ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ ದಿನದಿಂದ ಗೊಂದಲದ ಗೂಡಾಗಿದ್ದ ರಾಜ್ಯ ಕಾಂಗ್ರೆಸ್ ಘಟಕಕ್ಕೆ ಟ್ರಬಲ್ ಶೂಟರ್ ಖ್ಯಾತಿಯ ಡಿ.ಕೆ.ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಎರಡು ತಿಂಗಳೇ ಕಳೆದಿದೆ. ಕಳೆದ ಜೂನ್.14 ರಂದು ಕೆಪಿಸಿಸಿ ಕಚೇರಿಯಲ್ಲಿ ಹೋಮ ಹವನ ಮಾಡುವ ಮೂಲಕ ಡಿ.ಕೆ.ಶಿವಕುಮಾರ್ ಕೊನೆಗೂ ಅಧಿಕೃತವಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ, ಆರ್.ವಿ.ದೇಶಪಾಂಡೆ, ಪರಮೇಶ್ವರ್, ದಿನೇಶ್ ಗುಂಡೂರಾವ್ ಅಂತಹ ನಾಯಕರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾಗಲೂ ಅವರ ಕಾರಣಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿಲ್ಲ. 2013ರಲ್ಲಿ ಸಿದ್ದರಾಮಯ್ಯನವರಿಗೆ ಸಿಎಂ ಆಗುವ ಸಾಧ್ಯತೆ ತೆರೆದುಕೊಂಡಿದ್ದರ ಜೊತೆಗೆ ಬಿಜೆಪಿ ಮೂರು ಹೋಳಾಗಿದ್ದರಿಂದ ಅಧಿಕಾರಕ್ಕೆ ಬಂದಿತಷ್ಟೇ. ಸಿದ್ದರಾಮಯ್ಯನವರೂ ಸೇರಿದಂತೆ ಘಟಾನುಘಟಿ ನಾಯಕರೆಲ್ಲಾ ಕಾಂಗ್ರೆಸ್‌ನಲ್ಲೇ ಇದ್ದಾಗ್ಯೂ, ಬಿಜೆಪಿಯ ಓಟವನ್ನು ಕಟ್ಟಿಹಾಕಲು ಸಾಧ್ಯವಾಗುತ್ತಿಲ್ಲ. ಇಂತಿಪ್ಪ ಪರಿಸ್ಥಿತಿಯಲ್ಲಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ರಾಜ್ಯ ಘಟಕದ ಅಧಿಕಾರ ಹಿಡಿದಿದ್ದಾರೆ.
ಇನ್ಯಾರೋ ಚುಕ್ಕಾಣಿ ಹಿಡಿದಿದ್ದಾಗ ಬಂದ ಕೆಲವು ಸಮಸ್ಯೆಗಳನ್ನು, ಉಪಚುನಾವಣೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಎಂಬ ಖ್ಯಾತಿ ಗಳಿಸಿಕೊಂಡಿದ್ದರು. ಆದರೆ ಬಿಜೆಪಿಯ ಓಟವನ್ನು ನಿಯಂತ್ರಿಸಿ, ಕಾಂಗ್ರೆಸ್‌ಅನ್ನು ಮುಂದಕ್ಕೆ ತರಲು ಅವರಿಗೆ ಸಾಧ್ಯವೇ? ಈ ನಿಟ್ಟಿನಲ್ಲಿ ಡಿಕೆಶಿ ಪಕ್ಷದಲ್ಲಿ ಯಾವ್ಯಾವ ಬದಲಾವಣೆಯನ್ನು ತರಬೇಕು? ಇವರು ಅಧಿಕಾರ ಸ್ವೀಕರಿಸಿದ ಮೇಲೆ ಆಗಬಹುದಾದ ಬದಲಾವಣೆಗಳು ಯಾವುದು? ಕಾಂಗ್ರೆಸ್ ಪಕ್ಷದ ಪಾರಂಪರಿಕ ಸಂಸ್ಕೃತಿಗಿಂತ ಡಿಕೆಶಿ ಭಿನ್ನರೇ? ಕಾಂಗ್ರೆಸ್‌ನ ಹಳೆಯ ಸಂಸ್ಕೃತಿ ಮತ್ತು ಡಿಕೆಶಿಯಲ್ಲಿ ಇರಬಹುದಾದ ಭಿನ್ನತೆ ಕಾಂಗ್ರೆಸ್ ಅನ್ನು ಎತ್ತಿ ನಿಲ್ಲಿಸಲು ಶಕ್ತವಾಗಬಲ್ಲವೇ? ಈ ಎಲ್ಲಾ ಅಂಶಗಳನ್ನು ಇಲ್ಲಿ ಚರ್ಚಿಸಲಾಗಿದೆ.
ಬಿಜೆಪಿಯ ಕೇಡರ್ ಶಕ್ತಿ v/s ಕಾಂಗ್ರೆಸ್‌ನ ಮಾಸ್ ಸಂಸ್ಕೃತಿ
ಕಳೆದ ಎರಡು ದಶಕದಲ್ಲಿ ಬಿಜೆಪಿ ನಾಯಕರು ರಾಷ್ಟ್ರಾದ್ಯಂತ ತಮ್ಮ ಪಕ್ಷಕ್ಕೆ ಬುಡಮಟ್ಟದಿಂದ ಗಟ್ಟಿಯಾದ ನೆಲೆ ಕಟ್ಟಿದ್ದಾರೆ. ಇದಕ್ಕೆ ಬಿಜೆಪಿ ಕಂಡುಕೊಂಡ ಸೂತ್ರ ಕೇಡರ್ ಸ್ಥಾಪನೆ.
