ಲಾಕ್‌ಡೌನ್ ಅವಧಿಯಲ್ಲಿ ಕೆಲಸದಿಂದ ತೆಗೆದುಹಾಕಿದ ಅಥವಾ ಪೂರ್ಣ ಸಂಬಳ ನೀಡದ ಉದ್ಯೋಗದಾತ ಕಂಪನಿಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಲಾಕ್‌ಡೌನ್ ಅವಧಿಯಲ್ಲಿ ಉದ್ಯೋಗಿಗಳಿಗೆ ಪೂರ್ಣ ವೇತನವನ್ನು ನೀಡುವಂತೆ ಮತ್ತು ಕೆಲಸದಿಂದ ತೆಗೆಯಬಾರದೆಂದು ಉದ್ಯೋಗದಾತರಿಗೆ ಕೇಳುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರದ ಮಾರ್ಚ್ 29 ರಂದು ಆದೇಶಿಸಿತ್ತು. ಕೇಂದ್ರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ಮೇಲಿನ ವಿಚಾರಣೆ ನಡೆಸಿದ ಸುಪ್ರೀಂ ತೀರ್ಪನ್ನು ಜೂನ್ 12 ಕ್ಕೆ ಕಾಯ್ದಿರಿಸಿದೆ.
ಕೊರೊನಾ ಲಾಕ್‌ಡೌನ್ ಸಮಯದಲ್ಲಿನ 54 ದಿನಗಳವರೆಗೆ ಸಂಬಳಕ್ಕಾಗಿ ಏನು ಮಾಡಬೇಕೆಂಬುದನ್ನು ಪ್ರಕಟಿಸಲು ಉದ್ಯೋಗದಾತರು ಮತ್ತು ಕಾರ್ಮಿಕರ ನಡುವೆ ಕೆಲವು ಮಾತುಕತೆಗಳು ನಡೆಯಬೇಕಿದೆ ಎಂದು ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ತಿಳಿಸಿದೆ.
ಸುಪ್ರೀಂ ಕೋರ್ಟ್‌ನಲ್ಲಿ ವೇತನದ ಬಗ್ಗೆ ತನ್ನ ಆದೇಶವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ, ‘ಸಂಬಳ ಪಾವತಿಸಲು ಅಸಮರ್ಥತೆ ಹೊಂದಿರುವ ಉದ್ಯೋಗದಾತರು ತಮ್ಮ ಲೆಕ್ಕಪರಿಶೋಧಿತ ಬ್ಯಾಲೆನ್ಸ್ ಶೀಟ್‌ಗಳು ಮತ್ತು ಖಾತೆಗಳನ್ನು ನ್ಯಾಯಾಲಯದಲ್ಲಿ ಒದಗಿಸುವಂತೆ ನಿರ್ದೇಶಿಸಬೇಕು’ ಎಂದು ಕೇಳಿದೆ.
ಸರ್ಕಾರವು “ನೀಡಲಾಗಿರುವ ಅಧಿಸೂಚನೆಗಳು ಕಾರ್ಮಿಕರ ಜೀವನದಲ್ಲಿ ಮುಖ್ಯ ಪಾತ್ರವಹಿಸಲಿದೆ. ಏಕೆಂದರೆ, ದುಡಿಮೆಯಿಲ್ಲದೆ ಕಾರ್ಮಿಕರು ಜೀವನ ನಿರ್ವಹಿಸುವುದು ಕಷ್ಟವಾಗುತ್ತದೆ.’ ಹಾಗಾಗಿ ಕಾರ್ಮಿಕರ ಸಂಕಷ್ಟಗಳನ್ನು ತಗ್ಗಿಸಲು ಇದು ನೆರವಾಗುತ್ತದೆ. ನ್ಯಾಯದ ಹಿತದೃಷ್ಟಿಯಿಂದ ಅಥವಾ ಸಾರ್ವಜನಿಕ ಹಿತಾಸಕ್ತಿಯಿಂದ ಅದನ್ನು ಕಡೆಗಣಿಸಲು ಆಗುವುದಿಲ್ಲ” ಎಂದು ಸರ್ಕಾರವು ತನ್ನ ಮೇಲ್ಮನವಿಯಲ್ಲಿ ಹೇಳಿದೆ.
