯತಿಸಬೇಕೆಂದು ಅಮೃತಬಳ್ಳಿಯವರೆಗೂ ಮೊದಲ ಪ್ರಯತ್ನವಾಗಿ ಹತ್ತು ಸಸ್ಯಗಳ ಕಥನಗಳಿಂದ ಯಾನವು ಆರಂಭವಾಯಿತು. ಈ ಹತ್ತು ಸಸ್ಯಗಳ ಪುಟ್ಟ ಪರಿಚಯದ ಯಾನಕ್ಕೆ ಸ್ವೀಡನ್ ದೇಶದವರಾದ ಕಾರ್ಲ್ ಲಿನೆಯಾಸ್ ಕಾಲದ ಮಾಹಿತಿಗಳಿಂದ ಹಾಗೂ ಇದೀಗ ಫೇಸ್ ಬುಕ್ಕಿನಲ್ಲ್ಲಿಯವರೆಗಿನ ಕಥಾನಕಗಳ ಪ್ರೀತಿಯ ಓದುಗರತನಕ ಧಾರಾಳವಾದ ಬೆಂಬಲವು ಮುಂದಿನ ಸಸ್ಯಯಾನಕ್ಕೆ ಒತ್ತಾಸೆ ಸಿಕ್ಕಿತು. ಮಾನವಕುಲದ ಇತಿಹಾಸವು ಇಂತಹಾ ಸಸ್ಯಪ್ರೇಮದ ಅನಂತ ಪಯಣಗಳನ್ನು ಸವೆಸಿದೆ. ಸಹಸ್ರಾರು ಐತಿಹಾಸಿಕ ವ್ಯಕ್ತಿಗಳ ಸಾಹಸ, ಆಸಕ್ತಿ ಎಲ್ಲವನ್ನೂ ಸಸ್ಯಪ್ರೀತಿಯ ಚರಿತ್ರೆಯು ಹೊಂದಿದೆ. ಅನೇಕರಿಗೆ ನೆನಪಿರಬಹುದು, ನಮ್ಮ ತಾಯಂದಿರು, ಅಜ್ಜಿಯರೂ, ತಮ್ಮ ಸ್ನೇಹಿತರ ಕೈತೋಟಗಳಿಂದ ಆಕರ್ಷಿತರಾದ ಸಸ್ಯಗಳ ಬೀಜ, ಸಸಿ, ಬೇರುಬಿಡಬಲ್ಲ ಕಾಂಡದ ತುಂಡನ್ನು ಊರಿಂದ-ಊರಿಗೆ ತುಂಬು ಪ್ರೀತಿಯಿಂದ ತರುತ್ತಿದ್ದರಲ್ಲವೇ? ಹೀಗೆ ಸಸ್ಯಯಾನದ ಹಿಂದೆ ಅನಂತ ಕೈಗಳೂ, ಮನಸ್ಸುಗಳೂ ದುಡಿದಿವೆ. ಇಂತಹ ಸಣ್ಣ-ಪುಟ್ಟ ಸಂಗತಿಗಳೇ ಅಲ್ಲದೇ ಹಲವು ಬೃಹತ್ತಾದ ದಶಕಗಳ-ಶತಕಗಳ ಹುಡುಕಾಟ, ಕುತೂಹಲ ಹಾಗೂ ಮಾನವ ಶ್ರಮ-ದುಡಿಮೆಗಳನ್ನು ಒಳಗೊಂಡಿವೆ. ಜೀವದ ಹಂಗು ತೊರೆದು ಸಾಗರಗಳ ಜಾಲಾಡಿ ಖಂಡ-ಖಂಡಗಳ ಅಲೆದು ನೆಲದಿಂದ-ನೆಲಕ್ಕೆ ಪರಿಚಯಸಿದ ಸಹಸ್ರಾರು ವಿಚಾರಗಳಿವೆ. ಮಾನವ ಮಾತ್ರರಲ್ಲಿ ಮುಗಿಯಲಾರದ ಈ ಅನಂತ ಪಯಣಯದ “ಅಮೃತ ಬಿಂದು”ವಾಗಿ ಹುಟ್ಟಿಕೊಂಡ ಸಸ್ಯಯಾನದ ಕಥನಗಳು ಇವು.