ವಿದ್ಯಾರ್ಥಿಗಳನ್ನು ಸಂಘಟಿಸಲು ಶಿಕ್ಷಾ ಭಾರತ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ರೈತರನ್ನು ಸಂಘಟಿಸಲು ಭಾರತೀಯ ಕಿಸಾನ್ ಸಂಘ, ಕಾರ್ಮಿಕರನ್ನು ಸಂಘಟಿಸಲು ಭಾರತೀಯ ಮಜ್ದೂರ್ ಸಂಘ ಮತ್ತು ಯುವಕರನ್ನು ಸಂಘಟಿಸಲು ಯುವ ಮೋರ್ಚಾ, ಮಹಿಳೆಯರಿಗಾಗಿ ಮಹಿಳಾ ಮೋರ್ಚಾ ಬಿಜೆಪಿ ಪರವಾಗಿ ಎಲ್ಲೆಡೆ ಸಕ್ರಿಯವಾಗಿದೆ.
ಈ ಎಲ್ಲಾ ಘಟಕಗಳು ಬಿಜೆಪಿ ಪಕ್ಷಕ್ಕೆ ಪ್ರತ್ಯಕ್ಷವಾಗಿ ಬಲ ತುಂಬಿದರೆ, ಯುವ ಬ್ರಿಗೇಡ್, ಭಜರಂಗದಳ, ಶ್ರೀರಾಮಸೇನೆಯಂತಹ ಕೆಲವು ಸಂಘಟನೆಗಳು ಪರೋಕ್ಷವಾಗಿ ಬಲ ತುಂಬುತ್ತಿದೆ. ಬಿಜೆಪಿಯೇ ರಾಜಕೀಯ ಮುಖವಾಡವಾಗಿರುವುದು ಆರೆಸ್ಸೆಸ್‌ಗೆ ಮತ್ತು ಅದು ವಿಸ್ತಾರವಾಗಿ ಬೆಳೆಯುತ್ತಿದೆ. ಆ ಮೂಲಕ ಎಲ್ಲವೂ ಬಲಪಂಥೀಯ ರಾಜಕೀಯ ಸಿದ್ದಾಂತಕ್ಕೆ ಆಕ್ಸಿಜನ್ ಪೂರೈಕೆ ಮಾಡುತ್ತಿದೆ ಎಂದರೆ ತಪ್ಪಾಗಲಾರದು.
ಆದರೆ, ಕಾಂಗ್ರೆಸ್ ಪಕ್ಷಕ್ಕೆ ಇಂತಹ ಯಾವುದೇ ಕೇಡರ್ ವ್ಯವಸ್ಥೆ ಇಲ್ಲ. ಎಲ್ಲಾ ರಾಜಕೀಯ ಪಕ್ಷಗಳಿಗೆ ಇರುವಂತೆ ಕಾಂಗ್ರೆಸ್ ಪಕ್ಷಕ್ಕೂ ಸಹ NSUI, Youth Congress ಚಾಲ್ತಿಯಲ್ಲಿದೆಯಾದರೂ ಈ ಸಂಘಟನೆಗಳಿಗೆ ಸೈದ್ಧಾಂತಿಕ ನೆಲೆ ಇಲ್ಲ. ಕಾಂಗ್ರೆಸ್ ಹಿರಿಯ ನಾಯಕರಿಗೇ ಸೈದ್ಧಾಂತಿಕ ಸ್ಪಷ್ಟತೆ ಇಲ್ಲದಿರುವಾಗ ಇಂತಹ ಘಟಕಗಳಿಂದ ನಾವು ಅದನ್ನು ನಿರೀಕ್ಷೆ ಮಾಡುವುದು ಸಹ ತಪ್ಪಾಗುತ್ತದೆ. ಹೀಗಾಗಿ ಈ ಘಟಕಗಳಿಂದ ಕಾಂಗ್ರೆಸ್‌ಗೆ ಹೆಚ್ಚಿನದೇನು ಪ್ರಯೋಜನವಿಲ್ಲ.
ಹೀಗಾಗಿ ಕಾಂಗ್ರೆಸ್ ನಾಯಕರು ಆಗಾಗ್ಗೆ ಹೇಳುವ ಮಾತೊಂದಿದೆ. ನಮ್ಮದು ಕೇಡರ್ ಆಧಾರಿತ ಪಕ್ಷವಲ್ಲ; ಮಾಸ್ ಆಧಾರಿತ ಪಕ್ಷ. ಹಾಗಾದರೆ ಅದೆಷ್ಟು ನಿಜ ಎಂಬುದನ್ನು ನೋಡೋಣ.
ಬಡ-ಶೋಷಿತ ಸಮುದಾಯಗಳ ನೆಲೆಯನ್ನೂ ಕಳೆದುಕೊಳ್ಳುತ್ತಿದೆ ಕಾಂಗ್ರೆಸ್
ಬಿಜೆಪಿಯ ಕಾರ್ಪೋರೇಟ್ ಪರ ಹಾಗೂ ಬಲಾಢ್ಯ ಜಾತಿವರ್ಗಗಳ ಪರವಾದ ನೀತಿಗಳೆದುರು ಜನಸಾಮಾನ್ಯರನ್ನು ಸಂಘಟಿಸಿ ಗೆಲ್ಲುವ ಸಾಧ್ಯತೆಯಾದರೂ ಕಾಂಗ್ರೆಸ್‌ಗಿದೆ. ಆದರೆ, ಕಾಂಗ್ರೆಸ್‌ಗೆ ಸಮಾಜದಲ್ಲಿರುವ ಬಡವರ-ರೈತರ ಮತ್ತು ಶೋಷಿತ ಸಮುದಾಯಗಳನ್ನು ಕದಲದಂತೆ ಇಟ್ಟುಕೊಳ್ಳುವ ರೀತಿ-ನೀತಿಗಳೂ ಕೈಕೊಡುತ್ತಿವೆ.
