ಕೊಳವೆ ಬಾವಿ ವಿಚಾರಕ್ಕೆ ಸಂಬಂಧಿಸಿ ವಯಸ್ಸಾದ ದಲಿತ ವ್ಯಕ್ತಿಯ ಮೇಲೆ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಹಾಗೂ ಅವರ ಸಹೋದರ ಸೇರಿ ಹಲ್ಲೆ ನಡೆಸಿದ ಅಮಾನವೀಯ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯ ತಿಪ್ಪಾಪುರ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ತಿಪ್ಪಾಪುರದ ಹನುಮಂತರಾಯಪ್ಪ ಎಂಬವರು ತಮ್ಮ ಜಮೀನಿಲ್ಲಿ ಕೊಳವೆ ಬಾವಿಯನ್ನು ಕೊರೆಸಿದ್ದು, ಅಲ್ಲಿ ನೀರು ಸಿಗುತ್ತಿದ್ದಂತೆ, ತಮ್ಮ ಜಮೀನಿನಲ್ಲಿ ನೀರು ಕಡಿಮೆಯಗುತ್ತದೆ ಎಂದು ವಾಗ್ವಾದ ಮಾಡಿದ ಮಾಜಿ ಗ್ರಾ.ಪಂ.ಅಧ್ಯಕ್ಷ ನರಸಿಂಹಮೂರ್ತಿ ಹಾಗೂ ಅವರ ಸಹೋದರ ಅಶ್ವಥ್ ಎಂಬವರು ಸೇರಿ ಏಕಾಏಕಿ ಹನುಮಂತರಾಯಪ್ಪನವರಿಗೆ ಜಾತಿ ನಿಂದನೆ ಮಾಡಿ ಕೈ ಹಾಗೂ ಕಾಲಿಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ಹನುಮಂತರಾಯಪ್ಪನವರ ಕೈ ಹಾಗೂ ಕಾಲಿಗೆ ತೀವ್ರ ಗಾಯವಾಗಿದ್ದು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯನ್ನು ಖಂಡಿಸಿರುವ ಸ್ಥಳೀಯ ದಲಿತ ಸಂಘಟನೆಗಳು, ಮಧುಗಿರಿಯಲ್ಲಿ ಇತ್ತೀಚೆಗೆ ದಲಿತರ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದು, ಹಲ್ಲೆ ಮಾಡಿದವರನ್ನು ಬಂದಿಸಬೇಕೆಂದು ಒತ್ತಾಯಿಸಿದೆ.
“ಕೊರೊನಾ ಸಾಂಕ್ರಮಿಕ ಬಂದು ಇಡೀ ವಿಶ್ವವೇ ತಲ್ಲಣಗೊಂಡಿದೆ, ಆದರೆ ಅದಕ್ಕೂ ಮುಂಚಿನ ಜಾತಿ ವೈರಸ್ ಮಾತ್ರ ನಮ್ಮ ದೇಶದಿಂದ ತೊಲಗುತ್ತಿಲ್ಲ. ಈ ಪ್ರಕರಣ ಗಂಭೀರವಾಗಿದ್ದು ಪೊಲೀಸರು ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸುತ್ತೇನೆ” ಎಂದು ದಲಿತ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಮಹಾರಾಜು ಅವರು ಹೇಳಿದ್ದಾರೆ.