ಮರಗಳೇ ಎನಿಸಿಕೊಳ್ಳದ ಬಿಲ್ವಾರ, ಚುಜ್ಜುಲುಗಳು ನಮಗೆ ಮರದ ಆಸೆಯ ಚರ್ಚೆಗೆ ಹಚ್ಚಿ ಆಕಾಶ್ ಜೊತೆ ಮಾತಿಗೆ ಮೊದಲು ಮಾಡಿದ್ದು ನಿಜ. ಕೀರ್ತಿನಾಥರ ನೂರು ಮರದ ಸ್ವರದ ದನಿಯು ನನ್ನ ಸಸ್ಯವಿಜ್ಞಾನದ ಗುರುಗಳಾದ ಸತ್ಯವತಿಯವರ ಮೂಲಕ ಬಿ.ಜಿ.ಎಲ್. ಸ್ವಾಮಿಯವರ ನೆನಪಿನಲ್ಲಿ ಹಾಯ್ದು ಹೋಯಿತು. ಗಿಡ-ಮರಗಳ ಸಂಕಥನಗಳು ನಮ್ಮ ಸಾಂಸ್ಕೃತಿಕ ಮುಖಾಮುಖಿಯಾಗುವಲ್ಲಿ ಅವುಗಳನ್ನು ಗುರುತಿಸುವ ಹಿನ್ನೆಲೆಯಲ್ಲಿ ವಿವರಿಸುವುದರಿಂದ ಆರಂಭಗೊಂಡು, ಹೆಸರಿಸಿ, ವರ್ಗೀಕರಿಸಿ, ಪೋಷಿಸಿ, ಅಗತ್ಯ ಬಿದ್ದಲ್ಲಿ ಬೆಳೆಸಿ, ಬಳಸಿಕೊಳ್ಳುವರೆಗೂ ಅವುಗಳ ಸಂಗತಿಗಳು ಒಳಗೊಂಡಿರುತ್ತವೆ. ಕೆಲವೊಮ್ಮೆ ಅನೇಕ ವಿಸ್ಮಯಕಾರಿ, ಕ್ರಾಂತಿಕಾರಕ, ಐತಿಹಾಸಿಕ ಸಂಗತಿಗಳನ್ನೂ ತಳುಕು ಹಾಕಿಕೊಂಡಿರುತ್ತವೆ. ಬಿಡಿ, ಬಿಡಿಯಾಗಿ ಹಂಚಿ ಹೋಗಿರುವ ಇವೆಲ್ಲವನ್ನೂ ವಿವಿಧ ಮೂಲಗಳಿಂದ ಒಟ್ಟು ಮಾಡಿ ಕಲೆಹಾಕಿ 15-20 ನಿಮಿಷಗಳ ಓದಿನ ಟಿಪ್ಪಣಿಗಳಾಗಿಸಿ ಒಂದೊಂದೇ ಪ್ರಭೇದವನ್ನು ವಿವರಿಸುವ ಪ್ರಯತ್ನಗಳಿವು. ಇಷ್ಟು ಸಂಗತಿಗಳೇನು ಸುಮ್ಮನೆ ನಡೆದವೇನಲ್ಲ. ಸಂಕೀರ್ಣವಾದ ಆಗುಹೋಗುಗಳನ್ನು ಒಳಗೊಂಡ ಪರ್ಯಟನೆಗಳನ್ನೂ, ಸಂಗ್ರಹಗಳನ್ನೂ, ಹಂಚಿಕೆಗಳನ್ನೂ ಒಳಗೊಂಡಿವೆ. ಜೊತೆಗೆ ಅಷ್ಟೆಲ್ಲಾ ಸಾಧ್ಯವಾಗಲು ಅವಶ್ಯಕ ವೈಧಾನಿಕತೆಗಳ ಸೃಜಿಸುವ ಸಂಕಟಗಳನ್ನೂ ಒಳಗೊಂಡಿವೆ.