ಉದಾಹರಣೆಗೆ; ಲಾಕ್‌ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರನ್ನು ಅವರ ಮನೆಗಳಿಗೆ ತಲುಪಿಸಲು ರಾಜ್ಯ ಸರ್ಕಾರ ಹಣ ವಸೂಲಿ ಮಾಡುತ್ತಿದೆ ಎಂದು ತಿಳಿದ ತಕ್ಷಣ ಕಾಂಗ್ರೆಸ್ ನಾಯಕರು ರಾಜಾರೋಷವಾಗಿ ಬೀದಿಗೆ ಇಳಿದಿದ್ದರು. ಸ್ವತಃ ಡಿ.ಕೆ.ಶಿವಕುಮಾರ್ ವಲಸೆ ಕಾರ್ಮಿಕರ ಟಿಕೆಟ್‌ಗಾಗಿ KSRTC ಗೆ 1 ಕೋಟಿ ಚೆಕ್ ಒಯ್ದಿದ್ದರು. ಕಾಂಗ್ರೆಸ್ ಹೈಕಮಾಂಡ್ ಸಹಾ ವಲಸೆ ಕಾರ್ಮಿಕರ ರೈಲು ಟಿಕೆಟ್ ದರವನ್ನು ತಾವೇ ಭರ್ತಿ ಮಾಡುವುದಾಗಿ ಆಶ್ವಾಸನೆ ನೀಡಿತ್ತು.
ಆದರೆ, ಕೇಂದ್ರ ಸರ್ಕಾರ ಇದನ್ನು ನಿರಾಕರಿಸಿದ ನಂತರ ಕಾಂಗ್ರೆಸ್ ಮತ್ತೆ ಈ ಕುರಿತು ಚಿಂತಿಸುವ, ಕಾರ್ಮಿಕರನ್ನು ಅವರವರ ತವರು ಜಿಲ್ಲೆಗಳಿಗೆ ಕಳುಹಿಸುವ ಗೋಜಿಗೆ ಹೋಗಿರಲಿಲ್ಲ. ಆ ನಂತರವೂ ವಲಸೆ ಕಾರ್ಮಿಕರ ಮಹಾ ನಡಿಗೆ ನಡೆದೇ ಇತ್ತು. ಆದರೂ ಕಾಂಗ್ರೆಸ್ Silent Mode ನಲ್ಲಿತ್ತು.
ಭವಿಷ್ಯದಲ್ಲಿ ರೈತರ ಮರಣ ಶಾಸನವಾಗಬಲ್ಲ APMC ಮತ್ತು ಭೂ-ಸುಧಾರಣ ತಿದ್ದುಪಡಿ ಕಾಯ್ದೆಯನ್ನು ಕಾಂಗ್ರೆಸ್ ಆರಂಭದಲ್ಲಿ ದೊಡ್ಡ ದನಿಯಲ್ಲಿಯೇ ವಿರೋಧಿಸಿತ್ತು. ಆದರೆ, ದಿನ ಕಳೆದಂತೆ ಈ ದ್ವನಿ ಅಡಗಿದೆ. ಏಕೆಂದರೆ 1992ರಲ್ಲಿ ಮುಕ್ತ ಆರ್ಥಿಕತೆಗೆ ನಾಂದಿ ಹಾಡಿ ರೈತ ವಿರೋಧಿ ನೀತಿಗಳಿಗೆ ಅವಕಾಶ ಮಾಡಿಕೊಡುವ ಮೂಲಕ ಮತ್ತು ಯುಪಿಎ 2ರ ಅವಧಿಯಲ್ಲಿ ಚಿಲ್ಲರೆ ವ್ಯಾಪಾರದ ಕ್ಷೇತ್ರದಲ್ಲಿ ಎಫ್‌ಡಿಐಗೆ ತೆರೆಯುವ ಮೂಲಕ ಇವೆಲ್ಲಕ್ಕೂ ಶ್ರೀಕಾರ ಹಾಕಿದ್ದು ಕಾಂಗ್ರೆಸ್ಸೇ. ಈಗಲೂ ಕಾಂಗ್ರೆಸ್‌ನಲ್ಲಿ ಆ ಲಾಬಿ ಗಟ್ಟಿಯಾಗಿಯೇ ಇದೆ. ಅಂತಹ ಎಲ್ಲಾ ಕ್ರಮಗಳನ್ನು ಅತಿರೇಕಕ್ಕೆ ಕೊಂಡೊಯ್ಯುತ್ತಿರುವುದು ಬಿಜೆಪಿ. ಅದು ಮತ್ತೂ ಘಾತುಕ ರೀತಿಯಲ್ಲಿ. ಆದರೆ ಕಾಂಗ್ರೆಸ್‌ಗೆ ಈ ವಿಚಾರದಲ್ಲಿ ಯಾವ ಮಧ್ಯಮಮಾರ್ಗದ ನೆರೇಟಿವ್ ಮುಂದಿಡಲು ಆಗಬೇಕಿತ್ತೋ, ಅದೂ ಆಗುತ್ತಿಲ್ಲ. ಎಡಬಿಡಂಗಿತನವು ಮುಂದುವರೆದೇ ಇದೆ.
