ಉತ್ತರ ಪ್ರದೇಶದ ಅಮ್ರೋಹಾದ ಸ್ಥಳೀಯ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ್ದಕ್ಕಾಗಿ ಸವರ್ಣೀಯ ಯುವಕರು ದಲಿತ ಬಾಲಕನನ್ನು ಶನಿವಾರ ರಾತ್ರಿ ಗುಂಡಿಕ್ಕಿ ಕೊಂದಿದ್ದಾರೆ.
ಡೊಮ್ಖೇಡಾ ಗ್ರಾಮದ ನಾಲ್ವರು ಸವರ್ಣೀಯ ಯುವಕರು ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ್ದಾನೆ ಎಂದು ಆಕ್ಷೇಪಿಸಿ ರಾತ್ರಿ 17 ವರ್ಷದ ದಲಿತ ಬಾಲಕ ವಿಕಾಸ್ ಜಾತವ್ ಅವರ ಮನೆಗೆ ಬಂದು ಮಲಗಿದ್ದಾಗ ಗುಂಡು ಹಾರಿಸಿದ್ದಾರೆ.
ಮಾರ್ಚ್ 31 ರಂದು ಸಾಯುವ ಒಂದು ವಾರದ ಮೊದಲು ದೇವಸ್ಥಾನವೊಂದರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಕ್ಕಾಗಿ ಗ್ರಾಮದ ಸವರ್ಣೀಯ ಯುವಕರೊಂದಿಗೆ ವಾಗ್ವಾದ ಉಂಟಾಗಿತ್ತು ಎಂದು ಬಾಲಕನ ತಂದೆಯ ಹೇಳಿದ್ದಾರೆ.
“ಮಾರ್ಚ್ 31 ರಂದು, ಚೌಹಾನ್ ಸಮುದಾಯದ ಕೆಲವು ಯುವಕರು ನನ್ನ ಮಗನನ್ನು ದೇವಸ್ಥಾನಕ್ಕೆ ಪ್ರವೇಶಿಸದಂತೆ ತಡೆದು, ನನ್ನ ಮಗನನ್ನು ಹೊಡೆದು ಜಾತಿ ನಿಂದನೆಯನ್ನು ಮಾಡಿದ್ದರು” ಎಂದು ಬಾಲಕನ ತಂದೆ ಓಂ ಪ್ರಕಾಶ್ ಜಾತವ್ ಹೇಳಿದ್ದಾರೆ.
ಜಾತವ್ ಹಾಗೂ ಸವರ್ಣೀಯ ಯುವಕರ ನಡುವಿನ ಜಗಳದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.
ಓದಿ: ಇಮ್ರಾನ್ ಪಾಷ ಬಂಧನ; ಶ್ರೀರಾಮುಲುರನ್ನು ಯಾವಾಗ ಬಂಧಿಸುತ್ತೀರಿ? ನೆಟ್ಟಿಗರ ಪ್ರಶ್ನೆ
“ಶನಿವಾರ ರಾತ್ರಿ, ಹೋರಾಮ್ ಚೌಹಾನ್ ಮತ್ತು ಲಾಲಾ ಚೌಹಾನ್ ಸೇರಿದಂತೆ ನಾಲ್ಕು ಜನರು ನನ್ನ ಮನೆಗೆ ಬಂದು, ನನ್ನ ಮಗ ಮಲಗಿದ್ದಾಗ ಗುಂಡು ಹಾರಿಸಿ ನಮಗೆ ಬೆದರಿಕೆ ಹಾಕಿ ಓಡಿಹೋಗಿದ್ದಾರೆ” ಎಂದು ಓಂ ಪ್ರಕಾಶ್ ಹೇಳಿದ್ದಾರೆ.
ಅಪರಾಧದ ಸುದ್ದಿ ಹರಡಿದ ನಂತರ ಭಯಭೀತರಾದ ಗ್ರಾಮಸ್ಥರು ಪೊಲೀಸರನ್ನು ಕರೆಸಿದ್ದಾರೆ. ಅಮ್ರೋಹಾ ಎಸ್ಪಿ ವಿಪಿನ್ ಟಾಡಾ, “ಸಂತ್ರಸ್ತ ಕುಟುಂಬದ ದೂರಿನ ಆಧಾರದ ಮೇಲೆ, ನಾವು ನಾಲ್ಕು ಯುವಕರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಪ್ರತ್ಯಕ್ಷದರ್ಶಿಗಳ ಆಧಾರದ ಮೇಲೆ ನಾವು ಬಂಧನಗಳನ್ನು ಮಾಡುತ್ತೇವೆ. ಮೃತ ವ್ಯಕ್ತಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಹಾಗೂ ತನಿಖೆ ನಡೆಯುತ್ತಿದೆ” ಎಂದು ಹೇಳಿದ್ದಾರೆ.
ಕೊಲೆ ಮತ್ತು ಎಸ್‌ಸಿ / ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಉಲ್ಲಂಘನೆ ಆರೋಪದಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಓದಿ: ಉತ್ತರಪ್ರದೇಶದಲ್ಲಿ ಯುವಕನನ್ನು ಮರಕ್ಕೆ ಕಟ್ಟಿ ಸಜೀವ ದಹನ!