ಕಾರ್ಲ್ ಲಿನೆಯಾಸ್ ಇಡೀ ಜೀವಿಜಗತ್ತಿಗೆ ಜಾಗತಿಕ ಮನ್ನಣೆಯ ಹೆಸರನ್ನು ಕೊಡುವ ವೈಧಾನಿಕತೆಯನ್ನು ಕೊಟ್ಟರಲ್ಲ! ಅವರ ಜೊತೆಯಲ್ಲೇ ಮಾಹಾನ್ ಮೇಧಾವಿಗಳು ತಮ್ಮ ಸಾಹಸ ಹಾಗೂ ಆಸಕ್ತಿಯನ್ನೂ ಜೀವಪರವಾಗಿಸಿ, ಇದನ್ನೆಲ್ಲಾ ಕಾಪಿಟ್ಟುಕೊಳ್ಳಲು ಕಾರಣಮಾಡಿ ಜೀವಿಪ್ರೀತಿಯನ್ನು ಮೆರೆದಿದ್ದಾರೆ. ಬಹುಪಾಲು ಇಂತಹಾ ಜೀವಿಪ್ರೇಮಿಗಳು ಸಸ್ಯಗಳ ಹುಡುಕಾಟದ ಮೂಲಕ ಜಗತ್ತಿನ ಮೂಲೆ ಮೂಲೆಗಳನ್ನು ಕಾಡು-ಮೇಡೆನ್ನದೆ ಸುತ್ತಾಡಿದ್ದಾರೆ. ಭಾರತದ ನೆಲದಲ್ಲೂ ವಿಲಿಯಂ ರಾಕ್ಸ್ಬರ್ಗ್, ಬುಕನನ್, ಹೆಂಡ್ರಿಕ್ ವಾನ್ ರ‍್ಹೀಡ್ ಮುಂತಾದವರಿಂದ ಸಸ್ಯಯಾನದ ಅಸಂಖ್ಯಾತ ಪ್ರಭಾವಳಿಯು ದಟ್ಟವಾಗಿದೆ. ವಾನ್ ರ‍್ಹೀಡ್ ಡಚ್ ಈಸ್ಟ್ ಇಂಡಿಯಾ ಕಂಪನಿಯ ಸೇವೆಯಲ್ಲಿ ಮಲಬಾರಿನ ಗವರ್ನರ್ ಆಗಿದ್ದವರು. ಇವರ ಮಲಬಾರಿನ ಸಸ್ಯಸಾಮ್ರಾಜ್ಯದ ಕಥಾನಕವು ಒಂದು ಅಪ್ರತಿಮ ದಾಖಲೆ. ಇದನ್ನು ರಚಿಸಲು ಅವರಿಗೆ ಮಲಬಾರಿನ ಬುಡಕಟ್ಟುಗಳು ನೆರವಾಗಿದ್ದರಂತೆ. ಜೊತೆಗೆ ರಾಕ್ಸ್ಬರ್ಗ್ ಅವರಂತೂ ಕರ್ನಾಟಕವೂ ಸೇರಿದಂತೆ ಭಾರತದಾದಂತ ಸುತ್ತಾಡಿ ಸಸ್ಯಸಂಕುಲಗಳ ಹುಡುಕಾಟ ನಡೆಸಿದರು. ಇವರು ಕೊಲ್ಕತ್ತಾದ ಸಸ್ಯವಿಜ್ಞಾನ ಪಾರ್ಕಿನ ಮುಖ್ಯಸ್ಥರೂ ಆಗಿದ್ದರು. ಇವರ ನಂತರ ಫ್ರಾನ್ಸಿಸ್ ಬುಕನನ್ ಮುಖ್ಯಸ್ಥರಾಗಿದ್ದರು. ಇವರೆಲ್ಲರೂ, ಜೊತೆಯಲ್ಲಿ ಇಂತಹಾ ನೂರಾರು-ಸಹಸ್ರಾರು ಹೆಸರುಗಳಿಂದ ದಾಖಲಾಗದವರೂ ಸೇರಿ ಸಸ್ಯಲೋಕವನ್ನು “ಅ-ಮೃತ”ವಾಗಿಸಿದ್ದಾರೆ. ಇವರ ಸಂಬಂಧಗಳನ್ನೆಲ್ಲಾ ಗಿಡ-ಮರಗಳ ಆಸಕ್ತಿಯಲ್ಲಿ ಜೊತೆಗೂಡಿಸಿ ಸಸ್ಯಯಾನವನ್ನು ಮಾಡುವು ಹಿತವು ಇಲ್ಲಿದೆ.