ಲಾಕ್ಡೌನ್ ಸಡಿಲವಾಗುತ್ತಿದ್ದಂತೆ ಉತ್ಪಾದನಾ ವಲಯದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಕಾರ್ಮಿಕರ ಕೆಲಸದ ಅವಧಿಯನ್ನು 8ರಿಂದ 12 ಗಂಟೆಗೆ ಏರಿಸಲು ಮುಂದಾಗಿತ್ತು. ಕೇಂದ್ರದ ಈ ನಿರ್ಧಾರವನ್ನು ಆರಂಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ವಿರೋಧಿಸಿತ್ತು. ಆದರೆ, ಕಾಂಗ್ರೆಸ್ ಆಡಳಿತವೇ ಇರುವ ರಾಜಸ್ತಾನ, ಪಂಜಾಬ್‌ನಲ್ಲಿ ಈ ನಿಯಮವನ್ನು ಅಂಗೀಕರಿಸಲಾಗಿದೆ. ಕರ್ನಾಟಕದಲ್ಲೂ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಸರ್ಕಾರವು ಇದನ್ನು ಜಾರಿಗೆ ತಂದಿದ್ದರಾದರೂ ಈಗ ಹಿಂತೆಗೆದುಕೊಳ್ಳಲಾಗಿದೆ. ರಾಜಸ್ತಾನಕ್ಕಿಂತ ಇಲ್ಲಿನ ನಿಯಮಗಳು ಪರವಾಗಿಲ್ಲ ಎನ್ನುವಂತಿತ್ತು.
ಒಳಮೀಸಲಾತಿ ತರಬೇಕೇ ಬೇಡವೇ, ವಿವಿಧ ಹಿಂದುಳಿದ ಸಮುದಾಯಗಳನ್ನು ಒಳಗೊಳ್ಳಲು ಏನು ಮಾಡಬೇಕು ಇಂತಹ ಹಲವಾರು ವಿಚಾರಗಳಲ್ಲಿ ಕಾಂಗ್ರೆಸ್‌ಗೆ ಗೊಂದಲ ಮುಂದುವರೆದೇ ಇದೆ. ಅತ್ತ ಕಮ್ಯುನಿಸ್ಟ್ ಸಂಘಟನೆಗಳ ರೀತಿ ಕಾಂಗ್ರೆಸ್ ಮಾಡಬೇಕೆಂದು ಇದರರ್ಥವಲ್ಲ. ಆದರೆ ಕಮ್ಯುನಿಸ್ಟ್ ಆಳ್ವಿಕೆಯಿರುವ ಕೇರಳ ಅಥವಾ ಕಮ್ಯುನಿಸ್ಟ್ ವಿರೋಧಿ ಆಗಿರುವ ದೆಹಲಿಯ ಆಮ್‌ಆದ್ಮಿ ಪಕ್ಷದ ಕಲ್ಯಾಣ ನೀತಿಯನ್ನೂ ಅಳವಡಿಸಿಕೊಳ್ಳದ ಕಾಂಗ್ರೆಸ್ ಆರ್ಥಿಕ ನೀತಿಯ ವಿಚಾರದಲ್ಲಿ ಬಿಜೆಪಿಯ ಬಿ ಟೀಂ ಎನ್ನುವಂತೆ ತೋರುತ್ತದೆ. ಡಿಕೆಶಿ ಇದರಲ್ಲಿ ಹಳೆಯ ಕಾಂಗ್ರೆಸ್‌ಗಿಂತ ಭಿನ್ನವಾಗಿರುವ ಯಾವುದೇ ಸಾಧ್ಯತೆ ಇಲ್ಲ.
ಗೆಲ್ಲುವುದೂ ಮಾನದಂಡವಾಗಿರದ ಪಕ್ಷ
ರಾಜಕೀಯದಲ್ಲಿ ಓರ್ವ ನಾಯಕನ ಕಾಲನ್ನು ಮತ್ತೊಬ್ಬರು ಎಳೆಯುವುದು ಸಾಮಾನ್ಯ. ಆದರೆ, ಬಿಜೆಪಿಗೆ ಹೋಲಿಕೆ ಮಾಡಿದರೆ ಕಾಂಗ್ರೆಸ್ ಪಕ್ಷದಲ್ಲಿ ಈ ಸಂಖ್ಯೆ ಅಧಿಕ. ಅಧಿಕಾರ-ಸ್ಥಾನಕ್ಕಾಗಿ ಲಾಬಿ ಮಾಡುವುದು, ಮತ್ತೊಬ್ಬರ ಉನ್ನತಿ ಸಹಿಸದೆ ಕಾಲೆಳೆಯುವುದು ಕಾಂಗ್ರೆಸ್ ಪಕ್ಷಕ್ಕೆ ಪರಂಪರಾಗತ ಸಂಸ್ಕೃತಿ ಎಂಬಂತೆ ಬಿಂಬಿತವಾಗಿದೆ.
