ಸಿನಿಮಾ ನಟರಾದ ಸೌಮಿತ್ರ ಚಟರ್ಜಿ, ಅಡೂರ್ ಗೋಪಾಲಕೃಷ್ಣನ್, ನಸೀರುದ್ದೀನ್ ಷಾ ಹಾಗೂ ಪಶ್ಚಿಮ ಬಂಗಾಳದ ಅಪರ್ಣ ಸೇನ್ ಸೇರಿದಂತೆ 500 ಪ್ರಮುಖ ವ್ಯಕ್ತಿಗಳ ತಂಡವು ಕೇಂದ್ರ ಸರ್ಕಾರಕ್ಕೆ ಬಹಿರಂಗ ಪತ್ರ ಬರೆದು, ವರವರ ರಾವ್, ಸಫೂರಾ ಝರ್ಗರ್ ಅವರಂತಹ ಸಾಮಾಜಿಕ ಕಾರ್ಯಕರ್ತರನ್ನು ಸಾಂಕ್ರಾಮಿಕ ರೋಗವು ದೇಶಾದ್ಯಂತ ಉಲ್ಬಣಗೊಳ್ಳುತ್ತಿರುವ ಈ ಸಮಯದಲ್ಲಿ ಜಾಮೀನಿನ ಮೇಲೆ ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಜೈಲುವಾಸ ಅನುಭವಿಸುತ್ತಿರುವ ಮಾನವ ಹಕ್ಕುಗಳ ಕಾರ್ಯಕರ್ತರಲ್ಲಿ ಕವಿ ವರವರ ರಾವ್ ಸೇರಿದಂತೆ ಸುಧಾ ಭರದ್ವಾಜ್, ಶೋಮಾ ಸೇನ್, ಆನಂದ್ ತೆಲ್ತುಂಬ್ಡೆ, ಗೌತಮ್ ನವಲಖಾ, ಅರುಣ್ ಫೆರೆರಾ, ವೆರ್ನಾನ್ ಗೊನ್ಸಾಲ್ವೆಜ್, ಸುರೇಂದ್ರ ಗ್ಯಾಡ್ಲಿಂಗ್, ಮಹೇಶ್ ರೌತ್, ಸುಧೀರ್ ಧವಾಲೆ, ರೋನಾ ವಿಲ್ಸನ್ ಸೇರಿದ್ದಾರೆ.
“ಅವರನ್ನು ಬಂಧಿಸಲಾಗಿರುವ ಮಹಾರಾಷ್ಟ್ರದ ಕಾರಾಗೃಹಗಳಲ್ಲಿ, ಕೊರೊನಾದಿಂದಾಗಿ ಕೆಲವು ಕೈದಿಗಳು ಸಾವನ್ನಪ್ಪಿದ್ದಾರೆ ಹಾಗೂ ಇನ್ನೂ ಅನೇಕರು ಸೋಂಕು ಪೀಡಿತರಾಗಿದ್ದಾರೆ” ಎಂದು ಭಾರತೀಯ ಸಾಂಸ್ಕೃತಿಕ ವೇದಿಕೆ ಜೂನ್ 16 ರಂದು ಬಿಡುಗಡೆ ಮಾಡಿರುವ ತನ್ನ ಪತ್ರದಲ್ಲಿ ತಿಳಿಸಿದೆ.
ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಫೂರಾ ಜರ್ಗರ್ ಮತ್ತು ಅಸ್ಸಾಂನ ಮಾನವ ಹಕ್ಕುಗಳ ಕಾರ್ಯಕರ್ತ ಅಖಿಲ್ ಗೊಗೊಯ್ ಅವರಿಗೆ ಜಾಮೀನು ನಿರಾಕರಿಸಿದ ಬಗ್ಗೆ ಪತ್ರವು ಅಸಮಾಧಾನ ವ್ಯಕ್ತಪಡಿಸಿದೆ.
ಫೆಬ್ರವರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜಾಮಿಯಾ ಸಮನ್ವಯ ಸಮಿತಿಯ ಸದಸ್ಯರಾದ ಜರ್ಗರ್ ಅವರನ್ನು ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಬಂಧಿಸಲಾಗಿತ್ತು.
ಓದಿ: ಸತತ ಮೂರನೇ ಬಾರಿಗೆ ಜಾಮಿಯಾ ಸಮನ್ವಯ ಸಮಿತಿ ಸದಸ್ಯೆ ಸಫೂರಾ ಜರ್ಗರ್‌ಗೆ ಜಾಮೀನು ನಿರಾಕರಣೆ