ಪ್ರೊ.ಬಿ.ಜಿ.ಎಲ್. ಸ್ವಾಮಿಯವರಂತೂ ತಮ್ಮ ಸಸ್ಯವೈಜ್ಞಾನಿಕ ಕಥನಗಳ ಮೂಲಕ ನಮ್ಮೊಳಗೂ ಅಮೃತದ ಸವಿಯನ್ನು ಹಂಚಿದ್ದಾರೆ. ಮಾತ್ರವಲ್ಲ ಸವಿಯನ್ನು ಶಾಶ್ವತವಾಗಿ ಉಳಿಸಿ ಹೋಗಿದ್ದಾರೆ. 2018ನೆಯ ವರ್ಷ ಪ್ರೊ.ಬಿ.ಜಿ.ಎಲ್. ಸ್ವಾಮಿಯವರ ಜನ್ಮ ಶತಮಾನೋತ್ಸವ ವರ್ಷ. ಅವರಿಂದು ನಮ್ಮೊಡನಿದ್ದಿದ್ದರೆ ನೂರೊಂದು ವಸಂತಗಳನ್ನು ಪೂರೈಸಿರುತ್ತಿದ್ದರು. ಅವರ ನೆನಪಿನಲ್ಲಿ ಕೀರ್ತಿನಾಥರ ಪುಸ್ತಕದ ಶೀರ್ಷಿಕೆಯಿಂದ ಮೈದೆಳೆದ “ನೂರು ಮರ”ಗಳ ಸ್ವರಮೇಳದ ಆರಂಭವಾದ ಈ ಸಸ್ಯಸಂಗೀತವು ಸಸ್ಯಪ್ರಿಯರಾದ ತಮ್ಮೆಲ್ಲರಿಗೂ ಇಂಪಾಗಿ, ಹಿತವಾಗಿಸಲು ಗಿಡ-ಮರಗಳ ಕಥನಗಳಲ್ಲಿ ಆಲಾಪನೆಯಿಂದ ಮುಂದುವರೆಯುತ್ತದೆ. ಇಲ್ಲಿನ ಬಡಿ ಪ್ರಬಂಧಗಳನ್ನು ಸಸ್ಯಸಂಕುಲದ ಸಂಗತಿಗಳ ಬಂದಿಶ್ ಎನ್ನಿ, ಪದ್ಯಗಳೆನ್ನಿ, ಕವನಗಳೆನ್ನಿ, ಮಾತುಗಳೆನ್ನಿ, ಏನಾದರೂ ಕರೆಯಿರಿ ಇಲ್ಲಿ ಏನೂ ವರ್ಗೀಕರಣದ ತರ್ಕಗಳಿಲ್ಲ. ವೈಜ್ಞಾನಿಕ-ತಾಂತ್ರಿಕ ಅತಿರೇಕದ ತೊಡಕುಗಳೂ ಇಲ್ಲಿಲ್ಲ. ನಿಮಗೆ ನೀವೆ ನಿಮ್ಮ ಸುತ್ತ ಮುತ್ತಲಿನ ಗಿಡ-ಮರಗಳ ಕಥೆಗಳ ಅನುರಣಿಸಲು ಸಾಧ್ಯವಾಗುವ ಆಸಕ್ತ ಮನಸ್ಸಿದ್ದರೆ ಸಾಕು. ಈ ಸಂಕಲದ ಮೊದಲೆರಡು ಅಧ್ಯಾಯಗಳು ವರ್ಗೀಕರಣ ಮೂಲ ಪಾಠಗಳ ಮೂಲಕ ಪ್ರವೇಶವನ್ನು ಒದಗಿಸುತ್ತವೆ. ನಂತರದ ಅಧ್ಯಾಯಗಳನ್ನು ಒಂದೊಂದೇ ಬಿಡಿಯಾಗಿಯೂ ಓದಬಲ್ಲ ಆಶಯಕ್ಕೆ ಬದ್ಧವಾಗಿವೆ. ಮೊದಲೆರಡು ಅಧ್ಯಾಯಗಳು ಮುಂದಿನ ಪ್ರತೀ ಅಧ್ಯಾಯದಲ್ಲೂ ಸೀಮಿತವಾಗುವ ಒಂದು ಪ್ರಭೇದದ ವಿವರಗಳನ್ನು ಆನಂದಿಸಲು ಬೇಕಾದ ಸರಕುಗಳನ್ನು ಕೊಡುತ್ತವೆ. ಆರಂಭದ ಚರ್ಚೆಯಲ್ಲಿ ಅನುಮಾನದಿಂದಿದ್ದ ನನ್ನ ಪ್ರೀತಿಯ ಗೆಳೆಯ ಆಕಾಶ್ ಮುಂದೆ ಪ್ರತೀ ಪ್ರಭೇದದ ಸಂಕಥನಗಳನ್ನೂ ಮೊದಲ ಓದುಗರಾಗಿ ಅವಶ್ಯಕ ತಿದ್ದುಪಡಿಗಳಿಗೆ ಸಹಾಯವಾಗುತ್ತಾ ಉತ್ಸಾಹವನ್ನು ಬೆಳೆಸುತ್ತಲೇ ಬೆನ್ನು ತಟ್ಟುವ (ಬೆನ್ನುಡಿ) ಮಾತುಗಳಿಂದ ಜೊತೆಯಾಗಿದ್ದಾರೆ.