ಇತ್ತೀಚೆಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಎಂಬ ಹಣೆಪಟ್ಟಿಯೊಂದಿಗೆ ಬಿಜೆಪಿ ಪಕ್ಷದಲ್ಲಿ ಅಶೋಕ್ ಗಸ್ತಿ, ಈರಣ್ಣ ಕಡಾಡಿ ಎಂಬ ಇಬ್ಬರಿಗೆ ರಾಜ್ಯಸಭಾ ಟಿಕೆಟ್ ನೀಡಲಾಯಿತು. ಇದನ್ನು ಗಿಮಿಕ್ ಎಂದೇ ಇಟ್ಟುಕೊಳ್ಳೋಣ. ಆದರೆ, ಇಂತಹ ಗಿಮಕ್ಕನ್ನೂ ಕಾಂಗ್ರೆಸ್‌ನಲ್ಲಿ ಊಹೆ ಮಾಡುವುದಕ್ಕೆ ಸಾಧ್ಯವಿಲ್ಲ. ಗೆಲ್ಲುವ ಸಾಧ್ಯತೆಯೇ ಟಿಕೆಟ್ ನೀಡಲು ಮಾನದಂಡ ಎಂದು ಕೆಲವು ಪಕ್ಷಗಳಲ್ಲಿ ಹೇಳಲಾಗುತ್ತದೆ. ಆದರೆ ಕಾಂಗ್ರೆಸ್‌ನಲ್ಲಿ ನಾಯಕರ ಬೆಂಬಲಿಗರಾಗುವುದು ಮಾತ್ರ ಮಾನದಂಡ. ಉದಾ. ಸಿಎಂ ಇಬ್ರಾಹಿಂ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದ ಪ್ರಮುಖ ನಾಯಕ. ಇದೇ ಕಾರಣಕ್ಕೆ ಇವರು ಸೋಲುತ್ತಾರೆ ಎಂಬುದು ಗೊತ್ತಿದ್ದರೂ ಸಹ 2013ರ ವಿಧಾನಸಭಾ ಚುನಾವಣೆಯಲ್ಲಿ ಭದ್ರಾವತಿಯ ಮಾಜಿ ಶಾಸಕ ಸಂಗಮೇಶ್ವರ ಅವರಿಗೆ ಟಿಕೆಟ್ ನಿರಾಕರಿಸಿ ಸಿ.ಎಂ.ಇಬ್ರಾಹಿಂಗೆ ಟಿಕೆಟ್ ನೀಡಲಾಗಿತ್ತು. ಇದರ ಫಲವಾಗಿ ಜೆಡಿಎಸ್ ಪಕ್ಷದ ಎಂ.ಜೆ.ಅಪ್ಪಾಜಿ ಗೆಲುವು ಸಾಧಿಸಿದ್ದರು. ಸಿ.ಎಂ.ಇಬ್ರಾಹಿಂ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.
ತನ್ನ ಬೆಂಬಲಿಗರಿಗೇ ಟಿಕೆಟ್ ಕೊಡುವುದೇ ಆದ್ಯತೆ ಎಂದು ಡಿಕೆಶಿ ಪಟ್ಟು ಹಿಡಿಯುತ್ತಾರೋ ಅಥವಾ ಗೆಲ್ಲುವ ಅಭ್ಯರ್ಥಿಯ ಪರ ನಿಂತುಕೊಳ್ಳುತ್ತಾರೋ ಎಂಬುದನ್ನು ನೋಡಲು ಇನ್ನೂ ಸಮಯ ಬರಬೇಕು. ಆದರೆ, ಒಬ್ಬರ ಕಾಲನ್ನು ಒಬ್ಬರು ಎಳೆಯುವ ಕಾಂಗ್ರೆಸ್ ಸಂಪ್ರದಾಯಕ್ಕೆ ಡಿಕೆಶಿ ತೀರಾ ಭಿನ್ನವಾಗಿದ್ದಾರೆ. ಸಿದ್ದರಾಮಯ್ಯ ಅವರ ಜೊತೆಗೆ ಎಷ್ಟೇ ತಿಕ್ಕಾಟ ಇದ್ದರೂ ಸಹ ಎಲ್ಲಾ ವಿಚಾರದಲ್ಲೂ ಎಲ್ಲಾ ನಾಯಕರನ್ನೂ ಅವರು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ ಎಂಬುದು ಅವರ ಬೆನ್ನಿಗಿರುವ ದೊಡ್ಡ ಬಲ.
ವಿರೋಧ ಪಕ್ಷದಂತೆ ಕೆಲಸ ಮಾಡಿ ಗೊತ್ತಿರದ ಕಾಂಗ್ರೆಸ್ಸು
ಕಾಂಗ್ರೆಸ್ ಪಕ್ಷಕ್ಕೆ ಆಡಳಿತ ಮಾಡಿ ಅಭ್ಯಾಸ ಇದೆಯೇ ಹೊರತು ವಿರೋಧ ಪಕ್ಷದಲ್ಲಿ ಕೂತು ಅಭ್ಯಾಸ ಇಲ್ಲ ಎಂಬ ಸತ್ಯವನ್ನು ಕೇಂದ್ರ ಮತ್ತು ರಾಜ್ಯದ ಕಾಂಗ್ರೆಸ್ ಈಗಾಗಲೇ ಸಾಕ್ಷಿ ಸಮೇತ ಸಾಬೀತುಪಡಿಸಿವೆ.
ಅಸಲಿಗೆ ಕಾಂಗ್ರೆಸ್ ಆಡಳಿತದಲ್ಲಿ ಇದ್ದಾಗ ಬಿಜೆಪಿ ನಾನಾ ವಿಚಾರಗಳನ್ನು-ಸಮಸ್ಯೆಗಳನ್ನು ಮುಂದಿಟ್ಟು ದಿನಕ್ಕೊಂದು ಪ್ರತಿಭಟನೆಗೆ ಮುಂದಾಗುತ್ತಿತ್ತು. ಸಂಸತ್-ಸದನ ಕಲಾಪದಲ್ಲಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿ ಬಿಜೆಪಿಗೆ ಅಭ್ಯಾಸವಿದೆ. ಆದರೆ, ಈ ಚಾಕಚಕ್ಯತೆ ಕಾಂಗ್ರೆಸ್‌ಗೆ ಇಲ್ಲ ಎಂಬುದೇ ಸತ್ಯ.