ಈ ಸಂದರ್ಭದಲ್ಲಿ, ‘ಈ ವಿಷಯದ ಬಗ್ಗೆ ಅರ್ಹತೆಗಳ ಮೇಲೆ ತೀರ್ಪು ನೀಡಲು ಕೋರ್ಟ್ ಒಲವು ತೋರಬೇಕು, ಅರ್ಜಿದಾರರು(ಉದ್ಯೋಗದಾತರು) ವೇತನವನ್ನು ಪಾವತಿಸಲು ಅಸಮರ್ಥರಾಗಿದ್ದಾರೆ ಎಂಬುದಕ್ಕೆ ಪುರಾವೆ ನೀಡಲು ನಿರ್ದೇಶಿಸಬೇಕು. ಮಾರ್ಚ್ 29, 2020 ರ ಆದೇಶದ ಪ್ರಕಾರ ಅವರ ಲೆಕ್ಕಪರಿಶೋಧಿತ ಬ್ಯಾಲೆನ್ಸ್ ಶೀಟ್‌ಗಳು ಮತ್ತು ಖಾತೆಗಳನ್ನು ನ್ಯಾಯಾಲಯದ ಮುಂದಿಡಬೇಕು” ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ಹ್ಯಾಂಡ್ ಟೂಲ್ಸ್ ತಯಾರಕರ ಸಂಘವು ಸಲ್ಲಿಸಿದ್ದ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಎಲ್.ಎನ್.ರಾವ್, ಎಸ್.ಕೆ.ಕೌಲ್ ಮತ್ತು ಬಿ.ಆರ್.ಗವಾಯಿ ಅವರ ನ್ಯಾಯಪೀಠವು ಗೃಹ ಸಚಿವಾಲಯದ (ಎಂಎಚ್‌ಎ) ಮಾರ್ಚ್ 29ರ ಸುತ್ತೋಲೆಯು ಸರ್ವಭಕ್ಷಕ ಆದೇಶವಾಗಿದೆ ಮತ್ತು ಬೃಹತ್ ಪ್ರಶ್ನೆಗಳನ್ನು ಒಳಗೊಂಡಿದ್ದು, ಆ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದೆ.
ಮೇ 15 ರಂದು ವಿಚಾರಣೆ ನಡೆಸಿದ್ದ ಸುಪ್ರೀಂ, ಕಂಪೆನಿಗಳು ಮತ್ತು ಉದ್ಯೋಗದಾತರು ರಾಷ್ಟ್ರೀಯ ಲಾಕ್‌ಡೌನ್ ಅವಧಿಯಲ್ಲಿ ನೌಕರರಿಗೆ ಪೂರ್ಣ ವೇತನವನ್ನು ನೀಡುವ ಅಧಿಕೃತ ನಿರ್ದೇಶನವನ್ನು ಉಲ್ಲಂಘಿಸಿರುವವ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಬಾರದು ಎಂದು ಸರ್ಕಾರವನ್ನು ನಿರ್ಬಂಧಿಸಿತ್ತು.
ಅಲ್ಲದೆ, ನ್ಯಾಯಮೂರ್ತಿ ಕೌಲ್ ಅವರು ಲಾಭಗಳಿಸದ ಅಥವಾ ಕೆಲಸವನ್ನು ಸ್ಥಗಿತಗೊಳಿಸಿರುವ ಸಣ್ಣ ಕಂಪನಿಗಳು ಇರಬಹುದು. ಅಂತಹ ಕಂಪನಿಗಳು ವೇತನವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಸರ್ಕಾರ ಸಹಾಯ ಹಸ್ತ ಚಾಚದ ಹೊರತು ಈ ಘಟಕಗಳು ತಮ್ಮ ಕಾರ್ಮಿಕರಿಗೆ ಸಂಬಳ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠವು ಕೇಂದ್ರಕ್ಕೆ ನೋಟಿಸ್ ನೀಡಿದೆ.
ಇದನ್ನೂ ಓದಿ: ಒಂದೇ ರೀತಿಯ ಪ್ರಕರಣ ಮೂರು ಭಿನ್ನ ತೀರ್ಪುಗಳು: ಅರ್ನಾಬ್ ಗೋಸ್ವಾಮಿಗೆ ಸಿಕ್ಕ ಅವಕಾಶ ಶಾರ್ಜೀಲ್ ಇಮಾಮ್, ಪೂನಿಯಾಗೇಕಿಲ್ಲ?