ಫೇಸ್‌ಬುಕ್ಕಿನಲ್ಲಿ ಆರಂಭವಾದ ಈ ಸಸ್ಯಯಾನದ ಮೊದಲ ಎಂಟು-ಹತ್ತು ಪ್ರಬಂಧಗಳನ್ನು ಓದಿದ ಆಪ್ತ ಗೆಳತಿಯೊಬ್ಬಳು ಪ್ರೀತಿಯಿಂದ ಹೀಗೆ ಬರೆದಿದ್ದಳು. “ಸ್ವರ್ಗದ ಮರ”ದಿಂದ ಆರಂಭಗೊಂಡ ಸಸ್ಯಯಾನ, ಅಲ್ಲಿಂದ ಧರೆಗಿಳಿದ “ಪಾರಿಜಾತ”ದ ಪರಿಮಳವನ್ನು ಪಸರಿಸಿ, ಮುಂದೆ ಸಾಹಸದಿಂದ ಮುನ್ನುಗ್ಗಿ ಪಿರಂಗಿಗುಂಡಿನ “ಕ್ಯಾನನ್ ಬಾಲಿನ” ನಾಗಲಿಂಗ ಪುಷ್ಪದಲ್ಲಿ ಅರಳಿ, ಮನೋಲ್ಲಾಸಕ್ಕೆಂದು ನೇರವಾಗಿ ಆಫ್ರಿಕಾಗೆ ಟಿಕೆಟ್-ರಹಿತ ಪ್ರಯಾಣದಲ್ಲಿ (ಸವಣೂರಿನ) ಬೊಬಾಬ್ ದರ್ಶನ ಮಾಡಿಸಿದವು. ಆಗ ಅಲ್ಲಿನ (ಆಫ್ರಿಕಾ) ಬಿಸಿಲಿಗೆ ದಣಿದ ಮನಸ್ಸಿಗೆ ತಂಪುಕೊಡಲು ಮುಂದೆ ಬಾಗೆ, ಮಳೆ ಮರದ ನೆರಳನ್ನು ಪರಿಚಯಿಸುತ್ತಲೇ, ಮುಂದೆ ಪರೀಕ್ಷೆಯ ದಿನಗಳನ್ನು ನೆನಪಿಸಲು ಮಕ್ಕಳಿಗೆ ಸ್ಪರ್ಧೆಗಿಳಿದು ಬೆಳೆದ “ಟುಲಿಪ್” ಮರಗಳ ತೇರಿನ ಸುಂದರ ದರ್ಶನವನ್ನು ಕೊಟ್ಟವು. ಆಗ ಖುಷಿಯಲ್ಲಿ ಓಡುವ ಭರದಲ್ಲಿ ನೆಲನೋಡಿ ನಡೆವ ಎಚ್ಚರಕ್ಕೆ ಕಾಲಕೆಳಗಿನ “ಗರಿಕೆ”ಯ ನೆನಪಿಸುತ್ತಲ್ತೇ, ಬೇಸಿಗೆಯ ಕಾರಣದಿಂದ “ಬೇಲ”ದ ಪಾನಕದ ರುಚಿಯನ್ನು “ಅಮೃತ”(ಬಳ್ಳಿ)ದ ಸವಿಯಾಗಿಸಿದವು”. ಇಲ್ಲಿನ ಪ್ರಬಂಧಗಳಲ್ಲಿ ನೀವು ಓದುವ ಸ್ವರ್ಗದಮರ, ಪಾರಿಜಾತ, ನಾಗಲಿಂಗ ಪುಷ್ಪ, ಬೊ-ಬಾಬ್ ಮರ (ಸವಣೂರಿನ ದೊಡ್ಡ-ಹುಣಸೆಮರ), ಬಾಗೆ, ಮಳೆ ಮರಗಳಲ್ಲದೆ, ಆಫ್ರಿಕನ್ ಟುಲಿಪ್ ಮರ, ನೆಲಕ್ಕೆ ಅಂಟಿಕೊಂಡಂತೆ ಬೆಳೆವ “ಗರಿಕೆ” ಜೊತೆಗೆ ಬೇಲದ ಮರ ಹಾಗೂ ಅಮೃತಬಳ್ಳಿಯ ಕುರಿತಾಗಿ ಆಕೆಯ ಪ್ರತಿಕ್ರಿಯೆಯಿಂದ ಸಸ್ಯಯಾನದ ಒಟ್ಟಾರೆಯ ಮುಂದಿನ ಓಟಕ್ಕೆ ಪ್ರೇರಣೆಗಳು.