ನೋಟ್‌ಬ್ಯಾನ್, ಜಿಎಸ್‌ಟಿ, ಪ್ರವಾಹ ನಿರ್ವಹಣೆ, ಕೊರೋನಾ, ಪೆಟ್ರೋಲ್ ಬೆಲೆ ಏರಿಕೆ, ದಿನೋಪಯೋಗಿ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಅನೇಕ ವಿಚಾರಗಳಲ್ಲಿ ಕೇಂದ್ರ ಮತ್ತು ಬಿಜೆಪಿ ರಾಜ್ಯ ಸರ್ಕಾರಗಳು ಅಸಮರ್ಪಕ ಆಡಳಿತ ನೀಡಿವೆ. ಆದರೆ, ಇದನ್ನು ವಿರೋಧಪಕ್ಷವಾಗಿ ಉಪಯೋಗಿಸಿಕೊಳ್ಳುವಲ್ಲಿ ಹೋರಾಟ ರೂಪಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಇದಕ್ಕೆ ಮಾಧ್ಯಮಗಳನ್ನು ದೂರುವ, ಏನು ಮಾಡುವುದು ಎಲ್ಲಾ ನಮಗೆ ಪ್ರತಿಕೂಲವಾಗಿದೆ ಎಂದು ರಾಗ ಎಳೆದುಕೊಂಡು ದಿನದೂಡುವುದಾದರೆ ಜನರು ಈ ವಿರೋಧ ಪಕ್ಷವನ್ನು ಪರ್ಯಾಯವಾಗಿ ಏಕೆ ನೋಡಬೇಕು?
ಇವೆಲ್ಲವನ್ನೂ ಬದಲಿಸುವರೇ ಡಿಕೆಶಿ?
ಮೇಲಿನ ಎಲ್ಲಾ ಸಂಗತಿಗಳಲ್ಲಿ ಡಿಕೆಶಿ ಭಾರೀ ಬದಲಾವಣೆ ತರುತ್ತಾರೆ ಎಂಬ ವಿಶೇಷ ನಿರೀಕ್ಷೆಯೇನೂ ಇದ್ದಂತೆ ಕಾಣುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಇಷ್ಟು ಗಟ್ಟಿಯಾಗಿ ನೆಲೆಯೂರಲು ಕಾರಣವಾಗಿದ್ದರಲ್ಲಿ ಹಣ ಬಲವೂ ಪ್ರಧಾನವಾಗಿತ್ತು. 2006ರವರೆಗೆ ಅಧಿಕಾರದ ಹಪಹಪಿಯಲ್ಲಿದ್ದ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ಏರಿಸಿದ್ದರಲ್ಲಿ ರೆಡ್ಡಿ ಸಹೋದರರ ಹಣದ ಪಾತ್ರವೂ ಇತ್ತು. ಈಗಲೂ ಆಪರೇಷನ್ ಕಮಲ ಎಂದರೆ ಸಾವಿರಾರು ಕೋಟಿ ಹಣ ಹರಿಸುವ ತಾಕತ್ತು ಬಿಜೆಪಿಗೆ ಇದೆ.
ಕಳೆದ ಒಂದೂವರೆ ದಶಕದಲ್ಲಿ ಕಾಂಗ್ರೆಸ್ ಅಧ್ಯಕ್ಷರಾದ ಯಾರಿಗೂ ಈ ಪ್ರಮಾಣದಲ್ಲಿ ಹಣ ಹರಿಸಿ ಪಕ್ಷ ಕಟ್ಟುವ ತಾಕತ್ತು ಇರಲಿಲ್ಲ. ದೇಶಪಾಂಡೆಯವರಿಗಿರಬಹುದಾದರೂ, ಅದು ಓಡಾಡಿಸಬಹುದಾದ ಲಿಕ್ವಿಡ್ ಕ್ಯಾಷ್ ಇದ್ದಂತಿಲ್ಲ. ಆದರೆ, ಡಿ.ಕೆ. ಶಿವಕುಮಾರ್ ಅವರಿಗೆ ಈ ತಾಕತ್ತು ಇದೆ. ಅವರಿಗೆ ಪಟ್ಟ ಕಟ್ಟುವುದರಲ್ಲಿ ಇದೂ ಪ್ರಮುಖ ಪಾತ್ರ ವಹಿಸಿದೆ. ಆದರೆ, ಇದರಿಂದ ಕಾಂಗ್ರೆಸ್‌ನ ಪಾರಂಪರಿಕ ದೌರ್ಬಲ್ಯಗಳನ್ನು ಮೀರಲು ಅವರಿಗೆ ಸಾಧ್ಯವಾಗುವುದೇ ಎಂಬ ಪ್ರಶ್ನೆ ಏಳುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿಯು ಈ ಹಿಂದಿನ ಬಿಜೆಪಿಯೂ ಅಲ್ಲ. ಅದು ದೇಶದಲ್ಲಿ ಹಿಂದೆಂದೂ ಕಾಣದಿದ್ದಂತಹ ಬಲಾಢ್ಯ ಶಕ್ತಿಯಾಗಿ ಬೆಳೆದಿರುವಷ್ಟೇ ಅಲ್ಲದೇ ವಿವಿಧ ಸಾಂವಿಧಾನಿಕ ಸಂಸ್ಥೆಗಳ ಮೇಲೂ ತನ್ನ ಕಪಿಮುಷ್ಠಿಯನ್ನು ಹೊಂದಿದೆ.
ಜೊತೆಗೆ ಧಾರ್ಮಿಕ ಧ್ರುವೀಕರಣಕ್ಕೆ ಸತತವಾಗಿ ಪ್ರಯತ್ನಿಸುತ್ತಲೇ ಇರುವ ಬಿಜೆಪಿಯ ಕೋಮುರಾಜಕಾರಣವನ್ನು ಎದುರಿಸಲು ಡಿಕೆಶಿ ಅಥವಾ ಕಾಂಗ್ರೆಸ್ ಏನು ಮಾಡಬಲ್ಲದು ಎಂಬುದೂ ಪ್ರಮುಖವಾದ ಪ್ರಶ್ನೆ.
ಕೋಮು ರಾಜಕಾರಣವನ್ನು ಡಿಕೆಶಿ ಹೇಗೆ ನಿಭಾಯಿಸುತ್ತಾರೆ?
ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಮುನ್ನವೇ ಡಿಕೆಶಿವಕುಮಾರ್ ಕಚೇರಿಯಲ್ಲಿ ಹೋಮ ಹವನ ಮಾಡಿಸಿದ್ದಾರೆ. ಬಿಜೆಪಿಯಲ್ಲಿ ಇದು ಸಾಮಾನ್ಯ ಬೆಳವಣಿಗೆ. ಆದರೆ, ಕಾಂಗ್ರೆಸ್‌ನಲ್ಲಿ ಬೇರೆ ಬೇರೆ ರೀತಿಯ ಉದಾಹರಣೆಗಳಿವೆ. ಸ್ವತಃ ಧಾರ್ಮಿಕ ವ್ಯಕ್ತಿಯಷ್ಟೇ ಅಲ್ಲದೇ ವಿವಿಧ ತಂತ್ರಮಂತ್ರಗಳ ಜನರನ್ನೆಲ್ಲಾ ನಂಬುವ ಡಿಕೆಶಿ ತಾನು ರಿಲೀಜಿಯಸ್ ಆದರೆ ಸೆಕ್ಯೂಲರ್ ಹಿಂದು ಎಂಬುದನ್ನು ಸಾರಲು ಹೊರಟಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಪ್ರತ್ಯೇಕ ಲಿಂಗಾಯತ ಧರ್ಮದ ವಿಷಯಕ್ಕೆ ಕೈ ಹಾಕಿದ್ದಾಗ ಅದು ತಪ್ಪು ಎಂದು ಡಿಕೆಶಿ ಬಹಿರಂಗವಾಗಿಯೇ ಟೀಕಿಸಿದ್ದರು. ಆದರೆ ಕೋಮುರಾಜಕಾರಣವನ್ನು ಎದುರಿಸಲು ಹೆಣೆಯಬೇಕಾದ ತಂತ್ರ ಏನು ಎನ್ನುವುದು ದೇಶದಲ್ಲಿ ಯಾರಿಗೂ ಗೊತ್ತಿದ್ದಂತಿಲ್ಲ. ತಮಿಳುನಾಡು ಮತ್ತು ಕೇರಳಗಳು ಐತಿಹಾಸಿಕ ಕಾರಣಗಳಿಗಾಗಿ ಭಿನ್ನವಾಗಿದೆ ಎಂಬುದನ್ನು ಬಿಟ್ಟರೆ ದೇಶಾದ್ಯಂತ ಕೋಮುವಾದಿ ಮನಸ್ಥಿತಿ ಅಪಾರವಾಗಿ ಬೆಳೆಯುತ್ತಿದೆ. ಸ್ವತಃ ಡಿಕೆಶಿ ಸ್ವಕ್ಷೇತ್ರಕ್ಕೆ ಕಲ್ಲಡ್ಕ ಪ್ರಭಾಕರ ಭಟ್ಟರ ನೇತೃತ್ವದಲ್ಲಿ ಆರೆಸ್ಸೆಸ್ ದಂಡು ಇಳಿದಿತ್ತು. ಹೀಗಿರುವಾಗ ಇದನ್ನು ಹೇಗೆ ನಿಭಾಯಿಸುತ್ತಾರೆಂಬುದನ್ನು ಅವರು ಇನ್ನಷ್ಟೇ ಸಾಬೀತು ಮಾಡಬೇಕಿದೆ.
ಸೋಲಪ್ಪಲಿರುವ ಡಿಕೆಶಿ ಮಾಧ್ಯಮ ಸ್ಟ್ರಾಟೆಜಿ
ಇಂದಿನ ರಾಜಕಾರಣದಲ್ಲಿ ಮಾಧ್ಯಮಗಳ ಪಾತ್ರ ವಿಪರೀತಕ್ಕೆ ಹೋಗಿದೆ. 6 ವರ್ಷಗಳಿಂದ ಬಿಜೆಪಿ ಮಾಧ್ಯಮಗಳ ಮೂಲಕ ಎಂತಹ ಯೋಜಿತ ಪ್ರಚಾರಕ್ಕೆ ಮುಂದಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಮಾಧ್ಯಮಗಳು ಬಿಜೆಪಿ ಪರ ನಿಲ್ಲಲು ಎರಡು ಕಾರಣಗಳಿವೆ. ಒಂದು ದುಡ್ಡು, ಎರಡನೆಯದು ಬಿಜೆಪಿ/ಆರೆಸ್ಸೆಸ್/ಮೋದಿ ಪರ ಸೈದ್ಧಾಂತಿಕ ಒಲವು. ಮೊದಲನೆಯದ್ದರ ಮೂಲಕ ಮಾತ್ರ ಇದನ್ನು ಸರಿ ಮಾಡಿಕೊಳ್ಳಲಾಗದು ಎಂಬುದಕ್ಕೆ ಸ್ವತಃ ಡಿಕೆಶಿವಕುಮಾರ್ ಉದಾಹರಣೆ.