ಇಂತಹ ಆಪ್ತ ಮಾತುಗಳಿಂದ, ಜೊತೆಗೆ ಹತ್ತಾರು ಗೆಳೆಯ-ಗೆಳತಿಯರ ಪ್ರೀತಿಯ ಓದಿನ ಹಿತದಿಂದ ಹುಟ್ಟಿಕೊಂಡ ಸಸ್ಯಕಥನಗಳು ಪ್ರೊ.ಬಿ.ಜಿ.ಎಲ್. ಸ್ವಾಮಿಯವರ ಜನ್ಮ ಶತಮಾನೋತ್ಸವ ವರ್ಷದಲ್ಲಿ ಅವರ ನೆನಪಿನ ಸಸ್ಯಯಾನವಾಗಿದೆ. ಅವುಗಳ ಜೊತೆಗೆ ನಮ್ಮ ದಿನ ನಿತ್ಯದ ಕಾಫಿ, ಚಹಾ, ಅಡಿಕೆ-ಎಲೆ, ಹೊಟ್ಟೆ ತುಂಬುವ ಅನ್ನ, ಸಾಂಬಾರಿನ ಬೇಳೆ-ಕಾಳುಗಳು, ಒಗ್ಗರಣೆಯ ಕರಿಬೇವು ಅಲ್ಲದೆ, ಹೂವು-ಹಣ್ಣು ಗಿಡ-ಮರಗಳ ಬಗೆಗಿನ ಸಂಗತಿಗಳೆಲ್ಲಾ ಸೇರಿ ಸದ್ಯಕ್ಕಿನ್ನೂ “ಸಸ್ಯಯಾನದ ಅಮೃತ ಬಿಂದು” ವಾಗಿ ನಿಮ್ಮ ಕೈಯಲ್ಲಿದೆ. ನಮ್ಮ ನಿಮ್ಮನ್ನೆಲ್ಲಾ ಒಂದಲ್ಲ ಒಂದು ಬಗೆಯಲ್ಲಿ ಮುಖಾಮುಖಿಯಾಗುವ ಈ ಸಸ್ಯ ಪ್ರಭೇದಗಳ ಬೃಹತ್ತಾದ ಕಥನಗಳ ಅರಿಯುವ ಕುತೂಹಲಕ್ಕೆ ಪುಟ್ಟ ಮೆಟ್ಟಿಲಾಗುವ ಆಶಯ ನನ್ನದು. ಇದು ಲಕ್ಷ-ಲಕ್ಷ ಸಂಖ್ಯೆಯಲ್ಲಿರುವ ಸಸ್ಯ ಸಂಪತ್ತಿನ ಸಾಂಸ್ಕೃತಿಕ ಲೋಕಕ್ಕೆ ನಮ್ಮೆಲ್ಲರನ್ನೂ ತೆರೆದುಕೊಳ್ಳುವ ಕಿಟಕಿಯಾಗುವ ಪುಟ್ಟ ಆಸೆಯಷ್ಟೇ ನನ್ನದು. ನಮಸ್ಕಾರ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...