ಕರ್ನಾಟಕದ ಮೂರು ಟಿವಿ ಚಾನೆಲ್‌ಗಳಲ್ಲಿ ಡಿಕೆಶಿಯವರ ಹಣ ಇದೆ ಎಂಬುದು ಚಾನೆಲ್ ವಲಯಗಳ ಒಳಗಿನ ಸುದ್ದಿ. ಯಾರು ಕನಕಾಸುರ ಎಂದು ಡಿಕೆಶಿ ವಿರುದ್ಧ ಕಾರ್ಯಕ್ರಮ ಮಾಡಿದರೋ ಅಲ್ಲೇ ಅವರದ್ದು 10% ಇದೆ ಎಂಬ ಗುಸುಗುಸು ಇದೆ. ಟಿಆರ್‌ಪಿ ಇಲ್ಲದಿದ್ದರೂ ಸುದ್ದಿ ಮಾಡುತ್ತಿರುವ ಇನ್ನೊಂದು ಬೇನಾಮಿ ಚಾನೆಲ್‌ನಲ್ಲಿ ಡಿಕೆಶಿ ಮತ್ತು ಎಚ್‌ಡಿಕೆ ಇಬ್ಬರದ್ದು ತಲಾ 40% ಇದ್ದುದರಿಂದಲೇ ಆ ಚಾನೆಲ್ ಸಮ್ಮಿಶ್ರ ಸರ್ಕಾರದ ಪರವಾಗಿ ಬಲವಾಗಿ ಬ್ಯಾಟಿಂಗ್ ಮಾಡುತ್ತಿತ್ತು. ಇನ್ನು ಮೂರನೆಯದ್ದು ಲೆಕ್ಕಕ್ಕಿಲ್ಲದಿದ್ದರೂ, ಅದು ಕಾಂಗ್ರೆಸ್‌ನ ಸೋತ ಕ್ಯಾಂಡಿಡೇಟ್ ಒಬ್ಬರ ಮಾಲೀಕತ್ವದಲ್ಲಿರುವ ಟಿವಿ. ಅದರಲ್ಲೂ ಡಿಕೆಶಿ ಹಣವಿದೆ ಎನ್ನುವುದು ಬಲವಾದ ಗುಮಾನಿ.
ಈ ಮೂರೂ ಚಾನೆಲ್‌ಗಳೂ ಸದಾ ಬಿಜೆಪಿ ಪರವಾದ ರಾಜಕಾರಣವನ್ನೇ ಮಾಡುತ್ತಿರುತ್ತವೆ. ಅದಕ್ಕೆ ಪೂರಕವಾದ ಸುದ್ದಿಗಳು ಓಡುತ್ತಿರುತ್ತವೆ. ಆದರೆ ಡಿಕೆಶಿ ವಿರುದ್ಧ ಮಾತ್ರ ಸುದ್ದಿ ಮಾಡಲ್ಲ. ಕಾಂಗ್ರೆಸ್ ಪಕ್ಷ ಗೆಲ್ಲದೇ ತಾನು ಮುಖ್ಯಮಂತ್ರಿಯಾಗಬಹುದು ಎಂದು ಶಿವಕುಮಾರ್ ಯಾವ ರೀತಿ ಲೆಕ್ಕ ಹಾಕಿದ್ದಾರೋ ಗೊತ್ತಿಲ್ಲ. ಇದು ಖಚಿತ ಸೋಲಿನ ಸ್ಟ್ರಾಟೆಜಿ ಎಂಬುದರಲ್ಲಿ ಸಂದೇಹವಿಲ್ಲ. ಅಷ್ಟು ಮಾತ್ರವಲ್ಲದೇ ಆರೆಸ್ಸೆಸ್‌ನ ಕಳಪೆ ದರ್ಜೆ ಕರಪತ್ರದಂತಿರುವ ದಿನಪತ್ರಿಕೆಯೊಂದನ್ನು ನಡೆಸುವ ಸಂಪಾದಕರ ಆಪ್ತನನ್ನು ತನ್ನ ಮೀಡಿಯಾ ಕೋಆರ್ಡಿನೇಟರ್ ಆಗಿ ಡಿಕೆಶಿ ನೇಮಿಸಿಕೊಂಡಿದ್ದಾರೆ. ಇದರ ಹಿಂದಿನ ಅವರ ಲೆಕ್ಕಾಚಾರ ಕೈಕೊಡುವುದರಲ್ಲಿ ಯಾವುದೇ ಸಂದೇಹವಿಲ್ಲ.
ಒಟ್ಟಲ್ಲಿ ಡಿ.ಕೆ.ಶಿವಕುಮಾರ್ ಆಯ್ಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಹಣ ಬಲದ ಜೊತೆಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ನಾಯಕತ್ವ ಲಭ್ಯವಾಗಿದೆ ಎಂಬುದನ್ನು ಬಿಟ್ಟರೆ ಹೆಚ್ಚೇನೂ ಲಾಭವಿಲ್ಲ. ಆದರೆ ಸ್ಪಷ್ಟ ಸೈದ್ಧಾಂತಿಕ ತಿಳುವಳಿಕೆ ಇಲ್ಲದ ಹಾಗೂ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುವ ಸಂಸ್ಕೃತಿ ಹೊಂದಿರುವ ಇಂತಹ ಪಕ್ಷ ಬಿಜೆಪಿಯನ್ನು ಎದುರಿಸಿ ನಿಲ್ಲಲಿದೆ ಎಂದು ಹೇಳುವುದು ಕಷ್ಟ. ಹೆಚ್ಚೆಂದರೆ ಜೆಡಿಎಸ್ ಪಕ್ಷಕ್ಕೆ ಮುಳ್ಳಾಗುವುದಷ್ಟೇ ಡಿಕೆಶಿ ನೇತೃತ್ವದ ಕೆಪಿಸಿಸಿಯಿಂದ ಸಾಧ್ಯವಾಗಬಹುದು.
- ಬಿ.ಎ ತೇಜಸ್ವಿ
- (ಲೇಖಕರು ಯುವ ಪತ್ರಕರ್ತರು. ಅಭಿಪ್ರಾಯಗಳು ವೈಯಕ್ತಿಕವಾದವುಗಳು)
ಇದನ್ನೂ ಓದಿ; PUC ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ ಕೊರೊನಾ ಪಾಸಿಟಿವ್!: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬೇಕಾ?


